ADVERTISEMENT

ಕಲಿಕಾ ಮಾಧ್ಯಮದ ಪ್ರಕರಣ ಮತ್ತು ಸಂವಿಧಾನದ ಹುಳುಕು

ಚರ್ಚೆ

ಕಿರಣ್ ಬಾಟ್ನಿ, ಮೈಸೂರು
Published 15 ಮೇ 2014, 19:30 IST
Last Updated 15 ಮೇ 2014, 19:30 IST

ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಕಲಿಕೆ ತಾಯ್ನುಡಿಯಲ್ಲಿ ಮಾತ್ರ ಇರಬೇಕೆಂಬ ಕರ್ನಾಟಕ ಸರ್ಕಾರದ ಕಾನೂನನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಯಾವುದೇ ಪ್ರಜಾಪ್ರಭುತ್ವದಲ್ಲಿ ಯಾವ ಒಬ್ಬನೂ ಮತ್ತೊ­ಬ್ಬನ ಮೇಲೆ ತನ್ನ ತೀರ್ಮಾನಗಳನ್ನು ಹೇರುವಂತಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರವೂ ಈ ವಿಷಯದಲ್ಲಿ ತನ್ನ ತೀರ್ಮಾನ­ವನ್ನು ಹೇರುವಂತಿಲ್ಲ ಎಂಬುದು ಕೋರ್ಟ್ ತೀರ್ಪಿನ ಒಟ್ಟಾರೆ ಸಾರಾಂಶ. ನ್ಯಾಯಾಲಯದ ಈ ತೀರ್ಪಿನಲ್ಲಿ ಹಲವು ಸಮಸ್ಯೆಗಳಿವೆ.

ಮೊದಲಿಗೆ ಭಾರತ ಎಂಬುದು ‘ಒಂದು’ ಪ್ರಜಾಪ್ರಭುತ್ವ­ವಲ್ಲ. ಅದು ಹಾಗೆಂದು ಕರೆದುಕೊಳ್ಳುತ್ತದೆ ಎಂಬುದು ನಿಜ­ವಾದರೂ ವಾಸ್ತವದಲ್ಲಿ ಭಾರತ ಕೇವಲ ‘ಒಂದು’ ದೇಶವಲ್ಲ. ಇಲ್ಲಿ ಕನ್ನಡಿಗರು, ಮರಾಠಿಗರು, ತಮಿಳರು, ನಾಗಾ ಜನಗಳು, ಹಿಂದಿಯವರು ಹೀಗೆ ಹಲವರನ್ನು ಪ್ರತಿನಿಧಿಸುವ ರಾಜ್ಯಗಳಿವೆ. ಹೀಗೆ ಬೇರೆ ಬೇರೆ ನುಡಿ ಜನಾಂಗದವರೆಲ್ಲಾ ಬೇರೆ ಬೇರೆಯೇ. ಇವರನ್ನೆಲ್ಲಾ ‘ಒಂದು’ ಎಂದು ಹೇಳಲಾಗುವುದಿಲ್ಲ.

ಭಾರತದ ಸಂವಿಧಾನ ಎಲ್ಲಾ ಭಾರತೀಯರನ್ನು ‘ಒಂದಾಗಿ’ ಕಾಣುತ್ತದೆ. ಹಲವರು ಭಾರತದಲ್ಲಿರುವವರೆಲ್ಲಾ ‘ಒಂದೇ’ ಆಗಿದ್ದರೆ ಚೆನ್ನ ಎಂದು ಕನಸು ಕಾಣುತ್ತಾರೆ. ಕಲಿಕೆ­ಯೇ­ರ್ಪಾಡು ಅಥವಾ ಪಠ್ಯಕ್ರಮಗಳಲ್ಲಿ ಈ ಬಗೆಯ ಅನಿಸಿಕೆ­ಗಳನ್ನು ಮಕ್ಕಳ ಮನಸ್ಸಿನಲ್ಲಿ ಹರಿಯಬಿಡುತ್ತಾರೆ. ಇದ್ಯಾವುದ­ರಿಂದಲೂ ನಿಜಾಂಶ ಬದಲಾಗುವುದಿಲ್ಲ. ಭಾರತವನ್ನು ಹಲವು ಪ್ರಜಾಪ್ರಭುತ್ವಗಳ ಒಕ್ಕೂಟವೆಂದು ಕರೆಯಬಹುದೇ ಹೊರತು ‘ಒಂದು ಪ್ರಜಾಪ್ರಭುತ್ವ’ ಎಂದಲ್ಲ. ಹೀಗಿರುವಾಗ ಒಂದು ವಿಭಾ­ಗದ ತೀರ್ಮಾನವನ್ನು ಇತರರೆಲ್ಲರೂ ‘ಸುಪ್ರೀಂ ಕೋರ್ಟ್’, ‘ಕೇಂದ್ರ ಸರ್ಕಾರ’ ಎಂಬ ದೊಡ್ಡ ದೊಡ್ಡ ಪದ­ಗಳನ್ನು ಬಳಸಿ ತಳ್ಳಿ ಹಾಕುವುದು ಸರಿಯಲ್ಲ.

ಭಾರತೀಯರೆಲ್ಲಾ ‘ಒಂದು’ ಮತ್ತು ಭಾರತವಿಡೀ ‘ಒಂದು’ ಪ್ರಜಾಪ್ರಭುತ್ವ ಎಂಬುದರ ಆಧಾರದಲ್ಲಿ ಭಾರತದ ಸಂವಿಧಾ­ನ­ವನ್ನು ಕಟ್ಟಿಕೊಂಡಿ­ದ್ದೇ­ವೆಂಬುದೇ ಸರಿಯಲ್ಲ. ಈ ಪೂರ್ವ­ಗ್ರಹಿಕೆ­ಯೊಂದಿಗೆ ಸಂವಿಧಾನವನ್ನು ಕಾಪಾಡಲು ಹೊರಡುವ ಸುಪ್ರೀಂ ಕೋರ್ಟ್‌ನ ತೀರ್ಪು ಹೇಗಿರುತ್ತದೆ ಎಂಬುದಕ್ಕೆ ಈಗಾ­ಗಲೇ ನಮಗೆ ಉದಾಹರಣೆಗಳು ದೊರೆತಿವೆ. ಪರಿಣಾಮವಾಗಿ ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರೇ ಆರಿಸಿರುವ ಸರ್ಕಾರ ಮಾಡಿದ ಕಾನೂನೊಂದನ್ನು ಕನ್ನಡೇತರರಿಂದ ಕಿಕ್ಕಿ­ರಿದು ತುಂಬಿರುವ ‘ಭಾರತ’ ತಳ್ಳಿ ಹಾಕಿದೆ. ನಾವು ಮಾಡಿ­ದ್ದನ್ನು ಸರಿಯೋ ತಪ್ಪೋ ಎಂಬುದನ್ನು ತೀರ್ಮಾನಿಸಲು ಈ ‘ಭಾರತ’ದವರೆಲ್ಲಾ ಯಾರು? ಅವರಿಗೆ ಇಷ್ಟೆಲ್ಲಾ ಅಧಿಕಾರ ಎಲ್ಲಿಂದ ಬಂತು?

