ADVERTISEMENT

ಆಧುನಿಕ ಈಸ್ಟ್ ಇಂಡಿಯಾ ಕಂಪೆನಿಗಳೂ ಸಾಮಂತರೂ

ಪ್ರೊ.ಸುಧೀಂದ್ರ ಹಾಲ್ದೊಡ್ಡೇರಿ, ಬೆಂಗಳೂರು
Published 10 ನವೆಂಬರ್ 2014, 19:30 IST
Last Updated 10 ನವೆಂಬರ್ 2014, 19:30 IST

ತೀರಾ ಇತ್ತೀಚಿನವರೆಗೆ ಬೆಂಗಳೂರು ಸಮೀ­ಪದ ಅತ್ತಿಬೆಲೆ ಬಳಿಯ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನಗೆ ಅಲ್ಲಿನ ಹಾಗೂ ಸುತ್ತಲಿನ ಜಿಗಣಿ, ಹೊಸೂರು ಪ್ರದೇಶಗಳಲ್ಲಿ ಸಣ್ಣ ಪುಟ್ಟ ಕೈಗಾರಿಕೆಗಳನ್ನು ನಡೆಸುವವರು ಹತ್ತಿರವಾಗಿದ್ದರು.  ಅವರಲ್ಲಿ ಅನೇಕರು ಈ ಹಿಂದೆ ತಮಿಳುನಾಡು ಗಡಿ ಹತ್ತಿರದ ಮೋಟಾರ್ ಸೈಕಲ್ ಕಂಪೆನಿಗೆ, ದೂರದ ಚೆನ್ನೈನ ಮೋಟಾರ್ ಕಾರ್ ಕಂಪೆನಿ­ಗಳಿಗೆ ಬಿಡಿಭಾಗ­ಗಳನ್ನು ಪೂರೈಸುತ್ತಿದ್ದವರು.  ಸೂಪರ್ ಹೈವೇ, ಎಲಿವೇಟೆಡ್ ಫ್ಲೈ ಓವರ್, ಯದ್ವಾ-ತದ್ವಾ ಏರಿರುವ ರಿಯಲ್ ಎಸ್ಟೇಟ್ ಬೆಲೆ... ಅವರನ್ನು ಮತ್ತಷ್ಟು, ಮಗದಷ್ಟು ಶ್ರೀಮಂತ­ರನ್ನಾಗಿಸಿದೆಯೆಂದು ನಾನು ಭಾವಿಸಿದ್ದೆ.  ಲಾಭ ಪಡೆಯುವುದಿರಲಿ, ಎರಡು-–ಮೂರು ದಶಕಗಳಿಂದ ತಮ್ಮೊಂದಿಗೆ ನಿಷ್ಠರಾಗಿ ಕೆಲಸ ನಿರ್ವಹಿಸಿದವರಿಗೆ ತಿಂಗಳ ಸಂಬಳವನ್ನು ಕೊಡಲೂ ಪರದಾಡುತ್ತಿದ್ದಾರೆಂಬುದು ಅಚ್ಚರಿ ಹುಟ್ಟಿಸಿತು. 

ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಸಣ್ಣ-ಕೈಗಾರಿಕಾ ಸಮುಚ್ಚಯವೆಂಬ ಹೆಗ್ಗಳಿಕೆ ಪಡೆದಿದ್ದ ಬೆಂಗಳೂರಿನ ಪೀಣ್ಯದ ಕೈಗಾರಿಕೆಗಳ­ಲ್ಲಿಯೂ ಇಂಥದೇ ಪರಿಸ್ಥಿತಿ.  ರಾಜಾಜಿನಗರ ಕೈಗಾರಿಕಾ ಪ್ರದೇಶವಂತೂ ದೊಡ್ಡ ಕಲ್ಯಾಣ ಮಂಟಪಗಳ ಸಮುಚ್ಚಯವಾಗಿ ಬೆಳೆಯುತ್ತಿದೆ.  ಉಳಿದಂತೆ ಎಚ್.ಎ.ಎಲ್., ಎಚ್.ಎಂ.ಟಿ., ಐ.ಟಿ.ಐ., ಬಿ.ಇ.ಎಲ್., ಕಾರ್ಖಾನೆಗಳ ಸುತ್ತ ಕಾರ್ಯನಿರ್ವಹಿಸುತ್ತಿದ್ದ ಆ್ಯನ್‌ಸಿಲರಿ  ಯೂನಿ­ಟ್‌­ಗಳು ಬಹುತೇಕ ಬಾಗಿಲು ಮುಚ್ಚಿವೆ.  ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೆಂಗಳೂರಿಗೆ ಗುಳೆ ಬಂದಿದ್ದ ಕಾರ್ಮಿಕರ ದುಃಸ್ಥಿತಿಯನ್ನು ಬಿತ್ತರಿಸಲು ಇಂದು ಯಾವ ಕಾರ್ಮಿಕ ಸಂಘಟನೆಯೂ ಸಶಕ್ತ­ವಾಗಿಲ್ಲ.  ಸರ್ಕಾರಗಳು ಬದಲಾದಾಗಲೆಲ್ಲಾ ಹೊಸ ಕೈಗಾರಿಕಾ ನೀತಿಗಳು ಪ್ರಸ್ತಾವ­ಗೊಳ್ಳು­ತ್ತವೆ.  ಬೆಂಗಳೂರಿನ ಸುತ್ತಮುತ್ತಲ ಹಳ್ಳಿಗಳ ಉಳುಮೆಯ ಜಮೀನು ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿರುವ ವೇಗವನ್ನು ಗಮನಿಸಿದರೆ, ಇಂದಿನ ಮಕ್ಕಳು ಅಕ್ಕಿ, ರಾಗಿ, ಜೋಳ, ಹಾಲು, ಮೊಸರು, ಬೆಣ್ಣೆ, ತರಕಾರಿಗಳೆಲ್ಲವೂ ಕಾರ್ಖಾನೆ ಗಳಲ್ಲಿಯೇ ಉತ್ಪತ್ತಿಯಾಗುತ್ತವೆಂದು ನಂಬಬೇಕಾಗುತ್ತದೆ. 

ನಾನು ಎಂಜಿನಿಯರಿಂಗ್ ಕಾಲೇಜು ಕಲಿಯು­ತ್ತಿದ್ದಾಗಿನ ಕಾಲದ ನನ್ನ ಸಹಪಾಠಿಯೊಬ್ಬ ಅನೇಕ ವರ್ಷಗಳ ಕಾಲ ಚೀನಾ ದೇಶದಲ್ಲಿ ವಾಸ್ತವ್ಯ ಹೂಡಿದ್ದ.  ಭಾರತದ ಮೋಟಾರ್ ಸೈಕಲ್ ಕಂಪೆನಿಯೊಂದಕ್ಕೆ ಬಿಡಿ ಭಾಗಗಳನ್ನು ಅಲ್ಲಿಂದ ಪೂರೈಸುವ ಹೊಣೆಗಾರಿಕೆ ಅವನದಾಗಿತ್ತು.  ಭಾರತದಲ್ಲಿ ಕಾರ್ಖಾನೆಯ ನೆರೆಯಲ್ಲಿದ್ದ ಸಣ್ಣ ಕೈಗಾರಿಕೆಗಳಿಂದ ಬಿಡಿಭಾಗಗಳನ್ನು ಖರೀದಿಸುವು­ದಕ್ಕಿಂತಲೂ ಶೇಕಡ  ಹತ್ತರಿಂದ ಇಪ್ಪತ್ತರಷ್ಟು ಕಡಿಮೆ ಬೆಲೆಗೆ ಚೀನಾ ದೇಶದಿಂದ ಈ ಪೂರೈಕೆ ನಡೆಯುತ್ತಿತ್ತು.  ಎರಡು ದಶಕಗಳ ಕಾಲ ಇಲ್ಲಿಯೇ ಕಾರ್ಖಾನೆಯ ಉತ್ಪಾದನಾ ಘಟಕದ ಹೊಣೆ ಹೊತ್ತಿದ್ದ ಮಿತ್ರನ ಮಾತನ್ನೇ ಬಳಸು ವುದಾದರೆ  ‘ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ - ಹಾಗೂ ಅವುಗಳ ಅವೈಜ್ಞಾನಿಕ ತೆರಿಗೆ ವ್ಯವಸ್ಥೆ­ಯನ್ನು ಸಂಬಾಳಿಸುವುದರಲ್ಲಿಯೇ ನಮ್ಮ ಸಣ್ಣ ಕೈಗಾರಿಕೆ­ಗಳು ಹೈರಾಣಾಗುತ್ತಿವೆ.  ಚೀನಾ ದೇಶ­ಕ್ಕಿಂತಲೂ ಉತ್ಪಾದಕತೆ ಕಡಿಮೆಯಿರುವ ಕಾರ್ಮಿ­ಕರು, ಕಣ್ಣು ಮುಚ್ಚಾಲೆಯಾಡುವ ವಿದ್ಯುತ್, ಸಾಗಣೆಗೆ ಅಡ್ಡಿಯಾಗುವ ರಸ್ತೆಗಳು, ಕೈಗಾರಿಕಾ ಸ್ನೇಹಿಯಲ್ಲದ ಬ್ಯಾಂಕಿಂಗ್ ವ್ಯವಸ್ಥೆಗಳು... ಸಣ್ಣ ಕೈಗಾರಿಕೆಗಳ ಏಳಿಗೆಗೆ ಮಾರಕವಾಗಿವೆ’. 

