ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರವು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಜನಪ್ರಿಯ ವ್ಯಾಕರಣದ ಕಲಾ ಚೌಕಟ್ಟಿನಲ್ಲಿ ಪಾ. ರಂಜಿತ್ ಕಟ್ಟಿರುವ ಕೆಳಜಾತಿಯ ಬಡವರ ಸ್ವಾಭಿಮಾನಿ ಹೋರಾಟದ ಕಥನವು ದಲಿತರ ಸ್ವಂತಿಕೆಯ ಪ್ರತಿಮೆಗಳಿಂದ ತುಂಬಿ ತುಳುಕುವ ಅಪರೂಪದ ಸಿನಿಮಾ. ಚಲನಚಿತ್ರವು ವಾಸ್ತವದ ಬೀಜದಿಂದ ಕಟ್ಟಲಾಗುವ ರೂಪಾತ್ಮಕ ಕಥನವೇ ಹೊರತು ವಾಸ್ತವದ ನೇರ ಪ್ರತಿಬಿಂಬವಾಗಿರುವುದಿಲ್ಲ ಎನ್ನುವುದು ಸರಿ. ಇದನ್ನು ಒಪ್ಪಿಯೂ ‘ಕಾಲಾ’ ಸಿನಿಮಾ ಹಂದರದಲ್ಲಿರುವ ಒಂದು ಕಪ್ಪು ರಂಧ್ರವನ್ನು ಗುರುತಿಸಬಹುದು: ಅದು ಲೆನಿನ್ ಹಾಗೂ ಚಾರುಮತಿ (ತೂಫಾನಿ) ಎಂಬ ಪಾತ್ರಗಳ ಮೂಲಕ ರಂಜಿತ್ ಬರೆದಿರುವ ದಲಿತ ಎಡಪಂಥೀಯ ಚಳವಳಿಯ ಚಿತ್ರ.
ಎಡಪಂಥೀಯರು ಹಾಗೂ ಆ ವಿಚಾರಧಾರೆಯ ದಲಿತ ಹೋರಾಟಗಾರರ ಬಗ್ಗೆ ಅಂಬೇಡ್ಕರ್‌ವಾದಿಗಳ ತಕರಾರು, ಟೀಕೆಗಳು ವಾಸ್ತವಿಕವಾದವು. ಅದಕ್ಕೆ ಅದರದ್ದೇ ಆದ ಚಾರಿತ್ರಿಕ ಮಹತ್ವ ಹಾಗೂ ಘನತೆ ಇದೆ. ಆದರೆ ರಂಜಿತ್ ಕಟ್ಟುವ ಚಿತ್ರದಲ್ಲಿ ಈ ವಾಗ್ವಾದ- ಸಂಘರ್ಷಗಳ ಕನಿಷ್ಠ ಅಣಕವಾಡು ಕೂಡ ಅಲ್ಲ.
‘ಎಡಪಂಥೀಯ ದಲಿತ ಹೋರಾಟಗಾರರು ಅಧಿಕಾರಸ್ಥರ ಪರವಾದ ಸ್ವಯಂ ಸೇವಾ ಸಂಸ್ಥೆಗಳ ಸೂತ್ರಕ್ಕೆ ಸಿಕ್ಕಿ ತಮಗರಿವಿಲ್ಲದೆ ಅಧಿಕಾರಸ್ಥರ ದಲ್ಲಾಳಿಗಳಾಗಿರುತ್ತಾರೆ’ ಎನ್ನುವ ರಂಜಿತರ ಢಾಳಾದ ಚಿತ್ರಣವು ಈ ಸಿನಿಮಾದ ದುರ್ಬಲವಾದ ಎಳೆ. ಈ ತರಹದ ಲೋಪವನ್ನೇ ಮುಖ್ಯವಾಗಿಸಿಕೊಂಡು, ಈ ಸಿನಿಮಾ ಸಾಮಾಜಿಕವಾಗಿ ನೀಡಿರುವ ಗುದ್ದನ್ನು ಕಡೆಗಾಣಿಸುವುದು ನನ್ನ ಉದ್ದೇಶವಲ್ಲ. ಈ ತಿಂಗಳ 7ರಂದು ಈ ಚಿತ್ರ ತೆರೆಕಂಡಿತು. ಅದರ ಹಿಂದಿನ ದಿನ, ಅಂದರೆ 6ರಂದು ದಲಿತ ಚಳವಳಿಗಳ ಸಂಬಂಧ ನಡೆದ ಒಂದು ವಿದ್ಯಮಾನವನ್ನು ಈ ಸಿನಿಮಾದ ಹುಮ್ಮಸ್ಸಿನಲ್ಲಿ ಕಂಡಾಗ ಉಂಟಾಗುವ ಆತಂಕವನ್ನು ಪ್ರಕಟಿಸುವುದು ಈ ಬರಹದ ಉದ್ದೇಶ.
ದಲಿತ ಸೈನಿಕರು ಬಹುಸಂಖ್ಯೆಯಲ್ಲಿ ಇದ್ದ ಬ್ರಿಟಿಷರ ಸೇನೆಯು ಪುಣೆಯ ಸಮೀಪದ ಭೀಮಾ ಕೋರೆಗಾಂವ್ ರಣಾಂಗಣದಲ್ಲಿ ಪೇಶ್ವೆಗಳ ಸೈನ್ಯವನ್ನು ಮಣಿಸಿ ಜಯ ಸಾಧಿಸಿದ್ದ ಘಟನೆಯ 200ನೇ ವಾರ್ಷಿಕೋತ್ಸವದ ದಿನವಾಗಿತ್ತು 2018ರ ಜನವರಿ 1. ಪ್ರತಿವರ್ಷ ಜನವರಿ 1ರಂದು ಸಾವಿರಾರು ದಲಿತರು ಭೀಮಾ ಕೋರೆಗಾಂವ್‌ಗೆ ಬಂದು ವಿಜಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಊನ ಚಳವಳಿ, ಅಂಬೇಡ್ಕರ್- ಪೆರಿಯಾರ್ ಅಧ್ಯಯನ ವಲಯದ ಯುವಕರ ಸಂಘರ್ಷ, ರೋಹಿತ್ ವೇಮುಲ ಸಾವಿನ ಸುತ್ತ ನಡೆದ ಹೋರಾಟಗಳೇ ಮುಂತಾದ ವಿದ್ಯಮಾನಗಳಿಂದಾಗಿ ಈ ಬಾರಿಯ ವಿಜಯೋತ್ಸವ ದಿನಕ್ಕೆ ಹೊಸ ಪ್ರತಿರೋಧದ ಕಸುವು ಹರಳುಗಟ್ಟಿತ್ತು. ಡಿಸೆಂಬರ್ 30ರಂದು ಪುಣೆಯ ಶನಿವಾರವಾಡಿಯಲ್ಲಿ ‘ಎಲ್ಗಾರ್ ಪರಿಷತ್’ ಆಯೋಜಿಸಿದ್ದ ಸಮಾವೇಶದಲ್ಲಿ ದಲಿತ ಚಳವಳಿಗಳ ಮುಂಚೂಣಿ ನಾಯಕರಾದ ಪ್ರಕಾಶ್ ಅಂಬೇಡ್ಕರ್, ಜಿಗ್ನೇಶ್ ಮೆವಾನಿ ಭಾಗವಹಿಸಿದ್ದರು. ಮರುದಿನ, ದಲಿತರ ಮೆರವಣಿಗೆ ಭೀಮಾ ಕೋರೆಗಾಂವ್ ಹತ್ತಿರ ಬಂದಾಗ ಹಿಂಸಾಚಾರಗಳು ನಡೆದವು.
