ಗೋಡೆಯಲ್ಲಿ ಯಾರು ನೋಡಲಿ ಬಿಡಲಿ ತನ್ನಷ್ಟಕ್ಕೆ ತಾನು ಜೋತು ಬಿದ್ದಿರುತ್ತದೆ ಕ್ಯಾಲೆಂಡರ್. ಸರ್ಕಾರಿ ಕೆಲಸದ ದಿನಗಳ ದಿನಾಂಕ ಮತ್ತು ವಾರಗಳಿಗೆ ಕಪ್ಪು ಬಣ್ಣವನ್ನೂ, ಸರ್ಕಾರಿ ರಜೆಯ ದಿನಗಳ ದಿನಾಂಕ ಮತ್ತು ವಾರಗಳಿಗೆ ಕೆಂಪು ಬಣ್ಣವನ್ನೂ ಬಳಿಯಲಾಗಿರುತ್ತದೆ. ಈಗ 4ನೇ ಶನಿವಾರ ಬ್ಯಾಂಕ್ ರಜೆ ಆಗಿರುವುದರಿಂದ ಅದಕ್ಕೂ ಕೆಂಪು ಬಣ್ಣವನ್ನು ಬಳಿಯಲಾಗಿದೆ.
ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕ್ಯಾಲೆಂಡರ್‌ನ 12 ದಿನಾಂಕಗಳಿಗೆ ಕೆಂಪು ಬಣ್ಣವನ್ನು ಬಳಿಯಲಾಗಿದೆ. ಗಾಂಧಿ ಜಯಂತಿಯು ಭಾನುವಾರ ಬಂದಿತ್ತು. ಅದು ಬೇರೆ ದಿವಸ ಬಂದಿದ್ದರೆ ಅದೂ ಸೇರಿ ಒಟ್ಟು 13 ದಿನಗಳಿಗೆ ಕೆಂಪು ಬಣ್ಣ ಬಳಿಯಬೇಕಾಗಿತ್ತು.
ಸರ್ಕಾರಿ ನೌಕರರು ಕೆಲಸ ಮಾಡುವುದಿಲ್ಲ, ಅವರು ಸಾರ್ವಜನಿಕ ಹಣದ ಸಂಬಳ ಪಡೆದು ರಜೆಯನ್ನು ಅನುಭವಿಸುತ್ತಾರೆ, ಅವರಿಗೆ ಯಾಕೆ ಅಷ್ಟೊಂದು ರಜೆಗಳು ಎಂಬ ಅಭಿಪ್ರಾಯ ಬಹಳ ಗಟ್ಟಿಯಾಗಿ ಬೇರೂರಿದೆ. ಆದರೆ ಇಲ್ಲಿ ಒಂದು ಅಂಶವನ್ನು ಇನ್ನಷ್ಟು ಖಚಿತ ಮಾಡಿಕೊಳ್ಳುವುದು ಒಳ್ಳೆಯದು.
ಕೆಲವು ಸರ್ಕಾರಿ ನೌಕರರು ಕೆಲಸದ ದಿನಗಳಲ್ಲೂ ಕೆಲಸ ಮಾಡುವುದಿಲ್ಲ. ಅವರ ಪಾಲಿಗೆ ಕ್ಯಾಲೆಂಡರ್‌ನಲ್ಲಿ ರಜೆ ಇರಲಿ ಬಿಡಲಿ, ಕೆಲಸ ಮಾಡುವುದು ಬಿಡುವುದು ಅಂತಿಮವಾಗಿ ಅವರ ಆಯ್ಕೆ ಆಗಿರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ನಿಜ ಸ್ಥಿತಿ ಹೀಗಿದ್ದೂ ಕ್ಯಾಲೆಂಡರ್‌ಗಳ ರಜೆಯ ದಿನಗಳನ್ನು ನೋಡಿ ಹುಬ್ಬೇರಿಸಿ, ‘ಅಯ್ಯೋ ಸರ್ಕಾರಿ ನೌಕರರಿಗೆ ಎಷ್ಟೊಂದು ರಜೆಗಳು’ ಎನ್ನಬೇಕಾಗಿಲ್ಲ.
