ADVERTISEMENT

ಕುತಂತ್ರ ರಾಜಕಾರಣದ ಆರೋಪ ಸರಿಯೇ?

ಡಾ.ರಾಜೇಗೌಡ ಹೊಸಹಳ್ಳಿ
Published 29 ಜನವರಿ 2016, 19:51 IST
Last Updated 29 ಜನವರಿ 2016, 19:51 IST

ಎಸ್‌.ಎಲ್‌. ಭೈರಪ್ಪನವರು ಹೇಳಿರುವ ಹಲವು ವಿಚಾರಗಳು ಪತ್ರಿಕೆಯಲ್ಲಿವೆ (ಪ್ರ.ವಾ., ಜ. 25). ‘ಇಡೀ ಭಾರತವನ್ನು ಒಂದುಗೂಡಿಸಿರುವುದು ಸಂಸ್ಕೃತ. ಭಾರತ ಒಗ್ಗೂಡುವುದು ಬೇಡ ಎನ್ನುವವರೊಂದಿಗೆ ನಾವು ವಾದಿಸಲು ಸಾಧ್ಯವಿಲ್ಲ’.  ಅವರ ಈ ಮಾತು ಭಾಷೆ ಕುರಿತದ್ದು. ಭಾಷೆಯೊಂದು ಬಹುಜನರ ಭಾಷೆಯಾದರೆ ಮಾತ್ರ ಒಗ್ಗೂಡಲು ಸಾಧ್ಯ. ಸಂಸ್ಕೃತ ಕನ್ನಡಾದಿಗಳೆಲ್ಲವೂ ಪ್ರಾಕೃತ ಪ್ರಭಾವದಿಂದ ಅರಳಿದವು. ಇದಕ್ಕೆ ನಮ್ಮ ಕನ್ನಡದ ಲಭ್ಯ ಮೊದಲ ಕಥಾ ಸಂಕಲನ ‘ವಡ್ಡಾರಾಧನೆ’ ಸಾಕ್ಷಿ. ಸಂಸ್ಕೃತವು ಆಗಿನ ಸಮಾಜದ ಅಕ್ಷರಸ್ಥರ ಭಾಷೆಯಾದ ಕಾರಣ ಭಾರತೀಯ ಅಕ್ಷರ ಭಾಷೆಗಳಿಗೆ ಕ್ರಮೇಣ ಹೆಚ್ಚು ಪ್ರಭಾವ ಬೀರಿರಬಹುದು; ಅಂದಾಕ್ಷಣ ಇಂದು ಸಹಾ ಸಂಸ್ಕೃತ ಕಲಿತವರಷ್ಟೆ ಸಾಹಿತಿಗಳಲ್ಲ.

