ADVERTISEMENT

ಒತ್ತಡದೆದುರು ಮಂಡಿಯೂರಿರುವ ಸರ್ಕಾರ

ವಾಸುದೇವ ಶರ್ಮಾ ಎನ್.ವಿ.
Published 15 ಜೂನ್ 2014, 19:30 IST
Last Updated 15 ಜೂನ್ 2014, 19:30 IST

ತಮ್ಮ ಮಕ್ಕಳು ಕಲಿಯುವ ಶಾಲೆಗೆ ಅಲ್ಪಸಂಖ್ಯಾತ ಶಾಲೆಯೆಂಬ ಕಿರೀಟ ಸಿಕ್ಕಲ್ಲಿ ಪೋಷಕರಾರೂ ಬೀಗಬೇಕಿಲ್ಲ. ಮಕ್ಕಳ ಹಕ್ಕುಗಳ ಉಲ್ಲಂಘನೆಯ ಸ್ವೇಚ್ಛಾಚಾರದ ಸಾಧ್ಯತೆಯಲ್ಲಿ ಸಿಲುಕಿಕೊಳ್ಳಲು ಸಿದ್ಧರಾಗಬೇಕಷ್ಟೆ.

ಸರ್ಕಾರ ಸಮರ್ಪಕ ಸಮಾಲೋಚನೆಗಳಿಲ್ಲದೆ ಮಾಡಿರುವ ನಿರ್ಧಾರದಿಂದಾಗಿ ಅಲ್ಪಸಂಖ್ಯಾತ ಶಾಲೆ ಎನ್ನುವ ಸ್ಥಾನಮಾನ ಪಡೆದಿರುವ ಮತ್ತು ತರಾತುರಿಯಲ್ಲಿ ಈ ಸ್ಥಾನಮಾನ ಪಡೆಯ­ಲಿರುವ ಶಾಲೆಗಳು ಸಾರಾಸಗಟಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ೨೦೦೯ರಿಂದ ಹೊರಗುಳಿಯಲಿವೆ.

ಕಳೆದೈದು ವರ್ಷಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಹೆಚ್ಚು ಪ್ರಚಾರವಾದದ್ದು ಸರ್ಕಾರೇತರ ಶಾಲೆಗಳು ‘ಬಡ ಮಕ್ಕಳಿಗೆ ಶೇ ೨೫ರಷ್ಟು ಮೀಸಲಾತಿ ಕೊಟ್ಟು ಎಂಟು ವರ್ಷಗಳ ಉಚಿತ ಶಿಕ್ಷಣವನ್ನು ನೀಡಬೇಕು’ ಎಂಬುದಕ್ಕೆ. ಇದಕ್ಕೆ ವಿರೋಧ ಬಂದಾಗ ಸರ್ಕಾರೇತರ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಅನೇಕ ಪೋಷಕರೂ ದನಿಗೂಡಿಸಿದ್ದರು.

ಶೇ ೨೫ರ ಮೀಸಲಾತಿ­ಯನ್ನು ಸರ್ಕಾರೇತರ ಶಾಲೆಗಳು ನೀಡುವುದ­ಕ್ಕಷ್ಟೇ ಶಿಕ್ಷಣ ಹಕ್ಕು ಕಾಯ್ದೆ ಸೀಮಿತವಾಗಿಲ್ಲ. ಈ ಕಾಯ್ದೆ ಪ್ರಕಾರ, ಕೆಳಕಂಡ ಸೌಕರ್ಯಗಳನ್ನು ಎಲ್ಲ ಶಾಲೆಗಳು ಒದಗಿಸಬೇಕೆಂದು ಕಡ್ಡಾಯ ಮಾಡಲಾಗಿದೆ.

*ಮಕ್ಕಳನ್ನಾಗಲೀ ಪೋಷಕರನ್ನಾಗಲೀ ಪ್ರವೇಶ ಪರೀಕ್ಷೆಗೆ ಒಳಪಡಿಸ­ಬಾರದು. ಕ್ಯಾಪಿಟೇಷನ್, ಡೊನೇಷನ್ ವಿಧಿಸಬಾರದು. ಜಾತಿ, ಧರ್ಮ, ಭಾಷೆ, ಲಿಂಗ, ಅಂಗವಿಕಲತೆ ಇತ್ಯಾದಿ ಕಾರಣ­ಗಳಿಂದ ತಾರತಮ್ಯ ಮಾಡಬಾರದು. ಎಂಟನೇ ತರಗತಿಯ ತನಕ ನಪಾಸು ಮಾಡಬಾರದು.