ಈ ಪ್ರಕರಣದಲ್ಲಿ ಆದ ಹಿನ್ನಡೆಯನ್ನು ಗಮನದಲ್ಲಿಟ್ಟು­ಕೊಂಡು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಕೇಂದ್ರದ ಮೇಲೆ ಒತ್ತಡ ತರುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿ­ರು­ವುದು ಸರಿಯಾದ ದಿಕ್ಕಿನಲ್ಲಿಯೇ ಇದೆ. ಆದರೆ ಈಗ ಉದ್ದೇಶಿ­ಸ­ಲಾಗಿರುವ ಸಂವಿಧಾನ ತಿದ್ದುಪಡಿಗಳಿಂದಷ್ಟೇ ಇದು ಸರಿಯಾಗುವುದಿಲ್ಲ. ತಿದ್ದುಪಡಿ ಎಂಬುದು ಮೇಲು­ಮೇಲಿನ ಮಾರ್ಪಾಡಷ್ಟೆ. ಆಗಬೇಕಾಗಿ­ರುವುದು ಅದಲ್ಲ. ಒಕ್ಕೂಟ ವ್ಯವಸ್ಥೆ­ಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣವಾಗಿ ಹೊಸ­ತೊಂದು ಸಂವಿಧಾನವನ್ನು ರಚಿಸಬೇಕಾ­ಗಿದೆ. ಅದರಲ್ಲಿ ಹೊರ­ದೇಶಗಳಿಂದ ರಕ್ಷಣೆ­ಯನ್ನು ಬಿಟ್ಟರೆ ಬೇರಾವ ವಿಷಯ­ದಲ್ಲೂ ರಾಜ್ಯಗಳ ವ್ಯವಹಾರದಲ್ಲಿ ಕೇಂದ್ರ ಕೈ ಹಾಕ­ಬಾರದು. ಪ್ರಪಂಚದಲ್ಲಿರುವ ಬಹುತೇಕ ಪ್ರಜಾ­ಪ್ರಭುತ್ವ­ಗಳಲ್ಲಿ ಈ ವ್ಯವಸ್ಥೆ ಇದೆ. ಇಂಥದ್ದೊಂದು ಸಾಂವಿಧಾನಿಕ ವ್ಯವಸ್ಥೆ ಬೇಕೆಂದು ಕರ್ನಾಟಕ ಒತ್ತಡ ಹೇರಬೇಕು.

ಒಂದು ವೇಳೆ ಸಂವಿಧಾನದ ಮರು ಬರವಣಿಗೆಯಾಗಿ ಎಲ್ಲವೂ ಬದಲಾದ ನಂತರ ಒಂದರಿಂದ ನಾಲ್ಕನೆಯ ತರಗತಿ­ಯ­ವರೆಗಿನ ಕಲಿಕೆ ತಾಯ್ನುಡಿಯಲ್ಲೇ ನಡೆಯಬೇಕೆಂಬ ಕಟ್ಟಳೆ­ಯನ್ನು ಕರ್ನಾಟಕ ಸರ್ಕಾರ ಹೇರಬಹುದೇ ಎಂಬ ಪ್ರಶ್ನೆ ಉಳಿಯು­ತ್ತದೆ. ಕನ್ನಡನಾಡು ಒಂದು ಸ್ವತಂತ್ರ ಪ್ರಜಾ­ಪ್ರಭುತ್ವವಾದ ಮಾತ್ರಕ್ಕೆ ಇಂಗ್ಲಿಷ್ ಮಾಧ್ಯಮವನ್ನು ಆಯ್ದು­ಕೊಳ್ಳದಂತೆ ಜನರನ್ನು ತಡೆದುಬಿಡಬಹುದೇ? ಈ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ. ಏಕೆಂದರೆ ಪ್ರಜಾಪ್ರಭುತ್ವದ ನಿಯಮ­ದಂತೆ ಆಯ್ಕೆಯಾಗಿ ಬಂದಿರುವ ಕರ್ನಾಟಕ ಸರ್ಕಾರ ಈ ರೀತಿಯ ಕಾನೂನುಗಳನ್ನು ಮಾಡುವುದರಲ್ಲಿ ತಪ್ಪಿಲ್ಲ. ಪ್ರಜಾ­ಪ್ರಭುತ್ವ­ವೆಂದರೆ ಯಾರು ಏನನ್ನು ಬೇಕಾದರೂ ಮಾಡಿ­ಕೊಳ್ಳ­ಬಹುದು. ಸರ್ಕಾರ ಯಾರ ಮೇಲೂ ಯಾವ ಒತ್ತಡವನ್ನೂ ಹೇರುವಂತಿಲ್ಲ ಎಂದಲ್ಲ. ಹಾಗೆನ್ನುವುದಾದರೆ ಎಲ್ಲರೂ ರಸ್ತೆಯ ಎಡಗಡೆಯೇ ವಾಹನ ಚಲಾಯಿಸಬೇಕೆಂಬ ಕಾನೂನು ಕೂಡ ತಪ್ಪಾಗುತ್ತದೆ. ಕಳ್ಳರನ್ನು ಸೆರೆಹಿಡಿಯು­ವುದು, ಕೊಲೆಗಡುಕರಿಗೆ ಶಿಕ್ಷೆ ಕೊಡುವುದು ತಪ್ಪಾಗುತ್ತದೆ. ಪ್ರಜಾಪ್ರಭುತ್ವದ ನಿಯಮಗಳಿಗೆ ಅನುಸಾರವಾಗಿ ಯಾವು­ದನ್ನು ಹೇರಬೇಕು ಮತ್ತು ಯಾವುದನ್ನು ಹೇರಬಾರದು ಎಂಬುದನ್ನು ನಿರ್ಧರಿಸುವ ಕುರಿತ ಚರ್ಚೆ ಸರಿಯಾದುದು.

ಇನ್ನು ಪ್ರಜಾಪ್ರಭುತ್ವ ಯಾವ ತೀರ್ಮಾನಗಳನ್ನು ಜನರ ಮೇಲೆ ಹೇರಬಹುದು ಎಂಬ ನಿರ್ಧಾರ ಆಯಾ ಸರ್ಕಾರ­ಗಳನ್ನು ಆರಿಸಿದ ಪ್ರಜೆಗಳ ಕೈಯಲ್ಲಿರಬೇಕೇ ಹೊರತು ಬೇರೆ­ಯ­ವರ ಕೈಯಲ್ಲಿ ಅಲ್ಲ. ತಾಯ್ನುಡಿಗೆ ಬದಲಾಗಿ ತಮಗೆ ಇಂಗ್ಲಿಷ್ ಮಾಧ್ಯಮ ಆಯ್ದುಕೊಳ್ಳುವ ಹಕ್ಕಿದೆ ಎಂದು ವಾದಿಸುವವರು ಇದನ್ನು ಕರ್ನಾಟಕ ಸರ್ಕಾರದ ಮುಂದಿರಿಸ­ಬೇಕೇ ಹೊರತು ನೂರಕ್ಕೆ ತೊಂಬತ್ತರಷ್ಟು ಇತರೇ ಮಂದಿ­ಗಳಿಂದ ತುಂಬಿರುವ ‘ಭಾರತ’ದ ಮುಂದಲ್ಲ. ಈ ಮೇಲ್ಮನ­ವಿಯ ಅವಕಾಶವನ್ನು ಒದಗಿಸಿರುವುದೇ ಪ್ರಜಾಪ್ರಭುತ್ವದ ಕಡೆಗಣನೆ. ಆ ಮೇಲು–ಕೀಳೆಂಬ ಬುದ್ಧಿಯನ್ನು ಎತ್ತಿ ಹಿಡಿ­ಯುವ ಪದವೇ ಸರಿಯಿಲ್ಲ. ಕಲಿಕಾ ಮಾಧ್ಯಮದ ವಿಷಯ­ದಲ್ಲಿ ಕರ್ನಾಟಕ ಸರ್ಕಾರವನ್ನು ಒಲಿಸಿಕೊಳ್ಳಲಾಗದೆ ಅದು ಮಾಡಿದ ಕಾನೂನು ಅವರಿಗೆ ಹಿಡಿಸದೇ ಹೋದರೆ ಇಂಗ್ಲಿ­ಷರು ಕಟ್ಟಿದ ‘ಭಾರತ’ದಲ್ಲಿ ತಮ್ಮ ಇಂಗ್ಲಿಷ್ ಶಾಲೆ­ಗಳನ್ನು ಮುಂದುವರೆಸುವ ಆಯ್ಕೆಯಂತೂ ಅವರಿಗೆ ಇದ್ದೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.