‘ಅಹಿಂಸಾ ಮಾರ್ಗದಿಂದ ನಾವು ದೇಶದ ಸ್ವಾತಂತ್ರ್ಯ ಪಡೆದೆವು ಎಂಬುದು ಸುಳ್ಳು ಪ್ರಚಾರ. ಬ್ರಿಟನ್‌ ಪ್ರಧಾನಿಯಾಗಿದ್ದ ಅಟ್ಲಿ ಅವರೇ ಈ ವಿಚಾರವನ್ನು ಕಾಲಾಂತರದಲ್ಲಿ ಹೇಳಿದ್ದಾರೆ. ನೇತಾಜಿ ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಸಹಾ ಬೇಕಾದಷ್ಟು ಕೆಲಸ ಮಾಡಿದ್ದಾರೆ’. ಇದು ಅವರ ಮತ್ತೊಂದು ಮಾತು. ಅಹಿಂಸಾ ಮಾರ್ಗಕ್ಕೆ ವಿರುದ್ಧವಾಗಿ ಹೊರಟ ನೇತಾಜಿ ಬಗ್ಗೆ ಗಾಂಧಿ ಅವರಿಗೆ ಅಪಾರ ಮೆಚ್ಚುಗೆ  ಇತ್ತು. ಆದರೆ ಮಾರ್ಗದ ಬಗ್ಗೆ ಒಪ್ಪುವುದಿಲ್ಲವೆಂಬುದನ್ನು ಅವರು ರಹಸ್ಯವಾಗೇನೂ ಇಟ್ಟಿರಲಿಲ್ಲ. ನೇತಾಜಿ ಗಾಂಧೀಜಿಗೆ ಪುತ್ರನಂತಿದ್ದರು ಎಂಬ ಮಾತುಗಳಲ್ಲಿ ಗಾಂಧಿ ಅವರ ಆಪ್ತ ಕಾರ್ಯದರ್ಶಿಯವರಾಗಿದ್ದ ಪ್ಯಾರೇಲಾಲ್‌ ಅವರು ವಿವರಿಸುತ್ತಾ ಹೋಗುತ್ತಾರೆ. ಗಾಂಧಿ ಅವರ ಅಹಿಂಸಾತತ್ವ ಕೇವಲ ಭಾರತ ಕುರಿತದ್ದಾಗಿರಲಿಲ್ಲ. ಜಗತ್‌ತತ್ವವಾಗಿತ್ತು. ಹಾಗಾಗಿ ‘ಇವತ್ತು ಜಗತ್ತಿನಲ್ಲಿ ಯುದ್ಧವಾಗದಂತೆ ತಡೆಯಬಲ್ಲವರು ನೀವು ಒಬ್ಬರೇ ಎಂಬುದು ಸ್ಪಷ್ಟ’ ಎಂದು ಹಿಟ್ಲರನಿಗೆ ಪತ್ರ ಬರೆಯುತ್ತಾರೆ. ಈ ದೇಶದ ಆಗಿನ ಹಿಂಸೆಗೆ ಮುಸ್ಲಿಂ  ಲೀಗ್‌ ಹಾಗೂ ಆರ್‌ಎಸ್‌ಎಸ್‌ ಕಾರಣವೆಂಬುದು ನಿಜ. ಈಗಲೂ ಅದು ಮುಂದುವರಿಯುತ್ತಿರುವುದು ಸುಳ್ಳಲ್ಲ.

‘ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರು ಯಾರಾಗಬೇಕು, ಯಾರ ಕೈಗೆ ದೇಶ ಒಪ್ಪಿಸಬೇಕು ಎನ್ನುವ ಪ್ರಶ್ನೆಗಳು ಎದುರಾದಾಗ 15 ಪ್ರಾಂತ ಸಮಿತಿಗಳಲ್ಲಿ 12 ಸರ್ದಾರ್‌ ಪರವಾಗಿಯೂ 2 ನೆಹರೂ ಪರವಾಗಿಯೂ ಒಲವು ತೋರಿದ್ದವು’ ಎಂಬ ಮಾತಿನಲ್ಲಿ ವೈರುಧ್ಯಗಳಿವೆ. ‘‘ಆ ಸಮಯದಲ್ಲಿ ಪಟೇಲ್‌ ಅವರನ್ನು ಗಾಂಧಿ ಕರೆದು, ‘ನೀನು ಒಪ್ಪಿಕೊಳ್ಳಬೇಡ. ನಾನು ನೆಹರೂಗೆ ಈ ವಿಚಾರದಲ್ಲಿ ಮಾತು ಕೊಟ್ಟಿದ್ದೇನೆ’ ಎಂದರು’’ ಎಂಬ ಭೈರಪ್ಪನವರ ಮಾತು ಅಷ್ಟಕ್ಕೆ ನಿಲ್ಲುವುದಿಲ್ಲ. ‘ಗಾಂಧಿ ಕುತಂತ್ರ ಅರಿತ ಪಟೇಲ್‌ ಈ ಹಿಂದೆ ನೇತಾಜಿಗೆ ತಂದ ಗತಿಯನ್ನೆ ನನಗೂ ತರುತ್ತಾರೆ ಎಂದು ಸುಮ್ಮನಾದರು’ ಎಂಬ ಮಾತಂತೂ ಅನಪೇಕ್ಷಣೀಯವಾದುದು. ಚರಿತ್ರೆಯನ್ನು ತಮ್ಮ ಮೂಗಿನ ನೇರಕ್ಕೆ ತಿದ್ದಿಕೊಳ್ಳುವ ಮಾದರಿಯಿದು. ಇಂತಹುದರ ಮೂಲಕ ಆಕಾಶದುದ್ದಕ್ಕೆ ತಮ್ಮ  ಪ್ರತಿಮೆಯನ್ನು ನಿರ್ಮಿಸುತ್ತಾರೆಂದು ‘ಉಕ್ಕಿನ ಮನುಷ್ಯ’ ಬೀಗುವುದಿಲ್ಲ.

