ADVERTISEMENT

ಗಜೇಂದ್ರಗಡವೆಂಬ ಹಳತು ಹೊಸತಿನ ಮಿಶ್ರಣ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2014, 19:30 IST
Last Updated 3 ನವೆಂಬರ್ 2014, 19:30 IST
ಪ್ರಸನ್ನ, ಗಜೇಂದ್ರಗಡ
ಪ್ರಸನ್ನ, ಗಜೇಂದ್ರಗಡ   

ನಾನು ಉಪವಾಸ ಮಲಗಿರುವ ಕೋಣೆ, ವಾಣಿಪೇಟೆಯೆಂಬ, ಅಂಕುಡೊಂಕಿನ ಓಣಿಗಳ ಚಕ್ರವ್ಯೂಹದೊಳಗೆ ಬಂಧಿತವಾಗಿದೆ. ಇಲ್ಲಿನ ಕೈಮಗ್ಗ ನೇಕಾರರು ಸಹ ಇದೇ ಚಕ್ರ­ವ್ಯೂಹದೊಳಗೆ ಬಂಧಿತರಾಗಿದ್ದಾರೆ. ಗಜೇಂದ್ರ­ಗಡ­ವೆಂಬ ಹೆಸರಿನ ಈ ಊರು ಕೆಂಪುಕಲ್ಲಿನ ಗುಡ್ಡಸಾಲೊಂದರ ತಟದಲ್ಲಿದೆ. ಗುಡ್ಡಗಳದ್ದು ಅದ್ಭುತ ರಚನೆ. ಚಪ್ಪಟೆಯಾಗಿರುವ ಈ ಗುಡ್ಡ­ಸಾಲು, ಇಲ್ಲಿ ಶುರುವಾದದ್ದು ಬಾದಾಮಿ ಐಹೊಳೆ ಪಟ್ಟದಕಲ್ಲುಗಳವರೆಗೂ ಚಾಚಿ­ಕೊಂಡಿದೆ. ಸುರರು ಅರಮನೆಗಳೆಂದು ಕಟ್ಟಿಸಿ, ಅಪ್ಸರೆಯರರೊಟ್ಟಿಗೆ ಮೆರೆದಾಡಿ, ಸ್ವರ್ಗಕ್ಕೆ ಹಿಂದಿರುಗಿ ಹೋದರೋ ಎಂಬ ಭ್ರಮೆ ಮೂಡಿ­ಸು­ತ್ತದೆ, ಗುಡ್ಡಗಳ ಭವ್ಯ ಸಂರಚನೆ. ನಾನು ಮಲಗಿರುವ ಕೋಣೆಯ ಬಾಗಿಲು ತೆರೆದರೆ ಸಾಕು, ಗುಡ್ಡದ ಚಪ್ಪಟೆ ಛಾವಣಿ ಆಕಾಶವನ್ನೇ ಅಡ್ಡಗಟ್ಟಿ ನಿಂತಿರುತ್ತದೆ. ಚಪ್ಪಟೆ ಛಾವಣಿಯ ತುಂಬೆಲ್ಲ ಗಾಳಿ ಗಿರಣಿಗಳು. ಹಳತು ಹೊಸತಿನ ಮಿಶ್ರಣವಿದು ಈ ಊರು, ಈ ಗುಡ್ಡ ಹಾಗೂ ಇಲ್ಲಿನ ನೇಕಾರರು.

ನೇಕಾರರ ಮೇಲೆ ಹೊಸತೆಂಬುದು ದುರಂತ­ದಂತೆ ಅಮರಿಕೊಂಡಿದೆ. ಊರತುಂಬ ವಿದ್ಯುತ್‌ ಮಗ್ಗಗಳ ಕರ್ಕಶ ಸದ್ದು, ವಾಹನಗಳ ಹೊಗೆ, ದೂಳು, ಹಾಗೂ ಎಲ್ಲೆಂದರಲ್ಲಿ ಎಗ್ಗಿಲ್ಲದಂತೆ ತೆರೆದುಕೊಂಡಿರುವ ಆಧುನಿಕ ದುಕಾನುಗಳ ಅವ್ಯವಸ್ಥೆ ಹಾಗೂ ಈ ಗೊಂದಲದ ಗೂಡಿನ ಸುತ್ತ ಇರುವೆಗಳಂತೆ ಹರಿದಾಡುವ ಬಡಜನರು. ಈ ದೇಶದ ದುರಂತವಿದು. ಹಳ್ಳಿಗಳಿಗೆ ಅಗತ್ಯವಿರುವುದು ವಿಚಾರಕ್ರಾಂತಿ, ಅದು ಹಳ್ಳಿಗಳನ್ನು ತಲುಪಲಿಲ್ಲ, ಅನ­ಗತ್ಯವಾದ ಹಾಗೂ ಅರೆಬರೆ­ಯಾದ ಕೈಗಾರಿಕಾ ಕ್ರಾಂತಿ ತಲು­­ಪಿದೆ. ದೂಳು ದುಮ್ಮಾನ, ಬಡತನ­ಗಳ ರೂಪ ತಾಳಿದೆ ಭಾರತೀಯ ಆಧುನಿಕತೆ.

ಹಿಂದೆಲ್ಲ ಕೈಮಗ್ಗ ನೇಕಾರರು ಇಷ್ಟೊಂದು ದರಿದ್ರರಿದ್ದಿಲ್ಲ. ಒಳ್ಳೆಯ ಕಾಲ ಕಂಡವರು ಅವರು. ಸರಳವಾದ ಆದರೆ ಸಭ್ಯವಾದ ಬಾಳು ಬಾಳಿದ­ವರು. ಮನೆಯ ಉದ್ಯೋಗ ನೇಕಾರಿಕೆ. ಗಜೇಂದ್ರ­ಗಡದ ಶ್ರೀಮಂತರೂ ಸಹ, ನಗರಗಳ ಶ್ರೀಮಂತರ ಹೋಲಿಕೆಯಲ್ಲಿ ಬಡವರೇ ಸರಿ. ಇವರ ಮಟ್ಟಿಗೆ ಪರಂಪರೆಯೆಂಬುದು, ಗುಡಿ ಗುಂಡಾರಗಳು ಜಾತಿ­ವ್ಯವಸ್ಥೆ ಹಾಗೂ ಮೇಲು­ಕೀಳಿನ ಸಂಸ್ಕೃತಿ ಮಾತ್ರ. ವಿದ್ಯುತ್‌ ಮಗ್ಗಗಳ ಮಾಲೀಕರು ಹಾಗೂ ವ್ಯಾಪಾರಸ್ಥರು ಕೈಮಗ್ಗ ನೇಕಾರರ ಜಾತಿ ಬಾಂಧ­ವರು. ಇವರು ಕೆಟ್ಟವ­ರೇ­ನಲ್ಲ,  ಸ್ನೇಹ­ಪರರು. ಆದರೆ ವ್ಯವಸ್ಥೆ ಕೆಟ್ಟದ್ದು ಹಾಗೂ ಕ್ರೂರವಾದದ್ದು. ಕುರಿ ಮತ್ತು ತೋಳ­ಗಳನ್ನು ಒಂದೇ ರೊಪ್ಪದಲ್ಲಿ ಬಂಧಿಸಿರುವಂತ­ಹದ್ದು, ಭಾರತೀಯ ಜಾತಿಪದ್ಧ­ತಿಯ ಪಳೆಯು­ಳಿಕೆ­ಯಾದ  ವ್ಯವಸ್ಥೆ.

ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿ­ಸಲಾಗಿರುವ ಎಲ್ಲ ವಿದ್ಯುತ್‌ ಮಗ್ಗಗಳಂತೆ, ಇಲ್ಲೂ ಸಹ ವಿದ್ಯುತ್ ಮಗ್ಗಗಳು ನೇಯು­ವುದು, ಕೈಮಗ್ಗ ವಸ್ತ್ರ ದಂತೆ ಕಾಣುವ ಕಲಬೆರಕೆ ವಸ್ತ್ರ­ಗ­ಳನ್ನು. ಅರ್ಥಾತ್ ಕಲಬೆರಕೆ ಸೀರೆ, ಕಲಬೆರಕೆ ಅಂಗವಸ್ತ್ರ, ಧೋತಿ ಇತ್ಯಾದಿಗಳನ್ನು. ಇವು ಕೈಮಗ್ಗದ್ದೆಂದೇ ಮಾರಾಟವಾಗುತ್ತವೆ.  ಹೀಗೆ ಮಾರುವುದರಿಂದ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆಯಲ್ಲಿ ವಿನಾ­ಯಿ­ತಿಯೂ ಸೇರಿದಂತೆ ಹಲವು ಬಗೆಯ ಸವ­ಲತ್ತು­ಗಳು ಸುಳ್ಳೆಸಿಗುತ್ತವೆ. ಇದೊಂದು ವಿಚಿತ್ರ ದ್ವಂದ್ವ. ದ್ವಂದ್ವ ಏಕೆಂದರೆ ಶುದ್ಧ ಕೈಮಗ್ಗದ ವಸ್ತ್ರಗಳಿಗೆ ಒಳ್ಳೆಯ ಮಾರುಕಟ್ಟೆಯಿದೆ, ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗುತ್ತಿದೆ. ಗ್ರಾಹಕರು ಕೈಮಗ್ಗದ ವಸ್ತ್ರ ಕೊಳ್ಳುತ್ತಿದ್ದೇವೆ ಎಂದು ತಿಳಿದು ಕಲಬೆರಕೆ ವಸ್ತ್ರ ಖರೀದಿಸುತ್ತಿದ್ದಾರೆ. ಬೇಡಿಕೆ­ಯಿದ್ದೂ ಬಡವಾಗುತ್ತಿದ್ದಾನೆ ಕೈಮಗ್ಗ ನೇಕಾರ.

ಸಹಜವಾಗಿಯೇ ಕಲಬೆರಕೆ ವ್ಯಾಪಾರಿಗಳು ಕೈಮಗ್ಗ ಸತ್ಯಾಗ್ರಹದಿಂದ ಮುನಿಸಿಕೊಂಡಿದ್ದಾರೆ. ಸತ್ಯಾಗ್ರಹವನ್ನು ವಿರೋಧಿಸಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ದುರಂತವೆಂದರೆ ಅವರ ಸ್ಥಿತಿ ಕೂಪ­ಮಂಡೂಕದಂತಾಗಿದೆ. ಹಳೆಯ ಮಾರು­ಕಟ್ಟೆಗೆ ಜೋತು ಬಿದ್ದವರು ಅವರು. ಹೊಸ ಮಾರು­ಕಟ್ಟೆ ಅಥವಾ ಹೊಸ ಜಗತ್ತನ್ನು ಪ್ರವೇ­ಶಿಸುವ ಧೈರ್ಯ ಮಾಡುತ್ತಿಲ್ಲ. ಸತ್ಯಾಗ್ರಹಿಗಳು ಅವರೊಟ್ಟಿಗೆ ಮಾತುಕತೆ ನಡೆಸಿದ್ದೇವೆ. ಅವರೂ ಬದಲಾಗುತ್ತಾರೆ, ಹೊಸ ಮಾರುಕಟ್ಟೆಯ ರುಚಿ ಕಾಣುತ್ತಾರೆ ಎಂಬ ಭರವಸೆ ನಮಗಿದೆ. ಆದರೆ ಹಳೆಯ ವ್ಯಾಪಾರಿಗಳನ್ನು ಹೊಸ ಮಾರುಕ­ಟ್ಟೆಯ ಕಡೆ ತಿರುಗಿಸಬೇಕಾದ ಜವಾಬ್ದಾರಿ ಸರ್ಕಾರಕ್ಕಿದೆ.

ದುರಂತವೆಂದರೆ ಸರ್ಕಾರ ನಿಷ್ಕ್ರಿಯವಾಗಿದೆ. ಮಾತ್ರವಲ್ಲ ದಲ್ಲಾಳಿ ವ್ಯವಹಾರದ ಮೂಲಕ ವಸ್ತ್ರ ಖರೀದಿಸಿ ಲಂಚ ಹೊಡೆಯುವಲ್ಲಿ ನಿರತ­ವಾಗಿದೆ. ನನ್ನ ಕೋಣೆಯ ಸುತ್ತ ಒತ್ತೊತ್ತಾಗಿ ಹೆಣೆದುಕೊಂಡಿರುವ ನೇಕಾರರ ಗುಬ್ಬಿಗೂಡು­ಗಳನ್ನು ಕಂಡರೆ ಹೃದಯ ಹಿಂಡುತ್ತದೆ. ಸಣ್ಣಸಣ್ಣ ಮನೆಗಳವು; ಕಲ್ಲಿನ ಮನೆ, ಮಣ್ಣಿನ ಮನೆ, ಮುರಿದ ಮಾಡು, ಬಾಗಿಲ ಇಕ್ಕೆಲಗಳಲ್ಲಿ ಕಲ್ಲಿನ ಪಾವಟೆಗಳು. ಅಲ್ಲೇ ಎಮ್ಮೆ ಕಟ್ಟಿದ್ದಾರೆ ಕುರಿ ಕಟ್ಟಿದ್ದಾರೆ. ಮನೆಯೊಳಗೆ ಮಗ್ಗ ಕೂರಿಸಲಿಕ್ಕಷ್ಟೇ ಸ್ಥಳ. ಜೊತೆಗೆ ಸಣ್ಣದೊಂದು ಅಡುಗೆಮನೆ. ಅಡುಗೆ ಮನೆಯಲ್ಲೇ ಮೂಲೆಯಲ್ಲೊಂದು ಕಿರಿ­ದಾದ ಬಚ್ಚಲು. ಒಬ್ಬರು ಕುಂಡಿಯೂರಿ, ಮೊಳ­ಕಾಲ ಮೇಲೆ ಕುಳಿತು ನಾಜೂಕಾಗಿ ಸ್ನಾನ ಮಾಡ­ಬಹುದಷ್ಟೆ. ಆದರೂ ಓರಣವಾಗಿಟ್ಟಿರುತ್ತಾರೆ, ಮನೆ ಬಚ್ಚಲು ಪಾತ್ರೆ ಪಡಗ ಎಲ್ಲ. ಮಲ­ಗು­ವುದು ಹೆಚ್ಚಾಗಿ ಹೊರಗೆಯೇ ಸರಿ; ಜಗಲಿ­ಕಟ್ಟೆ, ಗುಡಿಯ ಅಂಗಳ ಅಥವಾ ಅಗಸೆಕಟ್ಟೆ, ಎಲ್ಲೆಂದ­ರಲ್ಲಿ. ಅವರಿಗೆ ಸಿಕ್ಕುತ್ತಿರುವ ಕೂಲಿ ದಿನಕ್ಕೆ ₨ 60ರಿಂದ ₨ 150ರವರೆಗೆ. ಸರ್ಕಾರ ನಿಗದಿ­ಪಡಿಸಿರುವ ಕನಿಷ್ಠ ಕೂಲಿಗಿಂತ ಬಹಳ ಬಹಳ ಕಡಿಮೆ.

ಅನೇಕ ಮಿತ್ರರು ಗಜೇಂದ್ರಗಡದಲ್ಲೇ ಏಕೆ, ಸತ್ಯಾಗ್ರಹ ನಡೆಸಲಿಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ ಯೋಗ್ಯವಲ್ಲವೇ ಎಂದು ಪ್ರಶ್ನೆ ಮಾಡಿ­ದ್ದಾರೆ. ನಮಗೊಂದು ಹಟವಿದೆ, ಬೆಂಗಳೂರೇ ಗಜೇಂದ್ರಗಡಕ್ಕೆ ಬರಲಿ ಎಂಬುದು ಹಟ. ಸತ್ಯಾ­ಗ್ರಹದ ಬಲವಂತಕ್ಕಾದರೂ ಬರಲಿ, ಕಣ್ಣಾರೆ ಕಾಣಲಿ ನೇಕಾರರ ಪರಿಸ್ಥಿತಿ ಎಂಬುದು ಹಟ.

ಹಳ್ಳಿಗಳನ್ನು ಕೊಲ್ಲುತ್ತಿರುವುದು ನಗರವೆಂಬ ವ್ಯವಸ್ಥೆಯೇ ಹೊರತು ನಗರ ಜೀವಿಗಳಲ್ಲ. ನಗರಜೀವಿಗಳಲ್ಲಿ ಅನೇಕರು ಕೈಮಗ್ಗ ಗ್ರಾಹಕರಿದ್ದಾರೆ, ಪ್ರಜ್ಞಾವಂತರಿದ್ದಾರೆ. ಅವರ ಬೆಂಬಲ ಬೇಕಿದೆ ಕೈಮಗ್ಗ ನೇಕಾರನಿಗೆ. ಕೈಮಗ್ಗ ಗ್ರಾಹಕರು ಬೆಂಬಲ ನೀಡದಿದ್ದರೆ ನೇಕಾರ ಬದುಕುಳಿಯಲಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT