ADVERTISEMENT

ಕನ್ನಡ ಇ-ಪುಸ್ತಕ ಜಗತ್ತಿನ ವರ್ತಮಾನ

ಸಂಗತ

ಎಚ್.ಕೆ.ಶರತ್
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಕನ್ನಡ ಪುಸ್ತಕ ಓದಿನೆಡೆಗೆ ಆಸಕ್ತಿ ಹೊಂದಿರುವ ಹತ್ತು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ‘ನಾನೊಬ್ಬ ಪುಸ್ತಕಪ್ರೇಮಿ’ ಹೆಸರಿನ ಫೇಸ್‌ಬುಕ್ ಗುಂಪಿನಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಚರ್ಚೆ, ವರ್ತಮಾನದ ಕನ್ನಡ ಪುಸ್ತಕ ಓದುಗರ ವೈವಿಧ್ಯಮಯ ಮನಸ್ಥಿತಿಗೆ ಕನ್ನಡಿ ಹಿಡಿಯುವ ಜೊತೆಗೆ, ಈ ಓದುಗರನ್ನು ಒಳಗೊಳ್ಳಲು ಸಾಧ್ಯವಿರುವ ಡಿಜಿಟಲ್ ದಾರಿಗಳಿಗೆ ಕನ್ನಡ ಪುಸ್ತಕ ಪ್ರಕಾಶಕರು ಏಕೆ ಬೆನ್ನು ತೋರುತ್ತಿದ್ದಾರೆ ಎಂಬ ಪ್ರಶ್ನೆಯನ್ನೂ ಮುಖಾಮುಖಿಯಾಗಿಸುತ್ತದೆ.
 
ಮುದ್ರಿತ ಪುಸ್ತಕಗಳ ಪ್ರಕಟಣೆಯೊಂದಿಗೆ ಆಯಾ ಪುಸ್ತಕಗಳ ವಿದ್ಯುನ್ಮಾನ ಆವೃತ್ತಿಯನ್ನೂ ಏಕೆ ಹೊರತರಬಾರದು ಎಂಬ ಪ್ರಶ್ನೆಯನ್ನು ಡಿಜಿಟಲ್ ಮೋಹಿ ಓದುಗ ವರ್ಗ ಮುಂದಿಡುತ್ತಿದೆ. ಈ ನಿಟ್ಟಿನಲ್ಲಿ ಕೆಲವರು ಈಗಾಗಲೇ ಆರಂಭಿಕ ಹೆಜ್ಜೆಗಳನ್ನು ಇಡುತ್ತಿದ್ದಾರಾದರೂ, ಅಂತಹವರ ಸಂಖ್ಯೆ ಹೆಚ್ಚಾಗಲಿ ಎಂಬುದು ಇ-ಪುಸ್ತಕ ಓದುಗರ ಆಶಯ.
 
ಒಂದೆಡೆ ‘ಕನ್ನಡ ಇ-ಪುಸ್ತಕಗಳನ್ನು ನಾವು ಹಣ ಕೊಟ್ಟು ಓದುತ್ತೇವೆ, ನೀವು ಇ-ಆವೃತ್ತಿಯನ್ನು ಹೊರತನ್ನಿ’ ಎಂದು ಆಗ್ರಹಿಸುವ ಓದುಗ ವರ್ಗವಿದ್ದರೆ, ಮತ್ತೊಂದೆಡೆ ತಮ್ಮ ಬಳಿ ಇರುವ ಮುದ್ರಿತ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಎಲ್ಲರೊಂದಿಗೂ ಹಂಚಿಕೊಳ್ಳುವ ಉಮೇದು ಕೆಲವರನ್ನು ಆವರಿಸಿದೆ. ಇತ್ತೀಚೆಗಷ್ಟೆ ಪ್ರಕಟವಾದ ಎಸ್.ಎಲ್.ಭೈರಪ್ಪನವರ ‘ಉತ್ತರಕಾಂಡ’ ಕೃತಿಯ ಪಿ.ಡಿ.ಎಫ್. ಯಾರ ಬಳಿಯಾದರೂ ಇದ್ದರೆ ಹಂಚಿಕೊಳ್ಳಿ ಎಂಬಂತಹ ಪೋಸ್ಟುಗಳು ಸಹ ಫೇಸ್‌ಬುಕ್‌ನಲ್ಲಿರುವ ಕೆಲ ಪುಸ್ತಕ ಪ್ರಿಯರ ಗುಂಪುಗಳಲ್ಲಿ ಹರಿದಾಡಿದವು. ಈಗಾಗಲೇ ಪ್ರಕಾಶಕರು ಹಾಗೂ ಲೇಖಕರ ಅನುಮತಿ ಪಡೆದುಕೊಳ್ಳದೆ ಹಲವರು ತಮ್ಮ ಬಳಿ ಇರುವ ಮುದ್ರಿತ ಪುಸ್ತಕಗಳ ಪಿ.ಡಿ.ಎಫ್. ಸಿದ್ಧಪಡಿಸಿ ವಿವಿಧ ತಾಣಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಈ ಬೆಳವಣಿಗೆ ಸ್ವೀಕಾರಾರ್ಹವೇ ಮತ್ತು ಕಾನೂನು ಕ್ರಮದ ಅಸ್ತ್ರ ಮುಂದೊಡ್ಡಿ ಇದಕ್ಕೆ ಕಡಿವಾಣ ವಿಧಿಸಲು ಸಾಧ್ಯವೇ ಎಂಬ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.
 
ಕನ್ನಡ ಪುಸ್ತಕ ಓದುಗರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ ಎಂಬ ಅನಿಸಿಕೆ ವ್ಯಾಪಕವಾಗುತ್ತಿರುವ ಹೊತ್ತಿನಲ್ಲಿಯೇ, ಅಷ್ಟೇನೂ ಓದುಗ ಸ್ನೇಹಿಯಲ್ಲದ, ಸ್ಕ್ಯಾನ್ ಮಾಡಿ ಸಿದ್ಧಪಡಿಸಿದ ಡಿಜಿಟಲ್ ಪ್ರತಿಗಳು ಉಚಿತವಾಗಿ ಸಿಗುತ್ತವೆ ಎಂಬ ಕಾರಣಕ್ಕಾಗಿಯೇ ಓದಲು ಇನ್ನಿಲ್ಲದ ಉತ್ಸಾಹ ತೋರುವ ಓದುಗ ವರ್ಗವೊಂದು ಸೃಷ್ಟಿಯಾಗುತ್ತಿರುವುದು ಯಾವ ಸಂದೇಶ ರವಾನಿಸುತ್ತದೆ? ಈ ಬೆಳವಣಿಗೆ ಮುದ್ರಿತ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಇಳಿಮುಖವಾಗಲು ನಿಜಕ್ಕೂ ಕಾರಣವಾಗುತ್ತದೆಯೇ? ಅಥವಾ ಹೊಸ ಪೀಳಿಗೆಯ ಓದುಗರು ರೂಪುಗೊಳ್ಳಲು ನೆರವಾಗುತ್ತದೆಯೇ ಎಂಬುದು ಸ್ಪಷ್ಟವಾಗದ ಗೋಜಲು ಸ್ಥಿತಿ ನಿರ್ಮಾಣವಾಗಿದೆ. ಬೇರೆ ಭಾಷೆಗಳಲ್ಲಿ ಪರ್ಯಾಯ ಅಥವಾ ಪೂರಕ ಪ್ರಕಟಣೆ ಮತ್ತು ಓದುವ ವಿಧಾನವಾಗಿ ಹೊರಹೊಮ್ಮುತ್ತಿರುವ ಇ-ಪುಸ್ತಕ ಪ್ರಯೋಗಕ್ಕೆ ಕನ್ನಡದಲ್ಲೂ ನೈತಿಕ ಚೌಕಟ್ಟೊಂದು ರೂಪುಗೊಳ್ಳಬೇಕಿದೆ.
 
‘ಹೊಸಬರ ಪುಸ್ತಕ ಪ್ರಕಟಿಸಿದರೆ ಯಾರು ಕೊಂಡು ಓದುತ್ತಾರೆ’ ಎನ್ನುವ ಪ್ರಕಾಶಕರು, ‘ನಮ್ಮ ಪುಸ್ತಕ ಪ್ರಕಟಿಸಲು ಯಾರೂ ಮುಂದೆ ಬರುತ್ತಿಲ್ಲ’ ಎಂದು ನೊಂದುಕೊಳ್ಳುವ ಲೇಖಕರು, ಪುಸ್ತಕ ಪ್ರಕಟಿಸಿದರೂ ಓದುಗರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲವೆಂದು ಕೊರಗುವ ಲೇಖಕ ಹಾಗೂ ಪ್ರಕಾಶಕರು ಹೆಚ್ಚು ಬಂಡವಾಳ ಬೇಡದ ಇ-ಪುಸ್ತಕ ಪ್ರಕಟಣೆಯತ್ತ ಏಕೆ ಮುಖ ಮಾಡಬಾರದು? ಜನಪ್ರಿಯ ಲೇಖಕರ ಪುಸ್ತಕಗಳೂ ಕೊಂಡು ಓದುವ ಇ-ಪುಸ್ತಕಗಳಾಗಿ ಲಭ್ಯವಾಗುವುದು ಸೂಕ್ತವಲ್ಲವೇ?
 
