ಇತ್ತೀಚೆಗೆ ಪ್ರಕಟವಾದ ಆಘಾತಕಾರಿ ಸುದ್ದಿಯೊಂದರ ಪ್ರಕಾರ ಹಿಂದೆಂದೂ ಕಂಡಿರದ ಮತ್ತು ಭಾವಿಸಿದ್ದಕ್ಕಿಂತ ವೇಗವಾಗಿ ವನ್ಯಜೀವಿ ಸಂತತಿಗಳು ಕ್ಷಯಿಸುತ್ತಿವೆ! ‘ವರ್ಲ್ಡ್ ವೈಲ್ಡ್ ಲೈಫ್ ಫಂಡ್’ (ಡಬ್ಲ್ಯು.ಡಬ್ಲ್ಯು.ಎಫ್.) ಅಧ್ಯಯನ ವರದಿಯೊಂದರ ಪ್ರಕಾರ 1970 – 2010ರ ಅವಧಿಯಲ್ಲಿ ವನ್ಯ ಜೀವಿಗಳ ಸಂಖ್ಯೆಯಲ್ಲಿ ಶೇಕಡಾ 52 ರಷ್ಟು ಇಳಿಕೆಯಾಗಿದೆ.
ಇದೇನೂ ಅನಿವಾರ್ಯದ ಇಳಿಕೆಯಲ್ಲ. ಮತಿವಂತ ಮಾನವನ ಬದಲಾದ ಜೀವನ ಶೈಲಿಯಿಂದಾಗಿ ಪ್ರಕೃತಿಯ ಮೇಲೆ ಅವನು ಹಾಕುತ್ತಿರುವ ಒತ್ತಡ ಅದು ತಡೆಯಬಹುದಾದ ಒತ್ತಡಕ್ಕಿಂತ ಶೇಕಡಾ 50 ರಷ್ಟು ಅಧಿಕ. ಸಿಹಿ ನೀರು ಜೀವಿ ಪ್ರಭೇದಗಳು ಶೇಕಡಾ 76 ರಷ್ಟು ಕಡಿಮೆಯಾಗಿದ್ದರೆ, ಸಾಗರ ಮತ್ತು ಭೂವಾಸಿ ಪ್ರಭೇದಗಳು ಶೇಕಡಾ 39 ರಷ್ಟು ಕ್ಷೀಣಿಸಿವೆ. ಸುಮಾರು 3000 ವನ್ಯಜೀವಿ ಪ್ರಭೇದಗಳು ಅಪಾಯಕಾರೀ ಸಂಖ್ಯೆಗೆ ತಲುಪಿವೆ.
ಇದು ಕೇವಲ ಅಂಕಿ ಸಂಖ್ಯೆಗಳ ಅಂತೆ ಕಂತೆಯ ಸುದ್ದಿಯಲ್ಲ. ಏಕೆಂದರೆ ಈ ವನ್ಯ ಜೀವಿಗಳ ಹಾಗೂ ಅವುಗಳ ಆವಾಸಗಳ ಸಂರಕ್ಷಣೆಯಾಗಬೇಕಿರುವುದು ಅವುಗಳಿಗಾಗಿ ಅಲ್ಪ ಮನುಕುಲದ ಉಳಿವಿಗಾಗಿ! ಯಾವುದೇ ರೀತಿಯ ಸಾಕಾಣಿಕೆಗೆ ಒಳಪಡದ, ಪಳಗಿಸದ ಜೀವಿಗಳು ವನ್ಯಜೀವಿಗಳು. ಅದು ಸಸ್ಯಪ್ರಭೇದವೇ ಆಗಿರಬಹುದು. ಇಲ್ಲವೇ ಪ್ರಾಣಿಪ್ರಭೇದವೇ ಆಗಿರಬಹುದು. ನಮ್ಮ ಕೆರೆಗಳಲ್ಲಿ, ಹಿತ್ತಲ ಮರಗಳಲ್ಲಿ ಇಲ್ಲವೇ ಮನೆಯಲ್ಲೂ ಹಾರುತ್ತಿರುವ ಗುಬ್ಬಿಯಂತೆ ಇರಬಹುದು (ಆದರೆ ಈಗ ಮನೆಗಳಲ್ಲಿ ಗುಬ್ಬಿ ಇಲ್ಲ). ಅವುಗಳ ಸಂಖ್ಯೆಯ ಕ್ಷೀಣಿಸುವಿಕೆ ಎಂದರೆ ಆ ಪ್ರಭೇದಗಳು ಅಳಿವಿನಂಚಿನತ್ತ ಸರಿಯುತ್ತಿವೆ ಎನ್ನುವುದರ ಅಪಾಯದ ಸೂಚನೆ. ಹಾರಲಾಗದ, ದಾಳಿ ಮಾಡಲಾಗದ ಡೋಡೋ ಹಕ್ಕಿ ಮನುಷ್ಯನಿಗೆ ಆಹಾರವಾದದ್ದು, ಲಕ್ಷಗಟ್ಟಲೆಯಾಗಿ ಆಕಾಶದ ತುಂಬ ಹಾರುತ್ತಿದ್ದ ಪ್ಯಾಸೆಂಜರ್ ಪಿಜನ್, ಭಾರತದಿಂದ ನಿರ್ನಾಮವಾದ ವೇಗದ ಓಟಗಾರ ಚೀತಾ ಎಲ್ಲವೂ ನಾಶವಾದದ್ದು ಮಾನವನ ಅನಿವಾರ್ಯವಲ್ಲದ ಅವಶ್ಯಕತೆಗಳಿಗಾಗಿ.
ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರಕಟವಾಗುವ ಡಬ್ಲ್ಯು.ಡಬ್ಲ್ಯು.ಎಫ್.ನ ಅಧ್ಯಯನದ ವರದಿಯ ಪ್ರಕಾರ, ಈ ರೀತಿಯ ವನ್ಯಜೀವಿ ಸಂತತಿಗಳ ಆಘಾತಕಾರಿಯಾಗಿ ಇಳಿಯುವುದಕ್ಕೆ ಕಾರಣ, ವನ್ಯಜೀವಿಗಳ ನೆಲೆಗಳು ನಷ್ಟವಾಗುತ್ತಿರುವುದು, ಬೇಟೆ ಮತ್ತು ಮೀನುಗಾರಿಕೆಯ ಮಿತಿಮೀರುವಿಕೆ ಹಾಗೂ ಬದಲಾಗುತ್ತಿರುವ ಹವಾಮಾನ. ವನ್ಯಜೀವಿಗಳು ಬದುಕಿ ಸಂತಾನಾಭಿವೃದ್ಧಿಯನ್ನು ಮಾಡಬೇಕೆಂದರೆ ಅವುಗಳಿಗೆ ಸೂಕ್ತವಾದ ಆವಾಸದ ಅವಶ್ಯಕತೆ ಇದೆ. ಉದಾ: ಘೇಂಡಾಮೃಗಕ್ಕೆ ಹುಲ್ಲುಗಾವಲು, ಮೊಸಳೆಗೆ ಜೌಗು ನೆಲದ ನೀರಿನ ಮಡು ಕೆಲವು ಪ್ರಾಣಿಗಳಂತೂ ಕೆಲವು ರೀತಿಯ ಆವಾಸಗಳಲ್ಲಿ ಮಾತ್ರ ಬದುಕಬಲ್ಲವು.
ಹೀಗಾಗಿ ವನ್ಯಜೀವಿಗಳನ್ನು ನಾವು ಮೃಗಾಲಯದಲ್ಲಿಟ್ಟು ಇಲ್ಲವೇ ಫಾರ್ಮ್‌ನಲ್ಲಿ ವೃದ್ಧಿಸಿ ಬೆಳೆಸುತ್ತೇವೆ ಎಂದರೆ ಅದು ಅವುಗಳ ಸೂಕ್ತ ಸಂರಕ್ಷಣೆ ಆಗಲಾರದು. ಅವುಗಳ ವಾಸಸ್ಥಾನಗಳನ್ನು ಇಡಿಯಾಗಿ ಸಂರಕ್ಷಿಸಿದರೆ ಮಾತ್ರ ಅವುಗಳ ಸಂರಕ್ಷಣೆ ಸಾಧ್ಯ.
