ಕೇಂದ್ರ ಸರ್ಕಾರ ಈ ವರ್ಷ ಕರ್ನಾಟಕಕ್ಕೆ ಉನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿಯನ್ನು ನೀಡಿರುವುದು ಒಂದು ಚಾರಿತ್ರಿಕ ಸಂಗತಿ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕ್ರಾಂತಿ ಸಾಧಿಸಿರುವ ರಾಜ್ಯಕ್ಕೆ ಹಿಂದೆಯೇ ಐಐಟಿ ಬರಬೇಕಿತ್ತು. ತಡವಾದರೂ ಸರಿ ಈಗ ಅದು ನಮಗೆ ದೊರಕಿದೆ. ಅದರ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ.
ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ದಿಟ್ಟ ಹೆಜ್ಜೆ. ಆದರೆ ಐಐಟಿ ಬಂದು ಬಿಟ್ಟಾಕ್ಷಣ ರಾಜ್ಯ ಅಥವಾ ಅದು ಸ್ಥಾಪನೆಗೊಂಡ ಪ್ರದೇಶ ಅಭಿವೃದ್ಧಿ ಹೊಂದಿಬಿಡುವುದಿಲ್ಲ. ವಾಸ್ತವದಲ್ಲಿ ರಾಜ್ಯವು ಕೆಲವು ಪೂರಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಐಐಟಿಗೆ ಪ್ರವೇಶ ಪಡೆಯುವವರಲ್ಲಿ ರಾಜ್ಯದ ಮಕ್ಕಳಿಗೆ ಹೆಚ್ಚು ಅವಕಾಶ ದೊರೆಯುವುದು ದೂರದ ಮಾತು. ನಮ್ಮ ರಾಜ್ಯಕ್ಕೆ ಬಂದಿರುವ ಐಐಟಿಯ ಒಂದು ಆಯಾಮ ಇದಾಗಿದೆ. ಅದಕ್ಕೆ ಮತ್ತೊಂದು ಬಹುಮುಖ್ಯ ಆಯಾಮವಿದೆ.
ಈಗ ರಾಜ್ಯದಲ್ಲಿ ಅದರ ಸ್ಥಾಪನೆಗೆ ಆಯ್ಕೆ ಮಾಡಿರುವ ಸ್ಥಳದ ಬಗ್ಗೆ ವಿವಾದ ಉಂಟಾಗಿದೆ. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ ಅದು ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಾಗಿತ್ತು ಎಂಬ ಕಾರಣಕ್ಕೆ ಜಿಲ್ಲೆಯ ಜನ ಹೋರಾಟದ ದಾರಿ ಹಿಡಿದಿದ್ದಾರೆ. ಈ ಕೆಲಸವನ್ನು ಅವರು ಐಐಟಿಗೆ ಸ್ಥಳ ಆಯ್ಕೆ ಮಾಡುವ ಮೊದಲೇ ಮಾಡಬೇಕಾಗಿತ್ತು. ಈಗ ಐಐಟಿಗೆ ಆಯ್ಕೆ ಮಾಡಿರುವ ಧಾರವಾಡ ಜಿಲ್ಲೆಯು ರಾಜ್ಯದಲ್ಲಿನ 30 ಜಿಲ್ಲೆಗಳ ಪೈಕಿ 2014ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಆರನೆಯ ಸ್ಥಾನದಲ್ಲಿದೆ.
