ADVERTISEMENT

ಓದುಗರು ಕಡಿಮೆಯಾಗುತ್ತಿದ್ದಾರೆ; ನೋಡುಗರು ಹೆಚ್ಚಾಗುತ್ತಿದ್ದಾರೆ

ರಾಮಲಿಂಗಪ್ಪ ಟಿ.ಬೇಗೂರು
Published 19 ಆಗಸ್ಟ್ 2013, 19:59 IST
Last Updated 19 ಆಗಸ್ಟ್ 2013, 19:59 IST

ಜನ, ಸಾಹಿತ್ಯವನ್ನು ಓದುವ ಪ್ರಮಾಣ ಇತ್ತೀಚೆಗೆ ಕಡಿಮೆ ಆಗುತ್ತಿದೆಯೇ? ಸಾಹಿತ್ಯವು ಸಮಾಜದಲ್ಲಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿದೆಯೇ? ಸಿನಿಮಾ, ಕಿರುತೆರೆ ಧಾರಾವಾಹಿಗಳು ಸಾಹಿತ್ಯದ ಓದನ್ನು ಕಬಳಿಸುತ್ತಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರಿಸಲು ಏನೂ ಕಷ್ಟಪಡಬೇಕಿಲ್ಲ. ಕಿರುತೆರೆಯಾಗಿರಲೀ, ಹಿರಿತೆರೆಯಾಗಿರಲೀ; ಚಿತ್ರಸಾಹಿತ್ಯ, ಚಿತ್ರಕಥನಗಳೇ ಇಂದು ಎಲ್ಲರ ಕಿವಿಗೆ ನಿರಂತರ ಬಂದು ಅಪ್ಪಳಿಸುತ್ತಿವೆ. ಜನ  ಸಂಸ್ಕೃತಿಯ-  ಬದುಕಿನ ಭಾಗವನ್ನಾಗಿಯೂ ಅದನ್ನು ಮಾಡುವ ವ್ಯವಸ್ಥಿತ ಯತ್ನಗಳು ಜೋರಾಗಿ ನಡೆಯುತ್ತಿವೆ.

ಸಾಹಿತ್ಯದ ವಿಚಾರ ಸಂಕಿರಣಗಳೇನೋ ಅಲ್ಲಲ್ಲಿ ನಡೆಯುತ್ತಿವೆ. ಆದರೂ ಅವು ಬಹುಪಾಲು ಶೈಕ್ಷಣಿಕವಾಗಿವೆ. ವಿದ್ವತ್ತಿನ ಭಾರಕ್ಕೆ ಸಿಲುಕಿ ಸಾಮಾನ್ಯರಿಂದ ದೂರವಾಗಿವೆ. ಶಾಲಾ ಕಾಲೇಜುಗಳ ಸಾಹಿತ್ಯ ಪಠ್ಯದಲ್ಲಿ ಮಾತ್ರವೇ ಸಾಹಿತ್ಯ ಇಂದು ಸ್ಥಾನ ಪಡೆಯುತ್ತಿದೆ.

ವಿದ್ಯಾರ್ಥಿಗಳಾದರೋ ಪರೀಕ್ಷೆಯಲ್ಲಿ ಅಂಕ ಗಳಿಸಲು ಮಾತ್ರ ಅದನ್ನು ಓದುತ್ತಿದ್ದಾರೆ. ನೀವು ದಿನವೂ ಟಿ.ವಿ. ನೋಡಲು ಎಷ್ಟು ಸಮಯ ಬಳಸುತ್ತೀರಿ ಮತ್ತು ಪುಸ್ತಕ ಓದಲು ಎಷ್ಟು ಸಮಯ ಬಳಸುತ್ತೀರಿ ಎಂದು ಕೇಳಿದರೆ ದೊರೆಯುವ ಉತ್ತರದಿಂದಲೇ ವಿದ್ಯಾರ್ಥಿಗಳು ಪುಸ್ತಕ ಓದುತ್ತಿಲ್ಲ ಎಂಬುದು ತಿಳಿಯುತ್ತದೆ. ಸಾಹಿತಿ, ಹೋರಾಟಗಾರ ಅಥವಾ ವಿಜ್ಞಾನಿಗಳ ವಿವರಗಳಿಗಿಂತ ಸಿನಿಮಾ ಕಥನಗಳು ಅವರ ನಾಲಿಗೆಯ ಮೇಲೆ ಸದಾ ನಲಿದಾಡುತ್ತವೆ.

ನವೋದಯದ ಸಂದರ್ಭದಲ್ಲೇ ಶಿಷ್ಟ ಮತ್ತು ಜಾನಪದ ಎಂಬ ಒಡಕು ಉಂಟಾಗಿತ್ತು. ಅಂತೆಯೇ ಪ್ರಗತಿಶೀಲದ ಸಂದರ್ಭದಲ್ಲಿ ಗಂಭೀರ ಸಾಹಿತ್ಯ- ಜನಪ್ರಿಯ ಸಾಹಿತ್ಯ ಎಂಬ ಒಡಕು ಸಾಹಿತ್ಯದಲ್ಲಿ ಉಂಟಾಯಿತು. ಬಹುಕಾಲ ಅದು ಮುಂದುವರಿಯಿತು ಕೂಡ. ಆದರೆ ಇಂದು ದೃಶ್ಯ ಸಾಹಿತ್ಯ (ಹಿರಿತೆರೆ ಮತ್ತು ಕಿರುತೆರೆ) ಮತ್ತು ಇತರ ಸಾಹಿತ್ಯ ಎಂಬ ಒಡಕು ದೊಡ್ಡದಾಗಿ ಉಂಟಾಗಿದೆ. ಓದುಗರು ಮತ್ತು ಕೇಳುಗರು ಆಗಿದ್ದ ಬಹುಪಾಲು ಮಂದಿ ಇಂದು ನೋಡುಗರಾಗಿ ಬದಲಾಗುತ್ತಿದ್ದಾರೆ. ವಿದ್ಯಾವಂತರ ಮನೆಗಳಲ್ಲಿ ಒಂದು ಕಾಲದಲ್ಲಿ ಒಂದೋ ಎರಡೋ ಮ್ಯೋಗಜಿನ್‌ಗಳು ಅಥವಾ ಪುಸ್ತಕಗಳು ಇರುತ್ತಿದ್ದವು. ಇಂದು ಬಹುಜನರ ಮನೆಗಳಲ್ಲಿ ವಿಡಿಯೊ ಲೈಬ್ರರಿ ಇದೆ. 24 ಗಂಟೆಗಳೂ ಸಿನಿಮಾ ಹಾಕುವ ಚಾನೆಲ್‌ಗಳು ಬಂದಿರುವುದರಿಂದ ಈಗೀಗ ಈ ವಿಡಿಯೊ ಲೈಬ್ರರಿಗಳೂ ತಬ್ಬಲಿ ಆಗುತ್ತಿವೆ.

ಇದಕ್ಕೆ ಜನರ ಬದಲಾದ ಅಭಿರುಚಿ ಒಂದೇ ಕಾರಣ ಅಲ್ಲ. ಇಲ್ಲಿ ಜನರ ಅಭಿರುಚಿಯನ್ನು ಮನರಂಜನೆಯ ಮಾರುಕಟ್ಟೆ ತನಗೆ ಬೇಕಾದಂತೆ ರೂಪಿಸುತ್ತಿದೆ. ಸಿನಿಮಾ, ಧಾರಾವಾಹಿ, ಟಿ.ವಿ. ಶೋಗಳ ನಿರ್ಮಾಣವಂತೂ ಉದ್ಯಮ ಆಗಿದೆ. ಉದ್ಯಮ ಅಂದಕೂಡಲೇ ಲಾಭವೇ ಮುಖ್ಯ ಅಲ್ಲವೇ? ಉತ್ಪಾದನೆ ಆಗುವ ವಸ್ತು ಜನಕ್ಕೆ ಬೇಕಾಗಿದೆಯೋ ಇಲ್ಲವೋ, ಅಗತ್ಯ ಇದೆಯೋ ಇಲ್ಲವೋ ಜೋರಾಗಿ ಅದನ್ನು ಮಾರಲಾಗುತ್ತಿದೆ. ಅನಗತ್ಯ ಮನರಂಜನೆಯನ್ನು ಅಗತ್ಯವನ್ನಾಗಿ ಮಾಡಲಾಗುತ್ತಿದೆ. ಅದಕ್ಕೆ ಜೋರು ಮಾರುಕಟ್ಟೆ ಜಾಲ, ಜಾಹೀರಾತು ಜಾಲಗಳೂ ನಮ್ಮಲ್ಲಿ ಇವೆ. ಸಮಾಜಸೇವಕರಾಗಲೀ, ವಿಜ್ಞಾನಿಗಳಾಗಲೀ, ತತ್ವಜ್ಞಾನಿಗಳಾಗಲೀ, ಸಾಹಿತಿಗಳಾಗಲೀ ಯಾರೂ ಜನರಿಗೆ ಸಾಧಕರಂತೆ ಕಾಣುತ್ತಿಲ್ಲ. ನಿನ್ನೆ ಮೊನ್ನೆ ಸಿನಿಮಾದಲ್ಲಿ ನಟಿಸಿದವರೆಲ್ಲಾ ಸೆಲಬ್ರಿಟಿಗಳಾಗುತ್ತಾರೆ.

ಈಗೀಗ ಲಿಪಿರೂಪಿ ಸಾಹಿತ್ಯಪಠ್ಯಗಳು ದೃಶ್ಯಪಠ್ಯಗಳಾಗಿ ರೂಪಾಂತರ ಆಗುತ್ತಿವೆ. ಕೆಲವು ರಂಗಭೂಮಿಗೆ, ಇನ್ನು ಕೆಲವು ಕಿರುತೆರೆಗೆ ಮತ್ತು ಹಿರಿತೆರೆಗೆ ಸಲ್ಲುತ್ತಿವೆ. ಈ ವಿದ್ಯಮಾನವನ್ನು ಲಿಪಿಪಠ್ಯಗಳ ದೃಶ್ಯಾನುವಾದ ಎಂದರೂ ಸರಿಯೇ. ಇತ್ತೀಚೆಗೆ ಇದರ ಭರಾಟೆ ಹೆಚ್ಚಾಗುತ್ತಿದೆ. ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ಕೊಡುವ  ಸಾಹಿತಿಗಳೂ ಹುಟ್ಟಿದ್ದಾರೆ. ಕಿರುತೆರೆ-ಹಿರಿತೆರೆಯ ಆಕರ್ಷಣೆ, ಜನಪ್ರಿಯತೆಗೆ ಮರುಳಾದ ಕೆಲ ಸಾಹಿತಿಗಳು ಅಲ್ಲಿಗೆ ವಲಸೆ ಹೋಗುತ್ತಿದ್ದಾರೆ. ಚಿತ್ರರಂಗದಲ್ಲಿ `ಕ್ಲಾಸ್' ಮತ್ತು `ಮಾಸ್' ಎಂಬ ಎರಡು ವಿಧ ಇದೆ. ಇದೇ ಸಾಹಿತ್ಯದಲ್ಲಿ ಶಿಷ್ಟ-ಜನಪದ; ಜನಪ್ರಿಯ-    ಗಂಭೀರ ಎಂಬ ನೆಲೆಗಳಲ್ಲಿ ಎಂದಿನಿಂದಲೂ ಇತ್ತಲ್ಲವೇ?

