ರಾಜ್ಯದಲ್ಲಿ ಜಾತಿ ಜನಗಣತಿಯು ಮುಂದಿನ ತಿಂಗಳಲ್ಲಿ ನಡೆಯಲಿದೆ. ಈ ಬಗ್ಗೆ ಚರ್ಚೆ, ಸಂವಾದ, ಸಿದ್ಧತೆ, ಕಾರ್ಯಾಗಾರ, ಪ್ರಶ್ನಾವಳಿ ತಯಾರಿ ಮುಂತಾದವು ಕಳೆದ ನಾಲ್ಕಾರು ವರ್ಷಗಳಿಂದ ನಡೆದುಕೊಂಡು ಬಂದು ಈಗ ಅದಕ್ಕೆ ಕಾರ್ಯಾಚರಣೆ ರೂಪ ಬಂದಿದೆ. ಈ ಕ್ರಮಕ್ಕೆ ಪರ ಮತ್ತು ವಿರೋಧದ ಮಾತುಗಳು ಕೇಳಿಬರುತ್ತಿವೆ. ಜಾತಿಗಣತಿಯು ಸಮಾಜವನ್ನು ಛಿದ್ರಗೊಳಿಸುತ್ತದೆ ಎಂದು ಆತಂಕದ ಚಿತ್ರಣ ನೀಡಲಾಗುತ್ತಿದೆ. ಆದರೆ ಜಾತೀಯತೆಯು ನಾಡಿನ ತಳಸಮುದಾಯಗಳಿಗೆ ಶತ-ಶತಮಾನಗಳಿಂದ ಮಾಡುತ್ತಾ ಬಂದಿರುವ ಅನ್ಯಾಯದ ಬಗ್ಗೆ ಅವರು ಮಾತನಾಡುತ್ತಿಲ್ಲ!
ಜಾತಿಗಣತಿಯಿಂದ ತಮ್ಮ ಜಾತಿಯೊಳಗಿನ ಒಳ ಪಂಗಡಗಳು ಬೇರೆಯಾಗಿಬಿಡುತ್ತವೆ ಎಂಬ ಆತಂಕದಿಂದ ಕರ್ನಾಟಕದ ಬಲಾಢ್ಯ ಜಾತಿಗಳ ಕೆಲವರು ಈ ಗಣತಿಯನ್ನು ವಿರೋಧಿಸುತ್ತಿದ್ದಾರೆ. ತಮ್ಮ ಜಾತಿಯೊಳ ಗಿನ ಸಣ್ಣ ಒಳಪಂಗಡಗಳ ಬಗ್ಗೆ ಯಾವತ್ತೂ ತೋರದ ಕಾಳಜಿಯನ್ನು ಪ್ರಬಲ-ಪ್ರತಿಷ್ಠಿತ ಲಿಂಗಾಯತರು ಕೆಲವರು ಇಂದು ತೋರಿಸುತ್ತಿದ್ದಾರೆ. ಬಡವರಿಗೆ, ದುಃಸ್ಥಿತಿಯನ್ನು ಅನುಭವಿಸುತ್ತಿರುವ ಜನರಿಗೆ ಜಾತಿಗಣತಿಯಿಂದ ಒಂದಿಷ್ಟು ಒಳ್ಳೆಯದಾಗುತ್ತದೆ ಎಂಬುದರ ಬಗ್ಗೆ ಅವರಿಗೆ ಏಕೆ ಇಷ್ಟೊಂದು ಅಸೂಯೆ ಎಂಬುದು ಅರ್ಥವಾಗುತ್ತಿಲ್ಲ.
ಜಾತಿಗಣತಿಯ ಬಗ್ಗೆ ಇಂದು ಲಿಂಗಾಯತ ಸಂಘಟನೆ ಗಳಿಂದ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ. ಇದರ ಹಿಂದಿನ ಮರ್ಮ ಅರ್ಥ ಮಾಡಿಕೊಳ್ಳುವುದು ಕಷ್ಟವಾಗ ಲಾರದು. ಲಿಂಗಾಯತ ಅನ್ನುವುದು ಅನೇಕ ಜಾತಿಗಳ, ಒಳಪಂಗಡಗಳ, ಉಪಜಾತಿಗಳ ಒಂದು ಮಹಾಒಕ್ಕೂಟ. ಈ ಒಕ್ಕೂಟ ವ್ಯವಸ್ಥೆಗೆ ಜಾತಿಗಣತಿಯಿಂದ ಧಕ್ಕೆ ಬಂದುಬಿಡುತ್ತದೆ ಎಂಬುದು ಲಿಂಗಾಯತರಲ್ಲಿನ ಕೆಲವು ಪ್ರಬಲ ಉಪಜಾತಿಗಳ ತಳಮಳ.
ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಸಂಗತಿಗಳು ಇಲ್ಲಿ ಮುಖ್ಯ. ಮೊದಲನೆಯದಾಗಿ ಲಿಂಗಾಯತ ಮಹಾಸಂಘಟನೆಗಳು ತಮ್ಮ ಜಾತಿ ಒಕ್ಕೂಟದಲ್ಲಿನ ಸಣ್ಣ ಒಳಪಂಗಡಗಳ ಬಗ್ಗೆ ಆಂತರಿಕ ಸಾಮಾಜಿಕ ನ್ಯಾಯವನ್ನು ಅನುಸರಿಸಿದ್ದಾವೆಯೇ? ತಮ್ಮ ಜಾತಿ ಒಕ್ಕೂಟದ ವಿಷಯ ಬಂದಾಗ ಸಾಮಾಜಿಕ ನ್ಯಾಯ ಬೇಕು. ಆದರೆ ತಮ್ಮ ಒಕ್ಕೂಟದೊಳಗೆ ಮಾತ್ರ ಅದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ. ಲಿಂಗಾಯತದೊಳಗಿನ ಹಡಪದರು, ಸಿಂಪಿಗರು, ಹೂಗಾರರು, ಗಾಣಿಗರು, ನೊಳಂಬರು ಮುಂತಾದ ಉಪಜಾತಿಗಳಿಗೆ ಮತ್ತು ಒಳಪಂಗಡಗಳಿಗೆ ಲಿಂಗಾಯತ ಸಂಘಟನೆಗಳು ಆದ್ಯತೆಯನ್ನು ನೀಡಿವೆಯೇ?
ಈ ಒಳಪಂಗಡಗಳೆಲ್ಲ ಲಿಂಗಾಯತರಲ್ಲಿ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿವೆ. ಈ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು, ಲಿಂಗಾಯತ ಸಂಖ್ಯಾಬಲದ ನೆರವಿನಿಂದ ಇಂದು ಅದರೊಳಗಿನ ಪ್ರಬಲರು-ಪ್ರತಿಷ್ಠಿತರು ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಮೆರೆಯುತ್ತಿ ದ್ದಾರೆ. ಈ ಸಾಮ್ರಾಜ್ಯಗಳಲ್ಲಿ ಒಕ್ಕೂಟದ ಸಣ್ಣ-ಪುಟ್ಟ ಲಿಂಗಾಯತ ಜಾತಿಗಳಿಗೆ ಪ್ರಜ್ಞಾಪೂರ್ವಕವಾಗಿ ಸ್ಥಾನಮಾನ ನೀಡಿದ್ದಾರೆಯೇ ಅಂದರೆ ಉತ್ತರ ಖಚಿತವಾಗಿ ಇಲ್ಲ.
ಆದರೆ ಜಾತಿಗಣತಿಯಿಂದ ಲಿಂಗಾಯತದೊಳಗಿನ ಒಳಪಂಗಡಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯು ಬಹಿರಂಗವಾಗುತ್ತದೆ ಎಂಬುದರ ಬಗ್ಗೆ ಆ ಸಮುದಾಯದ ಪ್ರಬಲರಿಗೆ ಆತಂಕವಿರುವಂತೆ ಕಾಣುತ್ತದೆ.
ಎರಡನೆಯದಾಗಿ ಲಿಂಗಾಯತ ಒಳಪಂಗಡಗಳು ತಮ್ಮ ಸ್ವಂತ ಗುರುತುಗಳನ್ನು ಇಟ್ಟುಕೊಂಡು ಅವು ಲಿಂಗಾಯತ ಒಕ್ಕೂಟದ ಭಾಗವಾಗಿ ಮುಂದುವರಿಯ ಬಹುದು ಎಂಬುದನ್ನು ಒಕ್ಕೂಟದ ಧುರೀಣರು ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ಹಡಪದರಿಗೆ ಜಾತಿಗಣತಿ ಆಧಾರದ ಮೇಲೆ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಸರ್ಕಾರದ ಮೀಸಲಾತಿ ಮತ್ತು ಶೈಕ್ಷಣಿಕ ಹಾಗೂ ಇತರೆ ಕೆಲವು ಅನುಕೂಲಗಳು ದೊರೆಯುವುದಾದರೆ ಅವುಗಳನ್ನು ಹಡಪದ ಸಮುದಾಯವಾಗಿ ಪಡೆದುಕೊಂಡು ಅವರು ಲಿಂಗಾ ಯತ ಒಕ್ಕೂಟದೊಳಗೆ ಮುಂದುವರಿಯಬಹುದು.
ಆದ್ದರಿಂದ ಲಿಂಗಾಯತರಲ್ಲಿನ ಪ್ರಬಲರು ಜಾತಿಗಣತಿ ಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಜಾತಿ ಒಕ್ಕೂಟವನ್ನು ಕಾಪಾಡಿಕೊಂಡು ಒಳಪಂಗಡಗಳು, ಉಪಜಾತಿಗಳು ತಮ್ಮ ಸ್ವಂತ ಗುರುತುಗಳನ್ನು ಉಳಿಸಿ ಕೊಂಡು ಮುಂದುವರಿಯಬಹುದು. ಇದು ಜಾತಿ ಗಣತಿಯ ಬಗ್ಗೆ ನಾವು ಇಟ್ಟುಕೊಳ್ಳಬಹುದಾದ ಆರೋಗ್ಯ ಕಾರಿ ಮತ್ತು ಸಾಮಾಜಿಕ ದೃಷ್ಟಿಕೋನ.
ಲಿಂಗಾಯತದ ಹೆಸರಿನಲ್ಲಿ ಸಾಮ್ರಾಜ್ಯಗಳನ್ನು ಕಟ್ಟಿಕೊಂಡ ಜನ ಇನ್ನಾದರೂ ಆತ್ಮಾವಲೋಕನ ಮಾಡಿ ಕೊಳ್ಳಬೇಕು. ರಾಜಕೀಯಕ್ಕೆ, ಸಾಮ್ರಾಜ್ಯಗಳನ್ನು ರಕ್ಷಿಸಿ ಕೊಳ್ಳುವುದಕ್ಕೆ ಮಾತ್ರ ಲಿಂಗಾಯತ; ಲಿಂಗಾಯತ ಒಕ್ಕೂಟದಲ್ಲಿನ ಸಣ್ಣ- ಪುಟ್ಟ ಬಡ ಒಳಪಂಗಡಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಬಗ್ಗೆ ಮಾತ್ರ ಖಾಸಗಿ ಕಾರ್ಪೊರೇಟ್ ಸಂಸ್ಕೃತಿ. ಈ ಬಗೆಯ ದ್ವಂದ್ವ ನೀತಿಯನ್ನು ಆ ಸಮುದಾಯದ ಪ್ರಬಲರು ಕೈಬಿಡಬೇಕು.
ಇವರು ಕಟ್ಟಿಕೊಂಡಿರುವ ಸಾಮ್ರಾಜ್ಯಗಳಲ್ಲಿ ಲಿಂಗಾಯತ ಉಳ್ಳವರಿಗೆ ಮಾತ್ರ ಪ್ರವೇಶವಿದೆ; ಅಲ್ಲಿ ಲಿಂಗಾಯತ ಬಡವರಿಗೆ ಯಾವ ಬಗೆಯ ಹೆಚ್ಚಿನ ಅವಕಾಶಗಳೂ ಇದ್ದಂತೆ ಕಾಣುವುದಿಲ್ಲ. ಲಿಂಗಾಯತ ಜಾತಿಯೊಳಗೆ ವರ್ಗ ಸಂಬಂಧಿ ದೃಷ್ಟಿಕೋನವನ್ನು ಅನುಸರಿಸುವುದು ಅಗತ್ಯ. ಇದಕ್ಕೆ ಜಾತಿಗಣತಿಯು ಅನುಕೂಲವಾಗಲಿದೆ.
ಜಾತಿಗಣತಿಯಿಂದ ಜಾತೀಯತೆ ಹೆಚ್ಚಾಗುತ್ತದೆ ಎಂಬುದು ಉಳ್ಳವರ ಒಂದು ಆರೋಪ. ಇದರಲ್ಲಿ ಹುರುಳಿಲ್ಲ. ಜಾತೀಯತೆ ಹೋಗಬೇಕು, ನಿಜ. ಆದರೆ ಅದನ್ನು ತೊಡೆದುಹಾಕಲು ಮತ್ತು ಅದರ ಕಾರಣದಿಂದ ದುಃಸ್ಥಿತಿಗೆ, ಶೋಷಣೆಗೆ ಒಳಗಾಗಿರುವ ಜನರ ಬಿಡುಗಡೆಯು ಅದರ ಮೂಲಕವೇ ಆಗಬೇಕಾದ ವಿಚಿತ್ರ ಸ್ಥಿತಿಯಲ್ಲಿ ನಾವಿದ್ದೇವೆ. ಜಾತಿ ಗುರುತುಗಳನ್ನು ಆಧಾರ ವಾಗಿಟ್ಟುಕೊಂಡು ತೀವ್ರ ದುಃಸ್ಥಿತಿ ಅನುಭವಿಸುತ್ತಿರುವ ಸಣ್ಣ-ಪುಟ್ಟ ಜಾತಿಗಳಿಗೆ ವಿಮೋಚನೆಗೆ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಕಾರಣಗಳಿಂದಾಗಿ ಜಾತಿ ಗಣತಿಯನ್ನು ವಿರೋಧಿಸುವುದು ಸಾಮಾಜಿಕವಾಗಿ ಪ್ರತಿಗಾಮಿ ಕ್ರಮ ಎಂದು ಹೇಳಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.