‘ನಾವು ನೆಲಕಚ್ಚಲಿ ಎಂದು ಅವರು ಬಯಸುತ್ತಿದ್ದಾರೆ ಎಂದು ನಿಮಗೆ ಅನ್ನಿಸುವುದಿಲ್ಲವೇ?’ ಅಥೆನ್ಸ್‌ಗೆ ಕ್ಷಿಪ್ರ ಭೇಟಿಗಾಗಿ ನಾನು ಹೋದಾಗ ಪದೇ ಪದೇ ಇದೇ ಪ್ರಶ್ನೆ ಕೇಳಿಬರುತ್ತಿತ್ತು. ಇಲ್ಲ ಎಂಬುದು ನನ್ನ ಉತ್ತರವಾಗಿತ್ತು. ಗ್ರೀಸ್‌ನ ಬಹುತೇಕ ಜನರು ಅಂದುಕೊಂಡಿದ್ದಕ್ಕಿಂತ ಹೆಚ್ಚು ಒಳ್ಳೆಯತನ ಯುರೋಪ್‌ನ ಸಾಲದಾತ ದೇಶಗಳಲ್ಲಿ ಇದೆ ಎಂದು ನಾನು ಭಾವಿಸಿದ್ದೇನೆ.
ಆದರೆ, ಗ್ರೀಕರು ಏಕೆ ಹೀಗೆ ಅಂದುಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಗ್ರೀಸ್ ಮತ್ತು ಯುರೋಪ್ ದೊಡ್ಡದೊಂದು ಆಘಾತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂಬ ಆತಂಕ ಹೊತ್ತುಕೊಂಡೇ ಈ ಪ್ರವಾಸದಿಂದ ನಾನು ಹಿಂದಿರುಗಿದೆ.
ಈವರೆಗಿನ ಕಥೆ ಹೀಗಿದೆ:
2009ರ ಅಂತ್ಯದಲ್ಲಿ ಗ್ರೀಸ್ ದೊಡ್ಡದೊಂದು ಸಂಕಷ್ಟದಲ್ಲಿ ಸಿಲುಕಿಕೊಂಡಿತ್ತು. ವಿಪರೀತವಾದ ಸಾಲ, ದುಬಾರಿ ಜೀವನಮಟ್ಟ, ಗಗನಕ್ಕೆ ಏರಿದ ಬೆಲೆಯಿಂದಾಗಿ ಈ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಗ್ರೀಸ್‌ನ ಈ ಸಂಕಷ್ಟಕ್ಕೆ ಯುರೋಪ್‌ನ ಇತರ ದೇಶಗಳೆಲ್ಲ ಉದಾರವಾಗಿ ಪ್ರತಿಕ್ರಿಯಿಸಿದವು. ಆ ದೇಶಕ್ಕೆ ಸಾಲದ ಹೊಳೆ ಹರಿಸಿ, ನಗದು ಕೊರತೆ ಆಗದಂತೆ ನೋಡಿಕೊಳ್ಳಲಾಯಿತು.
ಆದರೆ, ಕಠಿಣ ಆರ್ಥಿಕ ಕ್ರಮ ಕೈಗೊಳ್ಳುವಂತೆ ಗ್ರೀಸ್‌ಗೆ ಕೆಲ ಷರತ್ತುಗಳನ್ನೂ ವಿಧಿಸಲಾಗಿತ್ತು. ಸರ್ಕಾರಿ ವೆಚ್ಚ ಕಡಿತಗೊಳಿಸುವುದು, ತೆರಿಗೆ ಮೊತ್ತ ಹೆಚ್ಚಿಸುವುದು, ಹಾಗೆಯೇ ಸಂಬಳವನ್ನು ಕಡಿತಗೊಳಿಸುವುದು, ಇದರಿಂದಾಗಿ ನೌಕರ ವರ್ಗದವರ ವೇತನದಲ್ಲಿ ಮೊದಲಿಗಿಂತ ಸರಾಸರಿ ಶೇ 25ರಷ್ಟು ಕಡಿತ ಉಂಟಾಯಿತು.
