ADVERTISEMENT

ಅಮಾನವೀಯ ಹುನ್ನಾರ

ಅಗ್ರಹಾರ ಕೃಷ್ಣಮೂರ್ತಿ
Published 3 ಡಿಸೆಂಬರ್ 2015, 19:30 IST
Last Updated 3 ಡಿಸೆಂಬರ್ 2015, 19:30 IST

ಪಟ್ಟಭದ್ರ ಶಕ್ತಿಗಳನ್ನು ಪ್ರತಿಭಟಿಸುವ ನಾಗರಿಕ ಪರಂಪರೆಯನ್ನು ‘ಸಹಿಷ್ಣುತಾ ಮಾಫಿಯಾ’ ಎನ್ನುವ ಮನಸ್ಥಿತಿಯನ್ನು ಕನ್ನಡ ಲೇಖಕ ಸಮುದಾಯ ಧಿಕ್ಕರಿಸಬೇಕು.

ವಿಕ್ರಂ ಸಂಪತ್ ಅವರು ‘ಸಹಿಷ್ಣುತಾ ಮಾಫಿಯಾ’ ಅನ್ನುವ ಪದ ಪ್ರಯೋಗವನ್ನು ಮಾಡಿದ ಕೂಡಲೇ ಅವರ ಉದ್ದೇಶ ನಿಚ್ಚಳವಾಗಿ ತಿಳಿಯುತ್ತದೆ. ಇದು ನಿಶ್ಚಿತವಾಗಿ ಪುರಸ್ಕಾರಗಳನ್ನು ಹಿಂತಿರುಗಿಸಿದ ಲೇಖಕರು ಮತ್ತು ಕಲಾವಿದರ ಬಗ್ಗೆ ಆಡಿದ ಮಾತು. ಅಲ್ಲಿಗೆ ಇದು ಮುಕ್ತಾಯಗೊಳ್ಳಬೇಕಿತ್ತು. ವಿಕ್ರಂ ಸಂಪತ್ ತಾನು ಸಾಹಿತ್ಯೋತ್ಸವದಿಂದ ಹೊರಗುಳಿಯುತ್ತೇನೆ ಎಂದು ಹೇಳಿರುವುದು ಅತ್ಯಂತ ಚಾಣಾಕ್ಷ ರಾಜಕೀಯ ತಂತ್ರವೇ ಆಗಿದೆ.

ಈ ಹೊತ್ತಿನಲ್ಲಿ ಸಾಹಿತ್ಯೋತ್ಸವದಿಂದ ಹೊರಗುಳಿಯುತ್ತಿರುವ ಕನ್ನಡ ಲೇಖಕರ ನಿಲುವನ್ನು ಎತ್ತಿ ಹಿಡಿಯಬೇಕು ಮತ್ತು ಮೆಚ್ಚಬೇಕು. ಇದೇ ಸಂದರ್ಭದಲ್ಲಿ ಸಾಹಿತ್ಯೋತ್ಸವದಲ್ಲಿ ಭಾಗಿಗಳಾಗಲಿರುವ ಕನ್ನಡ ಲೇಖಕರು ಒಂದು ಕ್ಷಣ ಈ ಪರಿಸ್ಥಿತಿಯನ್ನು ಕುರಿತು ಧ್ಯಾನಿಸಬೇಕು. ವಿಕ್ರಂ ಸಂಪತ್ ಪ್ರಾರಂಭಿಸಿದ ಬೆಂಗಳೂರು ಸಾಹಿತ್ಯೋತ್ಸವದ ಮೊದಲನೆಯ ಸಂಪುಟವೇ ಕನ್ನಡಕ್ಕೆ ಎರಡನೆಯ ಸ್ಥಾನವನ್ನು ನೀಡಿತ್ತು. ಆಗ ಮಾಡಿದ ತಪ್ಪನ್ನು ಮುಂದಿನ ಸಂಚಿಕೆಯಲ್ಲಿ ತಿದ್ದಿಕೊಂಡಿರುವೆವೆಂಬ ಭ್ರಮೆಯನ್ನು ಉಂಟು ಮಾಡಿತೇ ಹೊರತು, ಯಾವ ಪ್ರಾಶಸ್ತ್ಯವನ್ನೂ ಕನ್ನಡಕ್ಕೆ ನೀಡಲಿಲ್ಲ. 

ಆದರೂ ಕನ್ನಡದ ಹಲವು ಹಿರಿ ಕಿರಿಯ ಲೇಖಕರು ಬೆಂಗಳೂರಿನಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಸಾಹಿತ್ಯೋತ್ಸವವೆನ್ನುವ ಕಾರಣಕ್ಕೆ ಅದರಲ್ಲಿ ಭಾಗಿಯಾಗುತ್ತಾ ಬಂದರು. ಆದರೆ ಇವತ್ತಿನ ಪರಿಸ್ಥಿತಿ ಭಿನ್ನವಾಗಿದೆ. ದೇಶದಲ್ಲಿ ‘ಅಸಹಿಷ್ಣುತೆ’ಯ ಪ್ರಶ್ನೆ ತೀವ್ರವಾಗಿದೆ. ಕನ್ನಡದ ಒಬ್ಬ ಲೇಖಕರ ಬರ್ಬರ ಹತ್ಯೆಯಾಗಿದೆ. ಇದರ ಸುತ್ತ ದೊಡ್ಡ ರಾಜಕಾರಣವೇ ಹಬ್ಬುತ್ತಿರುವುದು ಕಳವಳಕಾರಿಯಾದ ಸಂಗತಿ.

ಇಂಥದೊಂದು ಸಂದರ್ಭ ಬಂಗಾಳಿ, ಮರಾಠಿ, ಮಲಯಾಳಂ, ತಮಿಳು ಮುಂತಾದ ಇತರ ಭಾರತೀಯ ಭಾಷೆಗಳ ಸಂದರ್ಭದಲ್ಲಿ ಘಟಿಸಿದ್ದಿದ್ದರೆ, ಆ ಭಾಷೆಯ ಲೇಖಕ–ಕಲಾವಿದರ ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತಿತ್ತು ಎಂಬುದನ್ನು ನಾವು ಯೋಚಿಸಬೇಕು. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ದಾಭೋಲ್ಕರ್ ಪ್ರಕರಣದಲ್ಲಿ ಸರ್ಕಾರ ಒಂದು ಕಾಯ್ದೆಯನ್ನು ಜಾರಿಗೆ ತರುವಂತೆ ಮಾಡುವಲ್ಲಿ ಅಲ್ಲಿನ ಲೇಖಕ–ಕಲಾವಿದ ಸಮುದಾಯ ಯಶಸ್ವಿಯಾಯಿತು. ಅಥವಾ ಇಂಥದೊಂದು ದುರಂತ ಭಾರತೀಯ ಇಂಗ್ಲಿಷ್‌ ಲೇಖಕರೊಬ್ಬರ ಮಟ್ಟಿಗೆ ಆಗಿದ್ದಿದ್ದರೆ ಆಗ ವಿಕ್ರಂ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು?

ವಿಕ್ರಂ ಆರಂಭಿಸಿದ ಈ ಹಬ್ಬ ನಿರಂತರವಾಗಿ ನಡೆಯುತ್ತಾ ಇರಬೇಕೆನ್ನುವುದು ಸಾಹಿತ್ಯದ ವಿದ್ಯಾರ್ಥಿಯಾದ ನನಗೂ ಸಂತೋಷದ ವಿಷಯ. ಆದರೆ, ಅವರು ಇದನ್ನು ತಾವು ಬರೆಯುತ್ತಿರುವ ‘ಭಾಷೆ’ಯ ಉತ್ಸವವಾಗಿ ಮಾತ್ರ ನಡೆಸುವುದು ಉಚಿತ ಎನಿಸುತ್ತದೆ. ಏಕೆಂದರೆ ಭಾರತೀಯ ಇಂಗ್ಲಿಷ್‌ನಲ್ಲಿ ಬರೆಯುತ್ತಿರುವ ಎರಡು ಅಥವಾ ಮೂರನೇ ದರ್ಜೆಯ ಲೇಖಕರ ಜೊತೆಗೆ ಕನ್ನಡದ ಮೊದಲನೆಯ ದರ್ಜೆಯ ಲೇಖಕ–ವಿಮರ್ಶಕರನ್ನು ಉದಾರವಾಗಿ ಆಹ್ವಾನಿಸುವುದು ಮೇಲ್ನೋಟಕ್ಕೆ ಆ ಭಾಷೆಗೆ ಕೊಡುತ್ತಿರುವ ಪ್ರಾಶಸ್ತ್ಯ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತದೆ. ಈ ವರ್ಷದ ಕಾರ್ಯಕ್ರಮ ಪಟ್ಟಿಯನ್ನು ನಾನು ಗಮನಿಸಿಲ್ಲ.

ಆದರೆ, ನಾನು ಹಾಜರಿದ್ದ ಹಿಂದಿನ ಉತ್ಸವದಲ್ಲಿ ಕನ್ನಡಕ್ಕಾದ ಹೀನಾಯ ಸ್ಥಿತಿಯನ್ನು ಮನಗಂಡಿದ್ದೇನೆ. ಕರ್ನಾಟಕದ ರಾಜಧಾನಿಯಲ್ಲಿ ನಡೆಯುತ್ತಿದ್ದ ಉತ್ಸವದಲ್ಲಿ, ಕನ್ನಡದ ಲೇಖಕ ಲೇಖಕಿಯರು ಹಾಡಹಗಲೇ ದಾರಿ ಕಾಣದವರಂತೆ ಏಕಾಂಗಿಗಳಾಗಿ ಅಲೆದಾಡುತ್ತಿದ್ದ ಹೊತ್ತಿನಲ್ಲಿ ಗುಲ್ಜಾರ್‌ರಂತಹ ಲೇಖಕರು ನೀಡುತ್ತಿದ್ದ ಹಸ್ತಾಕ್ಷರಗಳಿಗೆ ಮುಗಿಬಿದ್ದು ಸಾಲುಗಟ್ಟಿ ನಿಲ್ಲುತ್ತಿದ್ದ ರಸಿಕಾಭಿಮಾನಿಗಳ ಗುಂಪುಗಳನ್ನು ಕಂಡ ಚಿತ್ರಗಳು ಕಣ್ಣೆದುರಿಗೆ ಬರುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ನಡೆಯುತ್ತಿರುವ ಈ ಸಾಹಿತ್ಯೋತ್ಸವವೆಂಬ ‘ಫ್ಯಾಷನ್’ ಮೂಲಭೂತವಾಗಿ ಇಂಗ್ಲಿಷ್ ಓದುಗರ ಮತ್ತು ನಗರದ ‘ಸಾಹಿತ್ಯೋಪಜೀವಿಗಳ’ ವಿಲಾಸದಂತೆ ಕಾಣಿಸುತ್ತದೆ. ಇದನ್ನು ಜೈಪುರದ ಸಾಹಿತ್ಯೋತ್ಸವವನ್ನೂ ಒಳಗೊಂಡಂತೆ ನಾನು ಹೇಳುತ್ತಿದ್ದೇನೆ. ಜೈಪುರ ಭಾರತದ ಪ್ರಸಿದ್ಧ ಪ್ರವಾಸಿ ಕೇಂದ್ರ. ಈ ಸಾಹಿತ್ಯೋತ್ಸವ ಕೂಡ ಪ್ರವಾಸಿಗರಿಗೆ ಅನುಕೂಲವಾದ ಕಾಲದಲ್ಲೇ ಸಾಮಾನ್ಯವಾಗಿ ಆಯೋಜಿಸಲ್ಪಟ್ಟು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ.

ಇದನ್ನು ನಾವು ಇಂಗ್ಲಿಷ್‌ನಲ್ಲೇ ಹೇಳುವುದಾದರೆ, ಉತ್ಸವದ ಮೂಲಕ ಆ ಪ್ರವಾಸಿ ಕಾಲವನ್ನು ‘ಎಕ್ಸ್‌ಪ್ಲಾಯ್ಟ್’ ಮಾಡುತ್ತಾರೆ. ಅಲ್ಲೂ ಭಾರತೀಯ ಭಾಷೆಗಳಿಗೆ ಕಡೆಯ ಮಣೆಯೇ. ಆದರೆ, ಭಾರತದಲ್ಲಿ ಆಯೋಜಿಸಲಾಗುತ್ತಿರುವ ಈ ರೀತಿಯ ವಿಲಾಸಿ ಇಂಗ್ಲಿಷ್ ಸಾಹಿತ್ಯೋತ್ಸವಗಳು ನೂರಾರು ಭಾರತೀಯ ಭಾಷೆಗಳನ್ನಾಡುವ ಜನರ ತೆರಿಗೆಯ ಹಣವನ್ನೂ ಒಳಗೊಂಡಿರುತ್ತವೆ ಎನ್ನುವುದು ಒಂದು ವಿಪರ್ಯಾಸದ ಸಂಗತಿ.

ಈ ದೃಷ್ಟಿಯಿಂದ ಕರ್ನಾಟಕದಲ್ಲಿ ನಡೆದ ಒಂದು ‘ಪ್ರಾದೇಶಿಕ ಭಾಷೆ’ಯ ಸಾಹಿತ್ಯೋತ್ಸವವನ್ನು ನೆನೆಯಬೇಕು. ಕಳೆದೆರಡು ಮೂರು ವರ್ಷಗಳಿಂದ ಧಾರವಾಡದಲ್ಲಿ ‘ಸಾಹಿತ್ಯ ಸಂಭ್ರಮ’ ನಡೆಯುತ್ತಿರುವುದು ಸಮಯೋಚಿತವಾಗಿದೆ. ಆದ್ದರಿಂದ ಈ ಅಂಗ್ರೇಜಿ ಸಾಹಿತ್ಯಾಸಕ್ತರು ಕನ್ನಡದ ಬಗ್ಗೆ ಕಾಳಜಿಯನ್ನು ತೋರುತ್ತಿದ್ದೇವೆಂಬ ಭ್ರಮೆಯನ್ನು ಬಿಟ್ಟು, ತಮ್ಮ ಪಾಡಿಗೆ ತಾವು ಇಂಗ್ಲಿಷ್ ಸಾಹಿತ್ಯೋತ್ಸವವನ್ನು ಪಂಚತಾರಾ ಹೋಟೆಲುಗಳಲ್ಲಿ, ರೆಸಾರ್ಟ್‌ಗಳಲ್ಲಿ ನಡೆಸಲು ಯಾರ ಅಡ್ಡಿಯೂ ಇಲ್ಲ.

ಆದರೆ ಟ್ಯಾಗೋರ್, ಶಿವರಾಮ ಕಾರಂತ, ಕುವೆಂಪು, ನಯನತಾರಾ ಸೆಹಗಲ್, ಚಂಪಾ ಮುಂತಾದ ಅತ್ಯಂತ ಪ್ರಖ್ಯಾತ ಭಾರತೀಯ ಚೇತನಗಳು, ತಮ್ಮ ಸಮಕಾಲೀನ ರಾಜಕೀಯ– ಸಾಮಾಜಿಕ ಪರಿಸ್ಥಿತಿಗಳಲ್ಲಿ ಆಯಾ ಸಮುದಾಯದ ಜಾತ್ಯತೀತ ಮತ್ತು ಮಾನವಪರ ನಿಲುವುಗಳನ್ನು ಎತ್ತಿ ಹಿಡಿದು, ಪಟ್ಟಭದ್ರ ಮತ್ತು ಮೂಲಭೂತವಾದಿ ಶಕ್ತಿಗಳನ್ನು ಪ್ರತಿಭಟಿಸಿದ ನಾಗರಿಕ ಪರಂಪರೆಯೊಂದನ್ನು ‘ಸಹಿಷ್ಣುತಾ ಮಾಫಿಯಾ’ ಎಂದು ಕರೆಯುವ ಮನಸ್ಥಿತಿಯನ್ನು ಕನ್ನಡ ಲೇಖಕ ಸಮುದಾಯ ಧಿಕ್ಕರಿಸಬೇಕು.

ಇಂಗ್ಲಿಷ್ ಲೇಖಕ ಸಲ್ಮಾನ್ ರಶ್ದಿಯವರ ಪುಸ್ತಕ ನಿಷೇಧದ ವಿಷಯವನ್ನು ಮೂರು ದಶಕಗಳಾದರೂ ಜೀವಂತವಾಗಿಡಲು ತವಕಿಸುವ ನವ ಇಂಗ್ಲಿಷಿಗರು ದೇಶ ಭಾಷೆಗಳಲ್ಲಿನ ಲೇಖಕರ ಮೇಲಾಗುತ್ತಿರುವ ಬರ್ಬರತೆ ಮತ್ತು ಹತ್ಯೆಗಳನ್ನು ಖಂಡಿಸುವ ನಾಗರಿಕರನ್ನು ‘ಮಾಫಿಯಾ’ ಎನ್ನುವ ಧೈರ್ಯವನ್ನು ತೋರುತ್ತಾರಲ್ಲಾ... ಇದನ್ನು ಏನೆಂದು ಕರೆಯಬೇಕು?

ರಹಮತ್ ತರೀಕೆರೆಯವರು ಪ್ರಶಸ್ತಿ ವಾಪಸ್ ಮಾಡಿದವರ ಸಭೆಯಲ್ಲಿ ಮಾತನಾಡುತ್ತಾ, ಪುರಸ್ಕಾರವನ್ನು ಹಿಂತಿರುಗಿಸುವಾಗ ತಮಗಾದ ನೋವನ್ನು ವ್ಯಕ್ತಪಡಿಸಿದರು. ಮುಂದುವರೆದು, ಪುರಸ್ಕಾರಗಳನ್ನು ಹಿಂತಿರುಗಿಸಲಾಗದವರಿಗೂ ಇಂಥದೇ ನೋವು ಇರುತ್ತದೆ ಎಂದರು. ಇದು ವಾಸ್ತವ ಸ್ಥಿತಿ. ಇಂಥ ಆರೋಗ್ಯಕರ ಮನಸ್ಸುಗಳನ್ನು ಮಾಫಿಯಾ ಎಂದು ಕರೆಯುವುದು ಅಮಾನವೀಯ ಹುನ್ನಾರ. ಸತ್ಯ ಮತ್ತು ಸೌಂದರ್ಯಗಳನ್ನು ಎತ್ತಿ ಹಿಡಿಯುವ ಕಲೆಗೆ ಮಾಡುವ ಅಪಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT