ಮೀನುಗಾರರಿಗೆ ಎಂ.ಎಸ್.ಇ.ಝೆಡ್ ಪರಿಹಾರದ ಕುರಿತ ಸುದ್ದಿಯನ್ನು ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದಾಗ ಆಶ್ಚರ್ಯ, ಆಘಾತಗಳೆರಡೂ ಉಂಟಾದವು. ಮೇಲ್ನೋಟಕ್ಕೆ ಸಹಾಯ ಎಂದು ತೋರಬಹುದಾದ ಈ ಪರಿಹಾರದ ಹಿಂದೆ ದುರುದ್ದೇಶದ ಸಂಚೊಂದು ಇರುವುದನ್ನು ನಾವು ಮನಗಾಣಬೇಕಾಗಿದೆ. 2006–07ರಿಂದ ಈಚೆಗೆ ಮಂಗಳೂರನ್ನು ಕೇಂದ್ರವಾಗಿ ಇರಿಸಿಕೊಂಡು ಕಾರ್ಯ ನಿರ್ವಹಿಸಲಾರಂಭಿಸಿದ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂ.ಎಸ್.ಇ.ಝೆಡ್) ಈ ಪರಿಸರಕ್ಕೆ ಬಂದ ಆರಂಭದಿಂದಲೇ ಕೃಷಿಕರ, ಪರಿಸರವಾದಿಗಳ, ಸಾಮಾನ್ಯ ನಾಗರಿಕರ ವಿರೋಧವನ್ನು ಎದುರಿಸಬೇಕಾಗಿ ಬಂದಿತು.
ದಶಕಗಳ ಹಿಂದೆಯೇ ಮಂಗಳೂರಿನ ಸುತ್ತಲ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕಾ ಯೋಜನೆಗಳಿಗಾಗಿ ಸಾವಿರಾರು ರೈತರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರು. ಭೂಮಿಯ ಜತೆಗೆ ಅನೇಕ ಬಗೆಯ ಮಾನವೀಯ ಸಂಬಂಧಗಳ ಕೊಂಡಿಯೂ ಕಳಚಿಕೊಂಡಿತು. ಫಲವತ್ತಾದ ತಮ್ಮ ಕೃಷಿ ಭೂಮಿಯನ್ನು ಕಂಪೆನಿಗಳಿಗೆ ಕೊಟ್ಟು ಪರಿಹಾರದ ಹಣಕ್ಕೆ ಕೈಯೊಡ್ಡುವಂತೆ ಮಾಡಿತ್ತು. ಗ್ರೆಗೋರಿ ಪತ್ರಾವೊ ಎಂಬ ರೈತರೊಬ್ಬರು ತಾನು ಕೃಷಿಕನಾಗಿಯೇ ಉಳಿಯಲು ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ ದಶಕಗಳ ಕಾಲ ಹೋರಾಟ ಮಾಡಿದರೂ ತನ್ನ ಮನೆಯನ್ನು, ಕೃಷಿ ಭೂಮಿಯನ್ನು ಉಳಿಸಿಕೊಳ್ಳಲಾಗಿರಲಿಲ್ಲ ಎಂಬ ಸತ್ಯ ಕಣ್ಮುಂದಿದೆ. ತೈಲ ಶುದ್ಧೀಕರಣ ಘಟಕಗಳು, ರಾಸಾಯನಿಕ ಗೊಬ್ಬರ ತಯಾರಿಕೆ ಕಾರ್ಖಾನೆಗಳೂ ಸೇರಿದಂತೆ ಅನೇಕ ಕಾರ್ಖಾನೆಗಳು ಇಲ್ಲಿಗೆ ಲಗ್ಗೆ ಇಟ್ಟವು. ರೈತರ ಜೀವನಾಡಿಗಳಂತಿದ್ದ ನದಿಗಳ ನೀರು ಕಂಪೆನಿಗಳ ಬಕಾಸುರ ಹೊಟ್ಟೆ ಸೇರಲಾರಂಭಿಸಿತು. ಜನರ ವಿರೋಧದ ನಡುವೆಯೂ ಹೊಗೆ ಕೊಳವೆಗಳು ಹೊಗೆಯುಗುಳಲಾರಂಭಿಸಿದವು. ರೈತರ ಧ್ವನಿ, ಪರಿಸರ ಹೋರಾಟಗಾರರ ಧ್ವನಿಗಳು ಒಂಟಿ ಧ್ವನಿಗಳಾಗಿ, ರಾಜಕೀಯ ನಾಯಕರು, ಪಕ್ಷಗಳ ಸದ್ದಿಲ್ಲದ ಬೆಂಬಲದೊಂದಿಗೆ ಅರಣ್ಯರೋದನವಾಗಿಯೇ ಉಳಿಯಿತು.
2006–07ರ ಹೊತ್ತಿಗೆ ಕರಾವಳಿಯಲ್ಲಿ ಸುದ್ದಿ ಮಾಡಿದ ಬೃಹತ್ ರೂಪದ ಯೋಜನೆ ಎಂ.ಎಸ್.ಇ.ಝೆಡ್. ಮತ್ತೆ ರೈತರ ಹೋರಾಟ, ಪರಿಸರ ಹೋರಾಟಗಾರರ ವಿರೋಧ, ‘ಪ್ರಾಣವನ್ನಾದರೂ ಕೊಟ್ಟೇವು, ಕೃಷಿ ಭೂಮಿ ಬಿಡಲಾರೆವು’ ಎಂಬ ಘೋಷಣೆಗಳೊಂದಿಗೆ ಮೊಳಗಿತು. ರೈತರನ್ನು ಮುಂದಿಟ್ಟುಕೊಂಡು ಹೋರಾಡಿದ ಕಪಟಿ ನಾಯಕರು ತಮ್ಮ ಕಿಸೆಗಳು ತುಂಬುತ್ತಿದ್ದಂತೆ ಮೌನವಾದರು. ಅಭಿವೃದ್ಧಿ, ಪ್ರಗತಿಯ ಪರಿಭಾಷೆಯಲ್ಲಿ ಮಾತನಾಡಲಾರಂಭಿಸಿದ ರಾಜಕಾರಣಿಗಳು, ಹೋರಾಟಗಾರರನ್ನೇ ತನ್ನತ್ತ ಸೆಳೆದುಕೊಳ್ಳುವ ಅಧಿಕಾರಸ್ಥರ ತಂತ್ರಗಾರಿಕೆಯ ಫಲವಾಗಿ ಹೋರಾಟ ಸತ್ತಿತು. ಎಂ.ಎಸ್.ಇ.ಝೆಡ್. ಹೆಸರಲ್ಲಿ ಮತ್ತೆ ಹಲವು ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಮನೆಗಳನ್ನು ಕೆಡವಲಾಯಿತು. ಕೆರೆ, ಬಾವಿಗಳಿಗೆ ಮಣ್ಣು ಸುರಿಯಲಾಯಿತು. ನಾಗಬನಗಳನ್ನು ನೆಲಸಮ ಮಾಡಲಾಯಿತು.
ಮಣ್ಣಿನ ಮಕ್ಕಳನ್ನು ಮಣಿಸಲಾಯಿತು. ನದಿನೀರು ಕೊಳವೆಗಳಲ್ಲಿ ಕಾರ್ಖಾನೆಗಳನ್ನು ಸೇರಲಾರಂಭಿಸಿತು. ಕಾರ್ಖಾನೆಗಳ ತ್ಯಾಜ್ಯ ನೀರು, ಮಲಿನ ಬಿಸಿ ನೀರು ಸದ್ದಿಲ್ಲದೆ ಕಡಲು ಸೇರಲಾರಂಭಿಸಿತು. ಕಡಲನ್ನು ತ್ಯಾಜ್ಯ ಗುಂಡಿಯನ್ನಾಗಿಸುವ ಪ್ರಯತ್ನ ನಡೆದೇ ಹೋಗಿತ್ತು. ಇಂದಿಗೂ ಈ ಪ್ರದೇಶದಲ್ಲಿ ತೈಲ ಶುದ್ಧೀಕರಣ ಘಟಕದಿಂದ, ಕೋಕ್ ಸಲ್ಫರ್ ಘಟಕಗಳಿಂದ ಹರಿದು ಬರುವ ಮಾಲಿನ್ಯಯುಕ್ತ ಅಶುದ್ಧ ನೀರು ಊರಿನಲ್ಲಿ ಮಳೆ ನೀರು ಹರಿಯುವ ತೋಡುಗಳಲ್ಲಿ ಹರಿದು ಹಳ್ಳ ಕೆರೆಗಳನ್ನು ಸೇರುತ್ತಿದೆ. ಅಂತರ್ಜಲದ ಮೂಲಕ ಬಾವಿನೀರು ಕಲುಷಿತಗೊಳ್ಳುತ್ತಿದೆ. ಕುಡಿಯುವ ನೀರೂ ವಿಷಯುಕ್ತವಾಗುತ್ತಿದೆ.