ಅಲ್ಲಿ ಈಗಾಗಲೆ ಎರಡು ವಿಶ್ವವಿದ್ಯಾಲಯಗಳಿವೆ, ಉನ್ನತ ಸಂಶೋಧನಾ ಸಂಸ್ಥೆಗಳಿವೆ (ಉದಾ: ಸಿಎಮ್‌ಡಿಆರ್). ರಾಜ್ಯದಲ್ಲಿನ ಶೈಕ್ಷಣಿಕ ಸೂಚ್ಯಂಕದಲ್ಲಿ ಅದರ ಸ್ಥಾನ ಮೂರನೆಯದಾಗಿದೆ. ಸಾಕ್ಷರತೆಯಲ್ಲಿ 2011ರಲ್ಲಿ ಐದನೆಯ ಸ್ಥಾನವನ್ನು ಪಡೆದಿದೆ. ಜಿಲ್ಲೆಯ ಒಟ್ಟು ದುಡಿಮೆಗಾರರಲ್ಲಿ ಶೇ 60ರಷ್ಟು ಮಂದಿ ಕೃಷಿಯೇತರ ದುಡಿಮೆಯಲ್ಲಿ ನಿರತರಾಗಿದ್ದಾರೆ. ಉಚ್ಚ ನ್ಯಾಯಾಲಯದ ಪೀಠ ಅಲ್ಲಿದೆ. ಸರ್ಕಾರ ಖಾಸಗಿ ಸಂಸ್ಥೆಯಂತೆ ಕೆಲಸ ಮಾಡಬಾರದು. ಹೀಗೆ ಈಗಾಗಲೆ ಅಭಿವೃದ್ಧಿಯಲ್ಲಿ ಸಮೃದ್ಧತೆ ಅನುಭವಿಸುತ್ತಿರುವ ಸ್ಥಳಕ್ಕೆ ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಯನ್ನು ನೀಡಿರುವುದು ಸಮಾನತೆಯ ದೃಷ್ಟಿಯಿಂದ (ಅದು ಪ್ರಾದೇಶಿಕ, ವರಮಾನ, ಲಿಂಗ ಸಂಬಂಧಿ, ಶೈಕ್ಷಣಿಕ- ಹೀಗೆ ಎಲ್ಲ ಬಗೆಯ ಸಮಾನತೆ ದೃಷ್ಟಿಯಿಂದ) ರಾಜಕೀಯ ಮುತ್ಸದ್ದಿತನದ ತೀರ್ಮಾನದಂತೆ ಕಾಣುವುದಿಲ್ಲ.
ಸರ್ಕಾರ ಬಂಡವಾಳಶಾಹಿಯೆ? ಅಲ್ಲ ತಾನೆ! ರಾಯಚೂರಿನಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸುವುದಕ್ಕೆ ಎನ್.ಆರ್.ನಾರಾಯಣಮೂರ್ತಿ ಅವರೊ, ಮಹೀಂದ್ರ-ಮಹೀಂದ್ರದವರೊ ನಮಗೆ ನೀರಿಲ್ಲ, ರಸ್ತೆಗಳಿಲ್ಲ, ವಿದ್ಯುತ್‌ನಂಥ ಮೂಲಸೌಲಭ್ಯಗಳಿಲ್ಲ, ವಿಮಾನ ನಿಲ್ದಾಣವಿಲ್ಲ ಮುಂತಾಗಿ ಕಿರಿಕಿರಿ ಮಾಡಿದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಸರ್ಕಾರ ಹೀಗೆ ಬಡವರನ್ನು, ಬಡ ಪ್ರದೇಶಗಳನ್ನು, ಹಸಿವೆಯಿಂದ ನರಳುತ್ತಿರುವವರನ್ನು ಕೈಬಿಟ್ಟರೆ ಅವು ಬೆಳೆಯುವುದು ಹೇಗೆ?
ಸಮಾನತೆಯನ್ನು ಸಹಜವಾಗಿ ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಅಲ್ಲಿ ಸಂಘರ್ಷವಿರುತ್ತದೆ. ಉಳ್ಳವರು ಸರಳವಾಗಿ ಯಾವುದನ್ನೂ ಬಿಟ್ಟುಕೊಡಲು ಸಿದ್ಧರಿರುವುದಿಲ್ಲ. ಉಳಿದವರ ಅಭಿವೃದ್ಧಿಗಾಗಿ ಉಳ್ಳವರಿಂದ ಕೆಲವನ್ನು ಕಿತ್ತುಕೊಳ್ಳಬೇಕಾಗುತ್ತದೆ. ಐಐಟಿಯನ್ನು ಧಾರವಾಡದಿಂದ ಕಿತ್ತುಕೊಂಡು ರಾಯಚೂರಿಗೆ ಸಮಾನತೆ ಮೌಲ್ಯದ ದೃಷ್ಟಿಯಿಂದ ನೀಡುವ ಬಗ್ಗೆ ನಾವು ಪುನರಾಲೋಚಿಸಬೇಕು. ಶ್ರೀಕೃಷ್ಣ ಮಹಾಭಾರತದಲ್ಲಿ ಉಳ್ಳವರ ಪರ ನಿಲ್ಲಲಿಲ್ಲ. ದುರ್ಬಲರ ಪರವಾಗಿ ನಿಲ್ಲುವುದು ರಾಜಕೀಯ ಮುತ್ಸದ್ದಿತನ. ಸರ್ಕಾರ ಉಳ್ಳವರ ಪರ ನಿಂತರೆ ಉಳಿದವರನ್ನು ಕಾಯುವವರು ಯಾರು? ಶ್ರೀಕೃಷ್ಣ ನೀತಿಯನ್ನು ಅನುಸರಿಸುವುದಾದರೆ, ಐಐಟಿಯನ್ನು ರಾಯಚೂರಿಗೆ ನೀಡಬೇಕು.