ಈ ರೀತಿ ಸಾಲುಸಾಲು ರಜೆಗಳು ಬಂದರೆ ಸರ್ಕಾರಿ ಕಚೇರಿಗಳು, ಕೆಲವು ಬ್ಯಾಂಕುಗಳು ಕೆಲಸ ಮಾಡುವುದಿಲ್ಲ ಸರಿ. ಆದರೆ ಬೇರೆ ಕೆಲವು ಸ್ಥಳಗಳಲ್ಲಿ ಬಿಡುವಿಲ್ಲದಷ್ಟು ಕೆಲಸ.ಎರಡು ವರ್ಷಗಳ ಹಿಂದೆ, ಇದೇ ದಸರೆಯಲ್ಲಿ ಸಾಲುಸಾಲು ರಜೆಗಳು ಬಂದಿದ್ದವು. ಆಗ ವಿಶೇಷವಾಗಿ ಮಲೆನಾಡು ಭಾಗದ ಹೋಮ್‌ಸ್ಟೇಗಳು ಭರ್ತಿಯಾಗಿದ್ದವು.
ಚಿಕ್ಕಮಗಳೂರಿನಿಂದ ಬಾಬಾಬುಡನ್‌ಗಿರಿ ಮತ್ತು ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಗಳು ಸಂಪೂರ್ಣ ಜಾಮ್ ಆಗಿದ್ದವು. ಚಿಕ್ಕಮಗಳೂರಿನಲ್ಲಿ ಲಾಡ್ಜ್‌ಗಳು ಭರ್ತಿಯಾಗಿದ್ದವು.
ಪೆಟ್ರೋಲ್ ಬಂಕುಗಳಲ್ಲಿ ಪೆಟ್ರೋಲ್ ಖಾಲಿಯಾಗಿತ್ತು. ಎಟಿಎಂನಲ್ಲಿ ದುಡ್ಡು ಖಾಲಿಯಾಗಿತ್ತು. ಪ್ರವಾಸಿಗರ ಸಾಮಾನ್ಯ ಅಗತ್ಯಗಳನ್ನೂ ಪೂರೈಸಲಾರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಪರಿಸ್ಥಿತಿ ಮತ್ತೆ ಈ ವರ್ಷವೂ ಮರುಕಳಿಸಬಹುದು.
ಚಿಕ್ಕಮಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ 700ಕ್ಕೂ ಹೆಚ್ಚು ಹೋಮ್‌ಸ್ಟೇಗಳಿವೆ. ಅವು ಅಧಿಕೃತವೊ, ಅನಧಿಕೃತವೊ ಎನ್ನುವ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಅಲ್ಲಿಗೆ ಬರುವವರಿಗಂತೂ ಅದರ ಅಗತ್ಯವಿಲ್ಲ. ಇವನ್ನು ನಡೆಸುವವರಿಗೆ ಸಾಕಷ್ಟು ಅಡ್ಡದಾರಿಗಳಿವೆ. ಒಂದು ಕಾಲದಲ್ಲಿ ಮಡಿಕೇರಿಯನ್ನು ‘ಕರ್ನಾಟಕದ ಕಾಶ್ಮೀರ’ ಎಂದು ಕರೆಯುತ್ತಿದ್ದರು. ಈಗ ಚಿಕ್ಕಮಗಳೂರಿಗೆ ಹಾಗೆ ಕರೆಯದೇ ಅದರ ಕಿರೀಟ ಪ್ರಾಪ್ತಿಯಾಗಿದೆ.
ಕಾಂಕ್ರೀಟ್ ಕಾಡಿನಲ್ಲಿ, ಟ್ರಾಫಿಕ್ ಜಾಮಿನಲ್ಲಿ ಸದಾ ಬಸವಳಿದು ಹೋಗುವ ಕೆಲವರು ಹಸಿರು ತಾಣಗಳಿಗೆ ಬಂದು ಉಂಡು, ತಿಂದು, ಆನಂದಿಸಿ, ಸುಖಿಸಿ ಹೋಗುತ್ತಾರೆ.ಮತ್ತೊಂದು ಇಂತಹುದೇ ಸಂದರ್ಭಕ್ಕೆ ಹಾತೊರೆದು ಇಲ್ಲಿಂದ ಮುದಗೊಂಡ ಮನಸ್ಸನ್ನು ಹೊತ್ತು ಮರಳುತ್ತಾರೆ. ಅವರ ಮನಸ್ಥಿತಿ ಹೇಗಿದ್ದೀತು ಎಂದು ಆಲೋಚಿಸಬಹುದು. ಈ ಹಸಿರುನಾಡು, ಈ ಹಸಿರುತಾಣ ದೂರದಿಂದ ಬರುವವರಿಗೆ ಆನಂದ ಮತ್ತು ಸುಖವನ್ನು ಕೊಡುವುದಾದರೆ ಇಲ್ಲೇ ಇರುವ ಜನರಿಗೆ ಯಾಕೆ ಆ ಆನಂದ, ಆ ಸುಖ ಇಲ್ಲ ಎನಿಸುತ್ತದೆ?
