ADVERTISEMENT

ಆರ್.ಟಿ.ಇ.ಯಲ್ಲಿ ಸರ್ಕಾರದ್ದೇ ತಪ್ಪಿದೆ

ಡಾ.ಚಂದ್ರಶೇಖರ ದಾಮ್ಲೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಆರ್.ಟಿ.ಇ.ಯಲ್ಲಿ ಸರ್ಕಾರದ್ದೇ ತಪ್ಪಿದೆ
ಆರ್.ಟಿ.ಇ.ಯಲ್ಲಿ ಸರ್ಕಾರದ್ದೇ ತಪ್ಪಿದೆ   

ಈಗ ‘ಶಿಕ್ಷಣದ ಹಕ್ಕು’ ಅಂತ ಕನ್ನಡದಲ್ಲಿ ಹೇಳುವುದಕ್ಕಿಂತ ಇಂಗ್ಲಿಷ್‌ನಲ್ಲಿ ಆರ್.ಟಿ.ಇ. ಅಂತ ಹೇಳಿದರೆ ಜನ ಹೊರಳಿ ನೋಡುತ್ತಾರೆ. ಏನದು ಅಂತ ಕಿವಿ ಕೊಡುತ್ತಾರೆ. ಏಕೆಂದರೆ ಶಿಕ್ಷಣದ ಹಕ್ಕಿನ ವಿತರಣೆ ಆಗಿರುವುದಕ್ಕಿಂತ ಆರ್.ಟಿ.ಇ. ಸೀಟುಗಳ ಅಕ್ರಮ ವಿತರಣೆ ವ್ಯಾಪಕವಾಗಿ ಆಗಿದೆ. ಅನೇಕಾನೇಕ ಅರ್ಹ ಬಡವರಿಗಿಂತ, ಕಡಿಮೆ ಆದಾಯದ ಸರ್ಟಿಫಿಕೇಟ್ ಪಡೆಯಲು ಸಮರ್ಥರಾದ ಬಲಿಷ್ಠರೇ ಆರ್.ಟಿ.ಇ. ಸೀಟುಗಳನ್ನು ಲಪಟಾಯಿಸಿದ್ದಾರೆ.

ಈ ಬಗ್ಗೆ ತಳಮಟ್ಟದಲ್ಲಿ ಅಂದರೆ ಬಿ.ಇ.ಒ. ಅವರಿಗೆ ಆಧಾರಸಹಿತ ದೂರು ನೀಡಿದರೆ ಆರ್.ಟಿ.ಇ. ಸೀಟುಗಳ ವಿತರಣೆ ಆನ್‍ಲೈನ್‍ನಲ್ಲಿ ಆಗುತ್ತದೆ. ‘ನಮ್ಮ ಕೈಯಲ್ಲಿ ಏನೂ ಇಲ್ಲ’ ಎನ್ನುತ್ತಾರೆ. ‘ನೀವು ಬೆಂಗಳೂರಿನಲ್ಲೇ ದೂರು ನೀಡಬೇಕು’ ಎನ್ನುತ್ತಾರೆ. ಬೆಂಗಳೂರಿಗೆ ಹೋಗಿ ಪ್ರಾಥಮಿಕ ಶಿಕ್ಷಣದ ಕಾರ್ಯದರ್ಶಿಗೆ ದೂರು ನೀಡಿದರೂ ಅವರಿಂದ ಉತ್ತರವೇ ಸಿಗುವುದಿಲ್ಲ. ಇನ್ನು ಮುಂದಿನ ಹೋರಾಟಕ್ಕೆ ಜನಸಾಮಾನ್ಯರು ನ್ಯಾಯಾಯಗಳಿಗೆ ಹೋಗಬೇಕು. ಆದರೆ ಅವೇನೂ ಕೈಗೆಟಕುವಷ್ಟು ಕೆಳಗಿಲ್ಲ. ಹಾಗಾಗಿ ಆರ್.ಟಿ.ಇ. ಸೀಟುಗಳನ್ನು ಸುಳ್ಳು ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಯಾರಿಗೆ ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತದೋ ಅವರೇ ಭಾಗ್ಯವಂತರು. ನಿಜವಾದ ಬಡವರು ಕೆಲವು ಮಂದಿ ಸೀಟು ಪಡೆದಿದ್ದರೆ ಅದು ಯೋಜನೆಯ ಪುಣ್ಯ.

ಸುಳ್ಳು ಆದಾಯಪತ್ರ ನೀಡುವಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥರಾಗಿರುತ್ತಾರೆ. ಈ ಕುರಿತಾಗಿ ಒಂದು ತನಿಖೆ ಮಾಡುವಂತೆ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ನಾನು ನೀಡಿರುವ ದೂರನ್ನು ಆಧರಿಸಿ ಕಂದಾಯ ಇಲಾಖೆಯವರಿಗೆ ಸೂಚಿಸ
ಬಹುದು. ಆದರೆ ಅವರಿಗೇನೂ ಆಸಕ್ತಿ ಇರುವಂತೆ ಕಾಣುತ್ತಿಲ್ಲ. ನನಗೇನೂ ಉತ್ತರ ಬಂದಿಲ್ಲ. ವಾಸ್ತವದಲ್ಲಿ ಹೆತ್ತವರ ಸ್ವಂತ ಸ್ಕೂಟರ್, ಬೈಕ್, ಕಾರುಗಳಲ್ಲಿ ಮತ್ತು ಬಾಡಿಗೆಯ ರಿಕ್ಷಾ, ವ್ಯಾನ್‍ಗಳಲ್ಲಿ ಶಾಲೆಗೆ ಬಂದಿಳಿಯುವ ಆರ್.ಟಿ.ಇ. ಫಲಾನುಭವಿ ವಿದ್ಯಾರ್ಥಿಗಳಿದ್ದಾರೆ. ಒಂದು ಕಿಲೋಮೀಟರ್ ವ್ಯಾಪ್ತಿಯೊಳಗಿರುವ ನೆರೆಹೊರೆಯ ಖಾಸಗಿ ಶಾಲೆಯಲ್ಲಿ ಆರ್.ಟಿ.ಇ. ಸೀಟು ಪಡೆಯಬೇಕೆಂಬ ನಿಯಮ ಇರುವಾಗ ಅದು ನಡೆದುಕೊಂಡು ಬರುವಷ್ಟು ಹತ್ತಿರವೆಂದಾಯಿತು. ಹಾಗಿದ್ದರೆ ವಾಹನ ಯಾಕೆ ಬೇಕು ಎಂತ ಪ್ರಶ್ನೆ ಕೇಳಿದರೆ ‘ಬಡವರೇನು ವಾಹನಗಳಲ್ಲಿ ಬರಬಾರದಾ’ ಎಂಬ ಉಡಾಫೆ ಪ್ರಶ್ನೆ ಬರುತ್ತದೆ. ಆದರೆ ನಿಜಕ್ಕೂ ವಾಹನಗಳಲ್ಲಿ ಬರುವುದೇಕೆಂದರೆ ಆರ್.ಟಿ.ಇ ಸೀಟನ್ನು ನೆರೆಹೊರೆಯ ವ್ಯಾಪ್ತಿಗಿಂತ ಹೊರಗೆ ದೂರದಲ್ಲಿ ತಮ್ಮ ಆಯ್ಕೆಯ ಶಾಲೆಯಲ್ಲಿ ಪಡೆದಿರುತ್ತಾರೆ. ಈ ಬಗ್ಗೆ ಮಾತಾಡಿದರೆ ಇಲಾಖೆಯವರು ಹಾಗೂ ಬಡವರೆಂಬ ತೋರ್ಪಡಿಕೆಯವರು ಸಿಟ್ಟಾಗುತ್ತಾರೆ.

ADVERTISEMENT

ಆದರೆ ಸಮಸ್ಯೆ ಏನೆಂದರೆ ಶಿಕ್ಷಣ ಹಕ್ಕಿನ ಶಾಸನವು ನಿಜವಾದ ಶಿಕ್ಷಣವಂಚಿತ ಬಡವರಿಗೆ ನ್ಯಾಯ ದೊರಕಿಸಿ ಕೊಡುತ್ತಿದೆಯಾ ಅಂತ ನೋಡುವವರಿಲ್ಲ. ಸದ್ಯ ಭ್ರಷ್ಟಾಚಾರದ ಆರೋಪವೆಲ್ಲ ಶಿಕ್ಷಣ ಇಲಾಖೆಯ ಮೇಲಿದೆ. ಆದರೆ ಅದರಲ್ಲಿ ಕಂದಾಯ ಇಲಾಖೆಯವರು ಪಾಲುದಾರರಿದ್ದಾರೆ. ಇನ್ನು, ಸರ್ಕಾರವು ಶುಲ್ಕ ಮರುಪಾವತಿಯ ಹೆಸರಿನಲ್ಲಿ ಶಾಲೆಗಳಿಗೆ ತಲುಪಿಸುವ ಹಣವು ಅರ್ಹ ಬಡವರಿಗಿಂತ ಹೆಚ್ಚಾಗಿ ಅನರ್ಹ ಶ್ರೀಮಂತರ ಪರವಾಗಿ ಸಲ್ಲುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅಧಿಕಾರಿಗಳೂ ಇಲ್ಲ, ಸಚಿವ– ಶಾಸಕರೂ ಇಲ್ಲ. ಹಾಗಾಗಿ ಆರ್.ಟಿ.ಇ. ಜಾರಿಯಾದ ಬಳಿಕವೂ ನಿಜವಾದ ಬಡ ಕುಟುಂಬಗಳ ಮಕ್ಕಳು ಉಚಿತ ಶಿಕ್ಷಣದ ಫಲಾನುಭವಿಗಳಾಗಿದ್ದಾರೆ ಎನ್ನುವಂತಿಲ್ಲ.

ಈ ಸಮಸ್ಯೆಗೆ ಎರಡು ಪರಿಹಾರಗಳಿವೆ. ಮೊದನೆಯದಾಗಿ ಈಗಾಗಲೇ ಆರ್.ಟಿ.ಇ. ಸೀಟಿಗಾಗಿ ಕಂದಾಯ ಇಲಾಖೆಯಿಂದ ಪಡೆದ ಆದಾಯ ಸರ್ಟಿಫಿಕೇಟ್‍ನ ಸತ್ಯಾಸತ್ಯತೆಯನ್ನು ತನಿಖೆಗೆ ಒಳಪಡಿಸಬೇಕು. ಇದಕ್ಕೆ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಕಂದಾಯ ಇಲಾಖೆಯೊಂದಿಗೆ ಜಂಟಿಯಾಗಿ ಆದೇಶ ಹೊರಡಿಸಬೇಕು. ಎರಡನೆಯದಾಗಿ ಈ ವರ್ಷದಿಂದ ಆರ್.ಟಿ.ಇ. ಅರ್ಜಿಯೊಂದಿಗೆ ಹೆತ್ತವರು ‘ಮಗುವಿನ ಮನೆಯಿಂದ ಒಂದು ಕಿ.ಮೀ. ದೂರದೊಳಗೆ ಸರ್ಕಾರಿ ಶಾಲೆ ಇಲ್ಲ’ ಎಂಬ ಅಫಿಡವಿಟ್‌ ಸಲ್ಲಿಸುವುದನ್ನು ಕಡ್ಡಾಯ ಮಾಡಬೇಕು. ಇದನ್ನು ಸಂಬಂಧಿತ ಕಂದಾಯ ಅಧಿಕಾರಿ ದೃಢೀಕರಿಸಬೇಕು. ಶಿಕ್ಷಣ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಇಂತಹ ಹೆಜ್ಜೆಗಳನ್ನು ಇಟ್ಟರೆ ಆರ್.ಟಿ.ಇ. ಸೀಟುಗಳನ್ನು ಅರ್ಹ ಬಡವರಿಗೆ ಮಾತ್ರ ಸಿಗುವಂತೆ ಮಾಡಬಹುದು.

ಇದಕ್ಕಿಂತ ದೊಡ್ಡ ವಂಚನೆ ನಡೆಯುತ್ತಿರುವುದು ಸರ್ಕಾರದ ಕಡೆಯಿಂದ ಅಂತ ಹೇಳಬಹುದು. ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದಾಗಿ ಇಂದು ಸರ್ಕಾರಿ ಶಾಲೆಗಳು ಮುಚ್ಚುವಷ್ಟು ಮಕ್ಕಳ ಕೊರತೆ ಎದುರಿಸುತ್ತಿವೆ ಎನ್ನುವುದು ಒಂದು ವಾಸ್ತವ. ಇನ್ನೊಂದು ವಾಸ್ತವವೇನೆಂದರೆ ಕೆಲವು ಹೆತ್ತವರಿಗೆ ಕನ್ನಡ ಮಾಧ್ಯಮದ ಕುರಿತಾಗಿ ಆಸಕ್ತಿ ಇದ್ದರೂ ಸರ್ಕಾರಿ ಶಾಲೆಗೆ ಕಳಿಸುವುದು ಹೇಗೆ ಎಂಬ ಪ್ರಶ್ನೆ. ಅಲ್ಲಿ ಸಹಪಾಠಿ
ಗಳಾಗಿ ಸಿಗುವುದು ಯಾರು? ಇಡೀ ಸಮುದಾಯದ ನೆರೆಹೊರೆಯ ಮಕ್ಕಳು ಸಿಗುವುದಿಲ್ಲ. ಸಿಗುವುದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಬಡ ಕುಟುಂಬಗಳ ಮಕ್ಕಳು ಮಾತ್ರ. ಅಲ್ಲಿ ಕಲಿಕೆಯಲ್ಲಿ ಉಲ್ಲಾಸ, ಆಸಕ್ತಿ ತೋರುವ ಪರಿಸರ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವವರು ಇದ್ದಾರೆ.

‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಹೊರತಾಗಿ ಎಲ್ಲವೂ ಇವೆ’ ಎನ್ನುವ ಟೀಕೆ ಇದೆ. ಇದು ವಾಸ್ತವ ಕೂಡಾ. ಈ ವಾಸ್ತವವನ್ನು ಸರ್ಕಾರವು ಗುಣಾತ್ಮಕವಾಗಿ ಪರಿವರ್ತಿಸದಿರುವುದು ಮಕ್ಕಳ ಶಿಕ್ಷಣದ ಹಕ್ಕಿಗೆ ಮಾಡುತ್ತಿರುವ ದೊಡ್ಡ ವಂಚನೆಯಲ್ಲವೇ? ಹೇಗೂ ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವುದು ಎಸ್‌.ಸಿ., ಎಸ್‌.ಟಿ. ಹಾಗೂ ಅಲ್ಪಸಂಖ್ಯಾತ ಸುಮುದಾಯಗಳ ಬಡ ಕುಟುಂಬಗಳ ಮಕ್ಕಳು. ಬಡವರ ಉದ್ಧಾರವೇ ಸರ್ಕಾರದ ಗುರಿಯಾಗಿರುವಾಗ ಹಿಂದುಳಿದವರನ್ನು ಮುಂದೆ ತರಲು ಸರ್ಕಾರಿ ಶಾಲೆಗಳ ಸಬಲೀಕರಣವೇ ಸರ್ಕಾರದ ಕಾರ್ಯಸೂಚಿಯಾಗಬೇಕು. ಮೂಲ ಸೌಕರ್ಯಗಳನ್ನು ಪೂರೈಸಬೇಕು. ಅಗತ್ಯವಿರುವಷ್ಟು ಶಿಕ್ಷಕರನ್ನು ನೀಡಬೇಕು.

ಹಿಂದುಳಿದವರನ್ನು ಮುಂದೆ ತರುವ ಮಾಧ್ಯಮಗಳೇ ಶಾಲೆಗಳು. ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರಕದಂತೆ ಹಾಗೆಯೇ ಬಿಡುವುದೂ ಮಕ್ಕಳ ಶಿಕ್ಷಣದ ಹಕ್ಕನ್ನು ಅವಗಣಿಸಿದಂತೆ ಅಲ್ಲವೇ? ಮುಖ್ಯಮಂತ್ರಿಯವರ ‘ಅಹಿಂದ’ ಅಜೆಂಡಾಕ್ಕೆ ಸರ್ಕಾರಿ ಶಾಲೆಗಳನ್ನು ಸೇರಿಸಿದರೆ ಖಂಡಿತಕ್ಕೂ ಕಾಯ್ದೆಯ ಪಾಲನೆಯೊಂದಿಗೆ ಸಮಾಜದ ಅಭಿವೃದ್ಧಿ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.