ಕನ್ನಡದಲ್ಲಿ ಇ-ಪುಸ್ತಕ ತರಲು ಪ್ರಕಾಶಕರು ಏಕೆ ಹಿಂಜರಿಯುತ್ತಿದ್ದಾರೆ ಎಂದು ಪರಿಶೀಲಿಸಲು ಮುಂದಾದರೆ, ಮತ್ತೊಂದು ವಾಸ್ತವ ಮುಖದ ಪರಿಚಯ ಆಗುತ್ತದೆ. ಇ-ಪುಸ್ತಕ ಬೇಡುವ ಬಂಡವಾಳ ಅತ್ಯಲ್ಪ. ಆದರೆ, ವ್ಯಾವಹಾರಿಕ ದೃಷ್ಟಿಕೋನದಿಂದಲೇ ನೋಡುವುದಾದರೆ, ಸದ್ಯದ ಮಟ್ಟಿಗೆ ಇರುವ ಇ-ಪುಸ್ತಕ ಕೊಂಡು ಓದುವವರ ಸಂಖ್ಯೆಯು ಆ ಅತ್ಯಲ್ಪ ಬಂಡವಾಳವನ್ನು ಹಿಂದಿರುಗಿಸುವಷ್ಟೂ ಶಕ್ತವಾಗಿಲ್ಲವೆಂಬುದು ಮನದಟ್ಟಾಗುತ್ತದೆ. ಆದರೆ, ಈಗಾಗಲೇ ತಮ್ಮದೇ ಆದ ಓದುಗ ವರ್ಗ ಹೊಂದಿರುವ ಬರಹಗಾರರ ಪುಸ್ತಕಗಳೆಲ್ಲವೂ ಅಧಿಕೃತವಾಗಿಯೇ ಇ-ಆವೃತ್ತಿಗಳಲ್ಲೂ ಲಭ್ಯವಾಗುತ್ತ ಹೋದರೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯೂ ಇದೆ.
 
ಮುದ್ರಿತ ಪುಸ್ತಕ ಓದುವುದರಲ್ಲಿ ಇರುವ ಸುಖ ಇ-ಪುಸ್ತಕ ಓದುವುದರಲ್ಲಿಲ್ಲ. ಕಪಾಟುಗಳ ನಡುವಿನಿಂದ ಪುಸ್ತಕ ತೆರೆದು, ಹಾಳೆಗಳನ್ನು ಸ್ಪರ್ಶಿಸಿ, ವಿಶೇಷ ಸುವಾಸನೆ ಆಸ್ವಾದಿಸುವ ಮೂಲಕ ಹತ್ತುವ ಓದಿನ ರುಚಿಯನ್ನು ಇ-ಪುಸ್ತಕ ಸಂಸ್ಕೃತಿ ಹಾಳುಗೆಡವುತ್ತದೆ ಎಂದು ಮೂಗು ಮುರಿಯಬಹುದು. ಆದರೆ, ಇದೇ ವೇಳೆ ನಮ್ಮ ಜೀವನಶೈಲಿಯಲ್ಲಾಗಿರುವ ಪಲ್ಲಟಗಳತ್ತಲೂ ಕಣ್ಣುಹಾಯಿಸಬೇಕಿದೆ. ಮೊಬೈಲು, ಟ್ಯಾಬ್ಲೆಟ್ಟು, ಲ್ಯಾಪ್‌ಟಾಪುಗಳಲ್ಲಿಯೇ ಮುಳುಗಿ ಮೇಲೇಳುತ್ತಿರುವ ಯುವ ಸಮುದಾಯವನ್ನು ಕನ್ನಡ ಪುಸ್ತಕ ಓದಿನೆಡೆಗೆ ಸೆಳೆಯುವ ನಿಟ್ಟಿನಲ್ಲಿ ಇ-ಪುಸ್ತಕಗಳು ಕೊಂಚವಾದರೂ ನೆರವಾಗುವ ಸಂಭವವಂತೂ ಇದ್ದೇ ಇದೆ.
 
