ADVERTISEMENT

ಜಗತ್ತು ಮತ್ತೊಂದು ಸೋಲನ್ನು ಒಪ್ಪುವುದಿಲ್ಲ!

ಸುಮಂಗಲಾ ಎಸ್‌.ಮುಮ್ಮಿಗಟ್ಟಿಬೆಂಗಳೂರು
Published 8 ಡಿಸೆಂಬರ್ 2014, 19:30 IST
Last Updated 8 ಡಿಸೆಂಬರ್ 2014, 19:30 IST

‘ಜಗತ್ತು ಮತ್ತೊಂದು ಸೋಲನ್ನು ಖಂಡಿತ­ವಾಗಿ ಒಪ್ಪುವುದಿಲ್ಲ. ಈ ಬಾರಿ ನಾವೊಂದು ದೃಢವಾದ ನಿರ್ಧಾರಕ್ಕೆ ಬರಲೇ­ಬೇಕು’. ಇದು ಪೆರುವಿನ ಪರಿಸರ ಸಚಿವ ಮ್ಯಾನ್ಯುಯಲ್ ಪುಲ್‌ಗರ್‌ ಅವರ ಹೇಳಿಕೆ. ಡಿಸೆಂಬರ್‌ 1ರಿಂದ 12ರವರೆಗೆ ಪೆರುವಿನ ರಾಜ­ಧಾನಿ ಲಿಮಾದಲ್ಲಿ ಹವಾಮಾನ ಬದ­ಲಾವಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಮ್ಮೇ­ಳನ ನಡೆಯುತ್ತಿದೆ.

ಈ ವಿಷಯದಲ್ಲಿ ಹಿಂದಿನ ಸಮಾವೇಶಗಳು ತೆಗೆದುಕೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಇಳಿಯದೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಹಾಗೂ 2015ರಲ್ಲಿ ಪ್ಯಾರಿಸ್‌­ನಲ್ಲಿ ನಡೆಯಲಿರುವ ಶೃಂಗಸಭೆಗೆ ಮೊದಲು ನಡೆಯುವ ಈ ಸಮಾವೇಶದಲ್ಲಿ ಸ್ವೀಕರಿಸುವ ಗೊತ್ತುವಳಿಯ ಮಹತ್ವದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.

196 ರಾಷ್ಟ್ರಗಳು ಭಾಗವಹಿಸುತ್ತಿರುವ ಸಮಾ­­ವೇಶ­ದಲ್ಲಿ ಮುಂದಿನ 30 ವರ್ಷಗಳ­ವರೆ­ಗಿನ ಜಾಗತಿಕ ಹವಾಮಾನದ ವಿಷಯಗಳನ್ನು ಚರ್ಚಿಸಲಾಗುತ್ತದೆ. ಏರುತ್ತಿರುವ ಜಾಗತಿಕ ತಾಪಮಾನ, ಅದರಿಂದ ಆಗಬಹುದಾದ ಹವಾ­ಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳ ನಿರ್ವಹಣೆ, ಆಹಾರ ಉತ್ಪಾದನೆ ಮೇಲಾಗುವ ಪರಿಣಾಮ, ಆರ್ಥಿಕ ವ್ಯವಸ್ಥೆಯ ಏರುಪೇರು ಮುಂತಾದ ವಿಷಯಗಳು ಪ್ರಮುಖವಾಗಲಿವೆ.