ಕಳೆದ ಹತ್ತಾರು ವರ್ಷಗಳಿಂದ ಮಳೆಯ ಪ್ರಮಾಣ ಬಹಳ ಕಡಿಮೆಯಾಗಿದೆ. ಸಣ್ಣಪುಟ್ಟ ಹಳ್ಳಕೊಳ್ಳಗಳೂ ಹರಿಯುತ್ತಿಲ್ಲ. ಗದ್ದೆಗಳು ತೋಟಗಳಾಗಿವೆ. ಭೂಮಿಯ ಮೇಲ್ಮೈಯಲ್ಲಿ ನೀರು ಸಂಗ್ರಹ ಆಗುತ್ತಿಲ್ಲ. ಕಾಡುಗಳು ತೋಟಗಳಾಗುತ್ತಿವೆ. ಅವುಗಳಿಗೆ ಮೋಡಗಳನ್ನು ಸೆಳೆಯಲು ಆಗುತ್ತಿಲ್ಲ.
ಭಾರೀ ಭೂಮಾಲೀಕರ ಕಾಫಿ ತೋಟಗಳು ಹೆಚ್ಚು ಹೆಚ್ಚು ವಿಸ್ತರಣೆಯಾದಂತೆ, ಹೆಚ್ಚು ಹೆಚ್ಚು ಕೆಲಸಗಾರರು ಬೇಕಾಗಿದ್ದಾರೆ. ಅದಕ್ಕೆ ಮಾಲೀಕರು ಸ್ಥಳೀಯ ಕಾರ್ಮಿಕರನ್ನು ನೆಚ್ಚಿ ಕೂರುತ್ತಿಲ್ಲ. ಮಧ್ಯವರ್ತಿ ಮೇಸ್ತ್ರಿಗಳ ಮೂಲಕ ಅಸ್ಸಾಮಿನಿಂದ ವಲಸೆ ಕಾರ್ಮಿಕರು ಬರುತ್ತಿದ್ದಾರೆ.
ಕಾಫಿ ತೋಟದ ಕೆಲಸಗಳಲ್ಲೇ ಅತ್ಯಂತ ಸೂಕ್ಷ್ಮ ಕೆಲಸವಾದ ‘ಕಸಿ’ಯನ್ನು ಬಿಟ್ಟರೆ ಉಳಿದೆಲ್ಲ ಕೆಲಸಗಳನ್ನು ಅವರು ಮಾಡುತ್ತಾರೆ. ಇದರಿಂದ ಅವರಿಗೂ ಮತ್ತು ಸ್ಥಳೀಯ ಕಾರ್ಮಿಕರಿಗೂ ಸ್ಪರ್ಧೆ ಏರ್ಪಟ್ಟಿದೆ. ಸ್ಥಳೀಯ ಕಾರ್ಮಿಕರು ಕೆಲಸಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಕಾರ್ಮಿಕರಿಗಿಂತ ಕಡಿಮೆ ಕೂಲಿಗೆ ಅವರಿಂದ ದುಡಿಸಿಕೊಳ್ಳಲಾಗುತ್ತಿದೆ. ಹಾಗೆ ದುಡಿಸಿಕೊಂಡರೂ ಅವರಿಗೆ ಯಾವುದೇ ಭದ್ರತೆ ಇತ್ಯಾದಿ ಇಲ್ಲ.
ಅವರು ವಾಸ ಮಾಡುವ ‘ಲೈನು’ಗಳನ್ನು ಒಮ್ಮೆ ನೋಡಬೇಕು. ಅವರು ಕೈಯಲ್ಲಿ ಬಳಸುವ ಕ್ರಿಮಿನಾಶಕಗಳನ್ನು ನೋಡಬೇಕು. ಹೋಮ್‌ಸ್ಟೇಗಳ ಭವ್ಯ ಬಂಗಲೆಗಳಲ್ಲಿ ಹಚ್ಚಹಸಿರಾದ ಮಲೆನಾಡು, ತಂಪಾದ ಗಾಳಿ, ಚುಮುಚುಮು ಚಳಿ, ತುಂತುರು ಮಳೆ ಕಣ್ಮನಗಳಿಗೆ ತಂಪೀಯುತ್ತವೆ, ಹೃದಯಗಳಿಗೆ ಮುದ ನೀಡುತ್ತವೆ.
