ADVERTISEMENT

ಕನ್ನಡಾಂಬೆಯ ಕೃಪೆಯಿಂದ... ಸ್ವಾಗತ ಭಾಷಣ

ಗಿರೀಶ ಕಾರ್ನಾಡ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಸಭಿಕರೆ,
ಈ ಸಭೆಗೆ ಮುಖ್ಯ ಅತಿಥಿಯಾಗಿ ಬಂದಿರುವ ನಮ್ಮ ಪ್ರೀತಿಯ ಮುಖ್ಯಮಂತ್ರಿಗಳಾದ ಶ್ರೀಯುತ ಉದ್ದಂಡಮೂರ್ತಿ ಅವರನ್ನು ಸ್ವಾಗತಿಸುವಾಗ ನನಗೆ ಎಷ್ಟು ಸಂತೋಷವಾಗುತ್ತಿದೆ ಎಂದು ಬೇರೆ ಹೇಳಬೇಕಾಗಿಲ್ಲ. ರಾಜ್ಯದ ಕಲ್ಯಾಣಕ್ಕಾಗಿ ತನ್ನ ತನು-ಮನ-ಧನಗಳನ್ನರ್ಪಿಸಿದ ಈ ಮಹಾಪುರುಷರು ಈ ನಾಡಿನ ಭಾಗ್ಯವಿಧಾತರಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ನಮ್ಮ ನಾಡು ಪರಿಪರಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಾಗ ನಮ್ಮ ನೆಚ್ಚಿನ ಮುಖ್ಯಮಂತ್ರಿಗಳು ಎದೆಗೆಡದೆ ಅವುಗಳ ಪರಿಹಾರದ ಹೊಣೆ ಹೊತ್ತಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ.

ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಇತರ ರಾಜ್ಯಗಳ ರಾಜಕೀಯ ಜೀವನ ಅತ್ತಿಂದಿತ್ತ ಹೊಯ್ದೊಡುತ್ತಿರುವುದನ್ನು ನಾವು ನಿರೀಕ್ಷಿಸಿದಾಗ ನಾವು ಕನ್ನಡಿಗರು ಹೆಮ್ಮೆ ಪಡಬಹುದಾದಂಥ ಒಂದು ವಿಶೇಷ ಮಾತು ನಮಗೆ  ಮನದಟ್ಟಾಗುತ್ತದೆ. ಅದೆಂದರೆ ಕನ್ನಡಾಂಬೆಯ ಕೃಪೆಯಿಂದ ಕರ್ನಾಟಕ ಮೊದಲಿನಿಂದಲೂ ಬೇರೆ ರಾಜ್ಯದ ಜನರು ಅಸೂಯೆ ಪಡುವಂಥ  ಅತ್ಯುತ್ತಮ ಶ್ರೇಣಿಯ ಮುಖ್ಯಮಂತ್ರಿಗಳನ್ನೇ ಪಡೆದಿದೆ. (ಚಪ್ಪಾಳೆ).

ಉದಾಹರಣೆಗೆ ಸನ್ಮಾನ್ಯ ಉದ್ದಂಡಮೂರ್ತಿಗಳಿಗಿಂತ ಮೊದಲು ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಚಂದನಗೌಡರನ್ನೇ ಇಲ್ಲಿ ನೆನೆಸಿಕೊಳ್ಳಬಹುದು. ಅವರು ಉದ್ದಂಡಮೂರ್ತಿಗಳಿಗೆ ಮಾರ್ಗದರ್ಶಕರು, ಗುರುಗಳು, ಫ್ರೆಂಡ್-ಗೈಡ್-ಅಂಡ್-ಫಿಲಾಸಫರ್ ಆಗಿದ್ದರು.  ನಾನು ಇಲ್ಲಿ ನಿಮ್ಮೆದುರಿಗೆ ನಿಂತು ಮೊನ್ನೆ-ಮೊನ್ನೆ ಅವರನ್ನು ಮುಖ್ಯಮಂತ್ರಿಗಳಾಗಿ ಸ್ವಾಗತಿಸಿ ನಾಲ್ಕು ಮಾತುಗಳನ್ನಾಡಿದ್ದು ನಿಮಗೆ ನೆನಪಿರಬಹುದು.

ನಾವು ಮೊನ್ನೆಯೇ ಅವರನ್ನು ಸ್ವಾಗತಿಸಿದ್ದು ನಮ್ಮ ಅದೃಷ್ಟ. ಏಕೆಂದರೆ ನಿನ್ನೆ ಬೆಳಗಾಗುವಷ್ಟರಲ್ಲಿ ಸನ್ಮಾನ್ಯ ಚಂದನಗೌಡರು ಅನಿರೀಕ್ಷಿತವಾಗಿ ಪದತ್ಯಾಗ ಮಾಡಿದರು. `ನನಗೆ ಇನ್ನು ಈ ಮುಖ್ಯಮಂತ್ರಿ ಪದ ಬೇಡ, ನಾನು ನಮ್ಮ ಪಕ್ಷದ ಸೇವೆಯಲ್ಲೇ ನನ್ನನ್ನು ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ~ ಎಂದು ಘೋಷಣೆ ಮಾಡಿ ಸ್ವಇಚ್ಛೆಯಿಂದ ಅಧಿಕಾರವನ್ನು ತೊರೆದ ಪವಾಡ ನಮ್ಮ ಕಣ್ಣೆದುರಿಗೇ ನಡೆಯಿತು.

