ADVERTISEMENT

ತಾಯಿಯ ಬಳಿ ಹೋಗಲು ಕಾನೂನು ಬೇಕಿಲ್ಲ...

ಜಿ.ಬಿ.ಹರೀಶ
Published 14 ಡಿಸೆಂಬರ್ 2014, 19:30 IST
Last Updated 14 ಡಿಸೆಂಬರ್ 2014, 19:30 IST

ಸŅತಃ ಭಗವದ್ಗೀತೆಯ ಅಭಿಮಾನಿಗಳನ್ನು ಮುಜು­ಗರಕ್ಕೆ ಸಿಲುಕಿಸುವಂತೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಮಾತನಾಡಿದ್ದಾರೆ. ಗೀತೆಯ ಹಿನ್ನೆಲೆ ಹಾಗೂ ಭಾರತೀಯ ಸಾಂಸ್ಕೃತಿಕ ಪಠ್ಯಗಳು ಯುಗಯುಗಗಳಿಂದ ನೀಡುತ್ತಾ ಬಂದಿ­ರುವ ಸಾಂಸ್ಕೃತಿಕ ಕೊಡುಗೆಯ ಸರಿಯಾದ ಪರಿಚಯ ಇಲ್ಲದವರು ಮಾತ್ರ ಹೀಗೆ ಮಾತನಾಡ­ಬಹುದು. ಹಿಂದುತ್ವದ ವಲಯದಲ್ಲೇ 1947ರ ಮೊದಲು ಮತ್ತು ನಂತರ ಗೀತೆಯ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ.

ಇದಲ್ಲದೆ ಕಮ್ಯುನಿಸ್ಟ್‌ ಭೌತವಾದಿ ಚಿಂತನಾ ಧಾರೆಯ ಚಿಂತಕರೂ ಈ ಕುರಿತು ಬರೆ­ದಿ­­ದ್ದಾರೆ. ತಕ್ಷಣಕ್ಕೆ ನನಗೆ ಎಸ್‌.ಜಿ. ಸರ್ದೇಸಾಯಿ ಮತ್ತು ದಿಲೀಪ್ ಬೋಸ್‌ ಅವರು ಬರೆದಿರುವ ‘ಮಾರ್ಕ್ಸ್‌­­ವಾದ ಮತ್ತು ಭಗವ­ದ್ಗೀತೆ’ ಪುಸ್ತಕ ನೆನಪಾಗುತ್ತಿದೆ.

ಒಂದು ಪುಸ್ತಕವನ್ನು ಸರ್ಕಾರ ಅಧಿಕೃತವಾಗಿ ಮಾನ್ಯ ಮಾಡುವುದು ಎಂದರೆ ನಿಮ್ಮ ಸ್ನೇಹಿತ ಬಹಳ ಪ್ರತಿಷ್ಠಿತ ಹುದ್ದೆಗೆ ಏರಿದಾಗ ನೀವು ಅವ­ರನ್ನು ಅವರ ಕಚೇರಿಯಲ್ಲಿ ಕಂಡು ಹರಟೆ­ಹೊಡೆ­ಯಲು ಪ್ರಯತ್ನಿಸುವಂತೆ. ಅಲ್ಲಿನ ಗಾಂಭೀರ್ಯ, ಪೀಠೋಪಕರಣ, ಕಟು ಮೌನ ನಿಮಗೆ ಬಾಲ್ಯದ ಅಥವಾ ತಾರುಣ್ಯದ ನೆನಪುಗಳನ್ನು ಸರಾಗವಾಗಿ ಹೊರಗೆ ಹಾಕಲು ಅಡ್ಡಿಪಡಿಸುತ್ತಿರುತ್ತದೆ. ಅದೇ ರೀತಿ ಭಗವಂತನ ನಲ್ನುಡಿಯನ್ನು ಅಧಿಕೃತ ಗ್ರಂಥ ಮಾಡಲು ಹೊರಟರೂ ಹಾಗೆಯೇ ಆಗುತ್ತದೆ.

ಗೀತೆಗೆ ಒಂದು ಇತಿಹಾಸವಿದೆ. ಅದು ಸಚಿವೆಗೆ ತಿಳಿ­ದಂತೆ ಇಲ್ಲ. ಶಂಕರಾಚಾರ್ಯರು ‘ಬ್ರಹ್ಮ ಸೂತ್ರ­’ಗಳು ಹಾಗೂ ಉಪನಿಷತ್‌ಗಳಿಗೆ ವ್ಯಾಖ್ಯಾನ ಬರೆದು ವೇದಾಂತ ಚಿಂತನೆಗೆ ಒಂದು ಗಟ್ಟಿಯಾದ ತಾತ್ವಿಕ ತಳಹದಿ ಹಾಕಿದರು. ಅದೇ ಸಮಯದಲ್ಲಿ ಗೀತೆಗೂ ಅವರೇ ಭಾಷ್ಯ ಬರೆ­ಯುವ ಮೂಲಕ ಅದಕ್ಕೆ ವೇದಾಂತ ಗ್ರಂಥದ ಸ್ಥಾನ­ವನ್ನು ತಂದು­ಕೊಟ್ಟರು. ಆವರೆಗೆ ಭಗವ­ದ್ಗೀ­ತೆಯು ಒಂದು ಸನಾತನ ಸ್ಮೃತಿಯ ಸ್ಥಾನದಲ್ಲಿ ಮಾತ್ರವೇ ಇತ್ತು ಎಂಬು­ದನ್ನು ಮರೆಯು­ವಂತಿಲ್ಲ. ಗೀತೆಯು ಹೀಗೆ ಉಪ­ನಿಷತ್‌ ಮತ್ತು ‘ಬ್ರಹ್ಮಸೂತ್ರ’ಗಳ ಸಾಲಿಗೆ ಸೇರಿತು,  ಇವು ಮೂರೂ ಸೇರಿ ಪ್ರಸ್ಥಾನ­ತ್ರಯ ಎನಿ­ಸಿ­­ಕೊಂಡವು. ಭಗವದ್ಗೀತೆ ಭಾರತೀಯ ತತ್ವ­ಶಾಸ್ತ್ರದ ಪ್ರವಾಹ­ದಲ್ಲಿ ಸೇರಿಕೊಂ­ಡಿತು. ಒಂದು ಸ್ಮೃತಿ­ಯ­ನ್ನು ಶ್ರುತಿಯ ಎತ್ತರಕ್ಕೆ ನಿಲ್ಲಿಸಿ­ದವರು ಶಂಕರರು.

ಇನ್ನು ಒಂದು ಸಾಂಸ್ಕೃತಿಕ ಪಠ್ಯವಾಗಿರುವ ಗೀತೆ­ಯನ್ನು ರಾಜ­ಕೀಯ ಪಕ್ಷ ಅದರಲ್ಲೂ ಆಡಳಿತ­ದಲ್ಲಿ ಇರುವ ರಾಜಕೀಯ ಪಕ್ಷ, ರಾಷ್ಟ್ರೀಯ  ಪವಿತ್ರ ಗ್ರಂಥ ಮಾಡಲು ಹೊರಟರೆ ಏನು ಅನಾ­ಹುತ­ಗಳಾಗುತ್ತವೆ ನೋಡೋಣ. ಅನ್ಯ ಧರ್ಮದ­ವರು ನಾಳೆ ಅವರರವರ ಧರ್ಮಗ್ರಂಥಗಳನ್ನು ರಾಷ್ಟ್ರೀಯ ಗ್ರಂಥ ಎಂದು ಘೋಷಿಸಿ ಎಂದು ಒತ್ತಡ ಹೇರಬಹುದು. ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿಯಂತೆ ರಾಷ್ಟ್ರೀಯ ನದಿ, ರಾಷ್ಟ್ರೀಯ ಸಿನಿಮಾ,  ರಾಷ್ಟ್ರೀಯ ನಟ–ನಟಿ, ರಾಷ್ಟ್ರೀಯ ವಾದ್ಯ ಎಂದು ಬೇಕಾದರೂ ಘೋಷಣೆ ಮಾಡಿ ಎಂದು ಬೇರೆ ಬೇರೆ ಗುಂಪು­ಗಳೂ ವಾದ ಮಾಡಲು ನಿಲ್ಲ­ಬಹುದು. ಸರ್ಕಾರ­ವನ್ನು ಒತ್ತಾ­ಯಿ-­ಸ­ಬಹುದು. ಹೇಳಿ ಕೇಳಿ ಗೀತೆಯ ಸ್ಥಾನ ಇರುವುದು ತತ್ವ­ಶಾಸ್ತ್ರ ಮತ್ತು ಧರ್ಮದ  ವಲ­ಯ­­ದಲ್ಲಿ. ಇದ­ಲ್ಲದೇ ಪ್ರಜ್ಞೆಯ ವಿಕಾ­ಸ­ದಲ್ಲಿ ಮುಂದುವರಿ­­ಯು­ತ್ತಿರುವ ಯೋಗಿಗಳು, ಸಾಧಕರು ಈ ಎರಡೂ ವಲಯಗಳ ಗೋಜಿಗೆ ಹೋಗದೆ ಅವರವರ ಆಧ್ಯಾತ್ಮಿಕ ಸಾಧನೆಗೆ ಬೇಕಾ­ದಂತಹ ಸಾಧನಾ ಮಾರ್ಗಗಳನ್ನು ಗೀತೆಯಿಂದ ಪಡೆದು­ಕೊಳ್ಳುತ್ತಿ­ದ್ದಾರೆ. ಜ್ಞಾನೇಶ್ವ­ರರ ‘ಜ್ಞಾನೇ­ಶ್ವರಿ’ ಮತ್ತು ಓಶೋ ರಜನೀಶ್‌ ಅವರು  ಗೀತೆಗೆ ಮಾಡಿರುವ ವ್ಯಾಖ್ಯಾನಗಳು ಈ ಬಗೆಯವು.

ಸ್ವತಃ ಧಾರ್ಮಿಕರಾದವರು ಈಗಾಗಲೇ ಗೀತೆ­ಯನ್ನು ಬಹಳ ಗೌರವದಿಂದ ಕಾಣುತ್ತಿದ್ದಾರೆ. ಇದಕ್ಕೆ ಹಿಂದೂ–ಅಹಿಂದೂ ಎಂಬ ಭೇದವಿಲ್ಲ. ನಮ್ಮ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರಾಗಲಿ, ಖ್ಯಾತ ವಿಜ್ಞಾನಿ ಆಲ್ಬರ್ಟ್‌ ಐನ್‌­ಸ್ಟೀನ್‌ ಅವರಾಗಲೀ ಗೀತೆಗೆ ಬಹಳ ಮಹತ್ವ ನೀಡಿ­ದ್ದಾರೆ. ಗಾಂಧಿಯವರ ರಾಜಕೀಯ ಗುರು ಗೋಪಾ­ಲಕೃಷ್ಣ ಗೋಖಲೆ ಅವರ ಮಾನಸ ಶಿಷ್ಯ­ರಾಗಿದ್ದ ಡಿ.ವಿ. ಗುಂಡಪ್ಪನವರು ಹಲವು ವರ್ಷಗಳ ಕಾಲ ಬೆಂಗಳೂರಿನ ಗೋಖಲೆ ಸಾರ್ವ­ಜನಿಕ ವಿಚಾರ ಸಂಸ್ಥೆಯಲ್ಲಿ ಗೀತೆಯ ಮೇಲೆ ಹೊಸ­ಬೆಳಕು ಚೆಲ್ಲಿದ್ದರು. ಅದು ಗ್ರಂಥ ರೂಪಕ್ಕೆ ಬಂದ­ಮೇಲೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗಳಿಸಿತು. ಆಗ ಬಂದ ಹಣವನ್ನು ಡಿವಿಜಿ ಅವರು ಮತ್ತೆ ಅದೇ ಸಂಸ್ಥೆಯ ಸಾರ್ವಜನಿಕ ಕಾರ್ಯ­ಗಳಿಗೆಂದು ಅರ್ಪಿಸಿ ಒಂದು ಮಾದರಿ ನಿರ್ಮಿ­ಸಿದ್ದು ಈಗ ಇತಿಹಾಸ. ಗೀತೆ ಸುತ್ತಾ ಹೀಗೆ ನೆನಪುಗಳು ಹರಡಿವೆ. ಹಾಗಾಗಿ ಜನಮಾನಸದಲ್ಲಿ ಈಗಾಗಲೇ ಆಳ­­ವಾದ ಪರಿಣಾಮ ಉಂಟು­ಮಾಡಿ­­ರುವ ‘ಮಹಾ­­­ಭಾರತ’ದ ಯುದ್ಧ ಪ್ರಾರಂಭ­ದಲ್ಲಿ ಬರುವ ಗೀತೋಪದೇಶ ಕುರಿತ ಗ್ರಂಥಕ್ಕೆ ರಾಜ­ಕೀಯ ಪಕ್ಷಗಳು ಬೇರೊಂದು ಹೊಸ ಅಸ್ಮಿತೆ ಕಲ್ಪಿಸಿ­ಕೊಡ­ಬೇಕಾಗಿಲ್ಲ. ದೇಶದಲ್ಲಿ ತತ್ವಶಾಸ್ತ್ರದ ವಿಭಾಗಗಳು ಕುಸಿದು ಹೋಗಿವೆ. ಆ ಕೋರ್ಸ್‌­ಗಳನ್ನು ತೆಗೆದು­ಕೊಳ್ಳುವವರು ಯಾರೂ ಇಲ್ಲ. ಆದರೆ ಒಂದು ದೇಶದಲ್ಲಿ ಧಾರ್ಮಿಕ ಚಿಂತನೆ ಮಾತ್ರವಲ್ಲದೆ ರಾಜಕೀಯ, ಸಾಮಾಜಿಕ, ಆರ್ಥಿಕ ವಲಯ­ದಲ್ಲೂ ಫಿಲಾಸಫಿ ಇರಬೇಕಾಗು­ತ್ತದೆ. ಗೀತೆಯನ್ನಾಗಲಿ ಬೇರೆ ಸಾಂಸ್ಕೃತಿಕ, ಆಧ್ಯಾ­ತ್ಮಿಕ ಗ್ರಂಥ­ಗಳ­ನ್ನಾಗಲಿ ಮಾನವ ಜೀವನದ ಮತ್ತು ಭಾರತೀಯ ಜನ­ಜೀವ­ನದ ಮುಖ್ಯ ಸಮಸ್ಯೆಗಳನ್ನು ಕುರಿತು ಅಧ್ಯ­ಯನಕ್ಕೆ ಬಳಸಿಕೊಳ್ಳ­ಬೇಕು. ಅವುಗ­ಳನ್ನು ಪವಿತ್ರ ಅಥವಾ ರಾಷ್ಟ್ರೀಯ ಗ್ರಂಥ ಎಂದು ಘೋಷಿಸಿ­ದರೆ ಸಂವಾದದ ಬಾಯಿ ಕಟ್ಟಿ ಹಾಕಿದಂತಾಗುತ್ತದೆ.

ಭಾರತದ ಪ್ರಮುಖ ಧರ್ಮಗಳಾದ ವೈದಿಕ, ಜೈನ ಮತ್ತು ಬೌದ್ಧರು ಎಂದೂ ತಮ್ಮ ದಾರ್ಶನಿಕ ಕೃತಿಗಳನ್ನು ‘ಹೋಲಿ’ ಎಂದು ಘೋಷಿಸಿಕೊಂಡಿಲ್ಲ. ಈ ಪ್ರವೃತ್ತಿ ಬಿಬ್ಲಿಕಲ್‌ ರಿಲಿ­ಜನ್‌ಗಳಲ್ಲಿ ಸಹಜವಾಗಿದೆ, ಅದಕ್ಕೆ ಅದರದ್ದೇ ಆದ ಚರಿತ್ರೆ ಕೂಡ ಇದೆ. ಅವುಗಳ ಸರಿ ತಪ್ಪಿನ ಪ್ರಶ್ನೆ ಬೇರೆ.

ಹಿಂದುತ್ವದ ಪ್ರತಿಪಾದಕ ರಾಜಕೀಯ ಪಕ್ಷ­ವೊಂದರ ಸಚಿವೆ, ಮುಕ್ತ ಪಠ್ಯಗಳ ಪರಂಪರೆಗೆ ಬೆನ್ನು ಹಾಕಿರುವುದನ್ನು ಈ ವಿದ್ಯಮಾನ ತಿಳಿಸು­ತ್ತದೆ. ಇದು ನಾಡಿನಲ್ಲಿ ನಡೆಯುತ್ತಿರುವ ವಿವಿಧ ಹಂತಗಳ ಬೌದ್ಧಿಕ ಜಿಜ್ಞಾಸೆಗೆ ಅಡ್ಡಿಯೇ ಹೊರತು ಉಪಕಾರ ಮಾಡುವ ಘೋಷಣೆಯಲ್ಲ. ಇಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ರಾಷ್ಟ್ರೀಯ ಗ್ರಂಥ  ಎಂದು ಘೋಷಿಸಿದರೆನ್ನಿ. ಆಗ ಅದು ಗ್ರಂಥ­ವೆನಿ­ಸು­ವುದು ರಾಷ್ಟ್ರಕ್ಕೋ ಅಲ್ಲಿರುವ ಜನರಿಗೋ. ಏಕೆಂದರೆ ಕನ್ನಡ ನಿಜ, ಕರ್ನಾಟಕ ಭ್ರಮೆ. ಸಂಗೀತ ನಿಜ ಉತ್ತರಾದಿ ದಕ್ಷಿಣಾದಿ ಭ್ರಮೆ. ಹಾಗೆ ತತ್ವ­ಶಾಸ್ತ್ರದ ಗೀತೆ ನಿಜ, ರಾಷ್ಟ್ರಗ್ರಂಥ ಹಾಗೂ ಪವಿತ್ರ ಪುಸ್ತಕವಾದ ಭಗವದ್ಗೀತೆ ಒಂದು ಭ್ರಮೆ.

ಆರ್ತ­ರಿಗೆ ಅರ್ಥಾರ್ಥಿಗಳಿಗೆ ಜಿಜ್ಞಾಸುಗಳು ಈ ಗ್ರಂಥ ಎಂದು ಗೀತೆಯ ಕೊನೆಕೊನೆಯ ಸಾಲು­ಗಳು ಹೇಳುತ್ತವೆ. ಅಂದರೆ ಅದೊಂದು ಮುಕ್ತ ಪಠ್ಯ. ಸಂವಿಧಾನಕ್ಕಿಂತ ಹಳೆಯದು. ಆದರೆ ಸಂವಿ­ಧಾನಕ್ಕೆ ಪರ್ಯಾಯವಲ್ಲ ಎಂಬುದನ್ನು ಗೀತೆಯ ತತ್ವ­ಶಾಸ್ತ್ರ ಮತ್ತು ಸಾಹಿತ್ಯದ ವಿದ್ಯಾರ್ಥಿ­ಯಾಗಿ ನಮ್ರ­ವಾಗಿ ತಿಳಿಸಲು ಬಯಸುತ್ತೇನೆ. ಗಾಂಧೀಜಿ­ಯವರಂತೆ ಅನೇಕರ ಪಾಲಿಗೆ ಗೀತೆ ಸಾಂತ್ವನ ನೀಡುವ ಗ್ರಂಥ. ಬಹುಶಃ ಇದರಲ್ಲಿ ಸುಷ್ಮಾ ಅವರೂ ಸೇರಿದ್ದಾರೆ. ಆದರೆ ತಾಯಿಯ ಬಳಿ ಹೋಗಲು ಕಾನೂನು, ಘೋಷಣೆ ಬೇಕಿಲ್ಲ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.