‘ಹಿಂದುತ್ವ ರಾಜಕೀಯ’ವನ್ನು ಪ್ರತಿಪಾದಿಸುವ ಮಿಲಿಂದ್ ಏಕಬೋಟೆ ಮತ್ತು ಸಂಭಾಜಿ ಭಿಡೆ ವಿರುದ್ಧ ಎಫ್‌ಐಆರ್ ದಾಖಲಾದವು. ಮಿಲಿಂದ್ ಬಂಧಿತನಾಗಿ ಎರಡೇ ದಿನದಲ್ಲಿ ಜಾಮೀನಿನ ಮೇಲೆ ಹೊರ ಬಂದರೆ, ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಸಂಭಾಜಿ ಬಂಧನವಾಗಲಿಲ್ಲ. ಬದಲಿಗೆ ಹಲವು ದಲಿತ ನಾಯಕರ ಮೇಲೆ ಕೇಸು ಹಾಕಲಾಯಿತು, ಹಲವರ ಮೇಲೆ ಕಣ್ಗಾವಲು ಹೂಡಲಾಯಿತು.
ಈ ಇಬ್ಬಗೆಯ ಕಾನೂನಿನ ಬೇಟೆಯು ಜೂನ್ 6ರಂದು ಭಯಾನಕ ತಿರುವು ಪಡೆದಿದೆ. ಅಂದು, ಮಹಾರಾಷ್ಟ್ರದ ಪೊಲೀಸರು ‘ಎಲ್ಗಾರ್ ಪರಿಷತ್ ನಕ್ಸಲ್ ಬೆಂಬಲಿತ ಸಂಘಟನೆ’ ಎಂದೂ, ‘2017ರ ಡಿ. 30ರಂದು ಪುಣೆಯ ಸಮಾವೇಶದಲ್ಲಿ ಭಾಗವಹಿಸಿದ್ದ ಐವರು ಚಳವಳಿಗಾರರು ಪ್ರಧಾನಿ ಮೋದಿಯ ಹತ್ಯೆಗೆ ಸಂಚು ರೂಪಿಸಿದವರು’ ಎಂದೂ ಆರೋಪಿಸಿ, ಐದೂ ಜನರನ್ನು ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಬಂಧಿಸಿದ್ದಾರೆ.ಈ
ಐವರ ಸಾಮಾಜಿಕ ಬದುಕಿನ ಸ್ವರೂಪವನ್ನು ತಿಳಿದುಕೊಂಡರೆ ಅವರ ಬಂಧನದ ಹಿಂದಿರುವ ಮನೋಭಾವ ಅರ್ಥವಾದೀತು:
ಪುಣೆಯ ವಕೀಲ ಸುರೇಂದ್ರ ಗಾಡ್ಲಿಂಗ್: ಇವರು 25 ವರ್ಷಗಳಿಂದ ಜನರಿಗೆ ನ್ಯಾಯ ಕೊಡಿಸುವ ವಕೀಲರ ಸಂಘ ಕಟ್ಟಿಕೊಂಡು, ಪ್ರಭುತ್ವವು ‘ನಕ್ಸಲ್’ ಹಣೆಪಟ್ಟಿ ಹಚ್ಚಿ ನ್ಯಾಷನಲ್ ಸೆಕ್ಯುರಿಟಿ ಆ್ಯಕ್ಟ್ ಹಾಗೂ ಯುಎಪಿಎ ದಂಥ ಕಾಯ್ದೆಗಳಡಿ ಬಂಧಿಸುತ್ತಿರುವ ದಲಿತ, ಆದಿವಾಸಿ ಪರ ಹೋರಾಟಗಾರರು ಹಾಗೂ ಜನಸಾಮಾನ್ಯರ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ.
ನಾಗಪುರ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರೊಫೆಸರ್ ಶೋಮಾ ಸೇನ್: ಇವರು ಎಡಪಂಥೀಯ ಹಾಗೂ ಮಹಿಳಾ ಚಳವಳಿಗಳಲ್ಲಿ ಸಕ್ರಿಯರಾಗಿರುವವರು ಮತ್ತು ನಕ್ಸಲರ ಹೋರಾಟದ ವಿಧಾನಗಳ ಬಗ್ಗೆ ಭಿನ್ನಮತ ಇಟ್ಟುಕೊಂಡವರು. ಇವರ ಮನೆಯಲ್ಲಿದ್ದ ಎಡಪಂಥದ ಸಾಹಿತ್ಯವಷ್ಟೇ ಇವರು ನಕ್ಸಲ್ ಎನ್ನುವುದಕ್ಕೆ ಪೊಲೀಸರು ತೋರಿಸುವ ಸಮಜಾಯಿಷಿ!
ರೋನಾ ವಿಲ್ಸನ್: ದೆಹಲಿಯಲ್ಲಿ ‘ರಾಜಕೀಯ ಕಾರಣಕ್ಕೆ ಬಂಧಿತರಾಗಿರುವ ಕೈದಿಗಳ ಬಿಡುಗಡೆಗಾಗಿ ರಚಿಸಿದ ಸಮಿತಿ’ಯ ವಕ್ತಾರರು.
ಮಹೇಶ್ ರಾವತ್: ಸರ್ಕಾರದ ಯೋಜನೆಗಳನ್ನು ದಲಿತ ಆದಿವಾಸಿಗಳಿಗೆ ತಲುಪಿಸಲು ಹೋರಾಡುತ್ತಿರುವ ಸಂಘಟಕ.
ಸುಧೀರ್ ದಾವ್ಳೆ: ಹೆಸರುವಾಸಿ ಮರಾಠಿ ಕವಿ, ಬರಹಗಾರ, ‘ವಿದ್ರೋಹಿ’ ಪತ್ರಿಕೆಯ ಸಂಪಾದಕ, ‘ರಿಪಬ್ಲಿಕನ್ ಪ್ಯಾಂಥರ್ಸ್’ ಸಂಘಟನೆಯನ್ನು ಕಟ್ಟಿದವರು. ಮುಚ್ಚಿ ಹೋಗುತ್ತಿದ್ದ ‘ಖೈರ್ಲಾಂಜಿ ದಲಿತ ಅತ್ಯಾಚಾರ’ ಪ್ರಕರಣವನ್ನು ಲೋಕಕ್ಕೆ ತಿಳಿಸಿ ಜಾಗೃತಿ ಉಂಟುಮಾಡಲು ಶ್ರಮಿಸಿದವರು. 2011ರಲ್ಲಿ ಇವರನ್ನು ನಕ್ಸಲ್ ಎಂದು ಪೊಲೀಸರು ಬಂಧಿಸಿ 40 ತಿಂಗಳು ಜೈಲಲ್ಲಿ ಇಟ್ಟಿದ್ದರು. ಆರೋಪಕ್ಕೆ ಆಧಾರಗಳಿಲ್ಲದ ಕಾರಣ ಖುಲಾಸೆಯಾಗಿದ್ದರು.
‘ಕಾಲಾ’ ಸಿನಿಮಾ, ಚಳವಳಿಗಳಿಗೆ ಜನಪ್ರಿಯ ಸಿನಿಮಾ ಚೌಕಟ್ಟಿನಲ್ಲಿ ಸಲ್ಲಿಸಿದ ಒಂದು ಗೌರವ. ತಮ್ಮ ಕಾಲ್ಪನಿಕ ಕೃತಿಯಲ್ಲಿ ಒಬ್ಬ ಕಲೆಗಾರ ಬಿಟ್ಟ ಕಪ್ಪು ರಂಧ್ರವನ್ನು ವಾಸ್ತವವು ತುಂಬುತ್ತದೆ. ಇದೀಗ ನಾವು ಪ್ರೇಕ್ಷಕರಾಗಬೇಕಾದದ್ದು ‘ಕಾಲಾ ಹಾಗೂ ಐದು ನಕ್ಸಲರು’ ಎಂಬ ಕಾಲ್ಪನಿಕ ಕಥನ ಹಾಗೂ ಕಟು ವಾಸ್ತವಗಳ ನಡುವಿರುವ ಬೆಚ್ಚಿಬೀಳಿಸುವ ಸಿನಿಮಾಕ್ಕೆ! ಇದೀಗ ನಿಮ್ಮ ಮುಂದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.