ಬ್ರಿಟಿಷರ ತರುವಾಯ ದೇಶದ ಪ್ರಧಾನಿ ನೆಹರೂ ಆಗಬೇಕೆಂದು ದೇಶ ಬಯಸುತ್ತಿತ್ತು. ಕಾಂಗ್ರೆಸ್‌ ಬಯಸುತ್ತಿತ್ತು. ಗಾಂಧೀಜಿ ಒತ್ತಾಸೆಯೂ ಇತ್ತು. ಗಾಂಧೀಜಿ ಬಹುದೊಡ್ಡ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಸ್ವತಂತ್ರ ಭಾರತವು ನೆಹರೂ ಮೂಲಕವೇ ಆಧುನಿಕತೆ ಎಂಬ ತರಾತುರಿಯಲ್ಲಿ ಅದೆಷ್ಟೋ ತಪ್ಪು ಹೆಜ್ಜೆಯತ್ತ ಧಾವಿಸುತ್ತಿದ್ದರೂ ವಿದೇಶಿ ಮಟ್ಟದಲ್ಲಿ ಯಾರು ಸಮರ್ಥರು ಎಂಬ ತಿಳಿವಳಿಕೆ ಗಾಂಧಿ ಅವರಲ್ಲಿ ಇಲ್ಲದೆಯಿಲ್ಲ.
‘ಪಟೇಲರ ದೃಷ್ಟಿಯಲ್ಲಿ ಆರ್‌ಎಸ್‌ಎಸ್‌  ತಪ್ಪುದಾರಿ ಹಿಡಿದ ದೇಶಭಕ್ತರ ಕೂಟ. ಮುಸ್ಲಿಮರ ಬಗ್ಗೆ ಸಂಘವು ಹೊಂದಿರುವ ಮುಯ್ಯಿಗೆ ಮುಯ್ಯಿ ಸಿದ್ಧಾಂತದ ಕೋಮುವಾದಿ ಸ್ವರೂಪದ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ’. ಈ ಮಾತನ್ನು ಪಟೇಲರ ಬಗ್ಗೆ ಪ್ಯಾರೇಲಾಲ್‌ ಹೇಳುತ್ತಾರೆ. ‘ಕಾಂಗ್ರೆಸ್‌ನಲ್ಲಿರುವ ಕೆಲವರು ತಮ್ಮ ಅಧಿಕಾರ ಬಲದಿಂದ ಆರ್‌ಎಸ್‌ಎಸ್‌ ಅನ್ನು ತುಳಿದು ಹಾಕುತ್ತೇವೆಂದು ಯೋಚಿಸುತ್ತಾರೆ. ಆದರೆ ಒಂದು ಸಂಘಟನೆಯನ್ನು ದಂಡ ಭಯದಿಂದ ಧ್ವಂಸ ಮಾಡಲಾಗುವುದಿಲ್ಲ. ಆರ್‌ಎಸ್‌ಎಸ್‌ನವರು ದೇಶಭಕ್ತರು’ ಎಂದು ಪಟೇಲರೇ ಹೇಳಿರುವ ಮಾತು ಕೂಡ ಚಿಂತನೆಯಲ್ಲಿ ಏನು ಹೇಳುತ್ತದೆಂಬುದು ಇಲ್ಲಿ ಪ್ರಮುಖ.

