ADVERTISEMENT

ನುಡಿ ಬೆಳಗು –59 | ಆರೋಗ್ಯವೇ ನಿಜವಾದ ಸಂಪತ್ತು!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 23:17 IST
Last Updated 4 ನವೆಂಬರ್ 2024, 23:17 IST
<div class="paragraphs"><p>ನುಡಿ ಬೆಳಗು ಅಂಕಣ</p></div>

ನುಡಿ ಬೆಳಗು ಅಂಕಣ

   

ಬಹಳ ದುಡ್ಡಿದ್ದರೆ ಸಂತೋಷವಾಗಿರಬಹುದು ಎಂದು ನಮಗ ಅನಸತೈತಿ. ದುಡ್ಡಿದ್ದರೆ ಮನೆ ತುಂಬಾ ಪುಸ್ತಕ ಖರೀದಿ ಮಾಡಬಹುದು. ಆದರೆ, ಜ್ಞಾನ ಖರೀದಿ ಮಾಡಲು ಆಗವಲ್ದು. ದುಡ್ಡಿದ್ದರೆ ಔಷಧಿ ಖರೀದಿ ಮಾಡಬಹುದು. ಆದರೆ ಆರೋಗ್ಯ ಖರೀದಿ ಮಾಡಲು ಆಗವಲ್ದು. ಹಾಸಿಗೆ ಕೊಳ್ಳಬಹುದು ನಿದ್ದೆಯನ್ನಲ್ಲ. ದುಡ್ಡಿನಿಂದ ಸಾಮಾನು ಖರೀದಿಸಬಹುದೇ ವಿನಾ ಸಂತೋಷ ಖರೀದಿ ಮಾಡಲು ಸಾಧ್ಯವಿಲ್ಲ. 

ನಿಜವಾದ ಶ್ರೀಮಂತ ಯಾರು? ಸಂಪತ್ತು ನಿಜವಾದ ಸಂಪತ್ತಲ್ಲ. ಆರೋಗ್ಯವೇ ನಿಜವಾದ ಸಂಪತ್ತು. ಮನ್ಯಾಗ ನೋಟಿನ ಕಟ್ಟುಗಳಿದ್ದವ ಶ್ರೀಮಂತನಲ್ಲ. ದುಡ್ಯಾಕೆ ಕೈಕಾಲು ಗಟ್ಟಿದ್ದವ ಶ್ರೀಮಂತ. ಸಂತೋಷವನ್ನು ಅನುಭವಿಸಬೇಕಾದರೆ ನಿರೋಗ ಕಾಯವೇ ಪ್ರಥಮ ಸೂತ್ರ. ಸಂತೋಷ ಇರಬೇಕಾದರೆ ಮೊದಲು ಆರೋಗ್ಯ ಇರಬೇಕು. ಈ ಶತಮಾನದ ದೊಡ್ಡ ಸಮಸ್ಯೆ ಎಂದರೆ ನಾವು ಆದಾಯದ ಬೆನ್ನತ್ತಿ ಆರೋಗ್ಯ ಕಳಕೊಂಡೇವಿ. ಸಂಪತ್ತಿನ ಬೆನ್ನು ಹತ್ತಿ ಸಂತೋಷ ಕಳಕೊಂಡೇವಿ. ಭಾಗ್ಯವಂತ ಯಾರು?
ಡೈನಿಂಗ್ ಟೇಬಲ್ ಮ್ಯಾಲೆ ಹೋಳಿಗೆ, ಸೀಕರಣಿ, ಲಾಡು ಮುಂತಾದ ತರಹೇವಾರಿ ಆಹಾರ ಪದಾರ್ಥ ಇಟಗೊಂಡವ ಭಾಗ್ಯವಂತ ಅಲ್ಲ. ಹಸಿವಿದ್ದವನೇ ನಿಜವಾದ ಭಾಗ್ಯವಂತ. ಹಾಸಿಗೆ ಇದ್ದವ ಭಾಗ್ಯವಂತ ಅಲ್ಲ. ನಿದ್ದೆ ಇದ್ದವ ಭಾಗ್ಯವಂತ. ನಾವು ವಸ್ತುಗಳನ್ನು ಪ್ರೀತಿಸ್ತೀವಿ. ಅದಕ್ಕೆ ಸಂತೋಷ ಗೊತ್ತಾಗವಲ್ದು.

