ಛೋಟಾ ರಾಜನ್‌ನನ್ನು ವಿದೇಶದಿಂದ ಭಾರತಕ್ಕೆ ಕರೆತಂದ ಬೆಳವಣಿಗೆಯಿಂದ ಅಪರಾಧದ ಜಗತ್ತಿಗೆ ಸಿಡಿಲೆರಗಿದಂತಾಗಿದೆ. ಈಗ ಛೋಟಾ ರಾಜನ್ ಸೆರೆ ಸಿಕ್ಕಿರುವುದರಿಂದ ಆತನ ಮಾಜಿ ನಾಯಕ ದಾವೂದ್ ಇಬ್ರಾಹಿಂನನ್ನು ಬಂಧಿಸಲು ಇರುವ ತೊಡಕುಗಳೇನು ಎಂಬ ಪ್ರಶ್ನೆ ನಾಗರಿಕರಲ್ಲಿ ಸಹಜವಾಗಿಯೇ ಮೂಡಿದೆ.
ಪಾತಕಿಗಳು ಭಾರತದಲ್ಲಿ ಅಪರಾಧ ಎಸಗಿ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಕುಖ್ಯಾತರನ್ನು ಸೆರೆ ಹಿಡಿದು ತಂದಾಗ ಅದು ಮಾಧ್ಯಮದ ಗಮನ ಸೆಳೆಯುತ್ತದೆ. ವಾಸ್ತವದಲ್ಲಿ, ಕೇಂದ್ರ ಗೃಹ ಹಾಗೂ ವಿದೇಶಾಂಗ ಇಲಾಖೆಗಳು ಆಪಾದಿತರನ್ನು ಭಾರತಕ್ಕೆ ಕರೆತರುವ, ಭಾರತದಲ್ಲಿ ನೆಲೆಸಿರುವ ವಿದೇಶಿ ಆರೋಪಿಗಳನ್ನು ಇತರ ದೇಶಗಳಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ಪ್ರತಿದಿನ ಮಗ್ನವಾಗಿರುತ್ತವೆ.
ಅಪರಾಧಗಳಿಗೆ ಸಂಬಂಧಿಸಿದ ಕಾನೂನು ತತ್ವದ ಪ್ರಕಾರ, ಒಂದು ದೇಶವು ಇನ್ನೊಂದು ದೇಶದ ಒಳಗೆ ತನ್ನ ಕಾನೂನನ್ನು ಅಥವಾ ಅಧಿಕಾರವನ್ನು ಚಲಾಯಿಸುವಂತಿಲ್ಲ. ಅಂದರೆ ಉದಾಹರಣೆಗೆ, ಭಾರತದಲ್ಲಿ ಅಪರಾಧ ಎಸಗಿದ ವ್ಯಕ್ತಿ ಮತ್ತೊಂದು ದೇಶಕ್ಕೆ ಪರಾರಿಯಾದರೆ, ಭಾರತದ ಪೊಲೀಸರನ್ನು ಅಲ್ಲಿಗೆ ಕಳುಹಿಸಿ ಆತನನ್ನು ಬಂಧಿಸಿ ತರುವಂತಿಲ್ಲ.
ಅದು ಆ ದೇಶದ ಸಾರ್ವಭೌಮತ್ವಕ್ಕೆ ಭಂಗ ತರುವ ಪ್ರಯತ್ನವಾಗುವುದಲ್ಲದೆ, ಅಲ್ಲಿನ ಆಂತರಿಕ ವಿಷಯದಲ್ಲಿ ನಡೆಸುವ ಹಸ್ತಕ್ಷೇಪವೆಂದೇ ಬಿಂಬಿತವಾಗುತ್ತದೆ. ಈ ಸಮಸ್ಯೆಯಿಂದ ಅಪರಾಧ ನಿಯಂತ್ರಣ ವ್ಯವಸ್ಥೆಯ ಮೇಲೆ ಬೀರಬಹುದಾದ ದುಷ್ಪರಿಣಾಮವನ್ನು ತಡೆಯಲು ವಿವಿಧ ದೇಶಗಳು ದ್ವಿಪಕ್ಷೀಯವಾಗಿ (ಹಲವೊಮ್ಮೆ ಬಹುಪಕ್ಷೀಯವಾಗಿಯೂ) ಒಪ್ಪಂದ ಮಾಡಿಕೊಂಡಿರುತ್ತವೆ. ಇದನ್ನು ‘ಹಸ್ತಾಂತರ ಒಪ್ಪಂದ’ ಎಂದು ಕರೆಯಲಾಗುತ್ತದೆ.
