ಕರ್ನಾಟಕ ಲೋಕಸೇವಾ ಆಯೋಗ, ಗೆಜೆ ಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ರೂಪಿಸಿದ್ದ (2011) ಆಯ್ಕೆ ಪಟ್ಟಿಯನ್ನು ಸರ್ಕಾರ ತಿರಸ್ಕರಿಸಿದೆ. ಇದನ್ನು ವಿರೋಧಿಸಿ ರಂಗಕ್ಕೆ ಇಳಿದಿರುವ ರಾಜಕಾರಣಿಗಳು, ಸಮಾಜ ಸೇವಕರೆನ್ನಿಸಿಕೊಂಡವರು ಮತ್ತು ಕೆಲವು ಅಭ್ಯರ್ಥಿಗಳು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ದುರ್ಬಲ ವರ್ಗಗಳನ್ನು ಅವಮಾನಿಸುವ ಕ್ರಿಯೆಯಲ್ಲಿ ತೊಡಗಿದ್ದಾರೆ.
ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ವರ್ಗದವರು ಆಯ್ಕೆಯಾಗಿದ್ದಾರೆ. ಈ ಪಟ್ಟಿಯನ್ನು ತಿರಸ್ಕರಿಸಿರುವುದರ ಹಿಂದೆ ಈ ವರ್ಗಗಳ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ಉದ್ದೇಶವಿದೆ ಎಂಬಂತೆ ಇವರ ಮಾತುಗಳಿವೆ.
ಈ ಬಗೆಯ ವಾದವೊಂದರ ಮೂಲಕ ಇವರು ಈ ಬಾರಿ ಉತ್ತೀರ್ಣರಾಗಿರುವ ದುರ್ಬಲ ವರ್ಗದ ಅಭ್ಯರ್ಥಿಗಳ್ಯಾರೂ ತಮ್ಮ ಸ್ವಸಾಮರ್ಥ್ಯದಿಂದ ಉತ್ತೀರ್ಣರಾಗಿಲ್ಲ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತಿದ್ದಾರೆ. ಪ್ರತಿಭೆ ಎಂಬುದು ಕೇವಲ ಮೇಲುವರ್ಗಕ್ಕೆ ಸೀಮಿತ ಎಂಬ ಧ್ವನಿಯಿರುವ ವಾದವನ್ನು ಯಾವ ಸಂವೇದನಾಶೀಲರಾರೂ ಒಪ್ಪಲು ಸಾಧ್ಯವಿಲ್ಲ.
ಈಗ ಆಯ್ಕೆಯಾಗಿರುವ ದುರ್ಬಲ ವರ್ಗದ ಅಭ್ಯರ್ಥಿಗಳು ತಮ್ಮ ಪ್ರತಿಭೆಯಿಂದ ಆಯ್ಕೆಯಾಗಿದ್ದಾರೆಯೇ ಹೊರತು ಈ ತಥಾಕಥಿತ ಹೋರಾಟಗಾರರು ವಾದಿಸುತ್ತಿರುವಂತೆ ‘ಪವಾಡ ಸದೃಶ’ವಾಗಿ ಆಯ್ಕೆಯಾಗಿಲ್ಲ.
ಕರ್ನಾಟಕ ಲೋಕಾಸೇವಾ ಆಯೋಗದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು 1998, 1999 ಮತ್ತು 2004ರಲ್ಲಿ ನಡೆದ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆಗಳಲ್ಲಿ ನಡೆದ ಅವ್ಯವಹಾರಗಳು ನ್ಯಾಯಾಲಯ ತಲುಪಿದಾಗಲೇ ಸ್ಪಷ್ಟವಾಗಿತ್ತು. ಅಲ್ಲಿಂದೀಚೆಗೆ ಆರು ಮಂದಿ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಇವರಲ್ಲಿ ಕನಿಷ್ಠ ಮೂವರು ಬಹಿರಂಗವಾಗಿ ಸರ್ಕಾರದ ಈಗಿನ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ.
1998ರಿಂದ 2004ರ ಅವಧಿಯಲ್ಲಿ ನಡೆದ ಪರೀಕ್ಷೆ ಮತ್ತು ಸಂದರ್ಶನಗಳ ಸುತ್ತ ಎದ್ದ ವಿವಾದದ ಬಗ್ಗೆ ಈ ಮುಖ್ಯಮಂತ್ರಿಗಳಲ್ಲಿ ಯಾರಾದರೊಬ್ಬರು ಗಮನಹರಿಸಿದ್ದರೆ ಈಗ ಎದೆಬಡಿದುಕೊಂಡು ಗದ್ದಲವೆಬ್ಬಿಸಬೇಕಾದ ಅಗತ್ಯವಿರಲಿಲ್ಲ.
ಅಧಿಕಾರದಲ್ಲಿರುವಷ್ಟೂ ಕಾಲ ಲೋಕಸೇವಾ ಆಯೋಗವನ್ನು ಸುಧಾರಿಸುವ ಯಾವ ಕೆಲಸವನ್ನೂ ಮಾಡದೆ ಈಗ ಅಂಥದ್ದೊಂದು ಸುಧಾರಣಾ ಕ್ರಿಯೆ ಸಣ್ಣ ಮಟ್ಟಿಗಾದರೂ ಆರಂಭವಾಗಿರುವ ಹೊತ್ತಿನಲ್ಲಿ ಅದನ್ನು ವಿರೋಧಿಸುತ್ತಿರುವುದನ್ನು ಸಂಶಯದಿಂದ ನೋಡಲೇಬೇಕಾಗುತ್ತದೆ. ಆಯ್ಕೆ ಪಟ್ಟಿಯನ್ನು ತಿರಸ್ಕರಿಸಿರುವ ಸರ್ಕಾರದ ತೀರ್ಮಾನವನ್ನು ವಿರೋಧಿಸುವುದಕ್ಕೆ ಅವರು ನೀಡುತ್ತಿರುವ ಕಾರಣಗಳನ್ನು ನೋಡಿದರೇ ಇದು ಅರ್ಥವಾಗುತ್ತದೆ. ಸರ್ಕಾರ ಆಯ್ಕೆ ಪಟ್ಟಿಯನ್ನು ತಿರಸ್ಕರಿಸಿರುವುದರಿಂದ ಆಯ್ಕೆಯಾಗಿರುವ 362 ಮಂದಿಯಲ್ಲಿ ಇರಬಹುದಾದ ಪ್ರಾಮಾಣಿಕ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂದು ವಾದಿಸಲಾಗುತ್ತಿದೆ.
ಆಯ್ಕೆಯಾಗಿರುವ 362 ಮಂದಿಯಲ್ಲಿ ಎಲ್ಲರೂ ಭ್ರಷ್ಟಾಚಾರದ ಪಾಲುದಾರರಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಅಕ್ರಮವಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರನ್ನು ನಿಖರವಾಗಿ ಗುರುತಿಸಲೂ ಸಾಧ್ಯವಾಯಿತು ಎಂದುಕೊಳ್ಳೋಣ. ಅವರನ್ನು ಬಿಟ್ಟು ಪಟ್ಟಿಯನ್ನು ಒಪ್ಪಿಕೊಳ್ಳಲು ತಾರ್ಕಿಕವಾಗಿ ಸಾಧ್ಯವೇ? ಅಕ್ರಮ ಮಾರ್ಗದಲ್ಲಿ ಒಬ್ಬ ತೂರಿಕೊಂಡಿದ್ದರೂ ಇಡೀ ಆಯ್ಕೆಯೇ ತಪ್ಪಾಗುತ್ತದೆ. ಏಕೆಂದರೆ ಇಲ್ಲಿ ಜೇಷ್ಠತೆಯ ಲೆಕ್ಕ ತಪ್ಪುತ್ತದೆ. ಮೀಸಲಾತಿಯ ಲೆಕ್ಕ ತಪ್ಪಾಗುತ್ತದೆ. ಈ ಒಬ್ಬನಿಂದ ಹೊರಗುಳಿದಿರಬಹುದಾದವರ ವಯೋಮಿತಿ ಮೀರಿದ್ದರೆ ಅವರಿಗೆ ಪರೀಕ್ಷೆ ಬರೆಯುವ ಅವಕಾಶವೂ ಇಲ್ಲವಾಗುತ್ತದೆ. ಆದ್ದರಿಂದ ಸರ್ಕಾರ ಪಟ್ಟಿಯನ್ನು ತಿರಸ್ಕರಿಸಿ ವಯೋಮಿತಿ ಮೀರಿದವರೂ ಒಳಗೊಂಡಂತೆ ಎಲ್ಲರಿಗೂ ಮತ್ತೊಂದು ಪರೀಕ್ಷೆಯ ಅನುಕೂಲವನ್ನು ಕಲ್ಪಿಸಿರುವುದರಿಂದ ಸ್ಪರ್ಧೆಗೊಂದು ಸಮಾನ ಕಣ ಸೃಷ್ಟಿಯಾಗಿದೆ.
