ಸಾಹಿತಿಗಳು, ಕಲಾವಿದರಿಗೆ ದೇಶದ ಗಡಿಗಳಿಲ್ಲ ಎಂದು ಹೇಳುವವರು ಭಾರತ ಮತ್ತು ನೆರೆಹೊರೆ ದೇಶಗಳಲ್ಲಿರುವ ಅಸಹಿಷ್ಣುತೆಯ ಸ್ವರೂಪಗಳನ್ನು ಹೋಲಿಕೆ ಮಾಡಿದ್ದಾರೆಯೇ?
ಧಾರವಾಡದಲ್ಲಿ ಈಚೆಗೆ ನಡೆದ ‘ಸಾಹಿತ್ಯ ಸಂಭ್ರಮ’ದಲ್ಲಿ ಆಯೋಜಿಸಿದ್ದ ಅಸಹಿಷ್ಣುತೆಯ ಬಗೆಗಿನ ಗೋಷ್ಠಿ ನಿರಾಸೆ ಉಂಟುಮಾಡಿತು. ಸಾಹಿತ್ಯ ಸಂಭ್ರಮದ ಬಗ್ಗೆ ಟಿ.ಪಿ. ಅಶೋಕ ಅವರು ಮಾಡಿದ ಆಶಯ ಭಾಷಣ ವಸ್ತುಶಃ ‘ಅಸಹಿಷ್ಣುತೆ’ ಗೋಷ್ಠಿಯ ಆಶಯ ಭಾಷಣವಾಗಿತ್ತು. ಕಲಬುರ್ಗಿಯವರ ಹತ್ಯೆಯ ನೆನಪಲ್ಲಿ ಅದು ಸಹಜ. ಸಹಿಷ್ಣುತೆ ಅಂತಹ ಸದ್ಗುಣವೇ ಎಂಬ ಬಗ್ಗೆ ಇ.ಎಂ. ಫಾರ್‌ಸ್ಟರ್ ಹಾಗೂ ಡೆರಿಡಾ ಮಾತುಗಳನ್ನು ಅಶೋಕರು ಉಲ್ಲೇಖಿಸಿದರು.
ಭಾರತೀಯ ಸಂದರ್ಭದಲ್ಲಿ ಈ ಕುರಿತು ಸ್ವಾಮಿ ವಿವೇಕಾನಂದ ಅಥವಾ ಧರ್ಮಗಳ ತೌಲನಿಕ ವಿಶ್ಲೇಷಣೆ ಮಾಡುವಾಗ ಆನಂದ ಕುಮಾರಸ್ವಾಮಿ ಹೇಳಿರುವ ಮಾತುಗಳು ಹೆಚ್ಚು ಪ್ರಸ್ತುತವಾಗುತ್ತಿದ್ದವು. ಅಸಹಿಷ್ಣುತೆಯ ಬಗ್ಗೆ ಆಳವಾದ ಚರ್ಚೆ ನಡೆಸುವ ಬದಲು ಅಸಹಿಷ್ಣುತೆ ಇದೆ ಮತ್ತು ನರೇಂದ್ರ ಮೋದಿ ಅವ ರಿಂದಾಗಿ ತುರ್ತುಪರಿಸ್ಥಿತಿಯಂಥ ಸನ್ನಿವೇಶ ನಿರ್ಮಾಣ ವಾಗಿದೆ ಎಂದು ಪುನರಪಿ ಹೇಳುವ ಕೆಲಸವನ್ನಷ್ಟೇ ಇಡೀ ಗೋಷ್ಠಿ ಮಾಡಿತು. ಅಷ್ಟನ್ನು ಮಾತ್ರ ಹೇಳಲು ಇಷ್ಟು ಪ್ರಮುಖ ವೇದಿಕೆಯಾಗಲೀ, ಗೋಷ್ಠಿಯಾಗಲೀ, ನಾಡಿನ ಕೆನೆಪದರವೆಂಬಂಥ ಸಾಹಿತಿಗಳನ್ನು ಒಳಗೊಂಡಿದ್ದ ಸಭೆ ಯಾಗಲೀ ಅಗತ್ಯವಿರಲಿಲ್ಲ.