ಇದರ ಮುಂದುವರಿದ ಭಾಗವಾಗಿ ಎಂ.ಎಸ್.ಇ.ಝೆಡ್, ಮೀನುಗಾರರಿಗೆ ಪರಿಹಾರ ನೀಡಲು ಮುಂದಾಯಿತು. ಕಡಲನ್ನು ತ್ಯಾಜ್ಯ ತೊಟ್ಟಿಯನ್ನಾಗಿಸಿದ ಪರಿಣಾಮ ಕಡಲನ್ನು ನಂಬಿ, ಮೀನುಗಾರಿಕೆಯನ್ನು ನೆಚ್ಚಿ ಬದುಕು ಕಟ್ಟಿಕೊಂಡಿದ್ದ ಮೊಗವೀರರ ತುತ್ತಿನ ಚೀಲಕ್ಕೆ ಕನ್ನ ಬಿದ್ದಿದೆ. ಅದರಲ್ಲೂ ನಾಡದೋಣಿ ಮೀನುಗಾರರು ಮೀನುಗಾರಿಕೆಯಲ್ಲಿ ನಷ್ಟ ಅನುಭವಿಸಿದ್ದು ಇದಕ್ಕೆಲ್ಲಾ ಎಂ.ಎಸ್.ಇ.ಝೆಡ್, ಕಡಲಿಗೆ ತ್ಯಾಜ್ಯ ಸುರಿದದ್ದೆ ಕಾರಣವೆಂದು ಆರೋಪಿಸಿದ್ದ ಮೀನುಗಾರರು ತಮಗೆ ಸೂಕ್ತ ಪರಿಹಾರ ಕೊಡಬೇಕೆಂದು ಮೂರು ವರ್ಷಗಳಿಂದ ಆಗ್ರಹಿಸುತ್ತಿದ್ದರು. ಸದ್ಯ ಕಂಪೆನಿ, ಜಿಲ್ಲಾಧಿಕಾರಿಗಳ ಖಾತೆಗೆ ಪರಿಹಾರದ ಹಣವಾಗಿ ಒಂದು ಕೋಟಿ ರೂಪಾಯಿ ಜಮಾ ಮಾಡಿದೆ.
ಈಗ ಪ್ರಕರಣದಿಂದ ನಮ್ಮ ಮುಂದೆ ಮೂಡುವ ಪ್ರಶ್ನೆಗಳೆಂದರೆ: ಮೀನುಗಾರರಿಗೆ ಪರಿಹಾರವನ್ನು ಕೊಡಲು ಒಪ್ಪಿಕೊಂಡಿದ್ದರಿಂದ ಕಂಪೆನಿ ತಾನು ಕಡಲನ್ನು ಮಲಿನ ಮಾಡಿದ್ದನ್ನು ಒಪ್ಪಿಕೊಂಡಂತಾಯಿತು. ಕಡಲಿಗೆ ತ್ಯಾಜ್ಯವನ್ನು ತುಂಬುವ ಅಧಿಕಾರವನ್ನು ಎಂ.ಎಸ್.ಇ.ಝೆಡ್‌ಗೆ ಕೊಟ್ಟವರು ಯಾರು?
ಮೀನುಗಾರರು, ಕಂಪೆನಿ ಕೊಡುವ ತಾತ್ಕಾಲಿಕ ಪರಿಹಾರವನ್ನು ಪಡೆದುಕೊಳ್ಳುವ ಮೂಲಕ ಕಡಲನ್ನು ಇನ್ನಷ್ಟು ಕೆಡಿಸಲು ಅವಕಾಶವನ್ನು ಎಂ.ಎಸ್.ಇ.ಝೆಡ್‌ಗೆ ಕೊಟ್ಟಂತಾಗಲಿಲ್ಲವೇ?
