ಯಾವುದೇ ವ್ಯಕ್ತಿಯ ಕುರಿತಾದ ಭಿನ್ನಾಭಿಪ್ರಾಯಗಳು, ವಿರೋಧಗಳು ನಮಗೆ ಇದ್ದಲ್ಲಿ ಅವುಗಳನ್ನು ಆ ವ್ಯಕ್ತಿ ಜೀವಂತವಿದ್ದಾಗಲೇ ವ್ಯಕ್ತಪಡಿಸಬೇಕು ಎಂದು ನಂಬುವವನು ನಾನು. ನಾನೊಬ್ಬನೇ ಅಲ್ಲ, ಯಾವ ನಾಗರಿಕ, ಸುಸಂಸ್ಕೃತ ವ್ಯಕ್ತಿಯೂ ನಂಬುವುದು ಅದನ್ನೇ. ವ್ಯಕ್ತಿ ತೀರಿಕೊಂಡ ಮೇಲೆ ದಿಢೀರ್ ಕಂಡುಕೊಳ್ಳುವ ನಮ್ಮ ಬಿಚ್ಚುನುಡಿಗಳಿಗೆ ಬಿಡಿಗಾಸಿನ ಬೆಲೆ ಇರುವುದಿಲ್ಲ. ಹಲವು ದಶಕಗಳ ಒಳಗಿನ ಹುಳಿಯನ್ನು ಸಾರ್ವಜನಿಕವಾಗಿ ಕಕ್ಕಿಕೊಂಡಷ್ಟೇ ಬೆಲೆ ಅದಕ್ಕೆ. ಸಾಹಿತ್ಯಿಕವಾಗಿ ನಾವು ಮಾಡುವ ವಿಮರ್ಶೆ ಬೇರೆ ಮಾತು. ಆದರೆ ವೈಯಕ್ತಿಕ ಟೀಕೆಗಳು–ಅವು ಸಾಹಿತ್ಯಿಕ ಎಂಬ ಸೋಗಿನಲ್ಲಿ ಪ್ರಕಟವಾದರೂ ಆಡುವವರಿಗೆ ಶೋಭೆ ತರುವಂಥವಲ್ಲ.
ಗಿರೀಶ ಕಾರ್ನಾಡರು ಅನಂತಮೂರ್ತಿ ಅವರನ್ನು ಹಲವು ದಶಕಗಳಿಂದ ಬಲ್ಲವರು. ‘ನಾನು ಅವರ ಬೆನ್ನೆಲುಬಾಗಿದ್ದೆ’ ಎಂದು ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ದಾಗ ನಿಜವಾದ ಸ್ನೇಹವಿರುವುದು, ಗೌರವವಿರುವುದು– ಪರಸ್ಪರರಲ್ಲಿ ಕಂಡ ನ್ಯೂನತೆಗಳು, ವಿರೋಧಾಭಾಸಗಳು, ದೋಷಗಳು ಇವುಗಳ ಕುರಿತಾಗಿ ಮಾತನಾಡಿ ಒಂದು ಬಗೆಯ ಉನ್ನತ ರೀತಿಯ ಸಂವಾದವನ್ನು ಉಳಿಸಿಕೊಂಡು ಹೋಗುವುದರಲ್ಲಿ ಇಂಥ ಚರ್ಚೆಗಳು, ಇಂಥ ಮುಖಾಮುಖಿಗಳು ಇಬ್ಬರನ್ನೂ ಬೆಳೆಸುತ್ತವೆ. ಒಟ್ಟು ಸಮಾಜವನ್ನು ಕೂಡ ಅರಳಿಸುತ್ತದೆ.
ಅದರ ಬದಲು ಇಷ್ಟು ದಶಕಗಳು ಮೌನವಾಗಿದ್ದು, ಜಾಣತನದ ದೂರವನ್ನು ಕಾಪಾಡಿಕೊಂಡು ಬಂದು ಈಗ ಇದ್ದಕ್ಕಿದ್ದಂತೆ ಸ್ಫೋಟಿಸುವ ಟೀಕಾಸ್ತ್ರಗಳು, ಪ್ರಯೋಗಿಸಿದ ನಮ್ಮಗಳ ವ್ಯಕ್ತಿತ್ವ ಪ್ರದರ್ಶಿಸುತ್ತವೆಯೇ ಹೊರತು ತೀರಿಕೊಂಡ ವ್ಯಕ್ತಿಗೆ ಕಿಂಚಿತ್ತೂ ಮುಟ್ಟದೇ ನಿಷ್ಪ್ರಯೋಜಕವಾಗುತ್ತವೆ. ಈ ಆರೋಪದ ಪ್ರಕರಣ ಕೂಡ ಅಂಥದ್ದು. ಅನಂತಮೂರ್ತಿಯವರ ಕುರಿತಾಗಿ ಗಿರೀಶರು ಆಡಿರುವ ಮಾತುಗಳು ಆರೋಗ್ಯಕರ, ಸೃಜನಶೀಲ ವಿಮರ್ಶೆಯಲ್ಲ.