ಇನ್ನು ಪುಸ್ತಕ ಪ್ರಕಟಣೆ ಶ್ರಮದಾಯಕವಾಗದೆ, ಎಲ್ಲರ ಬೆರಳ ತುದಿಗೆ ಎಟಕುವಂತಾದರೆ ಜೊಳ್ಳಿನ ವಿಜೃಂಭಣೆ ಪ್ರಾರಂಭವಾಗುತ್ತದೆ ಎನ್ನುವ ವಾದವೂ ಹೊಮ್ಮಬಹುದು. ಆ ರೀತಿಯ ಜೊಳ್ಳು, ಮುದ್ರಿತ ಪುಸ್ತಕಗಳಾಗಿಯೂ ಹೊರಹೊಮ್ಮುವುದಲ್ಲವೇ?
 
ಪುಸ್ತಕಗಳನ್ನು ತಾವೇ ಪ್ರಕಟಿಸಿ ತಮ್ಮ ಆತ್ಮೀಯರಿಗೆ ವಿಶ್ವಾಸಪೂರ್ವಕವಾಗಿ ಹಂಚಿ ಸುಮ್ಮನಾಗುವ ಎಷ್ಟೋ ಬರಹಗಾರರು ನಮ್ಮ ನಡುವೆ ಇದ್ದಾರೆ. ಅಂತಹವರಾದರೂ ತಮ್ಮ ಬರಹಗಳನ್ನು ಇ-ಪುಸ್ತಕವಾಗಿ ಹೊರತರುವ ಮೂಲಕ ಒಂದಷ್ಟು ಓದುಗರನ್ನು ತಲುಪುವ ಪ್ರಯತ್ನ ಮಾಡಬಹುದು.
 
ಇ-ಪುಸ್ತಕಗಳು ಖಂಡಿತ ಮುದ್ರಿತ ಪುಸ್ತಕಗಳ ಸ್ಥಾನ ತುಂಬಲಾರವು. ಪುಸ್ತಕ ಪ್ರಕಟಣೆ, ವಿತರಣೆ ಮತ್ತು ಮಾರಾಟದ ನಡುವೆ ಕೂಡಿಕೊಂಡಿರುವ ಕೊಂಡಿಗಳನ್ನು ಆವರಿಸಿರುವ ಮಾನವೀಯ ಸ್ಪಂದನ ಮತ್ತು ಅದಕ್ಕೆ ಇರುವ ಮಹತ್ವವನ್ನು ಯಾರೂ ಅಲ್ಲಗಳೆಯಲಾಗದು. ಇ-ಪುಸ್ತಕಗಳು ಸದ್ಯದ ಮಟ್ಟಿಗಂತೂ ಮುದ್ರಿತ ಪುಸ್ತಕಗಳಿಗಿರುವ ಮನ್ನಣೆ ಮತ್ತು ಮಹತ್ವವನ್ನು ಕಸಿದುಕೊಳ್ಳಲಾರವು. ಹಾಗಂತ, ಇ-ಪುಸ್ತಕ ಜಗತ್ತಿಗೆ ಕನ್ನಡ ಕಾಲಿಡದೆ ಹೋದರೆ ಅದರಿಂದಾಗಬಹುದಾದ ನಷ್ಟಗಳತ್ತಲೂ ಗಮನ ಕೇಂದ್ರೀಕರಿಸಬೇಕಿದೆ.
 
ಕನ್ನಡವೂ ಸೇರಿದಂತೆ ಕೆಲವು ಪ್ರಾದೇಶಿಕ ಭಾಷೆಗಳ ಇ-ಪುಸ್ತಕಗಳು ಒಂದೆಡೆ ಓದುಗರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವ ಒಂದಷ್ಟು ಉತ್ಸಾಹಿಗಳಿಗೆ ಬೆನ್ನು ತಟ್ಟುವ ಹೊಣೆಗಾರಿಕೆ ಕನ್ನಡ ಪುಸ್ತಕ ಓದುಗರು ಮತ್ತು ಪ್ರಕಾಶಕರ ಮೇಲಿದೆ. ಕನ್ನಡ ಸಾಹಿತ್ಯ ಅಥವಾ ಭಾಷೆಗೆ ಸಂಬಂಧಿಸಿದ ಚರ್ಚೆಗಳು ಏರ್ಪಡುವ ವೇದಿಕೆಗಳಲ್ಲಿ ಈ ಕುರಿತು ವಿಸ್ತೃತ ಚರ್ಚೆಯಾಗುವ ಅಗತ್ಯವಿದೆ. ಇ-ಪುಸ್ತಕ ಪ್ರಕಟಣೆಯ ಸಾಧಕ-ಬಾಧಕಗಳ ಬಗ್ಗೆ ನಡೆಯುವ ಮಾತುಕತೆಗಳು ಲೇಖಕ, ಪ್ರಕಾಶಕ ಮತ್ತು ಓದುಗ ವರ್ಗವನ್ನು ಒಳಗೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.