‘ಉದಾರೀಕರಣದ ಹೆದ್ದಾರಿಯಲ್ಲಿ ಸಾಗಿಬರುವ ನವೀನ ಕೈಗಾರಿಕೆ ಮತ್ತು ಉದ್ದಿಮೆಗಳು, ದೇಶದ ಒಟ್ಟಾರೆ ಆದಾಯವನ್ನು ವೇಗವಾಗಿ ಹಿಗ್ಗಿಸಬಲ್ಲವು. ಇದರಿಂದ ತಲಾ ಆದಾಯ ಹೆಚ್ಚಿ, ಬಡವರು ಬಹುಬೇಗ ಸ್ಥಿತಿವಂತರಾಗಬಲ್ಲರು. ಸಮಾಜೋ- ಆರ್ಥಿಕ ಪರಿಸ್ಥಿತಿಯ ಈ ಮೇಲ್ಮುಖ ಚಲನೆಯು ಜನರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಬಲ್ಲದು. ಉಳ್ಳವರು ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ವ್ಯಯಿಸತೊಡಗಿದಂತೆ, ಸೇವಾಕ್ಷೇತ್ರ ಬೆಳೆದು, ಸಮಾಜದ ಕೆಳ ಸ್ತರಕ್ಕೂ ಆರ್ಥಿಕ ಸಂಪನ್ಮೂಲ ತೊಟ್ಟಿಕ್ಕಲಾರಂಭಿಸುವುದು. ಸಮಾಜದ ಅಂತಿಮ ವ್ಯಕ್ತಿಯೂ ಆಗ ಅಭಿವೃದ್ಧಿಯ ಫಲ ಸವಿಯಲು ಸಾಧ್ಯ...’ ಎಂಬುದು ಮಾರುಕಟ್ಟೆಯ ಆರ್ಥಿಕನೀತಿ ಪ್ರತಿಪಾದಿಸುತ್ತಿರುವ ಅಭಿವೃದ್ಧಿಯ ತತ್ವ ತಾನೇ? ಹಾಗೆಂದೇ, ಹೊಸಬಗೆಯ ಆರ್ಥಿಕ ಚಟುವಟಿಕೆಗಳೆಲ್ಲವೂ ಅಭಿವೃದ್ಧಿಯ ಮತ್ತು ಉದ್ಯೋಗ ಸೃಷ್ಟಿಯ ದಾರಿಗಳು ಎಂದು ಜನರು ಮುಗ್ಧವಾಗಿ ನಂಬಿರುವುದು.
ಉದ್ಯೋಗ ಸೃಷ್ಟಿಸುವ ಭರವಸೆಯಿಂದಾಗಿಯೇ ಇತ್ತೀಚೆಗೆ ಆದ್ಯತೆ ಗಳಿಸಿಕೊಂಡಿರುವ ಕ್ಷೇತ್ರ ‘ಪರಿಸರ ಪ್ರವಾಸೋದ್ಯಮ’. ಕಾಡು- ಕಣಿವೆ, ಹೊಳೆ, ಕೆರೆ, ಗದ್ದೆ- ತೋಟಗಳಂಥ ನಾಡಿನ ನಿಸರ್ಗಸಹಜ ಸೌಂದರ್ಯತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವುಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಗ್ರಾಮೀಣ ಭಾಗದ ಜನರ ಆದಾಯ ಹೆಚ್ಚಿಸಲು ಸಾಧ್ಯವೆಂದೇ ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ದೂರದೃಷ್ಟಿಯುಳ್ಳ ನೀತಿಯ ಕೊರತೆ, ಯೋಜನೆಗಳ ಅವೈಜ್ಞಾನಿಕ ಅನುಷ್ಠಾನ, ಭ್ರಷ್ಟಾಚಾರ ಇತ್ಯಾದಿ ಗಂಭೀರ ತೊಡಕುಗಳಿಂದಾಗಿ ಪರಿಸರ ಪ್ರವಾಸೋದ್ಯಮದ ಲಾಭವು ಹಳ್ಳಿಯ ಸಾಮಾನ್ಯ ಕುಟುಂಬಗಳಿಗೆ ತಲುಪುತ್ತಿಲ್ಲ. ಮಲೆನಾಡು ಹಾಗೂ ಕರಾವಳಿಯ ರೆಸಾರ್ಟ್, ಹೋಮ್ ಸ್ಟೇಗಳಂತೂ ಬಲಾಢ್ಯರ ಹಣಹೂಡಿಕೆಗೆ ಒದಗಿದ ಮತ್ತೊಂದು ಕ್ಷೇತ್ರವಾಗುತ್ತಿದೆ. ಅರಣ್ಯ, ನದಿತಪ್ಪಲು, ಅಳಿವೆಗಳಂಥ ನೈಸರ್ಗಿಕವಾಗಿ ಶ್ರೀಮಂತವಾದ ಪ್ರದೇಶಗಳನ್ನು ಖಾಸಗಿಯವರ ಲಾಭಕ್ಕೊಪ್ಪಿಸುವ ಭೂವ್ಯಾಪಾರವಾಗಿ ಈ ಉದ್ದಿಮೆ ಪರಿವರ್ತಿತವಾಗುತ್ತಿದೆ. ಇವೆಲ್ಲಾ ಗ್ರಾಮೀಣ ಆರ್ಥಿಕತೆಯನ್ನು ಅಣಕಿಸಿದಂತಲ್ಲವೇ?
ಇಂಥದ್ದೇ ಸ್ಥಾಪಿತ ಹಿತಾಸಕ್ತಿಗಳ ಬಲೆಗೆ ಜಗತ್ ಪ್ರಸಿದ್ಧ ಜೋಗ ಜಲಪಾತವು ಇದೀಗ ಬಲಿಯಾಗುವ ಹಂತದಲ್ಲಿದೆ. ಬೇಸಿಗೆಯಲ್ಲಿ ಒಣಗುವ ಜಲಪಾತಕ್ಕೆ ಕೃತಕವಾಗಿ ನೀರುಬಿಟ್ಟು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶಕ್ಕಾಗಿ, ‘ನೀರಿನ ಪುನರ್ಬಳಕೆ ಯೋಜನೆ’ಯೊಂದನ್ನು ರೂಪಿಸಲಾಗಿದೆ. ಇದರನ್ವಯ, ಜಲಪಾತದ ಮೇಲುಭಾಗದಲ್ಲಿರುವ ಸೀತಾಕಟ್ಟೆ ಸೇತುವೆಯ ಬಳಿ ಶರಾವತಿ ನದಿಗೆ ಐದು ಮೀಟರ್ ಎತ್ತರದ ಅಣೆಕಟ್ಟೊಂದನ್ನು ನಿರ್ಮಿಸಿ, ಸುಮಾರು ಇಪ್ಪತ್ತೈದು ಚದರ ಕಿ.ಮೀ. ವಿಸ್ತಾರದ ಜಲಾಶಯ ನಿರ್ಮಿಸಲಾಗುತ್ತದೆ. ನೀರು ಅಕ್ಕಪಕ್ಕದ ಕಾಡು ಮತ್ತು ಕೃಷಿಕರ ಜಮೀನಿಗೆ ನುಗ್ಗದಂತೆ ನದಿಗುಂಟ ಎರಡೂ ತಟದಲ್ಲಿ ಸುಮಾರು ಐದು ಕಿ.