*ಶಾಲೆಗಳು ಕಟ್ಟಡ, ನೀರು, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ ವ್ಯವಸ್ಥೆಗಳನ್ನು ಹೊಂದಿರಲೇಬೇಕು. ಇವು ಸೂಕ್ತವಾಗಿವೆ ಎಂದು ಸ್ಥಳೀಯ ಸರ್ಕಾರ ಖಾತರಿಪಡಿಸಿ­ಕೊಳ್ಳ­ಬೇಕು.

*ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣ­ ನೀಡ­ಬೇಕು. ಶಾಲಾಪಠ್ಯ ಸಂವಿಧಾನಕ್ಕೆ ಅನು­ಗುಣ­ವಾಗಿರಬೇಕು. ಕಲಿಕೆಯಲ್ಲಿ ಅನಗತ್ಯ ಸ್ಪರ್ಧೆ ಇರ­ಬಾರದು. ಶಿಕ್ಷಣ ಮಾತೃಭಾಷೆ­ಯಲ್ಲಿರ­ಬೇಕು!

*ನಿಗದಿತ ಅರ್ಹತೆಯಿಲ್ಲದ ಶಿಕ್ಷಕರನ್ನು ನೇಮಿಸಿ­ಕೊಳ್ಳ­ಬಾರದು. ಖಾಸಗಿ ಪಾಠ ನಿಷೇಧಿಸ­ಲಾಗಿದೆ; ತರಗತಿಗಳಲ್ಲಿ (೧–-೫ನೇ ತರಗತಿ­ಯವರೆಗೆ) ೩೦ ಮಕ್ಕಳಿಗೊಬ್ಬ ಶಿಕ್ಷಕರು ಮತ್ತು (೬–-೮ನೇ ತರಗತಿಯವರೆಗೆ) ೩೫ ವಿದ್ಯಾರ್ಥಿ­ಗಳಿಗೊಬ್ಬ ಶಿಕ್ಷಕರು ಇರಬೇಕು. ಪ್ರತಿ ವಿಷಯಕ್ಕೆ ಅರ್ಹತೆ­ಯುಳ್ಳ ಪ್ರತ್ಯೇಕ ಶಿಕ್ಷಕರಿರಬೇಕು. ಶಿಕ್ಷಕರಿಗೆ ತರಬೇತಿಗಳಾಗಬೇಕು.

*ಪ್ರತಿ ತರಗತಿಗೆ ಪ್ರತ್ಯೇಕ ಕೋಣೆ, ಕಲಿಸುವ ಸಾಮಗ್ರಿ, ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಆಟದ ಮೈದಾನ (!), ಆಟೋಪ­ಕರಣ, ಪ್ರಯೋಗಾಲಯ, ಗ್ರಂಥಾ­ಲಯ, ಅಡುಗೆ­ಮನೆ, ವೈದ್ಯಕೀಯ ಸೌಲಭ್ಯ­ ಕಡ್ಡಾಯ. ಈ ಸೌಲಭ್ಯಗಳನ್ನು ಶಾಲೆ ಹೊಂದಿ­ಲ್ಲ­ದಿದ್ದಲ್ಲಿ ಸರ್ಕಾರ ನೀಡಿರುವ ಮನ್ನಣೆ ರದ್ದಾಗುತ್ತದೆ. 

*ಶಾಲೆ ನಡೆಸುವ ಸಂಸ್ಥೆಗಳಿಗೆ ಸಾಮಾಜಿಕ ಬದ­ಲಾವಣೆಯ ಬದ್ಧತೆ ಇರುವುದರಿಂದ ಹಿಂದುಳಿದ ಜಾತಿ, ವರ್ಗ, ದುರ್ಬಲ ಗುಂಪುಗಳ ಮಕ್ಕಳಿಗೆ ಶೇ ೨೫ರಷ್ಟು ಮೀಸಲಾತಿಯನ್ನು ಸರ್ಕಾರೇತರ ಶಾಲೆ­ಗಳಲ್ಲಿ ನೀಡಬೇಕು. ಇವರ ಶುಲ್ಕವನ್ನು ಸರ್ಕಾರ ಭರಿಸುತ್ತದೆ.