ಅಸಹಿಷ್ಣುತೆಯ ಚರ್ಚೆಯಲ್ಲಿ ಮೂಲಭೂತವಾಗಿ ಕೇಳಿಕೊಳ್ಳಬೇಕಾದ ಹೊಸ ಪ್ರಶ್ನೆ ಗಳಾಗಲೀ ಉತ್ತರಗಳಾಗಲೀ ಈ ಗೋಷ್ಠಿಯಲ್ಲಿ ಹೊರಹೊಮ್ಮಲಿಲ್ಲ. ಅಸಹಿಷ್ಠುತೆ ಹೆಚ್ಚುತ್ತಿದೆ ಎಂದು ಪ್ರಶಸ್ತಿ ವಾಪಸಾತಿ ಸಾಹಿತಿಗಳು ಹೇಳುತ್ತಿದ್ದಾರೆ. ಅಂದರೆ ಹಿಂದೆ ಅದು ಕಡಿಮೆಯಿತ್ತು ಎಂದಾಯಿತು. ಹಾಗಾದರೆ ಅದು ಹೆಚ್ಚಾ ಗಲು ಕಾರಣಗಳೇನು ಎಂಬುದು ಮೊದಲು ಕೇಳಿಕೊಳ್ಳ ಬೇಕಾದ ಪ್ರಶ್ನೆ. ಬಲಪಂಥೀಯರಿಂದಾಗಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಬೀಸು ಹೇಳಿಕೆಯಿಂದ ಹೆಚ್ಚೇನೂ ಹೇಳಿ ದಂತಾಗದು. ಯಾಕೆಂದರೆ, ಸ್ವಾತಂತ್ರ್ಯಾನಂತರದ ದಶಕ ಗಳಲ್ಲಿ ಸೆಕ್ಯುಲರಿಸಂ ಎಂಬ ತತ್ವವನ್ನು ಈ ದೇಶ ಪಾಲಿ ಸುತ್ತ ಬಂದಿರುವಾಗ ಹಾಗೂ ಸೆಕ್ಯುಲರ್‌ವಾದಿಗಳ ದೃಷ್ಟಿ ಯಲ್ಲಿ ‘ಕೋಮುವಾದಿ’, ‘ಅಸಹಿಷ್ಣು’ ಎಂಬ ಐಡೆಂಟಿಟಿಯನ್ನು ಮಾತ್ರವೇ ಹೊಂದಿರುವ ಬಿಜೆಪಿ, ಸ್ವಾತಂತ್ರ್ಯಾನಂತರ ಬಹುಕಾಲ ಅಧಿಕಾರದಿಂದ ದೂರವೇ ಇದ್ದಾಗ ಅಸಹಿಷ್ಣುತೆ ಹೇಗೆ ಬೆಳೆಯಲು ಸಾಧ್ಯವಾಯಿತು?
‘ಸೆಕ್ಯುಲರ್ ಎಂಬುದು ಒಂದು ರಾಜಕೀಯ ಪಲ್ಲಟದಿಂದ ಕುಸಿದು ಹೋಗುವಷ್ಟು ದುರ್ಬಲವೇ?’ ಎಂದು ರವೀಂದ್ರ ರೇಷ್ಮೆಯವರು ಕೇಳಿದ ಪ್ರಶ್ನೆಗೆ ಸೂಕ್ತ ಉತ್ತರ ಗೋಷ್ಠಿಯಲ್ಲಿ ಸಿಗಲಿಲ್ಲ. ಮುಖ್ಯವಾದ ಪ್ರಶ್ನೆ ಅದೇ ಆಗಿದೆ. ಈ ಅಸಹಿಷ್ಣುತೆಗೆ ಸೆಕ್ಯುಲರ್‌ವಾದದ ವೈರುಧ್ಯಗಳು, ಮಿತಿಗಳು, ಅಪಕಲ್ಪನೆಗಳೇ ಕಾರಣ ಎಂಬ ಸತ್ಯವನ್ನು ಇವರಾರೂ ಅರ್ಥ ಮಾಡಿಕೊಂಡಿಲ್ಲ. ಅರ್ಥ ಮಾಡಿಕೊಂ ಡರೂ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ‘ಒಂದು ವರ್ಷ ದಿಂದ ಅಸಹಿಷ್ಣುತೆ ಹೆಚ್ಚಾಗಿದೆ; ಪ್ರಭುತ್ವವೇ ಅಸಹಿಷ್ಣುವಾಗಿದೆ’ ಎಂದು ಹೇಳುವಲ್ಲಿಗೆ ಚರ್ಚೆ ಮುಗಿಯುತ್ತದೆ.
‘ಧರ್ಮ’ದ ಕಾರಣದಿಂದ ಬರುವ ಅಸಹಿಷ್ಣುತೆ ಅತ್ಯಂತ ಅಪಾಯಕಾರಿ ಎಂದು ಗೋಷ್ಠಿಯಲ್ಲಿ ನಟರಾಜ್ ಹುಳಿಯಾರ್ ಸರಿಯಾಗಿಯೇ ಹೇಳಿದರು. ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ಅಸಹಿಷ್ಣುತೆಯಿದೆ ಎಂದು ಹೇಳಲಾಗುತ್ತಿದ್ದರೂ ಒಟ್ಟು ಚರ್ಚೆಯ ಕೇಂದ್ರದಲ್ಲಿರುವುದು ಹಿಂದೂ-ಮುಸ್ಲಿಂ ಸಂಬಂಧ ಅಥವಾ ಸಂಘರ್ಷ. ಡಾ.ಎಂ.ಎಂ. ಕಲಬುರ್ಗಿಯಂಥವರ ಹತ್ಯೆ ಹಿನ್ನೆಲೆಯಾಗಿಟ್ಟುಕೊಂಡು, ವೈಚಾರಿಕತೆ ಬಗ್ಗೆ ಅಸಹಿಷ್ಣುತೆ ಇದೆ ಎನ್ನುತ್ತೇವೆ. ವೈಚಾರಿಕತೆ ಅಥವಾ ಮೌಢ್ಯಾಚರಣೆ ನಿಷೇಧ ಕಾನೂನಿನ ಬಗ್ಗೆ ಮಾತನಾಡುವಾಗಲೂ ಅನಿವಾರ್ಯವಾಗಿ ಎಲ್ಲ ಧರ್ಮಗಳ ಮೌಢ್ಯವನ್ನೂ ನಿಷೇಧಿಸುತ್ತೇವೆ ಎನ್ನಬೇಕಾಗುತ್ತದೆ.
ಇವೆಲ್ಲ ಮತ–ಧರ್ಮಗಳ ನಡುವಿನ ಸಂಬಂಧ ಅಥವಾ ತುಲನೆಗೆ ಸಂಬಂಧಿಸಿದ ವಿಚಾರಗಳು. ಅಂದರೆ ಸೆಕ್ಯುಲರ್‌ವಾದದ ವ್ಯಾಪ್ತಿಗೆ ಸೇರಿದಂಥವು. ಹೀಗಾಗಿ ಅಸಹಿಷ್ಣುತೆಯ ಚರ್ಚೆ ಸೆಕ್ಯುಲರ್‌ವಾದದ ಚರ್ಚೆಯೇ ಆಗಬೇಕಾಗುತ್ತದೆ. ನಮ್ಮ ದೇಶದ ಮಟ್ಟಿಗೆ ಸೆಕ್ಯುಲರ್‌ವಾದದಲ್ಲಿ ಕೊರತೆ ಮತ್ತು ಮಿತಿಗಳು ಇವೆ. ಭಾರತದಲ್ಲಿರುವ ಕ್ರೈಸ್ತ, ಇಸ್ಲಾಮಿನಂತೆಯೇ ‘ಹಿಂದೂ’ ಎಂಬೊಂದು (ಬಹು ಸಂಖ್ಯಾತವೆಂಬ) ಕೆಟಗರಿಯನ್ನು ಪೋಷಿಸಿಕೊಂಡು ಬಂದ ಸೆಕ್ಯುಲರ್‌ವಾದ ಕೂಡ ‘ಹಿಂದೂಗಳ ಏಕರೂಪೀ ಕರಣ’ದ ಹೊಣೆ ಹಾಗೂ ಅಸಹಿಷ್ಣುತೆಯ ಹೊಣೆ ಹೊರಬೇಕಾಗುತ್ತದೆ.
ಸಾಹಿತಿಗಳು, ಕಲಾವಿದರಿಗೆ ದೇಶದ ಗಡಿಗಳಿಲ್ಲ ಎಂದು ಯಾವಾಗಲೂ ಹೇಳುವವರು ಭಾರತ ಮತ್ತು ನೆರೆಹೊರೆಯ ದೇಶಗಳಲ್ಲಿರುವ ಅಸಹಿಷ್ಣುತೆಯ ಸ್ವರೂಪ ಗಳನ್ನು ಹೋಲಿಕೆ ಮಾಡಿದ್ದಾರೆಯೇ? ಅಸಹಿಷ್ಣುತೆಗೆ ವ್ಯಕ್ತವಾಗುವ ಪ್ರತಿಕ್ರಿಯೆಗಳನ್ನು ಹೋಲಿಸಿದ್ದಾರೆಯೇ? ಹೋಲಿಕೆ ಮಾಡುವಾಗಲೂ ಅಲ್ಲಿ ಮತ್ತು ಇಲ್ಲಿ ಎರಡೂ ಕಡೆ ಅಲ್ಪಸಂಖ್ಯಾತರ ಸ್ಥಿತಿ ಸಮಾನವಾಗಿ ಹೀನಾಯ ವಾಗಿದೆ ಎಂದೇ ಹೇಳಲಾಗುತ್ತದೆ. ಪಾಕಿಸ್ತಾನದ ಹಿಂದೂಗಳ ಅಥವಾ ಕ್ರೈಸ್ತರ ಬಗ್ಗೆ ಮಾತನಾಡುವುದು ಒಂದೆಡೆ ಇರಲಿ, ಅಲ್ಲಿಯ ಮುಸ್ಲಿಮರ ಪರಿಸ್ಥಿತಿ ನೋಡಿ ಇಲ್ಲಿಯ ಅಥವಾ ಅಲ್ಲಿಯ ಸಾಹಿತಿಗಳು ಯಾಕೆ ಈವರೆಗೆ ಪ್ರತಿಭಟಿಸಿಲ್ಲ? ಅಲ್ಲಿಯ ಮಾಧ್ಯಮಗಳು ಯಾಕೆ ಇನ್ನೂ ಭಾರತಕ್ಕೇ ಸಹಿಷ್ಣುತೆಯನ್ನು ಬೋಧಿಸುತ್ತಿವೆ? ಎಲ್ಲವೂ ಜಾಗತೀಕರಣಕ್ಕೆ ಒಳಗಾಗುತ್ತಿರುವಾಗ ಅಸಹಿಷ್ಣುತೆಯೂ ಜಾಗತೀಕರಣಕ್ಕೆ ಒಳಗಾಗದೆ ಇದ್ದೀತೆ?
ಹಾಗೆಯೇ, ಇತರ ಸಂಸ್ಕೃತಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸಂಸ್ಕೃತಿಗಳು ಯಾವುವು? ಯಾವ ಸಂಸ್ಕೃತಿಗಳಿಗೆ ಹೊಂದಾಣಿಕೆ ಕಷ್ಟವಾಗುತ್ತದೆ? ಮತ್ತು ಯಾಕೆ? ಹಾಗೆಯೇ ದೇಶದೊಳಗಿನ ವಿಭಿನ್ನ ಸಮುದಾಯಗಳು ಆಧುನಿಕತೆಯನ್ನು ಸ್ವೀಕರಿಸುವ ವಿಭಿನ್ನ ಸ್ವರೂಪಗಳಿಗೂ ಅಸಹಿಷ್ಣುತೆಗೂ ಇರುವ ಸಂಬಂಧವೇನು? ಮುಂತಾದ ಪ್ರಶ್ನೆಗಳು ಕೂಡ ಪ್ರಸ್ತುತವೇ ಆಗಿವೆ.
ಸ್ವಾತಂತ್ರ್ಯಾನಂತರದ ಭಾರತದ ನೀತಿನಿರೂಪಣೆಗಳಿಂದಾಗಿ ದಲಿತರು ಮತ್ತು ದಲಿತೇತರರು ಅಥವಾ ವಿವಿಧ ಜಾತಿಗಳ ನಡುವೆ ಹೊಕ್ಕುಬಳಕೆ ಹೆಚ್ಚಾಗಿದೆ. ಆದರೆ, ರಿಲಿಜನ್ ಕೇಂದ್ರಿತ ದೃಷ್ಟಿಕೋನ ಹೊಂದಿದ ನಮ್ಮ ಸೆಕ್ಯುಲರ್‌ವಾದದ ನೀತಿನಿರೂಪಣೆಗಳಿಂದಾಗಿ ಕಳೆದ ಆರೇಳು ದಶಕಗಳಲ್ಲಿ ಹಿಂದೂ-ಮುಸ್ಲಿಮರ ನಡುವಿನ ಹೊಕ್ಕುಬಳಕೆ ಕಡಿಮೆಯಾಗುತ್ತ ಬಂದಿದೆ ಯಾಕೆ? ಇದಕ್ಕೂ ಸಂಘ ಪರಿವಾರವೇ ಕಾರಣ ಎನ್ನುವುದಾದರೆ, ‘ಮೇಲ್ಜಾತಿವಾದಿ’ ಎಂದು ಬೈಯಿಸಿಕೊಳ್ಳುವ ಅದು ಹಿಂದೂ- ಮುಸ್ಲಿಂ ಸಂಬಂಧವನ್ನು ಮಾತ್ರ ಯಾಕೆ ಹಾಳು ಮಾಡಿತು? ಹಿಂದುಳಿದ ಜಾತಿಗೆ ಸೇರಿದವನೊಬ್ಬನನ್ನು ಏಕೆ ಪರಮಾಧಿಕಾರವುಳ್ಳ ನಾಯಕನಾಗಿ ಬೆಳೆಸಿತು?
ಅಸಹಿಷ್ಣುತೆ ನಿವಾರಣೆಗೆ ಏನು ಮಾಡಬೇಕು ಎಂಬ ಬಗ್ಗೆ ಸಮಾಧಾನಕರ ಉತ್ತರವೂ ಗೋಷ್ಠಿಯಲ್ಲಿ ಬರಲಿಲ್ಲ. ಅಸಹಿಷ್ಠುತೆ ಎಂಬುದು ಕಾನೂನು ಸಮಸ್ಯೆ, ಪ್ರಭುತ್ವವು ಸಮರ್ಥ ಪೊಲೀಸ್ ವ್ಯವಸ್ಥೆಯ ಮೂಲಕ ಅದನ್ನು ಪರಿಹರಿಸಬಹುದು ಎಂದು ತಪ್ಪಾಗಿ ಭಾವಿಸ ಲಾಗುತ್ತದೆ. ವಾಸ್ತವವಾಗಿ ಅದು ಪ್ರಭುತ್ವದ ನೀತಿ ನಿರೂ ಪಣೆಗಳ ಮೂಲಕ ಪರಿಹಾರವಾಗಬೇಕಾದ ಸಮಸ್ಯೆ. ಹುಳಿಯಾರರು ಸಮರ್ಥಿಸಿದ ಭಗವಾನರಂಥವರ ಮಾತುಗಳ ಮೂಲಕವಾಗಲೀ ಚಂಪಾ ಅವರ ‘ತಮ್ಮನ್ನು ಒಪ್ಪದವರು ಜನರಲ್ಲ; ಚಡ್ಡಿಗಳು’ ಎಂಬ ಧೋರಣೆ ಮೂಲಕವಾಗಲೀ ಪರಿಹಾರವಾಗುವ ಸಮಸ್ಯೆಯಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.