ADVERTISEMENT

ಅನ್ನಭಾಗ್ಯ: ಬೇಕಿದೆ ಪರಿಣಾಮಕಾರಿ ವಿತರಣಾ ವ್ಯವಸ್ಥೆ

ಡಾ.ಆರ್.ಬಾಲ ಸುಬ್ರಹ್ಮಣ್ಯಂ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಕೆ.ಜಿ.ಗೆ ಒಂದು ರೂಪಾಯಿಯಂತೆ ತಿಂಗಳಿಗೆ ಗರಿಷ್ಠ 30 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ `ಅನ್ನಭಾಗ್ಯ' ಯೋಜನೆಗೆ ಬುಧವಾರ ಚಾಲನೆ ದೊರೆತಿದೆ. ಇದಕ್ಕಾಗಿ ಮಾಡಬೇಕಾದ ಸುಮಾರು 3 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಸಂಗ್ರಹ ಮತ್ತು ವಿತರಣಾ ಕಾರ್ಯಕ್ಕಿಂತ ಹೆಚ್ಚಿನ ಸವಾಲುಗಳನ್ನು ಈ ಯೋಜನೆ ಹುಟ್ಟುಹಾಕಿದೆ.

ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದೇ ಆದಲ್ಲಿ, ಪ್ರಸಕ್ತ ವ್ಯವಸ್ಥೆಯಲ್ಲಿ ಈಗಾಗಲೇ ಇರುವ ಸಾಕಷ್ಟು ಸಮಸ್ಯೆಗಳನ್ನು ಮೊದಲು ಬಗೆಹರಿಸುವುದು ಒಳ್ಳೆಯದು.

ರಾಜ್ಯದ ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ತನಿಖೆ ನಡೆಸುವಂತೆ ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನನಗೆ ತಿಳಿಸಿ ಸುಮಾರು 3 ವರ್ಷಗಳಾದವು. ಇಡೀ ರಾಜ್ಯವನ್ನು ಸುತ್ತಾಡಿ ಇಡೀ ವ್ಯವಸ್ಥೆಯನ್ನು ಅಧ್ಯಯನ ಮಾಡಿ, 2011ರ ಜುಲೈನಲ್ಲಿ ನಾನು ಲೋಕಾಯುಕ್ತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ.

ಆ ಸಂದರ್ಭದಲ್ಲಿ ಪತ್ತೆಯಾಗಿದ್ದ ಸಂಗತಿಗಳು ಎಷ್ಟು ಆಘಾತಕಾರಿ ಆಗಿದ್ದವೆಂದರೆ, ಒಂದು ಅರ್ಥಪೂರ್ಣವಾದ ಸಾರ್ವಜನಿಕ ಸೇವಾ ಯೋಜನೆಯೊಂದನ್ನು ಅದಕ್ಷ ಮತ್ತು ಭ್ರಷ್ಟ ವ್ಯವಸ್ಥೆಯನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದು ಬಯಲಿಗೆ ಬಂದಿತ್ತು.

ADVERTISEMENT

ಪ್ರಸಕ್ತ ಸಮಸ್ಯೆಗಳು: ಬಡತನ ಗುರುತಿಸುವಿಕೆ ಮತ್ತು ಗುರಿ: ನಿಜವಾದ ಬಡವರನ್ನು ಗುರುತಿಸುವ ಸರ್ಕಾರದ ಕಾರ್ಯ ಗೊಂದಲಮಯವಾಗಿದೆ. ಹೀಗಾಗಿ, ರಾಜ್ಯದ ಜನಸಂಖ್ಯೆಯ ಶೇ 80 ರಷ್ಟು ಜನರನ್ನು ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿನವರು ಎಂದು ಘೋಷಿಸಲಾಗಿದೆ! ಆದರೆ ಕೇಂದ್ರ ಸರ್ಕಾರದ ಪ್ರಕಾರ, ಇಲ್ಲಿರುವ 120 ಲಕ್ಷ ಕುಟುಂಬಗಳಲ್ಲಿ ಕೇವಲ 31.29 ಲಕ್ಷ ಕುಟುಂಬಗಳು ಮಾತ್ರ ಬಿಪಿಎಲ್ ವ್ಯಾಪ್ತಿಗೆ ಬರುತ್ತವೆ.

