ಬಿ.ಬಿ.ಎಂ ಪದವಿ ಗಳಿಸಿ ಎಂ.ಕಾಂ ಸ್ನಾತ-ಕೋತ್ತರ ಪದವಿ ಪಡೆದು, ಯುಜಿಸಿ-– ಎನ್.ಇ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರ ಘೋಷಿಸಿರುವ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ತಮಗೂ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದ ಅನೇಕ ಪ್ರತಿಭಾವಂತ ಯುವಜನರ ಕನಸುಗಳು ನುಚ್ಚುನೂರಾಗಿವೆ.
ಆಶ್ಚರ್ಯವೆಂದರೆ ಅವರಿಗೆ ಬಿ.ಕಾಂ,- ಬಿ.ಬಿ.ಎಂ ಎರಡೂ ಪದವಿ ತರಗತಿಗಳಿಗೆ ಉಪನ್ಯಾಸಕರಾಗುವ ಅರ್ಹತೆ ಇಲ್ಲ. ಇವರ ಅಳಲನ್ನು ಕೇಳುವವರು ಯಾರೂ ಇಲ್ಲ. ಸಂವೇದನಾಶೀಲ ಆಗಬೇಕಾಗಿದ್ದ ಸರ್ಕಾರ, ತಾಂತ್ರಿಕ ಕಾರಣ ನೀಡಿ ಜಾರಿಕೊಳ್ಳುತ್ತಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಪರಿಷತ್ ಎನ್ನುವ ಸಂಸ್ಥೆ ಇದೆ. ಉನ್ನತ ಶಿಕ್ಷಣದ ನೀತಿ ರೂಪಿಸುವಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದು ಇದರ ಮೂಲ ಉದ್ದೇಶ.
ಪರಿಷತ್‌ನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಸದಸ್ಯರಾಗಿದ್ದಾರೆ. ವಿಪರ್ಯಾಸ ಎಂದರೆ ಎಲ್ಲ ವಿಶ್ವವಿದ್ಯಾಲಯಗಳು ಬಿ.ಬಿ.ಎಂ ಪದವಿ ಪಡೆದವರಿಗೆ ಎಂ.ಕಾಂ ಪದವಿಗೆ ಪ್ರವೇಶಾತಿ ಅವಕಾಶ ನೀಡಿವೆ. ಆದರೆ ಅದೇ ಕುಲಪತಿಗಳು ಬಿ.ಬಿ.ಎಂ ಪದವಿ ಪಡೆದು ಎಂ.ಕಾಂ ಪದವಿ ಗಳಿಸಿದವರು ಬಿ.ಕಾಂ, ಬಿ.ಬಿ.ಎಂ ಎರಡೂ ಕೋರ್ಸ್‌ಗಳಿಗೆ ಪಾಠ ಮಾಡುವ ಅರ್ಹತೆ ಇಲ್ಲ ಎನ್ನುವುದನ್ನು ಅನುಮೋದಿಸುತ್ತಾರೆ.
ಹಾಗಾದರೆ, ಬಿ.ಬಿ.ಎಂ ಪದವೀಧರರಿಗೆ ಯಾವ ಪುರುಷಾರ್ಥಕ್ಕಾಗಿ ಎಂ.ಕಾಂ ಪ್ರವೇಶಾತಿ ನೀಡಲಾಗುತ್ತಿದೆ? ಪ್ರವೇಶಾತಿ ನೀಡುವಾಗ ಮುಂದೆ ನಿಮಗೆ ಉಪನ್ಯಾಸಕರಾಗುವ ಅರ್ಹತೆ ಇಲ್ಲ ಎಂದು ಯಾವುದಾದರೂ ವಿಶ್ವವಿದ್ಯಾಲಯ ಹೇಳಿದೆಯೇ? ಶಿಕ್ಷಕ ವೃತ್ತಿ ಒಂದು ಅಪೂರ್ವ ಅವಕಾಶ. ವಿ.ವಿ.ಗಳಲ್ಲಿ, ಪದವಿ, ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲ ವಿಜ್ಞಾನ, ಮಾನವಿಕ ಹಾಗೂ ವಾಣಿಜ್ಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಉಪನ್ಯಾಸಕ–ಸಂಶೋಧನೆ ವೃತ್ತಿಯಲ್ಲಿ ಹೆಚ್ಚು ಅವಕಾಶ ಹೊಂದಿದ್ದಾರೆ ಎನ್ನುವುದು ಸಾಮಾನ್ಯ ಜ್ಞಾನ.