ಬಡತನದ ಹಿನ್ನೆಲೆಯಿಂದ, ಕೃಷಿ ಕುಟುಂಬ ಗಳಿಂದ, ದುರ್ಬಲ ವರ್ಗಗಳಿಂದ ಬಂದವರಿಗೆ ಇನ್ನೊಮ್ಮೆ ಪರೀಕ್ಷೆ ಬರೆಯುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಇದು ಆ ವರ್ಗಗಳಿಂದ ಬಂದ ಅಭ್ಯರ್ಥಿಗಳಿಗೆ ಮಾಡುವ ಅವಮಾನ. ಈ ವಾದವನ್ನು ಮಂಡಿಸುತ್ತಿರುವವರು ಎಷ್ಟು ಗಾಢವಾಗಿ ಸಾಮಾಜಿಕ ನ್ಯಾಯದ ಬಣ್ಣ ಬಳಿದುಕೊಂಡಿದ್ದರೂ ಮಾತಿನ ಧ್ವನಿಯಲ್ಲಿ ಕೆಳವರ್ಗದ ಪ್ರತಿಭಾವಂತರ ಬಗೆಗಿನ ತುಚ್ಛ ಭಾವ ಢಾಳಾಗಿ ಕಾಣಿಸುತ್ತಿದೆ. ಕೆಲವರಂತೂ ಸಿದ್ದರಾಮಯ್ಯನವರು ಮತ್ತೊಮ್ಮೆ ಚುನಾವಣೆಗೆ ನಿಂತು ಗೆದ್ದು ಬರಲಿ ಎನ್ನುತ್ತಿದ್ದಾರೆ.
ಈ ಪ್ರಶ್ನೆಗೆ ಇರುವ ಉತ್ತರ ಸರಳ. ಚುನಾವಣಾ ಆಯೋಗ ಸಿದ್ದರಾಮಯ್ಯನವರ ಆಯ್ಕೆಯನ್ನು ಅಸಿಂಧುಗೊಳಿಸಿದರೆ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಆಯ್ಕೆಯಾಗಬೇಕು. ಅದರಲ್ಲಿ ಯಾವ ಸಂಶಯವೂ ಇಲ್ಲ. ಹಾಗೆಯೇ ಈಗ ಎಲ್ಲಾ ಅಭ್ಯರ್ಥಿಗಳೂ ಇನ್ನೊಮ್ಮೆ ಪರೀಕ್ಷೆ ಬರೆಯಬೇಕು. ನಾವು ಇಷ್ಟುಕಾಲ ಕಷ್ಟಪಟ್ಟು ಬರೆದಿದ್ದೇವೆ. ಇನ್ನೊಮ್ಮೆ ಬರೆಯಲು ಅಸಾಧ್ಯ ಎಂದು ಯಾವುದಾದರೂ ಅಭ್ಯರ್ಥಿ ಅಲವತ್ತುಕೊಂಡರೆ ಅವರು ಗೆಜೆಟೆಡ್ ಪ್ರೊಬೇಷನರ್ ಆಗಿ ಆಯ್ಕೆಯಾಗುವುದಕ್ಕೆ ಅನರ್ಹರು ಎಂದು ಭಾವಿಸಬೇಕಾಗುತ್ತದೆ.
