ADVERTISEMENT

ಇಂಗ್ಲಿಷ್‌ ಥಳಕಿನ ಉತ್ಸವ

‘ಬೆಂಗಳೂರು ಸಾಹಿತ್ಯ ಉತ್ಸವ’ಕ್ಕೆ ನೀಡುವ ಅತಿ ಪ್ರಚಾರ, ಕನ್ನಡದ ಆತ್ಮವಿಶ್ವಾಸ ಕುಸಿಯಲು ಕಾರಣವಾಗುವುದಿಲ್ಲವೇ?

ಎಸ್.ಆರ್.ವಿಜಯಶಂಕರ
Published 25 ಡಿಸೆಂಬರ್ 2016, 19:30 IST
Last Updated 25 ಡಿಸೆಂಬರ್ 2016, 19:30 IST

‘ಬೆಂಗಳೂರು ಸಾಹಿತ್ಯ ಉತ್ಸವ’ದ ಬಗ್ಗೆ ಪೃಥ್ವಿ ದತ್ತ ಚಂದ್ರ ಶೋಭಿ ಅವರು ತಮ್ಮ ಅಂಕಣದಲ್ಲಿ ಬರೆದುದಕ್ಕಿಂತಲೂ (ನಿಜದನಿ, ಪ್ರ.ವಾ., ಡಿ. 23) ಹೆಚ್ಚಿನದನ್ನು ಕನ್ನಡಿಗರು ಚರ್ಚಿಸಬೇಕಾಗಿದೆ. 

ಬೆಂಗಳೂರು ಸಾಹಿತ್ಯ ಉತ್ಸವದ ಸಂಘಟಕರು, ಈಚಿನ ಇಂಗ್ಲಿಷ್‌ ಅನುವಾದಗಳ ಮೂಲಕ ತಮಗೆ  ನೇರವಾಗಿ ಪರಿಚಯವಿರುವ ಕನ್ನಡ ಲೇಖಕರನ್ನು ಮಾತ್ರ ಉತ್ಸವಕ್ಕೆ ಆಹ್ವಾನಿಸಿದ್ದರು. ಕನ್ನಡದ ಇತರ ಹಲವು ಪ್ರಮುಖ ಬರಹಗಾರರನ್ನಾಗಲೀ, ವಿಮರ್ಶಕರನ್ನಾಗಲೀ ಸೌಜನ್ಯಕ್ಕೂ ಸಭೆಗೆ ಆಹ್ವಾನಿಸಲಿಲ್ಲ. ಅವರ ವ್ಯಾಪಾರೀ ಉದ್ದೇಶಕ್ಕೆ ಅಂತಹ ಅಗತ್ಯವೂ ಇರಲಾರದು. ಆದರೆ ಅದಕ್ಕಿಂತಲೂ  ಮುಖ್ಯವಾದ ವಿಷಯವೆಂದರೆ, ಕನ್ನಡದ ಕೆಲವು ಪತ್ರಿಕೆಗಳು ಈ ಉತ್ಸವಕ್ಕೆ ನೀಡಿದ ಪ್ರಾಮುಖ್ಯ.

ಕೆಲವು ಕನ್ನಡ ಪತ್ರಿಕೆಗಳು ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಪ್ರತಿದಿನ ಒಂದು ಪೂರ್ತಿ ಪುಟಕ್ಕೂ ಹೆಚ್ಚಿನ ಜಾಗವನ್ನು ಮೀಸಲಿಟ್ಟವು. ಸಾಹಿತ್ಯ ಉತ್ಸವ ಪ್ರಾರಂಭ ಆಗುವುದಕ್ಕೆ  ಮೊದಲಿನಿಂದಲೇ ‘ಕರ್ಟನ್‌ ರೈಸರ್‌’ ರೀತಿಯಲ್ಲಿ ಸುದ್ದಿ ನೀಡುತ್ತಾ ಉತ್ಸವದ ಬಗ್ಗೆ ಹೆಚ್ಚಿನ ಆಕರ್ಷಣೆ ಹುಟ್ಟಿಸಿದವು. ಇದು, ಕನ್ನಡಿಗರು ಇಂಗ್ಲಿಷಿನ ಈ ಸಾಹಿತ್ಯ ಉತ್ಸವವನ್ನು ಒಂದು ಬಹುಮುಖ್ಯ ಘಟನೆ ಎಂದು ಭಾವಿಸಲು  ಕಾರಣವಾಯಿತು. ವಾಸ್ತವದಲ್ಲಿ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಯಾವ ಮಹತ್ತರ ಬೌದ್ಧಿಕ ಅಥವಾ ಸಾಹಿತ್ಯಕ ಚಿಂತನೆಗೂ ಪ್ರಾಮುಖ್ಯ ಇರಲಿಲ್ಲ.

ಬೆಂಗಳೂರು ಸಾಹಿತ್ಯ ಉತ್ಸವವು ಇಂಗ್ಲಿಷ್‌ ಪುಸ್ತಕ ವ್ಯಾಪಾರಿಗಳ ಹಾಗೂ ಕಾರ್ಪೊರೇಟ್‌ ವಲಯದಲ್ಲಿ ಖ್ಯಾತಿ ಪಡೆಯುವ ಆಸೆ ಹೊಂದಿರುವವರ ವ್ಯಾಪಾರಿ ಉದ್ದೇಶದ ಒಂದು ಕಾರ್ಯಕ್ರಮ. ಆದರೆ ಅದು ಸಾಹಿತ್ಯ, ಸಂಸ್ಕೃತಿಗಳ ಭ್ರಮೆ ಹುಟ್ಟಿಸುವಂತೆ ಬಿಂಬಿತವಾದ ಕಾರ್ಯಕ್ರಮ. ಈ ವ್ಯಾಪಾರದ ಹಿಂದೆ ದುಡ್ಡು, ಪ್ರಭಾವ, ಕಾರ್ಪೊರೇಟ್‌ ಪ್ರತಿಷ್ಠೆ ಇರುತ್ತದೆ. ಸಂಸ್ಕೃತಿ, ಸಾಹಿತ್ಯ ಅಂತಹ ಜಾಗಗಳಲ್ಲಿ ಹಿಂದೆ ಸರಿಯುತ್ತವೆ.

ಇಂತಹ ಸಾಮಾನ್ಯ ಮಟ್ಟದ ಇಂಗ್ಲಿಷ್‌ ಕಾರ್ಯಕ್ರಮಗಳಿಗೆ ಕನ್ನಡ ಪತ್ರಿಕೆಗಳು ವಿಪರೀತ ಪ್ರಚಾರ ಕೊಟ್ಟಾಗ, ತಪ್ಪು ತಿಳಿವಳಿಕೆಯಿಂದ ಈಗಾಗಲೇ ಬೆಳೆದಿರುವ  ಇಂಗ್ಲಿಷ್‌ ವಾತಾವರಣ ನಮ್ಮ ನಡುವೆ ಇನ್ನಷ್ಟು ಗಟ್ಟಿಯಾಗುತ್ತದೆ. ಇಂದು ಕನ್ನಡದ ಅನೇಕ ಲೇಖಕರು ತಾವು ಕತೆ, ಕಾದಂಬರಿಗಳನ್ನು ಬರೆಯುವ ಮೊದಲೇ ಅವನ್ನು ಯಾರ ಮೂಲಕ ಇಂಗ್ಲಿಷ್‌ಗೆ ಅನುವಾದಿಸಬಹುದು ಎಂದು ಯೋಚಿಸುತ್ತಾರೆ. ಕನ್ನಡದ ಕೆಲವು ಪ್ರಕಾಶಕರು ಕನ್ನಡಿಗರಿಗಾಗಿ ಇಂಗ್ಲಿಷ್‌ ಪ್ರಕಾಶನ ವಿಭಾಗವನ್ನು ಪ್ರಾರಂಭಿಸುವ ಯೋಚನೆ ಮಾಡುತ್ತಿದ್ದಾರೆ. ಇಂಗ್ಲಿಷ್‌ ಅನುವಾದಕ್ಕೆ ನಾವು ನೀಡುತ್ತಿರುವ ಪ್ರಾಮುಖ್ಯ ಕನ್ನಡವನ್ನು ಮತ್ತಷ್ಟು ದುರ್ಬಲಗೊಳಿಸಲು ಕಾರಣವಾಗುತ್ತದೆ.

ಬೆಂಗಳೂರು ಸಾಹಿತ್ಯ ಉತ್ಸವದಂತಹ ಕಾರ್ಯಕ್ರಮಗಳಿಗೆ ಕನ್ನಡ ಪತ್ರಿಕೆಗಳು ಹೆಚ್ಚಿನ ಉತ್ತೇಜನ ನೀಡಿ ಕನ್ನಡದ ಆತ್ಮವಿಶ್ವಾಸ ಕಡಿಮೆಯಾಗಲು ತಮ್ಮ ಕೊಡುಗೆ ನೀಡುತ್ತಿವೆ. ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಬೆಂಗಳೂರಿನ ಕೆಲವು ಪ್ರಮುಖ ಇಂಗ್ಲಿಷ್‌ ಪತ್ರಿಕೆಗಳು, ಅದೊಂದು ಸುದ್ದಿಯೇ ಅಲ್ಲ ಎನ್ನುವ ಹಾಗೆ ವರ್ತಿಸಿದವು.

ಹೀಗಿರುವಾಗ ಕನ್ನಡ ಪತ್ರಿಕೆಗಳು ಇಂಗ್ಲಿಷ್‌ ಹಬ್ಬದ ಗುಲಾಮಗಿರಿಗೆ ಟೊಂಕಕಟ್ಟಿ ನಿಂತು, ನಮ್ಮ ಹೊಸ ಬರಹಗಾರರಲ್ಲಿ ಇಂಗ್ಲಿಷ್‌ ಅನುವಾದದ ಬಗ್ಗೆ ತಪ್ಪುಕಲ್ಪನೆ ಮೂಡಲು ಯಾಕೆ ಕಾರಣವಾಗಬೇಕು? ಇಂಗ್ಲಿಷ್‌ ಗ್ಲ್ಯಾಮರ್‌ಗೆ ಯಾಕೆ ನೀರೆರೆಯಬೇಕು? ನಮ್ಮ ನವೋದಯ ಕಾಲದಲ್ಲಿ ಕುವೆಂಪು, ಕಾರಂತ, ಬೇಂದ್ರೆ, ಪುತಿನ, ಅಡಿಗ ಮುಂತಾದವರು ತಮ್ಮ ಸಾಹಿತ್ಯದ ಇಂಗ್ಲಿಷ್‌ ಅನುವಾದಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಅವರಿಗೆ ತಮ್ಮ ಕನ್ನಡದ ಬಗ್ಗೆ ಅಂತಹ ವಿಶ್ವಾಸ ಇತ್ತು. ಇಂದು ಸರಿಯಾದ ಇಂಗ್ಲಿಷ್‌ ಅನುವಾದಕರು,  ಪ್ರಕಾಶಕರು ಸಿಕ್ಕದ ಕನ್ನಡದ ಕೆಲವು ಲೇಖಕರ ಹತಾಶೆಯನ್ನು ನೋಡಿದರೆ ಮರುಕ ಉಂಟಾಗುತ್ತದೆ. ಅಂತಹ ವಾತಾವರಣವನ್ನು ಪರೋಕ್ಷವಾಗಿ ಪೋಷಿಸಲು ನೆರವಾಗುವ ಕನ್ನಡ ಪತ್ರಿಕೆಗಳು, ಇಂಗ್ಲಿಷ್‌ ಶ್ರೇಷ್ಠ ಎಂಬ ಭಾವನೆ ಕನ್ನಡಿಗರಲ್ಲಿ ಮತ್ತಷ್ಟು ಬೆಳೆಯಲು ಕಾರಣವಾಗುತ್ತವೆ.

ಇಂಗ್ಲಿಷ್‌ ನಮಗೆ ಇಂದು ಬೇಕಾಗಿರುವುದು ಹೆಚ್ಚಿನ ಮಾಹಿತಿಗಾಗಿ. ನಮ್ಮಲ್ಲಿ ಇಲ್ಲದೇ ಇರುವಂತಹ ಸಂಶೋಧನಾ ವಿವರಗಳನ್ನು ತಿಳಿಯುವುದಕ್ಕಾಗಿ. ಅಂತಹ ವಾತಾವರಣ ಕನ್ನಡದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುವವರೆಗೆ ನಾವು ಇಂಗ್ಲಿಷನ್ನು ಬಳಸಿಕೊಳ್ಳಬೇಕೇ ವಿನಾ ಅದರ ವಕ್ತಾರರ ಸಾಂಸ್ಕೃತಿಕ ವ್ಯಾಪಾರಿ ತಂತ್ರಗಳಿಗೆ ಬಲಿಯಾಗಬಾರದು.

‘ಸಂಸ್ಕೃತವನ್ನು ಕನ್ನಡಿಗರು ಜೀರ್ಣಿಸಿಕೊಂಡಂತೆ ಇಂಗ್ಲಿಷನ್ನೂ ಜೀರ್ಣಿಸಿಕೊಂಡು ನಾವು ಉಳಿಯಬೇಕಾದಂತೆ, ಇರಬೇಕಾದಂತೆ ಉಳಿದು ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದು 1925ರಷ್ಟು ಹಿಂದೆ ‘ಕನ್ನಡದ ಪುನರುಜ್ಜೀವನ’ ಲೇಖನದಲ್ಲಿ ಬಿ.ಎಂ.ಶ್ರೀಯವರು ಹೇಳಿದ ಮಾತುಗಳನ್ನು ನಾವೀಗ ಪುನಃ ನೆನಪಿಸಿಕೊಳ್ಳಬೇಕಾಗಿದೆ. ಇಂಗ್ಲಿಷನ್ನು ನಮ್ಮ ಹಿಡಿತದಲ್ಲಿ ಇರಿಸಿಕೊಂಡು ಬಳಸಿಕೊಳ್ಳಬೇಕು. ಅದಕ್ಕೆ ಸಾಂಸ್ಕೃತಿಕ ನಜರು ಒಪ್ಪಿಸುವುದನ್ನು ನಿಲ್ಲಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.