ಬಿ.ಬಿ.ಎಂ ಪದವಿ ಪಡೆದು, ಎಂ.ಕಾಂ ಪದವಿ ಪಡೆದವರು ಉಪ ನ್ಯಾಸಕರಾಗುವ ಅರ್ಹತೆ ಇಲ್ಲ ಎಂದು ಹೇಳಿದರೆ ಇದು ಕೇವಲ ಸರ್ಕಾರಿ ಆದೇಶಗಳಿಗೆ, ನೇಮಕಾತಿಗಳಿಗೆ ಮಾತ್ರ ಸೀಮಿತವಲ್ಲ. ಈಗಾಗಲೇ ರಾಜ್ಯದ ಸಾವಿರಾರು ಖಾಸಗಿ ಕಾಲೇಜುಗಳಲ್ಲಿ ಆಡಳಿತ ಮಂಡಳಿಯಿಂದ ನೇಮಕಾತಿ ಹೊಂದಿ ಕೆಲಸ ನಿರ್ವಹಿಸುತ್ತಿರುವ ಇಂತಹ ಉಪನ್ಯಾಸಕರ ಗತಿ ಏನು?
ಸಂಬಂಧಪಟ್ಟ ಸ್ನಾತಕೋತ್ತರ ವಿಷಯದಲ್ಲಿ ನಿಗದಿಪಡಿಸಿದ ಕನಿಷ್ಠ ಅಂಕ ಗಳಿಸಿ ಎನ್‌ಇಟಿ, ಎಸ್‌ಎಲ್‌ಇಟಿಯಲ್ಲಿ ಪರೀಕ್ಷೆ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಹರು ಎಂದು ಯುಜಿಸಿ ಸ್ಪಷ್ಟವಾಗಿ ಹೇಳಿರುವಾಗ, ಅರ್ಥವಿಲ್ಲದ ಹೊಸ ವ್ಯಾಖ್ಯಾನದ ಅಗತ್ಯವೇನಿತ್ತು?
ಬಿ.ಬಿ.ಎಂ ಬಿ.ಬಿ.ಎ ಪದವಿ ತರಗತಿಗಳನ್ನು ಆರಂಭಿಸುವ ಸಮಯದಲ್ಲಿ ವ್ಯವಹಾರೋದ್ಯಮ ಶಾಸ್ತ್ರದಲ್ಲಿ ಕೈಗಾರಿಕೆಗಳು ಹಾಗೂ ಕಾರ್ಪೊರೇಟ್ ಉದ್ಯಮದಲ್ಲಿ ಹೆಚ್ಚಿನ ಅವಕಾಶಗಳು ಸಿಗುವ ಹಾಗೆ ನವೀನ ರೀತಿಯ ವೃತ್ತಿಪರ ಪದವಿಯನ್ನು ಹುಟ್ಟುಹಾಕುವ ಗುರಿ ಅಲ್ಲಿತ್ತು.
