ಪ್ರಥಮದರ್ಜೆ ಕಾಲೇಜುಗಳ ಉಪನ್ಯಾಸಕರ ಬೋಧನಾ ಅವಧಿಯನ್ನು ಹೆಚ್ಚಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಅವಧಿ ವಾರಕ್ಕೆ ಈಗ ಇರುವ ೧೬–-೨೦ ಗಂಟೆಗಳಿಂದ (ಪ್ರಯೋಗಶಾಲೆ ರಹಿತ ವಿಷಯಗಳಿಗೆ ೧೬ ಗಂಟೆ,- ಪ್ರಯೋಗಶಾಲೆ ಸಹಿತ ವಿಷಯಗಳಿಗೆ- ೨೦ ಗಂಟೆ) ೨೨-–೨೬ ಗಂಟೆಗಳಿಗೆ ಹೆಚ್ಚಳವಾಗಿದೆ. ಸರ್ಕಾರ ಜಾಣತನದಿಂದ ಸಾರ್ವಜನಿಕರ ಸಹಾನುಭೂತಿ ಗಿಟ್ಟಿಸಿಕೊಂಡು ಉಪನ್ಯಾಸಕರ ಮೇಲೆ ಒತ್ತಡ ತಂದು ತನ್ನ ಆರ್ಥಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹೊರಟಂತಿದೆ.
ರಾಜ್ಯದಲ್ಲಿ ಸುಮಾರು ೪೫೦ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳು ಹಾಗೂ ೩೦೦ ಅನುದಾನಿತ ಕಾಲೇಜುಗಳಿವೆ. ಅನುದಾನರಹಿತ ಕಾಲೇಜುಗಳ ಸಂಖ್ಯೆ ೧,೫೦೦ ಮೀರಿದೆ. ಸರ್ಕಾರಿ ಕಾಲೇಜುಗಳಲ್ಲಿ ೬ ಸಾವಿರ ಉಪನ್ಯಾಸಕರು ಯುಜಿಸಿ ವೇತನ ಪಡೆಯುತ್ತಿದ್ದರೆ, ಸುಮಾರು ೧೫ ಸಾವಿರ ಉಪನ್ಯಾಸಕರು ಅತಿಥಿ, ಅರೆಕಾಲಿಕ ಮುಂತಾದ ಹೆಸರುಗಳಲ್ಲಿ ಮಾಸಿಕ ₨ ೧೦ ಸಾವಿರ ವೇತನ (ಈ ವೇತನವನ್ನು ಅವರಿಗೆ ನೀಡಿದಾಗ!) ಪಡೆಯುತ್ತಿದ್ದಾರೆ.
ಅನುದಾನಿತ ಕಾಲೇಜುಗಳ ಬಗ್ಗೆ ಸರ್ಕಾರಕ್ಕೆ ಆಸಕ್ತಿಯೇ ಹೊರಟುಹೋದಂತಿದೆ. ಹಂತಹಂತವಾಗಿ ಖಾಸಗೀಕರಣ ಮಾಡುತ್ತಾ ಬಂದಿರುವ ಸರ್ಕಾರ ಅನುದಾನಿತ ಉಪನ್ಯಾಸಕರ ಸಂಖ್ಯೆಯನ್ನು ೫ ಸಾವಿರಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಖಾಸಗಿ ಆಡಳಿತ ಮಂಡಳಿಗಳಿಂದ ನೇರ ವೇತನ ಪಡೆಯುತ್ತಿರುವ ಉಪನ್ಯಾಸಕರ ಸಂಖ್ಯೆ ೧೫ ಸಾವಿರ ಮೀರಿದೆ. ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಆಡಳಿತ ಮಂಡಳಿ ನೀಡಿದಷ್ಟು ವೇತನ ಪಡೆಯುತ್ತಾ ಕನಿಷ್ಠ ವೇತನ ಸೌಲಭ್ಯ, ಭದ್ರತೆ ಇಲ್ಲದೇ ಕೆಲಸ ಮಾಡುತ್ತಿರುವ ಉಪನ್ಯಾಸಕರ ಸಂಖ್ಯೆ ಹಲವು ಸಾವಿರಗಳನ್ನು ದಾಟಿದೆ.
