ADVERTISEMENT

ಚುನಾವಣೆ ಹೊಣೆ ಆಗದಿರಲಿ ಯಾರಿಗೂ ಹೊರೆ

ಡಾ.ಮೀನಾಕ್ಷಿ ಬಾಳಿ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಚುನಾವಣಾ ಕಾರ್ಯಗಳಲ್ಲಿ  ಗಣನೀಯ­ವಾಗಿ ಮಹಿಳಾ ಸಿಬ್ಬಂದಿಯನ್ನು ಬಳ­ಸಿ­ಕೊಳ್ಳಲಾಗು­ತ್ತದೆ. ಎಲ್ಲ ಸರ್ಕಾರಿ, ಅರೆ­ಸರ್ಕಾರಿ ನೌಕ­ರರ ಕಡ್ಡಾಯ ಕರ್ತವ್ಯ­ವಾಗಿ­ರು­ವುದ­ರಿಂದ ಯಾರೂ ಈ ಕೆಲಸವನ್ನು ನಿರಾ­ಕರಿಸುವಂತಿಲ್ಲ. ಮಹಿಳೆಯರಂತೂ ಈ ಕೆಲಸ­ವನ್ನು ನಿರ್ವಹಿ­ಸು­­ತ್ತಲೇ  ಬರುತ್ತಿ­ದ್ದಾರೆ. ಆದರೆ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾ­ಲಯ, ತಂಗಲು ಸುರ­ಕ್ಷಿತ ವಸತಿ ವ್ಯವಸ್ಥೆ­ಗಳೆ ಕಲ್ಪಿಸಲಾಗ­ದಿದ್ದರೆ ಕೆಲಸ ಮಾಡುವುದಾ­ದರೂ ಹೇಗೆ ?

ನಮ್ಮ ಹಳ್ಳಿಗಳು ಮೂಲ­­ಸೌಲಭ್ಯ­ಗ­ಳಿಂದ ವಂಚಿತ­ವಾ­ಗಿದ್ದು ಮಹಿಳಾ ವಾಸಕ್ಕೆ ಯೋಗ್ಯ­ವಾ­ಗಿಲ್ಲದಿರುವುದೇ ತಲೆ­ನೋವಿನ ಸಂಗತಿ­ಯಾಗಿದೆ.  ಗ್ರಾಮಾಂತರದ ಮತಗಟ್ಟೆ­ಗಳಲ್ಲಿ ರಾತ್ರಿ ತಂಗಲು ಮಹಿಳೆಯರಿಗೆ ಸುರಕ್ಷಿ­ತತೆ ಎಂಬುದೇ ಇಲ್ಲ. ಸಾಮಾನ್ಯ­ವಾಗಿ ಶಾಲಾ–ಕಾಲೇಜು ಅಥವಾ  ಸಮು­ದಾಯ ಭವನ­ಗಳನ್ನು ಮತಗಟ್ಟೆ­ಗಳಾಗಿ ಗುರುತಿಸಲಾಗಿರುತ್ತದೆ.

