ADVERTISEMENT

ಕಾಸರಗೋಡು: ನೆಲದ ಭಾಷೆಗೆ ನೇಣು

ಕಾಸರಗೋಡಿನ ಕನ್ನಡಿಗರ ಕರುಳಿನ ಕೂಗಿಗೆ ಕರ್ನಾಟಕ ಸರ್ಕಾರವೂ ಕಿವಿಗೊಡಬೇಕು

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
* ಟಿ.ಎ.ಎನ್. ಖಂಡಿಗೆ
ಪ್ರಭುತ್ವದ ಭಾಷೆಯೊಂದು ತನ್ನ ರಾಜಕೀಯ ಅಧೀನದಲ್ಲಿರುವ ಇನ್ನೊಂದು ಅಲ್ಪಸಂಖ್ಯಾತ ಭಾಷೆಯ ಜನರ ಸಂವಿಧಾನಬದ್ಧ ಮೂಲಭೂತ ಹಕ್ಕು, ಅಧಿಕಾರ, ಸಾಹಿತ್ಯ, ಸಂಸ್ಕೃತಿಗಳ ಮೇಲೆ ಸವಾರಿ ಮಾಡುವಾಗ, ಆ ಭಾಷೆಗೆ ಸಂವಿಧಾನ ಕೊಟ್ಟ ಹಕ್ಕುಗಳನ್ನು ಕಸಿದುಕೊಳ್ಳುವಾಗ ಭಾಷೆ ಎಂಬ ಧ್ವನಿ ವ್ಯವಸ್ಥೆಯನ್ನು ಆಧುನಿಕ ಭಾಷಾ ವಿಜ್ಞಾನದ ವಿಶಾಲದೃಷ್ಟಿಯಿಂದ, ನಿರ್ಭಾವುಕವಾಗಿ ನೋಡಲು ಸಾಧ್ಯವಿಲ್ಲ.
 
1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗುವ ಸಂದರ್ಭದಲ್ಲಿ ಸಂವಿಧಾನದ ಅಡಿಯಲ್ಲಿ ಕಾಸರಗೋಡು ಕನ್ನಡಿಗರಿಗೆ ನೀಡಿದ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು, ಕೇರಳ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆಯ ಮೂಲಕ ಕಸಿದುಕೊಂಡಿದೆ.
 
ಮೇ ಒಂದರಿಂದ ಔದ್ಯೋಗಿಕವಾಗಿ ಮತ್ತು   ಜೂನ್ ಒಂದರಿಂದ ಶೈಕ್ಷಣಿಕವಾಗಿ ಕೇರಳ ಸರ್ಕಾರ ಮಲಯಾಳವನ್ನು ಕಡ್ಡಾಯಗೊಳಿಸಿದೆ. ಇದರಿಂದಾಗಿ ಅನೇಕ ವರ್ಷಗಳಿಂದ ರೋಗಗ್ರಸ್ತವಾಗಿದ್ದ ಕಾಸರಗೋಡು ಕನ್ನಡನಾಡು ಈಗ ಕೋಮಾ ಹಂತಕ್ಕೆ ತಲುಪಿದೆ. ಏಳು ವರ್ಷಗಳಿಂದ ಮಲಯಾಳ ಮಾಧ್ಯಮಗಳು ಮತ್ತು ಮಲಯಾಳ ಸಾಹಿತಿಗಳು ಒಗ್ಗಟ್ಟಾಗಿ ಹೋರಾಡಿ ಕನ್ನಡವನ್ನು ಈ ಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರು ದಶಕಗಳ  ಕಾಸರಗೋಡಿನ ಕನ್ನಡಪರ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ. 
 
1956ರಲ್ಲಿ ಕೇರಳ ರಾಜ್ಯ ಶಾಸನ ಸಭೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕು ಮಸೂದೆ ಜಾರಿಗೆ ಬಂದಿತ್ತು. ಈ ಮಸೂದೆಯ ಪ್ರಕಾರ ಕಾಸರಗೋಡಿನ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬಲ್ಲ ಮುಖ್ಯೋಪಾಧ್ಯಾಯರು, ಕಚೇರಿಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳು ಮಾತ್ರ ನೇಮಕವಾಗಲು ಅರ್ಹರಾಗಿರುತ್ತಾರೆ. ಇದಲ್ಲದೆ ಗ್ರಾಮಾಧಿಕಾರಿಗಳು, ತಹಶೀಲ್ದಾರರು, ರಿಜಿಸ್ಟ್ರಾರ್, ಖಜಾನೆ ಅಧಿಕಾರಿಗಳು ಕನ್ನಡದಲ್ಲಿ ಲಿಖಿತ ಮತ್ತು ಮೌಖಿಕ ಉತ್ತರವನ್ನು ನೀಡುವಂತಿರಬೇಕು.
 
ಕಾಸರಗೋಡಿನ ಕನ್ನಡಿಗರ ಸಾಹಿತ್ಯ ಸಂಸ್ಕೃತಿಯನ್ನು ಸಂವರ್ಧಿಸುವ ಮತ್ತು ಸಂರಕ್ಷಿಸುವ ಕರ್ತವ್ಯವನ್ನು ಕೇರಳ ಸರ್ಕಾರ ಸಂವಿಧಾನಬದ್ಧವಾಗಿ ಒಪ್ಪಿಕೊಂಡಿತ್ತು. ಈಗ ಮಲಯಾಳವನ್ನು ಔದ್ಯೋಗಿಕವಾಗಿ ಮತ್ತು ಶೈಕ್ಷಣಿಕವಾಗಿ ಕಡ್ಡಾಯಗೊಳಿಸುವ ಸುಗ್ರೀವಾಜ್ಞೆ ಮೂಲಕ ನಿರಂಕುಶ ರಾಜ್ಯಾಧಿಪತ್ಯದಂತೆ ವರ್ತಿಸುತ್ತಿದೆ.
 
ಇದಲ್ಲದೆ ಸಂವಿಧಾನ ವಿರೋಧಿ ಮತ್ತು ಜನವಿರೋಧಿ ಕಾನೂನಿನ ಅನುಷ್ಠಾನಕ್ಕೆ ಸಾಕ್ಷಿಯಾಗಿದೆ.
ಮಲಯಾಳ ಕಡ್ಡಾಯ ಆದೇಶದ ಪ್ರಕಾರ ಕನ್ನಡ ಭಾಷಾ ವಿದ್ಯಾರ್ಥಿಗಳು ಇಂಗ್ಲಿಷ್, ಹಿಂದಿಯ ಜೊತೆಗೆ ಮಲಯಾಳವನ್ನು ದ್ವಿತೀಯ ಭಾಷೆಯಾಗಿ ಕಲಿಯಬೇಕಾಗುತ್ತದೆ. 
 
ಮಲಯಾಳ ಮಾತೃಭಾಷೆಯ ಮಗು ಮಲಯಾಳ, ಇಂಗ್ಲಿಷ್, ಹಿಂದಿ ಕಲಿತರೆ ಸಾಕು. ಆದರೆ ಕನ್ನಡ ಮಾತೃಭಾಷೆಯ ಮಗು ಕಾಸರಗೋಡಿನಲ್ಲಿ ಹುಟ್ಟಿದ ಕಾರಣಕ್ಕೆ ಇನ್ನೊಂದು ಭಾಷೆಯ ಹೊರೆಯನ್ನು ಹೊರಬೇಕಾಗುತ್ತದೆ. ಇದರ ಪರಿಣಾಮವಾಗಿ ಕಾಸರಗೋಡಿನ ಕನ್ನಡಿಗರು ತಮ್ಮ ಮಕ್ಕಳನ್ನು ಒಂದೋ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುತ್ತಾರೆ ಅಥವಾ ಕರ್ನಾಟಕಕ್ಕೆ ‘ಗಡೀಪಾರು’ ಮಾಡುತ್ತಾರೆ.  
 
ಈ ಮೂಲಕ  ಕನ್ನಡಿಗರ ತಲೆಗಳು ಕಡಿಮೆಯಾಗುತ್ತವೆ. ಕೇರಳ ಸರ್ಕಾರದ ಗುಪ್ತ ಪ್ರಣಾಳಿಕೆ ಇದೇ ಆಗಿದೆ. ಹಾಗೆಂದು ಕನ್ನಡಿಗರಿಗೆ ಮಲಯಾಳವನ್ನು ಒಂದು ಭಾಷೆಯಾಗಿ ಕಲಿಯುವುದಕ್ಕೆ ವಿರೋಧವಿಲ್ಲ. ಕಾಸರಗೋಡಿನ ಅದೆಷ್ಟೋ ಕನ್ನಡಿಗರು ಮಲಯಾಳಿಗಳಿಗಿಂತಲೂ ಚೆನ್ನಾಗಿ ಮಲಯಾಳ ಓದುತ್ತಾರೆ, ಬರೆಯುತ್ತಾರೆ. ಆದರೆ ಇಲ್ಲಿ ವಿರೋಧವಿರುವುದು ಮಲಯಾಳವನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಿದ್ದರ ಬಗ್ಗೆ ಮಾತ್ರ. 
 
ಕಾಸರಗೋಡು ಕನ್ನಡಿಗರು ಮಲಯಾಳ ಕಡ್ಡಾಯದ ಸುಗ್ರೀವಾಜ್ಞೆಯಿಂದ ಕಾಸರಗೋಡನ್ನು ಹೊರಗಿಡುವಂತೆ ಮನವಿ ಕೊಡಲು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರನ್ನು ಭೇಟಿಯಾದರೆ, ಇವರ ಮಾತಿಗೆ ಕವಡೆ ಕಾಸಿನ ಬೆಲೆಯೂ ಸಿಗದೆ ಹೋಯಿತು. ಪ್ರಜಾಪ್ರಭುತ್ವ ಮಾದರಿಯ ಸರ್ಕಾರದಲ್ಲಿ ಈ ರೀತಿ ದಾರ್ಷ್ಟ್ಯ ಇದ್ದರೆ ಪ್ರಜಾಪ್ರಭುತ್ವ ಎಂದು ಕರೆಯುವುದು ಹೇಗೆ?

ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಮಲಯಾಳ ಕಡ್ಡಾಯವಾದ ಮೇಲೆ ಕಾಸರಗೋಡಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಡಳಿತ ಮತ್ತು ವ್ಯವಹಾರ ಭಾಷೆ ಮಲಯಾಳವಾಗುತ್ತದೆ. ಮಲಯಾಳ ಗೊತ್ತಿಲ್ಲದ ಕನ್ನಡದ ಎಷ್ಟು ದೊಡ್ಡ ವಿದ್ವಾಂಸನಾದರೂ ಇಲ್ಲಿ ಅನಕ್ಷರಸ್ಥನಾಗಬೇಕಾಗುತ್ತದೆ. ಇದಕ್ಕಿಂತ ದೊಡ್ಡ ದುರಂತ ಬೇರೇನಿದೆ?
 
ಪದವಿ ಶಿಕ್ಷಣವನ್ನು ಕನಿಷ್ಠ ಅರ್ಹತೆಯನ್ನಾಗಿಸಿ ನಡೆಯುವ ಪಿ.ಎಸ್.ಸಿ. ಪರೀಕ್ಷೆಗಳಿಗೆ ಮಲಯಾಳ ಪ್ರಶ್ನೆಪತ್ರಿಕೆ ತಯಾರಿಸಲು ಪಿ.ಎಸ್.ಸಿ.ಗೆ ಸರ್ಕಾರ ಆದೇಶ ನೀಡಿದೆ. ನೂರು ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ 10 ಅಂಕಗಳ ಪ್ರಶ್ನೆಗಳಿಗೆ ಮಲಯಾಳ ಭಾಷೆಯಲ್ಲಿ ಉತ್ತರಿಸಬೇಕು ಎಂದು ತಿಳಿಸಲಾಗಿದೆ. ಕೆಲವು ಪಿ.ಎಸ್.ಸಿ. ಪರೀಕ್ಷೆಗಳನ್ನು ಪೂರ್ಣವಾಗಿ ಮಲಯಾಳ ಭಾಷೆಯಲ್ಲಿ ನಡೆಸಬೇಕೆಂದು ಮುಖ್ಯಮಂತ್ರಿ ಸೂಚಿಸಿದ್ದು, ಅದನ್ನು ಪಿ.ಎಸ್.ಸಿ. ಅಂಗೀಕರಿಸಿದೆ. ಈ ತೀರ್ಮಾನ ಕಾಸರಗೋಡು ಜಿಲ್ಲೆಯ ಕನ್ನಡ ಭಾಷಾ ಅಲ್ಪಸಂಖ್ಯಾತ ಉದ್ಯೋಗಾರ್ಥಿಗಳಿಗೆ, ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಕೊಡಲಿಯೇಟಾಗಲಿದೆ. ಇನ್ನು ಮುಂದೆ ಮಲಯಾಳ ಗೊತ್ತಿಲ್ಲದಿದ್ದರೆ ಸರ್ಕಾರಿ ಉದ್ಯೋಗ ಸಿಗುವಂತಿಲ್ಲ. 
 
ಕಾಸರಗೋಡಿನಲ್ಲಿ ಈಗ ಸರ್ಕಾರಿ ಕಚೇರಿಯಲ್ಲಿರುವ ಉದ್ಯೋಗಿಗಳಲ್ಲಿ ಹೆಚ್ಚಿನವರು ದಕ್ಷಿಣ ಕೇರಳದ ಮಲಯಾಳಿಗಳು. ಅವರಿಗೆ ಕನ್ನಡ ಬರುವುದಿಲ್ಲ. ಕನ್ನಡಿಗರು ಕನ್ನಡದಲ್ಲಿ ಮಾತನಾಡಿದರೆ, ‘ಮನುಷ್ಯರ್ಕ್‌ ಮನಸಿಲಾವುನ್ನ ಭಾಷೆಯಿಲ್ ಸಂಸಾರಿಕ್ಕ್’ (ಮನುಷ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡು) ಎಂದು ಹೀಯಾಳಿಸುತ್ತಾರೆ.
 
ಕಾಸರಗೋಡಿನ ಕನ್ನಡಿಗರು ವಲಸೆ ಬಂದವರಲ್ಲ. ಮೂಲತಃ ಕಾಸರಗೋಡಿನಲ್ಲೇ ಇದ್ದವರು. ಭಾಷಾವಾರು ಪ್ರಾಂತ್ಯ ರಚನೆಯಾಗುವ ಮೊದಲೇ ಮದ್ರಾಸ್ ಸಂಸ್ಥಾನ ಇರುವಾಗಲೇ ಉಡುಪಿ, ಮಂಗಳೂರು ಮತ್ತು ಕಾಸರಗೋಡು ಅಚ್ಚಗನ್ನಡ ನೆಲವಾಗಿತ್ತು. ಆನಂತರ ರಾಜಕೀಯ ಕುತಂತ್ರದಿಂದ ಕಾಸರಗೋಡು ಕೇರಳಕ್ಕೆ ಹೋಯಿತು. 
 
ಕಾಸರಗೋಡು ಕರ್ನಾಟಕ್ಕೆ ಸೇರಬೇಕೆಂಬ 60 ವರ್ಷಗಳ ಹೋರಾಟದ ಕಾವು ಕಯ್ಯಾರರ ಅಸ್ತಮಾನದ ಜೊತೆಗೆ ಕಡಿಮೆಯಾಗಿದೆ. ಕಯ್ಯಾರರ ಕನಸು ಕನಸಾಗಿಯೇ ಉಳಿದು ಹೋಯಿತು. ಕನ್ನಡದ ಹೋರಾಟಕ್ಕೆ ಸಮರ್ಥ ನಾಯಕರಾಗಿದ್ದ ಕಳ್ಳಿಗೆ, ಕುಣಿಕುಳ್ಳಾಯರಂಥ ನಾಯಕರು ಈಗ ಇಲ್ಲ. ಕಾಸರಗೋಡಿನ ಕನ್ನಡಿಗರು ವಿವಿಧ ಕಾರಣಗಳಿಂದ  ಚದುರಿ ಹೋಗಿದ್ದಾರೆ.
 
ಕಾಸರಗೋಡಿನಲ್ಲಿರುವ ಸುಮಾರು 1400 ಕನ್ನಡ ಶಿಕ್ಷಕರಲ್ಲಿ ಶೇ 20ರಷ್ಟು ಶಿಕ್ಷಕರ ಮಕ್ಕಳು ಮಾತ್ರ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ. ಉಳಿದವರು ಕರ್ನಾಟಕದಲ್ಲಿ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಇದಕ್ಕೆಲ್ಲಾ ಅವರದ್ದೇ ಸಮರ್ಥನೆಗಳಿವೆ. 
 
ಈಗ ಕಾಸರಗೋಡಿನಲ್ಲಿ ನಡೆಯುತ್ತಿರುವ ಹೋರಾಟ ಶಿಕ್ಷಕರ ಹೋರಾಟವಾಗಿದೆಯೇ ಹೊರತು ಜನಪರ ಹೋರಾಟ ಇನ್ನೂ ಆಗಿಲ್ಲ. ಬೀದಿ ಬದಿಯ ಬೀಡಾ, ಕಡ್ಲೆ ಮಾರುವ ವ್ಯಾಪಾರಿಯಿಂದ ತೊಡಗಿ ಮಾಲ್‌ಗಳ ದೊಡ್ಡ ದೊಡ್ಡ ವ್ಯಾಪಾರಿಗಳು ಇದರಲ್ಲಿ ಭಾಗವಹಿಸುವಂತಾಗಬೇಕು. ಕನ್ನಡ ಮಾತಾಡದಿದ್ದರೆ ಕಾಸರಗೋಡಿನಲ್ಲಿ ಬದುಕಲು ಕಷ್ಟವಾಗುತ್ತದೆ ಎಂಬ ವಾತಾವರಣ ಸೃಷ್ಟಿಯಾಗಬೇಕು.
 
ಕನ್ನಡಿಗರ ಹಕ್ಕುಗಳನ್ನು ಸಂರಕ್ಷಣೆ ಮಾಡುವವರಿಗೆ ಮಾತ್ರ ನಮ್ಮ ಮತ ಎಂಬ ಪಕ್ಷಾತೀತ ಕನ್ನಡಿಗರ ಧ್ರುವೀಕರಣ ಇಂದಿನ ಅತ್ಯಂತ ಅಗತ್ಯವಾಗಿದೆ. ಮೇ 23ರಂದು ಕಾಸರಗೋಡಿನ ಕನ್ನಡಿಗರೆಲ್ಲಾ ಒಟ್ಟಾಗಿ ನಡೆಸಿದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮುತ್ತಿಗೆ ಇದಕ್ಕೆ ಒಂದು ನಿದರ್ಶನ.
ಕಾಸರಗೋಡಿನ ಕನ್ನಡಿಗರ ಕರುಳಿನ ಕೂಗಿಗೆ ಕರ್ನಾಟಕ ಸರ್ಕಾರವೂ ಕಿವಿಗೊಡಬೇಕು.
 
ಕಾಸರಗೋಡಿನ ಕನ್ನಡಿಗರು ‘ಬೆಂಕಿ ಬಿದ್ದಿದೆ ಮನೆಗೆ ಎಲ್ಲರೂ ಓಡಿ ಬನ್ನಿ’ ಎಂಬ ಕಯ್ಯಾರರ ಕವಿವಾಣಿಯನ್ನು ನೆನಪಿಸಿ  ಒಂದಾಗಬೇಕು. ಇಲ್ಲದಿದ್ದರೆ ಮಂಜೇಶ್ವರ ಗೋವಿಂದ ಪೈ ಹಾಡಿದ  ‘ತಾಯೆ ಬಾರ ಮೊಗವ ತೋರ’ ಎಂಬ ಹಾಡನ್ನು ಕಾಸರಗೋಡಿನಿಂದ ಹೊರಗೆ ನಿಂತು ಹಾಡಬೇಕಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.