ಸೆಮಿಸ್ಟರ್ ಪದ್ಧತಿಯಲ್ಲಿ ಉಳಿದ ಕೋರ್ಸ್‌ಗಿಂತ ಭಿನ್ನವಾಗಿ ಪಠ್ಯಕ್ರಮವನ್ನು ರೂಪಿಸಿ ಬಿ.ಬಿ.ಎಂ ಪದವಿ ಪಡೆದವರು ಎಂ.ಬಿ.ಎ ಪದವಿ ಗಳಿಸಿ ಉದ್ಯೋಗ ದೊರಕಿಸಿಕೊಳ್ಳುವ ದೃಷ್ಟಿ ಅಲ್ಲಿತ್ತಾದರೂ ಕಾಲಕ್ರಮೇಣ ಎಂ.ಬಿ.ಎ ಎಂಬ ಸಾಮಾಜಿಕ ಪ್ರತಿಷ್ಠೆಯಿರುವ ಕೋರ್ಸ್ ಗಲ್ಲಿಗಲ್ಲಿಗಳಲ್ಲಿ ಪ್ರಾರಂಭವಾದಾಗ ಯಾವುದೇ ಪದವೀಧರರು ಅರ್ಹರು ಎನ್ನುವ ಲಾಬಿ ಸದ್ದಿಲ್ಲದೆ ಅದರ ವ್ಯವಹಾರ ಮುಗಿಸಿತ್ತು. ಅಂದಿನಿಂದಲೇ ಬಿ.ಬಿ.ಎಂ ಮಹತ್ವ ಕಳೆದುಕೊಳ್ಳುತ್ತಾ ಬಂದಿದೆ.
ರಾಜ್ಯದಲ್ಲಿ ಬಿ.ಬಿ.ಎಂಗೆ ಪ್ರವೇಶ ಪಡೆಯುವವರ ಪ್ರಮಾಣವನ್ನು ಅವಲೋಕಿಸಿದಾಗ ಅದಕ್ಕೆ ವರ್ಷ ವರ್ಷಕ್ಕೂ ಬೇಡಿಕೆ ಕಡಿಮೆಯಾಗಿ, ಬಿ.ಕಾಂ ಕೋರ್ಸಿಗೆ ಬೇಡಿಕೆ ಹೆಚ್ಚುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಿ.ಕಾಂ, -ಬಿ.ಬಿ.ಎಂ ಕೋರ್ಸ್‌ಗಳ ಪಠ್ಯಕ್ರಮ ಗಳನ್ನು ಹೋಲಿಸಿದಾಗ ಹೆಚ್ಚಿನ ಸಾಮ್ಯತೆ ಇರುವುದನ್ನು ಗಮನಿಸಬೇಕು. ಇದೇ ರೀತಿ ಎಂಜಿನಿಯರಿಂಗ್ ಪದವಿಯಲ್ಲಿ ಅರ್ಹತಾ ಅಂಕವನ್ನು ಶೇ ೫೦ರಿಂದ ಶೇ ೩೫ಕ್ಕೆ ಇಳಿಸಿಕೊಂಡಿರುವುದು ನಮ್ಮ ಕಣ್ಣೆದುರಿಗೇ ಇದೆ.
ಬಿ.ಇಡಿ ಕೋರ್ಸಿನ ಹಣೆಬರಹವೂ ಹೀಗೆಯೇ. ಈಗ ವಾಣಿಜ್ಯಶಾಸ್ತ್ರ ಪದವೀಧರರಿಗೂ ಅರ್ಹತೆ ಬಂದಿದೆ. ಬಿ.ಬಿ.ಎಂ ಪದವಿ ಪಡೆದು ಎಂ.ಕಾಂ ಪದವಿ ಪಡೆದ ಅಭ್ಯರ್ಥಿಗಳು ಬಿ.ಬಿ.ಎಂ, ಬಿ.ಕಾಂ ಕೋರ್ಸಿಗೂ ಪಾಠ ಮಾಡುವ ಹಾಗಿಲ್ಲ ಎಂದು ಹೇಳುವ ತಜ್ಞ ಸಮಿತಿ ಇನ್ನು ಮುಂದೆ ಬಿ.ಬಿ.ಎಂ ಪದವಿ ಪಡೆದವರು ಮಾತ್ರ ಎಂ.ಬಿ.ಎ ಕೋರ್ಸಿಗೆ ಅರ್ಹರು ಎಂದು ಹೇಳುವ ಧೈರ್ಯ ಮಾಡುತ್ತದೆಯೇ?
ಶಿಕ್ಷಣ ಕ್ಷೇತ್ರದಲ್ಲಿ ಲಾಬಿಗಳು ಕೆಲಸ ಮಾಡಲು ಪ್ರಾರಂಭಿಸಿವೆ.
ಎಂ.ಕಾಂ ಪದವಿ ಪಡೆದು ಪಿಎಚ್.ಡಿ ಪದವಿ ಗಳಿಸಿದ್ದರೂ ಎಂ.ಬಿ.ಎ ಪದವಿಗೆ ಶೈಕ್ಷಣಿಕ, ಆಡಳಿತಾತ್ಮಕ ಅರ್ಹತೆ ಇಲ್ಲ ಎನ್ನುವ ಮತ್ತೊಂದು ಲಾಬಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಇಂತಹ ದಂಡಪ್ರಯೋಗ ಕೇವಲ ಬಿ.ಬಿ.ಎಂ,- ಎಂ.ಕಾಂಗೆ ಮಾತ್ರ ಏಕೆ? ಎಷ್ಟೋ ಸ್ನಾತಕೋತ್ತರ ಪದವಿಗಳಲ್ಲಿ ಪದವಿ ವಿಷಯಕ್ಕೂ, ಸ್ನಾತಕೋತ್ತರ ಪದವಿಗೂ ನೇರ ಸಂಬಂಧ ಇಲ್ಲ. ಉದಾಹರಣೆಗೆ ಯಾವುದೇ ಪದವಿ ಪಡೆದವರು ಎಂ.ಎಸ್.ಡಬ್ಲ್ಯುಗೆ ಪ್ರವೇಶಾತಿ ಪಡೆಯಬಹುದು.
ಅವರಿಗೆ ಬಿ.ಎಸ್.ಡಬ್ಲ್ಯು ಅಥವಾ ಎಂ.ಎಸ್. ಡಬ್ಲ್ಯು ಕೋರ್ಸಿಗೆ ಪಾಠ ಮಾಡುವ ಅರ್ಹತೆ ಇಲ್ಲ ಎಂದು ಹೇಳಲಾಗುತ್ತದೆಯೇ? ಅದೇ ರೀತಿ ಇಂಗ್ಲಿಷ್ ಭಾಷೆಯನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ (ಮೈನರ್) ಅಧ್ಯಯನ ಮಾಡಿದವರು ಐಚ್ಛಿಕ ಭಾಷೆಯಾಗಿ (ಮೇಜರ್) ಅಧ್ಯಯನ ಮಾಡದಿದ್ದರೂ ಇಂಗ್ಲಿಷ್ ಎಂ.ಎ ಪದವಿ ಪಡೆಯಬಹುದು. ಅಂದರೆ ಅಂತಹವರಿಗೆ ಇಂಗ್ಲಿಷ್ ಪಾಠ ಮಾಡುವ ಅರ್ಹತೆ ಇಲ್ಲ ಎಂದು ಅರ್ಥವೇ?
ಎಷ್ಟೋ ಆನ್ವಯಿಕ ವಿಜ್ಞಾನ, ಮಾನವಿಕ ವಿಷಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಷಯಗಳಲ್ಲಿ ವ್ಯತ್ಯಾಸಗಳು ಕಂಡು ಬರಬಹುದು. ರಾಜ್ಯದ ಒಂದು ವಿಶ್ವ ವಿದ್ಯಾಲಯದಲ್ಲಿ ಯಾವುದೇ ಮೂರು ವಿಜ್ಞಾನ ವಿಷಯಗಳನ್ನು ಪಾಸು ಮಾಡಿದ ವಿದ್ಯಾರ್ಥಿ, ಸಾಗರ ಭೂಗರ್ಭ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದು. ಸಾಮಾನ್ಯವಾಗಿ ಹೆಚ್ಚಿನ ವಿಷಯಗಳಲ್ಲಿ ಯುಜಿಸಿ-– ಎನ್.ಇ.ಟಿ ಬರೆಯಲು ಅವಕಾಶ ನೀಡಲಾಗಿದೆ.
ಇದೇ ರೀತಿ ರಾಜ್ಯ ಮಟ್ಟದ ಎಸ್.ಎಲ್.ಇ.ಟಿ/ ಎಸ್.ಇ.ಟಿ ಪರೀಕ್ಷೆಗಳಲ್ಲಿ ಅವಕಾಶ ನೀಡಲಾಗಿದೆ. ಇವೆಲ್ಲಾ ಶಿಕ್ಷಕ ವೃತ್ತಿಗೆ ಅರ್ಹತೆ ಪಡೆಯುವ ಪರೀಕ್ಷೆಗಳು. ಇಂತಹ ಪರೀಕ್ಷೆಗಳನ್ನು ಪಾಸು ಮಾಡುವುದು ಸುಲಭವಲ್ಲ. ಎಷ್ಟೋ ಜನರು ಅನೇಕ ವರ್ಷಗಳಿಂದ ಪಾಸು ಮಾಡಲು ಪ್ರಯಾಸ ಪಡುತ್ತಿದ್ದಾರೆ. ಪಾಸು ಮಾಡಿದವರು ವಿಷಯ ಪರಿಣತರು ಎಂದು ಅರ್ಥ. ಅದರಲ್ಲೂ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಗಳನ್ನು ಪಾಸು ಮಾಡಿದ ಪ್ರತಿಭಾವಂತರಿಗೆ ಉಪನ್ಯಾಸಕ ವೃತ್ತಿಗೆ ಅರ್ಹತೆ ಇಲ್ಲ ಎಂದು ಹೇಳಿದರೆ ಹೀಗೆ ಹೇಳಿದವರ ಬಗ್ಗೆ ಕರುಣೆ ಮೂಡುತ್ತದೆ.
ಪರಿಷತ್ ಈ ವಿಷಯವನ್ನು ಪುನರ್ ವಿಮರ್ಶಿಸಲೇಬೇಕು. ಉನ್ನತ ಶಿಕ್ಷಣ ಸಚಿವರು ಮಧ್ಯ ಪ್ರವೇಶಿಸಬೇಕು. ತಾಂತ್ರಿಕ ಸಬೂಬಿಗೆ ಅರ್ಥವಿಲ್ಲ. ಒಂದು ವೇಳೆ ಪದವಿಯಲ್ಲಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯಗಳು ಒಂದೇ ರೀತಿಯಾಗಿರಬೇಕು ಎನ್ನುವ ವಾದಕ್ಕೆ ಅಂಟಿಕೊಂಡರೆ, ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಮೊದಲು ಸ್ಪಷ್ಟ ಮಾಹಿತಿ ನೀಡಬೇಕು. ಅದೇ ರೀತಿ ಎಲ್ಲ ವಿ.ವಿಗಳು ಇಂತಹ ಕ್ರಮ ಅನುಸರಿಸಲಿ. ಆಗ ಎಷ್ಟೋ ಕೋರ್ಸ್‌ಗಳನ್ನು ಮುಚ್ಚಬೇಕಾಗುತ್ತದೆ.
ಈಗ ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಎಲ್ಲರೂ ಪ್ರಯತ್ನಿಸಬೇಕು. ತಮ್ಮ ದನಿ ಎತ್ತಲೇಬೇಕು. ಶಿಕ್ಷಕ ಸಂಘಟನೆಗಳು ಈ ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಗೌರವ ಹೆಚ್ಚುತ್ತದೆ. ಸೇವಾ ಸೌಲಭ್ಯಗಳು ಆದ್ಯತೆ ಎನಿಸಿದರೂ ಈಗಾಗಲೇ ಉಪನ್ಯಾಸಕ ವೃತ್ತಿಯಲ್ಲಿರುವ ಸಾವಿರಾರು ಯುವ ಉಪನ್ಯಾಸಕರ ಪರವಾಗಿ ಮಾತನಾಡುವುದು ಆದ್ಯತೆಯಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.