ರಾಜ್ಯ ಸರ್ಕಾರ ಸುಮಾರು 97 ಲಕ್ಷ ಜನರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿದೆ. 30 ಲಕ್ಷ ನಕಲಿ ಕಾರ್ಡ್‌ಗಳಿರುವುದು ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ, ಶೇ 5ರಷ್ಟು ನಿಜವಾದ ಬಡವರು ಬಿಪಿಎಲ್ ಪಟ್ಟಿಯಿಂದಲೇ ಹೊರಗುಳಿದಿರುವುದು ಸೇರಿದಂತೆ, ಬಡವರನ್ನು ಗುರುತಿಸುವ ಕಾರ್ಯದಲ್ಲಿ ಶೇ 49ರಷ್ಟು ಲೋಪದೋಷಗಳು ಆಗಿರುವುದನ್ನು ರಾಜ್ಯದ ಬಡತನ ಸೂಚ್ಯಂಕಗಳು ತಿಳಿಸುತ್ತವೆ.

ಸೋರಿಕೆ, ಭ್ರಷ್ಟಾಚಾರ ಮತ್ತು ಆರ್ಥಿಕ ನಷ್ಟ: ಆಗಿನ ದತ್ತಾಂಶಗಳು ಮತ್ತು ಮಾಹಿತಿಯ ಪ್ರಕಾರ, ರಾಜ್ಯದ ಪಡಿತರ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ಹಾಗೂ ಭ್ರಷ್ಟಾಚಾರದಿಂದ ಆಗುತ್ತಿರುವ ವಾರ್ಷಿಕ ನಷ್ಟ ಸುಮಾರು ರೂ 1,737.6 ಕೋಟಿ. ಅತಿಯಾದ ಹಂಚುವಿಕೆಯಿಂದ ಶೇ 38ರಷ್ಟು ಮತ್ತು ವಿತರಣೆಯಲ್ಲಿನ ಸೋರಿಕೆಯಿಂದ ಶೇ 37ರಷ್ಟು ನಷ್ಟ ಸಂಭವಿಸಿದೆ. ಸಾಗಣೆ, ಸಬ್ಸಿಡಿ ದುರುಪಯೋಗ ಮತ್ತಿತರ ಕಾರಣಗಳಿಂದ ಆಗುವ ನಷ್ಟದ ಹೊರೆ ಇದರಿಂದ ಹೊರತಾಗಿದೆ.

ಅವ್ಯವಸ್ಥೆಯ ತೊಡಕುಗಳು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿಸ್ತೃತ ವ್ಯವಸ್ಥೆಯಾದ ಆಹಾರ ಧಾನ್ಯ ಸಂಗ್ರಹ, ದಾಸ್ತಾನು, ಸಾಗಣೆ ಮತ್ತು ಚಿಲ್ಲರೆ ವಿತರಣಾ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಇರುವ ಸುಮಾರು 20 ಸಾವಿರ ನ್ಯಾಯಬೆಲೆ ಅಂಗಡಿಗಳ ಮೂಲಕ ನಿರ್ವಹಿಸುವ ಹೊಣೆ ಹೊತ್ತುಕೊಂಡಿದೆ. ಇಲಾಖೆಯು ಕೆಳ ಹಂತದಲ್ಲಿ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ.

ಸಾಮಾನ್ಯವಾಗಿ ತಹಶೀಲ್ದಾರರ ಕಚೇರಿಯಲ್ಲಿ ಇರುವ ಏಕೈಕ ಆಹಾರ ಪರಿಶೀಲನಾಧಿಕಾರಿ 100- 150 ನ್ಯಾಯಬೆಲೆ ಅಂಗಡಿಗಳ ಮೇಲ್ವಿಚಾರಣೆ ನಡೆಸಬೇಕು. ಇಂತಹ ಒತ್ತಡದಿಂದ ಸಮರ್ಥ ಮೇಲ್ವಿಚಾರಣೆ ಸಾಧ್ಯವಾಗುವುದಿಲ್ಲ. ವಿತರಣಾ ಸರಪಳಿಯ ಕೊನೆಯ ಕೊಂಡಿಗಳಾಗಿರುವ ನ್ಯಾಯಬೆಲೆ ಅಂಗಡಿಗಳು ಯೋಜನೆಯ ಮುಖವಾಣಿ ಸಹ. ಸುಪ್ರೀಂಕೋರ್ಟ್ ಆದೇಶದ ನಡುವೆಯೂ, ಈ ಅಂಗಡಿಗಳು ತಿಂಗಳಲ್ಲಿ ಮೂರು ನಾಲ್ಕು ದಿನ ಕೆಲವೇ ಗಂಟೆ ಕಾರ್ಯ ನಿರ್ವಹಿಸುತ್ತವೆ.