ಇಂತಹ ಎರಡನೆ ದರ್ಜೆ ಮಾತುಗಳನ್ನು ಗಿರೀಶರಂಥವರಿಂದ ನಾವು ನಿರೀಕ್ಷಿಸಿರಲಿಲ್ಲ.
* ಅವರ ‘ಸಂಸ್ಕಾರ’ ಕಾದಂಬರಿಯ ನಂತರದ ಕಾದಂಬರಿಗಳು ‘ಎರಡನೆ ದರ್ಜೆಯ’ವು, ಅವರ ‘ಹಿಂದುತ್ವದ’ ವಿವರಣೆ, ‘ಬಾಲಿಶ’ ಎಂಬೆಲ್ಲ ಮಾತುಗಳು ಅಂದೇ ಯಾಕೆ ಹೇಳಲಿಲ್ಲ? ಅಥವಾ ಮುಂದೆ ಮೂರ್ತಿಯವರು ಬದುಕಿದ್ದಷ್ಟೂ ಕಾಲವಾದರೂ ಏಕೆ ಮೌನವಹಿಸಿದ್ದರು?
* ‘ರಾಜ್ಯಸಭೆ ಸ್ಥಾನಕ್ಕೆ ಹುಚ್ಚನಂತೆ ‘ಹಟಕ್ಕೆ ಬಿದ್ದಿದ್ದರು’ ಎಂಬ ಮಾತಿನ ಹಿಂದೆ ಅಸಹನೆಯಷ್ಟೆ ಅಲ್ಲ, ತೀವ್ರ ಕ್ರೋಧವೂ ಸ್ಪಷ್ಟವಾಗಿ ರಾಚುತ್ತದೆ.
* ‘ಚಿಂತಕ’ ಎಂಬ ಸೋಗು ಅರ್ಥವಿಲ್ಲದ್ದು . ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ವ್ಯಕ್ತಿ’ ಎಂದು ಗಿರೀಶರು ತೀರ್ಪು ನೀಡಿದ್ದಾರೆ. ಸೂಕ್ಷ್ಮಜ್ಞ ಮತ್ತು ಚಿಂತಕ ಇವು ನನ್ನ ಪ್ರಕಾರ ಸಮಾನಾರ್ಥಕ ಶಬ್ದಗಳಾಗಿದ್ದು ಇವುಗಳ ಮಧ್ಯೆ ಗಿರೀಶರು ಕಂಡಿರುವ ವ್ಯತ್ಯಾಸಗಳೇನು ಎಂದು ಅವರೇ ವಿವರಿಸಬೇಕು.
* ಎಚ್. ಡಿ. ಕುಮಾರಸ್ವಾಮಿಯವರಿಗೆ ತಂಪು ಪಾನೀಯ ನೀಡಿ ಉಪವಾಸ ನಿಲ್ಲಿಸುವಂತೆ ಮನವಿ ಮಾಡಿದ್ದರ ಕುರಿತೂ ಗಿರೀಶರ ವ್ಯಂಗ್ಯವಿದೆ. ‘ಅನಂತಮೂರ್ತಿ ಯಾರ್ರೀ?’ ಎಂದು ಅಬ್ಬರಿಸಿದ ಎಚ್.ಡಿ.ಕೆ.ಗೂ, ತಂಪು ಪಾನೀಯ ನೀಡಿ ‘ಉಪವಾಸ ನಿಲ್ಲಿಸಿ’ ಎಂದು ಕೇಳಿದ ಅನಂತಮೂರ್ತಿ ಅವರಿಗೂ ಅವರವರ ವರ್ತನೆಗಳಿಂದಲೇ ಅವರ ವ್ಯಕ್ತಿತ್ವಗಳು ಪ್ರಕಟವಾಗುವುದಿಲ್ಲವೆ? ‘ಅನಂತಮೂರ್ತಿ ಅವರ ಒಂದೇ ಮುಖವನ್ನು ತೋರಿಸುವುದು ಸರಿಯಲ್ಲ’ ಎಂದು ಹೇಳುತ್ತಲೇ ಗಿರೀಶರು ಅವರ ಹಲವು ಮುಖಗಳನ್ನು ಪ್ರದರ್ಶಿಸಿದ್ದಾರೆ.
ಅನಂತಮೂರ್ತಿ ಅವರು ಪರಿಪೂರ್ಣ ವ್ಯಕ್ತಿ ಎಂದಾಗಲೀ ಲೋಪಾತೀತ ಚಿಂತಕರೆಂದಾಲೀ ಯಾವ ಅವರ ಕಟ್ಟಾ ಅಭಿಮಾನಿಯೂ ಹೇಳುತ್ತಿಲ್ಲ. ಅಂಥ ಪರಿಪೂರ್ಣತ್ವದ ಕನಸು ಕಾಣುತ್ತಿದ್ದ ಹಲವು ಚಿಂತಕರಲ್ಲಿ ಅವರೂ ಒಬ್ಬರು. ಅದಕ್ಕೇ ಅವರು ನಮಗೆ ಇಷ್ಟವಾಗುವುದು. ಅವರ ಎಲ್ಲ ವಿರೋಧಾಭಾಸಗಳ ಮಧ್ಯೆಯೂ ಅವರೊಬ್ಬ ಸ್ವಚ್ಛಂದ ಮನಸ್ಸಿನ ವ್ಯಕ್ತಿಯಾಗಿದ್ದರು. ಸ್ವಯಂನಿರ್ಮಿತ ಬಂಗಾರದ ಪಂಜರದಲ್ಲಿ ಬಂಧಿತರಾಗಿ ಕೂತು, ಇದ್ದಕ್ಕಿದ್ದಂತೆ ಪಂಜರ ಭೇದಿಸಿ ಹೊರಬಂದು ಹಾಡಲಿಕ್ಕಾಗಲೀ ಹಾರುವುದಕ್ಕಾಗಲೀ ಆಗದೆ ಚಡಪಡಿಸುವ ಹಕ್ಕಿಯಂತೆ ಕಂಡುಬರುವ ಅಪಾಯಗಳ ಬಗ್ಗೆ ತಿಳಿವಿರಬೇಕು.
ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟಕ್ಕೆ ಹಿರಿಯರು ಇವರನ್ನು ಏರಿಸಿದ ಮೇಲೆ ಆ ‘ಅಟ್ಟ’ದಿಂದ ಕೆಳಗೇ ಇಳಿಯಲಾರದೆ ‘ಪಂಚತಾರಾ ಸೆಮಿನಾರಿಸ್ಟ್’ ರೀತಿ ಬದುಕುತ್ತಿದ್ದು, ಜನಸಾಮಾನ್ಯರಿಂದ ದೂರವೇ ಉಳಿದುಬಿಟ್ಟಿದ್ದು, ಈಗ ಎಲ್ಲಿಲ್ಲದ ಹುರುಪಿನಲ್ಲಿ ಮತ್ತೊಂದು ಪಂಚತಾರಾ ಸೆಮಿನಾರಿನಲ್ಲಿ ‘ಬಹು ನಿರ್ಭಿಡೆಯ ಮಾತುಗಳನ್ನಾಡುತ್ತಿದ್ದೇನೆ’ ಎಂದು ಗಿರೀಶರು ಭ್ರಮಿಸುವುದನ್ನು ಕನಿಕರಿಸಬೇಕಷ್ಟೆ. ಅವರ ‘ತುಘಲಕ್’ ಮತ್ತು ‘ತಲೆದಂಡ’ ಇವು ನಿಜಕ್ಕೂ ಉತ್ತಮ ನಾಟಕಗಳು. ಅವರ ಸಾಮಾಜಿಕ ನಾಟಕಗಳು ಅತ್ಯಂತ ಸಾಮಾನ್ಯ ದರ್ಜೆಯ ನಾಟಕಗಳು. ಅಂದ ಮಾತ್ರಕ್ಕೆ ಅವರ ನಾಟಕ ರಚನಾ ಕೌಶಲವನ್ನು ನಾನು ಪ್ರಶ್ನಿಸುತ್ತಿಲ್ಲ. ಆದರೆ ಅವರ ಸಾಧನೆ, ಮಿತಿಗಳನ್ನು ಗುರುತಿಸಿ ಅವರು ಜೀವಂತವಿರುವಾಗಲೇ ಹೇಳುತ್ತಿದ್ದೇನೆ. ಅವರ ಆತ್ಮ (ವಿಹೀನ) ಚರಿತ್ರೆ ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ‘ಆಡಾಡ್ತಾ ಆಯುಷ್ಯ’ ಪುಸ್ತಕವೊಂದು ‘ಹಲವು ಜನರ ನಿಂದನಾತ್ಮಕ, ನಕಾರಾತ್ಮಕ ಜೀವನ ಚರಿತ್ರೆ’ಯ ತುಣುಕುಗಳ ಸಂಗ್ರಹ ಎಂದು ನನಗೆ ತೀವ್ರವಾಗಿ ಅನ್ನಿಸುತ್ತದೆ.
ಅದೇ ಸಭೆಯಲ್ಲಿ ಕಲಾವಿದ ಎಸ್.ಜಿ. ವಾಸುದೇವ್ ತಮ್ಮ ದನಿಯನ್ನೂ ಸೇರಿಸಿದ್ದಾರೆ. ಎಲ್ಲ ಕ್ರಾಂತಿಕಾರಿ ಕ್ರಮಗಳನ್ನು ಸಾಧಿಸಿದ್ದೇನೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದ ಮೂರ್ತಿಯವರು ‘ಗಾಯತ್ರಿ ಮಂತ್ರ ಪಠಣ ಮಾಡುತ್ತಿದ್ದರು’ ಎಂದು. ಯಾಕೆ ವಾಸುದೇವ್ ಅವರೆ, ಗಾಯತ್ರಿ ಮಂತ್ರ ಪಠಣ ಮಾಡುವವನೊಬ್ಬ ಜಾತ್ಯತೀತವಾದಿಯೂ, ಅತ್ಯಂತ ಮಾನವತಾವಾದಿಯೂ ಆಗಿರಬಾರದೆ? ನಿಮ್ಮ ವಿವರಣೆಗೆ ಸಲ್ಲುವವರು ಮಾತ್ರ ಕ್ರಾಂತಿಕಾರಿಗಳೆ? ಆ ವಿವರಣೆಯಾದರೂ ಏನು ಎಂದು ದಯವಿಟ್ಟು ತಿಳಿಸಬೇಕು.
–ಜಿ. ಕೆ. ಗೋವಿಂದರಾವ್,
ಬೆಂಗಳೂರು
* * *
ಅಸೂಯೆಯೇ ಟೀಕೆಗೆ ಕಾರಣ
ಅನಂತಮೂರ್ತಿಯವರು ತೀರಿ ಕೊಳ್ಳುವುದನ್ನೇ ಕಾದಿದ್ದರೋ ಎಂಬಂತೆ ಮೈಮೇಲೆ ಬಂದವರ ಹಾಗೆ ಗಿರೀಶ್ ಕಾರ್ನಾಡರು ಮಾಡುತ್ತಿರುವ ಟೀಕಾ ಪ್ರಹಾರದಿಂದ, ಅನಂತಮೂರ್ತಿಯವರ ಸಾಧನೆ, ಗಿರೀಶರ ಮತ್ತು ಅನಂತಮೂರ್ತಿಯವರ ಒಡನಾಟ ಇವನ್ನೆಲ್ಲ ಅರಿತವರಿಗೆ ಕಸಿವಿಸಿಯ ಜತೆಗೆ ಅಲ್ಲ, ಕಾರ್ನಾಡರ ವಿಮರ್ಶನ ಪ್ರಜ್ಞೆ ಮತ್ತು ಔಚಿತ್ಯ ಪ್ರಜ್ಞೆಗಳ ಬಗೆಗೂ ಸಂದೇಹ ಉಂಟಾಗುತ್ತಿದೆ.
ಅನಂತಮೂರ್ತಿಯವರ ಅನೇಕ ರಾಜಕೀಯ, ಸಾಮಾಜಿಕ ನಿಲುವುಗಳನ್ನು ಒಪ್ಪದಿರುವವರು ಕೂಡ ಅವರೊಬ್ಬ ಶ್ರೇಷ್ಠ ಕಥೆಗಾರರು ಹಾಗೂ ಕನ್ನಡ ವಿಮರ್ಶೆ ಮತ್ತು ವೈಚಾರಿಕ ಕ್ಷೇತ್ರದಲ್ಲಿ ಅವರದು ಕಾವ್ಯ ಕ್ಷೇತ್ರದ ಅಡಿಗರಿಗೆ ಸರಿಮಿಗಿಲಾದ ಸಾಧನೆ ಎಂಬ ಬಗ್ಗೆ ಬಹುಶಃ ಎರಡಭಿಪ್ರಾಯ ತಳೆಯಲಾರರು.
ಅಂಥದ್ದರಲ್ಲಿ ‘ಸಂಸ್ಕಾರ’ ಕಾದಂಬರಿ ನಂತರದ ಮೂರ್ತಿಯವರ ಸಾಹಿತ್ಯವೆಲ್ಲ ಎರಡನೇ ದರ್ಜೆಯ ಸಾಹಿತ್ಯವೆಂದು ಅದ್ಯಾವ ಧೈರ್ಯದ ಮೇಲೆ ಕಾರ್ನಾಡರು ಹೇಳುತ್ತಾರೋ ತಿಳಿಯದಾಗಿದೆ. ಅನಂತಮೂರ್ತಿಯವರ ಸಾಹಿತ್ಯವನ್ನು ಸುಮ್ಮನೆ ಬೀಸುಹೇಳಿಕೆ ಮೂಲಕ ಬೇಜವಾಬ್ದಾರಿಯಿಂದ ಟೀಕಿಸುವ ಬದಲು ಗಟ್ಟಿಯಾದ ವಿಮರ್ಶೆ ಮೂಲಕ ಕಾರ್ನಾಡರು ಅಭಿಪ್ರಾಯ ವ್ಯಕ್ತಪಡಿಸಲಿ. ಬಹಳ ಹಿಂದೆಯೇ ಮಾಸ್ತಿಯವರ ’ಕಾಕನ ಕೋಟೆ’ ನಾಟಕದ ಬಗ್ಗೆ ಒಳ ನೋಟಗಳುಳ್ಳ ಸುಂದರ ವಿಮರ್ಶೆ ಬರೆದಿರುವ ಕಾರ್ನಾಡರಿಗೆ ಇದೇನೂ ಅಸಾಧ್ಯವಲ್ಲ.
ಶ್ರದ್ಧಾಂಜಲಿ ಸಭೆ ಎಂದು ಹೇಳಬಹುದಾದಲ್ಲಿ ಹೀಗೆ ಟೀಕೆಯ ಸುರಿಮಳೆ ಮಾಡುವುದು ಎಷ್ಟುಮಾತ್ರಕ್ಕೂ ಶೋಭಿಸುವುದಿಲ್ಲ ಎಂಬುದನ್ನು ಈ ಜ್ಞಾನಪೀಠಿಗಳಿಗೆ ತಿಳಿಸಬೇಕಾಗಿ ಬಂದಿರುವುದು ಕನ್ನಡಿಗರ ದುರ್ದೈವವೇ ಸರಿ. ಡಾ. ಪಿ.ವಿ. ನಾರಾಯಣ ಹೇಳಿರುವಂತೆ ಎಂದೂ ಜನಸಾಮಾನ್ಯರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳದ ಕಾರ್ನಾಡರಿಗೆ ಜನಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಅನಂತಮೂರ್ತಿಯವರನ್ನು ಕಂಡರೆ ಅಸೂಯೆ ಇದ್ದ ಕಾರಣದಿಂದಲೇ ಹೀಗೆ ಇವರು ಅನಂತಮೂರ್ತಿಯವರ ಮೇಲೆ ಮುಗಿ ಬೀಳುತ್ತಿದ್ದಾರೆಂದು ಜನರಿಗೆ ಅನಿಸಿದರೆ ಅದರಲ್ಲಿ ಆಶ್ಚರ್ಯವೇ ಇಲ್ಲ.
ಇವರ ದೃಷ್ಟಿಯಲ್ಲಿ ಅನಂತಮೂರ್ತಿಯಂಥವರ ಪಾಡೇ ಹೀಗಾದ ಮೇಲೆ ಇನ್ನು ಇದು ಕನ್ನಡವೇ ಎಂದು ಮನಃಪೂರ್ವಕವಾಗಿ ಹೇಳಲು ಕಷ್ಟವಾದ ಇವರ ನಾಟಕಗಳ ಭಾಷೆಯ ಬಗ್ಗೆ ಹಾಗೂ ಒಟ್ಟಾರೆ ಇವರ ನಾಟಕಗಳ ಬಗ್ಗೆ ಕನ್ನಡಿಗರು ಯಾವ ನಿಲುವು ತಳೆಯ ಬೇಕು? ಗಿರೀಶರೇ ಹೇಳಬೇಕು.
–ಡಾ. ಆರ್. ಲಕ್ಷ್ಮೀನಾರಾಯಣ,
ಪ್ರೊ. ಶಿವರಾಮಯ್ಯ,
ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.