ADVERTISEMENT

ಅಸಂಬದ್ಧವಾದಕ್ಕೆ ಪ್ರೇರಕರಾದವರು ಯೂರೋಪಿನ ಚಿಂತಕರು

ಡಂಕಿನ್ ಝಳಕಿ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ಪ್ರಜಾವಾಣಿಯ  ಪ್ರತಿಸ್ಪಂದನ  ( ಮಾ.15 ) ಅಂಕಣದಲ್ಲಿ ಎಚ್.ಎಸ್. ಶಿವಪ್ರಕಾಶರು ವಚನಗಳ ಕುರಿತ ಬಾಲಗಂಗಾಧರರ ಮತ್ತು ನನ್ನ ವಾದಗಳ ಕುರಿತು ಬರೆದಿದ್ದರು. ವೈಯಕ್ತಿಕ ವಿಚಾರಗಳನ್ನೆಲ್ಲಾ ಬದಿಗೊತ್ತಿ, ಒಂದು ಸಂಶೋಧನೆಯನ್ನು ಚರ್ಚೆಗೆತ್ತಿಕೊಂಡ ಈ ರೀತಿಯ ಪ್ರಯತ್ನಗಳು ಆಧುನಿಕ ಕನ್ನಡ ಸಾರಸ್ವತ ಲೋಕದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಒಂದು ಆರೋಗ್ಯವಂತ ಚರ್ಚೆಗೆ ಹೀಗೆ ಅನುವು ಮಾಡಿಕೊಟ್ಟಿರುವ ಪ್ರಜಾವಾಣಿಗೆ ನನ್ನ ನಮ್ರ ವಂದನೆಗಳು. ತಮ್ಮ ಅಂಕಣದಲ್ಲಿ ಅವರು ಎತ್ತಿರುವ ಪ್ರಶ್ನೆಗಳಿಗೆ ಇದು ನನ್ನ ಸಂಕ್ಷಿಪ್ತ ಉತ್ತರ.

ವಚನಗಳ ಕುರಿತ ನಮ್ಮ ವಾದವನ್ನು ಸಂಗ್ರಹಿಸುತ್ತಾ ಶಿವಪ್ರಕಾಶರು “ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ” ಎನ್ನುತ್ತಾರೆ.

ಈ ಆಕ್ಷೇಪಣೆಗೆ ನಮ್ಮ ಉತ್ತರ ಹೀಗಿದೆ. ಸಮಗ್ರ ವಚನ ಸಂಪುಟಗಳಲ್ಲಿರುವ ಒಟ್ಟು 21,788 ವಚನಗಳಲ್ಲಿ, ಜಾತಿ, ಕುಲ ಮತ್ತು ಅವುಗಳಿಗೆ ಸಂಬಂಧಿಸಿದ ಇತರ ವಿಚಾರಗಳ ಕುರಿತು ಮಾತನಾಡುವಂತೆ ತೋರುವ ವಚನಗಳ ಸಂಖ್ಯೆ 458. ಈ ಪೈಕಿ 101 ವಚನಗಳು ಜಾತಿ ಕುರಿತ ಪದಗಳನ್ನು ಬಳಸಿದರೂ ಜಾತಿ ಸಮಸ್ಯೆಗಳ ಕುರಿತು ಏನನ್ನೂ ಹೇಳುವುದಿಲ್ಲ.

ಸುಮಾರು 145 ವಚನಗಳಲ್ಲಿ ಕೆಳಜಾತಿ ಮತ್ತು ಕುಲಗಳನ್ನು (ಎಲ್ಲಿ ಹೊಲೆಯ ಮತ್ತು ಮಾದಿಗ ಎಂಬ ಪದಪ್ರಯೋಗವಾಗಿದೆಯೊ) ನಿಂದನಾತ್ಮಕ ಅರ್ಥ ಬರುವಂತೆ ಬಳಸಲಾಗಿದೆ. ಉಳಿದ 219 ವಚನಗಳಲ್ಲಿ 34 ವಚನಗಳು ಜಾತಿಗಳ ಕುರಿತು ಏನನ್ನು ಹೇಳುತ್ತಿವೆ ಎಂಬುದರ ಕುರಿತು ಸ್ಪಷ್ಟತೆಯೇ ಇಲ್ಲ, ಹಾಗೂ 113 ವಚನಗಳು ಜಾತಿ ಅಥವಾ ಕುಲದ ಕುರಿತು ಪ್ರಾಸಂಗಿಕವಾಗಿ ಮಾತನಾಡುತ್ತವೆ.

