ನನ್ನ ಲೇಖನ ‘ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜಾಗುತ್ತಿದೆಯೇ?’ (ಪ್ರಜಾವಾಣಿ, ಏ.10) ಸಂಬಂಧಿಸಿ ಮೂರು ಪ್ರತಿಕ್ರಿಯೆಗಳು ಪ್ರಕಟವಾಗಿವೆ. ಈ ಸಂದರ್ಭದಲ್ಲೇ ನನಗೆ ದೂರವಾಣಿ ಮೂಲಕ, ಆರ್‌ಎಸ್ಎಸ್‌ನ ಸಕ್ರಿಯ ಕಾರ್ಯಕರ್ತರೊಬ್ಬರು– ನೀವು ಬರೆದಿರುವುದು ನೂರಕ್ಕೆ ನೂರು ನಿಜ, ಬಿಜೆಪಿಯನ್ನು ಆಡಿಸುತ್ತಿರುವುದು ಆರ್‌ಎಸ್ಎಸ್, ಅದನ್ನು ಸೇರಿಸಿ ಬರೆಯಬೇಕಾಗಿತ್ತು ಎಂದು ಕಂಗಾಲಾಗಿ ಹೇಳಿದ್ದು ನನ್ನ ಕಿವಿಯಲ್ಲಿ ಇನ್ನೂ ಕೇಳಿಸುತ್ತಿದೆ. ಆರ್ಯ ಗೀಳಿನ ಹಿಟ್ಲರ್‌ನನ್ನು ಆರ್‌ಎಸ್ಎಸ್ ಆರಾಧಿಸುವುದು ಗೊತ್ತಿದೆ.
ಹಾಗೆ ಗಾಂಧಿ ಅವರನ್ನು ಆರ್‌ಎಸ್‌ಎಸ್‌ನ ಗೋಡ್ಸೆ ಕೊಂದಿದ್ದೂ ಗೊತ್ತಿದೆ. ಆದರೆ ನಮ್ಮ ನಾರಾಯಣಾಚಾರ್ಯರು ಗಾಂಧಿ ಅವರನ್ನು ಕೊಂದದ್ದು ಗೋಡ್ಸೆ ಅಲ್ಲವೆಂದೂ ಗೋಡ್ಸೆಯ ತೋಳಿನ ಸಂಧಿಯಿಂದ ಪಿಸ್ತೂಲ್ ಹಿಡಿದ ಕೈಯೊಂದು ಬಂದು ಗುಂಡು ಹಾರಿಸಿತೆಂದೂ ಎಷ್ಟು ಖಚಿತವಾಗಿ ಹೇಳುತ್ತಾರೆಂದರೆ ಆ ಕೈ ನಾರಾಯಣಾಚಾರ್ಯರದ್ದೇ ಆಗಿಲ್ಲದಿದ್ದರೆ ಅಷ್ಟೊಂದು ಖಚಿತವಾಗಿ ಹೇಳುವುದಕ್ಕೆ ಅಸಾಧ್ಯ ಎಂಬಂತಿದೆ. ಜೊತೆಗೆ ಆರ್‌ಎಸ್ಎಸ್ ನಮ್ಮ ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಗಳನ್ನು ಇತ್ತೀಚಿನವರೆಗೂ ಒಪ್ಪದೇ ಇದ್ದದ್ದೂ ಗೊತ್ತಿದೆ.
ಸಮಾನತೆಯ ಸಂವಿಧಾನದ ಬಗ್ಗೆ ಅದಕ್ಕಿರುವ ಅಸಹನೆಯೂ ಗೊತ್ತಿಲ್ಲದ ವಿಚಾರವೇನಲ್ಲ. ಈ ಹಿನ್ನೆಲೆಯಲ್ಲಿ ಆರ್‌ಎಸ್ಎಸ್‌ಗೆ ಸೈದ್ಧಾಂತಿಕವಾಗಿಯೇ ಸರ್ವಾಧಿಕಾರಿ ನಿರಂಕುಶ ಆಡಳಿತದತ್ತ ಒಲವಿದೆ. ಇದಕ್ಕೆ ತಕ್ಕಂತೆ ಮೋದಿಯವರ ಉದ್ಭವವಾಗಿದೆ. ಈಗ ಅದನ್ನು ವಿರೋಧಿಸಬೇಕಾಗಿದೆ. ಹಾಗೆಯೇ ಇಂದಿರಾ ಗಾಂಧಿಯವರು ಸೈದ್ಧಾಂತಿಕವಾಗಿ ಅಲ್ಲದಿದ್ದರೂ ಅಧಿಕಾರ ಉಳಿಸಿಕೊಳ್ಳಲು ಸರ್ವಾಧಿಕಾರದತ್ತ ಹೆಜ್ಜೆ ಇಟ್ಟಾಗ ನನ್ನನ್ನೂ ಸೇರಿಸಿಕೊಂಡು ನಾವೆಲ್ಲಾ ಅದನ್ನು ವಿರೋಧಿಸಿದ್ದೇವೆ. ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ ಬಂದಾಗ ಅವರು, ಇವರು ಎನ್ನುವ ಪ್ರಶ್ನೆಯೇ ಬರುವುದಿಲ್ಲ.