ಆ ಕಟ್ಟ­ಡ­ಗ­ಳಲ್ಲಿ ನಗರ, ಜಿಲ್ಲಾ ಕೇಂದ್ರಗಳನ್ನು ಹೊರತು ಪಡಿಸಿ ಉಳಿದೆಡೆ  ವಿದ್ಯುತ್ ದೀಪ, ಕೋಣೆಗಳಿಗೆ ಬಾಗಿಲು, ಚಿಲಕ, ಕುಡಿಯುವ ನೀರು ಮುಂತಾಗಿ ಯಾವ ಸೌಲಭ್ಯಗಳೂ ಇರುವುದಿಲ್ಲ. ಚುನಾ­ವಣೆ ತುಂಬಾ ಸೂಕ್ಷ್ಮವಾದ ಸಂದರ್ಭ ಬೇರೆ. ಯಾರ ಮನೆಗೂ ಹೋಗುವ­ಂ­ತಿಲ್ಲ. ಆಡಳಿತದಲ್ಲಿ ಮನೆ ಮಾಡಿ­­ಕೊಂಡಿರುವ ಭ್ರಷ್ಟತೆ ಕಾರಣ­ವಾಗಿ ಜನತೆಯಲ್ಲಿ ಸರ್ಕಾರ ಅಥವಾ ಸರ್ಕಾರಿ ಯಂತ್ರದ ಬಗ್ಗೆ ಪೂರ್ವ­ಗ್ರಹ­ಪೀಡಿತ ದೃಷ್ಟಿಗಳು ತುಂಬಿ­ಕೊಂಡಿ­ವೆ. ಹೀಗಾಗಿ ಚುನಾವಣಾ ಸಿಬ್ಬಂದಿ ಬಗೆಗೂ ತಿರಸ್ಕಾರ, ಗುಮಾನಿ, ನಿರ್ಲಕ್ಷ್ಯ ವಿಜೃಂಭಿಸು­ತ್ತವೆ.

ಇಂಥ ಪರಿ-­ಸ್ಥಿತಿಯಲ್ಲಿ ಮಹಿಳೆಯರು ಮೂಲ ಸೌಲಭ್ಯ­ಗಳಿ­ಗಾಗಿ ಹಳ್ಳಿಗಳಲ್ಲಿ ಯಾರನ್ನೂ ಕೇಳು­ವಂತಿಲ್ಲ. ಚುನಾವಣಾ ಮುನ್ನಾ ದಿನವೇ ಬೆಳ­ಗಿನ ಜಾವ ೭ ಗಂಟೆಗೆ ಕರ್ತವ್ಯಕ್ಕೆ ಹಾಜ­ರಾಗಿ ತಮ್ಮ ಸರದಿ­ಗಾಗಿ ಕಾದು ಕೂಡ­ಬೇಕು ಅಲ್ಲಿಯೂ ಶೌಚಾಲ­ಯ­ವಿರು­ವುದಿಲ್ಲ. ಅಲ್ಲಿಂದಲೆ ನಿಯೋಜಿ­ಸ­­ಲಾದ ಹಳ್ಳಿ, ತಾಂಡಾ, ಕಗ್ಗಾಡು ಎಲ್ಲೆಲ್ಲಿಯೋ ರಸ್ತೆ ಇಲ್ಲದ ಕಡೆಯೂ ತೆರಳಬೇಕು. ಮತಗಟ್ಟೆಗೆ ತಲುಪಲು ಸಾಯಂಕಾಲ ಆಗಬಹುದು. ರಾತ್ರಿ ಕತ್ತಲಲ್ಲೂ ಚುನಾ­ವಣಾ ಪ್ರಕ್ರಿಯೆ­ಗಾಗಿ ಮತಗಟ್ಟೆ ಸಿದ್ಧ­ಪಡಿಸಿಕೊಳ್ಳಬೇಕು. ಬೆಳಗಿನ ಜಾವ ೬ ಗಂಟೆಯಿಂದಲೇ ಕೆಲಸಕ್ಕೆ ಸುರು ಹಚ್ಚಿ­ಕೊಳ್ಳಬೇಕು.

