‘ಪ್ರಜಾ ಮತ’ ಪುಟದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಕುರಿತ ಚರ್ಚೆಯಲ್ಲಿ (ಪ್ರ.ವಾ., ಏ.16) ವಿಶ್ರಾಂತ ಕುಲಪತಿಗಳು ಮತ್ತು ಕೆಲವು ರಾಜಕಾರಣಿಗಳು ಖಾಸಗಿ ವಿಶ್ವವಿದ್ಯಾಲಯಗಳ ಪರ ಅಭಿಪ್ರಾಯ ವ್ಯಕ್ತಪಡಿಸಿರುವುದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ‘ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಅಲ್ಲಿಯ ಗುಣಮಟ್ಟವನ್ನು ಸರ್ಕಾರ ನಡೆಸುವ ವಿಶ್ವವಿದ್ಯಾಲಯಗಳಲ್ಲಿ ತರಲು ಸಾಧ್ಯವಿಲ್ಲ’ ಎಂದೂ ವಿಶ್ರಾಂತ ಕುಲಪತಿಯೊಬ್ಬರು ಹೇಳಿದ್ದಾರೆ. ಅವರ ಈ ಮಾತನ್ನು ಒಪ್ಪುವುದು ಕಷ್ಟ. ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಸಂಬಂಧಪಟ್ಟಂತೆ ಇನ್ನೂ ಕೆಲವು ಪ್ರಮುಖ ವಿಚಾರಗಳನ್ನು ನಾವು ಮನನ ಮಾಡಿಕೊಳ್ಳಬೇಕಾಗಿದೆ.
ಇತರ ಕೆಲವು ಕ್ಷೇತ್ರಗಳಂತೆ, ಶಿಕ್ಷಣ ಕ್ಷೇತ್ರದಲ್ಲೂ ಸರ್ಕಾರದ ದ್ವಂದ್ವ ನೀತಿ ಕಣ್ಣಿಗೆ ರಾಚುತ್ತದೆ. ಒಂದೆಡೆ ಸರ್ಕಾರಿ ಶಾಲೆಗಳ ಉದ್ಧಾರದ ಮಂತ್ರ ಪಠಣ, ಮತ್ತೊಂದೆಡೆ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಉತ್ತೇಜನ. ‘ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುತ್ತೇವೆ’ ಎಂದು ಹೇಳುತ್ತಲೇ ಖಾಸಗಿ ಕಾಲೇಜುಗಳ ಹೆಚ್ಚಳಕ್ಕೆ ಪ್ರೋತ್ಸಾಹ ಕೊಡುತ್ತಲೇ ಇದೆ ಸರ್ಕಾರ. ಖಾಸಗಿ ಸಂಸ್ಥೆಗಳು ಬೇಡ ಎಂದು ನಾನು ವಾದಿಸುತ್ತಿಲ್ಲ. ಆದರೆ ಅವುಗಳ ಮುಂದೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸೊರಗುವುದನ್ನು ಸಹಿಸಬಹುದೇ? ಒಳ್ಳೆಯ ಉದ್ದೇಶ ಹಾಗೂ ಅತಿಯಾದ ಉತ್ಸಾಹದಿಂದಲೇ ಆರಂಭವಾಗುವ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಕ್ರಮೇಣ ಸರ್ಕಾರದ ಉತ್ಸಾಹ ಕುಂದಿ, ಅಭಿವೃದ್ಧಿ ಕಾಣದೆ, ಕೇಳುವವರೂ ಇಲ್ಲದೆ ಸೊರಗುತ್ತಾ ಹೋಗುತ್ತವೆ. ಹೀಗೆ ಸರ್ಕಾರವೇ ಉಳ್ಳವರಿಗೊಂದು, ಇಲ್ಲದವರಿಗೊಂದು ಎಂಬ ನೀತಿಯನ್ನು ಮುಕ್ತವಾಗಿ ಪಾಲಿಸುವುದು ಕಂಡುಬರುತ್ತಿದೆ.
ಕೆಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ 182 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳನ್ನು ಹೊಸದಾಗಿ ಆರಂಭಿಸಿತು. ಹೀಗೆ ಕಾಲೇಜುಗಳು ಆರಂಭವಾದ ಕೆಲವು ಜಿಲ್ಲೆಗಳಲ್ಲಿ ಆಗಲೇ ಅನುದಾನಿತ ಪ್ರಥಮದರ್ಜೆ ಕಾಲೇಜುಗಳು ಪ್ರವರ್ಧಮಾನಕ್ಕೆ ಬಂದಿದ್ದವು. ಅಂಥ ಕಡೆಗಳಲ್ಲೂ ಯಾವುದೇ ಸೌಲಭ್ಯಗಳಿಲ್ಲದೆ ಹೊಸ ಕಾಲೇಜುಗಳನ್ನು ಆರಂಭಿಸಲಾಯಿತು. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಆಯಾ ಕಾಲೇಜಿನ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ನಿರ್ದೇಶನ ಬಂದಿತ್ತು. ಆಗಲೇ ಗೊತ್ತಾದದ್ದು, ಅಲ್ಲಿಯ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯಲ್ಲೂ ಶಾಸಕರೇ ಇದ್ದರು ಎಂಬ ವಿಷಯ. ಕೆಲವು ಕಡೆ ಶಾಸಕರೇ ಕಾಲೇಜುಗಳನ್ನು ನಡೆಸುತ್ತಿದ್ದರು. ಇಂಥ ಸ್ಥಿತಿಯಲ್ಲಿ, ಸಂಬಂಧಪಟ್ಟ ಶಾಸಕರು ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗೆ ಎಷ್ಟರಮಟ್ಟಿನ ಆಸಕ್ತಿಯನ್ನು ತೋರಿಸಬಹುದು ಎಂಬುದನ್ನು ಎಂಥವರೂ ಊಹಿಸಬಹುದು!
ಇನ್ನು ವಿಶ್ವವಿದ್ಯಾಲಯಗಳ ಬಗ್ಗೆ ಹೇಳುವುದಾದರೆ, ನಾಲ್ಕೈದು ಜಿಲ್ಲೆಗಳಿಗೆ ಒಂದರಂತೆ ಇದ್ದ ಸರ್ಕಾರಿ ವಿಶ್ವವಿದ್ಯಾಲಯಗಳ ಸಂಖ್ಯೆ ಈಗ ದುಪ್ಪಟ್ಟಾಗಿದೆ. ಸರಾಸರಿ 2-3 ಜಿಲ್ಲೆಗೊಂದರಂತೆ ವಿಶ್ವವಿದ್ಯಾಲಯಗಳಿವೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಹೀಗಿದ್ದೂ ಖಾಸಗಿ ವಿಶ್ವವಿದ್ಯಾಲಯಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕೆಲವು ಕಾಲೇಜುಗಳು ಅಥವಾ ಶಿಕ್ಷಣ ಸಂಸ್ಥೆಗಳಿಗೆ ಖಾಸಗಿ ವಿಶ್ವವಿದ್ಯಾಲಯದ ಮಾನ್ಯತೆ ನೀಡುವುದರಲ್ಲಿ ಅರ್ಥವಿದೆ. ನಾನು ಕಂಡಂತೆ ಬೆಂಗಳೂರು ನಗರದಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಕಾಪಾಡಿಕೊಂಡಿರುವ ಅನೇಕ ಕಾಲೇಜುಗಳಿವೆ. ಅವು ಯಾವುವೂ ವಿಶ್ವವಿದ್ಯಾಲಯವಾಗಲು ಬಯಸಿಲ್ಲ. ಆದರೆ, ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಆರಂಭವಾದ ಅನೇಕ ಶಿಕ್ಷಣ ಸಂಸ್ಥೆಗಳು ಖಾಸಗಿ ವಿಶ್ವವಿದ್ಯಾಲಯದ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆಯ ಸುದ್ದಿ ಬಂದಾಗ, ಎಲ್ಲಿ ತಮ್ಮನ್ನು ಬೆಂಗಳೂರು ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ಸೇರಿಸಿಬಿಡುತ್ತಾರೋ ಎಂಬ ಅಂಜಿಕೆಯಿಂದಲೋ ಏನೋ, ಒಂದೆರಡು ಕಾಲೇಜುಗಳು ತರಾತುರಿಯಲ್ಲಿ ‘ಖಾಸಗಿ ವಿಶ್ವವಿದ್ಯಾಲಯ’ ಎಂಬ ಹಣೆಪಟ್ಟಿಯನ್ನು ಗಿಟ್ಟಿಸಿಕೊಂಡವು. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನಂಬಬಹುದೇ? ಇಂಥವುಗಳಿಗೆ ಖಾಸಗಿ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವಾಗ ಮಾನದಂಡವನ್ನು ಸರಿಯಾಗಿ ಅನುಸರಿಸಲಾಗಿದೆ ಎಂದು ಭಾವಿಸಬಹುದೇ?
ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆದ ಘಟನೆ ಈಚೆಗೆ ಸುದ್ದಿಯಾಗಿತ್ತು. ಯಾವುದೇ ವಿಶ್ವವಿದ್ಯಾಲಯವು ಕುಟುಂಬದ ಆಸ್ತಿಯಾಗಬಾರದು. ಅದು ಸಮಾಜಕ್ಕೆ ಸೇರಿರಬೇಕು. ಆದ್ದರಿಂದ ಇಂಥ ಸಂಸ್ಥೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.
ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ ಮೇಲೆ ಅವುಗಳಿಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಹೊಣೆ. ಅದನ್ನು ವಿಶ್ವವಿದ್ಯಾಲಯಗಳು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಅದು ನಮ್ಮಲ್ಲಿ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯೇ ಪರಿಹಾರವೇ? ಪ್ರಭಾವಿ ವ್ಯಕ್ತಿಗಳು ಅಥವಾ ಸಮುದಾಯದವರು ಆರಂಭಿಸುವ ಸಂಸ್ಥೆಗಳೆಲ್ಲಾ ಖಾಸಗಿ ವಿಶ್ವವಿದ್ಯಾಲಯದ ಹಣೆಪಟ್ಟಿಯನ್ನು ಪಡೆಯುತ್ತಾ ಹೋದರೆ, ಅವುಗಳ ಮುಂದೆ ಸರ್ಕಾರಿ ಕಾಲೇಜುಗಳು ಸೊರಗುತ್ತವೆ. ವಿದ್ಯಾರ್ಥಿಗಳಲ್ಲಿ ತಾರತಮ್ಯ ಹೆಚ್ಚುತ್ತದೆ. ಇದರಿಂದ ಉಂಟಾಗುವ ಸಾಮಾಜಿಕ ಅಸಮತೋಲನಕ್ಕೆ ಯಾರು ಹೊಣೆ? ಸದಾ ಕಾಲ ‘ಸಾಮಾಜಿಕ ನ್ಯಾಯ’ ಎಂಬ ಮಾತನ್ನು ಜಪಿಸುವ ಸರ್ಕಾರಕ್ಕೆ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ‘ಸಾಮಾಜಿಕ ಅನ್ಯಾಯ’ಗಳ ಕಡೆ ಗಮನ ಹರಿಸಲು ಸಾಧ್ಯವಿಲ್ಲವೇ? ಈ ವಿಚಾರದಲ್ಲಿ ಬದ್ಧತೆಯ ಕೊರತೆ ಇರುವುದು ಸ್ಪಷ್ಟ. ಖಾಸಗಿ ಸಂಸ್ಥೆಗಳನ್ನು ಪೋಷಿಸುವ ರಾಜಕಾರಣಿಗಳನ್ನು ಸರ್ಕಾರ ಓಲೈಸುವುದಂತೂ ಇದ್ದೇ ಇದೆ.
ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸರ್ಕಾರ, ಅವುಗಳ ಉನ್ನತಿ ಹಾಗೂ ಆಧುನೀಕರಣದ ಕಡೆಗೆ ಏಕೆ ಗಮನ ಕೊಡಬಾರದು? ಖಾಸಗಿ ಸಂಸ್ಥೆಗಳಿಗೆ ಸಾಮಾಜಿಕ ನ್ಯಾಯದ ಉದ್ದೇಶವನ್ನು ಮೀರಿದ ಬೇರೆಯದೇ ಆದ ಉದ್ದೇಶವಿರುತ್ತದೆ. ಆ ಉದ್ದೇಶಕ್ಕೆ ಕಡಿವಾಣ ಹಾಕಿ, ಸಾಮಾಜಿಕ ನ್ಯಾಯ ಕಾಪಾಡುವ ಕೆಲಸ ಆಗಬೇಕು. ಎದೆಗಾರಿಕೆ, ಇಚ್ಛಾಶಕ್ತಿ ಇರುವ ಸರ್ಕಾರ ಮತ್ತು ಮುಖ್ಯಮಂತ್ರಿಯಿಂದ ಮಾತ್ರ ಅದು ಸಾಧ್ಯ ಎಂಬ ಮಾತು ಒಪ್ಪತಕ್ಕದ್ದೇ. ಸದ್ಯಕ್ಕೆ ಅಂಥ ಇಚ್ಛಾಶಕ್ತಿ ಸರ್ಕಾರಗಳಲ್ಲಿ ಕಾಣಿಸುತ್ತಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ದ್ವಂದ್ವ ನಿಲುವನ್ನು ಹೊಂದಿರುವ ಸರ್ಕಾರಗಳ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದಾದರೂ ಹೇಗೆ?
ಲೇಖಕ: ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.