ಹಾಗೆ ವಾದಿರಾಜ ಅವರು ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಪಟ್ಟಿ ಮಾಡಿಕೊಟ್ಟಿದ್ದಾರೆ. ನಿಜ, ಹಾಲಿ ಕಾಂಗ್ರೆಸ್ ಸರ್ಕಾರದ ತಟ್ಟೆಯಲ್ಲಿ ನೊಣಗಳು ಬಿದ್ದಿವೆ. ಕೆಲವೇ ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ತಟ್ಟೆಯಲ್ಲಿ ಹೆಗ್ಗಣಗಳೇ ಬಿದ್ದಿದ್ದವಲ್ಲಾ? ದಯವಿಟ್ಟು ವಾದಿರಾಜರು ಅದನ್ನೂ ನೋಡಬೇಕು. ಜೊತೆಗೆ ನಮ್ಮ ಸುರೇಂದ್ರ ಕೌಲಗಿಯವರು ‘ಭ್ರಷ್ಟಾಚಾರ ಮತ್ತು ಕೋಮುವಾದದ ಆಕ್ಷೇಪಣೆಗೆ ಎರಡೂ ಪಕ್ಷಗಳು ಗುರಿಯಾಗಿವೆ’ ಎನ್ನುತ್ತಾರೆ. ಇಲ್ಲೊಂದು ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸಬೇಕು.
ಕಾಂಗ್ರೆಸ್‌ನವರದು ಕಳ್ಳರಂತೆ ಕದ್ದು ಮುಚ್ಚಿ ಮಾಡುವ ಭ್ರಷ್ಟಾಚಾರ. ಬಿಜೆಪಿಯವರು ಅದನ್ನು ದರೋಡೆಕೋರರಂತೆ ರಾಜಾರೋಷವಾಗಿ ಮಾಡುತ್ತಾರೆ, ಹಣವನ್ನು ಎಣಿಸುವ ಮೆಷಿನ್ ತಮ್ಮ ಮಕ್ಕಳ ಆಟದ ಸಾಮಾನು ಎಂದು ನಗುತ್ತಾ ಹೇಳುತ್ತಾರೆ, ಸಮಾಜದಲ್ಲಿ ನಿರ್ಲಜ್ಜತೆ ಉಂಟು ಮಾಡಿ ಭ್ರಷ್ಟಚಾರವನ್ನೂ ಒಪ್ಪಿತ ಮೌಲ್ಯ ಮಾಡಿಬಿಡುತ್ತಾರೆ. ಈ ಅಪಾಯವನ್ನು ಕಾಣಬೇಕು.
ಹಾಗೆಯೇ ಕೋಮುವಾದದ ಬಗ್ಗೆ–ಸಮಾಜದಲ್ಲಿ ಜಾತಿ ಮತ ಕೋಮುಗಳ ವಿಷಮತೆ ಇದೆ, ನಿಜ. ಕಾಂಗ್ರೆಸ್ ಈ ವಿಷಮತೆಗಳನ್ನು ಬಳಸಿಕೊಂಡು ರಾಜಕಾರಣ ಮಾಡಿದರೆ ಬಿಜೆಪಿ ಕೋಮುವಾದವನ್ನೇ ಸೈದ್ಧಾಂತಿಕಗೊಳಿಸಿ ದೇಶವನ್ನೇ ಬಂಡವಾಳವಾಗಿಸಿ ರಾಜಕಾರಣ ಮಾಡುತ್ತದೆ. ಈ ವ್ಯತ್ಯಾಸ, ಈ ಅಪಾಯವನ್ನೂ ಗಮನಿಸಬೇಕು.
ಅದಕ್ಕಾಗೇ, ಸುರೇಂದ್ರ ಕೌಲಗಿಯವರು ಹೇಳುವಂತೆ–‘ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರ ರಹಿತ ಕೋಮುವಾದ ರಹಿತ’ ಇರುವುದರಿಂದಲೇ ಸರ್ವೋದಯ ಕರ್ನಾಟಕ ಪಕ್ಷವು ಬೆಂಗಳೂರು ಸೇರಿದಂತೆ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿಯನ್ನೇ ಬೆಂಬಲಿಸುತ್ತದೆ–ನಾಳಿನ ರಾಜಕಾರಣಕ್ಕಾಗಿ. ಹಾಗೆಯೇ ತಲೆಯ ಮೇಲೆ ತೂಗುತ್ತಿರುವ ಸರ್ವಾಧಿಕಾರದ ಕತ್ತಿಯ ಭೀತಿಯಿಂದಾಗಿ ಉಳಿದೆಡೆ ಕಾಂಗ್ರೆಸ್‌ಗೆ ಬೆಂಬಲಿಸುತ್ತಿದೆ. ಜೀವ ಉಳಿಸಿಕೊಳ್ಳುವ ಸಂದರ್ಭದಲ್ಲಿನ ಎಚ್ಚರ, ವಿವೇಚನೆ, ವಿವೇಕ ಈ ನಿಲುವಿನಲ್ಲಿ ಇದೆ ಎಂದುಕೊಂಡಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.