ADVERTISEMENT

ಕನ್ನಡ ವೈದ್ಯ ಸಾಹಿತ್ಯ: ಉಪೇಕ್ಷೆ ಸಲ್ಲದು

ಡಾ.ವಸಂತ ಅ.ಕುಲಕರ್ಣಿ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ವೈದ್ಯ­ರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ನಾಗರಿಕರಲ್ಲಿ ಆರೋಗ್ಯ ಪ್ರಜ್ಞೆ ಸದಾ ಜಾಗೃತ­ವಾಗಿರ­ಬೇಕು. ಇದಕ್ಕೆ ಪೂರಕವಾಗಿ, ಕನ್ನಡದಲ್ಲಿ ವೈದ್ಯ ಸಾಹಿತ್ಯ ಎಲ್ಲ ಪ್ರಕಾರಗಳಲ್ಲೂ ರಚನೆ­ಯಾಗಬೇಕು. ಆದರೆ ಕನ್ನಡ ವೈದ್ಯ ಸಾಹಿತ್ಯಕ್ಕೆ ಸಿಗ­ಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಇದೊಂದು ಸಾಹಿತ್ಯ ಪ್ರಕಾರ ಎಂದು ಅಕಾಡೆಮಿಗಳಾಗಲಿ, ಸರ್ಕಾರವಾಗಲಿ  ಪರಿಗಣಿಸಿದಂತೆಯೇ ಇಲ್ಲ.

ಇತ್ತೀಚಿನ ದಿನಗಳಲ್ಲಿ  ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ  ವಿಪುಲ ಹಾಗೂ ಗುಣ­ಮಟ್ಟದ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಆದರೂ ಅದು ಕಡೆಗಣನೆಗೆ ಒಳಗಾಗಿರುವುದ­ರಿಂದ ವೈದ್ಯ  ಲೇಖಕರು ಸಾಹಿತ್ಯ ಕ್ಷೇತ್ರದಿಂದ   ಹೊರಗೆ ಉಳಿಯುವಂತಾಗಿದೆ. ಸಾಹಿತ್ಯ ಗೋಷ್ಠಿ­ಗಳಲ್ಲಿ, ಅಕಾಡೆಮಿಗಳ ಕಾರ್ಯಕ್ರಮಗಳಲ್ಲಿ, ವಿಶ್ವ­ವಿದ್ಯಾಲಯಗಳಲ್ಲಿ ಕನ್ನಡ  ವೈದ್ಯ ಸಾಹಿತ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ವೈದ್ಯಕೀಯ ಸಾಹಿತ್ಯಕ್ಕೆ ಭವ್ಯ ಪರಂಪರೆ ಇದೆ. ಈಗ ದೊರೆತಿರುವ ಜಗದ್ದಳ ಸೋಮನಾಥನ ‘ಕರ್ನಾಟಕ ಕಲ್ಯಾಣಕಾರಕ’ (ಸುಮಾರು 1,­175)  ಮೊದಲನೆಯ ಆಯುರ್ವೇದ ಗ್ರಂಥ. ಇದು ಪೂಜ್ಯ­ಪಾದನ ‘ಸಂಸ್ಕೃತ ಕಲ್ಯಾಣಕಾರಕ’ದ ಅನುವಾದ. ಒಂದನೇ ಮಂಗರಾಜನ  ‘ಖಗೇಂದ್ರ ಮಣಿದರ್ಪಣ’ (ಸುಮಾರು 1,360) ಮುಖ್ಯವಾಗಿ ಹಿಂದೂ ವಿಶೇಷ ವೈದ್ಯ ಗ್ರಂಥ.
20ನೇ ಶತಮಾನದಲ್ಲಿ ಬೆಳೆದು ಬಂದ  ಆಧುನಿಕ ವೈದ್ಯ ವಿಜ್ಞಾನ ಪತ್ರಿಕೋದ್ಯಮ ಕೂಡ ಪ್ರಮುಖವಾದುದು. ವೈದ್ಯ ಸಾಹಿತ್ಯ, ಇಂಗ್ಲಿಷ್‌ ಭಾಷೆಯಲ್ಲಿರುವ  ಅಲೋಪಥಿ ಸಾಹಿತ್ಯದ ಅನು­ವಾದವಾಗಿ ಅಷ್ಟೇ ಉಳಿಯದೆ ವೈಶಿಷ್ಟ್ಯಪೂರ್ಣ­ವಾಗಿ  ಸೃಷ್ಟಿಯಾಗುತ್ತಿರುವುದು ಕನ್ನಡ ಸಾಹಿತ್ಯ­ದ ಹಿರಿಮೆ.

