ಆಗುವುದೆಲ್ಲ ಒಳ್ಳೆಯದಕ್ಕೇ ಎಂಬುದು ತಿಳಿದವರ ಅಂಬೋಣ. ಇತ್ತೀಚೆಗೆ ನನ್ನ ಸಹೋದ್ಯೋಗಿಗಳೊಂದಿಗೆ ಕೇರಳಕ್ಕೆ ತೆರಳಿದ್ದೆ. ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸಿದ್ದ ನಾವೆಲ್ಲಾ ಹಿಂದಿರುಗಿ ಬರುವಾಗ ಸಮಯ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಒಂದು ಮರೆಯಲಾರದ ಘಟನೆಗೆ ಸಾಕ್ಷಿಯಾಗುವಂತಾಯಿತು.
ಕರ್ನಾಟಕ - ಕೇರಳ ರಸ್ತೆ ಪ್ರಯಾಣಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಹಾದುಹೋಗುವ ರಸ್ತೆಯೇ ಅನುಕೂಲಕರ. ಆದರೆ ರಾತ್ರಿ 9 ಗಂಟೆಯಿಂದ ಬೆಳಗಿನ 6ರವರೆಗೆ ಈ ರಸ್ತೆಯನ್ನು ವನ್ಯಜೀವಿಗಳ ಹಿತದೃಷ್ಟಿ ಕಾರಣದಿಂದ ಮುಚ್ಚಲಾಗುತ್ತದೆ. ಕಾನೂನಿನ ಈ ಕಟ್ಟುನಿಟ್ಟಿನ ಪಾಲನೆಗೂ ಒಂದು ಬಲವಾದ ಹಿನ್ನೆಲೆಯಿದೆ. ರಾತ್ರಿ ವೇಳೆ ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕಿ ದೊಡ್ಡ ಸಸ್ತನಿಗಳೂ ಸೇರಿದಂತೆ ಹಲವಾರು ಪ್ರಾಣಿಗಳು ದುರ್ಮರಣ ಹೊಂದುತ್ತಿದ್ದುದು ಹೆಚ್ಚಿನ ಜನರ ಪರಿಗಣನೆಗೆ ಬಂದೇ ಇರಲಿಲ್ಲ. ಅಂತರರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿದ್ದ ಈ ಮಾರಣಹೋಮವನ್ನು ಅಲ್ಲಿನ ಕೆಲವು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಮುಖಾಂತರ ದುರಂತವನ್ನು ದಾಖಲಿಸತೊಡಗಿದರು.
ಆ ಸಂಸ್ಥೆಗಳೊಂದಿಗೆ ಸಹೃದಯಿ ಸಾರ್ವಜನಿಕರೂ ಕೈಜೋಡಿಸಿದರು. ಒಂದೇ ವರ್ಷದಲ್ಲಿ ರಾತ್ರಿಯ ರಸ್ತೆ ಅಪಘಾತದಲ್ಲಿ ಸತ್ತ 400ಕ್ಕೂ ಅಧಿಕ ವಿವಿಧ ಪ್ರಾಣಿಗಳ ಲೆಕ್ಕವನ್ನು ಮುಂದಿಟ್ಟುಕೊಂಡು ಒಂದು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಯಿತು. ಅದರ ಫಲಶ್ರುತಿಯಾಗಿ ಕರ್ನಾಟಕದ ಹೈಕೋರ್ಟ್ ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆಯ ಮಧ್ಯೆ ಈ ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಿ ಆಜ್ಞೆ ಹೊರಡಿಸಿತು. ತಕ್ಷಣವೇ ಆ ಆಜ್ಞೆಯನ್ನು ಜಾರಿಗೊಳಿಸಲಾಯಿತು.
ಅದಕ್ಕೆ ಕೆರಳಿದ ಕೇರಳ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ, ಹೈಕೋರ್ಟ್ ತೀರ್ಪನ್ನೇ ಸುಪ್ರೀಂಕೋರ್ಟ್ ಎತ್ತಿಹಿಡಿದು, ಅದರಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳನ್ನು ಮಾಡಿತು. ಅದರಂತೆ ರಾತ್ರಿ 9 ಗಂಟೆಯಿಂದ ಬೆಳಗಿನ 6ರವರೆಗೆ ರಸ್ತೆ ಸಂಚಾರವನ್ನು ನಿಷೇಧಿಸಿ ಆಂಬುಲೆನ್ಸ್ ಅಂಥ ತುರ್ತು ಸೇವಾ ವಾಹನಗಳಿಗೆ ರಿಯಾಯಿತಿ ಕೊಟ್ಟಿತು.
ಈಗ ನಮ್ಮ ಕಥೆಗೆ ಹಿಂದಿರುಗೋಣ. ಬಂಡೀಪುರ ವನ್ಯಧಾಮದ ಆವರಣವನ್ನು ಗುಂಡ್ಲುಪೇಟೆಯ ಕಡೆಯಿಂದ ಪ್ರವೇಶಿಸುತ್ತಿದ್ದಂತೆಯೇ ಪ್ರಯಾಣಿಕರಾಗಿ ನಾವು ಮಾಡಿದ ಮೊದಲ ಕೆಲಸವೆಂದರೆ ನಮ್ಮ ಅಂತ್ಯಾಕ್ಷರಿ ಆಟವನ್ನು ನಿಲ್ಲಿಸಿ ಮೌನವಾಗಿ ಕುಳಿತದ್ದು. ಬಸ್ ಚಾಲಕ ಮಾಡಿದ ಮೊದಲ ಕೆಲಸವೆಂದರೆ ವಿಡಿಯೊ- ಆಡಿಯೊ ಬಂದ್ ಮಾಡಿದ್ದು. ಪ್ರತಿ ನೂರು ಮೀಟರನಷ್ಟು ದೂರಕ್ಕೆ ಒಂದೊಂದು ಹಂಪ್ ಇದ್ದದ್ದು ಬಸ್ಸಿನ ನಾಗಾಲೋಟಕ್ಕೆ ತಡೆಯೊಡ್ಡಿತ್ತು. ಹಾಗಾಗಿಯೇ ದೂರದಿಂದ ಆನೆಯೊಂದನ್ನು ನೋಡುವ ಅವಕಾಶವೂ ದೊರೆತಿತ್ತು.
ಮುಂದುವರಿದು ಹೋಗಲು, ಮೂಲೆಹೊಳೆಯ ನಂತರ ಕೇರಳದ ಗಡಿ ಪ್ರವೇಶವಾಗುತ್ತಿದ್ದಂತೆಯೇ ಹಂಪ್‌ಗಳು ಮಾಯ! ಯಾರು ಎಷ್ಟಾದರೂ ವೇಗವಾಗಿ ಚಲಿಸಬಹುದು, ಎಷ್ಟು ವನ್ಯಮೃಗಗಳನ್ನಾದರೂ ಗುದ್ದಿ ಸಾಯಿಸಬಹುದು. ಕೇಳುವವರೇ ಇಲ್ಲ! ಇದು ಕೇರಳಕ್ಕೆ ಹೋಗುವಾಗಿನ ಪ್ರಯಾಣದ ಕಥೆ. ಸ್ವಾರಸ್ಯವಿರುವುದೇ ಮುಂದಿನ ಕಥೆಯಲ್ಲಿ. ಮೂರು ದಿನಗಳ ನಂತರ ಹಿಂದಿರುಗಿ ಬರಲು ಇದೇ ರಸ್ತೆಯಲ್ಲಿ ಬರಬೇಕಿತ್ತು. ನಮ್ಮ ಅಚಾತುರ್ಯದಿಂದಾಗಿ ತಡವಾಗಿ ಹೊರಟ ನಾವು ರಾತ್ರಿ 9 ಗಂಟೆಯ ಒಳಗೇ ಬಂಡೀಪುರ ದಾಟುವ ಆತಂಕದಿಂದ ಪ್ರಯಾಣಿಸುತ್ತಿದ್ದೆವು. ಚಾಲಕನಿಗೂ ಅಷ್ಟೇ ಒತ್ತಡ.
ವೇಗವಾಗಿ, ಒರಟಾಗಿ ನುಗ್ಗಿಬಂದ ನಮ್ಮ ಬಸ್ಸು ಸುಲ್ತಾನ್ ಬತೇರಿ ಕಡೆಯಿಂದ ಕೇರಳದ ವಯ್ನಾಡು ಅರಣ್ಯಧಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಬಸ್ಸಿನ ಮುಕ್ಕಾಲುವಾಸಿ ಜನರಿಂದ ಹರ್ಷೋದ್ಗಾರ! ಆದರೂ ಸ್ವಲ್ಪ ಅನುಮಾನ. ರಾತ್ರಿ 9 ಗಂಟೆ ದಾಟಿತ್ತು. 9.30ರ ಸಮಯ. ಕರ್ನಾಟಕದ ಗಡಿ ಪ್ರವೇಶಿಸಿ ಕನ್ನಡದ ನಾಮಫಲಕಗಳನ್ನು ನೋಡಿ ಪುಳಕಿತರಾದೆವು. ಗೇಟು ಸಮೀಪಿಸುತ್ತಿದ್ದಂತೆಯೇ ಬ್ಯಾರಿಕೇಡ್ ಕಂಡವು. ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿಯೂ. ಎದುರು ದಿಕ್ಕಿನಿಂದ ಕಾರೊಂದು ಹೋಯಿತು. ನಾವೂ ಹೊರಡೋಣ ಎನ್ನುವಷ್ಟರಲ್ಲಿ ಸಿಬ್ಬಂದಿ ನಮ್ಮ ಬಸ್ಸನ್ನು ತಡೆದರು. ಚಾಲಕನ ಮಾತಿನಂತೆ ಬಸ್ಸಿನಲ್ಲಿದ್ದ ಕೆಲವು ಶಿಕ್ಷಕರು ಮತ್ತು ನಾನೂ ಕೆಳಗಿಳಿದುಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿಯೊಡನೆ ಹೋಗಲು ಬಿಡುವಂತೆ ವಿನಯಪೂರ್ವಕವಾಗಿ ವಿನಂತಿಸಿಕೊಂಡೆವು. ಮನವೊಲಿಸಲು ಪ್ರಯತ್ನಿಸಿದೆವು. ಕೆಲವು ಶಿಕ್ಷಕಿಯರು ಗೋಳಾಡಿ ಕೇಳಿಕೊಂಡರು. ಹೆಂಗಸರೂ, ಮಕ್ಕಳೂ ತುಂಬಿರುವ ಬಸ್ಸನ್ನು ಮಾನವೀಯತೆಯ ದೃಷ್ಟಿಯಿಂದ ಬಿಡಿರೆಂದೆವು. ಸಿಬ್ಬಂದಿಯ ಮನ ಮಿಡಿಯಲಿಲ್ಲ.
ಸುಪ್ರೀಂಕೋರ್ಟಿನ ಆಜ್ಞೆಯಂತೆ, ರಾತ್ರಿ 9 ಗಂಟೆಯ ನಂತರ ಯಾವುದೇ ಕಾರಣಕ್ಕೂ ಯಾರನ್ನೂ ಬಿಡುವುದಿಲ್ಲವೆಂದೂ, ಆಂಬುಲೆನ್ಸ್ ಬಂದರೂ ಬಾಗಿಲು ತೆಗೆದು ಪ್ರಕರಣದ ತೀವ್ರತೆಯನ್ನು ಮನಗಂಡರೆ ಮಾತ್ರವೇ ಬಿಡುವುದಾಗಿಯೂ ಹೇಳಿದರು. ಬದಲಿ ಮಾರ್ಗವನ್ನಾದರೂ ಹೇಳಿರೆಂದು ಕೆಲವರು ಕೇಳಿಕೊಂಡೆವು. ಸಂತೋಷದಿಂದಲೇ ಹೇಳಿದರು.
ಆದರೆ, ಉಳಿದವರು, ಅದರಲ್ಲೂ ಬಸ್ ಚಾಲಕ ತಯಾರಿರಲಿಲ್ಲ. ಯಾರೋ ಮೇಷ್ಟ್ರ ಹತ್ತಿರ ನೂರರ, ಐನೂರರ ನೋಟುಗಳನ್ನು ಪಡೆದು, ಅವನ್ನು ಕೈಯಲ್ಲಿ ಕಾಣುವಂತೆ ಹಿಡಿದು, ಬಸ್ಸನ್ನು ಬಿಡಿರೆಂದು ಕೇಳಿಕೊಂಡ. ಹಣದ ಆಮಿಷವನ್ನು ಕಂಡು, ಅದರಲ್ಲೂ ಶಿಕ್ಷಕರೊಡನೆ ಬಂದು ಲಂಚ ಕೊಡಲು ಮುಂದಾದದ್ದಕ್ಕೆ ಅರಣ್ಯ ಸಿಬ್ಬಂದಿಯಿಂದ ಸರಿಯಾದ ಮಂಗಳಾರತಿ ಸಮೇತ ಪೂಜೆಯಾಯಿತು– ಜಾಗಟೆ, ಶಂಖಗಳ ನಾದದೊಂದಿಗೆ! ಎಲ್ಲರ ಮುಖವೂ ಸಪ್ಪಗಾಯಿತು. ಕೆಲವಾರು ಗಂಟೆಗಳ ಹೆಚ್ಚುವರಿ ಪ್ರಯಾಣ ನಮಗಾರಿಗೂ ಬೇಕಿರಲಿಲ್ಲ. ಎಲ್ಲರೂ ಅರಣ್ಯ ಸಿಬ್ಬಂದಿಯ ಬಗ್ಗೆ ಕೋಪಗೊಂಡು ಹಿಂದಿರುಗುತ್ತಿರುವಾಗ, ನನಗೇಕೋ ತಡೆಯಲಾರದ ಸಂತೋಷವಾಯಿತು. ಮತ್ತೆ ಗೇಟಿನ ಬಳಿ ಬಂದು ಖುಷಿಯಿಂದ ಅವರಿಗೆ ಹಸ್ತಲಾಘವ ನೀಡಿ, ‘ನಿಮ್ಮ ನಿಷ್ಠೆ, ಪ್ರಾಮಾಣಿಕತೆ ನನಗೆ ಅತೀವ ಆನಂದ ತಂದಿದೆ. ಕರ್ನಾಟಕದ ಅರಣ್ಯ ಇಲಾಖೆಯ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಹೆಚ್ಚು ದೂರ ಪ್ರಯಾಣಿಸಿ, ತಡವಾಗಿ ಹೋದರೂ ಅಡ್ಡಿಯಿಲ್ಲ, ನಿಮ್ಮ ಕರ್ತವ್ಯನಿಷ್ಠೆಗೆ ತಲೆಬಾಗುವೆ’ ಎಂದು ಹೇಳಿ ಹೊರಟೆ.
ಸಿಬ್ಬಂದಿಯ ಮುಖದಲ್ಲಿ ಸಂತೋಷದ ನಗೆಯಿತ್ತು. ನನ್ನ ಕಣ್ಣಂಚಿನಲ್ಲಿ ಹೆಮ್ಮೆಯಿಂದ ಕೂಡಿದ ಆನಂದಬಾಷ್ಪವಿತ್ತು. ಅವರ ಹೆಸರೂ ಗೊತ್ತಿಲ್ಲ, ಅವರ ಪದನಾಮ ಕೂಡಾ ತಿಳಿದಿಲ್ಲ. ಅವರು ಅಭಿನಂದನಾರ್ಹರು. ವಿಶೇಷವೆಂದರೆ ಈ ರೀತಿಯ ರಾತ್ರಿ 9 ಗಂಟೆಯಿಂದ ಬೆಳಗಿನ 6ರ ವರೆಗಿನ ರಸ್ತೆ ಸಂಚಾರ ನಿಷೇಧವು ಕಳೆದ 40 ವರ್ಷಗಳಿಂದಲೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ದ್ವಿಚಕ್ರ ವಾಹನಗಳಿಗೂ ಪ್ರವೇಶ ನಿಷಿದ್ಧವಲ್ಲಿ! ಯಾವುದೇ ರಿಯಾಯಿತಿ ಇಲ್ಲ. ತಡವಾದರೆ ಗೇಟಲ್ಲೇ ಇರಬೇಕು. ಹೊರಡುವ ಮುನ್ನ ಸಮಯಪಾಲನೆಯ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ.
(ಲೇಖಕಿ ಜೀವವಿಜ್ಞಾನ ಬೋಧಕಿ, ಮೈಸೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.