ಹಾಗಾಗಿ ಕಡೆಗೂ ಲಿಂಗಾಯತ ಚಳವಳಿಯು ಜಾತಿ ವಿರೋಧಿ ಚಳವಳಿ ಎಂಬ ವಿಷಯದ ಚರ್ಚೆಗೆ ಸರಿಯಾಗಿ ಉಳಿದುಕೊಳ್ಳುವ ವಚನಗಳು 72 ಮಾತ್ರ. (ಅಂದರೆ ಒಟ್ಟೂ ವಚನಗಳ 0.33% ಭಾಗ ಮಾತ್ರ.) ಈ 72 ವಚನಗಳಲ್ಲಿ ಜಾತ್ಯಾಭಿಮಾನವನ್ನು ಹಾಗೂ ಕೆಲವು ಜಾತಿ ಆಚರಣೆಗಳನ್ನು ಖಂಡಿಸಿದ ಮಾತ್ರಕ್ಕೆ ಅದು ಜಾತಿವ್ಯವಸ್ಥೆಯ ವಿರೋಧವಾಗುವುದಾದರೆ ಅದರ ದುಪ್ಪಟ್ಟು, ಅಂದರೆ 145 ವಚನಗಳು ಹೊಲೆಯ ಮಾದಿಗ ಎನ್ನುವ ಶಬ್ದಗಳನ್ನು ನಿಂದನಾತ್ಮಕವಾಗಿ ಬಳಸಿವೆ. ನಮ್ಮ ಸಂಶೋಧನೆ ಇದನ್ನು ವಚನಕಾರರ ಚಿಂತನೆಯ ದೋಷವೆಂದಾಗಲೀ, ಭಾಷಾ ಬಳಕೆಯಲ್ಲಿನ ಸಮಸ್ಯೆಯೆಂದಾಗಲೀ ಆರೋಪಿಸುವುದಿಲ್ಲ. 

ಆಡು ಮಾತಿನಲ್ಲಿ ನಾವು ಭಾಷೆಯನ್ನು ಬಳಸುವುದೇ ಹೀಗೆ. ವಚನಗಳನ್ನು ಜಾತಿ ವಿರೋಧಿ ಸಾಹಿತ್ಯವೆಂದು ನಾವು ಕರೆಯುವುದಾದರೆ, ಇಂತಹ ವಚನಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಇಷ್ಟು ಸಾಲದೆಂಬಂತೆ 100ಕ್ಕೂ ಹೆಚ್ಚು ವಚನಗಳು ಪರಸ್ತ್ರೀಯರಿಗೆ ಆಸೆ ಪಡುವವರನ್ನು ಖಂಡಿಸುತ್ತವೆ.

ಅದರ ದುಪ್ಪಟ್ಟು ವಚನಗಳು ಪರದೈವಗಳನ್ನು, ಅವುಗಳನ್ನು ಪೂಜಿಸುವವರನ್ನು ಹಾಗೂ ಜೈನರನ್ನು ದೂಷಿಸುತ್ತವೆ. ಈ 72 ವಚನಗಳಲ್ಲಿನ ಎಂಟು ಹತ್ತು ವಚನಗಳನ್ನು ಮತ್ತೆಮತ್ತೆ ಉಲ್ಲೇಖಿಸಿ ವಚನಗಳ ಜಾತಿವಿರೋಧಿ ನಿಲುವಿನ ಬಗ್ಗೆ ಬರೆಯುತ್ತಾ ಬಂದಿರುವ ನಮ್ಮ ಬರಹಗಾರರಿಗೆ ವಚನಕಾರರ ಇನ್ನುಳಿದ 99%ಗಿಂತ ಹೆಚ್ಚಿನ ವಚನಗಳಲ್ಲಿ ಏನನ್ನು ಹೇಳುತ್ತಿದ್ದಾರೆ ಎಂಬುದೇ ಮುಖ್ಯವಾಗುವುದಿಲ್ಲವೇಕೆ? ಒಟ್ಟಿನಲ್ಲಿ ಜಾತಿವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಒಂದು ಅಸಂಬದ್ಧವಾದ ವಾದ.

ನಮ್ಮ ಈ ವಾದದೊಳಗಿನ ತರ್ಕವನ್ನು ಮುಂದುವರೆಸಿದರೆ, “ಅಡಿಗರ ಕಾವ್ಯದಲ್ಲಿ ಕನ್ನಡವೆಂಬ ಪದ ಬಹಳ ಕಡಿಮೆ ಬರುವುದರಿಂದ ಅಡಿಗರು ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ” ಎಂದ ಹಾಗಾಗುತ್ತದೆ ಎನ್ನುತ್ತಾರೆ ಶಿವಪ್ರಕಾಶರು. ಅವರ ಈ ವಾದ ಸರಿಯಲ್ಲ.  `ವಚನಗಳು ಜಾತಿ ವಿರೋಧಿ' ಎಂಬ ಇಂದಿನ ಪ್ರಚಲಿತ ವಾದದಲ್ಲಿರುವ ಸಮಸ್ಯೆಯನ್ನು ಎತ್ತಿತೋರಿಸಲು ನಾವು ಈ ತರ್ಕವನ್ನು ಬಳಸಿರುವುದು. ಜಾತಿವ್ಯವಸ್ಥೆಯ ವಿರೋಧವನ್ನು ಮಾಡುವುದೇ ವಚನಕಾರರ ಚಳವಳಿಯಾಗಿತ್ತು ಎನ್ನುವುದಾದರೆ ಇಷ್ಟೊಂದು ಕಡಿಮೆ ವಚನಗಳಲ್ಲಿ ಇಷ್ಟೊಂದು ಅಸ್ಪಷ್ಟವಾಗಿ, ಪ್ರಾಸಂಗಿಕವಾಗಿ, ಅಪಾರ್ಥ ಬರುವಂತೆ ಅವರೇಕೆ ಹೇಳುತ್ತಿದ್ದರು? ಇದು ನಮ್ಮ ಪ್ರಶ್ನೆ.

ಅಡಿಗರಿಗೆ ಅನ್ವಯಿಸಿ ಹೇಳುವುದಾದರೆ, ಒಂದು ವೇಳೆ ಅಡಿಗರನ್ನು ಯಾರಾದರೂ 20ನೇ ಶತಮಾನದ ಅತ್ಯಂತ ಪ್ರಸಿದ್ಧ ಕನ್ನಡ ಹೋರಾಟಗಾರರು ಎಂದು ಕರೆದರೆ, ಅವರ ಕಾವ್ಯದಲ್ಲಿ ಕನ್ನಡವೆಂಬ ಪದದ ಬಳಕೆಯೇ ಇಲ್ಲದಿದ್ದ ಪಕ್ಷದಲ್ಲಿ ಅಡಿಗರು ಕನ್ನಡದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ವಾದಿಸುವುದು ತರ್ಕಬದ್ಧವಾಗಿಯೇ ಇರುತ್ತದೆ.

ವಚನಕಾರರ ಜಾತಿ ಕುರಿತ ನಿಲುವಿಗೆ ಉದಾಹರಣೆಯಾಗಿ ಶಿವಪ್ರಕಾಶರು ಮಾದಾರ ಚನ್ನಯ್ಯನ ವಚನವೊಂದನ್ನು ಉಲ್ಲೇಖಿಸುತ್ತಾ ಹೀಗೆ ಹೇಳುತ್ತಾರೆ: ` ಕುಲವೇನೋ ಅವಂದಿರ ಕುಲವೇನೋ?'  ಎಂದು ಬಸವಣ್ಣ ಕೇಳಿದಾಗ  `ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?'  ಎಂದು ಸರ್ವಜ್ಞ ನುಡಿದಾಗ,  `ಕುಲಕುಲವುಲವೆಂದು ಹೊಡೆದಾಡದಿರಿ' ಎಂದು ಕನಕದಾಸರು ಅರುಹಿದಾಗ ಅವರೆಲ್ಲರೂ ಸಾಮಾಜಿಕ ಅಸಮಾನತೆಯನ್ನೇ ನಿರ್ದೇಶಿಸಿದರೆಂಬುದು ಸ್ಪಷ್ಟ.  ವಚನಗಳು ಜಾತಿ ಆಭಿಮಾನ ಅಥವಾ ಕುಲಮದದ ಕುರಿತು ಏನನ್ನೂ ಹೇಳುವುದಿಲ್ಲವೆಂದು ನಮ್ಮ ಸಂಶೋಧನೆ ಎಲ್ಲಿಯೂ ಹೇಳಿಲ್ಲ.

ಅಧ್ಯಾತ್ಮದ ಚರ್ಚೆ ನಡೆಯುವಾಗ ಈ ರೀತಿಯ ಬಿಗುಮಾನಗಳ, ದುರಭಿಮಾನಗಳ ಕುರಿತು ಮಾತನಾಡದಿರಲು ಹೇಗೆ ಸಾಧ್ಯ? ವಸಾಹತು ಬರಹಗಾರರು ಮಾಡಿದ್ದು ಮತ್ತು ನಾವು ಅವರಿಂದ ಕಲಿತದ್ದು ಏನೆಂದರೆ, ಈ ರೀತಿಯ ಚರ್ಚೆಗಳನ್ನು ಭಾರತದಲ್ಲಿ ಒಂದು ಜಾತಿವ್ಯವಸ್ಥೆ(caste system) ಇದೆ ಮತ್ತು ಅದು ಇಡೀ ಸಮಾಜವನ್ನು ತನ್ನ ಅಂಕೆಯಲ್ಲಿಟ್ಟುಕೊಂಡು, ಅನೈತಿಕತೆಯನ್ನು ಹರಡುತ್ತಿದೆ ಎಂಬುದಕ್ಕೆ ಪುರಾವೆಯಾಗಿ ಬಳಸಿದ್ದು.

ಇದು ತಪ್ಪು ಎನ್ನುವುದಕ್ಕೆ ಹಲವು ವಾದಗಳನ್ನು ಮುಂದಿಡಬಹುದು. ಉದಾಹರಣೆಗೆ ಇವೆರಡನ್ನು ಗಮನಿಸಿ. ಒಂದು, ಜಾತಿಯ ಕುರಿತು ಮಾತನಾಡುವ ವಚನಗಳು ಅಥವಾ  ಕುಲಕುಲವೆಂದು ಹೊಡೆದಾಡದಿರಿ  ಎಂಬಂಥ ಮಾತುಗಳು ಬ್ರಾಹ್ಮಣರ ಅಥವಾ ಮೇಲ್ಜಾತಿ ಜನರಲ್ಲಿರುವ ಜಾತಿಕುರಿತ ತಪ್ಪು ಕಲ್ಪನೆಗಳ ಕುರಿತು ಮಾತ್ರ ಮಾತನಾಡುತ್ತದೆ ಎಂದು ಹೇಳುವುದಾದರೂ ಹೇಗೆ?

ಒಬ್ಬ ಹೊಲೆಯನಿಗೂ ತನ್ನ ಜಾತಿ ಕುರಿತ (ಆಧ್ಯಾತ್ಮಿಕ ಮಾರ್ಗದಲ್ಲಿ ಅಡಚಣೆಯಾಗಬಲ್ಲ) ಅಹಂ, ದುರಾಭಿಮಾನಗಳು ಇರಬಹುದಲ್ಲ. ಎರಡು, ಜಾತಿ, ಕುಲಗಳಲ್ಲಿ ನಮಗಿರುವ ಈ ರೀತಿಯ ಅಹಂ, ದುರಭಿಮಾನಗಳ ಕುರಿತ ಚರ್ಚೆ ಕೇವಲ ವಚನಕಾರರು, ಕನಕದಾಸರ ಬರಹಗಳಿಗೆ ಸೀಮಿತವಲ್ಲ. (ಅಧ್ಯಾತ್ಮ ಸಾಧನೆಯ ಕುರಿತು ಮಾತನಾಡಿರುವ ಚಿಂತಕರೆಲ್ಲರೂ ಜಾತಿಯ ಕುರಿತು ಈ ರೀತಿಯ ವಿಚಾರಗಳನ್ನೇ ಹೇಳಿದ್ದು. ಬೇಕಾದರೆ ಆದಿಶಂಕರರ ಕೃತಿಗಳನ್ನು ನೋಡಿ. ಜಾತಿ ಭೇದವನ್ನು ಮತ್ತು ವೇದಗಳನ್ನೂ ಅಲ್ಲಗಳೆಯುವ ಅವರ ಆತ್ಮ ಶಟಕಂನ 14 ಮತ್ತು 17ನೆಯ ಸಾಲುಗಳು ಹೀಗಿವೆ:  ನ ಮಂತ್ರೋ ನ ತೀರ್ಥ, ನ ವೇದಾನ ಯಜ್ಞ ;  ನಮೇ ಜಾತಿ ಭೇದಃ .) ಹಾಗೆಯೇ ಅವರ ಅಸಮಾಧಾನ ಜಾತಿಯ ವಿಷಯಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಅಧ್ಯಾತ್ಮ ಗಳಿಕೆಯ ಹಾದಿಗೆ ಅಡ್ಡಿಪಡಿಸುವ ಎಲ್ಲದರ ಕುರಿತು ಅವರು ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ.

ವಚನ ಸಾಹಿತ್ಯದ ಕುರಿತ ಆಧುನಿಕ ಚಿಂತಕರ ತೀರ್ಮಾನವನ್ನು ಒಂದು ಉದಾಹರಣೆಯ ಮೂಲಕ ವಿವರಿಸುವುದಾದರೆ, ಶಾಲೆಗಳಲ್ಲಿ ಕೆಲವು ಶಿಕ್ಷಕರು ಇತ್ತೀಚಿನ ದಿನಗಳಲ್ಲಿ ಕೆಟ್ಟ ಕೆಲಸಗಳಲ್ಲಿ ತೊಡಗುವುದನ್ನು ನೋಡುತ್ತೇವೆ. ಅಂತಹ ಶಿಕ್ಷಕರ ವಿರುದ್ಧ ಹಲವರು ತಮ್ಮ ಆಕ್ರೋಶ, ಕೋಪವನ್ನೆಲ್ಲಾ ವ್ಯಕ್ತಪಡಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ತೊಲಗಿಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ ಎಂದು ಹೇಳುವುದು ಮೂರ್ಖತನದ ನಿರ್ಧಾರವಾಗುತ್ತದೆ. ಹಾಗೆಯೇ ವಚನಗಳ ಕುರಿತ ತೀರ್ಮಾನ ಕೂಡ.

ಇಂತಹ ಸಂದರ್ಭದಲ್ಲಿ ಕೆಲವು ಪ್ರಮುಖ ಪ್ರಶ್ನೆಗಳು ಏಳುತ್ತವೆ: ಜಾತಿ ಕುರಿತು ನಡೆದ ಈ ರೀತಿಯ ಚರ್ಚೆಯನ್ನು, ಭಾರತೀಯ ಸಮಾಜದಲ್ಲಿ ಅನೈತಿಕ  `ಜಾತಿವ್ಯವಸ್ಥೆ'ಯೊಂದು ಇದೆ ಎನ್ನುವುದಕ್ಕೆ ಪುರಾವೆಯಾಗಿ ನೋಡಲು ನಾವು ಕಲಿತದ್ದು ಯಾವಾಗ? ಯಾರಿಂದ? ಹೇಗೆ? ಭಾರತೀಯ ಅಧ್ಯಾತ್ಮ ಚಿಂತಕರೆಲ್ಲರೂ ಇದೇ ರೀತಿಯ ವಿಚಾರಗಳನ್ನು ಹೇಳಿರುವಾಗಲೂ, ಬಸವ, ಕನಕದಾಸ ಮುಂತಾದ ಒಂದಷ್ಟು ಚಿಂತಕರಿಗೆ ಮಾತ್ರ  ಸಮಾಜ ಸುಧಾರಕರು  ಎಂಬ ಪಟ್ಟವನ್ನು ಕಟ್ಟಿ ಉಳಿದವರೆಲ್ಲರಿಗೂ ಜಾತೀಯತೆಯ ಹರಿಕಾರರು ಎಂಬ ದೂಷಣೆಯೊಂದಿಗೆ ಕಟಕಟೆಯನ್ನೇರಿಸಿದ್ದು ಏಕೆ? ಎಂದಿನಿಂದ? ನಮ್ಮ ಸಂಶೋಧನೆಯ ಪ್ರಕಾರ ಇದೆಲ್ಲಾ ನಡೆದದ್ದು ವಸಾಹತುಶಾಹಿ ಪ್ರಜ್ಞೆಯ ಪ್ರಭಾವದಡಿ. ಅಂದರೆ  ವಚನಗಳನ್ನು ಕನ್ನಡ ಭಾಷಿಕರು ಧುತ್ತೆಂದು ವಸಾಹತುಶಾಹಿ ಇಂಜೆಕ್ಷನ್ ಚುಚ್ಚಿದಾಗ ನೆನಪಿಸಿ ಕೊಂಡರು ಎಂದಲ್ಲ.

ವಸಾಹತುಶಾಹಿ ಕಾಲದಲ್ಲಿ ನಡೆದದ್ದು ಏನು ಮತ್ತು ಹೇಗೆ ಎನ್ನುವುದರ ಸಂಪೂರ್ಣ ಚಿತ್ರಣ ದೊರಕಬೇಕಾದರೆ ನೂರಾರು ಹೊಸ ಸಂಶೋಧನೆಗಳು ನಡೆಯಬೇಕು. ಶಿವಪ್ರಕಾಶರೇ ಒದಗಿಸುವ ಪುರಾವೆಗಳನ್ನು ನೋಡಿ. 12ನೇ ಶತಮಾನದಿಂದ 19ನೇ ಶತಮಾನದ ಅಂತ್ಯದವರೆಗೆ ವಚನಗಳ ಕುರಿತು ನಮಗೆ ಸಿಗುವುದು ಬೆರಳೆಣಿಕೆಯಷ್ಟು ಕೃತಿಗಳು ಮಾತ್ರ. ಆದರೆ 20ನೇ ಶತಮಾನದ ಮೊದಲ ಎರಡು ಮೂರು ದಶಕಗಳು ಕಳೆಯುವಷ್ಟರಲ್ಲಿ ವಚನಗಳ ಕುರಿತು ಬಂದ ಕೃತಿಗಳು ನೂರಾರು.

ಹೀಗೆ ವಚನಗಳಿಗೆ ಹಿಂದೆಂದೂ ಇಲ್ಲದ ಹೊಸ ಮನ್ನಣೆ ಸಿಗಲು ಆಗ ಇದ್ದ ಸಾಮಾಜಿಕ ಒತ್ತಡಗಳೇನು? ಈ ಕುರಿತು ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಹುದು: ಭಾರತದಲ್ಲಿ ಒಂದು ಜಾತಿವ್ಯವಸ್ಥೆ ಇದೆ, ಅದು ಅನೈತಿಕವಾದುದು ಮತ್ತು ಅದರ ವಿರುದ್ಧ ಹೋರಾಡುವುದು ಪ್ರಗತಿಪರವಾದದ್ದು ಎಂಬ ವಿಚಾರವನ್ನು ನಮಗೆ ಕಲಿಸಿಕೊಟ್ಟವರು ಯೂರೋಪಿನ ಚಿಂತಕರು. ಭಾರತೀಯ ಚಿಂತಕರು ಇದನ್ನು ಯಾವುದೇ ತಕರಾರಿಲ್ಲದೆ ಒಪ್ಪಿಕೊಂಡದ್ದರಿಂದ ತಮ್ಮನ್ನು, ತಮ್ಮಲ್ಲಿರುವುದೆಲ್ಲವನ್ನೂ  ಪ್ರಗತಿಪರವಾದದ್ದು  ಎಂದು ತೋರಿಸುವ ಒತ್ತಡಕ್ಕೆ ಒಳಗಾದರು. ಆಧುನಿಕ (ಶಿಕ್ಷಿತ) ಲಿಂಗಾಯತ ಸಮುದಾಯದವರೂ ಇದಕ್ಕೆ ಹೊರತಲ್ಲ.

ತಮ್ಮ ಸಮಾಜ, ಗತ, ಸಾಹಿತ್ಯವೆಲ್ಲವನ್ನೂ ಜಾತಿ ವಿರೋಧಿ ಮತ್ತು ಆ ಕಾರಣಕ್ಕಾಗಿ ಪ್ರಗತಿಪರವಾದದ್ದು ಎಂದು ತೋರಿಸುವ ಅವರ ಪ್ರಯತ್ನದ ಫಲವಾಗಿಯೇ ವಚನಗಳನ್ನು  ಜಾತಿವಿರೋಧಿ ಸಾಹಿತ್ಯ/ಚಳುವಳಿ  ಎಂದು ನೋಡಿದ್ದು. ನಮ್ಮ ಈ ವಾದವನ್ನು ಶಿವಪ್ರಕಾಶರು ತಪ್ಪಾಗಿ  ಆಧುನಿಕ ವೀರಶೈವ ಸಮುದಾಯದವರು ತಮ್ಮ ಮೇಲುಚಲನೆಗಾಗಿ ಕಲ್ಪಿಸಿಕೊಂಡ ಒಂದು ಮಿಥ್ಯ ಕಲ್ಪನೆ  ಎಂದು ನಾವು ಹೇಳುತ್ತಿರುವುದಾಗಿ ಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.