ಸಾಹಿತ್ಯವೇ ಬೇಕಿಲ್ಲದಿರುವ, ಈ ಸಂದರ್ಭದಲ್ಲಿ ವಿವೇಕಯುತ ಸಾಹಿತ್ಯವನ್ನು ಜನಕ್ಕೆ ತಲುಪಿಸುವ ಕೆಲಸಗಳು ಆಗಬೇಕಿವೆ. ಮೊನ್ನೆ ಬೆಂಗಳೂರಿನ ನ್ಯಾಷನಲ್ ಕಾಲೇಜ್, ರವೀಂದ್ರ ಕಲಾಕ್ಷೇತ್ರದಲ್ಲಿ ಇಂಥ ಕಾರ‌್ಯಕ್ರಮಗಳು ನಡೆದವು. ಒಂದು ಇಡೀ ತಲೆಮಾರಿನ ಸಾಹಿತ್ಯಾಸಕ್ತರನ್ನು ರೂಪಿಸಿದ ವಿಮರ್ಶಕ ಮತ್ತು ಸಾಹಿತ್ಯ ಪರಿಚಾರಕ ಕಿ.ರಂ. ನಾಗರಾಜರ ಮಾತು, ಬರಹ, ವ್ಯಕ್ತಿತ್ವಗಳನ್ನು ಕುರಿತ ಕಾರ‌್ಯಕ್ರಮಗಳವು. ನ್ಯಾಷನಲ್ ಕಾಲೇಜಿನಲ್ಲಿ ವಿದ್ವತ್ ಪೂರ್ಣವಾದ ಚರ್ಚೆಗಳೂ, ಕಾವ್ಯವಾಚನವೂ, ಒಡನಾಟ ಕಥನಗಳ ನಿರೂಪಣೆಯೂ ನಡೆದರೆ; ಕಲಾಕ್ಷೇತ್ರದಲ್ಲಿ ಅಹೋರಾತ್ರಿ ಹಾಡು, ನಾಟಕ, ಕಾವ್ಯವಾಚನ, ನೆನಪಿನ ನಿರೂಪಣೆಗಳು ನಡೆದವು.

ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಸೇರಿ ರಾತ್ರಿಯೆಲ್ಲ ಎದ್ದಿದ್ದು ಕಿರಂಗೆ ಮತ್ತು ಆ ಮೂಲಕ ಕನ್ನಡ ಕಾವ್ಯಕ್ಕೆ ಸ್ಪಂದಿಸಿದ್ದು ವಿಶೇಷವಾಗಿತ್ತು. ಕವ್ವಾಲಿ, ಸವಾಲ್-ಜವಾಬ್, ಮುಷಾಯಿರಾ ಧಾಟಿಯಲ್ಲಿ ಜನ ವೇದಿಕೆ ಮತ್ತು ಸಭಾಂಗಣ ಎಂಬ ಭೇದ ಇಲ್ಲದೆ ಪ್ರತಿಕ್ರಿಯಿಸುತ್ತಾ ರಾತ್ರಿಯೆಲ್ಲಾ ಎಂಜಾಯ್ ಮಾಡಿದರು. ಕೆಲವರು ಅಲ್ಲಿ ಕಾವ್ಯವನ್ನು ಕುಡಿದಿದ್ದರು. ಮದ್ಯವನ್ನು ಕುಡಿದವರೂ ಕೆಲವರಿದ್ದರು. ಅವರೆಲ್ಲರೂ ಹಾಡುಗಳಿಗೂ, ಕವನವಾಚನಕ್ಕೂ ಜೋರಾಗಿ ಸ್ಪಂದಿಸುತ್ತ ಜೀವ ತುಂಬಿದರು. ಅವರ ಜೊತೆ ಕಿರಂ ಆ ರಾತ್ರಿ ನಿಜಕ್ಕೂ ಜೀವಂತ ಇದ್ದರು.

ಕವಿಗೋಷ್ಠಿಗಳು ಡಲ್ ಹೊಡೆಯುವ ಇಂದಿನ ದಿನಮಾನದಲ್ಲಿ ಹೀಗೆ ನೂರಾರು ಜನ ಇಡೀ ರಾತ್ರಿ ಬೆಂಗಳೂರಿನಂಥ ನಗರದಲ್ಲಿ ಕಾರ್ಯಕ್ರಮ ಆಸ್ವಾದಿಸಿದ್ದು ಕನ್ನಡ ಕಾವ್ಯಕ್ಕೆ ಭವಿಷ್ಯ ಇದೆ ಎಂದು ಹೇಳಿದಂತಿತ್ತು. ಪಠ್ಯ ಸಮುದಾಯವನ್ನು ಕಟ್ಟಿಕೊಳ್ಳುವ ಕೆಲಸ ಆ ರಾತ್ರಿ ಅಲ್ಲಿ ನಡೆಯಿತು. ಖಂಡಿತಾ ಇದೊಂದು ಸಾಹಿತ್ಯ ಸಮುದಾಯವನ್ನು ವಿಸ್ತರಿಸುವ ಕೆಲಸ. ಈಗಿನ ಸಂದರ್ಭದಲ್ಲಿ ಸಾಹಿತ್ಯವನ್ನು ಜನರಿಗೆ ತಲುಪಿಸುವ, ಜನರನ್ನು ಸಾಹಿತ್ಯದ ಕಡೆಗೆ ಸೆಳೆಯುವ ಇಂಥ ಕಾರ‌್ಯಕ್ರಮ ಅಭಿನಂದನೀಯ.

ಕುವೆಂಪು, ಬೇಂದ್ರೆ, ಅಲ್ಲಮ, ಪಂಪ, ಕುಮಾರವ್ಯಾಸ ಇವರನ್ನು ಓದುವವರು ಇಂದು ಕಡಿಮೆ ಆಗುತ್ತಿದ್ದಾರೆ. ಹಾಗೆ ಸುಮ್ಮನೆ ಸಾಹಿತ್ಯವೇ ದೊಡ್ಡದಾಗಿ ಮೆರೆಯುತ್ತಿದೆ. ಅವರೇ ಉದ್ಧಾಮ ಸಾಹಿತಿಗಳು, ಮಿಕ್ಕವರೆಲ್ಲ ಅರ್ಥವಿಲ್ಲದವರು (ಅರ್ಥವಾಗದವರು) ಎಂಬಂತೆ ಆಗುತ್ತಿದೆ. ತನ್ನದೇ ಸಾಹಿತ್ಯವನ್ನು ತನ್ನದೇ ಶಕ್ತ ನೆಟ್‌ವರ್ಕ್ ಮೂಲಕ ಸಿನಿಮಾ ಮತ್ತು ಧಾರಾವಾಹಿ ಲೋಕಕ್ಕೆ ನಿತ್ಯವೂ ಜನಕ್ಕೆ ತುರುಕುತ್ತಿದೆ. ಅದನ್ನೇ ಅವರ ಬದುಕಿನ ಭಾಗವನ್ನಾಗಿ ಮಾಡುತ್ತಿದೆ.

ಯಾವ ಮದುವೆ, ನಾಮಕರಣಕ್ಕೇ ಹೋಗಲಿ, ಊರಿನ ಯಾವುದೇ ಸಮಾರಂಭ ಇರಲಿ ಅಲ್ಲಿ ಧ್ವನಿವರ್ಧಕದಲ್ಲಿ ಚಿತ್ರಸಾಹಿತ್ಯ ಅಬ್ಬರದ ಸಂಗೀತದ ಪ್ಯಾಕೇಜಿನಲ್ಲಿ ಸರಬರಾಜು ಆಗುತ್ತಿರುತ್ತದೆ. ಇದು ಬಹುಸಂಸ್ಕೃತಿಯ ಕುರುಹುಗಳನ್ನು ಕತ್ತರಿಸುವ ಕೆಲಸ. ಏಕರೂಪಿತನದ ಕಡೆಗಿನ ಚಲನೆ. ಒಂದು ರೀತಿಯಲ್ಲಿ ಭಾಷಾತೀತವಾಗಿಯೂ ನಡೆಯುತ್ತಿರುವ ಈ ಕಾರ‌್ಯವು ಏಕರೂಪಿ ಸಂಕರತೆಯನ್ನೇ (ಹೈಬ್ರಿಡಿಟಿ) ಉಂಟು ಮಾಡುತ್ತಿದೆ. ಜನರ ಬದುಕಿನ ಭಾಗವೇ ಆಗಿದ್ದ, ಬಾಳು ಮತ್ತು ಸಾಹಿತ್ಯ ಎರಡೂ ಒಂದೇ ಆಗಿದ್ದ ಮಂಟೇಸ್ವಾಮಿ ಕತೆ, ಮಾದಪ್ಪನ ಕತೆ, ಮೈಲಾರಲಿಂಗನ ಕತೆ, ಹಾಲುಮತ ಕಾವ್ಯ, ಎತ್ತಪ್ಪ, ಜುಂಜಪ್ಪ ಇತ್ಯಾದಿ ಜಾನಪದ ಸಾಹಿತ್ಯ ಕೂಡ ಇಂದು ತನ್ನ ಚಲನೆಯನ್ನು ಕಡಿಮೆ ಮಾಡಿಕೊಂಡಿದೆ. ಮನರಂಜನಾ ಉದ್ಯಮಗಳ ಆವುಟದಿಂದ ಜಾನಪದಕ್ಕೆ ಅನ್ನ ಹುಟ್ಟಿಸುವ ಶಕ್ತಿ ಇಲ್ಲವಾಗಿದೆ. ಕಲಾವಿದರು ಅಧಿಕಾರಿಗಳನ್ನು ಓಲೈಸಬೇಕಾದ ಸ್ಥಿತಿ ಬಂದಿದೆ.