ಇಂತಹ ತ್ಯಾಗದ ಕ್ರಮಗಳಿಂದ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರುತ್ತದೆ ಎಂದು ಊಹಿಸಲಾಗಿತ್ತು. ಆದರೆ, ಜನರಲ್ಲಿ ಕೊಳ್ಳುವ ಶಕ್ತಿ ಕುಸಿದಂತೆ ಧಾರಣೆಗಳು ಮತ್ತಷ್ಟು ಕುಸಿದವು. ಗ್ರೀಸ್ ದೇಶ ಭಾರಿ ಆರ್ಥಿಕ ಹಿಂಜರಿತ ಅನುಭವಿಸಬೇಕಾಯಿತು. ಬಹುದೊಡ್ಡ ಸಂಕಷ್ಟವೂ ಎದುರಾಯಿತು.
ಶನಿವಾರ ನಾನು ಮನೆ ಇಲ್ಲದವರಿಗೆ ಆಶ್ರಯ ಕಲ್ಪಿಸುವ ರಕ್ಷಣಾ ಗೃಹವೊಂದಕ್ಕೆ ತೆರಳಿದ್ದೆ. ಅಲ್ಲಿನ ಆರೋಗ್ಯ ಸೇವಾ ವ್ಯವಸ್ಥೆ ಹೇಗೆ ಕುಸಿದುಬಿದ್ದಿದೆ ಎಂಬಂತಹ ಮನ ಕುಲಕುವ ಹಲವು ಕಥೆಗಳು ಅಲ್ಲಿ ಕೇಳಿಬಂದವು. ಐದು ಯುರೊ ಪ್ರವೇಶ ಶುಲ್ಕ ಭರಿಸಲು ಸಾಧ್ಯವಿಲ್ಲದ್ದಕ್ಕೆ ರೋಗಿಗಳನ್ನು ಆಸ್ಪತ್ರೆಯಿಂದ ಹೊರಗಟ್ಟಲಾಗುತ್ತಿತ್ತು. ರೋಗಿಗಳಿಗೆ ಔಷಧ ನೀಡದೇ ಕಳುಹಿಸಲಾಗುತ್ತಿತ್ತು.
ಇದೊಂದು ಮುಗಿಯದ ದುಃಸ್ವಪ್ನ. ಆದರೂ ಗ್ರೀಸ್ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಐರೋಪ್ಯ ಒಕ್ಕೂಟದ ಭಾಗವಾಗಿಯೇ ಇರಲು ನಿರ್ಧರಿಸಿದವು. ‘ಯುರೊ’ದಿಂದ ಹೊರಬೀಳುವ ಹಾಗೂ ಸದಾ ಸಾಲಗಾರನಾಗಿಯೇ ಇರುವ ದುಷ್ಪರಿಣಾಮವನ್ನು ಊಹಿಸಿಕೊಂಡು ಐರೋಪ್ಯ ಒಕ್ಕೂಟ ಹಾಕಿದ ಷರತ್ತುಗಳನ್ನು ಪ್ರತಿ ವರ್ಷವೂ ಮುಂದುವರಿಸಿಕೊಂಡು ಬಂದವು. ಅಂತಿಮವಾಗಿ, ಗ್ರೀಸ್‌ನ ಸಾಮಾನ್ಯ ಜನ ಈ ಆರ್ಥಿಕ ಕಡಿತದ ನೀತಿಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ ಸ್ಥಿತಿ ತಲುಪಿದರು.