ವಿಜ್ಞಾನದ ವಿವಿಧ ಆಯಾಮಗಳನ್ನು ಒಳ­ಗೊಂಡ ಸುಮಾರು 3,500 ಪುಸ್ತಕಗಳು ಈವ­ರೆಗೆ ಪ್ರಕಟಗೊಂಡಿವೆ. ಅದರಲ್ಲಿ ಸುಮಾರು 1,800 ಕೃತಿಗಳು ವೈದ್ಯ ವಿಜ್ಞಾನದ ಎಲ್ಲ ಪದ್ಧತಿ­ಗಳನ್ನು ಒಳಗೊಂಡಿದ್ದರೂ ಮನೋವೈದ್ಯಕೀಯ ಹಾಗೂ ಲೈಂಗಿಕ ಶಿಕ್ಷಣ ಸಿಂಹಪಾಲು ಪಡೆದಿವೆ.

ಈಗಂತೂ ಯುವ ವೈದ್ಯರು ಉತ್ಸಾಹದಿಂದ ಕೃತಿಗಳನ್ನು ರಚಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಅವಿರತವಾಗಿ ಶ್ರಮಿಸು­ತ್ತಿದೆ. ಆದರೆ ಅದಕ್ಕೆ ಆದಾಯ ಮೂಲಗಳಿಲ್ಲ. ವೈದ್ಯ ಸಾಹಿತ್ಯ, ಅದರಲ್ಲೂ ಕನ್ನಡದಲ್ಲಿ ವೈದ್ಯ ಸಾಹಿತ್ಯ ಸೃಷ್ಟಿ ಇಂದಿನ ಸಾಮಾಜಿಕ ಅಗತ್ಯಗಳಲ್ಲಿ ಒಂದು. ಈ ಸಾಹಿತ್ಯ, ಮನರಂಜನೆ ಉದ್ದೇಶದ ಅಥವಾ ಕ್ಷಣಿಕ ಪ್ರಯೋಜನದ ಸಾಹಿತ್ಯವಲ್ಲ. ಆರೋಗ್ಯ ಪ್ರಜ್ಞೆ ಹೊಂದುವ ಸಲುವಾಗಿ ರೋಗ-ರುಜಿನಗಳ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಪಡೆ­ಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು.

ಮನುಷ್ಯನ ಅಂತರಂಗವನ್ನು ಸೂಕ್ಷ್ಮವಾಗಿ  ಅವ­ಲೋಕಿಸುವ ಅವಕಾಶ ಇರುವುದು ವೈದ್ಯರಿಗೆ ಮಾತ್ರ. ಇಂಥ ವೈದ್ಯರ ಅನುಭವಗಳಿಂದ ರಚಿತ­ವಾದ ಕನ್ನಡ ವೈದ್ಯ ಸಾಹಿತ್ಯ ಅಷ್ಟೇ ಪರಿಣಾ­ಮ­ಕಾರಿ. ಜನಸಾಮಾನ್ಯರಲ್ಲಿ ಸ್ವಾಸ್ಥ್ಯದ ಅರಿವು ಮೂಡಿಸಿ ಧೈರ್ಯ- ತುಂಬಲು, ಮುಖ್ಯವಾಗಿ ಮೂಢನಂಬಿಕೆಗಳು, ಕಂದಾಚಾರವನ್ನು ತೊಲಗಿ­ಸಲು ಪ್ರಯೋಜನಕಾರಿ. ಪತ್ರಿಕೆಗಳಲ್ಲಿ ಪ್ರಕಟ­ಗೊಂಡ ಆರೋಗ್ಯ ಲೇಖನಗಳನ್ನು ಓದಿ ಕುತೂ­ಹಲದಿಂದ ತಮ್ಮ ಸಂದೇಹಗಳನ್ನು ವೈದ್ಯರೊಡನೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಜನರ ಸಂಖ್ಯೆ ಕಡಿಮೆಯೇನಲ್ಲ.