ಚಿತ್ರರಂಗದವರು ನಮ್ಮನ್ನು ಕಣ್ಣೆತ್ತಿ ನೋಡುವುದಿಲ್ಲ ಎಂದು ಪ್ರತಿಷ್ಠಿತ ಸಾಹಿತಿಗಳು ಕೊರಗುತ್ತಾರೆ. `ಪ್ರತಿಷ್ಠಿತರು ನಮ್ಮನ್ನು ಸಮಾನವಾಗಿ ಕಾಣುತ್ತಿಲ್ಲ' ಎಂದು ಚಿತ್ರಸಾಹಿತಿಗಳು ಆಪಾದಿಸುತ್ತಿದ್ದಾರೆ.    `ಚಿತ್ರಸಾಹಿತಿಗಳನ್ನು ಏಕೆ ಜ್ಞಾನಪೀಠ, ಪಂಪ ಪ್ರಶಸ್ತಿ ಇಂಥವುಗಳಿಗೆ ಪರಿಗಣಿಸುತ್ತಿಲ್ಲ' ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ. ಇದರ ನಡುವೆ ಸುಗಮ ಸಾಹಿತಿಗಳು `ನಮ್ಮನ್ನು ಅವರೂ ಒಳಗೊಳ್ಳುತ್ತಿಲ್ಲ; ಇವರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ' ಎಂದು ಗೊಣಗುತ್ತಿದ್ದಾರೆ. ಇನ್ನು ಜಾನಪದವಂತೂ ಎರಡನೇ ದರ್ಜೆಗೆ ಗುರಿಯಾಗಿದೆ. ಒಂದು ಕಡೆ ಇದು ಯಾರಿಗೂ ಬೇಕಿಲ್ಲದ ಮಗು, ಇನ್ನೊಂದು ಕಡೆ ಶೈಕ್ಷಣಿಕ ಪಂಡಿತರ ಸರಕು. ಅಂತೂ ನಮ್ಮೆದುರು ಪ್ರತಿಷ್ಠಿತ ಸಾಹಿತ್ಯ, ಸುಗಮ ಸಾಹಿತ್ಯ, ಜಾನಪದ ಸಾಹಿತ್ಯ ಮತ್ತು (ಹಿರಿ- ಕಿರು) ತೆರೆ ಸಾಹಿತ್ಯ ಇವುಗಳ ನಡುವೆ ಬಿರುಕುಗಳು ಕಾಣುತ್ತಿವೆ.

ಇತ್ತೀಚೆಗಂತೂ ಸಾಹಿತ್ಯದ ವ್ಯಾಖ್ಯಾನವೇ ಬದಲಾಗುತ್ತಿದೆ. ಎಲ್ಲ ನುಡಿ ನಿರೂಪಣೆಗಳೂ ಸಾಹಿತ್ಯವೇ. ಬದಲಾದ ವ್ಯಾಖ್ಯಾನದ ಕಾಲದಲ್ಲಿ ಒಡಕುಗಳನ್ನು ಮುಚ್ಚುವುದು ಹೇಗೆ? ಸಾಮಾಜಿಕ ತಾರತಮ್ಯಕ್ಕೂ ಈ ಸಾಹಿತ್ಯಗಳ ಅಸಮಾನ ಶ್ರೇಣೀಕರಣಕ್ಕೂ ನೇರ ಸಂಬಂಧವಿದೆ, ಅಲ್ಲವೇ? ಹೀಗಿರುವಾಗ ಇವುಗಳ ನಡುವಿನ ಗೆರೆಗಳು, ಗೋಡೆಗಳು ಸುಲಭಕ್ಕೆ ಇಲ್ಲವಾಗುತ್ತವೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.