1992ರಲ್ಲಿ ಬ್ರೆಜಿಲ್‌ನ ರಿಯೋ ಡಿ ಜನೈರೊ­ದಲ್ಲಿ ನಡೆದ ಸಮಾವೇಶದ ನಂತರ ನಡೆಯುತ್ತಿ­ರುವ 20ನೇ ಸಮಾವೇಶ ಇದು. 1997ರಲ್ಲಿ ಜಪಾನಿನ ಕ್ಯೋಟೊದಲ್ಲಿ ಮಾಡಿಕೊಂಡ ಒಪ್ಪಂದದ ನಂತರದ ಬೆಳವಣಿಗೆಗಳನ್ನು ಗಮನಿಸಿ­ದರೆ, ಜಾಗತಿಕ ತಾಪಮಾನ ಏರಿಕೆಯ ವಿಷಯ­ದಲ್ಲಿ ತೆಗೆದುಕೊಂಡ ನಿರ್ಧಾರಗಳು ಕಾರ್ಯ­ರೂಪಕ್ಕೆ ಇಳಿಯುತ್ತಿಲ್ಲ ಎಂಬುದು ತಿಳಿಯುತ್ತದೆ. 2009ರ ಕೋಪನ್‌್‌ ಹೇಗನ್‌ ಶೃಂಗಸಭೆಯು ನಿರಾಶಾದಾಯಕ ಫಲಿತಾಂಶವನ್ನೇ ಕಂಡಿತು.

ಈ ಎಲ್ಲ ಹಿನ್ನೆಲೆಯಲ್ಲಿ, ಲಿಮಾದಲ್ಲಿ ನಡೆಯುತ್ತಿ­ರುವ ಸಮಾವೇಶ ಒಂದು ಮಹತ್ವದ ಹಾಗೂ ಸವಾಲಿನ ಸಮಾವೇಶ. ಏಕೆಂದರೆ ಇಲ್ಲಿ ತೆಗೆದು­ಕೊಳ್ಳುವ ಗೊತ್ತುವಳಿಗಳು, ರೂಪುಗೊಳ್ಳುವ  ಒಪ್ಪಂದ­ಗಳು, ಪ್ಯಾರಿಸ್‌ನ ಶೃಂಗಸಭೆಯಲ್ಲಿ ನಿಯಮಾವಳಿ­ಗಳಾಗಿ ರೂಪುಗೊಳ್ಳುತ್ತವೆ. ಜಗತ್ತಿನ ಪ್ರಮುಖ ರಾಷ್ಟ್ರಗಳು ಈ ಒಪ್ಪಂದಗಳಿಗೆ ಸಹಿ ಹಾಕಲಿವೆ. ಅವು ತಾವು ಜಾಗತಿಕ ತಾಪ­ಮಾನದ ಇಳಿಕೆಗೆ ಅಥವಾ ಕಡಿವಾಣಕ್ಕೆ ಏನನ್ನು ಮಾಡುತ್ತವೆ ಎನ್ನುವುದನ್ನು ಘೋಷಿಸ­ಬೇಕಾಗಿದೆ.

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಹೊರಹಾಕಿದ ಹಸಿರು ಮನೆ ಅನಿಲದ ಪರಿಣಾಮವಾಗಿ ಜಾಗತಿಕ ತಾಪಮಾನ ಏರಿಕೆ­ಯಾಗಿದೆ. ಆದ್ದರಿಂದ ಇದರ ಪರಿಹಾರಕ್ಕೂ ಅವೇ ಮೊದಲು ಮುಂದಾಗಬೇಕು, ಇದರಿಂದ ಉದ್ಭವಿ­ಸಿರುವ ವಿಪತ್ತುಗಳನ್ನು ಎದುರಿಸಲು ಬಡ ರಾಷ್ಟ್ರ­ಗಳಿಗೆ ನೆರವು ನೀಡಬೇಕು. ಜೊತೆಗೆ ಹಸಿರು ತಂತ್ರ­ಜ್ಞಾನವನ್ನು ಒದಗಿಸಿ ಅದರ ಅಳ­ವಡಿ­ಕೆಗೆ ಆರ್ಥಿಕ ನೆರವನ್ನೂ ನೀಡಬೇಕು ಎಂಬ ಈ ಹಿಂದಿನ ಬೇಡಿಕೆ ಮುಂದುವರಿಯಲಿದೆ. ಆದರೆ ಲಿಮಾದ ಸಮಾ­ವೇಶದಲ್ಲಿ ತೆಗೆದು­ಕೊಳ್ಳುವ ನಿರ್ಧಾರ­ಗಳನ್ನು ಹಿಂದಿನಂತೆ ಹಗುರ­ವಾಗಿ ಪರಿ­ಗಣಿಸುವಂತಿಲ್ಲ.

ಐ.ಐ.ಸಿ.ಸಿ. (ಇಂಟರ್‌ ಗೌರ್ನಮೆಂಟಲ್‌ ಪ್ಯಾನಲ್‌ ಆನ್‌ ಕ್ಲೈಮೇಟ್‌ ಚೇಂಜ್‌) ಕಳೆದ ತಿಂಗಳು ಬಿಡುಗಡೆ ಮಾಡಿರುವ ವರದಿ, ಜಾಗ­ತಿಕ ತಾಪಮಾನ 2100ರ ಹೊತ್ತಿಗೆ ಸರಾಸರಿ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ ಎಂದಿದೆ. ವಿಶ್ವಸಂಸ್ಥೆ ಈಗ ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ, ಇದನ್ನು 2 ಡಿಗ್ರಿ ಸೆಲ್ಸಿಯಸ್‌ಗೆ ಮಿತಿ­ಗೊಳಿಸಬೇಕಿದೆ. ಹಾಗೆಂದುಕೊಂಡರೂ 2010ಕ್ಕೆ ಹೋಲಿಸಿದಾಗ ಹಸಿರು ಮನೆ ಅನಿಲ ಹೊರ­ಹಾಕುವಿಕೆ­ಯನ್ನು ಶೇಕಡ 40ರಿಂದ 70ಕ್ಕೆ ತಗ್ಗಿಸ­ಬೇಕಾಗುತ್ತದೆ. ಇದನ್ನು ನಾವು 2050ರ ವೇಳೆಗೆ ಸಾಧಿಸಬೇಕು. 2100ರ ಹೊತ್ತಿಗೆ ಇದು ಶೂನ್ಯಕ್ಕೆ ಇಳಿಯಬೇಕು. ಇದೆಲ್ಲ ನಿಜಕ್ಕೂ ಸಾಧ್ಯವೇ?

‘ಇದುವರೆಗಿನ ಎಲ್ಲ ಒಪ್ಪಂದಗಳು, ನಿರ್ಣಯ­ಗಳು, ಗೊತ್ತುವಳಿಗಳನ್ನು ಪರಿಗಣಿಸಿದರೆ ನಾವಿ­ದಕ್ಕೆ ಬಹಳ ದೂರದಲ್ಲಿದ್ದೇವೆ’ ಎನ್ನುತ್ತಾರೆ ಡಬ್ಲ್ಯು.ಡಬ್ಲ್ಯು.ಎಫ್‌.ನ ಸ್ಯಾಮ್‌ ಸ್ಮಿತ್‌. ಹಾಗಾಗ­ದಿದ್ದರೆ ಪರಿಣಾಮ ಯೋಚಿಸಲು ಅಸಾಧ್ಯ. ಪರಿಸ್ಥಿತಿ ಈಗಿರುವಂತೆಯೇ ಮುಂದು­ವರಿದರೆ ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪ­ಮಾನ 4.8 ಡಿಗ್ರಿ ಸೆಲ್ಸಿಯಸ್‌­ನಷ್ಟು ಹೆಚ್ಚಾಗು­ತ್ತದೆ. ಇದು ಸಾಗರದ ಮಟ್ಟ­ವನ್ನು 26ರಿಂದ 82 ಸೆಂ.ಮೀ.ನಷ್ಟು ಹೆಚ್ಚಿಸು­ತ್ತದೆ. (1900ರಿಂದ 2010ರವರೆಗಿನ ಸರಾಸರಿ ಏರಿಕೆ 19 ಸೆಂ.ಮೀ.) ಇದರಿಂದ ಉಂಟಾಗುವ ನೈಸರ್ಗಿಕ ವಿಕೋಪ­ಗಳು, ಆಹಾರ ಉತ್ಪಾದನೆ ಕೊರತೆಯು ರಾಷ್ಟ್ರ­ಗಳು ನೈಸರ್ಗಿಕ ಸಂಪನ್ಮೂಲ­ಗಳಿಗಾಗಿ ಪರಸ್ಪರ ಹೊಡೆದಾಡುವಂತೆ ಮಾಡಬಹುದು.