ಜನಸಾಮಾನ್ಯರು ವೈದ್ಯ ಸಾಹಿತ್ಯದ ಪ್ರಯೋ­ಜನವನ್ನು ಪರಿಣಾಮಕಾರಿಯಾಗಿ ಪಡೆಯ­ಬೇಕಾ­ದರೆ ನಾಡಿನ ಎಲ್ಲ ವೈದ್ಯಕೀಯ ಕಾಲೇಜು­ಗಳಲ್ಲೂ ಮೊದಲು ಕನ್ನಡದ ವಾತಾವರಣ ರೂಪುಗೊಳ್ಳ­ಬೇಕು. ಅಲ್ಲಿ ಉದಯೋನ್ಮುಖ ಲೇಖಕರಿಗೆ ಪ್ರೋತ್ಸಾಹ ಸಿಗಬೇಕು. ರಾಜ್ಯ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿ­ಕಾರ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ­ಗಳ ವಿಶ್ವ­ವಿದ್ಯಾಲಯ, ಪ್ರಸಾರಾಂಗ­ದಂತಹ ಹಲ­ವಾರು ಸಂಸ್ಥೆಗಳು ವೈದ್ಯ ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹ ನೀಡಬೇಕು. ವೈದ್ಯ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದರೆ ಈ ಕೆಲಸ ಸಾಂಗವಾಗಿ ನೆರವೇರ­ಬಹುದು.

ಕನ್ನಡದ ವೈದ್ಯಕೀಯ ಲೇಖಕರಿಗೆ ಅನೇಕ ಸಮಸ್ಯೆಗಳಿವೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ತರುವಾಗ ಸಮಪದಗಳ ಬಳಕೆ, ಅದರಲ್ಲಿ ಏಕರೂಪತೆ ಕಾಯ್ದುಕೊಳ್ಳುವುದು ಇನ್ನೂ ಕಗ್ಗಂಟಾಗಿ ಉಳಿ­ದಿದೆ. ಈ ದಿಸೆಯಲ್ಲಿ ದಿವಂಗತ ಡಾ. ಡಿ.ಎಸ್.­ಶಿವಪ್ಪ ಅವರ ಸಮಪದ ಕೋಶ ಒಂದು ಭಗೀರಥ ಯತ್ನ. ಅದು ಈಗ ಪರಿಷ್ಕರಣೆಗೆ ಒಳಗಾಗ­ಬೇಕಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ವೈದ್ಯಕೀಯ ವಿಶ್ವಕೋಶ­ವನ್ನು ದಶಕದ ಹಿಂದೆಯೇ ಹೊರ­ತಂದಿದೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ವೈದ್ಯಕೀಯ ವಿಶ್ವ­ಕೋಶ ರಚನಾ ಕಾರ್ಯ ಆರಂಭಿಸಿರುವುದು ಸಂತೋ­ಷದ ವಿಷಯ. ರಷ್ಯಾ ಮತ್ತು ಜಪಾನ್‌­ನಲ್ಲಿ ವೈದ್ಯಕೀಯ ಅಧ್ಯಯನ ಅಲ್ಲಿನ ಸ್ಥಳೀಯ ಭಾಷೆ­ಗಳಲ್ಲೇ ನಡೆಯುತ್ತಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ನಿರ್ದೇ­ಶಕ  ಡಾ.ಪ್ರಾಣೇಶ ಗುಡೂ ಅವರ ಪ್ರಧಾನ ಸಂಪಾದಕತ್ವದಲ್ಲಿ  ಕನ್ನಡ ವೈದ್ಯ ಸಾಹಿತ್ಯದ ಹತ್ತಾರು ಪುಸ್ತಕಗಳು ಪ್ರಕಟ­ಗೊಂಡಿವೆ. ಆದರೆ ಇದು  ಸಾಲದು.  2003ರಲ್ಲಿ ಬರಗೂರು ರಾಮಚಂದ್ರಪ್ಪನವರು ಅಧ್ಯಕ್ಷರಾಗಿ­ದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವೈದ್ಯ­ಕೀಯ ಹಾಗೂ ತಾಂತ್ರಿಕ ಮಹಾವಿದ್ಯಾಲ­ಯ­ಗಳಲ್ಲಿ ಕನ್ನಡ ಬೋಧನೆಗೆ ಸುತ್ತೋಲೆ ಹೊರಡಿ-­ಸಿತ್ತು. ಅದನ್ನು ಅನುಷ್ಠಾನಗೊಳಿಸಲು ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ಮುಂದೆ ಬಂದರೂ ಬಳಿಕ ಅದು ಕಟ್ಟುನಿಟ್ಟಾಗಿ ಜಾರಿಗೊಳ್ಳಲಿಲ್ಲ. ಈ ಕಾರ್ಯ ಸಫಲಗೊಂಡಿದ್ದರೆ ಕನ್ನಡದಲ್ಲಿ ವೈದ್ಯ ಸಾಹಿತ್ಯ ಸೃಷ್ಟಿಗೆ ಭದ್ರವಾದ ಬುನಾದಿ ಸಿಗುತ್ತಿತ್ತು.

ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು, ಸರ್ಕಾರದ ಆದೇಶದ ಅನ್ವಯ ಕನ್ನಡ ವಿಭಾಗ ಸ್ಥಾಪಿಸಿ, ಅದರ ಮುಖ್ಯಸ್ಥನಾಗಿ  ನನ್ನನ್ನು ನೇಮಿಸಿತು. ಈ ಸಂದರ್ಭದಲ್ಲಿ ಸುಮಾರು ಹತ್ತು ವೈದ್ಯ ಪ್ರಾಧ್ಯಾಪಕರಿಗೆ ತರಬೇತಿ ನೀಡಿ ಅವರನ್ನು ಅಣಿಗೊಳಿಸಲಾಯಿತು. ವರ್ಷದ  ಕೊನೆಯಲ್ಲಿ, ವಿದೇಶದಿಂದ ಬಂದ ವೈದ್ಯ ವಿದ್ಯಾರ್ಥಿಗಳು ಸಹ ಕನ್ನಡದಲ್ಲಿ ಮಾತನಾಡತೊಡಗಿದರು. ಕನ್ನಡ ಬಲ್ಲ ವೈದ್ಯ ವಿದ್ಯಾರ್ಥಿಗಳು ವೈದ್ಯಕೀಯ ಲೇಖನ­ಗಳ ಪುಸ್ತಕಗಳನ್ನು ಪ್ರಕಟಿಸಿದರು. ಕಾಲೇಜಿನ ಕೇಂದ್ರ ಗ್ರಂಥಾಲಯ, ಕನ್ನಡ ವೈದ್ಯ ಪುಸ್ತಕಗಳ ವ್ಯವಸ್ಥೆ ಮಾಡಿದೆ. ಈ ಕಾರ್ಯ ಕೆಲ ವೈದ್ಯಕೀಯ ಕಾಲೇಜುಗಳಲ್ಲಷ್ಟೇ ನಡೆದಿದೆ. ಆದರೆ  ಈ ಕೆಲಸ ವ್ಯಾಪಕವಾಗಿ  ಮುಂದುವರಿಯಬೇಕಾಗಿದೆ.
ಉದಾರೀಕರಣ ಹಾಗೂ ಜಾಗತೀಕರಣದಿಂದ ಜನರ ಜೀವನಶೈಲಿ ಬದಲಾಗಿದೆ. ತೀವ್ರ ಒತ್ತಡದ ಬದುಕಿನಲ್ಲಿ ಹಲವಾರು ಸಮಸ್ಯೆಗಳು  ತಲೆ­ದೋ­ರಿವೆ. ಆದ್ದರಿಂದ ಇತರ ಆರೋಗ್ಯ ಯೋಜನೆ­ಗಳನ್ನು ಸಾಕಾರಗೊಳಿಸುತ್ತಿರುವ ರೀತಿಯಲ್ಲಿಯೇ ಕನ್ನಡದಲ್ಲಿ ವೈದ್ಯ ಸಾಹಿತ್ಯ ನಿರ್ಮಾಣಕ್ಕೆ ಬೆಂಬಲ ನೀಡಬೇಕಾದುದು ಸರ್ಕಾರದ  ಜವಾಬ್ದಾರಿ.

ಈ ನಿಟ್ಟಿನಲ್ಲಿ ಸರ್ಕಾರ ಕೆಳಕಂಡ ಕ್ರಮಗಳಿಗೆ ಮುಂದಾಗಬೇಕು.
*  ಎಲ್ಲ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಪ್ರಚಲಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಉಪನ್ಯಾಸ, ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಇದು ಲಿಖಿತ ರೂಪದಲ್ಲಿ ಸುಲಭ ಬೆಲೆಗೆ ಜನರಿಗೆ ಲಭ್ಯವಾಗಬೇಕು.
*  ವೈದ್ಯ ಸಾಹಿತ್ಯದ ಪುಸ್ತಕಗಳನ್ನೂ  ಸರ್ಕಾರ ಖರೀದಿಸಬೇಕು.
*  ಕನ್ನಡ ಸಮಪದಗಳ ನಿಘಂಟು ರಚನೆ ಕಾರ್ಯವನ್ನು ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಒಪ್ಪಿಸಬೇಕು.
*  ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಆರೋಗ್ಯ ಪತ್ರಿಕೋದ್ಯಮದ ಕೋರ್ಸ್‌ ಆರಂಭಿಸಬೇಕು. ವೈದ್ಯರಲ್ಲದ ವೈದ್ಯ ಸಾಹಿತ್ಯದ ಲೇಖಕರಿಗೂ ಪ್ರೋತ್ಸಾಹ ದೊರಕಬೇಕು.
*  ಕನ್ನಡ ದಿನಪತ್ರಿಕೆಗಳಲ್ಲಿನ ಆರೋಗ್ಯ ವಿಭಾಗದ ಸಂಪಾದಕರಿಗೆ ಸಮಪದ ಬಳಕೆ, ವೈದ್ಯ ವಿಷಯಗಳ ಪ್ರಾಥಮಿಕ ತಿಳಿವಳಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡಬೇಕು.
* ಕನ್ನಡದ ಅತ್ಯುತ್ತಮ ವೈದ್ಯ ಸಾಹಿತ್ಯ ಪ್ರಕಾರಗಳಿಗೆ ಪ್ರಶಸ್ತಿ ನೀಡಬೇಕು.  ವರ್ಷದ ಅತ್ಯುತ್ತಮ ವೈದ್ಯ ಬರಹಗಳನ್ನು ಆಯ್ಕೆ ಮಾಡಿ ವಿಶೇಷಾಂಕ ಹೊರತರಬಹುದು.
*  ಶಾಲೆ ಹಾಗೂ ಪಿಯುಸಿ ಪಠ್ಯ ಪುಸ್ತಕಗಳಲ್ಲಿ ಆರೋಗ್ಯ ಪ್ರಜ್ಞೆ ಹೆಚ್ಚಿಸುವ,  ಪ್ರತಿಬಂಧಕ ಉಪಾಯಗಳನ್ನು ತಿಳಿಹೇಳುವ ಪಾಠಗಳು ಕಡ್ಡಾಯವಾಗಿರಬೇಕು. ಶಾಲಾ–ಕಾಲೇಜು­ಗಳ  ಗ್ರಂಥಾಲಯಗಳಲ್ಲಿ ವೈದ್ಯ ಸಾಹಿತ್ಯ ಪುಸ್ತಕಗಳು ಲಭ್ಯವಿರಬೇಕು.
* ವಿಶ್ವವಿದ್ಯಾಲಯಗಳು ವೈದ್ಯಕೀಯ ಮಹಾ­ವಿದ್ಯಾಲಯಗಳಲ್ಲಿ ಕನ್ನಡದ ಉದಯೋ­ನ್ಮುಖ ವೈದ್ಯ ಲೇಖಕರಿಗೆ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕು.
* ಆರೋಗ್ಯ ಪತ್ರಿಕೆಗಳಿಗೆ ಸಹಾಯಧನ, ಜಾಹೀರಾತು ನೀಡಿ ಪ್ರೋತ್ಸಾಹಿಸಬೇಕು.
* ವಿವಿಧ ವೈದ್ಯ ವಿಷಯಗಳ ಬೇಡಿಕೆಗಳಿಗೆ ಸಂಬಂಧಿಸಿದ ಸಮೀಕ್ಷೆ ನಡೆಯಬೇಕು. 

ವೈದ್ಯ ಸಾಹಿತ್ಯ ಈಗ ಜನರ ಪ್ರೀತಿಯಿಂದ ಬದು­ಕಿದೆ. ಅದನ್ನು ಇನ್ನಷ್ಟು ಶ್ರೀಮಂತ­ಗೊಳಿಸ­ಬೇಕು. ವೈದ್ಯಕೀಯ ಬೆಳವಣಿಗೆಗಳು, ಸಂಶೋ­ಧನೆ­ಗಳ ಕುರಿತು ಕನ್ನಡದಲ್ಲಿ ಗಟ್ಟಿ ಬರವಣಿಗೆಗಳು ಒಡ­ಮೂಡಬೇಕು. ವೈದ್ಯ ಸಾಹಿತ್ಯ  ನಿಂತ ನೀರಾಗದೆ ಚಲನಶೀಲ ಸಾಹಿತ್ಯ ಆಗಬೇಕಾಗಿದೆ. ಇಂತಹ ಆಶಯದೊಂದಿಗೆ, ಭಾರತೀಯ ಮಕ್ಕಳ ವೈದ್ಯಕೀಯ ಸಂಘದ- ಆಶ್ರಯದಲ್ಲಿ ಇದೇ 26 ಹಾಗೂ 27ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ನಾಡಿನ ಹಲವಾರು ವೈದ್ಯ ಲೇಖಕರು, ತಜ್ಞರು ಭಾಗವಹಿಸ­ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.