ADVERTISEMENT

ದೆಹಲಿಯವರ ಬಾಯಿಗೆ ಬಿದ್ದ ಸಾಧಕರು

ಡಾ.ಬಿ.ಆರ್.‌ ಸತ್ಯನಾರಾಯಣ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಅಮಿತ್ ಶಾ
ಅಮಿತ್ ಶಾ   

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕುಪ್ಪಳಿಗೆ ಹೋಗಿ, ಕವಿಗೆ ನಮನ ಸಲ್ಲಿಸಿ ಬಂದಿದ್ದಾರೆ! ವಿಧಾನಸಭೆ ಚುನಾವಣೆ ಬಂತೆಂದರೆ, ಆಯಾ ರಾಜ್ಯದಲ್ಲಿ ಗೆಲುವಿಗೆ ಏನೇನು ತಂತ್ರ ರೂಪಿಸಬೇಕು ಎಂದು ದೆಹಲಿಯ ನಾಯಕರೆಲ್ಲಾ ತಲೆಕೆಡಿಸಿಕೊಳ್ಳುತ್ತಿರುತ್ತಾರೆ. ಆ ನಿರ್ದಿಷ್ಟ ರಾಜ್ಯದಲ್ಲಿ ಭೇಟಿ ನೀಡಬಹುದಾದ ಮಠಮಾನ್ಯಗಳು, ದೇವಸ್ಥಾನಗಳು ಹಾಗೂ ಭಾಷಣಗಳಲ್ಲಿ ಉದ್ಧರಿಸಬಹುದಾದ ಸಾಧಕರ ಹೆಸರು... ಇವೆಲ್ಲವನ್ನೂ ಸ್ಥಳೀಯ ನಾಯಕರು ಪಟ್ಟಿ ಮಾಡುತ್ತಾ ಕೂರುತ್ತಾರೆನ್ನಿಸುತ್ತದೆ. ದೆಹಲಿ ನಾಯಕರು ಬಂದು ಇಲ್ಲಿಯ ಸಾಧಕರ ಹೆಸರನ್ನು ತಪ್ಪುತಪ್ಪಾಗಿ ಉಚ್ಚರಿಸಿ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.

ಬಸವಣ್ಣ, ಕನಕ, ನಾರಾಯಣಗುರು, ಕೆಂಪೇಗೌಡ, ವಿಶ್ವೇಶ್ವರಯ್ಯ, ಕುವೆಂಪು ಮೊದಲಾದ ಈ ನಾಡಿನ ಸಾಧಕರ ಹೆಸರನ್ನು ದೆಹಲಿ ನಾಯಕರ ಬಾಯಲ್ಲಿ ಹೇಳಿಸಿ, ಮತ ಬಾಚಬಹುದು ಎಂಬ ಕಿಲಾಡಿ(!) ಐಡಿಯಾ ಅದ್ಯಾವ ಮಹಾನಾಯಕನಿಗೆ ಹೊಳೆಯಿತೋ ತಿಳಿಯದು.ಅಷ್ಟಕ್ಕೂ ಈ ಸಾಧಕರ‍್ಯಾರೂ ದೆಹಲಿ ನಾಯಕರ ಬಾಯಲ್ಲಿ ಉಲ್ಲೇಖಗೊಂಡು ದೊಡ್ಡವರಾಗಬೇಕಿಲ್ಲ; ಕನ್ನಡಿಗರ ಮನಗಳಿಗೆ ಪ್ರವೇಶ ಪಡೆಯಬೇಕಿಲ್ಲ ಅಲ್ಲವೇ?

ಮೊನ್ನೆಯಷ್ಟೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮೈಸೂರಿನಲ್ಲಿ ಕುವೆಂಪು ಹೆಸರು ಹೇಳಿ ಹೋಗಿದ್ದಾರೆ. ಈಗ ಅಮಿತ್ ಶಾ ಸರದಿ. ‘ನೀನು ಹೆಸರು ಮಾತ್ರ ಹೇಳಿದ್ದೀಯಾ? ನೋಡು, ನಾನು ಕುಪ್ಪಳಿಗೇ ಹೋಗುತ್ತಿದ್ದೇನೆ...’ ಎಂದು ಸವಾಲು ಹಾಕಿದಂತೆ ಕಾಣುತ್ತಿದೆ. ಕನ್ನಡಿಗರಿಗೆ ಕುವೆಂಪು ಅಂದರೆ, ಒಂದು ಭವ್ಯವಾದ ಕಲ್ಪನೆ ಇದೆ. ಎಲ್ಲ ಗಡಿಗಳನ್ನು ದಾಟಿದ ವಿಶ್ವಮಾನವ ಪರಿಕಲ್ಪನೆಯ ಸಾಕಾರಮೂರ್ತಿ ಕುವೆಂಪು. ಭಾರತ- ಬಿಜೆಪಿ- ಹಿಂದುತ್ವ ಎಂಬ ಪರಿಕಲ್ಪನೆಯ ಸಾಕಾರಮೂರ್ತಿ ಅಮಿತ್ ಶಾ!  ಚುನಾವಣೆ ಇಲ್ಲದಿದ್ದಲ್ಲಿ ರಾಹುಲ್- ಶಾ ಕಿವಿಯ ಮೇಲೆ ಕುವೆಂಪು ಹೆಸರು ಬೀಳುತ್ತಿತ್ತೇ?

ADVERTISEMENT

‘ಪರಂಪರೆ ಮತ್ತು ಕುವೆಂಪು’ ಎಂಬ ಲೇಖನದಲ್ಲಿ, ತೇಜಸ್ವಿಯವರು ಗುರುತಿಸಿರುವಂತೆ ಕುವೆಂಪು ವಿರುದ್ಧದ ಟೀಕೆಗಳಿಗೆ ಎರಡು ನೆಲೆಗಳಿವೆ. ಒಂದು, ಕುವೆಂಪು ಶೂದ್ರವಾದಿ; ಬ್ರಾಹ್ಮಣ ಅಥವಾ ವೈದಿಕ ಸಂಪ್ರದಾಯ ವಿರೋಧಿ. ಎರಡನೆಯದು, ಕುವೆಂಪು ಅವರ ಬ್ರಾಹ್ಮಣ ವಿರೋಧ ಕೇವಲ ಸಾಮಾಜಿಕ. ಅವರು ಆಳದಲ್ಲಿ ಪ್ರತಿಪಾದಿಸುವುದು ಆರ್ಯ ಸಂಸ್ಕೃತಿಯನ್ನೇ, ಆದ್ದರಿಂದ ಕೊನೆಗೂ ವೈದಿಕ ಸಂಸ್ಕೃತಿಗೆ ಅದರಿಂದ ಲಾಭ ಎಂಬುದು!

ಈ ಚುನಾವಣೆಯಲ್ಲಿ ಅಥವಾ ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲಿ ಜಾತಿ-ಮತ-ಧರ್ಮಗಳೇ ಪ್ರಮುಖವಾಗಿರುವುದರ ಹಿನ್ನೆಲೆಯಲ್ಲಿ ಮೇಲಿನ ಮಾತುಗಳನ್ನು ಮನನ ಮಾಡಿಕೊಳ್ಳಬೇಕಾಗಿದೆ. ಬುದ್ಧ, ಬಸವ, ಗಾಂಧಿ, ಭಗತ್ ಸಿಂಗ್, ಅಂಬೇಡ್ಕರ್ ಮೊದಲಾದ ವಿಶ್ವಮಾನವರು ಹಿಂದುತ್ವವಾದಿಗಳ, ಜಾತಿವಾದಿಗಳ ಬ್ಯಾನರಿನಲ್ಲಿ ಕಾಣಿಸಿಕೊಂಡಂತೆ ಕುವೆಂಪು ಅವರೂ ಕಾಣಿಸಿಕೊಳ್ಳಬಹುದು. ವಿದ್ಯೆಯಿಂದ, ಸಾಧನೆಯಿಂದ, ತಪಸ್ಸಿನಿಂದ ವಿಶ್ವಮಾನವತ್ವಕ್ಕೇರಿದ ಮಹನೀಯರನ್ನೆಲ್ಲಾ ಒಂದೊಂದು ಮತಕ್ಕೆ, ಧರ್ಮಕ್ಕೆ, ಜಾತಿಗೆ ಕಟ್ಟಿಹಾಕುವುದಕ್ಕೆ ರಾಜಕೀಯ ಪಕ್ಷಗಳು ಅವಿರತ ಶ್ರಮಿಸುತ್ತಿವೆ; ಅವರ ಹೆಸರಿನಲ್ಲಿ ಧರ್ಮಸ್ಥಾಪನೆಗೆ ಪಣ ತೊಡುತ್ತಿವೆ, ವಿಶ್ವಮಾನವರನ್ನು ಕುಬ್ಜಮಾನವರನ್ನಾಗಿಸಲು!

ಜವಾಹರಲಾಲ್ ನೆಹರೂ ಬಗ್ಗೆ ಕುವೆಂಪು ಅವರಿಗೆ ಅಭಿಮಾನವಿತ್ತು. ತಮ್ಮ ಬರಹಗಳಲ್ಲಿ ಅಲ್ಲಲ್ಲಿ ಅದನ್ನು ವ್ಯಕ್ತಪಡಿಸಿದ್ದಾರೆ ಕೂಡಾ. ನೆಹರೂ ಅವರ ಮತಧರ್ಮ ನಿರಪೇಕ್ಷ ಮನೋಭಾವ ಕುವೆಂಪು ಅವರಿಗೆ ಅಚ್ಚುಮೆಚ್ಚಿನದಾಗಿತ್ತು. ‘ಶ್ರೀ ನೆಹರೂ: ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿ’ ಎಂಬ ಲೇಖನವನ್ನೂ ಬರೆದಿದ್ದಾರೆ.

ಕುವೆಂಪು ಬದುಕಿದ್ದ ಕಾಲಕ್ಕೆ ಚುನಾವಣಾ ರಾಜಕಾರಣ ಮತ್ತು ಧರ್ಮವು ಈಗಿರುವಂತೆ ಇಷ್ಟೊಂದು ಅಪವಿತ್ರ ಮೈತ್ರಿಗೆ ಒಳಗಾಗಿರಲಿಲ್ಲವಾದರೂ, ಪ್ರಜಾಪ್ರಭುತ್ವದಲ್ಲಿ ಮತಧರ್ಮ ನಿರಪೇಕ್ಷತೆಯ ಅಗತ್ಯವನ್ನು ಮತ್ತು ಮಹತ್ವವನ್ನು ಕವಿ ಮನಗಂಡಿದ್ದರು. ಅವರ ವೈಚಾರಿಕ ನಿಲುವು ಅದೇ ಆಗಿತ್ತು. ಆದರೆ ಇಂದು, ನೆಹರೂ ಪಕ್ಷದ ನಾಯಕರು, ಚುನಾವಣೆಯ ಹೊತ್ತಿಗೆ ಮತ, ಧರ್ಮ, ದೇವಸ್ಥಾನಗಳ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿಯಂತೂ ಬೃಹನ್ನಾಟಕದಂತೆ ಕಾಣುತ್ತದೆ!

ಇನ್ನು, ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದುತ್ವಕ್ಕೂ ಕುವೆಂಪು ಕನಸಿನ ಹಿಂದುತ್ವಕ್ಕೂ ಎಳ್ಳಿನಿತೂ ಸಂಬಂಧವಿಲ್ಲ! ‘ಈ ದೇವಾಲಯಗಳ ಸ್ವರೂಪವೆ ಬದಲಾಗದಿದ್ದರೆ, ಶ್ರುತ್ಯಂಶದ ವೇದಾಂತ ದರ್ಶನವನ್ನಾಶ್ರಯಿಸಿ, ಸ್ಮೃತ್ಯಂಶದ ಧರ್ಮಶಾಸ್ತ್ರಪುರಾಣಾದಿಗಳ ಕಾಲದೇಶಾಚಾರಗಳ ಅನಿತ್ಯಾಂಶಗಳನ್ನು ತ್ಯಜಿಸದಿದ್ದರೆ ಧರ್ಮದ ವಿನಾಶ ಇಂದಲ್ಲ ನಾಳೆ ಸ್ವತಃಸಿದ್ಧ! ವರ್ಣಾಶ್ರಮ, ಜಾತಿ ಪದ್ಧತಿ, ಚಾತುರ್ವರ್ಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣವಾಗಿ ಪಾರಾದಂದೇ ಹಿಂದೂಮತವು ವೇದಾಂತ ದರ್ಶನವಾಗಿ, ವಿಶ್ವಧರ್ಮವಾಗಿ, ಸರ್ವಧರ್ಮಗಳನ್ನು ಒಳಗೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು, ಶೂದ್ರಪೀಡನಕರವಾಗಿ ಪುರೋಹಿತ ಪೀಡೆಯ
ಬ್ರಾಹ್ಮಣ್ಯ ಮಾತ್ರವಾಗಿರುತ್ತದೆ; ಮತ್ತು ಬುದ್ಧಿಯುಳ್ಳವರಿಗೆ ಜುಗುಪ್ಸೆ ಉಂಟುಮಾಡುವ ಅಸಹ್ಯವಾಗಿರುತ್ತದೆ’.

ಇವು, ಹಿಂದೂ ಧರ್ಮದ ಬಗ್ಗೆ ಕುವೆಂಪು ಅವರ ಖಡಕ್ ನುಡಿಗಳು. ಸುಮಾರು ಅರ್ಧ ಶತಮಾನದ ಹಿಂದೆ ಕುವೆಂಪು ಬರೆದ ಈ ಟಿಪ್ಪಣಿ ಇಂದಿಗೂ ಪ್ರಸ್ತುತ. ಅಂತಹುದರಲ್ಲಿ, ಹಿಂದುತ್ವವೊಂದೇ ಸತ್ಯ! ಹಿಂದುತ್ವವೇ ಭಾರತೀಯತೆ, ಹಿಂದುತ್ವದ ವಿರುದ್ಧ ಮಾತನಾಡುವುದೇ ದೇಶದ್ರೋಹ, ಹಿಂದುತ್ವವನ್ನು ಪ್ರತಿಪಾದಿಸುವ ಪಕ್ಷದ ವಿರುದ್ಧ ಮಾತನಾಡುವುದೇ ದೇಶದ್ರೋಹ... ಎಂಬ ಸಂಕುಚಿತ ಮನಸ್ಥಿತಿಯ ಉತ್ಪಾದಕರೂ ಉದ್ಧಾರಕರೂ ಆದ ಪಕ್ಷದ ಅಧ್ಯಕ್ಷ, ಕುವೆಂಪು ವಿಚಾರಧಾರೆಯನ್ನು ಮುಖಾಮುಖಿಯಾಗಿದ್ದು ಅಸಂಗತ ನಾಟಕವೊಂದರ ತುಣುಕಿನಂತೆ ಕಂಡರೆ ಆಶ್ಚರ್ಯಪಡಬೇಕಾಗಿಲ್ಲ. ಇಂತಹುದಕ್ಕೆ ಹೆಚ್ಚು ಹೆಚ್ಚು ಮಹತ್ವ ಕೊಡುತ್ತಿರುವ ರಾಜ್ಯ ನಾಯಕರು- ಎಲ್ಲಾ ಪಕ್ಷದವರೂ- ವಿದೂಷಕರಂತೆ ಕಾಣುತ್ತಿದ್ದಾರೆ.

ಜಾತಿವಾರು ದೇವಾಲಯ-ಮಠಗಳಿಗೆ ಎಡತಾಕುವವರು, ಜಾತಿ ಮತಗಳ ಲೆಕ್ಕದಲ್ಲಿ ಮತ ಕೇಳುವವರು... ನಮ್ಮ ಸಾಧಕರ ಹೆಸರನ್ನು ಉಲ್ಲೇಖಿಸುವುದು, ಅವರಿಗೆ ಮಾಡುವ ಅವಮಾನವೆಂದೇ ನನಗನ್ನಿಸುತ್ತದೆ. ದೆಹಲಿ ನಾಯಕರೇನೂ ಮೇಲಿನಿಂದ ಇಳಿದು ಬಂದವರಲ್ಲ, ಅವರೂ ನಮ್ಮಂತೆ ಅನ್ನ ತಿನ್ನುವ, ಕಕ್ಕ ಮಾಡುವ ನರಮನುಷ್ಯರು ಎಂಬುದನ್ನು ರಾಜ್ಯ ನಾಯಕರು ಮನಗಾಣಬೇಕಿದೆ. ಕುವೆಂಪು ಹೇಳಿರುವಂತೆ ‘ಉತ್ತರದ ಕತ್ತೆಯೊಂದು ಕಾಶಿಯ ಗಂಗೆಯಲಿ ಮಿಂದೆದ್ದು ಬಂದರೆ ಕುದುರೆಯಾಗುವುದಿಲ್ಲ’. ಜೊತೆಗೆ ಕನ್ನಡಿಗರು, ಕನ್ನಡದ ಮಾಧ್ಯಮಗಳು ಸಹ ದೆಹಲಿಯವರು, ನಮ್ಮವರ ಹೆಸರನ್ನು ಉಲ್ಲೇಖಿಸುವುದೇ ಪರಮಪಾವನ ಎಂಬಂತೆ ನಂಬುವುದನ್ನು, ನಂಬಿಸುವುದನ್ನು ನಿಲ್ಲಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.