ಇಂತಹವರ ಪರಿಸ್ಥಿತಿ ಏನಾಗಬಹುದು ಎನ್ನುವ ಕಲ್ಪನೆ ಸರ್ಕಾರಕ್ಕೆ ಇದ್ದಂತಿಲ್ಲ. ಏಕಪಕ್ಷೀಯವಾಗಿ ೧/೩ರಷ್ಟು ಕಾರ್ಯಭಾರವನ್ನು ಹೆಚ್ಚಿಸಿದರೆ, ಮೊದಲ ಘೋರ ಪರಿಣಾಮ ಎಂದರೆ ಸುಮಾರು ೧/೩ರಷ್ಟು ಅತಿಥಿ ಹಾಗೂ ಖಾಸಗಿ ಉಪನ್ಯಾಸಕರು ತಕ್ಷಣ ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ. ಈ ವೃತ್ತಿಯನ್ನೇ ನಂಬಿಕೊಂಡಿರುವ ೧೦ ಸಾವಿರಕ್ಕೂ ಹೆಚ್ಚಿನ ಉಪನ್ಯಾಸಕರು ಬೀದಿಪಾಲಾಗುತ್ತಾರೆ. ಈ ಸಂಖ್ಯೆ ಕೇವಲ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ಸೀಮಿತ. ಖಾಸಗಿ ಕಾಲೇಜುಗಳಲ್ಲಿ ಅದೆಷ್ಟು ಜನ ಕೆಲಸ ಕಳೆದುಕೊಳ್ಳುತ್ತಾರೊ? ಇದೇ ಉದ್ದೇಶ ಸರ್ಕಾರದ್ದಾಗಿದ್ದರೆ ಇದಕ್ಕಿಂತ ಘೋರ ಸಾಮಾಜಿಕ ದುರಂತ ಮತ್ತೊಂದಿಲ್ಲ.
ಶಿಕ್ಷಣ ತಜ್ಞರ ಸಲಹೆಯಂತೆ ಕಾರ್ಯಭಾರವನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಕಾಲಕಾಲಕ್ಕೆ ನಿರ್ದಿಷ್ಟಪಡಿಸಿ ನಿಯಮಾವಳಿಗಳನ್ನು ರೂಪಿಸುತ್ತಾ ಬಂದಿದೆ. ೨೦೧೦ರ ಪರಿಷ್ಕೃತ ಯುಜಿಸಿ ನಿಯಮಾವಳಿಯಂತೆ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರಿಗೆ ತರಗತಿಗಳಲ್ಲಿ ನೇರವಾಗಿ ಬೋಧಿಸುವ ಅವಧಿಯನ್ನು ಸಹಾಯಕ ಪ್ರಾಧ್ಯಾಪಕರಿಗೆ ೧೬ ಗಂಟೆ, ಪ್ರಾಧ್ಯಾಪಕರು ಮತ್ತು ಸಹಪ್ರಾಧ್ಯಾಪಕರಿಗೆ ೧೪ ಗಂಟೆ (ಸಂಶೋಧನಾ ಮಾರ್ಗದರ್ಶನ ಮಾಡುತ್ತಿದ್ದಲ್ಲಿ ೨ ಗಂಟೆಗಳ ರಿಯಾಯಿತಿ) ನಿಗದಿ ಮಾಡಿದೆ.
