ADVERTISEMENT

ನುಡಿ ಬೆಳಗು: ನಂಬಿಕೆಯಿರಲಿ ನಾಳೆಗಳ ಮೇಲೆ

ದೀಪಾ ಹಿರೇಗುತ್ತಿ
Published 5 ಜೂನ್ 2024, 23:36 IST
Last Updated 5 ಜೂನ್ 2024, 23:36 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಒಂದಿಷ್ಟು ಗೆಳೆಯರು ಹಡಗಿನಲ್ಲಿ ಪ್ರವಾಸ ಹೊರಟಿದ್ದರು. ಸಮುದ್ರದ ನಡುವೆ ಹಡಗು ಮುಳುಗಲಾರಂಭಿಸಿತು. ಎಲ್ಲರೂ ಮೃತಪಟ್ಟರೂ ಒಬ್ಬ ಮಾತ್ರ ಅಕಸ್ಮಾತ್ತಾಗಿ ಸಿಕ್ಕ ಮರದ ಪೆಟ್ಟಿಗೆಯೊಂದನ್ನು ಹಿಡಿದುಕೊಂಡು ತೇಲಿ ಬಚಾವಾದ. ತೇಲುತ್ತ ತೇಲುತ್ತ ಆ ಪೆಟ್ಟಿಗೆ ಅವನನ್ನು ಒಂದು ಪುಟ್ಟ ದ್ವೀಪಕ್ಕೆ ತಂದು ಹಾಕಿತು.

ಸುತ್ತ ಮುತ್ತ ಕಣ್ಣು ಹರಿದತ್ತ ಸಾಗರ. ಅಲ್ಲಿಯೇ ಇದ್ದ ಒಣಗಿದ ಹುಲ್ಲು, ಮರದ ಕೊಂಬೆ, ಎಲೆಗಳಿಂದ ಪುಟ್ಟ ಗುಡಿಸಲೊಂದನ್ನು ಕಟ್ಟಿಕೊಂಡು ಹಣ್ಣು ಹಂಪಲು ತಿಂದುಕೊಂಡು ಜೀವನ ನಡೆಸುತ್ತಿದ್ದ. ಒಂದಾದರೂ ದೋಣಿ, ಹಡಗು ಈ ಕಡೆಗೆ ಬರದೇ ಹೋದರೆ ತನ್ನ ಗತಿ ಏನು ಎಂದು ಕೊರಗುತ್ತಿದ್ದ. ದಿನವೂ ರಾತ್ರಿ ಸೌದೆ ಒಟ್ಟುಗೂಡಿಸಿ ಬೆಂಕಿ ಹಾಕಿಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದ. ಬೆಂಕಿಯನ್ನು ನೋಡಿ ಯಾವುದಾದರೂ ಹಡಗು ಬರುವುದೆಂಬ ನಿರೀಕ್ಷೆಯಲ್ಲಿದ್ದ. ಆದರೆ ಯಾವ ಹಡಗೂ ಬರಲಿಲ್ಲ.

ADVERTISEMENT

ಒಂದು ತಡರಾತ್ರಿ ಎಚ್ಚರಾದಾಗ ನೋಡುತ್ತಾನೆ, ಗುಡಿಸಲಿಗೆ ಬೆಂಕಿಯ ಕಿಡಿ ಹಾರಿದೆ! ನೋಡನೋಡುತ್ತಿದ್ದಂತೇ ಗುಡಿಸಲು ಧಗಧಗನೆ ಉರಿಯಲಾರಂಭಿಸಿತು. ‘ಅಯ್ಯೋ, ನನ್ನ ಅದೃಷ್ಟವೇ ಖೊಟ್ಟಿ, ನಾನು ದುರದೃಷ್ಟವಂತ. ನನ್ನ ಕುಟುಂಬ ಸ್ನೇಹಿತರು ಊರು ಎಲ್ಲರೂ ದೂರವಾದರು, ನನ್ನ ಈ ಪುಟ್ಟ ಗುಡಿಸಲೂ ಸುಟ್ಟು ಹೋಯಿತಲ್ಲ’ ಎಂದೆಲ್ಲ ಗೋಳಾಡಿದ.

ಇನ್ನೇನು ಬೆಳಗಾಗುವುದಿತ್ತು. ಅಷ್ಟು ಹೊತ್ತಿಗೆ ಒಂದು ಹಡಗು ಅಲ್ಲಿಗೆ ಬಂತು. ಹಡಗಿನ ಕ್ಯಾಪ್ಟನ್‌ ಇಳಿದು ಈ ವ್ಯಕ್ತಿಯ ಹತ್ತಿರ ಬಂದ. ‘ಅರೇ ನೀವು ಹೇಗೆ ಇಲ್ಲಿಗೆ ಬಂದಿರಿ’ ಎಂದು ಕೇಳಿದ ಈತ. ‘ಬಹಳ ದೂರದಿಂದಲೇ ಇಲ್ಲಿಂದ ಬೆಂಕಿ ಕಾಣಿಸಿತು. ಯಾರೋ ಅಪಾಯದಲ್ಲಿದ್ದಾರೆಂದು ನಾವು ಬಂದೆವು’ ಎಂದ ಕ್ಯಾಪ್ಟನ್.

ಹರ್ಷದಿಂದ ಕಣ್ಣೀರು ಹಾಕುತ್ತ ಆತ ಎದೆಯ ಮೇಲೆ ಅಂಗೈ ಇಟ್ಟು ತಾನು ಈ ಹಿಂದೆ ಹಡಗು ಮುಳುಗಿದರೂ ಬಚಾವಾಗಿದ್ದಕ್ಕೆ, ಈಗ ಮತ್ತೆ ಅನಿರೀಕ್ಷಿತವಾಗಿ ಸಹಾಯ ಸಿಕ್ಕಿದ್ದಕ್ಕೆ ದೇವರಿಗೆ ಕೃತಜ್ಞತೆ ವ್ಯಕ್ತಪಡಿಸಿದ.

ನಮ್ಮ ಸಮಸ್ಯೆಗಳು ನಾವಂದುಕೊಂಡ ಹಾಗೆಯೇ ಬಗೆಹರಿಯಬೇಕೆಂದಿಲ್ಲ. ಕೆಲವು ಸಲ ಅತ್ಯಂತ ಅನಿರೀಕ್ಷಿತವಾಗಿ ಊಹಿಸಲಾಗದ ರೀತಿಯಲ್ಲಿ ಪವಾಡಗಳು ಸಂಭವಿಸುತ್ತವೆ. ಹಾಗಾಗಿ ಕಷ್ಟದಲ್ಲಿದ್ದಾಗ ವಿಧಿಯನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಗುಲಾಮಗಿರಿಯಿಂದ ತಪ್ಪಿಸಿಕೊಂಡು ಅಮೆರಿಕದ ಪ್ರಸಿದ್ಧ ರಾಜನೀತಿಜ್ಞರಾಗಿ ಖ್ಯಾತರಾದ ಫ್ರೆಡರಿಕ್‌ ಡಗ್ಲಾಸ್‌ ತನ್ನ ಆತ್ಮಕಥನದಲ್ಲಿ, ಗುಲಾಮಗಿರಿಯ ಕತ್ತಲೆಯಿಂದ ಹೊರಬರಲು ತನಗೆ ಭರವಸೆ ಮತ್ತು ನಂಬಿಕೆಗಳು ಬೆಳಕಾಗಿ ದಾರಿ ತೋರಿದವು ಎನ್ನುತ್ತಾರೆ. ಪರಿಸ್ಥಿತಿ ಹೇಗೇ ಇರಲಿ, ಸಂಕಷ್ಟದ ಸಂದರ್ಭದಲ್ಲಿ ಆಶಾವಾದವನ್ನು ಕಳೆದುಕೊಳ್ಳದೇ ನಮ್ಮ ಕೆಲಸ ನಾವು ಮಾಡುತ್ತಿರುವುದೇ ನಮ್ಮನ್ನು ಕಾಪಾಡುವ ದೊಡ್ಡ ಶಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.