ಒಬ್ಬ ಉಪವಿಭಾಗಾಧಿಕಾರಿ ಮಟ್ಟದ ಅಧಿಕಾರಿ ವರ್ಷವೊಂದರಲ್ಲಿ ತನ್ನ ಕರ್ತವ್ಯದ ಭಾಗವಾಗಿ ಓದಬೇಕಾದ ಮತ್ತು ಬರೆಯಬೇಕಾದ ಪಠ್ಯದ ಪ್ರಮಾಣ ಸಾವಿರಾರು ಪುಟಗಳಷ್ಟಿರುತ್ತದೆ. ಪರೀಕ್ಷೆಯಲ್ಲಿ ಈತ ತಪ್ಪು ಬರೆದರೆ ಅದರ ಪರಿಣಾಮವನ್ನು ಎದುರಿಸುವುದು ಆತ ಮಾತ್ರ. ಅಧಿಕಾರಿಯಾದ ನಂತರ ಆತ ಸರಿಯಾಗಿ ಅಧ್ಯಯನ ಮಾಡದೆ ಬರೆಯುವ ಪ್ರತೀ ಅಕ್ಷರವೂ ಯಾವ ತಪ್ಪನ್ನೂ ಮಾಡದ ಸಾಮಾನ್ಯ ಪ್ರಜೆಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಸರ್ಕಾರ ತಿರಸ್ಕರಿಸಿರುವ ಆಯ್ಕೆ ಪಟ್ಟಿಯಲ್ಲಿರುವವರು ತಮಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಕಷ್ಟ ಎನ್ನುತ್ತಿದ್ದರೆ ಅವರು ಕೆಲಸ ಸಿಕ್ಕಿದಾಕ್ಷಣ ಆರಾಮದ ಜೀವನ ನಡೆಸಲು ತೀರ್ಮಾನಿಸುವವರು ಎಂದು ಭಾವಿಸಬೇಕಾಗುತ್ತದೆ. ಇವರ ಕೈಗೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಬಹುದಾದ ಅಧಿಕಾರವನ್ನು ಒಪ್ಪಿಸುವುದು ಅಪಾಯಕಾರಿ. ಅವರನ್ನು ಹುದ್ದೆಯಿಂದಷ್ಟೇ ಅಲ್ಲದೆ ಪರೀಕ್ಷೆಯಿಂದಲೂ ಹೊರಗಿಡಬೇಕು.
ಈಗ ಆಡಳಿತದಲ್ಲಿರುವ ಪಕ್ಷ ತನಗೆ ಬೇಕಾದವರನ್ನು ಆಯೋಗಕ್ಕೆ ನೇಮಿಸಿ ತಮಗೆ ಬೇಕಾದವರು ಆಯ್ಕೆ ಮಾಡಬಹುದಾದ ಸಾಧ್ಯತೆಯತ್ತ ವಿರೋಧ ಪಕ್ಷಗಳ ರಾಜಕಾರಣಿಗಳು ಬೆಟ್ಟು ಮಾಡುತ್ತಿದ್ದಾರೆ. ಈ ಸಂಶಯದ ಅರ್ಥವೇನು? ತಾವು ಅಧಿಕಾರದಲ್ಲಿದ್ದಾಗ ಇಂಥದ್ದನ್ನೇ ಮಾಡಿದ್ದೆವು. ಈಗಿರುವವರು ಮಾಡುತ್ತಾರೆ ಎಂದು ಜನರು ಅರ್ಥಮಾಡಿಕೊಳ್ಳಬೇಕೇ? ಅದು ಹಾಗಲ್ಲ ಎಂದಾದರೆ ವಿರೋಧ ಪಕ್ಷಗಳು ತಮ್ಮ ಸಾಂವಿಧಾನಿಕ ಹೊಣೆಯಂತೆ ಕರ್ನಾಟಕ ಲೋಕಸೇವಾ ಆಯೋಗವನ್ನು ಸುಧಾರಿಸು ವುದಕ್ಕೆ ಅಗತ್ಯವಿರುವ ಶಾಸನಗಳನ್ನು ರೂಪಿಸುವ ಕ್ರಿಯೆಯಲ್ಲಿ ತಮ್ಮ ಸಾಮರ್ಥ್ಯ ತೋರಿಸಬೇಕು.
ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಆಯಾ ಕ್ಷಣವೇ ಜನರ ಮುಂದಿಡುವ ಕೆಲಸವನ್ನು ಮಾಡುವುದಕ್ಕೆ ವಿರೋಧ ಪಕ್ಷಗಳಿಗೆ ಯಾವ ತೊಂದರೆಯೂ ಇಲ್ಲ. ಮುಖ್ಯಮಂತ್ರಿಗಳು ಎಷ್ಟು ಶಿಫಾರಸು ಪತ್ರಗಳನ್ನು ಬರೆದಿದ್ದಾರೆಂಬುದನ್ನೂ ತಿಳಿದುಕೊಳ್ಳಲು ವಿರೋಧ ಪಕ್ಷಗಳಿಗೆ ಸಾಧ್ಯವಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದೇ ಎಚ್ಚರವನ್ನಿಟ್ಟುಕೊಂಡು ಮುಂದೆ ನಡೆಯುವ ನೇಮಕಾತಿ ಪಾರದರ್ಶಕವಾಗಿರುವಂತೆ ನೋಡಿಕೊಂಡರೆ ಎಲ್ಲಾ ಪ್ರತಿಭಾವಂತರಿಗೂ ಅನುಕೂಲ. ಅಷ್ಟೇ ಅಲ್ಲ, ಅಕ್ರಮಗಳ ಪರಿಣಾಮವಾಗಿ ಆಯ್ಕೆ ಪಟ್ಟಿಯಿಂದಲೇ ಹೊರಗುಳಿದವರ ಪ್ರತಿಭೆಗೂ ಬೆಲೆ ದೊರೆಯುತ್ತದೆ.
ಸರ್ಕಾರ ತಿರಸ್ಕರಿಸಿರುವ ಆಯ್ಕೆ ಪಟ್ಟಿಯಲ್ಲಿಇರುವ ಪ್ರಾಮಾಣಿಕರೂ ಪ್ರತಿಭಾವಂತರಂತೂ ಖಂಡಿತವಾಗಿಯೂ ತಮ್ಮದು ಕೇವಲ ‘ಪವಾಡ ಸದೃಶ’ ಆಯ್ಕೆಯಲ್ಲ ಎಂಬುದನ್ನು ಸಾಬೀತು ಪಡಿಸಲು ಆಸಕ್ತರಾಗಿದ್ದಾರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ‘ಸಾಮಾಜಿಕ ನ್ಯಾಯ’ದ ಹೆಸರಿನಲ್ಲಿ ದುರ್ಬಲ ವರ್ಗಗಳ ಪ್ರತಿಭಾವಂತರನ್ನು ಅವಮಾನಿಸುವುದನ್ನು ನಿಲ್ಲಿಸಿ ಅವರ ಪ್ರತಿಭೆಯನ್ನು ಸಾಬೀತು ಪಡಿಸಲು ಅವಕಾಶ ಕಲ್ಪಿಸಬೇಕು. ಇದಕ್ಕೆ ಲೋಕಸೇವಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದಕ್ಕೆ ಅಗತ್ಯವಿರುವ ವಾತಾವರಣ ಸೃಷ್ಟಿಯಾಗಬೇಕು. ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ಅಧಿಕಾರಾರೂಢ ರಾಜಕಾರಣಿಗಳೂ ತಮ್ಮ ಶಿಫಾರಸುಗಳ ಕಂತೆಗಳನ್ನು ಕೆಪಿಎಸ್‌ಸಿ ಸದಸ್ಯರಿಗೆ ಕಳುಹಿಸಿ ಕೊಡುವುದು ತಪ್ಪು ಎಂಬುದನ್ನು ಅರಿಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.