ಮತ್ತಷ್ಟು ಆರ್ಥಿಕ ನಿಯಂತ್ರಣ ಹೇರುವಂತೆ ಸಾಲ ನೀಡುವ ದೇಶಗಳು ಬೇಡಿಕೆ ಮುಂದಿಟ್ಟವು. ಈ ಬೇಡಿಕೆಯಿಂದಾಗಿ ಆರ್ಥಿಕತೆ ಮೊದಲಿಗಿಂತ ಶೇ 8ರಷ್ಟು ಕೆಳಕ್ಕೆ ಹೋಗುವ ಸಾಧ್ಯತೆಯಿತ್ತು. ನಿರುದ್ಯೋಗ ಪ್ರಮಾಣ ಮತ್ತಷ್ಟು ಏರಿಕೆ ಆಗುತ್ತಿತ್ತು. ದೇಶದ ಜನ ಅಂತಿಮವಾಗಿ ಪಕ್ಕಾ ಎಡಪಂಥೀಯ ಸಿರಿಜಾ ಮೈತ್ರಿಕೂಟಕ್ಕೆ ಮತ ಹಾಕಿದರು. ದೇಶದ ಗತಿಯನ್ನು ಬದಲಿಸುವುದಾಗಿ ಈ ಮೈತ್ರಿಕೂಟ ಭರವಸೆ ನೀಡಿದೆ. ಗ್ರೀಕರು ‘ಯುರೊ’ದಿಂದ ಹೊರಹೋಗುವುದನ್ನು ತಡೆಯಲು ಸಾಧ್ಯವಿಲ್ಲವೇ? ಖಂಡಿತ ತಡೆಯಬಹುದು. ಸಿರಿಜಾ ಗೆಲುವಿನ ವಿಪರ್ಯಾಸ ಎಂದರೆ, ಎಲ್ಲರಿಗೂ ಒಪ್ಪಿಗೆಯಾಗಬಲ್ಲ ಸೂತ್ರ ರೂಪಿಸುವ ಹೊತ್ತಿನಲ್ಲಿಯೇ ಈ ಮೈತ್ರಿಕೂಟ ಅಧಿಕಾರ ಹಿಡಿದಿದೆ.
ಗ್ರೀಸ್ ದೇಶ ‘ಯುರೊ’ದಿಂದ ಹೊರಗೆ ಹೋದಲ್ಲಿ,ಇದಕ್ಕೆ ಆ ದೇಶ ಭಾರಿ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಗ್ರೀಸ್‌ನ ಈ ಹೆಜ್ಜೆ, ಇಡಿ ಯುರೋಪ್ ಖಂಡಕ್ಕೆ ರಾಜಕೀಯ ಮತ್ತು ಆರ್ಥಿಕ ಸಂಕಷ್ಟ ತಂದೊಡ್ಡುವ ಭೀತಿಯಿದೆ. ಇದಕ್ಕಿಂತ ಸ್ವಲ್ಪವೇ ಉತ್ತಮವಾದ ಪರ್ಯಾಯ ಮಾರ್ಗವಿದ್ದರೂ ‘ಯುರೊ’ದಿಂದ ಹೊರಬರುವ ನಿರ್ಧಾರವನ್ನು ಗ್ರೀಸ್ ಕೈಬಿಡುವುದು ಒಳ್ಳೆಯದು.
ಯಾವುದೋ ಮಾರ್ಗ, ಉಪಾಯ ಇರಲೇಬೇಕು.
2014ರ ಅಂತ್ಯದ ಹೊತ್ತಿಗೆ ಗ್ರೀಸ್ ಸಣ್ಣದೊಂದು ಉಳಿತಾಯದ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾಗಿತ್ತು. ಬಡ್ಡಿ ತುಂಬುವುದನ್ನು ಹೊರತುಪಡಿಸಿದಲ್ಲಿ, ತೆರಿಗೆ ಯಿಂದ ಬರುವ ವರಮಾನ ಖರ್ಚು, ವೆಚ್ಚ ಮೀರಿಸು ವಂತೆ ಇತ್ತು. ಅಲ್ಲದೇ ಕಾರ್ಮಿಕರು, ನೌಕರರ ಸಂಬಳ ಕಡಿತದಿಂದಾಗಿ ಗ್ರೀಸ್ ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮ ಕತೆ ಗಳಿಸಿಕೊಂಡಿತ್ತು ಅಥವಾ ಸ್ವಲ್ಪಮಟ್ಟಿನ ಸ್ಥಿರತೆ ಗಳಿಸಿಕೊಂಡಲ್ಲಿ ಖಂಡಿತವಾಗಿಯೂ ಸ್ಪರ್ಧಾತ್ಮಕವಾಗುತ್ತಿತ್ತು.