ADVERTISEMENT

ಒಬ್ಬಳು ತಾಯಿ ಪ್ರತಿ ದಿನ ಕೆಲಸಕ್ಕೆ ಹೋಗುವ ಮುನ್ನ ತಿಜೋರಿ ಇರುವ ಕೊಠಡಿಗೆ ಬೀಗ ಹಾಕಿ ಬೀಗದ ಕೈ ತನ್ನ ಬಳಿ ಇಟ್ಟುಕೊಂಡು ತನ್ನ ಮಗುವನ್ನು ಆಯಾಳಿಗೆ ಒಪ್ಪಿಸಿ ಹೋಗುತ್ತಿದ್ದಳು. ಒಂದು ದಿನ ಮಗು, ‘ದಿನಾಲು ಕೊಠಡಿಗೆ ಬೀಗ ಹಾಕಿ ಚಾವಿ
ತಗೊಂಡು ಹೋಗ್ತೀಯಲ್ಲ. ಅದನ್ನು ಆಯಾಳ ಕೈಗೆ ಕೊಡಬಾರದೇನು?’ ಎಂದು ಕೇಳಿತು. ಅದಕ್ಕೆ ತಾಯಿ ‘ಕೊಠಡಿಯಲ್ಲಿರುವ ತಿಜೋರಿಯಲ್ಲಿ ಬಹಳ ಕಿಮ್ಮತ್ತಿನ ಸಾಮಾನುಗಳು ಅದಾವ. ಅದಕ್ಕೆ ಚಾವಿ ಆಕಿ ಕೈಗೆ ಕೊಡಲ್ಲ’ ಎಂದಳು. ಮತ್ತೆ ಮಗು ‘ನನ್ನನ್ನ ಆಯಾಳ ಬಳಿ ಬಿಟ್ಟು ಹೋಗ್ತಿ. ತಿಜೋರಿ ಚಾವಿ ಮಾತ್ರ ತಗಂಡು ಹೋಗ್ತಿ. ಅದರೊಳಗೆ ಬಹಳ ಕಿಮ್ಮತ್ತಿನ ವಸ್ತು ಐತಿ ಅಂತಿ. ಅಂದರೆ ನನಗೇನು ಕಿಮ್ಮತ್ತಿಲ್ಲೇನು?’ ಎಂದು ಕೇಳಿತು. ಅಂದ್ರೆ ನಾವು ವಸ್ತುಗಳನ್ನು ಪ್ರೀತಿಸುತ್ತೀವಿ. ವಸ್ತುಗಳು ಇರೋದು ಬಳಸಾಕ, ಜನ ಇರೋದು ಪ್ರೀತಿಸಾಕ ಅನ್ನುವುದನ್ನು ತಿಳಕೊಬೇಕು ಮನುಷ್ಯ.

ಒಬ್ಬ ತತ್ವಜ್ಞಾನಿ, ‘ನಿನ್ನ ಮಕ್ಕಳಿಗೆ ಹೇಗೆ ಶ್ರೀಮಂತರಾಗುವುದು ಎನ್ನುವುದನ್ನು ಕಲಿಸಬೇಡ. ಆರೋಗ್ಯದಿಂದ ಸಂತೋಷದಿಂದ ಇರೋದು ಹೇಗೆ ಎನ್ನುವುದನ್ನು ಮೊದಲು ಕಲಿಸು’ ಅಂತಾನೆ. ಹಾಗಾದರೆ ಆರೋಗ್ಯ ಅಂದರೆ ಏನು? ನನ್ನ ದೇಹ ನನಗ ಹಿತಕೊಡುತ್ತಿರಬೇಕು. ಅದು ಆರೋಗ್ಯ. ನನ್ನ ಕೈ, ಕಾಲು, ಕಣ್ಣು, ಮನಸ್ಸು, ದೇಹ ಎಲ್ಲವೂ ನನಗ ಹಿತ ಅನಸ್ತಿರಬೇಕು. ದೇಹ ಗಟ್ಟಿಮುಟ್ಟಾಗಿರಬೇಕು. ಇದು ಆರೋಗ್ಯದ ಮೊದಲ ಲಕ್ಷಣ. ಜಿಮ್ಮಿಗೆ ಹೋಗಿ ಬರುವವರು ಮಾತ್ರ ಗಟ್ಟಿ ಇರ್ತಾರೆ ಅಂದಕೋಬೇಡಿ. ಬೆಳಿಗ್ಗೆ ಎದ್ದು ಜಮೀನಿಗೆ ಹೋಗಿ ಬರುವ ರೈತರೂ ಅವರಿಗಿಂತ ಗಟ್ಟಿ ಇರ್ತಾರ. ದೇಹ ಗಟ್ಟಿ ಇದ್ದರ ಸಾಲದು. ಮನಸ್ಸೂ ಸರಿ ಇರಬೇಕು. ಅಷ್ಟೇ ಇದ್ದರೂ ಸಾಲದು. ಉತ್ಸಾಹ ಅಥವಾ ಚೈತನ್ಯ ಇರಬೇಕು. ದೇಹ, ಮನಸ್ಸು ಮತ್ತು ಆತ್ಮ ಈ ಮೂರೂ ಪ್ರಸನ್ನವಾಗಿದ್ದರ ಅವನಿಗೆ ಆರೋಗ್ಯವಂತ ಎನ್ನಬಹುದು.

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.