*ಆಯಾ ಪ್ರದೇಶದ ೬--- ರಿಂದ೧೪ ವರ್ಷ­ದೊ­ಳಗಿನ ಮಕ್ಕಳು ನೆರೆಹೊರೆ ಶಾಲೆಯಲ್ಲಿ ಕಲಿ­ಯು­ತ್ತಿ­­ರುವುದನ್ನು ಸ್ಥಳೀಯ ಸರ್ಕಾರಗಳು ಖಾತರಿ ಮಾಡಿಕೊಳ್ಳಬೇಕು. ಮಕ್ಕಳ ಮೇಲೆ ದೈಹಿಕ, ಮಾನಸಿಕ ಶಿಕ್ಷೆ, ಅವಮಾನ, ತಾರತಮ್ಯ, ದೈಹಿಕ, ಆರ್ಥಿಕ, ಮಾನಸಿಕ, ಲೈಂಗಿಕ ದೌರ್ಜನ್ಯ, ಕಿರುಕುಳ­ವಾಗದಂತೆ ಎಚ್ಚರಿಕೆ ವಹಿಸಬೇಕು. ಹೀಗಾದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಬಹುದು.

(ಕರ್ನಾ­ಟಕದ  ನಿಯಮದಂತೆ, ಚೈಲ್ಡ್‌ಲೈನ್- ೧೦೯೮ ಮಾಹಿತಿಯನ್ನು ಎಲ್ಲ ಶಾಲೆಗಳು ಪ್ರದರ್ಶಿ­ಸಬೇಕು). ಮಕ್ಕಳ ಹಕ್ಕುಗಳ ರಕ್ಷಣಾ ನೀತಿಯನ್ನು ಅಳವಡಿಸಿಕೊಳ್ಳಬೇಕು. ಮಕ್ಕಳ ಹಕ್ಕು­ಗಳ ಸಂಘಗಳನ್ನು ರಚಿಸಿಕೊಳ್ಳಲು ಅವಕಾಶ­ವಿರಬೇಕು.

*ಮಕ್ಕಳು 8ನೇ ತರಗತಿ ಪೂರೈಸುವವರೆಗೆ ಮಕ್ಕಳಿಗೆ ಅಡಚಣೆಯುಂಟು ಮಾಡಬಾರದು; ಯಾವುದೇ ಕಾರಣಕ್ಕೂ ಹೊರಹಾಕು­ವಂತಿಲ್ಲ. 

*ಪೋಷಕರನ್ನೂ ಒಳಗೊಂಡಂತಹ ಶಾಲಾ ಉಸ್ತುವಾರಿ ಸಮಿತಿ ಇರಬೇಕು. ಸಮಿತಿಗಳು ಮಕ್ಕಳ ಕಲಿಕೆಯ ಮಟ್ಟವನ್ನೂ ಉಸ್ತುವಾರಿ ಮಾಡ­ಬೇಕು. ಶಾಲಾ ಮಾಹಿತಿಗಳು ಸಾರ್ವ­ಜನಿಕರಿಗೆ ಸಿಗುವಂತಿರಬೇಕು.

*8ನೇ ತರಗತಿಯ ತನಕ ಮಕ್ಕಳಿಗೆ ಪರೀಕ್ಷೆ­ಗಳಿಲ್ಲ. ಶಿಕ್ಷಕರು ಮಕ್ಕಳ ಕಲಿಕೆಯನ್ನು ಪ್ರತಿದಿನ ಗಮನಿ­ಸಬೇಕು; ಮಕ್ಕಳನ್ನು ನಪಾಸು ಮಾಡ­ಬಾರದು.

