ಬಾಲಗಂಗಾಧರ ಮತ್ತು ಡಂಕಿನ್ ಝಳಕಿ ಅವರು ವಚನ ಚಳವಳಿ ಕುರಿತು ಬರೆದಿರುವ ಸಂಶೋಧನೆಯ ಫಲಿತಗಳನ್ನು ಶಿವಪ್ರಕಾಶ್ ಅವರು, `ಪ್ರಜಾವಾಣಿ' ಅಂಕಣದಲ್ಲಿ ಪ್ರಶ್ನಿಸಿ ಬರೆದರು. (ಚಳವಳಿ ಎನ್ನುವ ಪದ ಸಾವಿರಾರು ವಚನಗಳಲ್ಲಿ ಒಮ್ಮೆಯೂ ಪ್ರಸ್ತಾಪ ಆಗಿಲ್ಲದಿರುವುದರಿಂದ ವಚನಗಳ ಕಾಲವನ್ನು ಚಳವಳಿ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲವೆಂದು ಈ ಸದರಿ ಸಮಾಜ ವಿಜ್ಞಾನಿಗಳು ಹೇಳಿಯಾರು) ಬಾಲಗಂಗಾಧರ ಅವರು ಜಾತಿ ಪದ್ಧತಿ ಭಾರತೀಯ ಸಮಾಜದ ಲಕ್ಷಣವಲ್ಲ. ಇದು ವಸಾಹತು ಕಣ್ಕಟ್ಟು ಎಂಬ ತಮ್ಮ ಕ್ರಾಂತಿಕಾರಕ ಸಂಶೋಧನೆಯನ್ನು ಹೆಗ್ಗೋಡಿನ ನೀನಾಸಂನಲ್ಲಿ ಮಂಡಿಸಿ ಕನ್ನಡದ ಮೇಲ್ವರ್ಗದ ವಿದ್ವಾಂಸರನ್ನು ಬೆಚ್ಚಿ ಬೀಳಿಸಿದ್ದರು. ಹಾಗೂ ತಮ್ಮ ಸಂಶೋಧನೆಯನ್ನು ಸಮರ್ಥಿಸಿಕೊಳ್ಳಲು ಕನ್ನಡದ ವಚನಗಳಲ್ಲಿ ಜಾತಿ ವಿರೋಧದ ನೆಲೆ ಇಲ್ಲವೆಂದು ಸಾರಿದರು. ಆ ದಿನಗಳಿಂದಲೂ ಬಾಲಗಂಗಾಧರ ಅವರು ನಮ್ಮನ್ನು ಜಾತಿಯ ಅಂಧತ್ವದಿಂದ ಬಿಡಿಸಲು ಹೋರಾಡುತ್ತಿದ್ದಾರೆ.
ಬಾಲಗಂಗಾಧರ ಅವರು ಹೇಳುವಂತೆ ಈಗಿನ ನಮಗಿರುವ ಜಾತಿ ಮತ್ತು ಜಾತಿ ಪದ್ಧತಿಯ ತಿಳಿವು, ಬ್ರಿಟಿಷ್ ವಸಾಹತು ನಮಗೆ ರೂಪಿಸಿಕೊಟ್ಟ ತಪ್ಪು ಕಲ್ಪನೆ. ಈ ಹುಸಿಯನ್ನು ನೆಚ್ಚಿದ ನಮ್ಮ ತಿಳಿವಳಿಕೆಯಿಂದಾಗಿಯೇ ನಾವು ವಚನಗಳನ್ನು ಜಾತಿ ವಿರೋಧಿ ಪಠ್ಯಗಳೆಂದು ತಪ್ಪಾಗಿ ಓದುತ್ತಿದ್ದೇವೆ. ಆದರೆ ಅದು ಸತ್ಯವಲ್ಲವೆಂಬುದು ಬಾಲಗಂಗಾಧರ ಅವರ ವಾದ. ಈ ಕ್ರಿಯೆ-ಪ್ರತಿಕ್ರಿಯೆಗಳ ಬೌದ್ಧಿಕ ಉತ್ಸಾಹವನ್ನು ಗಮನಿಸಿದರೆ ಎರಡು ನಡೆಗಳು ನಿಚ್ಚಳವಾಗಿ ಕಾಣುತ್ತಿವೆ. ವಚನಕಾರರನ್ನು ಆಪಾದಿತರೆಂದು ಕರೆದಿರುವ ಬಾಲಗಂಗಾಧರ ಒಂದು ದಂಡೆಯಾದರೆ, ವಚನಕಾರರನ್ನು ದೋಷಮುಕ್ತರೆನ್ನಲು ಸಾಕ್ಷ್ಯಗಳನ್ನು ಸಾದರಪಡಿಸುತ್ತಿರುವ ಪ್ರತಿವಾದಿ ವಕೀಲರಂತೆ ನಮ್ಮ ಹಿರಿಯ ವಿದ್ವಾಂಸರು ಇನ್ನೊಂದು ದಂಡೆಯಲ್ಲಿದ್ದಾರೆ. ವಚನಗಳನ್ನು ಸಮರ್ಥಿಸುತ್ತಿರುವ ವಿದ್ವಾಂಸರು ಬಾಲಗಂಗಾಧರರ ಟ್ರಾಪ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಾಲಗಂಗಾಧರ ಅವರ ಸಂಶೋಧನಾ ವಿಧಾನದ ದೋಷವನ್ನು ಎತ್ತಿ ತೋರಿಸದೆ ಅವರ ಫಲಿತವನ್ನು ವಿರೋಧಿಸುವುದಕ್ಕೆ ಈ ಪ್ರತಿಕ್ರಿಯೆಗಳು ಸೀಮಿತವಾಗುತ್ತಿವೆ. ಸಂಶೋಧನೆಯ ಗುರಿಯ ಹುಳುಕನ್ನು ಅರಿಯುವುದು ಅಗತ್ಯವಾಗಿದೆ.
ಬಾಲಗಂಗಾಧರ ಅವರು ಮಂಡಿಸಿರುವ ಈ ಅಧ್ಯಯನವು ಭಾರತದಲ್ಲಿ ಹಿಂದುತ್ವದ ರಾಜಕಾರಣ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರ್ಥೈಸುವುದು ಮುಖ್ಯವೆಂದು ತೋರುತ್ತಿದೆ. ಸರಿಯಾಗಿ ಹೇಳಬೇಕೆಂದರೆ ಬಾಬರಿ ಮಸೀದಿಯ ಧ್ವಂಸದ ನಂತರದಲ್ಲಿ ಕನ್ನಡದಲ್ಲಿ ಮಾತ್ರವಲ್ಲದೆ ಭಾರತದ ಬೇರೆ ಭಾಷೆಗಳಲ್ಲೂ ಜಾತಿ ಮತ್ತು ಸನಾತನ ಮೌಲ್ಯಗಳನ್ನು ಸಮರ್ಥಿಸುವ ಆಲೋಚನಾ ಕ್ರಮಗಳು ಸಮಾಜಶಾಸ್ತ್ರಗಳ ಮೂಲಕ ಆರಂಭಗೊಂಡಿರುವುದನ್ನು ಗಮನಿಸಬೇಕು. ಅಲ್ಲದೆ ಯಾವ ಪಠ್ಯಗಳು ಆಕರಗಳು ಸ್ಥಳಗಳು ಸರ್ವ ಸಮಾನತೆಯನ್ನು ಪ್ರತಿಪಾದಿಸುತ್ತಿದ್ದವೋ ಅಂತಹ ನೆಲೆಗಳನ್ನು ಭಗ್ನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಕರ್ನಾಟಕದ ಬಾಬಾಬುಡನ್‌ಗಿರಿಯ ವಿವಾದ ಮತ್ತು ಕನ್ನಡ ಆದಿ ಕವಿ ಪಂಪ ಸಾರಿ ಹೇಳಿರುವ `ಮಾನವಕುಲಂ ತಾನೊಂದೇ ವಲಂ' ಎಂಬ ಹೇಳಿಕೆಯೂ ಜಾತಿ ವಿರೋಧವಾಗಿ ಹೇಳಿದ್ದಲ್ಲ ಎನ್ನುವ ಪ್ರಯತ್ನವು ಸಂಶೋಧನೆಯ ಹೆಸರಿನಲ್ಲಿ ಕೆಲ ವರ್ಷಗಳ ಹಿಂದೆ ನಡೆಯಿತು. ಇವುಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಈ ಪ್ರಯತ್ನಗಳು ಭಾರತ ಸಮಾಜ ಬುದ್ಧ ಬಸವ ಗಾಂಧಿ ಅಂಬೇಡ್ಕರ್ ಅಂತಹ ಮಹಾ ಮಾನವತಾವಾದಿಗಳ ನಿರಂತರ ಹೋರಾಟಗಳಿಂದ ರೂಪುಗೊಂಡಿದ್ದ ಸಮಾನತೆಯ ಕನಸನ್ನು ಹಾಗೂ ಸಮಾಜದಲ್ಲಿ ಬಲಗೊಳ್ಳುತ್ತಿರುವ ತಾಳಿಕೆಯ ಗುಣವನ್ನು ಮುರಿಯುವ ಹುನ್ನಾರದಂತೆ ಕಾಣುತ್ತವೆ. ನಮ್ಮ ವರ್ತಮಾನವನ್ನು ಮಾನವೀಯಗೊಳಿಸುವ ಸುಂದರಗೊಳಿಸುವ ಆಲೋಚನೆಗಳನ್ನು `ಸತ್ಯ' ಎನ್ನುವ ಹೆಸರಿನಲ್ಲಿ ಕೆಡಿಸಲು ಪ್ರಯತ್ನ ನಡೆಸಿರುವುದನ್ನು ಅರಿಯುವ ಅಗತ್ಯವಿದೆ. ಈಗ ವಚನಗಳ ಸರದಿ.
ಈ ಹಿನ್ನೆಲೆಯಲ್ಲಿ ಡಂಕಿನ್ ಅವರ ಸಂಶೋಧನೆಯನ್ನು ಗಮನಿಸಿದರೆ ಅದು ಗುರಿಯಾಗಿಸಿಕೊಂಡಿರುವುದು ಏನು? ಕಳೆದ ಎಂಟೊಂಬತ್ತು ಶತಮಾನಗಳಿಂದ ಯಾವ ಸಮಾಜ ವಿಜ್ಞಾನಿಯ ಶಿಫಾರಸು ಇಲ್ಲದೆ ಕನ್ನಡ ಸಮಾಜಗಳು ವಚನ ಪಠ್ಯಗಳನ್ನು ತಮ್ಮ ಜೀವಭಿತ್ತಿಯಾಗಿ ಕಾಪಾಡಿಕೊಂಡು ಬಂದಿವೆ. ವಚನಗಳ ಲೋಕ ತಲ್ಲಣದ ಲೋಕವಾಗಿರುವುದೇ ಅವು ಸಾಮಾಜಿಕ ಧಾರ್ಮಿಕ ಆರ್ಥಿಕ ಅಸಮಾನತೆಗಳನ್ನು ಕುರಿತು ಚಿಂತಿಸುವ ಕಾರಣಕ್ಕೆ. ಭಾರತೀಯ ಸಮಾಜದಲ್ಲಿ ಅಸಮಾನತೆಗಳನ್ನು ಹುಟ್ಟು ಹಾಕಿ ಪೋಷಿಸುತ್ತಿರುವ ಬಲಿಷ್ಠ ಸಾಮಾಜಿಕ ಸಂಸ್ಥೆ ಎಂದರೆ ಜಾತಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದಕಾರಣ ವಚನದಲ್ಲಿ ಜಾತಿ ಕುಲದ ಪದಗಳು ಪ್ರಸ್ತಾಪವಾಗದೆಯೂ ಅದರ ಅಸ್ತಿತ್ವವನ್ನು ಓದುಗರ ಅರಿವಿಗೆ ಬರುವುದನ್ನು ಕಾಣಬಹುದು.
ಇದನ್ನು ಹೀಗೂ ಹೇಳಬಹುದು. ವಚನದ ಎಲ್ಲಾ ಅವಯವಗಳು ಜಾತಿ ವಿರೋಧಿಯಾಗಿಯೇ ಪಿಸು ನುಡಿಯುವುದನ್ನು ಕೇಳಬಹುದು. ಆದ ಕಾರಣದಿಂದಲೇ ಪ್ರಾಥಮಿಕ ಶಾಲೆಯ ಪಠ್ಯಗಳಿಂದ ಮೊದಲ್ಗೊಂಡು ಶಿಕ್ಷಣದ ಎಲ್ಲಾ ಹಂತಗಳಲ್ಲಿ ವಚನಗಳನ್ನು ಓದಲು ಸಿಕ್ಕ ಅವಕಾಶವು, ಸ್ವಾತಂತ್ರ್ಯಾ ನಂತರದ ಗ್ರಾಮ ಸಮಾಜಗಳ ಯುವಜನರಲ್ಲಿ ತಮ್ಮ ತಮ್ಮ ಜಾತಿಗಳನ್ನು ಮೀರುವ ಹಾಗೂ ಧಾರ್ಮಿಕ ಮೌಢ್ಯಗಳನ್ನು ಪ್ರಶ್ನಿಸುವ ಮನೋಭೂಮಿಕೆಯನ್ನು ನಿರ್ಮಾಣ ಮಾಡಿದೆ. ಮೇಲ್ಜಾತಿಯವರಲ್ಲಿ ಜಾತಿ ತಿರಸ್ಕಾರ ಕಾಣಿಸಿಕೊಂಡರೆ ಕೆಳ ಜಾತಿಗಳಲ್ಲಿ ಅಪಮಾನಗಳನ್ನು ದಾಟುವ ಆತ್ಮವಿಶ್ವಾಸಕ್ಕೆ ಕಾರಣವಾಗಿವೆ. ವಚನಗಳ ಓದಿನಿಂದಾಗಿ ನಮ್ಮ ವರ್ತಮಾನ ಪಡೆದುಕೊಳ್ಳುತ್ತಿರುವ ಈ ಜಾತಿವಿರೋಧದ ಚೈತನ್ಯವನ್ನು ಹತ್ತಿಕ್ಕುವುದು ಈ ಸಂಶೋಧನೆಯ ಮೊದಲನೆಯ ಅಂತಸ್ಥ ಗುರಿಯಾಗಿದೆ.
ಇನ್ನು ಎರಡನೆಯ ಗುರಿ ವಚನಗಳ ಓದು ಕೆಳ ಜಾತಿ ಮತ್ತು ಕೆಳ ವರ್ಗಗಳ ಬದುಕಿನ ಸಾಂಸ್ಕೃತಿಕ ವಾಸ್ತವವನ್ನು ನಮ್ಮ ಮುಂದಿಡುವುದರಿಂದ ಆ ಸಮುದಾಯಗಳ ಸಾಮಾಜಿಕ ಅನ್ಯಾಯವನ್ನು ಮೀಸಲಾತಿಯಿಂದ ಸರಿ ಪಡಿಸಬಹುದು ಎನ್ನುವ ನಂಬಿಕೆಯನ್ನು ಹಾಗೂ ಮೀಸಲಾತಿಯನ್ನು ಒಪ್ಪುವ ಮನಃಸ್ಥಿತಿಯನ್ನು ವಚನಗಳ ಓದು ಉಂಟುಮಾಡುತ್ತಿತ್ತು. ಈ ಪ್ರಕ್ರಿಯೆಯನ್ನು ಭಗ್ನಗೊಳಿಸುವುದು ಈ ಸಂಶೋಧನೆಯ ಮತ್ತೊಂದು ಮಜಲು. ಇಂದಿನ ಭಾರತ ಸಮಾಜದ ಹಿನ್ನಡೆಗೆ, ಭ್ರಷ್ಟಾಚಾರಕ್ಕೆ, ಮೀಸಲಾತಿ ನೀತಿಯೇ ಕಾರಣವೆಂದು ಬಾಲಗಂಗಾಧರ ಮತ್ತು ಅವರಂತಹ ಅನೇಕ ಮೇಲ್ವರ್ಗದ ವಿದ್ವಾಂಸರು ಸಂಶೋಧಿಸಿ ಹೇಳುತ್ತಿದ್ದಾರೆ ಮತ್ತು ಅನೇಕ ಕಾರ್ಪೊರೇಟ್ ಕಂಪೆನಿಯ ಮಾಲಿಕರು ಈ ವಾದಕ್ಕೆ ಧ್ವನಿಗೂಡಿಸುತ್ತಿದ್ದಾರೆ. ಸಂಶೋಧನೆಗಳಿಗೆ ಹಣ ನೀಡುತ್ತಿದ್ದಾರೆ. ಇದೇನು ಗುಟ್ಟಿನ ಸಂಗತಿಯಲ್ಲ. ಈಚಿಗೆ ನಡೆದ ಆಶೀಶ್ ನಂದಿ ಮತ್ತು ಕಾಂಚ ಐಲಯ್ಯ ಅವರ ವಾಗ್ವಾದವನ್ನು ನೆನಪಿಗೆ ತಂದುಕೊಳ್ಳಬಹುದು.
ಇನ್ನು ಮೂರನೆಯ ಆಯಾಮವು ಸ್ವಲ್ಪ ದೂರಗಾಮಿ ದೃಷ್ಟಿಯನ್ನು ಒಳಗೊಂಡಿದೆ. ವಚನಗಳಲ್ಲಿ ಜಾತಿ ವಿರೋಧವಿಲ್ಲವೆಂದ ಮೇಲೆ ಸಮಾಜದಲ್ಲಿ ಜಾತಿಪದ್ಧತಿಯೂ ಇಲ್ಲವೆಂದೇ ಅರ್ಥ. ಪ್ರಜಾಪ್ರಭುತ್ವ ಸರ್ಕಾರಗಳು ಜಾರಿಗೆ ತರುತ್ತಿರುವ ಜನ ಕಲ್ಯಾಣ ಯೋಜನೆಗಳು ಕೆಳ ತಳ ಜಾತಿಯ ಸಮುದಾಯಗಳಿಗೆ ದಕ್ಕುವುದರಿಂದ ಮೇಲ್ಜಾತಿಗೆ ಸೇರಿದ ಬಡವರಾಗಿರುವವರಿಗೆ ಯೋಜನೆಯ ಲಾಭ ಸಿಗುತ್ತಿಲ್ಲ. ಬ್ರಾಹ್ಮಣರಲ್ಲಿ ಬಡವರಿಲ್ಲವೆ? ಎಂದು ಪ್ರಶ್ನಿಸುವವರು ಎಲ್ಲಾ ಕಡೆ ಕಾಣಸಿಗುತ್ತಾರೆ. ಆದ್ದರಿಂದ ಜಾತಿಪದ್ಧತಿ ಇಲ್ಲವೆಂದು ಸಂಶೋಧನೆಗಳ ಮೂಲಕ ಸಾಧಿಸಿದರೆ ಸಾಮಾಜಿಕ ಏಣಿ ಶ್ರೇಣಿಯ ಮಾನದಂಡ ಕುಸಿದು ಹೋಗುವುದು. ಆಗ ಎಲ್ಲಾ ಜಾತಿಯ ಬಡವರು ಒಂದೇ ಆಗುತ್ತಾರೆ. ಆಗ ಬ್ರಾಹ್ಮಣರಿಗೂ ರಾಷ್ಟ್ರೀಯ ಸಂಪನ್ಮೂಲದಲ್ಲಿ ಫಲ ಸಿಗುತ್ತದೆ ಎನ್ನುವ ಗುಪ್ತ ಕಾರ್ಯಯೋಜನೆಯನ್ನೂ ಇದು ಒಳಗೊಂಡಿದೆ.
ಈ ಮೂರು ಸಾಮಾಜಿಕ ಆಯಾಮಗಳ ಜೊತೆಗೆ ಕನ್ನಡ ಬದುಕಿನ ಪ್ರಧಾನ ಗುಣ ವೈದಿಕ ವಿರೋಧವಾಗಿದೆ. ಪಂಪನಾದಿಯಾಗಿ ಅಲ್ಲಮ ಸಂತರು ಕುವೆಂಪು ಮಹಾದೇವರವರೆಗೂ ಕನ್ನಡದ ಮಹತ್ವದ ಲೇಖಕರು ಅಂದಂದಿಗೆ ತಮ್ಮ ಸೃಜನಶೀಲ ಕೃತಿಗಳಲ್ಲಿ ಪುರೋಹಿತಶಾಹಿಯನ್ನು ಖಂಡಿಸಿಯೇ ಮೇರು ಕೃತಿಗಳನ್ನು ಕಟ್ಟಿದ್ದಾರೆ. ಕನ್ನಡ ಜಾನಪದ ಪುರಾಣಗಳು ತಾರತಮ್ಯಗಳ ಸಾಂಸ್ಕೃತಿಕ ರಾಜಕಾರಣವನ್ನು ಈಡಾಡಿವೆ. ಇಂಗ್ಲಿಷ್ ವಿದ್ಯಾಭ್ಯಾಸದ ಕೊಡುಗೆಯೂ ಇದೆ. ಹೀಗೆ ರೂಪುಗೊಂಡಿರುವ ಕನ್ನಡದ ವೈಚಾರಿಕ ಪ್ರಜ್ಞೆಯನ್ನು ಒಡೆಯುವ ಹುನ್ನಾರದಿಂದ ಬಾಲಗಂಗಾಧರ ಮತ್ತು ಅವರ ಮಿತ್ರರು ಕಾರ್ಯಪ್ರವೃತ್ತರಾಗಿದ್ದಾರೆ. ಈ ಎಲ್ಲಾ ಬೌದ್ಧಿಕ ಮೇಲಾಟಗಳು ಶತಮಾನಗಳಿಂದ ತುಳಿತಕ್ಕೆ ಒಳಗಾದ ಸಮುದಾಯಗಳ ಸಾಮಾಜಿಕ ಮೇಲ್ಚಲನೆಯನ್ನು ತಡೆಯುವ ಅಸಹನೆಯ ಸನಾತನ ಪ್ರಯತ್ನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.