ನೆಹರೂ ಮತ್ತು ಸರ್ದಾರರಲ್ಲಿ ಅಭಿಪ್ರಾಯ ಭೇದಗಳಿರಬಹುದು. ಆದರೂ ತಂದೆ ಮಾತನ್ನು ಕೇಳುವ ಶಿಸ್ತಿನ ಮಕ್ಕಳಂತೆ ಇಬ್ಬರೂ ಇದ್ದರು. ‘ನಮ್ಮ ನಾಯಕರು ನೆಹರೂ. ಬಾಪೂ ತಮ್ಮ ಜೀವಿತ ಕಾಲದಲ್ಲಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಹಾಗೆಂದು ಸಾರಿ ಹೇಳಿದರು. ಬಾಪೂ ಅವರ ಆಜ್ಞೆಯನ್ನು ಪರಿಪಾಲಿಸುವುದು ಬಾಪೂ ಅವರ ಸೈನಿಕರೆಲ್ಲರ ಕರ್ತವ್ಯ’ ಎಂದು ಸರ್ದಾರರು ಭಾಷಣವೊಂದರಲ್ಲಿ ದೇಶದ ಮುಂದೆ ಬಿಚ್ಚಿಟ್ಟಿದ್ದಾರೆ. ಈ ಮಾತನ್ನು ವರ್ತಮಾನಕ್ಕೆ ಹಿಡಿದು ನೋಡಿದರೆ ನೆಹರೂ ಸ್ಥಾನದಲ್ಲಿ ಈಗಿನ ಪ್ರಧಾನಿ ಕುಳಿತಿರಬಹುದು; ಅಡ್ವಾಣಿಯವರು ಮೌನ ವಹಿಸುತ್ತಲೇ ಪಕ್ಷಕ್ಕಾಗಿ ದುಡಿಯುತ್ತೇನೆಂಬುದನ್ನು ಭೈರಪ್ಪನವರು ಅರ್ಥಮಾಡಿಕೊಂಡಿದ್ದರೆ ರಾಷ್ಟ್ರಪಿತನನ್ನು ಕುರಿತು ‘ಗಾಂಧೀಜಿ ಅವರ ಕುತಂತ್ರ’ ಎಂಬ ಮಾತನ್ನು ಬಳಸುತ್ತಿರಲಿಲ್ಲ. ಇದು ಮಹಾತ್ಮನಿಗಷ್ಟೆ ಅಲ್ಲ, ದೇಶಕ್ಕೇ ಮಾಡಿದ ಅವಮಾನ. ಇದರೊಂದಿಗೆ ಅಹಿಂಸಾ ಸ್ವೀಕಾರದ ಹಾದಿಯ ಜಗತ್ತಿಗೆ ಮಾಡಿದ ಅವಮಾನವೂ ಹೌದು. ಹಿಟ್ಲರನ ಜಪಾನಿನ ಜಾಡು ಹಿಡಿದು ಹೊರಟ ನೇತಾಜಿ ಬಗ್ಗೆ ಗಾಂಧಿ ಅವರಿಗಿದ್ದ ಮರುಕದ ಬಗ್ಗೆ ಮಾಡಿದ ಅವಮಾನವೂ ಹೌದು.

‘ಮೌಲಾನಾ ಆಜಾದ್‌ ಅವರು ನೆಹರೂ ಆಡಳಿತದಲ್ಲಿ ಶಿಕ್ಷಣ ಸಚಿವರಾಗಿದ್ದರು. ನಂತರ ನಮ್ಮ ಪಠ್ಯಕ್ರಮದೊಳಗೆ ಇತಿಹಾಸವನ್ನು ಮುಸ್ಲಿಮರ ದೃಷ್ಟಿಕೋನದಿಂದ ನೋಡುವಂತೆ ಮಾಡಿದರು’ ಎಂಬ ಆಪಾದನೆ ಹಾಗೂ ನೆಹರೂ, ಇಂದಿರಾ ಗಾಂಧಿಯರೆಲ್ಲ ಎಡಪಂಥೀಯರಾಗಿ ಚರಿತ್ರೆಯನ್ನು ಅಪಮೌಲ್ಯಗೊಳಿಸಿದರು ಎಂಬ ಅವರ ಆಪಾದನೆ ಕೂಡ ಪಂಥೀಯ ಮೂಲವಾಸನೆಯದು. ಮೌಲಾನಾ; ಗಾಂಧಿ ನೆಚ್ಚಿದ ಈ ದೇಶ ಕಂಡ ದೇಶಾ
ಭಿಮಾನಿ. ವಿಭಜನೆಯಾದಾಗ ನೊಂದ ಹೃದಯಿಗಳ ಪ್ರತೀಕ. ಅವರ ಮೇಲಿನ ಆರೋಪ ಸರಿಯಲ್ಲ.

‘ಬ್ರಿಟಿಷರು ಹಿಂದೂ, ಮುಸಲ್ಮಾನರನ್ನು ಒಡೆದು ಆಳುವ ಪೂರ್ವದಲ್ಲಿಯೇ ಅವರಿಬ್ಬರ ನಡುವೆ ಒಡಕು ಇತ್ತು. ಆದರೆ ಮುಂಚಿನಿಂದಲೂ ನಾವು ಸುಮ್ಮನೆ ಸುಳ್ಳು ಹೇಳುತ್ತಲೇ ಬಂದಿದ್ದೇವೆ... ಇಲ್ಲದಿದ್ದರೆ ‘ಆವರಣ’ ಬರೆಯಲು ಎಲ್ಲಿ ಆಗುತ್ತಿತ್ತು?’ ಎಂಬ ಭೈರಪ್ಪನವರ ಮಾತಂತೂ ಇತಿಹಾಸಕ್ಕೆ ಮುನ್ನುಡಿ ಬರೆದಂತಿದೆ. ಹೌದು! ಹಿಂದೂ ಸಾಮ್ರಾಜ್ಯ ಇತಿಹಾಸವು ಆರ್ಯರಿಂದ ಬ್ರಿಟಿಷರವರೆಗೂ ಆಳುವವರ ಬೆನ್ನಿಗೆ ಆತು ನಿಂತಿದೆ. ಸ್ವತಂತ್ರ ಹೋರಾಟದಲ್ಲಂತೂ ಬ್ರಿಟಿಷರ ಒಡೆದು ಆಳುವ ನೀತಿಗೆ ಎರಡೂ ಕೋಮು ಪಕ್ಷಗಳು ಸಹಕಾರವಾಗಿಯೇ ನಿಂತದ್ದು ಚರಿತ್ರೆ. ಮೇಲಿನ ಎಲ್ಲ ಮಾತುಗಳನ್ನು ಭೈರಪ್ಪನವರು ‘ರಾಷ್ಟ್ರೋತ್ಥಾನ ಸಾಹಿತ್ಯ ಸಮಾರಂಭ’ ವೊಂದರಲ್ಲಿಯೇ ಬಿತ್ತರಿಸಿರುವುದು ಪೂರ್ವಗ್ರಹ ಪೀಡಿತವೆನ್ನದೆ ಬೇರೆಯಲ್ಲವೆಂದೇ ಹೇಳಬೇಕಾಗುತ್ತದೆ.

ಚೆನ್ನೈನ ಅಂಬೇಡ್ಕರ್‌–ಪೆರಿಯಾರ್‌ ಅಧ್ಯಯನ ಕೇಂದ್ರದಲ್ಲಿ ಪ್ರಾರಂಭವಾದ ತಲ್ಲಣಗಳು ಹೈದರಾಬಾದ್‌ ಕೇಂದ್ರವೊಂದರಲ್ಲಿ ವೇಮುಲ ರೋಹಿತ್‌ರನ್ನು ಬಲಿ ತೆಗೆದುಕೊಂಡಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಇದೆಲ್ಲದರ ಪ್ರತಿನಿಧಿ. ದೇಶದಲ್ಲಿ ಶೇ 25ರಷ್ಟು ಪರಿಶಿಷ್ಟ ಜಾತಿ, ಪಂಗಡ ಹಾಗೂ ಗಣನೀಯ  ಪ್ರಮಾಣದ  ಅಲ್ಪಸಂಖ್ಯಾತ ಸಮೂಹವಿದೆ. ಪದ್ಮಶ್ರೀ ಪಡೆದ ಭೈರಪ್ಪನವರು ದೇಶದ ವಿ.ವಿ.ಗಳ ಪ್ರತಿನಿಧಿ ಹಾಗೂ ರಾಯಭಾರಿ. ಫ್ರಾನ್ಸ್‌ ಅಧ್ಯಕ್ಷರನ್ನು ತಬ್ಬಿ ಬರ ಮಾಡಿಕೊಂಡ ಪ್ರಧಾನಿಯೂ ಸೇರಿದಂತೆ ಎಲ್ಲರೂ ದೇಶದ ಎಲ್ಲರನ್ನೂ ತಬ್ಬಿ ಹೋಗುತ್ತಾ ಸಾಗುವುದು ಎಲ್ಲರ ಜವಾಬ್ದಾರಿ. ಇದೇ ಪ್ರಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.