ಇಂತಹ ಮಕ್ಕಳ ಹಕ್ಕುಗಳ ಪರವಾದ ಕಾಯ್ದೆಯಿಂದ ನಿಮ್ಮ ಶಾಲೆ ಹೊರಗಿರಬೇಕೆ ಎಂದು ಪೋಷಕರೇ ನಿರ್ಧರಿಸಬೇಕು.
ಅಲ್ಪಸಂಖ್ಯಾತ ಶಾಲೆಗಳಾಗಲು ತರಾತುರಿ­ಯೇಕೆ? ತಮಗಿಷ್ಟ ಬಂದಂತೆ ಶುಲ್ಕ, ದೇಣಿಗೆ ವಿಧಿಸ­ಬಹುದು. ತಾರತಮ್ಯ ಮಾಡಿದರೂ ದೂರು ಕೊಡುವಂತಿಲ್ಲ. ಅರ್ಹತೆಗಳನ್ನು ಪರಿಗಣಿ­ಸದೆ ಶಿಕ್ಷಕರನ್ನು ನೇಮಿಸಿಕೊಳ್ಳಬಹುದು, ಅವರಿಗೆ ತರಬೇತಿ ನೀಡಬೇಕಿಲ್ಲ. ಶಾಲಾ ಮೂಲ ಸೌಲಭ್ಯ­ಗಳಲ್ಲಿ ರಾಜಿ, ಹೊಂದಾಣಿಕೆ ಮಾಡಿಕೊಳ್ಳ­ಬಹುದು. ತಮ್ಮದೇ ಪಠ್ಯಪುಸ್ತಕಗಳನ್ನಿಟ್ಟು ಹೆಚ್ಚಿನ ಶುಲ್ಕವನ್ನು ಹೇರಬಹುದು.

ಮಕ್ಕಳ ಮೇಲೆ ಶಾಲೆಯಲ್ಲಿ ದೌರ್ಜನ್ಯಗಳಾದರೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸು­ವಂತಿಲ್ಲ(!). ನಪಾಸು ಮಾಡಬಹುದು ಮತ್ತು ಶಾಲೆಯಿಂದ ಹೊರದೂಡಬಹುದು. ಪೋಷಕ­ರಿಗೆ ಶಾಲಾ ಆಡಳಿತದಲ್ಲಿ ಸ್ಥಾನವಿಲ್ಲ. ಮಾಹಿತಿ ಹಕ್ಕಿನಿಂದ ಹೊರಗಿರಬಹುದು. ಸರ್ಕಾರದ ನಿರ್ದೇಶನ­ ಗೌರವಿಸಬೇಕಿಲ್ಲ. ಪ್ರಮುಖವಾಗಿ ಮಕ್ಕಳ ಹಕ್ಕು, ದೂರುಗಳಿಗೆ ಕಿವಿಕೊಡಬೇಕಿಲ್ಲ.

ಸಂವಿಧಾನದ ಮೌಲ್ಯಗಳು: ಶಿಕ್ಷಣ ಹಕ್ಕಿನ ಕಾಯ್ದೆಯ ಮೂಲ ಆಶಯಕ್ಕೆ  ಐದೇ ವರ್ಷ­ಗಳಲ್ಲಿ ತಿಲಾಂಜಲಿ ನೀಡುವಂತಾಗಿದೆ. ೧೯೯೩­ರಲ್ಲಿ ನ್ಯಾಯಮೂರ್ತಿ ಜೀವನ ರೆಡ್ಡಿ­ಯವರು ೧೪ ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು ಸರ್ಕಾರದ ಜವಾಬ್ದಾರಿ, ಇದು ಮಕ್ಕಳ ಹಕ್ಕು ಎಂದು ತೀರ್ಪಿತ್ತರು. ಇದನ್ನು ಗುಡಿಸಿಹಾಕಲು ೧೯೯೭­ರಲ್ಲಿ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ಸೂಚಿಸಿ ‘ಈ ಕಾಯ್ದೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ’ ಎಂದಿತ್ತು. ತೀವ್ರವಾದ ವಿರೋಧದಿಂದಾಗಿ ಇಂತಹ ಸಾಂವಿಧಾನಿಕ ಅಪಚಾರ ನಿಂತಿತು.

೨೦೦೧ರ ಸಂವಿಧಾನದ ತಿದ್ದುಪಡಿ, ಮಕ್ಕಳ ಹಕ್ಕುಗಳ ದನಿಯಲ್ಲಿತ್ತು. ೨೦೦೯ರಲ್ಲಿ ಹೊರಬಿದ್ದ ಕಾಯ್ದೆ, ಮಕ್ಕಳ ಪರವಾಗಿದ್ದರೂ, ಅಲ್ಪಸಂಖ್ಯಾತ ಶಾಲೆಗಳನ್ನು ಉಲ್ಲೇಖಿಸಿ ಅಪಸ್ವರವೆತ್ತಿತ್ತು. ಈ ಅವಕಾಶವನ್ನೇ ಬಳಸಿಕೊಂಡು, ಹಲವಾರು ಧನಾತ್ಮಕ ಅಂಶಗಳನ್ನು, ಮಕ್ಕಳ ಹಕ್ಕುಗಳ ಪರವಾದ ನಿಲುವನ್ನು ಹೊಂದಿರುವ ‘ಶಿಕ್ಷಣ ಹಕ್ಕು ಕಾಯ್ದೆ ೨೦೦೯’ರಿಂದ ಅಲ್ಪಸಂಖ್ಯಾತ ಶಾಲೆ­ಗಳನ್ನು ಹೊರಗಿಡಲು ಸರ್ಕಾರೇತರ ಶಾಲೆಗಳು ನ್ಯಾಯಾಲಯಗಳಿಗೆ ದುಂಬಾಲು ಬಿದ್ದವು. ಈಗ ಕರ್ನಾಟಕ ಸರ್ಕಾರ ಅದೇ ಹಾದಿಯಲ್ಲಿದೆ.

ನ್ಯಾಯಾಲಯಗಳು ಮತ್ತು ಸರ್ಕಾರ ಸಂವಿಧಾನವನ್ನು ತೋರಿ ತೆಗೆದುಕೊಳ್ಳುತ್ತಿರುವ ಇಂತಹ ಮಕ್ಕಳ ಹಕ್ಕುಗಳ ವಿರೋಧಿ ನಿಲುವು­ಗಳನ್ನು ನೋಡುತ್ತಿದ್ದರೆ, ಪ್ರಾಯಶಃ ಮಕ್ಕಳು ಈ ದೇಶದ ಪ್ರಜೆಗಳಲ್ಲ ಎಂದು ಅನಿಸುತ್ತದೆ. ಇದೊಂದು ಸಾಂವಿಧಾನಿಕ ಅಪಚಾರ.  

ಕಾಯ್ದೆಗೇಕೆ ವಿರೋಧ?: ಕರ್ನಾಟಕ ಸರ್ಕಾರ ಕಾಯ್ದೆ ಜಾರಿಗಾಗಿ ನಿಯಮಗಳನ್ನು ೨೦೧೨ರಲ್ಲಿ ರೂಪಿಸಿದಾಗ ವಿರೋಧಗಳಿದ್ದರೂ ಸಾಕಷ್ಟು ಶಾಲೆಗಳು ಶೇ ೨೫ರ ಮೀಸಲಾತಿಯನ್ನು ಒಪ್ಪಿದವು. ಇಂತಹ ಅನೇಕ ಶಾಲೆಗಳು ಒಂದೇ ವರ್ಷದಲ್ಲಿ ನಿಲುವು ಬದಲಿಸಿವೆ.

ಇದಕ್ಕಿರ­ಬಹುದಾದ ಕೆಲವು ಕಾರಣಗಳನ್ನು ಊಹಿಸ­ಬಹುದು: ಶೇ ೨೫ರಲ್ಲಿ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ಶಾಲೆಗಳಿಗೆ ಸರ್ಕಾರ ನೀಡಿದ್ದ ಭರವಸೆಯ ₨೧೧,೦೦೦ ಸಿಗಲಿಲ್ಲ. ಕಾರಣ:  ಎಷ್ಟೋ ಶಾಲೆಗಳು ಸಮರ್ಪಕವಾದ ಲೆಕ್ಕಪತ್ರ ನೀಡಲಿಲ್ಲ. ಸಾಕಷ್ಟು ಶಾಲೆಗಳಲ್ಲಿ ಆಡಳಿತ ಮಂಡಳಿಯೆಂಬುದೇ ಇಲ್ಲ. ಸಭಾ ನಡಾವಳಿಗಳಿಲ್ಲ. ಸಾಕಷ್ಟು ಶಾಲೆಗಳ ಮೂಲ ಸಂಸ್ಥೆಗಳು ದಾಖಲಾತಿಯನ್ನು ಪುನರ್‌ನವೀಕರಣ ಮಾಡಿಕೊಂಡಿಲ್ಲ. ಎಷ್ಟೋ ಶಾಲೆಗಳು ತಾವು ಹೇಳಿಕೊಳ್ಳುವ ದಾಖಲೆಗಳನ್ನೇ ಹೊಂದಿಲ್ಲ.

ಇವು ಬಹಿರಂಗವಾಗುತ್ತಿದ್ದಂತೆಯೇ ಕಾಯ್ದೆಯ ಬಿಸಿ ಸರ್ಕಾರೇತರ ಶಾಲೆಗಳ ನಿರ್ವಾ­ಹ­ಕರಿಗೆ ತಟ್ಟಲಾರಂಭಿಸಿತು. ಹೀಗಾಗಿ, ಈ ಕಾಯ್ದೆ ವ್ಯಾಪ್ತಿಯಿಂದ ಹೊರಬೀಳಲು ಸಾಕಷ್ಟು ಶಾಲೆಗಳು ನಡೆಸಿದ ಕಸರತ್ತಿನ ಫಲವಾಗಿ ಅಲ್ಪ­ಸಂಖ್ಯಾತ ಶಾಲೆ ಎನ್ನುವ ಹಣೆಪಟ್ಟಿ ಕಟ್ಟಿ­ಕೊಳ್ಳಲು ಕಳೆದ ಒಂದೂವರೆ ವರ್ಷದಲ್ಲಿ ನುಗ್ಗಾಟ ನಡೆಯಿತು. ಸೂಕ್ತ ದಾಖಲೆಗಳಿ­ಲ್ಲದೆಯೇ ಕೆಲವು ಧಾರ್ಮಿಕ ಅಲ್ಪಸಂಖ್ಯಾತ ಶಾಲೆ­ಗಳಾದರೆ, ಕೆಲವು ಭಾಷಾ ಅಲ್ಪಸಂಖ್ಯಾತ ಶಾಲೆಗಳಾಗಿ ರಾತ್ರೋ­ರಾತ್ರಿ ಬದಲಾದವು! ಅಂತಹ ಕೆಲವು ಮೋಸ ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯ­ದೆದುರು ಬಂದ ಪ್ರಕರಣ­ದಲ್ಲಿ ಬಯಲಾಯಿತು.

ಮುಂದೇನು?:ಕಳೆದ ಎರಡು ವರ್ಷದಲ್ಲಿ ಕಾಯ್ದೆ ಕುರಿತು ಚರ್ಚೆ ಇದ್ದರೂ ಒಂದಷ್ಟು ಸರ್ಕಾರೇತರ ಶಾಲೆಗಳು ಗೊಂದಲಗಳಲ್ಲಿಯೂ ಶೇ ೨೫ರ ಮೀಸಲಾತಿಯನ್ನು ನೀಡಿವೆ. ಅಲ್ಪಸಂಖ್ಯಾತ ಶಾಲೆ ಎನ್ನುವ ಹೊಸ ವ್ಯಾಖ್ಯಾನದಿಂದ ಅಂತಹ ಸ್ಥಾನ­ಮಾನ ಗಳಿಸುವ ಶಾಲೆಗಳು ತಮ್ಮಲ್ಲಿ ಪ್ರವೇಶ ನೀಡಿರುವ ಮಕ್ಕಳನ್ನು ಹೊರದಬ್ಬು­ತ್ತವೆಯೇ? ತಾವು ನಿಗದಿ ಪಡಿಸುವ ಶುಲ್ಕಕ್ಕಾಗಿ ಒತ್ತಾಯಿ­ಸು­ತ್ತವೆಯೇ?  ಇದಕ್ಕೆ ಸರ್ಕಾರದ ಉತ್ತರವೇನು? ಅಲ್ಪ­ಸಂಖ್ಯಾತ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳಾಗದಂತೆ, ನಪಾಸಿಲ್ಲ­ದಂತೆ ನಡೆಸಲು ಸರ್ಕಾರ ಹೊಸ ಕಾಯ್ದೆ, ನಿಯಮವನ್ನು ಜಾರಿಗೊಳಿಸುವುದೇ?

ಅಲ್ಪಸಂಖ್ಯಾತರು ಎನ್ನುವುದನ್ನು ಯಾರೂ ಬಂಡವಾಳವನ್ನಾಗಿಸಿಕೊಳ್ಳಬಾರದು ಎಂದು ಸರ್ಕಾರ ಸಾಂವಿಧಾನಿಕ ನಿರ್ದೇಶನ
ನೀಡ­ಬಾರ­ದೇಕೆ ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT