-ಡೇವಿಡ್ ಬ್ರೂಕ್ಸ್
**
ಅಮೆರಿಕದ ರಾಷ್ಟ್ರೀಯ ಗ್ರಂಥಾಲಯ (ದ ಲೈಬ್ರರಿ ಆಫ್ ಕಾಂಗ್ರೆಸ್) ವಾಷಿಂಗ್ಟನ್‌ನ ಅಥವಾ ಇಡೀ ಅಮೆರಿಕದ ಅತ್ಯಂತ ಭವ್ಯ ಕಟ್ಟಡಗಳಲ್ಲಿ ಒಂದು. ಇದು ಭಾರಿ ಮಹತ್ವದ್ದು ಮತ್ತು ಪ್ರಕ್ಷುಬ್ಧ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದು. ಈ ಕಟ್ಟಡದ ವಿನ್ಯಾಸ ಮತ್ತು ನಿರ್ಮಾಣಕ್ಕೆ ಕೈಗಾರಿಕೀಕರಣ ಅಮೆರಿಕವನ್ನು ಪರಿವರ್ತಿಸಿದ 19ನೇ ಶತಮಾನದ ಕೊನೆಯ 23 ವರ್ಷಗಳು ಬೇಕಾದವು. ಇದಕ್ಕೂ ಹಿಂದಿನ 250 ವರ್ಷಗಳಲ್ಲಿ ಬಂದ ಅಷ್ಟೂ ಜನರಿಗಿಂತ ಹೆಚ್ಚು ಜನರು ಈ ಸಂದರ್ಭದಲ್ಲಿ ಅಮೆರಿಕಕ್ಕೆ ವಲಸೆ ಬಂದರು.
ಈ ಅವ್ಯವಸ್ಥೆಯ ದೇಶವನ್ನು ಒಟ್ಟಾಗಿ ಇರಿಸುವುದೇ ಈ ಕಟ್ಟಡದ ಹಿಂದಿನ ಮುಖ್ಯ ವಿಚಾರಧಾರೆ. ಓದುವ ಮುಖ್ಯ ಕೊಠಡಿಯ ಗುಮ್ಮಟದೊಳಗೆ ಇರುವ ಚಿತ್ರಗಳಲ್ಲಿ ಇದು ವ್ಯಕ್ತವಾಗಿದೆ. ಗುಮ್ಮಟದ ಒಳಗೆ ಹಲವು ಮಹತ್ವದ ಚಿತ್ರಗಳನ್ನು ಕೆತ್ತಲಾಗಿದೆ. ಪ್ರತಿ ಚಿತ್ರವೂ ಮಾನವ ಇತಿಹಾಸದ ಶ್ರೇಷ್ಠ ನಾಗರಿಕತೆ ಮತ್ತು ಮಾನವನ ವಿಕಾಸಕ್ಕೆ ಕೊಡುಗೆ ನೀಡಿದ ನಾಗರಿಕತೆಗಳ ಅಂಶಗಳನ್ನು ಒಳಗೊಂಡಿದೆ.
ಈಜಿಪ್ಟನ್ನು ಪ್ರತಿನಿಧಿಸುವ ಚಿತ್ರದಿಂದ (ಲಿಖಿತ ದಾಖಲೆಗಳು) ಇದು ಆರಂಭಗೊಳ್ಳುತ್ತದೆ. ಇದು ಮುಂದುವರಿದು ಪ್ಯಾಲೆಸ್ಟೀನ್‌ನ ದಕ್ಷಿಣದ ಗುಡ್ಡಗಾಡು ಪ್ರದೇಶ ಜೂಡಾ (ಧರ್ಮ), ಗ್ರೀಸ್ (ತತ್ವಶಾಸ್ತ್ರ), ಇಸ್ಲಾಂ (ಭೌತಶಾಸ್ತ್ರ), ಇಟಲಿ (ಚಿತ್ರಕಲೆ), ಜರ್ಮನಿ (ಮುದ್ರಣ), ಸ್ಪೇನ್ (ಆವಿಷ್ಕಾರ), ಇಂಗ್ಲೆಂಡ್ (ಸಾಹಿತ್ಯ), ಫ್ರಾನ್ಸ್ (ಮುಕ್ತಿ) ಮೂಲಕ ಹಾದು ಅಮೆರಿಕದಲ್ಲಿ (ವಿಜ್ಞಾನ) ಸಂಯೋಜನೆಗೊಳ್ಳುತ್ತದೆ.
ಈ ಕತೆಯಲ್ಲಿ, ಪ್ರಗತಿಯೆಡೆಗಿನ ಮನುಷ್ಯನ ಸಂಚಾರದಲ್ಲಿ ಅಮೆರಿಕವನ್ನು ಮುಂಚೂಣಿಯಲ್ಲಿ ನಿಲ್ಲಿಸಲಾಗಿದೆ. ಅಮೆರಿಕವು ಇತರ ಜನರ ಕೊಡುಗೆಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿದೆ. ವಿವಿಧ ಭಾಗಗಳ ಜನರ ಜತೆ ಆಧ್ಯಾತ್ಮಿಕ ಸಂಬಂಧವನ್ನು ಹೊಂದಿದ್ದು ಅವರೆಲ್ಲರಿಗೂ ಇಲ್ಲಿ ಅಸಾಧಾರಣವಾದ ಪಾತ್ರ ಇದೆ. ಇತಿಹಾಸ ಅಮೆರಿಕದಲ್ಲಿ ಸಂಯೋಜನೆಗೊಳ್ಳುತ್ತದೆ. ಇದು ಒಂದು ಜೀವನ ವಿಧಾನವನ್ನು ಮುಂದೊಡ್ಡುತ್ತದೆ ಮತ್ತು ಎಲ್ಲೆಡೆಯೂ ಜನರಿಗೆ ಘನತೆಯನ್ನು ನೀಡುವ ಪ್ರಜಾಸತ್ತಾತ್ಮಕ ಮಾದರಿಯನ್ನು ಒದಗಿಸುತ್ತದೆ. ಅಮೆರಿಕನ್ನರು ಮಾಡುವ ಕೆಲಸ ಅವರಿಗಾಗಿ ಮಾತ್ರವಲ್ಲ, ಮಾನವ ಕುಲದ ಎಲ್ಲರಿಗಾಗಿ.
ಈ ಐತಿಹಾಸಿಕ ಕತೆಯೇ ಅಮೆರಿಕದ ನಿಜವಾದ ಮಿಥ್ಯೆ. ನಾವು ಮಕ್ಕಳಾಗಿದ್ದಾಗ ಮತ್ತು ವಯಸ್ಕರಾದ ಮೇಲೆ ಕೂಡ ಅತ್ಯಂತ ಆಳವಾದ ಸತ್ಯಗಳನ್ನು ಮಿಥ್ಯೆಗಳ ಮೂಲಕವೇ ಕಲಿಯುತ್ತೇವೆ. ಮಿಥ್ಯೆಗಳು ಏನನ್ನೂ ಸಾಧಿಸಲು ಯತ್ನಿಸುವುದಿಲ್ಲ ಅಥವಾ ವಾದವೊಂದನ್ನು ಮುಂದಿಡುವುದಿಲ್ಲ. ಅವು ನಮ್ಮಲ್ಲಿ ಆಳವಾಗಿ ನೆಲೆಯಾಗಿ ನಾವು ಯಾರು ಎಂಬುದನ್ನು ನಮಗೆ ವಿವರಿಸುತ್ತವೆ. ಸಾರ್ವತ್ರಿಕ ಪವಿತ್ರ ವಾಸ್ತವಗಳ ಜತೆಗೆ ನಮ್ಮ ಜೀವನ ಹೊಂದಿರುವ ನಂಟನ್ನು ಅವು ಹಿಡಿದಿಡುತ್ತವೆ. ಮಿಥ್ಯೆಯಲ್ಲಿ ನಮ್ಮ ಮುಂದಿನ ಭೌತಿಕ ಅಂಶಗಳು ಕೂಡ ಯಾವುದೋ ಶಾಶ್ವತವಾದ ಒಂದರ ಅಭಿವ್ಯಕ್ತಿ; ಇದು ನಮ್ಮ ಜೀವನವನ್ನು ಯಾವುದೋ ಸೀಮಾತೀತ ದಿಗಂತದಲ್ಲಿ ಇರಿಸಿ ನೋಡುತ್ತದೆ.
ಜಾರ್ಜ್ ವಾಷಿಂಗ್ಟನ್‌ನಿಂದ ಲಿಂಕನ್, ರೂಸ್‌ವೆಲ್ಟ್, ರೇಗನ್‌ವರೆಗೆ ಎಲ್ಲರೂ ಅಮೆರಿಕದ ಆ ಮಿಥ್ಯೆಯನ್ನು ಅಪ್ಪಿಕೊಂಡಿದ್ದಾರೆ, ಜೀವಿಸಿದ್ದಾರೆ. ಜಾನ್ ವಿನ್‌ಥ್ರಾಪ್ ಮತ್ತು ವಾಲ್ಟ್ ವಿಟ್ಮನ್‌ನಂತಹವರು ಅದರೊಂದಿಗೆ ಗುದ್ದಾಡಿದ್ದಾರೆ. ಇದು ಅಮೆರಿಕಕ್ಕೆ ಒಂದು ಧ್ಯೇಯವನ್ನು ಕೊಟ್ಟಿದೆ- ಅದು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಪಸರಿಸುವುದು. ಇದು ನಮಗೆ ಇತರರನ್ನು ಬರಮಾಡಿಕೊಳ್ಳುವ, ಸೌಜನ್ಯದ ಮನಸ್ಥಿತಿಯನ್ನು ಕೊಟ್ಟಿದೆ. ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಜನಸಮೂಹವನ್ನು ಅಪ್ಪಿಕೊಂಡು ಅವರಿಗೆ ಅವರ ಸಾಮರ್ಥ್ಯವೇನು ಎಂಬುದನ್ನು ಅರಿವಾಗಿಸುವ ಮನಸ್ಥಿತಿಯನ್ನು ನಮ್ಮಲ್ಲಿ ಮೂಡಿಸಿದೆ.
ಆದರೆ ಈಗ ಈ ಮಿಥ್ಯೆಗೆ ಹೊಡೆತ ಬಿದ್ದಿದೆ. ನಾಗರಿಕತೆಯ ಇತಿಹಾಸವನ್ನು ಅಥವಾ ಅಮೆರಿಕದ ನಿಜವಾದ ಇತಿಹಾಸದ ಬದಲಿಗೆ ಆಕಾರರಹಿತ ಬಹುಸಂಸ್ಕೃತಿಯನ್ನು ಕಲಿಸುವ ಶಿಕ್ಷಣ ವ್ಯವಸ್ಥೆ ಈ ಮಿಥ್ಯೆಯನ್ನು ಗಾಯಗೊಳಿಸಿದೆ. ದೂರದೃಷ್ಟಿಯನ್ನು ಕಲ್ಪಿಸಿಕೊಳ್ಳಲಾಗದ ಬೌದ್ಧಿಕ ಸಂಸ್ಕೃತಿಯೂ ಅದಕ್ಕೆ ಗಾಯಗಳನ್ನು ಮಾಡಿದೆ. ದೇಶಪ್ರೇಮದ ಬಗ್ಗೆ ಅಸಮಾಧಾನ ಹೊಂದಿರುವ ಎಡದಲ್ಲಿರುವ ಜನರು ಮತ್ತು ಅಮೆರಿಕದ ಧ್ಯೇಯವನ್ನು ಸಾಧಿಸಲು ಅಗತ್ಯವಾದ ಸಂಯುಕ್ತ ರಾಷ್ಟ್ರದ ಬಗ್ಗೆ ಅಸಹನೆ ಇರುವ ಬಲದ ಜನರು ಇದನ್ನು ಗಾಯಗೊಳಿಸಿದ್ದಾರೆ.
ಇರಾಕ್‌ನ ಅವಮಾನ ಮತ್ತು ಹಣಕಾಸು ಬಿಕ್ಕಟ್ಟುಗಳು ಕೂಡ ಈ ಮಿಥ್ಯೆಯನ್ನು ಗಾಸಿಗೊಳಿಸಿವೆ. ದುಡಿಯುವ ವರ್ಗವನ್ನು ನಿರ್ಲಕ್ಷಿಸಿದ ಸಾಂಸ್ಕೃತಿಕ ಮೇಲ್ಮೆ ದೇಶವನ್ನು ಒಂದಾಗಿ ಇರಿಸುವ ವಿಶ್ವಾಸವನ್ನು ಮುರಿದು ಹಾಕಿದೆ.
ಈಗ ಡೊನಾಲ್ಡ್ ಟ್ರಂಪ್ ಮತ್ತು ಸ್ಪೀಫನ್ ಬ್ಯಾನನ್ ತರಹದವರು ‘ಪ್ರತಿ–ಮಿಥ್ಯೆ’ಯೊಂದಿಗೆ ಬಂದಿದ್ದಾರೆ. ಅವರು ಹೇಳುತ್ತಿರುವ ಮಿಥ್ಯೆ ನಮಗೆ ಅಪರಿಚಿತವಾದುದು, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ರಷ್ಯಾದ ಮಿಥ್ಯೆ. ದೇಶದ ಕೇಂದ್ರ ಭಾಗದಲ್ಲಿ ಇರುವವರು ಪರಿಶುದ್ಧವಾದ ಜನ ಮತ್ತು ಅವರೇ ಕಷ್ಟ ನಷ್ಟ ಉಂಡು ಎಲ್ಲರಿಗೆ ಬೇಕಾದ ಆಹಾರವನ್ನು ಉತ್ಪಾದಿಸುತ್ತಾರೆ ಎಂಬುದು ಈ ಹೊಸ ಮಿಥ್ಯೆ. ರಷ್ಯಾದ ಪ್ರತಿಗಾಮಿಗಳ ಮಿಥ್ಯೆಯೂ ಇದೇ ಆಗಿದೆ. ಆದರೆ ಪರಿಶುದ್ಧ ಅನ್ನದಾತ ಬೆದರಿಕೆಗೆ ಒಳಗಾಗಿದ್ದಾನೆ. ನಗರೀಕೃತ ಜನರು ಮತ್ತು ವಿದೇಶಿ ಪ್ರಭಾವದ ಭ್ರಷ್ಟಾಚಾರ ಈ ಬೆದರಿಕೆ ಒಡ್ಡಿದೆ.
ಅಮೆರಿಕದ ನಿಜವಾದ ಮಿಥ್ಯೆ ಚಲನಶೀಲ ಮತ್ತು ವಿಶ್ವಾತ್ಮಕ- ಅದು ಅಪರಿಚಿತರನ್ನು ಬರಮಾಡಿಕೊಳ್ಳುತ್ತದೆ ಮತ್ತು ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಟ್ರಂಪ್ ಮತ್ತು ಬ್ಯಾನನ್ ಅವರು ರಾಷ್ಟ್ರೀಯ ರಕ್ತ ಸಂಚಾರಕ್ಕೆ ಸೇರಿಸಿರುವ ರಷ್ಯಾದ ಮಿಥ್ಯೆ ಜಡ ಮತ್ತು ಸಂಕುಚಿತ. ಇದು ಗೋಡೆ ಕಟ್ಟುವ ಚಿಂತನೆ. ಆ ದೇಶದ ನೆಲೆಗಟ್ಟು ಅವರ ಹಳೆಯ ಕಾಲದ ನೆನಪುಗಳ ಭಾವುಕತೆಯೇ ಹೊರತು ಎಲ್ಲರನ್ನೂ ಒಳಗೊಂಡ ಭವಿಷ್ಯ ಅಲ್ಲ.
ವಿಚಿತ್ರವೆಂದರೆ, ಟ್ರಂಪ್-ಬ್ಯಾನನ್ ಅವರ ಮಿಥ್ಯೆಯೇ ಜಯಶಾಲಿಯಾಗುತ್ತಿದೆ. ಇದರಿಂದ ರೂಪುಗೊಳ್ಳುತ್ತಿರುವ ನೀತಿಗಳು ಆಶ್ಚರ್ಯಕರ ರೀತಿಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ನಿರಾಶ್ರಿತರ ಮೇಲಿನ ನಿಷೇಧಕ್ಕೆ ಭಾರಿ ಬೆಂಬಲ ಇದೆ. ವ್ಯಾಪಾರ ಸ್ಥಗಿತಕ್ಕೆ ಜನಪ್ರಿಯತೆ ಇದೆ. ಗೋಡೆ ಕಟ್ಟುವ ಚಿಂತನೆ ಗೆಲುವಿನತ್ತ ಸಾಗುತ್ತಿದೆ.
ಟ್ರಂಪ್ ಮತ್ತು ಬ್ಯಾನನ್ ಸಂಯೋಜನೆ ಅಮೆರಿಕನ್ನರ ದೇಶಪ್ರೇಮದ ಟೊಳ್ಳುತನವನ್ನು ಬಹಿರಂಗಪಡಿಸಿದೆ. ರಾಷ್ಟ್ರೀಯ ಶ್ರೇಷ್ಠತೆಯ ಪರಿಕಲ್ಪನೆ ಎಷ್ಟು ದುರ್ಬಲವಾಗಿದೆ ಎಂಬುದೂ ಬಹಿರಂಗವಾಗಿದೆ. ಅಮೆರಿಕದ ಶ್ರೇಷ್ಠತೆಯ ಪರಿಕಲ್ಪನೆಯ ಬದಲಿಗೆ ಪ್ರತಿಗಾಮಿ ಮತ್ತು ಅಪರಿಚಿತವಾದ ಪರಿಕಲ್ಪನೆಯನ್ನು ಟ್ರಂಪ್ ಮತ್ತು ಬ್ಯಾನನ್ ಎಷ್ಟು ಸುಲಭವಾಗಿ ಸ್ಥಾಪಿಸಿದರು ಎಂಬುದೂ ನಮ್ಮ ಗಮನಕ್ಕೆ ಬಂದಿದೆ.
ರಾಷ್ಟ್ರೀಯ ಅಸ್ಮಿತೆಗೆ ಸಂಬಂಧಿಸಿದ ದೊಡ್ಡ ಯುದ್ಧದ ನಡುವಲ್ಲಿ ನಾವು ಇದ್ದೇವೆ. ಉಗ್ರವಾದಿ ಇಸ್ಲಾಂ ವಿರುದ್ಧದ ಸಂಘರ್ಷ ಇದು ಎಂದು ನಾವು ಭಾವಿಸಿದ್ದೆವು. ಅದರೆ ನಾವು ಈಗ ಟ್ರಂಪ್, ಬ್ಯಾನನ್, ಪುಟಿನ್, ಲಿ ಪೆನ್ ಮತ್ತು ಪರಾಜ್ ಅವರು ಹರಡಿರುವ ಹೊಸ ರಾಷ್ಟ್ರೀಯ ಮಿಥ್ಯೆಗಳ ವಿರುದ್ಧ ಹೋರಾಡುತ್ತಿದ್ದೇವೆ.
ವಲಸೆ, ವಿದೇಶಾಂಗ ನೀತಿ ಮತ್ತು ವ್ಯಾಪಾರದ ಬಗ್ಗೆ ನಾವು ವಾದಿಸಬಹುದು. ಆದರೆ ಅಮೆರಿಕದ ಅರ್ಥವನ್ನು ಪುನಶ್ಚೇತನಗೊಳಿಸಿ ಮರುಸ್ಥಾಪಿಸುವವರೆಗೆ ಯಾವುದೂ ಸರಿ ಹೋಗದು. ಲಿಂಕನ್ ಪ್ರತಿಪಾದಿಸಿದ, ಎಲ್ಲರಿಗೂ ಸ್ವಾತಂತ್ರ್ಯ ಮತ್ತು ಸಮೃದ್ಧಿಯನ್ನು ಕೊಡುವ ಧ್ಯೇಯಬದ್ಧ ಪ್ರಯೋಗದ ಭಾಗವಾಗಿ ನಾವು ಇದ್ದೇವೆಯೇ? ಎಮ್ಮಾ ಲಾಜರಸ್ ಅದನ್ನು ಹೀಗೆ ಬರೆದಿರಿಸಿದ್ದಾರೆ: ‘ಪ್ರಜಾಪ್ರಭುತ್ವ ಮತ್ತು ಸಮೃದ್ಧಿಯನ್ನು ಹರಡುವ ದೂರದೃಷ್ಟಿಯ ಕೆಲಸಕ್ಕೆ ನಾವು ನಿಯೋಜಿತರಾಗಿದ್ದೇವೆ; ಅಪರಿಚಿತರನ್ನು ಬರಮಾಡಿಕೊಳ್ಳುವುದು ಮತ್ತು ಇಡೀ ಮಾನವ ಕುಲದ ಎಲ್ಲರನ್ನು ಸಹೋದರ ಸಹೋದರಿಯರೆಂದು ಪರಿಗಣಿಸುವುದು, ನಮ್ಮ ಸಮಾನ ಧ್ಯೇಯಕ್ಕೆ ಎಲ್ಲರೂ ಮುಖ್ಯವಾಗಿರುವುದರಿಂದ ಪರಸ್ಪರರನ್ನು ನೋಡಿಕೊಳ್ಳುವುದು’. ಅಥವಾ, ಅಮೆರಿಕ ಕೂಡ ಭೀತಿಯ ಜಗತ್ತಿನಲ್ಲಿ ಮುದುರಿ ಬಿದ್ದಿರುವ ಮತ್ತೊಂದು ದೇಶ ಮಾತ್ರವೇ?
(ದಿ ನ್ಯೂಯಾರ್ಕ್ ಟೈಮ್ಸ್)