ಎರಡು ದೇಶಗಳ ನಡುವೆ ‘ಹಸ್ತಾಂತರ ಒಪ್ಪಂದ’ ಇದೆ ಎಂದ ಮಾತ್ರಕ್ಕೆ ಒಂದು ದೇಶ ತನ್ನಲ್ಲಿರುವ ಆಪಾದಿತನನ್ನು ಹಸ್ತಾಂತರಿಸಲೇಬೇಕು ಎಂದೇನಿಲ್ಲ. ಒಂದು ವೇಳೆ ಆ ಅಪರಾಧವು ಎರಡೂ ರಾಷ್ಟ್ರಗಳಲ್ಲಿ ಅಪರಾಧ ಎನಿಸಿಕೊಳ್ಳದಿದ್ದರೆ, ಅಪರಾಧವು ರಾಜಕೀಯ ಪ್ರೇರಿತವಾಗಿದ್ದರೆ, ವಿಚಾರಣೆಗೊಳಪಡಿಸಲು ನಿಗದಿಗೊಳಿಸಿದ ಸಮಯಾವಧಿ ಮೀರಿದ್ದರೆ, ಕೋರಿಕೆ ಸಲ್ಲಿಸಲಾದ ಪ್ರಕರಣಗಳಲ್ಲದೆ ಬೇರೆ ಪ್ರಕರಣಗಳ ಅಡಿ ಶಿಕ್ಷೆ ನೀಡುವ ಸೂಚನೆಯಿದ್ದರೆ, ಮನವಿಯಲ್ಲಿನ ದಾಖಲೆಗಳು ದೋಷಪೂರಿತವಾಗಿದ್ದರೆ ಹಸ್ತಾಂತರದ ಕೋರಿಕೆಯನ್ನು ನಿರಾಕರಿಸಬಹುದು.
ಕೆಲವು ದೇಶಗಳು ಮರಣದಂಡನೆ ಚಾಲ್ತಿಯಲ್ಲಿರುವ ದೇಶಗಳಿಗೆ ಆರೋಪಿಯನ್ನು ಹಸ್ತಾಂತರಿಸುವ ಮುನ್ನ ಷರತ್ತು ವಿಧಿಸಬಹುದು. ಅಬು ಸಲೇಮ್‌ಹಸ್ತಾಂತರಕ್ಕೆ ಮುನ್ನ ಪೋರ್ಚುಗಲ್ ಸರ್ಕಾರ ಆತನಿಗೆ ಮರಣದಂಡನೆ ನೀಡದಂತೆ ಷರತ್ತು ವಿಧಿಸಿದ್ದನ್ನು, ಅಂದಿನ ಗೃಹ ಮಂತ್ರಿ ಅಡ್ವಾಣಿ ಅವರು ಈ ಸಂಬಂಧ ಪೋರ್ಚುಗಲ್‌ಗೆ ಆಶ್ವಾಸನೆ ಕೊಟ್ಟಿದ್ದನ್ನು ಸ್ಮರಿಸಬಹುದು. ಕೆಲವು ಹಸ್ತಾಂತರ ಒಪ್ಪಂದಗಳಲ್ಲಿ ಒಂದು ದೇಶ ತನ್ನದೇ ನಾಗರಿಕನನ್ನು ಹಸ್ತಾಂತರಿಸಲು ನಿರಾಕರಿಸಬಹುದು.
ಗಡಿಪಾರಿಗೆ ಬೇಡ ಒಪ್ಪಂದ: ವಿದೇಶಿ ನಾಗರಿಕ ತನ್ನ ದೇಶದ ಗಡಿಯೊಳಗೆ ಅಕ್ರಮವಾಗಿ ನೆಲೆಸಿದ್ದರೆ, ಒಂದು ದೇಶ ಆತನನ್ನು ಹೊರ ಹಾಕಬಹುದು. ಇದನ್ನು ಬೇರೊಂದು ದೇಶದ ಕೋರಿಕೆಯ ಅನ್ವಯವೂ ಮಾಡಬಹುದು ಇಲ್ಲವೇ ಏಕಪಕ್ಷೀಯವಾಗಿಯೂ ಮಾಡಬಹುದು. ಗಡಿಪಾರಿಗೆ ಯಾವುದೇ ಒಪ್ಪಂದದ ಅಗತ್ಯವಿಲ್ಲ ಹಾಗೂ ಇದು ಆ ದೇಶದ ಆಂತರಿಕ ಕಾನೂನಿನ ಪ್ರಕ್ರಿಯೆಯ ಮೂಲಕ ನಡೆಯುವಂಥದ್ದು. ಹಸ್ತಾಂತರಕ್ಕೆ ಹೋಲಿಸಿದರೆ ಇದೊಂದು ಸರಳ ಪ್ರಕ್ರಿಯೆಯಾಗಿದ್ದು, ಶೀಘ್ರವಾಗಿ ಹಸ್ತಾಂತರಿಸಲು ಸಹಕಾರಿ.
ಅಮೆರಿಕ, ಆಸ್ಟ್ರೇಲಿಯ, ಯುರೋಪ್ ಸೇರಿ ಹಲವು ದೇಶಗಳು ಹಸ್ತಾಂತರದ ಮೂಲಕವೇ ಆರೋಪಿಗಳನ್ನು ವಶಕ್ಕೆ ನೀಡುತ್ತವೆ ಹೊರತು ಗಡಿಪಾರಿನ ಮೂಲಕವಲ್ಲ. ಏಕೆಂದರೆ ಅಲ್ಲಿನ ಕಾನೂನು ಇದಕ್ಕೆ ಆಸ್ಪದ ನೀಡುವುದಿಲ್ಲ. ಗಡಿಪಾರಿನ ಮೂಲಕ ಆರೋಪಿಗಳ ಹಸ್ತಾಂತರಕ್ಕೆ ಎರಡು ದೇಶಗಳ ನಡುವೆ ಸೌಹಾರ್ದ ಸಂಬಂಧ ಅಗತ್ಯ.
ಛೋಟಾ ರಾಜನ್‌ನನ್ನು ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಇಂಡೊನೇಷ್ಯಾ ಸರ್ಕಾರ ಗಡಿಪಾರು ಮಾಡಿತು. ಹಾಗೆಯೇ, ಇತ್ತೀಚೆಗೆ ಬಾಂಗ್ಲಾದೇಶ ಸರ್ಕಾರ ಉಲ್ಫಾದ ಮುಖಂಡ ಅನೂಪ್ ಚೇತಿಯನನ್ನು ಭಾರತಕ್ಕೆ ಗಡಿಪಾರು ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ಸಹ ಬಾಂಗ್ಲಾದೇಶಕ್ಕೆ ಬೇಕಾಗಿದ್ದ ನೂರ್ ಹುಸೇನ್‌ನನ್ನು ಗಡಿಪಾರು ಮಾಡಿತು. ಈ ಪ್ರಕರಣಗಳು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ಬಾಂಧವ್ಯದ ದ್ಯೋತಕವಾಗಿಯೂ ಗೋಚರಿಸುತ್ತವೆ.
1994ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್, ಪಾಕಿಸ್ತಾನದ ಆಶ್ರಯದಲ್ಲಿರುವುದು ಜಗಜ್ಜನಿತ. ಈತನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನವನ್ನು ಭಾರತ ಬಹುಸಮಯದಿಂದಲೂ ಕೋರುತ್ತಿದೆ. ಆದರೆ, ಪಾಕಿಸ್ತಾನ ಆತನ ಇರುವಿಕೆಯನ್ನೇ ಅಲ್ಲಗಳೆಯುತ್ತಾ ಬಂದಿದೆ. ಭಾರತ– ಪಾಕಿಸ್ತಾನದ ನಡುವೆ ಯಾವುದೇ ಹಸ್ತಾಂತರ ಒಪ್ಪಂದ ಇಲ್ಲ. ಅದಕ್ಕಿಂತ ಹೆಚ್ಚಾಗಿ ಈತನನ್ನು ಹಸ್ತಾಂತರಿಸಲು ಅಲ್ಲಿನ ಸರ್ಕಾರಕ್ಕೆ ಮನಸ್ಸಿಲ್ಲ.
ಇಂಥ ಸಂದರ್ಭದಲ್ಲಿ ಉಳಿದಿರುವ ಒಂದೇ ಆಯ್ಕೆಯೆಂದರೆ, ಆತನ ವಿರುದ್ಧ ಹೊರಡಿಸಲಾಗಿರುವ ರೆಡ್ ಕಾರ್ನರ್ ನೋಟಿಸ್‌ನ ಆಧಾರದ ಮೇಲೆ, ಆತ ಪಾಕಿಸ್ತಾನದಿಂದ ಬೇರೆ ದೇಶಕ್ಕೆ ಪ್ರಯಾಣಿಸುವಾಗ ಆತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರ ಮಾಡುವಂತೆ ನೋಡಿಕೊಳ್ಳುವುದು. ಇದು, ಭಾರತ ಮತ್ತು ಆ ದೇಶದ ನಡುವಿನ ಸಂಬಂಧ ಹಾಗೂ ಪಾಕಿಸ್ತಾನ ಆ ದೇಶದ ಜೊತೆ ಹೊಂದಿರುವ ಸಂಬಂಧವನ್ನು ಅವಲಂಬಿಸಿದೆ.
ಛೋಟಾ ರಾಜನ್ ವಿಷಯದಲ್ಲಿ ಇಂಡೊನೇಷ್ಯಾ ಸಹಕರಿಸಿದಂತೆ ದಾವೂದ್ ತಲುಪುವ ರಾಷ್ಟ್ರವೂ ಸಹಕರಿಸಿದರೆ ಆತನನ್ನು ಭಾರತಕ್ಕೆ ಕರೆತರುವುದು ಕಷ್ಟವೇನಲ್ಲ. ಭಾರತ ಇಂಟರ್‌ಪೋಲ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈ ನಿಟ್ಟಿನಲ್ಲಿ ಅದು ಸಹಾಯ ಮಾಡುತ್ತದೆ ಎಂಬ ಆಶಾಭಾವವಿದೆ. ಒಟ್ಟಿನಲ್ಲಿ, ದೇಶ-ದೇಶಗಳ ನಡುವೆ ಗಡಿ ಮಬ್ಬಾಗುತ್ತಿರುವ ಜಾಗತೀಕರಣದ ಯುಗ ಇದು. ಭಯೋತ್ಪಾದನೆ, ಆರ್ಥಿಕ ಅಪರಾಧಗಳು ಸಾಲು ಸಾಲಾಗಿ ಘಟಿಸುತ್ತಿರುವಾಗ, ಅಪರಾಧಿಗಳು ಒಂದು ದೇಶದಲ್ಲಿ ಅಪರಾಧ ಎಸಗಿ ಬೇರೊಂದು ದೇಶದಲ್ಲಿ ತಲೆಮರೆಸಿಕೊಳ್ಳುವ ಸಾಧ್ಯತೆ ಬಹಳಷ್ಟಿರುತ್ತದೆ.
ಇಂಥದ್ದನ್ನು ಮಟ್ಟಹಾಕಲು ಜಗತ್ತಿನ ವಿವಿಧ ದೇಶಗಳ ನಡುವೆ ಸೌಹಾರ್ದ ಸಂಬಂಧ ಇರಬೇಕಾದದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ಭಾರತ 37 ದೇಶಗಳೊಂದಿಗೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿದ್ದು, ಇನ್ನೂ 8 ದೇಶಗಳೊಂದಿಗೆ ಹಸ್ತಾಂತರ ವ್ಯವಸ್ಥೆ (Extradition arrangements) ಹೊಂದಿದೆ. ಕೆಲವು ಬಹುಪಕ್ಷೀಯ ಒಪ್ಪಂದಗಳ ಮೂಲಕವೂ (ಉದಾಹರಣೆಗೆ, ಹಿಂಸೆಯ ವಿರುದ್ಧದ ಒಪ್ಪಂದ) ಆರೋಪಿಗಳ ಹಸ್ತಾಂತರ ನಡೆಯಬಹುದು.
ಇತರ ಹಲವು ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಇತ್ತೀಚೆಗೆ ಹಸ್ತಾಂತರದ ಮನವಿಗಳ ಸಂಖ್ಯೆಯೂ ವೃದ್ಧಿಸಿದೆ. ಇದನ್ನು ಪರಿಗಣಿಸಿ ಹೇಳುವುದಾದರೆ, ಅಪರಾಧ ನಿಯಂತ್ರಣಕ್ಕೆ ವಿಶ್ವದ ವಿವಿಧ ದೇಶಗಳು ಹಿಂದೆಂದಿಗಿಂತಲೂ ಹೆಚ್ಚು ಉತ್ಸುಕವಾಗಿವೆ ಎನ್ನಬಹುದು. ಇದು ಶಾಂತಿಪ್ರಿಯರಿಗೆ ಶುಭ ಸಮಾಚಾರ.
ಲೇಖಕ ವಿದೇಶಾಂಗ ಇಲಾಖೆಯಲ್ಲಿ ಕಾನೂನು ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.