ಮೀ. ದೂರದವರೆಗೆ 5.5 ಮೀ. ಎತ್ತರದ ತಡೆಗೋಡೆಯನ್ನೂ ನಿರ್ಮಿಸಲಾಗುತ್ತದೆ. ಬೇಸಿಗೆಯಲ್ಲಿ ಹಗಲು ಹೊತ್ತಿನಲ್ಲಿ ಈ ಅಣೆಕಟ್ಟೆಯಿಂದ ನೀರುಬಿಟ್ಟು ಜಲಪಾತದ ರಾಜಾ, ರಾಣಿ, ರಾಕೆಟ್ ಹಾಗೂ ರೋರರ್‌ಗಳನ್ನು ಮೈದುಂಬಿಸುವುದು ಈ ಯೋಜನೆಯ ಆಶಯ. ಕೆಳಗೆ ಹರಿದ ನೀರನ್ನು ಜಲಪಾತದ ಬುಡದಲ್ಲಿ ಜಲಾಶಯವೊಂದನ್ನು ನಿರ್ಮಿಸಿ ಸಂಗ್ರಹಿಸಲಾಗುತ್ತದೆ. ಅಲ್ಲಿಂದ 400 ಕ್ಯುಸೆಕ್ ನೀರನ್ನು ಪಂಪ್ ಮಾಡಿ 3.2 ಕಿ.ಮೀ. ಉದ್ದದ ಕೊಳವೆ ಮಾರ್ಗದಲ್ಲಿ ಮೇಲ್ಮುಖವಾಗಿ ಸಾಗಿಸಿ ಪುನಃ ಅಣೆಕಟ್ಟೆಗೆ ಬಿಡಲಾಗುವುದು. ಇದರಲ್ಲಿ 2.6 ಕಿ.ಮೀ. ಸುರಂಗವೂ ಸೇರಿದೆ. 1.6 ಮೀ. ವ್ಯಾಸದ ಎರಡು ಕೊಳವೆಗಳು ಈ ನೀರನ್ನು ಸಾಗಿಸಲಿವೆ. ಬೇಸಿಗೆಯಲ್ಲಿ ನೀರನ್ನು ಮೇಲೆತ್ತಲು ಸುಮಾರು 49.4 ಮೆ.ವಾ. ವಿದ್ಯುತ್ ಅವಶ್ಯವಂತೆ. ಮಳೆಗಾಲದಲ್ಲಿ ಅಣೆಕಟ್ಟೆಯಿಂದ ನೀರನ್ನು ಆ ಕೊಳವೆಗಳ ಮೂಲಕವೇ ಕೆಳಕ್ಕೆ ಹರಿಸಿ 33.2 ಮೆ.ವಾ. ವಿದ್ಯುತ್ ಉತ್ಪಾದಿಸಲು ಸಾಧ್ಯ. ಇದರಿಂದ, ಈ ಯೋಜನೆಯಲ್ಲಿ ನಿವ್ವಳ ವಿದ್ಯುತ್ ಬಳಕೆ ನಗಣ್ಯವೆಂಬುದು ಯೋಜನೆ ರೂಪಿಸಿದವರ ಅಂಬೋಣ!
ಅಣೆಕಟ್ಟು, ಜಲಾಶಯ, ತಡೆಗೋಡೆ, ಕೊಳವೆಮಾರ್ಗ, ಸುರಂಗ, ಪಂಪ್‌ಹೌಸ್ ಇತ್ಯಾದಿಗಳ ಮೂಲಕ ನೀರನ್ನು ಪುನಃ ಬಳಸಿ, ಬೇಸಿಗೆಯಲ್ಲಿ ಜಲಪಾತಕ್ಕೆ ಕೃತಕವಾಗಿ ಹರಿಸುವ ಈ ಯೋಜನೆಯ ಸ್ಥಳವಾದರೂ ಯಾವುದು? ಜೀವವೈವಿಧ್ಯದ ಅನನ್ಯ ತಾಣವಾದ ಪಶ್ಚಿಮಘಟ್ಟದ ಶರಾವತಿ ನದಿ ಕಣಿವೆಯದ್ದು. ಶರಾವತಿ ಅಭಯಾರಣ್ಯ ಮತ್ತು ಅಘನಾಶಿನಿ ಸಿಂಗಳಿಕ ಸಂರಕ್ಷಿತ ಪ್ರದೇಶವು ಇಲ್ಲಿಂದ ಕೇವಲ ಮೂರ್ನಾಲ್ಕು ಕಿ.ಮೀ. ದೂರದಲ್ಲಿದೆ. ವನ್ಯಜೀವಿ ರಕ್ಷಣಾ ಕಾನೂನು ಮತ್ತು ಅರಣ್ಯ ಸಂರಕ್ಷಣಾ ಕಾನೂನುಗಳ ಆಶಯದಂತೆ ರಕ್ಷಣೆಗೆ ಆದ್ಯತೆ ನೀಡಬೇಕಾದ ಸೂಕ್ಷ್ಮ ಪ್ರದೇಶವಿದು. ನದಿಯಾಚೆ ನೀರು ನುಗ್ಗದಂತೆ ಹೊಳೆಯ ಎರಡೂ ದಡಗಳಲ್ಲಿ ಎತ್ತರದ ಕಾಂಕ್ರೀಟ್ ತಡೆಗೋಡೆ ಕಟ್ಟುವ ಪ್ರಸ್ತಾವವಂತೂ ಮೀನು, ಉಭಯವಾಸಿ, ನದಿಯಂಚಿನ ಅಪರೂಪದ ಸಸ್ಯವರ್ಗಗಳೆಲ್ಲ ಇರುವ ನದಿತಪ್ಪಲಿನ ಜೀವಪರಿಸರಕ್ಕೆ ತೀರಾ ಅಪಾಯವೊಡ್ಡುವ ಕಾಮಗಾರಿಯೆಂಬುದು ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯ. ಇನ್ನು, ಪಕ್ಕದಲ್ಲೇ ಸಿಡಿಮದ್ದು ಸಿಡಿಸಿ ಸುರಂಗ ಕೊರೆಯುವುದಂತೂ ಜಲಪಾತಕ್ಕೇ ಧಕ್ಕೆ ತರಬಲ್ಲ ಕೆಲಸ. ಅಣೆಕಟ್ಟೆಯಿಂದಾಗಿ ನದಿಯಂಚಿನ ಜೋಗಿನ್ಮಠ, ಗೋರೆಗದ್ದೆ, ಪಡಂಬೈಲ್, ಕಾನ್ತೋಟ ಇತ್ಯಾದಿ ಹಳ್ಳಿಗಳ ಗದ್ದೆ- ತೋಟಗಳಿಗೆ ನೀರು ನುಗ್ಗುವುದರಿಂದ ಸ್ಥಳೀಯ ರೈತರೂ ವಿರೋಧಿಸುತ್ತಿದ್ದಾರೆ. ಇಷ್ಟೆಲ್ಲ ಅನಾಹುತ ಮಾಡಿ, ಕೃತಕ ಕಾರಂಜಿಯೆಂಬಂತೆ ಜಲಪಾತಕ್ಕೆ ನೀರುಕ್ಕಿಸುವ ಈ ಯೋಜನೆ ಸಮರ್ಥನೀಯವೇ?
ಸ್ಥಳೀಯ ಜನರು, ಪರಿಸರ ಸಂಘಟನೆಗಳು ಮತ್ತು ವಿಜ್ಞಾನಿಗಳ ಈ ನ್ಯಾಯಯುತ ಪ್ರಶ್ನೆಯನ್ನು ಜನಪ್ರತಿನಿಧಿಗಳು ಆಲಿಸದಿದ್ದರೂ, ಜಿಲ್ಲಾಧಿಕಾರಿ ಕೊವಿಗೊಡಬೇಕಿತ್ತು. ಆದರೆ, ವೈರುಧ್ಯ ನೋಡಿ! ಈ ಯೋಜನೆಯನ್ನು ಪ್ರಸ್ತಾಪಿಸಿದ್ದೇ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯ, ‘ಜೋಗ ಅಭಿವೃದ್ಧಿ ಪ್ರಾಧಿಕಾರ’ದ ಪದನಿಮಿತ್ತ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಶಿವಮೊಗ್ಗ ಜಿಲ್ಲಾಧಿಕಾರಿ! ತಮ್ಮ ವಿವೇಕ ಮತ್ತು ವಿವೇಚನಾ ಅಧಿಕಾರದಿಂದ ಸಮಾಜದ ಸಮಗ್ರ ಹಿತಚಿಂತನೆ ಮಾಡಬೇಕಾದ ಸಂವಿಧಾನಾತ್ಮಕ ಜವಾಬ್ದಾರಿಯುಳ್ಳ ಜಿಲ್ಲಾಧಿಕಾರಿಯನ್ನೇ ಈ ವಿನಾಶಕಾರಿ ಯೋಜನೆಯ ಪ್ರತಿಪಾದಕರನ್ನಾಗಿಸಿದ್ದು ಪ್ರಜಾಪ್ರಭುತ್ವದ ವಿಡಂಬನೆಯಲ್ಲವೇ?