ನಿಗದಿತ ಅವಧಿಯವರೆಗೆ ಎಲ್ಲ ಕೆಲಸ ಮುಗಿಸಿ ಮತಪೆಟ್ಟಿಗೆಯನ್ನು ಸಂಬಂಧ­ಪಟ್ಟ ಅಧಿಕಾರಿಗೆ ತಲುಪಿಸಿ ಎರ­ಡನೇ ದಿನ ಮಧ್ಯ­ರಾತ್ರಿಯೋ ಅಥವಾ ಮೂರನೆ ದಿನ ಬೆಳಗಿನ ಜಾವವೋ ಬಂದು ತಲುಪಬೇಕು. ಹೆಚ್ಚು ಕಡಿಮೆ ಎರಡು  ದಿನದ ಮಟ್ಟಿಗೆ ಮಹಿಳೆಯರು ಮನೆ­ಯಿಂದ ದೂರವಿರ­ಬೇಕು. ಇಷ್ಟು ದೀರ್ಘ ಅವಧಿ­ಯಲ್ಲಿ ಮಲ–ಮೂತ್ರದ ಬಾಧೆ ತೀರಿಸಿ­ಕೊಳ್ಳುವುದು ಹೇಗೆ? ಈ ಅವಧಿಯಲ್ಲಿ ಸ್ತ್ರೀ­ಯರಿಗೆ ಮಾಸಿಕ ಸ್ರಾವ ಕಾಣಿಸಿ­ಕೊಂಡ­ರಂತೂ ನರಕವೇ ಸರಿ.  ಕೆಲವೊ­ಮ್ಮೆ­ ನಾಲ್ಕು ಪುರು­ಷರ ನಡುವೆ ಒಬ್ಬಳೇ ಮಹಿಳೆಗೆ ನಿಯೋ­ಜಿ­ಸ­ಲಾಗಿರುತ್ತದೆ. ಅಪರಿಚಿತ ಪುರುಷರ ನಡುವೆ ಇದಂತೂ ಹೇಳಿಕೊಳ್ಳಲಾಗದ ಸಂಕಟ­ವಾಗು­ತ್ತದೆ.

ನಮ್ಮ ಹಳ್ಳಿಗಳಲ್ಲಿ ಮನೆಗಳಲ್ಲಿಯೆ ಪ್ರತ್ಯೇಕ ಸ್ನಾನ­ಕೋಣೆಗಳ ಪರಿಕಲ್ಪನೆ ಇಲ್ಲ. ಸರ್ಕಾರಿ ಕಟ್ಟಡಗಲ್ಲಿ ಸ್ನಾನಗೃಹಗ­ಳನ್ನು ನಿರೀಕ್ಷಿಸುವುದು ಮೂರ್ಖ­ತನವೆ ಸರಿ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಕ್ಷಣಕ್ಕೂ ಹಳ್ಳಿಗಳಲ್ಲಿ ಜಾತಿ ತಾರತಮ್ಯ ಮಡಿ–ಮೈಲಿಗೆಯಂಥ ಮೌಢ್ಯಗಳು ತಾಂಡವವಾ­ಡು­­ತ್ತಿವೆ. ಹೀಗಾಗಿ ಅವರು ಸೌಜನ್ಯ­ಕ್ಕಾಗಿ ಅಥವಾ ಮಾನವೀಯತೆ ದೃಷ್ಟಿ­ಯಿಂದಲಾದರೂ ದಲಿತ ಹಿಂದುಳಿದ ಮಹಿಳೆಯರನ್ನು ಒಳಗೆ ಬಿಟ್ಟು­ಕೊಳ್ಳು­ವು­ದಿಲ್ಲ. ಈ  ಕಾರಣಗಳಿಂದಾಗಿ ಮಹಿ­­ಳೆ­ಯರು ಸ್ನಾನ, ಶೌಚಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗುವಂತಿಲ್ಲ.