ಈಗ ಏಟು ಬಿದ್ದಿರುವುದು ವನ್ಯ ಜೀವಿಗಳ ಆವಾಸಗಳಿಗೆ, ಹೆಚ್ಚುತ್ತಿರುವ ಜನಸಂಖ್ಯೆಯ ನಿಸರ್ಗ ವಿರೋಧಿ ಜೀವನ ಶೈಲಿಯ ಬೇಡಿಕೆಗಳನ್ನು ಈಡೇರಿಸಲು ಪ್ರಕೃತಿ ಹೆಣಗಾಡುತ್ತಿದೆ ಎಂದರೆ ತಪ್ಪಾಗಲಾರದು.ಇದನ್ನು ಅಳೆಯಲು ಮಾನವನ ‘ಪರಿಸರದ ಹೆಜ್ಜೆ ಗುರುತ’ ನ್ನು (ಎಕಲಾಜಿಕಲ್ ಪುಟ್ ಪ್ರಿಂಟ್) ಲೆಕ್ಕ ಹಾಕಿದಾಗ ಕುವೈತ್‌ನ ಜನರ ‘ಪರಿಸರದ ಹೆಜ್ಜೆ ಗುರುತು’ ಎಂದರೆ ಅವರು ಬಳಸುವ ಸಂಪನ್ಮೂಲಗಳ ಪ್ರಮಾಣ ಅತೀ ಹೆಚ್ಚು ಎಂದು ತಿಳಿದು ಬಂದಿದೆ. ಅವರ ನಂತರದ ಸರದಿಯಲ್ಲಿ ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಅಮೆರಿಕಾ// ದೇಶಗಳು ಬರುತ್ತಿವೆ. ಕತಾರ್‌ನ ಪ್ರಜೆ ಬದುಕುತ್ತಿರುವ ಜೀವನ ಶೈಲಿಯನ್ನು ಪ್ರಪಂಚದ ಎಲ್ಲರೂ ಅಳವಡಿಸಿಕೊಂಡರೆ ನಾವಿರುವ ಭೂಮಿಯಂತಹ 4.8 ಗ್ರಹಗಳು ನಮಗೆ ಬೇಕಾಗುತ್ತವೆ! ಅಮೆರಿಕಾದ ಪ್ರಜೆಯಂತಹ ಜೀವನ ಶೈಲಿ ಯನ್ನು ಭೂಮಿಯ ಮೇಲಿರುವ ಎಲ್ಲರೂ ಅಳವಡಿಸಿಕೊಂಡಲ್ಲಿ 3.9 ಗ್ರಹ ಗಳು ಬೇಕಾಗುತ್ತವೆ. ‘ನೆನಪಿರಲಿ ನಮಗಿರುವುದು ಒಂದೇ ಭೂಮಿ’. ಆದ್ದರಿಂದ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.
ದೂರದ ದೇಶಗಳನ್ನು ಬಿಟ್ಟು ಭಾರತದತ್ತ ಗಮನ ಹರಿಸಿದರೆ, ಇಲ್ಲಿಯ ಪರಿಸ್ಥಿತಿಯೂ ಅಪಾಯಕಾರಿಯಾಗಿದೆ. ಬೇಟೆಗೆ, ಮೌಢ್ಯಕ್ಕೆ, ಕೃಷಿ ವಿಸ್ತರಣೆಗೆ, ‘ಅಭಿವೃದ್ಧಿ ಪರ’ ಚಟುವಟಿಕೆಗಳಿಗೆ ವನ್ಯಜೀವಿಗಳು ಬಲಿಯಾಗುತ್ತಿವೆ.
ಜಗತ್ತಿನ ಶೇಕಡಾ 2.4 ರಷ್ಟು ಭೂ ಪ್ರದೇಶವನ್ನುಳ್ಳ ಭಾರತದಲ್ಲಿ, ಪ್ರಪಂಚದ ಶೇಕಡಾ 8 ರಷ್ಟು ಜೈವಿಕ ವೈವಿಧ್ಯವಿದೆ. ಪ್ರಪಂಚದ ಒಟ್ಟು ಹುಲಿಗಳಲ್ಲಿ ಅರ್ಧದಷ್ಟು ಭಾರತದಲ್ಲಿವೆ. ಏಷ್ಯಾಟಿಕ್ ಸಿಂಹಗಳ ಏಕೈಕ ತಾಣ ಭಾರತ. ಚಿರತೆ ಹಾಗೂ ಹಿಮಚಿರತೆಗಳು ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿವೆ.