ರಾಜ್ಯದ 30 ಜಿಲ್ಲೆಗಳಲ್ಲಿ 2014ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಯಚೂರು ಜಿಲ್ಲೆ ಕಟ್ಟಕಡೆಯ 30ನೇ ಸ್ಥಾನದಲ್ಲಿದೆ. ಶೈಕ್ಷಣಿಕ ಅಭಿವೃದ್ಧಿ ಸೂಚ್ಯಂಕದಲ್ಲಿ ಅದು 29ನೇ ಸ್ಥಾನದಲ್ಲಿದೆ. ಸಾಕ್ಷರತಾ ಪ್ರಮಾಣದಲ್ಲಿ ಅದರ ಸ್ಥಾನ 29ನೆಯದು. ಈ ಜಿಲ್ಲೆಯಲ್ಲಿನ ಒಟ್ಟು ದುಡಿಮೆಗಾರರಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವವರ ಪ್ರಮಾಣ ಶೇ 63. ಇಲ್ಲಿಗೆ ಐಐಟಿ ಬಂದರೆ ಸ್ವಲ್ಪಮಟ್ಟಿಗಾದರೂ ಕೃಷಿಯ ಮೇಲಿನ ಒತ್ತಡ ಕಡಿಮೆಯಾಗಬಹುದು. ಅಲ್ಲಿ ಗ್ರೂಪ್ ಸಿ ಮತ್ತು ಡಿ ಉದ್ಯೋಗಗಳು, ಪೂರಕ ಕೆಲಸ-ಕಾರ್ಯಗಳು ಜಿಲ್ಲೆಯ ಅನಕ್ಷರಸ್ಥ- ಗ್ರಾಮೀಣವಾಸಿ ಬಡವರಿಗೆ, ಮಹಿಳೆಯರಿಗೆ ದೊರೆಯಬಹುದು.
ಈ ಜಿಲ್ಲೆಯಲ್ಲಿ ಗ್ರಾಮೀಣವಾಸಿಗಳ ಪ್ರಮಾಣ 2001ರಲ್ಲಿ ಶೇ 74.80ರಷ್ಟಿದ್ದುದು 2011ರಲ್ಲಿ ಶೇ 74.58ಕ್ಕಿಳಿದಿದೆ. ನಿಜಕ್ಕೂ ಇಲ್ಲಿ ಕಳೆದ ದಶಕದಲ್ಲಿ ಏನೇನೂ ಬದಲಾವಣೆ ಆಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣವಾಸಿಗಳ ಪ್ರಮಾಣ 2011ರಲ್ಲಿ ಕೇವಲ ಶೇ 43.18. ಅಂದರೆ ಆ ಜಿಲ್ಲೆಯ ಅಭಿವೃದ್ಧಿ ಮಟ್ಟವನ್ನು ರಾಯಚೂರು ಮುಟ್ಟಬೇಕೆಂದರೆ ಇನ್ನು ಅದೆಷ್ಟು ದಶಕಗಳು ಬೇಕೋ!
ನಂಜುಂಡಪ್ಪ ಸಮಿತಿ ವರದಿಯು ಕಲಬುರ್ಗಿಗೆ ಕೇಂದ್ರೀಯ ವಿಶ್ವವಿದ್ಯಾಲಯವನ್ನು (ಅದು ಈಗಾಗಲೆ ಸ್ಥಾಪನೆಯಾಗಿದೆ), ರಾಯಚೂರಿಗೆ ಐಐಟಿಯನ್ನು ಮತ್ತು ಹುಬ್ಬಳ್ಳಿ- ಧಾರವಾಡಕ್ಕೆ ಐಐಎಮ್ ಸ್ಥಾಪಿಸಲು ಶಿಫಾರಸು ಮಾಡಿದೆ. ಐಐಟಿ/ ಐಐಎಂಗಳಲ್ಲಿ ಕೇಂದ್ರ ಸರ್ಕಾರ ಮೊದಲು ಐಐಟಿಯನ್ನು ರಾಜ್ಯಕ್ಕೆ ನೀಡಿದೆ. ಆದ್ಯತೆಯ ದೃಷ್ಟಿಯಿಂದ ಅದು ರಾಯಚೂರಿಗೆ ಸೇರಬೇಕು. ಮುಂದೆ ಕೇಂದ್ರ ನೀಡುವ ಐಐಎಂ ಧಾರವಾಡಕ್ಕೇ ದೊರೆಯುತ್ತದೆ. ಆದ್ಯತೆಯ ಸೂತ್ರವನ್ನು ಇಲ್ಲಿ ಪಾಲಿಸಿಲ್ಲ. ಆದ್ಯತೆಯೆಂದರೆ ಯಾವುದು ಮೊದಲು, ಯಾವುದು ನಂತರ ಎನ್ನುವ ವಿವೇಚನೆ. ನಂಜುಂಡಪ್ಪ ಸಮಿತಿಯ ಶಿಫಾರಸು ಪಾಲನೆಯಾಗಿಲ್ಲ. ಈ ಸಮಿತಿಯ ಪ್ರಕಾರ ರಾಜ್ಯದ ಒಟ್ಟು ಹಿಂದುಳಿದಿರುವಿಕೆಯಲ್ಲಿ ಉತ್ತರ ಕರ್ನಾಟಕದ ಪಾಲು ಶೇ 60. ಅದರಲ್ಲಿ ಕಲಬುರ್ಗಿ ವಿಭಾಗದ ಪಾಲು ಶೇ 40.
ಈಗಲೂ ಕಾಲ ಮಿಂಚಿಲ್ಲ. ರಾಜ್ಯದ ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಮುತ್ಸದ್ದಿತನವನ್ನು ಪ್ರದರ್ಶಿಸಬೇಕು. ಕ್ಲೀಷೆಯಾದರೂ ಸರಿ, ನಮ್ಮ ರಾಜಕಾರಣಿಗಳು ಮುಂದಿನ ಚುನಾವಣೆ ಬಗ್ಗೆ ಯೋಚಿಸುವುದಕ್ಕೆ ಪ್ರತಿಯಾಗಿ ಮುಂದಿನ ತಲೆಮಾರಿನ ಬಗ್ಗೆ ಯೋಚಿಸಬೇಕು. ಐಐಟಿ ಅಂದರೆ ಸುಮ್ಮನೆ ಅಲ್ಲ. ಅದು ಒಂದು ಸಾವಿರ ಕೋಟಿ ರೂಪಾಯಿಗೂ ಮೀರಿದ ಹೂಡಿಕೆಯ ಸಂಗತಿ. ಐಐಟಿ ಬಂದುಬಿಟ್ಟರೆ ರಾಯಚೂರು ಜಿಲ್ಲೆಯ ಜನರ ಭಾಗ್ಯದ ಬಾಗಿಲು ತೆರೆದು ಬಿಡುತ್ತದೆ ಎಂದು ಭಾವಿಸಿದ್ದರೆ ಅದು ತಪ್ಪು. ಆದರೆ ಅದು ಜಿಲ್ಲೆಯಲ್ಲಿ ರವಷ್ಟಾದರೂ ಬದಲಾವಣೆ ತರುತ್ತದೆ ಅನ್ನುವ ಆಶಾ ಭಾವನೆ ಇಟ್ಟುಕೊಳ್ಳುವುದರಲ್ಲಿ ನಷ್ಟವೇನಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.