ADVERTISEMENT

ನುಡಿ ಬೆಳಗು: ಸದಾ ಇರಲಿ ಸಹಾನುಭೂತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 3:21 IST
Last Updated 25 ಡಿಸೆಂಬರ್ 2023, 3:21 IST
ನುಡಿ ಬೆಳಗು
ನುಡಿ ಬೆಳಗು   

ಒಮ್ಮೆ ಒಬ್ಬ ಪುಟ್ಟ ಬಾಲಕ ನಾಯಿಮರಿಯನ್ನು ಕೊಂಡುಕೊಳ್ಳಬೇಕೆಂದು ಸಾಕು ಪ್ರಾಣಿಗಳನ್ನು ಮಾರುವ ಅಂಗಡಿಗೆ ಹೋದ. ಅವನ ಜೇಬಿನಲ್ಲಿ ಐದು ಸಾವಿರ ರೂಪಾಯಿಗಳಿದ್ದವು. ಎಲ್ಲಾ ಉತ್ತಮ ತಳಿಯ ನಾಯಿ ಮರಿಗಳಿದ್ದ ಆ ಅಂಗಡಿಯಲ್ಲಿ ಒಂದು ಮರಿಯ ಕನಿಷ್ಠ ಬೆಲೆಯೇ ಹತ್ತು ಸಾವಿರವಾಗಿತ್ತು. ಅಷ್ಟು ಹಣವಿರದ ಬಾಲಕ, ನಿರಾಶೆ ಕಂಗಳಿಂದ ಅಂಗಡಿಯಿಂದ ಹೊರ ಹೊರಟ. ಹಾಗೆ ಹೋಗುವಾಗ ಒಂದು ಕಾಲು ಕುಂಟಾಗಿದ್ದ ಮುದ್ದಾದ ನಾಯಿ ಮರಿ ಕಣ್ಣಿಗೆ ಬಿತ್ತು.

ತಕ್ಷಣ ಬಾಲಕ ಅಂಗಡಿ ಮಾಲೀಕನ ಬಳಿ ಹೋಗಿ ‘ಅಂಕಲ್, ದಯವಿಟ್ಟು ನನಗೆ ಈ ನಾಯಿ ಮರಿಯನ್ನು ಕೊಡುತ್ತೀರಾ? ನನ್ನ ಬಳಿ ಐದು ಸಾವಿರ ರೂಪಾಯಿಗಳಿವೆ. ಅದನ್ನೀಗ ಕೊಡುತ್ತೇನೆ. ಬಾಕಿ ಹಣವನ್ನು  ಕಂತಿನಲ್ಲಿ ತೀರಿಸುತ್ತೇನೆ’ ಎಂದ. ಆಗ ಅಂಗಡಿ ಮಾಲೀಕ, ‘ಪುಟ್ಟಾ, ಈ ಮರಿಯ ಕಾಲು ಕುಂಟಾಗಿದೆ. ಅದನ್ನು ಸಾಕೋದು ನಿನಗೆ ಕಷ್ಟವಾಗ ಬಹುದು. ಸರಿಯಾದ ಮರಿಯನ್ನೇ ಕೊಡುತ್ತೇನೆ, ನೀನು ಹೇಳಿದಂತೆ ಐದು ಸಾವಿರ ಈಗ ಕೊಡು ಉಳಿದ ಹಣವನ್ನು ನಂತರ ತೀರಿಸುವಂತೆ’ ಎಂದ.

ಆಗ ಬಾಲಕ, ‘ಇಲ್ಲ ಅಂಕಲ್, ನನಗೆ ಈ ಮರಿಯೇ ಬೇಕು’ ಎಂದ. ಅಂಗಡಿಯವನಿಗೆ ಆಶ್ಚರ್ಯವಾಯಿತು. ‘ಸರಿಯಪ್ಪ, ಒಂದು ಕೆಲಸ ಮಾಡು. ನಿನ್ನ ಬಳಿ ಇರುವ ಹಣ ಕೊಟ್ಟು ಈ ಮರಿಯನ್ನು ತೆಗೆದುಕೊಂಡು ಹೋಗು, ಬೇರೆ ಏನು ಕೊಡಬೇಕಾಗಿಲ್ಲ’ ಎಂದ. ಆಗ ಬಾಲಕ, ‘ಇಲ್ಲ ಅಂಕಲ್, ಬೇರೆ ಮರಿಗಳಿಗೆ ಇರುವಷ್ಟೇ ಬೆಲೆ ಇದಕ್ಕೂ ಇದೆ. ಹಾಗಾಗಿ ಐದು ಸಾವಿರ ಈಗ ಕೊಡುತ್ತೇನೆ. ಉಳಿದ ಬಾಕಿ ಹಣವನ್ನು ಆಮೇಲೆ ತೀರಿಸುತ್ತೇನೆ’ ಎಂದು ನುಡಿದ.

ADVERTISEMENT

‘ಅಲ್ಲ ಪುಟ್ಟಾ, ಇಷ್ಟು ಹಟ ಮಾಡುತ್ತಿದ್ದೀಯಲ್ಲ, ಇದರ ಕಾಲು ಕುಂಟಾಗಿದೆ. ಇದನ್ನು ಸಾಕುವುದು ಕಷ್ಟವಾಗುವುದಿಲ್ಲವೇ’ ಎಂದು ಪ್ರಶ್ನಿಸಿದ. ಆಗ ಆ ಬಾಲಕ ನಿಧಾನವಾಗಿ ತಾನು ತೊಟ್ಟಿದ್ದ ಪ್ಯಾಂಟನ್ನು ಮೇಲಕ್ಕೆ ಮಡಿಸಿ ತೋರಿಸಿದ. ಆ ಬಾಲಕನ ಒಂದು ಕಾಲು ಸಹ ಕುಂಟಾಗಿತ್ತು. ‘ಅಂಕಲ್ ಒಂದು ಕಾಲಿಲ್ಲದ ನನಗೆ, ಖಂಡಿತವಾಗಿಯೂ ಈ ಕುಂಟ ಮರಿಯ ಕಷ್ಟ ಏನೆಂದು ಅರ್ಥವಾಗುತ್ತದೆ. ಅದನ್ನು ನಾನು ಚೆನ್ನಾಗಿ ಸಾಕಬಲ್ಲೆ’ ಎಂದ ಆ ಬಾಲಕ.

ಈ ಬಗೆಯ ಭಾವನೆಯನ್ನು ‘ಎಂಪಥಿ’ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಇದಕ್ಕೆ ‘ಸಹಾನುಭೂತಿ’ ಎನ್ನಬಹುದು. ಅಂದರೆ ಇನ್ನೊಬ್ಬರ ಜಾಗದಲ್ಲಿ ನಿಂತು ಅವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವ ಮನಃಸ್ಥಿತಿ. ತುಟಿ ಮೇಲಿನ ಅನುಕಂಪ ಅಥವಾ ‘ಸಿಂಪಥಿ’ಯನ್ನು ಎಲ್ಲರೂ ವ್ಯಕ್ತಪಡಿಸುತ್ತಾರೆ. ‘ಅಯ್ಯೋ ನಿಮಗೆ ಹೀಗಾಗಬಾರದಿತ್ತು’ ಎಂದು ಹೇಳುವಾಗ ‘ಒಳಗಿಂದಲೇ ಇವರಿಗೆ ಸರಿಯಾಗಿಯೇ ಆಗಿದೆ. ಇದನ್ನೇ ನಾನು ಕಾಯುತ್ತಿದ್ದೆ’ ಎಂದು ಖುಷಿ ಪಡುವ ಮನಸ್ಸು ಕೆಲವರದ್ದು. ಈ ರೀತಿಯ ತುಟಿ ಮೇಲಿನ ಅನುಕಂಪ ನೊಂದವರ ನೋವಿಗೆ ಹೆಗಲುಕೊಟ್ಟು ನಿಲ್ಲುವುದಿಲ್ಲ, ಅದಕ್ಕೆ ಇನ್ನಷ್ಟು ತುಪ್ಪ ಸುರಿಯುತ್ತದಷ್ಟೇ. ಬದಲಿಗೆ ಇನ್ನೊಬ್ಬರ ಜಾಗದಲ್ಲಿ ನಿಂತು ಅವರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮವಾದ ಸಂವೇದನೆ ಅತ್ಯಗತ್ಯ. ಇದನ್ನು ಮಕ್ಕಳಲ್ಲಿ ಬಾಲ್ಯದಿಂದಲೇ ಬಿತ್ತುವ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕು. ಆಗ ಮಾತ್ರ ಅವರನ್ನು ಸಮಾಜಮುಖಿಯಾಗಿ, ಇನ್ನೊಬ್ಬರ ಕಷ್ಟಕ್ಕೆ ತುಡಿಯುವ ಸಂವೇದನಾಶೀಲ ಪ್ರಜೆಗಳಾಗಿ ರೂಪುಗೊಳಿಸಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.