ನಮ್ಮ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ತೀರಾ ಇತ್ತೀಚಿನವರೆಗೂ ಹೊಸ ಪ್ರಭೇದದ ಉಭಯವಾಸಿಗಳು, ಮರ ಪ್ರಭೇದಗಳು ಪತ್ತೆಯಾಗುತ್ತಿವೆ. ಈ ಶ್ರೀಮಂತ ನಿಧಿಯನ್ನು ನಾವು ರಕ್ಷಿಸಿಕೊಳ್ಳದಿದ್ದರೆ, ಭೂಮಿಯ ಬೇರೆಡೆಯಲ್ಲಿ ಕಾಣಸಿಗದ ಕೆಲವು ಪ್ರಭೇದಗಳು ಈ ಭೂಗ್ರಹದಿಂದಲೇ ಮಾಯ ವಾಗಬಹುದು. ಆಗುಂಬೆಯ ಕಾಳಿಂಗ ಸರ್ಪಗಳು, ಕಾವೇರಿಯ ಮಶೀರ್ ಮೀನುಗಳು, ದಾಂಡೇಲಿಯ ಓಂಗಲೆ ಅಥವಾ ಮಂಗಟ್ರೆಗಳು, ಶಿರಾಲಿಯ ಕಡಲಾಮೆಗಳು ಕೇವಲ ಅಲ್ಲಿರುವ ಜೀವಿಗಳು ಮಾತ್ರವಲ್ಲ ಅವೆಲ್ಲ ಅಲ್ಲಿರುವ ನೆಲೆ ಗಳ ಪ್ರತಿನಿಧಿಗಳು. ಅಷ್ಟಕ್ಕೂ ಇಷ್ಟು ವರ್ಷಗಳು ಅವು ಅಲ್ಲಿಯೇ ಇವೆಯಲ್ಲ. ಇನ್ನು ಮುಂದೆಯೂ ಅಲ್ಲಿರುತ್ತವೆ ಅದನ್ನೇಕೆ ರಕ್ಷಿಸಬೇಕು? ಎನ್ನುವವರೂ ಉಂಟು. ಆದರೆ ಮನುಷ್ಯನ ಹಸ್ತಕ್ಷೇಪದಿಂದ ಅವುಗಳ ವಾಸಸ್ಥಾನಗಳು ಹಾಳಾಗುತ್ತಿರುವುದರಿಂದ, ಅವುಗಳ ಸಂರಕ್ಷಣೆಗೂ ಮನುಷ್ಯನ ಸಹಕಾರದ ಅವಶ್ಯಕತೆ ಇದೆ.
ವಿಜ್ಞಾನಿಗಳ ಪ್ರಕಾರ ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ವನ್ಯಜೀವಿ ಪ್ರಭೇದಗಳ ವಿನಾಶ ಹಾಗೂ ಕ್ಷೀಣಿಸುವಿಕೆ ನಾವೆಂದು ಕೊಂಡದ್ದಕ್ಕಿಂತ ವೇಗವಾಗಿ ನಡೆಯಲಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅಕ್ರಮ ಗಣಿಗಾರಿಕೆ, ಮರಳು ಸಾಗಣೆ, ಕೃಷಿ ವಿಸ್ತರಣೆಗಾಗಿ ಅರಣ್ಯಗಳ ಅತಿಕ್ರಮಣ ಪರಿಸರ ಪ್ರವಾಸದ ಹೆಸರಲ್ಲಿ ನಡೆಯುವ ಕಾಡಿನ ನಡುವಿನ ರೆಸಾರ್ಟ್‌ಗಳ ನಿರ್ಮಾಣ, ಕಾಡಿನಲ್ಲಿ ರಸ್ತೆಗಳ ನಿರ್ಮಾಣ, ಮುಂತಾದವುಗಳಿಂದ ವನ್ಯ ಜೀವಿಗಳ ಆವಾಸಗಳು ಕಿರಿದಾಗುತ್ತಿವೆ. ವಲಸೆ ಹೋಗುವ ವನ್ಯಜೀವಿಗಳ ಮಾರ್ಗಗಳು ಛಿದ್ರೀಕರಣಗೊಳ್ಳುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಬೃಹತ್ ಯೋಜನೆಗಳಿಗಾಗಿ ಕಾಡು ನಾಶವಾಗುತ್ತಿದೆ. ಕಾಡಿನ ನಾಶದೊಂದಿಗೆ ಮರಗಳು ನಾಶವಾಗುವುದರಿಂದ ನೀರಿನ ಸೆಲೆಗಳು ಬತ್ತಿ ಹೋಗುತ್ತಿವೆ. ಆದುದರಿಂದಲೇ ಬ್ರಹ್ಮಗಿರಿಯಲ್ಲಿ ಹುಲಿಯಿದ್ದರೆ ಬೆಂಗಳೂರಿನ ಜನರಿಗೆ ಕುಡಿಯುವ ನೀರು ದೊರೆಯುತ್ತದೆ ಎಂದು ಪರಿಸರವಾದಿಗಳು, ವಿಜ್ಞಾನಿಗಳು ಹೇಳುವುದು.
ವಿಕಾಸದ ಹಾದಿಯಲ್ಲಿ ಮಾನವನಿಗಿಂತ ಮೊದಲು ಈ ಭೂಮಿಯ ಮೇಲೆ ಬಂದ ಈ ಜೀವಿಗಳು ಅವನ ವಿಕಾಸದ ಏಣಿಯ ಮೆಟ್ಟಿಲುಗಳು. ವಿಕಾಸದುದ್ದಕ್ಕೂ ಅವು ನಿರ್ಮಿಸಿದ ಪರಿಸರ ಮಾನವನಿಗೆ ಅನುಕೂಲಕರವಾಯಿತು. ಅವುಗಳು ಒಂದೊಂದಾಗಿ ಮರೆಯಾಗುತ್ತಾ
ಬಂದಲ್ಲಿ ಅದರ ಕೊನೆಯ ಕೊಂಡಿಯಾದ ಮನುಷ್ಯನೂ ನಾಶವಾಗಲು ಬಹಳ ಕಾಲವೇನೂ ಹಿಡಿಯುವುದಿಲ್ಲ.
ಕೇವಲ ಕಾನೂನು ನಿಯಮಗಳಿಂದ ಮಾತ್ರ ಯಾವುದೇ ಸಂರಕ್ಷಣೆ ಸಾಧ್ಯವಿಲ್ಲ. ಸಂರಕ್ಷಣೆಯ ತಿಳುವಳಿಕೆಯನ್ನು ಪ್ರತಿಯೊಬ್ಬರಿಗೆ ತಲುಪಿಸುವ ಕಾರ್ಯವಾಗಬೇಕಾಗಿದೆ. ಇದು ಶಿಕ್ಷಣದಲ್ಲಿ ಒಂದು ಭಾಗವಾಗಿ, ಪಠ್ಯ ಕ್ರಮದಲ್ಲಿ ಸೇರ್ಪಡೆಯಾಗಬೇಕು. ಅನಿವಾರ್ಯ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಜತೆ ಕೈಜೋಡಿಸಲು ಅರಣ್ಯದಂಚಿನ ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು.
ಮಾನವ – ವನ್ಯಜೀವಿ ಸಂಘರ್ಷವನ್ನು ತಡೆಯುವ ಗಂಭೀರ ಪ್ರಯತ್ನಗಳು ಆಗಬೇಕು. ಆನೆಗಳು ರೈತರ ಬೆಳೆಗಳನ್ನು ನಾಶ ಮಾಡಿದಾಗ ಸಹಜವಾಗಿಯೇ ರೈತರಿಗೆ ಅವುಗಳ ಮೇಲೆ ಆಕ್ರೋಶ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಸೂಕ್ತವಾದ ಪರಿಹಾರ ದೊರೆಯಬೇಕು. ಆನೆಗಳು ಬಯಸಿದಂತಹ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. ಮೊಲ, ನಾಯಿಯಿಂದ ಹಿಡಿದು ಕುರಿ, ದನ– ಕರುಗಳವರೆಗೆ ಎಲ್ಲವನ್ನೂ ಬೇಟೆಯಾಡುವ ಚಿರತೆಗಳು ಜನವಸತಿಯನ್ನು ಪ್ರವೇಶಿಸುವುದು ಸಾಮಾನ್ಯವಾಗಿದೆ. ಸುಲಭವಾಗಿ ದೊರೆಯುವ ಬೇಟೆ ಇದಕ್ಕೊಂದು ಕಾರಣವಾಗಿದೆ. ಇದರಿಂದ ಮಾನವ ವನ್ಯಜೀವಿಗಳ ಸಂಘರ್ಷ ಮತ್ತಷ್ಟು ಅಧಿಕವಾಗುತ್ತದೆ.
ಇವೆಲ್ಲಕ್ಕೆ ಸೂಕ್ತವಾದ ಪರಿಹಾರವನ್ನು ಕಂಡುಕೊಂಡು ವನ್ಯ ಜೀವಿಗಳ ಸಂರಕ್ಷಣೆಗೆ ಮುಂದಾಗಬೇಕಾದ ಕ್ಷಣ ಇದಾಗಿದೆ. ‘ಪರಿಸರದ ಹೆಜ್ಜೆ’ ಯಾರದ್ದೇ ಆಗಿದ್ದರೂ ಅದು ಬೀರುವ ಪರಿಣಾಮವನ್ನು ಮಾತ್ರ ಸಂಪೂರ್ಣ ಮನುಕುಲ ಅನುಭವಿಸಬೇಕಾಗುತ್ತದೆ. ಆದುದರಿಂದ ನಾವಿರುವ ಪ್ರದೇಶಗಳ ವನ್ಯಜೀವಿಗನ್ನು ಉಳಿಸಲು ನಾವು ಪ್ರಯತ್ನ ಮಾಡಬೇಕು ಎನ್ನುವ ಎಚ್ಚರಿಕೆಯ ಗಂಟೆ ಮೊಳಗಿಯಾಗಿದೆ. ಪ್ರಯತ್ನ ನಮ್ಮ ಕೈಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.