ಆದರೆ ಕಾರ್ಯಭಾರ ಇಷ್ಟಕ್ಕೇ ಸೀಮಿತವಾಗಿಲ್ಲ. ಈ ಬಗ್ಗೆ ೧೯೯೬ರಲ್ಲಿಯೇ ಯುಜಿಸಿ ನಿಯಮಾವಳಿ ರೂಪಿಸಿದೆ. ಅದರ ಪ್ರಕಾರ ವಾರದಲ್ಲಿ ೪೦ ಗಂಟೆಗಳ ಕಾರ್ಯ ನಿರ್ವಹಣೆಯನ್ನು ಪ್ರತಿಯೊಬ್ಬ ಉಪನ್ಯಾಸಕ ಅನುಸರಿಸಬೇಕು. ಒಂದು ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ೧೮೦ ದಿವಸಗಳು ಕಾರ್ಯ ನಿರ್ವಹಿಸಿರಬೇಕು. ಕಳೆದ ಸುಮಾರು ೨೦ ವರ್ಷಗಳಿಂದ ಈ ಕಾರ್ಯಭಾರವನ್ನು ಸರ್ಕಾರ ಹಾಗೂ ಉಪನ್ಯಾಸಕರು ಒಪ್ಪಿದ್ದು ಸರ್ಕಾರದ ನೇಮಕಾತಿಗಳು ಇದೇ ಕಾರ್ಯಭಾರದ ಆಧಾರದ ಮೇಲೆ ನಡೆದಿವೆ.
೨೦೦೯ರ ಯುಜಿಸಿ ಪರಿಷ್ಕೃತ ವೇತನ ಆದೇಶದಲ್ಲಿ ಸಹಪ್ರಾಧ್ಯಾಪಕರಿಗೆ ೧೪ ಗಂಟೆಗಳ ಬೋಧನಾ ಅವಧಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಅದನ್ನು ದೊಡ್ಡ ವಿಷಯವನ್ನಾಗಿ ಮಾಡದೇ ೧೬–೨೦ ಗಂಟೆಗಳ ಬೋಧನಾ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿ-ದ್ದಾರೆ (ರಾಜ್ಯದಲ್ಲಿ ೪,೦೦೦ ಸಹ ಪ್ರಾಧ್ಯಾಪಕರಿದ್ದಾರೆ). ಅನುದಾನರಹಿತ ಕಾಲೇಜುಗಳೂ ಇದೇ ಮಾನದಂಡದ ಮೇಲೆ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುತ್ತಿವೆ.
ಖಾಸಗಿ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಮೌಲ್ಯ–ನೀತಿ ಶಿಕ್ಷಣ ಹಾಗೂ ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿರುವ ವಿಷಯಗಳಾದ ಸಂವಿಧಾನ, ಮಾನವ ಹಕ್ಕುಗಳು, ಲಿಂಗ ಸಮಾನತೆ ಇಂತಹ ವಿಷಯಗಳ ಬಗ್ಗೆ ಕನಿಷ್ಠ ೨ ಗಂಟೆಗಳ ನೇರ ಬೋಧನೆ ನಡೆಸಲೇಬೇಕಾಗು-ತ್ತದೆ. ಅಂದರೆ ವಾಸ್ತವಿಕವಾಗಿ ಶಿಕ್ಷಕರು ೧೬–-೨೦ಕ್ಕೆ ಬದಲಾಗಿ ೧೮–೨೨ ಗಂಟೆಗಳ ಬೋಧನಾ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ನಾವು ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದೇವೆ. ಕಲಿಸುವಿಕೆ ಹಾಗೂ ಕಲಿಯುವಿಕೆ ಎರಡೂ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಗುಣಮಟ್ಟ ಹೆಚ್ಚಿಸುವ ಪ್ರಕ್ರಿಯೆಗಳಲ್ಲಿ ‘ನ್ಯಾಕ್’ ಸಂಸ್ಥೆಯಿಂದ ನಡೆಯುವ ಮೌಲ್ಯಮಾಪನವನ್ನು ಕಡ್ಡಾಯಗೊಳಿಸಲಾಗಿದೆ.
ಮಾಹಿತಿ ತಂತ್ರಜ್ಞಾನ, ಕೈಗಾರಿಕೋದ್ಯಮ ಮತ್ತು ಅಂತರರಾಷ್ಟ್ರೀಯ ಆವಿಷ್ಕಾರ -ಅವಶ್ಯಕತೆಗಳಿಗೆ ತಕ್ಕಂತೆ ಕಲಿಕೆ-–ಕಲಿಸುವಿಕೆ ಬದಲಾಗುವುದು ಅನಿವಾರ್ಯ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲಿಸುವುದು, -ಕಲಿಕೆ, -ಪರೀಕ್ಷಾ ವ್ಯವಸ್ಥೆ,- ಮೂಲ ಸೌಕರ್ಯಗಳು,- ಸಂಶೋಧನೆ, ಭಾಷಾ ಪ್ರಾವೀಣ್ಯ, ಉದ್ಯೋಗ ಆಧಾರಿತ ಕೌಶಲಗಳು, -ಶೈಕ್ಷಣಿಕ ಪೂರಕ ಚಟುವಟಿಕೆಗಳು-, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು-, ಸಾಮಾಜಿಕ ಜವಾಬ್ದಾರಿ,- ವಿದ್ಯಾರ್ಥಿ ಸಾಧನೆಗಳು,- ಉದ್ಯೋಗಾವಕಾಶ ಕಲ್ಪಿಸುವುದು-, ಆಡಳಿತಾತ್ಮಕ ಬದಲಾವಣೆಗಳು ಹೀಗೆ ಹತ್ತು ಹಲವು ರೀತಿಯಲ್ಲಿ ಉನ್ನತ ಶಿಕ್ಷಣ ಹೊಸ ರೂಪ, ಸ್ವರೂಪ ಪಡೆದುಕೊಂಡಿದೆ.
ಶಿಕ್ಷಕರನ್ನು ತರಗತಿಗಳಲ್ಲಿ ಬೋಧನೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅವರದು ಬಹುಮುಖಿ ಪಾತ್ರ. ಜೊತೆಗೆ ಸಂಶೋಧನೆ ಆಧಾರಿತ ಕಲಿಸುವಿಕೆ ಇಂದಿನ ಅಗತ್ಯ. ಹಾಗಾಗಿ ಶಿಕ್ಷಕರಿಗೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವುದು, ಪ್ರಕಟಿಸುವುದು ಅನಿವಾರ್ಯ. ವಾರದಲ್ಲಿ ವಿರಾಮಗಳನ್ನು ಹೊರತುಪಡಿಸಿ ಲಭ್ಯವಿರುವ ೨೮–-೩೦ ಗಂಟೆಗಳಲ್ಲಿ ೨೨–-೨೬ ಗಂಟೆಗಳನ್ನು ತರಗತಿಗಳಲ್ಲಿ ಕಳೆದರೆ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ? ವಿದ್ಯಾರ್ಥಿಗಳು ಯಾವ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯ, ಯಾವಾಗ ಗ್ರಂಥಾಲಯಕ್ಕೆ ಹೋಗುತ್ತಾರೆ, ಕ್ರೀಡಾ ಮೈದಾನವನ್ನು ಯಾವಾಗ ನೋಡಲು ಸಾಧ್ಯ? ಆರ್ಥಿಕ ಉಳಿತಾಯದ ದೃಷ್ಟಿಯಿಂದ ಏಕಮುಖವಾಗಿ ಸಾಗುತ್ತಿರುವವರಿಗೆ ಇದನ್ನೆಲ್ಲಾ ಹೇಗೆ ಅರ್ಥಮಾಡಿಸುವುದು? ವಿದ್ಯಾರ್ಥಿಗಳು ತರಗತಿಗಳ ಒಳಗೆ ಕಲಿಯುವುದಕ್ಕಿಂತ ಹೊರಗೆ ಕಲಿಯುವುದು ಹೆಚ್ಚು ಎನ್ನುವ ಮಾತಿದೆ.
ಕಲಿಯುವುದು-, ಕಲಿತದ್ದನ್ನು ಬದಲಾಯಿ-ಸುವುದು ಮತ್ತು ಹೊಸಕಲಿಕೆ ಉನ್ನತ ಶಿಕ್ಷಣದ ಧ್ಯೇಯೋದ್ದೇಶಗಳಲ್ಲಿ ಸೇರಿವೆ.
ಬೋಧನೆಯನ್ನು ಭೌತಿಕ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲ. ಅದೊಂದು ಬೌದ್ಧಿಕ ಪ್ರಕ್ರಿಯೆ. ಪ್ರತೀ ತರಗತಿಗೂ ವಿಷಯಾಧಾರಿತ ತಯಾರಿ ಬೇಕೇಬೇಕು. ಎಲ್ಲಾ ವಿದ್ಯಾರ್ಥಿಗಳಲ್ಲೂ ಸಮನಾದ ಕಲಿಯುವ ಆಸಕ್ತಿ ಕೂಡಾ ಇರುವುದಿಲ್ಲ. ಶಿಕ್ಷಕನಿಗೆ ಅತೀ ಪ್ರಯಾಸದ ಕೆಲಸ ಎಂದರೆ ಕಲಿಕೆ ವಾತಾವರಣ ನಿರ್ಮಿಸುವುದು. ೧೭–-೨೦ರ ಹರೆಯದ ಯುವಕರನ್ನು ಒಂದು ಶಿಸ್ತಿನ ಪರಿಧಿಗೆ ಒಳಪಡಿಸುವುದು ಸುಲಭದ ಮಾತಲ್ಲ. ಶಿಸ್ತು ಮೂಡಿಸುವುದೇ ಒಂದು ದೊಡ್ಡ ಸವಾಲು.
ಅದರಲ್ಲೂ ಹಲವು ತರಗತಿಗಳಲ್ಲಿ ೧೦೦-–೧೨೫ ವಿದ್ಯಾರ್ಥಿಗಳನ್ನು ನಿಭಾಯಿಸಿ ತರಗತಿಗಳಿಂದ ಹೊರಬರುವ ಶಿಕ್ಷಕನ ಮಾನಸಿಕ ಸ್ಥಿತಿಗೆ ಸ್ವಲ್ಪವಾದರೂ ಕನಿಕರ ತೋರಬೇಕು. ರಾಜ್ಯದಲ್ಲಿ ಅನುದಾನಿತ ಕಾಲೇಜುಗಳು ನೀಡಿರುವ ಸೇವೆಯನ್ನು ಸರ್ಕಾರ ಮರೆಯುತ್ತಿದೆ. ೪೫೦ಕ್ಕೂ ಹೆಚ್ಚಿನ ಸರ್ಕಾರಿ ಕಾಲೇಜುಗಳನ್ನು ಏಕಾಏಕಿಯಾಗಿ ಪ್ರಾರಂಭಿಸುವ ಮೊದಲು ಸರ್ಕಾರ ತನ್ನ ಧಾರಣಾ ಶಕ್ತಿಯನ್ನು ವಿಮರ್ಶಿಸಬೇಕಿತ್ತು. ಈಗ ಮೂಲ ಸೌಕರ್ಯಗಳು, ಅಗತ್ಯವಿರುವ ಶಿಕ್ಷಕರನ್ನು ನೇಮಿಸುವ ಜವಾಬ್ದಾರಿ ಎದುರಾದಾಗ ಅದರ ಅಗಾಧತೆ ಸರ್ಕಾರಕ್ಕೆ ದಿಗಿಲು ಉಂಟು ಮಾಡುತ್ತಿದೆ.
ಸುಲಭದ ಉಪಾಯ ಎಂದರೆ ಕಾಗದದ ಲೆಕ್ಕಾಚಾರ ಹಾಕಿ ಅವಾಸ್ತವಿಕವಾಗಿ, ಅವೈಜ್ಞಾನಿಕವಾಗಿ ಕಾರ್ಯಭಾರವನ್ನು ಶೇ ೩೩ರಷ್ಟು ಹೆಚ್ಚಿಸುವುದು! ಹೆಚ್ಚುವರಿ ಶಿಕ್ಷಕರು ಎನ್ನುವ ಹೆಸರಿನಲ್ಲಿ ಖಾಸಗಿ ಅನುದಾನಿತ ಕಾಲೇಜುಗಳ ಉಪನ್ಯಾಸಕರ ಸೇವೆಯನ್ನು ಸರ್ಕಾರಿ ಕಾಲೇಜುಗಳಿಗೆ ಉಪಯೋಗಿಸುವುದು. ಇದೇ ಸರ್ಕಾರದ ನೀತಿಯಾಗಿದ್ದರೆ ಅದು ಶೈಕ್ಷಣಿಕ ನೀತಿ ಅಲ್ಲ, ಆರ್ಥಿಕ ಮಿತವ್ಯಯ ನೀತಿ ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.