ಅಂತಹ ಸಂದರ್ಭದಲ್ಲಿ ಇನ್ನು ಮುಂದೆ ಕರ್ನಾಟಕದ ಭವಿತವ್ಯವೇನು ಎಂಬ ಚಿಂತೆಯಲ್ಲಿ ಇಡೀ ನಾಡೇ ಮುಳುಗಿರುವಾಗ ಶ್ರೀ ಉದ್ದಂಡಮೂರ್ತಿಗಳು ತಾವಾಗಿ ಮುಂದೆ ಬಂದು ಆ ಹೊಣೆಯನ್ನು ಹೊತ್ತುಕೊಂಡು ತೋರಿಸಿದ ದೇಶಪ್ರೇಮ, ಕನ್ನಡಾಭಿಮಾನ, ಸೇವಾಬುದ್ಧಿ ನಮ್ಮನ್ನೆಲ್ಲ ಗದ್ಗದಗೊಳಿಸಿದೆ. (ಚಪ್ಪಾಳೆ).

ಅಧಿಕಾರವನ್ನು ವಹಿಸಿಕೊಂಡ ಗಳಿಗೆಯಿಂದ ನಮ್ಮ ಮುಖ್ಯಮಂತ್ರಿಗಳು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು  ಬಿಡಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬ ಮಾತು ನಮಗೆಲ್ಲರಿಗೂ ವಿದಿತ. ಕರ್ನಾಟಕದ ಆದರ್ಶ ರಾಜಕೀಯವನ್ನು ಕಂಡು  ನಮ್ಮ ನೆರೆಹೊರೆಯ ರಾಜ್ಯದ ಪುಢಾರಿಗಳಿಗೆ ಹಾಗೂ ಸಂಪರ್ಕ ಮಾಧ್ಯಮಗಳಿಗೆ ಎಂಥ ಅಸೂಯೆ ಉಂಟಾಗಿದೆ ಎಂಬುದನ್ನು ನಾನು ಮತ್ತೆ ಬಣ್ಣಿಸಬೇಕಾಗಿಲ್ಲ.

ಈ ಅಸೂಯೆಯ ಕಾರಣದಿಂದಲೇ ರಾಷ್ಟ್ರೀಯ ಮಾಧ್ಯಮಗಳು ಕೂಡ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಮ್ಮ ರಾಜ್ಯ ಸಾಧಿಸಿದ ಪ್ರಗತಿಯನ್ನು ಮರೆ ಮಾಡಿ ಇಲ್ಲಿ ಕೇವಲ ಭ್ರಷ್ಟಾಚಾರ, ಲಂಚಗುಳಿತನ, ಕೋಮು ರಾಜಕೀಯ ನಡೆದಿದೆ ಎಂಬ ಅಪಪ್ರಚಾರ ನಡೆಸಿರುವದೂ ಎಲ್ಲರಿಗೂ ಗೊತ್ತಿದ್ದ ವಿಷಯ.
 
ಈ ಕಳಂಕವನ್ನು ತೊಳೆದು ಹಾಕಿ ಕರ್ನಾಟಕಕ್ಕೆ ಅದರ ಸಾಂಪ್ರದಾಯಿಕ ಕೀರ್ತಿ ಲಭಿಸುವಂತೆ ಮಾಡಬೇಕು ಎಂಬ ಉದ್ದೇಶದಿಂದ ನಮ್ಮ ನೆಚ್ಚಿನ ಮುಖ್ಯಮಂತ್ರಿ ಶ್ರೀಮಾನ್ ಮೋಟೆಬೆನ್ನೂರ ಅವರು ನಿರಂತರವಾಗಿ  ತೊಳಲಾಡುತ್ತಿದ್ದುದೂ ನಿಮಗೆ ಗೊತ್ತಿದ್ದದ್ದೇ.

ಕರ್ನಾಟಕದ 50 ವರ್ಷಗಳ ಚೈತನ್ಯಪೂರ್ಣ ಇತಿಹಾಸದ ಹಿನ್ನೆಲೆಯನ್ನು ಗಮನಿಸಿದಾಗ ಮುಖ್ಯಮಂತ್ರಿ ಮೋಟೆಬೆನ್ನೂರ ಅವರು ಅಧಿಕಾರದಲ್ಲಿ ಕಳೆದಿರುವ ಕೇವಲ ಐದಾರು ಗಂಟೆಗಳ ಅವಧಿ ದೀರ್ಘ ಸಮಯ ಎಂದು ಅನಿಸಲಿಕ್ಕಿಲ್ಲ ನಿಜ. ಆದರೂ ಅವರಿಗಿಂತ ಮೊದಲು  ಮುಖ್ಯಮಂತ್ರಿಗಳಾಗಿದ್ದ ಶ್ರೀ ಉದ್ದಂಡಮೂರ್ತಿ ಅವರ ಸ್ವಾಸ್ಥ್ಯ ಏಕಾಏಕಿ ಬಿಗಡಾಯಿಸಿದ್ದರ ಪರಿಣಾಮವಾಗಿ ಅವರು ವಿಶ್ರಾಂತಿಗಾಗಿ ದಿಲ್ಲಿಗೆ ಹೋಗಬೇಕಾಗಿ ಬಂತು.

ಅಲ್ಲಿ ಅವರು ತನ್ನ ಅನುಪಸ್ಥಿತಿಯಲ್ಲಿ ಸನ್ಮಾನ್ಯ ಮೋಟೆಬೆನ್ನೂರರೇ ಮುಖ್ಯಮಂತ್ರಿ ಪದಕ್ಕೆ ಯೋಗ್ಯರು ಎಂದು ಹೈ ಕಮಾಂಡಿಗೆ ಮನದಟ್ಟು ಮಾಡಿದರು. (ಚಪ್ಪಾಳೆ). ಅವರು ತಮ್ಮಲ್ಲಿ ತೋರಿಸಿದ ಈ  ನಂಬಿಗೆ ಹುಸಿಯಾಗದಂತೆ ಮುಖ್ಯಮಂತ್ರಿ  ಮೋಟೆಬೆನ್ನೂರ ಅವರು ಈ ಪದವನ್ನು ಸ್ವೀಕರಿಸಿದ ಅಲ್ಪಾವಧಿಯಲ್ಲೇ ತಮ್ಮ ಕರ್ತೃತ್ವಶಕ್ತಿಯಿಂದ ನಮ್ಮ ನಾಡು ಉಳಿದ ರಾಜ್ಯಗಳೆದುರಿಗೆ ತಲೆಯೆತ್ತಿ ನಿಲ್ಲುವಂತೆ ಮಾಡಿದ್ದು ಅವರ ದಕ್ಷತೆಗೆ, ದೂರದೃಷ್ಟಿಗೆ, ರಾಜಕೀಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. (ಚಪ್ಪಾಳೆ).

ಕರ್ನಾಟಕದ, ಕನ್ನಡಿಗರ ಸಮೃದ್ಧಿಯನ್ನು ಬಿಗುಮಾನದಿಂದಲೇ ಕಾಣುವ ಶಕ್ತಿಗಳು ನಮ್ಮನ್ನು ಬೇಕಾದಷ್ಟು ಹಳಿಯಲಿ. ಗೇಲಿ ಮಾಡಲಿ. ಆದರೆ ನನ್ನ ಪಾಲಿಗೆ ಉಳಿದಿರುವ ಈ ಎರಡು ನಿಮಿಷಗಳಲ್ಲಿ ಆ ಭುವನೇಶ್ವರಿಯ ಕೃಪೆಯನ್ನು ಸ್ಮರಿಸಿ.

ಪಂಪ ರನ್ನ ಬಸವ ಕುಮಾರವ್ಯಾಸರಂಥ ಮಹಾಮಹಿಮರ  ಸಂಪ್ರದಾಯ ನನ್ನದಾಗಿದೆಯಲ್ಲ ಎಂದು ಹೆಮ್ಮೆ ಪಡುತ್ತ, ಇಷ್ಟೊಂದು ದೀರ್ಘ ಕಾಲ ನಮ್ಮ ಶಾಸಕರು, ಪಾಲಕರು, ಧುರೀಣರು ಆಗಿದ್ದ ಸನ್ಮಾನ್ಯ ಶ್ರೀ ಉದ್ದಂಡಮೂರ್ತಿಗಳು ಕರ್ನಾಟಕದ ಸಮಸ್ತ ಜನತೆಯ ಬೇಡಿಕೆಗೆ ತಲೆವಾಗಿ, ಮರಳಿ ನಮ್ಮ ನಾಡಿನ ಮುಖ್ಯಮಂತ್ರಿಗಳಾಗಿ ರಾಜ್ಯದ ಸೂತ್ರಗಳನ್ನು ಕೈಗೆತ್ತಿಕೊಂಡಿರುವುದಕ್ಕೆ ಅವರನ್ನು ಅಭಿನಂದಿಸುತ್ತಾ ನಾನು ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.
(ಮೂಲ ಕಲ್ಪನೆ ಪರಕೀಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.