ಹಾಗಾಗಿ ಈ ಪರಿಹಾರ ಸೂತ್ರದ ಚೌಕಟ್ಟು ಸ್ಪಷ್ಟ ವಾಗಿದೆ. ಮತ್ತಷ್ಟು ಕಟ್ಟುನಿಟ್ಟು ಮಾಡದೇ ಆರ್ಥಿಕ ಮಿತ ವ್ಯಯವನ್ನು ಈಗಿರುವ ಮಟ್ಟದಲ್ಲೇ ಉಳಿಸಿಕೊಳ್ಳಬೇಕು. ಸಾಲ ನೀಡುವ ದೇಶಗಳಿಗೆ ದೊಡ್ಡ ಮೊತ್ತದ ಹಣ ಪಾವತಿಸದೇ ಇದ್ದರೂ ಗಮನಾರ್ಹ ಮೊತ್ತವನ್ನು ಪಾವತಿಸಬೇಕು. ಈ ಸೂತ್ರ ಆರ್ಥಿಕ ಚೇತರಿಕೆಗೆ ವೇದಿಕೆ ಕಲ್ಪಿಸ ಬಹುದು. ಆರಂಭದಲ್ಲಿ ನಿಧಾನಗತಿಯಲ್ಲಿದ್ದರೂ ಅಂತಿಮವಾಗಿ ಇದು ಗ್ರೀಸ್ ಆರ್ಥಿಕತೆಗೆ ಆಶಾಕಿರಣ ಆಗಬಹುದು.
ಆದರೆ ಈಗ ಈ ಸೂತ್ರ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಕಾಣಿಸುತ್ತಿಲ್ಲ. ಸಾಲದಾತರು ಹೇಳುವಂತೆ ಗ್ರೀಸ್‌ನ ಹೊಸ ಸರ್ಕಾರದೊಂದಿಗೆ ವ್ಯವಹರಿಸುವುದು ಕಷ್ಟ. ವಿಶ್ವಾಸಾರ್ಹತೆ ಕಳೆದುಕೊಂಡ ವ್ಯವಸ್ಥೆಯೊಂದನ್ನು ನಿರ್ವಹಿಸಲು ಆಡಳಿತದಲ್ಲಿ ಅನುಭವ ಇಲ್ಲದವರು ಬಂದಾಗ ಇದಕ್ಕಿಂತ ಹೆಚ್ಚಿನದನ್ನೇನು ನಿರೀಕ್ಷಿಸಲು ಸಾಧ್ಯ? ಮುಖ್ಯವಾಗಿ ಸಾಲದಾತರು, ನೌಕರರ ಪಿಂಚಣಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಭಾರಿ ಕಡಿತ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಹೊಸದಾಗಿ ಆಯ್ಕೆಯಾಗಿರುವ ಎಡಪಂಥೀಯ ಸರ್ಕಾರ ತೆರಿಗೆ ವಸೂಲಾತಿಯಲ್ಲಿ ಸುಧಾರಣೆ ತರುವಂತಹ ಕ್ರಮಗಳನ್ನು ಒಪ್ಪಿದಂತೆ ಈ ಬೇಡಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ಬೇಡಿಕೆಯನ್ನು ಗ್ರೀಸ್‌ನ ಜನರು ಬೇರೆ ಬಗೆಯಲ್ಲಿ ಗ್ರಹಿಸುವ ಸಾಧ್ಯತೆ ಇದೆ. ತಮ್ಮ ಸರ್ಕಾರವನ್ನು ಉರುಳಿಸಿ, ಮಿತವ್ಯಯದ ವಿರುದ್ಧ ಸಾಗುವ ಸಾಲಗಾರ ದೇಶಗಳಿಗೆ ಏನಾಗಬಹುದು ಎಂಬ ಸಂದೇಶ ನೀಡಲು ಸಾಲದಾತರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಭಾವಿಸಬಹುದು. ಈ ವಿಚಾರದಲ್ಲಿ ಸಂಯಮ ವಹಿಸು ವುದು ಅನಿವಾರ್ಯ. ಒಂದು ವೇಳೆ ಮೇಲೆ ಹೇಳಿದ ಸೂತ್ರ ಜಾರಿಗೆ ಬಂದಲ್ಲಿ ಅನಿಶ್ಚಿತತೆ ಕಡಿಮೆಯಾಗಿ ಆರ್ಥಿಕತೆ ಸುಧಾರಿಸಬಹುದು.
-ಲೇಖಕ ಅಮೆರಿಕದ ಅರ್ಥಶಾಸ್ತ್ರಜ್ಞ, ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.