ಯಾವುದೇ ಕೈಗಾರಿಕಾ ಉತ್ಪಾದನಾ ಸರಪಳಿ­ಯನ್ನು ಗಮನಿಸಿ.  ಕಚ್ಚಾ ವಸ್ತುವಿನಿಂದ ಗ್ರಾಹಕನಿಗೆ ಉತ್ಪನ್ನವಾಗಿ ತಲುಪುವ ತನಕ ಅವುಗಳಿಗೆ ನೂರಾರು ಕೊಂಡಿಗಳಿರುತ್ತವೆ.  ಅಂದರೆ ಅಷ್ಟೊಂದು ಮಂದಿ, ಅಷ್ಟೊಂದು ಕುಟುಂಬಗಳು ಈ ಸರಪಳಿಯ ಪಾಲುದಾರ­ರಾಗಿ ಹೊಟ್ಟೆ ಹೊರೆಯುತ್ತವೆ.  ಹೋಲಿಕೆಗಾಗಿ ಆಗ್ಗಿಂದಾಗ್ಗೆ ‘ಊರು ಬಿಟ್ಟು ಹೋಗ್ತೀನಿ’ ಎಂದು ಧಮಕಿ ಹಾಕುವ ಸಾಫ್ಟ್‌ವೇರ್ ಕಂಪೆನಿಗಳ ಉತ್ಪಾದನಾ ಸರಪಳಿಯನ್ನು ಗಮನಿಸಿ.  ‘ಉತ್ಪನ್ನ’ (?) ಗ್ರಾಹಕನಿಗೆ ತಲುಪುವುದರೊಳಗೆ ಕೈಬೆರಳೆಣಿಕೆಯ ಕೊಂಡಿಗಳಿರುತ್ತವೆ. 

ಅಂದರೆ ಕೆಲವೇ ಮಂದಿ, ‘ವೈಟ್ ಕಾಲರ್’ನವರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಹೆಚ್ಚಿನಂಶದ ಲಾಭ ಮಾಡಿಕೊಳ್ಳುವ ಉದ್ದಿಮೆಯಿದು.  ಹಾಗಿದ್ದಲ್ಲಿ ನಮ್ಮ ಆದ್ಯತೆ ಯಾರ ಬಗ್ಗೆಯಿರಬೇಕು? ಯಾರ ಕಡೆಗಿರಬೇಕು?  ನನ್ನ ಹಾಲ್ದೊಡ್ಡೇರಿ ಗ್ರಾಮದ ಗೌಳಿಗ ತುಮಕೂರಿನ ಡೇರಿಗೆ ಹಾಲು ಪೂರೈಸಲು ನೆರವಾಗುವ ಮೋಪೆಡ್‌ಗಳನ್ನು, ಅವನ ಮಕ್ಕಳು ಪಟ್ಟಣದ ಶಾಲೆಗೆ ಕರೆ­ದೊಯ್ಯುವ ಟೆಂಪೊಗಳನ್ನು, ಅವನ ಹಳ್ಳಿಯ ರಾಗಿ,- ಭತ್ತ-, ತರಕಾರಿಗಳನ್ನು ಬೆಂಗಳೂರಿಗೆ ಒಯ್ಯುವ ಲಾರಿಗಳನ್ನು ತಯಾರಿಸುವ ಕಾರ್ಖಾ­ನೆ­ಗಳಿಗೆ ಹಾಗೂ ಅವುಗಳಿಗೆ ಬಿಡಿಭಾಗಗಳನ್ನು ಪೂರೈಸುವ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಲ್ಲವೆ?  ಆ ಎಲ್ಲ ಹಳ್ಳಿಗಳ ಜನರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ, ನಂತರದ ದಿನಗಳಲ್ಲಿ ಅವರಿಗೆ ಉದ್ಯೋಗ ಒದಗಿಸುವ, ದೂರದೂರಿಗೆ ಗುಳೆ ಹೋಗದಂತೆ ಮಾಡುವ ಸಣ್ಣ ಉದ್ದಿಮೆಗಳನ್ನು ಬೆಳೆಸುವುದು ನಮ್ಮ ಕರ್ತವ್ಯವಲ್ಲವೆ?

ಸಿಮೆಂಟು, ಉಕ್ಕು, ವಿದ್ಯುತ್ ಉತ್ಪಾದನೆ ಮಾತು ಬಿಡಿ.  ಕನಿಷ್ಠ ನಮ್ಮ ದೇಶದ ರಕ್ಷಣೆಗೋ ಸಂಪರ್ಕ ಕ್ಷೇತ್ರದ ಅಭಿವೃದ್ಧಿಗೋ ಅಥವಾ ಸಾರಿಗೆ ಸುವ್ಯವಸ್ಥೆಗೋ ನೆರವಾಗುವ ಯಂತ್ರ ಅಥವಾ ತಂತ್ರಾಂಶವನ್ನು ಈ ‘ಧಮಕಿ’ ಕಂಪೆನಿ­ಗಳು ಉತ್ಪಾದಿಸುತ್ತವೆಯೆ?  ಅಥವಾ ಈ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಯಾವುದೇ ಯೋಜನೆಗಳನ್ನು ಈ ಕಂಪೆನಿಗಳು ಹಮ್ಮಿಕೊಂಡಿವೆಯೆ? 

ಈ ನೆಲದ ಎಲ್ಲ ಸೌಕರ್ಯ, ಎಲ್ಲ ಅನುಕೂಲ, ಎಲ್ಲ ರಿಯಾಯಿತಿ­ಗಳನ್ನೂ ಪಡೆದು ಯಾವುದೋ ದೇಶದ, ಯಾವುದೋ ಉತ್ಪನ್ನಕ್ಕೆ, ಯಾವುದೋ ಸೇವೆ ನೀಡುವ ಕಂಪೆನಿಗಳು ರಾಜ್ಯದಿಂದ ಹೊರ ನಡೆಯುತ್ತೇವೆಂದರೆ ವ್ಯಥೆಪಡಬೇಕಿಲ್ಲ.  ಅವರೆಲ್ಲ­ರನ್ನೂ ಹೇಗಾದರೂ ಮಾಡಿ ನಮ್ಮಲ್ಲೇ ಉಳಿಸಿಕೊಳ್ಳಬೇಕೆಂಬ ತುರ್ತು ನಡೆಯೂ ಬೇಕಿಲ್ಲ.  ಅವರೇನೋ ಈಸ್ಟ್ ಇಂಡಿಯಾ ಕಂಪೆನಿ­ಗಳಂತೆ ವರ್ತಿಸಬಹುದು, ಆದರೆ ನಮ್ಮ ಚುನಾಯಿತ ಸರ್ಕಾರದ ಪ್ರತಿನಿಧಿಗಳು ಸಾಮಂತ ರಾಜರಂತೆ ಮಂಡಿಯೂರಬೇಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.