ಮೀನುಗಾರರಿಗೇನೋ ಪರಿಹಾರವನ್ನು ಕೊಡಬಹುದು. ಆದರೆ ಕಡಲು ಕೇವಲ ಮೀನುಗಾರರಿಗೆ ಸೇರಿದ್ದೇ? ಕಡಲ ಹಕ್ಕನ್ನು ಮೀನುಗಾರರಿಗೆ ಬಿಟ್ಟು ಕೊಡಲಾಗಿದೆಯೇ? ಹಾಗಿದ್ದರೆ ಕಡಲ ಜೀವಿಗಳ ರಕ್ಷಣೆಯ ಹೊಣೆ ಯಾರದ್ದು? ಜೀವಿಗಳ ಬದುಕುವ ಹಕ್ಕನ್ನೂ ಇಲ್ಲಿ ಪರಿಗಣಿಸಬೇಡವೇ?
ಕಡಲ ಮಕ್ಕಳೆಂದೇ ಕರೆಸಿಕೊಂಡ ಮೀನುಗಾರರು ಮೀನಿನ ಸಂತತಿಯ ರಕ್ಷಕರಾಗದೆ, ಪರಿಹಾರದ ಹಣಕ್ಕೆ ಕೈಯೊಡ್ಡಿದರೆ ಎಂ.ಎಸ್.ಇ.ಝೆಡ್‌ನ ಪರಿಸರ ದ್ರೋಹದ ಕಾರ್ಯಕ್ಕೆ ಸಾಥ್ ನೀಡಿದಂತಾಗಲಿಲ್ಲವೇ?
ಈ ಹೊತ್ತಿನ ಮೀನುಗಾರರಿಗೆ ಪರಿಹಾರದ ಹಣವೇನೋ ಸಿಗಬಹುದು. ಆದರೆ ಮುಂದಿನ ತಲೆಮಾರಿಗೆ ಕಡಲು ಬೇಡವೇ? ಕಡಲ ಜೀವ ರಾಶಿಗಳು ಬೇಡವೇ?
ಒಂದು ಗಂಗಾ ನದಿಯನ್ನು ಕೆಡಿಸಿ, ಮಲಿನಗೊಳಿಸಿ ಮತ್ತೆ ಸರಿಪಡಿಸಲು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಮುಂದೊಂದು ದಿನ ಕಡಲೂ ಕೆಟ್ಟರೆ ಮತ್ತೆ ಸರಿ ಪಡಿಸಬಹುದೇ? ಮತ್ತೆಷ್ಟು ಕೋಟಿ ರೂಪಾಯಿಯನ್ನು ಸುರಿಯಬೇಕಾಗಬಹುದು?
ಈ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಕಡಲು ತ್ಯಾಜ್ಯ ಗುಂಡಿಯಲ್ಲ. ಅದು ಪ್ರಕೃತಿ ಚಕ್ರದ ಪ್ರಮುಖ ಕೊಂಡಿ ಎನ್ನುವುದನ್ನು ಅರಿಯಬೇಕಾಗಿದೆ. ಕಡಲು- ನೀರು ಆವಿಯಾಗುವುದು- ಮಳೆ ಬರುವುದು ಇವೆಲ್ಲವೂ ಒಂದು ಚಕ್ರವಾಗಿದ್ದು ಕಡಲು ವಿಷವಾದರೆ ನೀರೂ ವಿಷವಾಗದೆ ಇರಲಾರದು. ಕಡಲಿಗೆ ಮೀನುಗಾರರಷ್ಟೇ ಹಕ್ಕುದಾರರಲ್ಲ. ಮೀನುಗಾರರು ಕಡಲ ಪಾಲಕರಾಗಬೇಕೇ ಹೊರತು ಕಡಲ ನಾಶದ ಪಾಲುದಾರರಾಗಬಾರದು. ಪರಿಹಾರದ ಹಣವನ್ನು ಪಡೆದುಕೊಂಡರೆ ಅವರೂ ಪಾಲುದಾರರಾದಂತೆ ಆಗುತ್ತದೆ. ಕಡಲ ಮಕ್ಕಳು ಕಂಪೆನಿಯು ನೀಡಲು ಬಂದ ಪರಿಹಾರದ ಹಣವನ್ನು ತಿರಸ್ಕರಿಸಬೇಕು. ಕಡಲನ್ನು ತ್ಯಾಜ್ಯ ಗುಂಡಿಯಾಗಿಸಲು ಹೊರಟ ಕಂಪೆನಿಯ ಸಂಚನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.