ತಮಗೆ ಸಿಗುವ ಕಮಿಷನ್‌ನಲ್ಲಿ ತಿಂಗಳಿಡೀ ತಾವು ಅಂಗಡಿಗಳನ್ನು ತೆರೆದುಕೊಂಡು ಇರಲಾಗುವುದಿಲ್ಲ ಎಂದು ಬಹುತೇಕ ಮಾಲೀಕರು ದೂರುತ್ತಾರೆ. ನಿರ್ವಹಣೆಯ ದೃಷ್ಟಿಯಿಂದ ಆರ್ಥಿಕವಾಗಿ ಅಷ್ಟೇನೂ ಕಾರ್ಯಸಾಧುವಲ್ಲದ ನ್ಯಾಯಬೆಲೆ ಅಂಗಡಿಗಳನ್ನು `ರಾಜಕೀಯ ಭಿಕ್ಷೆ' ಎಂಬಂತೆ ಪರಿಗಣಿಸಲಾಗುತ್ತಿದೆ. ಇದು ಗ್ರಾಹಕರನ್ನು ವಂಚಿಸಲು ಅಂಗಡಿ ಮಾಲೀಕರಿಗೆ ನೆಪ ಸಿಗುವಂತೆ ಮಾಡಿದೆ. ಹೊಸ ಯೋಜನೆಯಂತೆ ಪ್ರತಿ ತಿಂಗಳೂ ಲಕ್ಷಾಂತರ ಮೆಟ್ರಿಕ್ ಟನ್ ಆಹಾರಧಾನ್ಯ ಈ ಅಂಗಡಿಗಳ ಮೂಲಕವೇ ವಿತರಣೆಯಾಗಲಿದೆ.

ಅಕ್ಕಿಯಷ್ಟೇ ಸಾಕೇ?: ಇಂತಹ ಎಲ್ಲ ಸಮಸ್ಯೆಗಳ ಜೊತೆಗೆ ಸರ್ಕಾರ ಬರಿ ಅಕ್ಕಿಯನ್ನಷ್ಟೇ ವಿತರಿಸಲು ಹೊರಟಿರುವುದೇಕೆ ಎಂಬ ಪ್ರಶ್ನೆಯೂ ಮೂಡುತ್ತದೆ. ಕೇವಲ ಕ್ಯಾಲೊರಿಯನ್ನಷ್ಟೇ ಹೊಂದಿರುವ ಅಕ್ಕಿಯೊಂದೇ ಆಹಾರ ಭದ್ರತೆಯನ್ನು ಹೇಗೆ ಒದಗಿಸಬಲ್ಲದು? ಜನ ಸಾಂಸ್ಕೃತಿಕವಾಗಿ ಅಂಗೀಕರಿಸಿರುವ ಮೈಸೂರು ಭಾಗದ ರಾಗಿ ಮತ್ತು ಉತ್ತರ ಕರ್ನಾಟಕದ ಜೋಳವನ್ನು ಯಾಕೆ ವಿತರಿಸುವುದಿಲ್ಲ? ಕೇಂದ್ರ ಸರ್ಕಾರದಿಂದ, ಸರಕು ಮಾರುಕಟ್ಟೆಯಿಂದ ಅಥವಾ ದೂರದ ಮುಕ್ತ ಮಾರುಕಟ್ಟೆಯಿಂದ ಸಂಗ್ರಹಿಸಿ, ಸಾಗಣೆ ವೆಚ್ಚ ಭರಿಸಿ, ಅದನ್ನು ರಾಜ್ಯದಲ್ಲಿ ವಿತರಿಸುವುದೇ ಯುಕ್ತ ತೀರ್ಮಾನ ಎಂದೇಕೆ ಸರ್ಕಾರ ಭಾವಿಸಿದೆ? ರಾಜ್ಯದಲ್ಲೇ ಸಂಗ್ರಹಿಸಿ ವಿತರಿಸುವ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸಿ, ಅನಗತ್ಯ ಸಾಗಣೆ ವೆಚ್ಚವನ್ನು ತಗ್ಗಿಸುವುದರ ಜೊತೆಗೆ, ವಿವಿಧ ಹಂತಗಳ ಸೋರಿಕೆಯನ್ನೂ ತಡೆಗಟ್ಟಬಾರದೇಕೆ?

ಬಹುತೇಕ ರೈತರು ತಮ್ಮ ಆಹಾರ ಅಗತ್ಯಗಳನ್ನು ಹೆಚ್ಚು ಖರ್ಚಿಲ್ಲದೆ ಒದಗಿಸುವ ಸ್ಥಳೀಯ ನ್ಯಾಯಬೆಲೆ ಅಂಗಡಿಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಮುಖ್ಯ ಬೆಳೆಗಳನ್ನು ಬೆಳೆಯುವ ಆಸಕ್ತಿ ಅವರಲ್ಲಿ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಆಹಾರ ಧಾನ್ಯಗಳು ಕ್ರಮೇಣ ಕಣ್ಮರೆಯಾಗುತ್ತಿವೆ ಮತ್ತು ಅವುಗಳ ಬೆಲೆ ದುಬಾರಿಯಾಗುತ್ತಿದೆ. ಹೀಗಾಗಿ ಸರ್ಕಾರ ಬರಿ ಕ್ಯಾಲೊರಿ ಒದಗಿಸುವುದಷ್ಟೇ ಅಲ್ಲ, ಸ್ಥಳೀಯ ಸಂಸ್ಕೃತಿ ಮತ್ತು ರುಚಿಗೆ ಅನುಗುಣವಾಗಿ ಜನರಿಗೆ ಪೌಷ್ಟಿಕಾಂಶದ ಭದ್ರತೆಯನ್ನೂ ಒದಗಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ.

ಏನು ಮಾಡಬಹುದು?: ಪ್ರಸಕ್ತ ವ್ಯವಸ್ಥೆಯನ್ನು ಸರಿಪಡಿಸಲು ಕೆಳಗಿನ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ವ್ಯವಸ್ಥೆಯು ಇನ್ನಷ್ಟು ಸೋರಿಕೆಗೆ ಕಾರಣವಾಗಿ ಪಾರದರ್ಶಕತೆ, ಹೊಣೆಗಾರಿಕೆ ಎರಡೂ ಇಲ್ಲದಂತೆ ಆಗುತ್ತದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು. ವಾಸ್ತವದಲ್ಲಿ ಈಗಾಗಲೇ ರಾಜ್ಯದ ಶೇ 80ರಷ್ಟು ಮಂದಿ ಈ ವ್ಯವಸ್ಥೆಯ ಲಾಭ ಪಡೆಯುತ್ತಿರುವುದರಿಂದ, ಯೋಜನೆ ಈಗಾಗಲೇ ಭಾಗಶಃ ಸಾರ್ವತ್ರಿಕಗೊಂಡಿದೆ. ಈ ವಿಷಯದಲ್ಲಿ ನೆರೆಯ ತಮಿಳುನಾಡು ಮಾದರಿಯನ್ನು ಅನುಸರಿಸಬೇಕು ಮತ್ತು ಯೋಜನೆಯ ಸ್ವಯಂ ಆಯ್ಕೆ ಪ್ರಕ್ರಿಯೆಗೆ ಅನುವು ಮಾಡಿಕೊಡಬೇಕು.

ವಾಸ್ತವದ ನೆಲೆಯಲ್ಲಿ ಬಡತನದ ಸೂಚ್ಯಂಕವನ್ನು ನಿಗದಿಪಡಿಸಿ ನೂತನ ಬಿಪಿಎಲ್ ಪಟ್ಟಿ ಸಿದ್ಧಪಡಿಸಬೇಕು.

ಸಾಮಾಜಿಕ ಹೊಣೆಗಾರಿಕೆ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಗೆ ಪೂರಕವಾಗುವ ಪರಿಣಾಮಕಾರಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ಸ್ಥಳೀಯವಾಗಿ ಧಾನ್ಯಗಳ ಸಂಗ್ರಹ ಮತ್ತು ವಿತರಣೆ ಆರಂಭಿಸಬೇಕು. ನೇರ ಖರೀದಿಯಿಂದ ಸಣ್ಣ ಪ್ರಮಾಣದ ಆರ್ಥಿಕತೆಯನ್ನು ಉತ್ತೇಜಿಸಿದಂತೆ ಆಗುತ್ತದಲ್ಲದೆ ರಾಜ್ಯದ ಲಕ್ಷಾಂತರ ರೈತರಿಗೆ ಲಾಭವಾಗುತ್ತದೆ.

ಹಿಂದಿನ ವಾಧ್ವಾ ಆಯೋಗದಂತಹ ಸಮಿತಿಗಳ ಶಿಫಾರಸುಗಳು, ಸುಪ್ರೀಂ ಕೋರ್ಟ್‌ನ ಮಾರ್ಗದರ್ಶಿ ಸೂತ್ರಗಳು ಹಾಗೂ 2011ರ ಲೋಕಾಯುಕ್ತ ವರದಿಯ ಶಿಫಾರಸುಗಳ ಜಾರಿಗೆ ಮುಂದಾಗಬೇಕು.

ನ್ಯಾಯಬೆಲೆ ಅಂಗಡಿಗಳ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಪುನರ್‌ವಿಮರ್ಶಿಸಿ, ಅವುಗಳಿಗೆ ನೀಡುವ ಕಮಿಷನ್ ಮೊತ್ತವನ್ನು ಹೆಚ್ಚಿಸಬೇಕು.

ಸಂಗ್ರಹದಿಂದ ಹಿಡಿದು ಚಿಲ್ಲರೆ ಮಾರಾಟದವರೆಗೆ ತಾಂತ್ರಿಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಗಟು ದಾಸ್ತಾನು ಮಳಿಗೆಗಳು ಹಾಗೂ  ನ್ಯಾಯಬೆಲೆ ಅಂಗಡಿಗಳ ತೂಕ ಯಂತ್ರಗಳು ಸೇರಿದಂತೆ ಇಡೀ ವ್ಯವಸ್ಥೆಯ ಕಂಪ್ಯೂಟರೀಕರಣ, ಜಿಪಿಎಸ್ ವ್ಯಾಪ್ತಿಗೆ ಸಾಗಣೆ ಲಾರಿಗಳು, ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಮುಂದಾಗಬೇಕು.

ಹೀಗೆ ಸಂವೇದನಾಶೀಲ, ಜವಾಬ್ದಾರಿಯುತ ಹಾಗೂ ಪರಿಣಾಮಕಾರಿಯಾದ ವಿತರಣಾ ವ್ಯವಸ್ಥೆಗೆ ಮುಂದಾಗದಿದ್ದರೆ, ರಾಜ್ಯದ ಜನತೆಗೆ ಆಹಾರ ಭದ್ರತೆ ಒದಗಿಸುವ ಆಕಾಂಕ್ಷೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗುವುದಿಲ್ಲ; ಅಲ್ಲದೆ, ಅದು ಅಲ್ಪಾವಧಿಯ ರಾಜಕೀಯ ಸಾಧನ ಮಾತ್ರ ಆಗುತ್ತದೆ; ಭ್ರಷ್ಟ ಮತ್ತು ಅಸಮರ್ಥ ವ್ಯವಸ್ಥೆ ಇನ್ನಷ್ಟು ಹದಗೆಡಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂಬುದನ್ನು ಸರ್ಕಾರ ಮನಗಾಣಬೇಕು.
-ಡಾ.ಆರ್. ಬಾಲಸುಬ್ರಹ್ಮಣ್ಯಂ. (ಲೇಖಕರು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.