ಈ ಮಧ್ಯೆ, ಏರುತ್ತಿರುವ ತಾಪಮಾನವನ್ನು ವಿವರಿಸುವ ಚಿತ್ರವನ್ನು ‘ನಾಸಾ’ ಬಿಡುಗಡೆ ಮಾಡಿದೆ. ಇದು ಒಂದು ಪ್ರದೇಶದಲ್ಲಿ ಬಿಡುಗಡೆ­ಯಾದ ಹಸಿರು ಮನೆ ಅನಿಲ ಹೇಗೆ ಪಸರಿಸುತ್ತದೆ ಎನ್ನುವುದನ್ನು ತೋರಿಸುತ್ತದೆ. ಉದಾ: ಪೂರ್ವ ಅಮೆರಿಕದಲ್ಲಿ ಬಿಡುಗಡೆಯಾಗುವ ಹಸಿರು ಮನೆ ಅನಿಲ ಪಶ್ಚಿಮ ಮಾರುತಗಳಿಂದಾಗಿ ಪಸರಿಸು­ತ್ತದೆ. ಚೀನಾದ ಹಸಿರು ಮನೆ ಅನಿಲವನ್ನು ಹಿಮಾಲಯ ತಡೆಹಿಡಿಯುತ್ತದೆ ಇತ್ಯಾದಿ.

ಈ ಎಲ್ಲ ವಿಷಯಗಳೂ ಲಿಮಾದಲ್ಲಿ ಭಾಗ­ವಹಿಸ­ಲಿರುವ 196 ರಾಷ್ಟ್ರಗಳಿಗೆ ತಿಳಿದಿದೆ. ಆದ್ದರಿಂದ ಹವಾಮಾನ ಬದಲಾವಣೆಯ ಭೀಕರ ಪರಿಣಾಮವಾದ ‘ಹಸಿವು’ ಕೇಂದ್ರ ವಿಷಯ­ವಾಗುವ ಸಾಧ್ಯತೆ ಇದೆ. ಮುಂದಿನ ಹವಾಮಾನ ಬದಲಾವಣೆಯ ಶೃಂಗಸಭೆಯಲ್ಲಿ ತೆಗೆದು­ಕೊಳ್ಳುವ ಒಪ್ಪಂದಗಳಿಗೆ ಪೂರ್ವಭಾವಿಯಾಗಿ ಲಿಮಾದಲ್ಲಿ ಆಹಾರ ಭದ್ರತೆ ಮತ್ತು ಹವಾ­ಮಾನ ಕುರಿತಂತೆ ವಿಶ್ಲೇಷಣೆ ನಡೆಯಲಿದೆ. ಇಥಿಯೋ­ಪಿಯಾ, ಸೆನೆಗಲ್‌, ನೇಪಾಳ, ಶ್ರೀಲಂಕಾ ಮುಂತಾದ ದೇಶಗಳು ಎದುರಿಸ­ಲಿ­ರುವ ಪರಿಸ್ಥಿತಿ ಚರ್ಚೆಗೆ ಬರಲಿದೆ. ಅದರ ನಿರ್ವ­ಹಣಾ ವಿಧಾನ­ಗಳು, ನೀಡಬೇಕಾಗುವ ಸಹಕಾರ, ಸಹಾಯ ಚರ್ಚೆಗೆ ಒಳಪಡಲಿದೆ.

ಇದನ್ನೆಲ್ಲ ನೋಡಿದಾಗ ಈ ಹಿಂದಿನ ಸಭೆ­ಗಳಂತೆ ಇದು ಕೂಡ ಕೇವಲ ಕಾರ್ಯರೂಪಕ್ಕಿಳಿ­ಯದ ಗೊತ್ತುವಳಿಗಳ ಸಮಾವೇಶವಾಗಲಿ­ದೆಯೇ ಎಂಬ ಹತಾಶೆಯೂ ಉಂಟಾಗುತ್ತದೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕ ಮಟ್ಟದಲ್ಲಿ ಜರುಗಿದ ಘಟನೆಗಳು ಮತ್ತೆ ಆಶಾ­ಭಾವವನ್ನು ಹುಟ್ಟುಹಾಕುತ್ತವೆ. ಅಧಿಕ ಪ್ರಮಾ­ಣದ ಹಸಿರು ಮನೆ ಅನಿಲವನ್ನು ಹೊರಹಾಕುತ್ತಿ­ರುವ ಚೀನಾದ ಪರಿಸ್ಥಿತಿ 2030ರ ವೇಳೆಗೆ ಇನ್ನಷ್ಟು ಹದಗೆಡಲಿದೆ.

ಈ ಹಿನ್ನೆಲೆಯಲ್ಲಿ, ಚೀನಾ ಮತ್ತು ಅಮೆರಿಕ ತಾವು ಹೊರಹಾಕುವ ಹಸಿರು ಮನೆ ಅನಿಲವನ್ನು ತಗ್ಗಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಇದರ ಪ್ರಕಾರ ಚೀನಾ ತನ್ನ ಶಕ್ತಿ ಮೂಲವಾಗಿ ಪಳೆಯುಳಿಕೆ ಇಂಧನಗಳಲ್ಲದ (ಪರಮಾಣು, ಗಾಳಿ, ಸೌರಶಕ್ತಿ) ಮೂಲಗಳಿಂದ ತನ್ನ ಶಕ್ತಿಯ ಒಟ್ಟು ಬೇಡಿಕೆಯ ಶೇಕಡ 20ರಷ್ಟನ್ನು ಪಡೆಯಲಿದೆ. ಅಮೆರಿಕ ತನ್ನ ಹಸಿರು ಮನೆ ಅನಿಲವನ್ನು ಶೇಕಡ 26ರಿಂದ 28ಕ್ಕೆ ತಗ್ಗಿಸಲಿದೆ. ಎರಡೂ ದೇಶಗಳ ಈ ಜಂಟಿ ಹೇಳಿಕೆ, ಲಿಮಾದಲ್ಲಿ ಸಭೆ ಸೇರಲಿರುವ ಇತರ ರಾಷ್ಟ್ರಗಳಿಗೆ ಪ್ರೇರಣೆಯಾಗಲಿದೆ.

ಜಾಗತಿಕ ಮಟ್ಟದ ಒಟ್ಟು ಪ್ರಮಾಣದ ಮೂರನೇ ಒಂದು ಭಾಗದಷ್ಟು ಹಸಿರು ಮನೆ ಅನಿಲವನ್ನು ಹೊರಹಾಕುತ್ತಿರುವ ಈ ರಾಷ್ಟ್ರಗಳ ಜವಾಬ್ದಾರಿಯುತ ನಿರ್ಧಾರದಿಂದ ಈ ನಿಟ್ಟಿನಲ್ಲಿ ಮತ್ತೂ ಮಹತ್ವದ ನಿರ್ಣಯಗಳು ಹೊರಬರುವ ನಿರೀಕ್ಷೆ ಇದೆ. ಭಾರತ 2020ರ ವೇಳೆಗೆ ತನ್ನ ಇಂಗಾಲದ ಡೈ ಆಕ್ಸೈಡ್‌ ಹೊರಹಾಕುವ ಪ್ರಮಾಣ­ವನ್ನು ಶೇಕಡ 20ರಿಂದ 25ಕ್ಕೆ ಇಳಿಸುವುದಾಗಿ ಹೇಳಿಕೆ ನೀಡಿದೆ. ಈ ರಾಷ್ಟ್ರಗಳು ತಮ್ಮ ಶಕ್ತಿಯ ಬೇಡಿಕೆಯನ್ನು ಪೂರೈಸಲು ತೆಗೆದುಕೊಳ್ಳುವ ಹಸಿರು ತಂತ್ರಜ್ಞಾನ ಜಗತ್ತಿನ ಇತರ ರಾಷ್ಟ್ರಗಳಿಗೆ ಕೊಡುಗೆಯಾಗಲಿದೆ ಎಂದು ಭಾವಿಸಲಾಗಿದೆ.