ಬಸುರಿ, ಬಾಣಂತಿಯರು, ತೀವ್ರ ಅನಾ­ರೋಗ್ಯ­ದಿಂದ ಬಳಲುತ್ತಿರು­ವವ-­ರಿಗೆ ಈ ಕೆಲಸದಿಂದ ವಿನಾಯಿತಿ ನೀಡ­ಲಾಗಿದೆಯಾದರೂ ಅದಕ್ಕೆ ಸೂಕ್ತ­ವಾದ ವೈದ್ಯಕೀಯ ಪ್ರಮಾಣಪತ್ರ ನೀಡಬೇಕೆ­ಂದಿದೆ.  ಈ ಪ್ರಮಾಣಪತ್ರ ಪಡೆ­ಯುವ ಪ್ರಕ್ರಿಯೆಯೂ ಸುಲಭವಾಗೇನೂ ಇಲ್ಲ.
ಎಲ್ಲಿಯೂ ಪುರುಷರೊಟ್ಟಿಗೆ ಒಬ್ಬಳೇ ಮಹಿಳೆ­­ಯನ್ನು ನಿಯೋಜಿಸ­ಬಾರದು. ಅದರ­ಲ್ಲಿಯೂ ಮಹಿಳಾ ಪೊಲೀಸ್ ಪೇದೆಗಳನ್ನು ನಿಯೋಜಿ­ಸು­ವಾಗ ಒಬ್ಬಳೇ ಸಿಬ್ಬಂದಿಯನ್ನು ಹಾಕ­ಬಾ­ರದು. ಮಹಿಳಾ ಪೊಲೀಸರ ಮೇಲಾ­­­ಗು­ತ್ತಿ­ರುವ  ದೌರ್ಜನ್ಯಗಳ ದೊಡ್ಡಪಟ್ಟಿಯೇ ಇದೆ. ಒಂಟಿ ಮಹಿಳಾ ಪೇದೆ­ಗಳ ಬದಲು ಇಬ್ಬರನ್ನು ನೇಮಿಸು­ವಂತಾ­ಗಬೇಕು.

ಸಾಧ್ಯವಾದಷ್ಟು ಈ ಕೆಲಸಗಳಿಗೆ ಪುರುಷರನ್ನು ನಿಯೋಜಿಸುವುದು ಒಳಿತು. ಯಾವ ಕೆಲಸವನ್ನಾದರೂ ಮಾಡು­­ವಲ್ಲಿ ಮಹಿಳೆ­ಯರು ಹಿಂದೆ ಸರಿ­ಯುತ್ತಿಲ್ಲ. ಆದರೆ ಪುರುಷರ ಹೆಗಲೆಣೆ­ಯಾಗಿ ದುಡಿಯುತ್ತಿರುವ ಮಹಿಳೆ ಯ­ರನ್ನು ಗೌರವದಿಂದ ನೋಡಬೇಕಾದ ಹೊಣೆ­ಗಾರಿಕೆ ಸಮಾಜ ಮತ್ತು ಸರ್ಕಾ­ರಕ್ಕೆ ಇರಬೇ­ಡವೆ? ಚುನಾವಣಾ ಕೆಲಸ ಎಲ್ಲ ನೌಕರರ ಕರ್ತವ್ಯ ಎಂದಾದರೆ ಮೂಲಸೌಲಭ್ಯಗಳನ್ನು ಪಡೆ­ಯುವುದು ಹಕ್ಕಾಗಿದೆ ಎಂಬುದನ್ನು ಮರೆಯ­ದಿ­ರೋಣ.

ಇಷ್ಟಕ್ಕೂ ಕೇಂದ್ರ ಚುನಾವಣಾ ಆಯೋಗ, ಮೂಲ ಸೌಲಭ್ಯಗಳಿ­ಲ್ಲ­ದಿ­ದ್ದಲ್ಲಿ ಮಹಿಳೆ­ಯರನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸ-­­ಬಾರದೆಂದು 1996ರಲ್ಲೇ ನಿರ್ದೇ­ಶನ ನೀಡಿದೆ. ಪ್ರತಿ ಚುನಾವಣೆ ಸಂದರ್ಭ­ಗಳಲ್ಲಿ ಮಹಿ­ಳೆ­ಯರು ಈ ಸೌಲಭ್ಯ­ಗಳನ್ನು ಕುರಿತು ಧ್ವನಿ ಎತ್ತಿ­ರು­ವರಾ­ದರೂ  ಸರ್ಕಾರ ಕಿವಿಗೊಟ್ಟಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.