ಒಂದು ಗುಟುಕು ಕುಡಿದರೆ ಮತ್ತೊಂದು ಗುಟುಕು ಕುಡಿಯುವಂತೆ, ಒಂದು ತುತ್ತು ತಿಂದರೆ ಮತ್ತೊಂದು ತುತ್ತು ತಿನ್ನುವಂತೆ ಅದು ದೇಹ ಮತ್ತು ಮನಸ್ಸಿನ ಒಳಗಿಂದಲೇ ಪ್ರಚೋದಿಸುತ್ತದೆ; ಒತ್ತಾಯಿಸುತ್ತದೆ. ಅಬ್ಬಾ! ಎಂಥ ಆನಂದ! ಎಂಥ ಸುಖ! ನಮ್ಮ ಸುತ್ತಮುತ್ತಲೇ ಇರುವ ಬಡಪಾಯಿಗಳ ಬದುಕನ್ನು ನೋಡಲಾರದ ಆನಂದ, ಗಮನಿಸಲಾರದ ಸುಖ!
ಗುಡಿಸಲುಗಳಲ್ಲೂ ಸುಖ, ಆನಂದಗಳಿಲ್ಲವೆ? ಅವೆಲ್ಲವೂ ನರಕದ ಕೂಪಗಳೇನಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಮಲೆನಾಡಿನ ಹಸಿರಿನ ಒಳಗೆ ವಿವರಿಸಲಾರದ ಕೆಸರಿನ ಬದುಕು ಇದೆ. ಅದು ಬದುಕಲು ತನಗೆ ತಾನೇ ಒದ್ದಾಡುತ್ತಿದೆ. ಕಾಡಿಗೆ ಸೌದೆಗೆ ಹೋಗುವಂತಿಲ್ಲ. ಯಾಕೆಂದರೆ ಕಾಡೆಲ್ಲವೂ ಈಗ ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನವನ, ಹುಲಿ ಯೋಜನೆ ಇತ್ಯಾದಿ. ನೂರಾರು ಊರುಗಳಿಗೆ ರಸ್ತೆಯಿಲ್ಲ, ವಿದ್ಯುತ್ ಇಲ್ಲ, ಆಸ್ಪತ್ರೆ ಇಲ್ಲ, ಬಸ್ ಇಲ್ಲ... ಹೀಗೆ ಇಲ್ಲಗಳ ಪಟ್ಟಿ ಬೆಳೆಯುತ್ತದೆ. ಹಾಗಿದ್ದರೆ ಸರ್ಕಾರದ ಕೋಟಿ ಕೋಟಿ ಅನುದಾನ ಎಲ್ಲಿಗೆ ಹೋಯಿತು? ಯಾರಿಗೆ ಹೋಯಿತು?
ಸರ್ಕಾರಿ ರಜೆ ದಿನಗಳಲ್ಲಿ ಚಿಕ್ಕಮಗಳೂರಿಗೆ ಕೈಬೀಸಿ ಕರೆಯುವ ಹೋಮ್‌ಸ್ಟೇಗಳು ಕಾಲ್ಪನಿಕ ಚಿಕ್ಕಮಗಳೂರನ್ನು ನಿರ್ಮಾಣ ಮಾಡಿವೆ. ಈ ಕಾಲ್ಪನಿಕ ಚಿಕ್ಕಮಗಳೂರು ಕಾಫಿ ತೋಟಗಳಲ್ಲಿ ಮಳೆಯಲ್ಲಿ ನೆನೆಯುವ, ಚಳಿಯಲ್ಲಿ ನಡುಗುವ, ಜಿಗಣೆಗಳು, ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವ, ಬೆವರು ಬಸಿಯುವ, ತುತ್ತು ಅನ್ನಕ್ಕೆ ಏದುಸಿರು ಬಿಡುವ ಜನರ ವಾಸ್ತವದ ಬದುಕನ್ನು ಮರೆಸಿಬಿಡುತ್ತಿದೆ.
ಸರ್ಕಾರಿ ರಜೆ ದಿನಗಳು ಕೇವಲ ರಜೆ ದಿನಗಳಲ್ಲ. ಅವು ತಿಂದುಂಡು ಸುಖ ಪಡುವ ಜನರು ಕಾಲ್ಪನಿಕ ಜಗತ್ತುಗಳನ್ನು ಸೃಷ್ಟಿ ಮಾಡುವುದಕ್ಕೂ ಅವಕಾಶ ಮಾಡಿವೆ. ಹಾಗಾಗಿ ತನ್ನಷ್ಟಕ್ಕೆ ತಾನೇ ಗೋಡೆಗೆ ಜೋತುಬಿದ್ದಿರುವ ಕ್ಯಾಲೆಂಡರ್‌ನ ರಜೆಗಳನ್ನು ಕೇವಲ ರಜೆಗಳಾಗಿ ನೋಡಬೇಕಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.