ಪೂರ್ವಭಾವಿಯಾಗಿ ನವೆಂಬರ್‌ 28ರಿಂದ ಲಿಮಾದಲ್ಲಿ ನಡೆದ ಯುವ ಸಮಾವೇಶದಲ್ಲಿ 900ಕ್ಕೂ ಹೆಚ್ಚು ಯುವ ನಾಯಕರು ಭಾಗ­ವಹಿಸಿ­ದ್ದರು. ಜಾಗತಿಕ ತಾಪಮಾನದ ಇಳಿಕೆಯ ಪ್ರಯತ್ನಕ್ಕಾಗಿ ಅವರು ನೀಡಿದ ಒಕ್ಕೊರಲಿನ ಕರೆಯಲ್ಲಿ ‘ಇನ್ನು ನಾವು ಕಾಯುವಂತಿಲ್ಲ, ಪರಿಹಾರಗಳನ್ನು ಕ್ರಿಯಾಶೀಲಗೊಳಿಸಬೇಕಾಗಿದೆ, ಪ್ರಯತ್ನಗಳನ್ನು ಕಾರ್ಯಗತಗೊಳಿಸಬೇಕಾಗಿದೆ’ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಈ ಸಮಾವೇಶದ ದಿನಗಳು ಜಾಗ­ತಿಕ ತಾಪಮಾನದ ಏರಿಕೆಯನ್ನು ಮಿತಿಗೊಳಿಸುವ ರಾಷ್ಟ್ರಗಳ ಪ್ರಯತ್ನದ ಪ್ರಮುಖ ದಿನಗಳಾಗಲಿವೆ.

ಸಮಾವೇಶದಲ್ಲಿ ಭಾಗವಹಿಸುತ್ತಿರುವ  ಪ್ರತಿನಿಧಿ­ಗಳು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ವರ್ಷ ರಾಷ್ಟ್ರಗಳು ಮಾಡಿಕೊಳ್ಳುವ ಒಪ್ಪಂದ­ಗಳಿಗೆ ಅಡಿಪಾಯವಾಗಲಿವೆ. ಪ್ರಮುಖ ಸಮಾ­ವೇಶ­ದೊಂದಿಗೆ ನಡೆಯುವ ಇತರ ಸಭೆಗಳೂ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿವೆ. ಪುರಾತನ ಪೆರುವಿನ ಲಿಮಾ ನಗರ ಮನು­ಕುಲದ ಇತಿಹಾಸದಲ್ಲಿ ಪ್ರಮುಖ ಘಟನೆ­ಯೊಂದಕ್ಕೆ ಸಾಕ್ಷಿಯಾಗಲಿದೆಯೇ ಎನ್ನುವುದನ್ನು ಕಾಯ್ದು ನೋಡಬೇಕಾಗಿದೆ. ಅದೀಗ ಅನಿ­ವಾರ್ಯ ಎನ್ನುವುದೂ ಅಷ್ಟೇ ನಿಜ. ಏಕೆಂದರೆ ಮತ್ತೊಂದು ಸೋಲನ್ನು ಜಗತ್ತು ಒಪ್ಪುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.