ಜೋಗ ಅಭಿವೃದ್ಧಿ ಪ್ರಾಧಿಕಾರ ಏನೆಲ್ಲ ಸಾಧಿಸಬಹುದಿತ್ತು? ಜೋಗವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ವಿಶ್ವದಾದ್ಯಂತದ ಪ್ರವಾಸಿಗರ ಗಮನ ಸೆಳೆಯಬಹುದಿತ್ತು. ಜಲಪಾತದ ಜಲಾನಯನ ಪ್ರದೇಶದಲ್ಲಿ ಸ್ಥಳೀಯರ ಸಹಭಾಗಿತ್ವದೊಂದಿಗೆ ಅರಣ್ಯಾಭಿವೃದ್ಧಿ ಹಾಗೂ ನೆಲ- ಜಲ ಸಂರಕ್ಷಣಾ ಯೋಜನೆಗಳನ್ನು ಹಮ್ಮಿಕೊಂಡು, ನದಿಯ ಒಳಹರಿವನ್ನು ಹೆಚ್ಚಿಸಲು ಪ್ರಯತ್ನಿಸಬಹುದಿತ್ತು. ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಸ್ಥಳೀಯರಿಗೆ ಜವಾಬ್ದಾರಿ ಹಾಗೂ ಲಾಭಾಂಶ ನೀಡಿ ಮಾದರಿಯಾಗಬಹುದಿತ್ತು. ಇದಾವುದನ್ನೂ ಮಾಡದ ಪ್ರಾಧಿಕಾರವು ಖಾಸಗಿ ಉದ್ಯಮಿಯೊಬ್ಬರ ಹಿತಾಸಕ್ತಿಗೋಸ್ಕರ ಈ ಅಸಂಗತ ಯೋಜನೆಯನ್ನು ಪ್ರಸ್ತಾಪಿಸಿರುವುದು ಬೇಸರದ ವಿಚಾರ. ಇದನ್ನು ಪರಿಶೀಲಿಸುವ ಜವಾಬ್ದಾರಿಯುಳ್ಳ ಕೇಂದ್ರ ಪರಿಸರ ಇಲಾಖೆಯ ತಜ್ಞರ ಸಮಿತಿಯಾದರೂ ಆರಂಭದಲ್ಲಿಯೇ ಇದನ್ನು ತಡೆಯಬೇಕಿತ್ತು. ಆದರೆ, ಆ ಸಮಿತಿಯೂ ಮೊದಲ ಹಂತದ ಹಸಿರು ನಿಶಾನೆ ನೀಡಿ, ಪೂರ್ಣ ಪ್ರಮಾಣದ ಯೋಜನಾ ವರದಿ ಮತ್ತು ಪರಿಸರ ಪರಿಣಾಮ ವರದಿಗಳನ್ನು ತಯಾರಿಸಲು ಸೂಚನೆ ನೀಡಿರುವುದು ಇನ್ನೊಂದು ದುರಂತ.
ಜೋಗ ಜಲಪಾತದಂಥ ಪ್ರಾಕೃತಿಕ ಪರಂಪರಾ ತಾಣದ ಸಹಜ ಸೌಂದರ್ಯವನ್ನು ಹಾಗೂ ಅದನ್ನು ಪೋಷಿಸುತ್ತಿರುವ ಶರಾವತಿ ಕಣಿವೆಯ ಪರಿಸರದ ಸುರಕ್ಷತೆಯನ್ನು ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಲು ಹೊರಟಿರುವುದು ಖಂಡನೀಯ. ಹೊಸ ಭರವಸೆಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯ ಸರ್ಕಾರವು ಈ ಯೋಜನಾಪ್ರಸ್ತಾವವನ್ನು ತಕ್ಷಣ ಕೈಬಿಡುವಂತೆ ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.