ADVERTISEMENT

ಚುನಾವಣೆ ಕೆಲಸ: ಮಹಿಳೆಯರಿಗೆ ಮುಜುಗರ ತಪ್ಪಿಸಿ

ಸಾರಾ ಅಬೂಬಕ್ಕರ್‌, ಮಂಗಳೂರು
Published 18 ಫೆಬ್ರುವರಿ 2014, 19:30 IST
Last Updated 18 ಫೆಬ್ರುವರಿ 2014, 19:30 IST

ಕರ್ನಾಟಕದಲ್ಲಿ ವಿಧಾನಸಭಾ ಚುನಾ­ವಣೆ ಬಿಸಿ ಆರುವ ಮೊದಲೇ ಇನ್ನೊಂದು ಮಹಾ ಚುನಾ­ವಣೆಗೆ ದೇಶ ಸಜ್ಜಾಗುತ್ತಿದೆ. ವಿಧಾನ­ಸಭೆಗೆ ಸ್ಪರ್ಧಿಸಿ ಸೋತವರೂ, ಕೆಲ­ವೊಮ್ಮೆ ಗೆದ್ದವರೂ ಆ ವಿಜಯ­ದಿಂದ ತೃಪ್ತಿ­ಪಟ್ಟುಕೊಳ್ಳದೆ ದೇಶವನ್ನೇ ಆಳುವ ಹಂಬಲ­ದಿಂದ ರಾಜ್ಯದ ಆಳ್ವಿಕೆಯನ್ನು ತಿರಸ್ಕರಿಸಿ ಲೋಕಸಭೆಗೆ ಸ್ಪರ್ಧಿಸಲು ಹೊಂಚು ಹಾಕುತ್ತಿದ್ದಾರೆ. ಪ್ರತಿ­ಯೊಂದು ಚುನಾವಣೆಗೂ ಕೋಟಿ­ಗಟ್ಟಲೆ ಹಣ ಖರ್ಚು ಮಾಡಲು ವಿವಿಧ ರಾಜಕೀಯ ಪಕ್ಷಗಳ ರಾಜ­ಕಾರಣಿಗಳು ಸಿದ್ಧ­ರಾಗಿದ್ದಾರೆ. ಅವರು ವಿಜಯಿ­ಗಳಾಗಿ ದೆಹಲಿಗೆ ಹೋದ ಬಳಿಕ ಅವರು ತೆರವು ಮಾಡಿದ ಕ್ಷೇತ್ರದಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಲು ಸರ್ಕಾರ ಮತ್ತೊಮ್ಮೆ ಹಣ ಖರ್ಚು ಮಾಡ­ಬೇಕಾಗುತ್ತದೆ. ಸರ್ಕಾರದ ಈ ಹೊರೆ­ಯನ್ನು ತೆರಿಗೆದಾರರೇ ಹೊರ­ಬೇಕಾಗುವುದು ಸಹಜ ತಾನೇ? ಇಂತಹ ಅನಗತ್ಯ ಖರ್ಚು­ಗಳಿಗೆ ಹಾದಿ­ಯಾಗ­ದಂತೆ ನಮ್ಮ ಈ ನಿಯಮಗಳನ್ನು ಬದ­ಲಾಯಿ­ಸಲು ಸಾಧ್ಯ­ವಿಲ್ಲವೇ?

ಚುನಾವಣೆಗಳಲ್ಲಿ ಅಕ್ರಮಗಳು ನಡೆಯ­ದಂತೆ ಪ್ರಾಮಾಣಿಕವಾಗಿ, ಸತ್ಯ­ಸಂಧತೆ­ಯಿಂದ ಚುನಾ­ವಣೆ­ಗಳನ್ನು ನಡೆಸಲು ಸರ್ಕಾರಿ ಉದ್ಯೋಗ­­ದಲ್ಲಿರು­ವವರು, ಚುನಾವಣಾಧಿ­ಕಾರಿ­ಗಳು ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸ­ಬೇಕಾ­ಗು­ತ್ತದೆ. ಶಾಲಾ ಮತ್ತು ಕಾಲೇಜು ಅಧ್ಯಾಪಕರು ಹಾಗೂ ಇನ್ನಿತರ ಸರ್ಕಾರಿ ಉದ್ಯೋಗಿಗಳು ಚುನಾ­ವಣಾ ಕರ್ತವ್ಯದಿಂದ ವಿಮುಖ­ರಾಗು­ವುದು ಶಿಕ್ಷಾರ್ಹ ಅಪರಾಧ­ವಾಗುತ್ತದೆ. ಹೀಗಾಗಿ ಮಹಿಳೆಯರು ಪುರುಷ­ರೆಂಬ ಭೇದವಿಲ್ಲದೆ ಎಲ್ಲರೂ ಈ ಕರ್ತವ್ಯ ನಿರ್ವಹಿಸುವುದು ಕಡ್ಡಾಯ­ವಾಗಿದೆ.

ಇಂದು ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕ­ರಾಗಿ­ರು­ವವರಲ್ಲಿ ಹೆಚ್ಚಿನ­ವರು ಮಹಿಳೆಯ­ರಾಗಿರು­ತ್ತಾರೆ. ಮಹಿಳೆ­ಯರಿಗೆ ಚುನಾವಣಾ ಕರ್ತವ್ಯ ನಿರ್ವ­ಹಣೆ ಎಂಬುದು ಕೆಲವೊಮ್ಮೆ ಬಹಳ ತ್ರಾಸದಾಯಕವಾಗಿರುತ್ತದೆ. ನಗರ­ಗಳೊ­ಳಗಿನ ಬೂತ್‌ಗಳಲ್ಲಾದರೆ ತೊಂದರೆ
­ಗ­ಳಿರುವುದಿಲ್ಲ. ಆದರೆ ಜಿಲ್ಲೆಯ ಮೂಲೆ ಮೂಲೆ­ಗಳಲ್ಲಿ ಸಮ­ರ್ಪಕ­ವಾಗಿ ನೀರಿಲ್ಲದ, ಸರಿಯಾದ ಶೌಚಾ­ಲಯ­ಗಳಿಲ್ಲದ, ಉತ್ತಮ ಹೋಟೆಲ್ ಗಳಿಲ್ಲದ ಚಿಕ್ಕ ಚಿಕ್ಕ ಹಳ್ಳಿ­ಗಳಲ್ಲೂ ಈ ಕರ್ತವ್ಯ ನಿರ್ವಹಿಸ­ಬೇಕಾಗುತ್ತದೆ. ವಿದ್ಯುಚ್ಛಕ್ತಿ ಇಲ್ಲದ, ಫ್ಯಾನ್‌ ಇಲ್ಲದ ಶಾಲೆಯ ಒಂದು ಕೋಣೆ­ಯಲ್ಲಿ ಮಲಗಲು ಸರಿಯಾದ ಹಾಸಿಗೆ ದಿಂಬುಗಳಿಲ್ಲದೆ ರಾತ್ರಿಯಿಡೀ ನುಸಿ­ಗಳಿಂದ ಕಚ್ಚಿಸಿಕೊಂಡು ನಿದ್ರೆ­ಯಿಲ್ಲದೆ ಬೆಳಗು ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನೀರು ಮತ್ತು ಶೌಚಾ­ಲಯದ ದೊಡ್ಡ ಸಮಸ್ಯೆಯನ್ನು ಈ ಮಹಿಳೆಯರು ಎದುರಿಸಬೇಕಾಗು­ತ್ತದೆ. ಶೌಚಾಲಯಗಳಿದ್ದರೂ ಕೆಲವು ಕಡೆ ಇವು ಬಹಳ ದೂರದಲ್ಲಿರುತ್ತವೆ. ರಾತ್ರಿ ಹೊತ್ತು ಅಂತಹ ಕಡೆಗಳಲ್ಲಿ ನಡೆ­ದಾಡು­ವುದೂ ಅಪಾಯವನ್ನು ತಂದೊಡ್ಡ­ಬಹುದು. ಇಂದಿನ ದಿನಗಳಲ್ಲಿ ಮಹಿಳೆ­ಯರ ಮೇಲೆ ಹಗಲು ಹೊತ್ತಿ­ನಲ್ಲೇ ಎಂತೆಂತಹ ದೌರ್ಜನ್ಯಗಳು ನಡೆ­ಯು­ತ್ತಿರುವ ವರದಿಗಳಿಲ್ಲದ ದಿನಗಳೇ ಇಲ್ಲ ಎಂಬಂತಾಗಿದೆ.

ಪುರುಷರಿಗೆ ದೊಡ್ಡ ಪ್ರಮಾಣದಲ್ಲಿ ಶೌಚಾ­ಲಯದ ಸಮಸ್ಯೆಗಳಿರಲಾರದು. ಅವರು ಹೊರಗೆಲ್ಲೋ ಹೋಗಿ ತಮ್ಮ ಪ್ರಕೃತಿಯ ಕರೆಯನ್ನು ನೀಗಿಸಿ­ಕೊಳ್ಳ­ಬಹುದು. ಆದರೆ ಮಹಿಳೆ­ಯರಿಗೆ ಹಾಗೆ ಮಾಡಲು ಸಾಧ್ಯವಾಗದು. ಮಹಿಳೆ­ಯರಿಗೆ ಚುನಾವಣಾ ಕರ್ತವ್ಯದಿಂದ ವಿನಾ­­ಯಿತಿ ನೀಡಬೇಕೆಂಬುದು ಇದ­ರರ್ಥ­ವಲ್ಲ. ಆ ಎರಡು ದಿನಗಳ ಮಟ್ಟಿಗೆ ಅವರಿಗೆ ಯಾವ ರೀತಿಯಲ್ಲೂ ಮುಜುಗರ­ವಾಗದಂತೆ ಸರಿಯಾಗಿ  ಶೌಚಾ­ಲಯ, ನೀರು, ಆಹಾರ, ಕುಡಿಯುವ ನೀರು ಮತ್ತು ಮಲಗಲು ಸರಿ­ಯಾದ ವ್ಯವಸ್ಥೆ ಮಾಡಿಕೊಡುವತ್ತ ಚುನಾವಣಾಧಿಕಾರಿಗಳು ಗಮನ­ಹರಿಸಬೇಕು. ಸಂಬಂಧಪಟ್ಟ ತಹಶೀಲ್ದಾ­ರರು ಮೊದಲೇ ಎಲ್ಲ ಕಡೆಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳತ್ತ ಗಮನ­ಹರಿಸಬೇಕು. ಸರಿಯಾದ ಸೌಲಭ್ಯ, ಸೌಕರ್ಯ ದೊರೆತರೆ ಮಹಿಳೆಯರೂ ಸಂತೋಷ­ದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.