ಅದೊಂದು ನಾಮಕರಣ ಸಮಾರಂಭ. ಗಂಡ- ಹೆಂಡತಿ ಇಬ್ಬರೂ ಪ್ರಸಿದ್ಧ ವೈದ್ಯ ದಂಪತಿ. ತಮ್ಮ ಮಗುವಿನ ನಾಮಕರಣ ಶಾಸ್ತ್ರವನ್ನು ಅದ್ಧೂರಿಯಾಗಿ ಮಾಡುತ್ತಿದ್ದರು. ತೊಟ್ಟಿಲಲ್ಲಿ ಮಗುವನ್ನು ಹಾಕುವ ಮುಂಚೆ ಒಂದು ಬಿದಿರಿನ ಮೊರದಲ್ಲಿ ಅದನ್ನು ಮಲಗಿಸಿ ತಮ್ಮ ಸಂಬಂಧಿಯೊಬ್ಬರಿಗೆ ಕೊಟ್ಟರು. ಅವರು ಅದನ್ನು ಸ್ವೀಕರಿಸಿ ನಂತರ ಒಂದಷ್ಟು ಶಾಸ್ತ್ರಗಳನ್ನು ಮುಗಿಸಿ ಮತ್ತೆ ಮಗುವನ್ನು ವೈದ್ಯ ದಂಪತಿಗೆ ಹಿಂದಿರುಗಿಸಿದರು.
ನಾನು ಕುತೂಹಲದಿಂದ ‘ಇದೇನು ಇವರ ಪದ್ಧತಿಯೋ’ ಎಂದು ವಿಚಾರಿಸಿದೆ. ಅದಕ್ಕೆ ಅಲ್ಲಿನ ಪುರೋಹಿತರೊಬ್ಬರು ‘ಇದು ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗು. ಅದಕ್ಕೆ ಹೀಗೆ ಸಂಬಂಧಿಯೊಬ್ಬರಿಗೆ ದಾನ ನೀಡುವ ಮೂಲಕ ಒಂದಷ್ಟು ಶಾಂತಿ ಮಾಡಿಸುವುದರಿಂದ ತಂದೆ– ತಾಯಿಗೆ ಹಾಗೂ ಆ ಹೆಣ್ಣು ಮಗು ಸೇರುವ ಮನೆಗೆ ಒಳ್ಳೆಯದಾಗುತ್ತದೆ’ ಎಂದಿದ್ದರು. ಇದನ್ನು ನಂಬಿ ಆ ವೈದ್ಯ ದಂಪತಿ ಅದನ್ನು ಅನುಸರಿಸಿದ್ದರು.
‘ಹುಡುಗಿಯ ಕಾಲ್ಗುಣ ಸರಿಯಿಲ್ಲ’ ಎಂದು ವರನ ಕಡೆಯವರು ಮೂದಲಿಸಿದ್ದರಿಂದ ನೊಂದು ನಾಗಲಕ್ಷ್ಮಿ ಎಂಬ ಸುಂದರ ಯುವತಿ ನೇಣು ಹಾಕಿಕೊಂಡ ಘಟನೆಯಿಂದ ಇದು ನೆನಪಾಯಿತು. ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಯುವಕ, ತನ್ನ ತಂದೆಯ ಸಾವಿಗೆ ತಾನು ಮದುವೆಯಾಗಲಿರುವ ಹುಡುಗಿಯ ಕಾಲ್ಗುಣ ಕಾರಣ ಎಂಬುದನ್ನು ನಂಬಿದ್ದು ಮಾತ್ರವಲ್ಲದೆ, ಅವನ ಕುಟುಂಬ ಕೂಡ ಅದನ್ನು ಬೆಂಬಲಿಸಿ ಒಬ್ಬ ಯುವತಿಯ ಸಾವಿಗೆ ಕಾರಣವಾಯಿತು. ಇವರಿಗೆ ವರದಕ್ಷಿಣೆಯೇ ಮುಖ್ಯವಾಗಿ ಕಾಲ್ಗುಣ ನೆಪವಾಯಿತೇ?
ಹೆಣ್ಣಿಗೆ ಸಂಬಂಧಿಸಿದ ಇಂತಹ ನಂಬಿಕೆಗಳು ಪರಂಪರೆಯಿಂದಲೂ ಮುಂದುವರಿದುಕೊಂಡು ಬರುತ್ತಲೇ ಇವೆ. ಇವು ಸುಶಿಕ್ಷಿತರು, ಅಶಿಕ್ಷಿತರು ಎಂಬ ಭೇದವಿಲ್ಲದೆ ಮುನ್ನಡೆಯುತ್ತಲೇ ಇವೆ. ಅದರಲ್ಲೂ ಚೆನ್ನಾಗಿ ಓದಿಕೊಂಡವರಲ್ಲಿಯೇ ಇಂತಹ ಅನಿಷ್ಟ ನಂಬಿಕೆಗಳು ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ಆಶ್ಲೇಷ ನಕ್ಷತ್ರದ ಹುಡುಗಿ ಗಂಡನ ತಾಯಿಯ ಸಾವಿಗೆ ಕಾರಣಳಾಗುತ್ತಾಳೆ, ಹಾಗೆಯೇ ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಹುಡುಗಿಯು ಮದುವೆಯಾದ ಒಂದು ವರ್ಷದಲ್ಲಿ ಮಾವನ ಸಾವಿಗೆ ಕಾರಣಳಾಗುತ್ತಾಳೆ ಎಂಬ ನಂಬಿಕೆ ಇನ್ನೂ ಚಾಲ್ತಿಯಲ್ಲಿದೆ. ಒಂದೊಮ್ಮೆ ಆ ಮಾವ, ಆತ್ತೆ ಆ ಒಂದು ವರ್ಷದಲ್ಲಿ ಸಾಯದೆ ಬದುಕಿದ್ದೇ ಆದರೆ ಅದು ಅವರ ದೈವ ಬಲದಿಂದ ಮಾತ್ರ!
ಸೊಸೆ ಬಂದ ಒಂದು ವರ್ಷದಲ್ಲಿ ಗಂಡನ ಮನೆಯಲ್ಲಿ ಎಲ್ಲವೂ ಒಳಿತಾದರೆ ಅದು ಆಕೆಯ ಕಾಲ್ಗುಣದಿಂದ ಎಂಬ ಕಿರೀಟ ತೊಡಿಸುತ್ತಾರೆ. ಒಂದೊಮ್ಮೆ ಅಲ್ಲಿ ಅದಕ್ಕೆ ವ್ಯತಿರಿಕ್ತವಾದದ್ದು ಸಂಭವಿಸಿದರೆ ‘ಅನಿಷ್ಟಕ್ಕೆಲ್ಲಾ ಶನೀಶ್ವರ ಕಾರಣ’ ಎನ್ನುವಂತೆ ಆ ಮನೆಯ ಸೊಸೆ ಇಂತಹ ಆಪಾದನೆಗೆ ಗುರಿಯಾಗುತ್ತಾಳೆ. ಕುಟುಂಬ, ಮನುಷ್ಯರು ಎಂದ ಮೇಲೆ ಏರುಪೇರು, ಒಳಿತು- ಕೆಡುಕು, ಲಾಭ- ನಷ್ಟ ಸಹಜವಾದದ್ದೇ ಅಲ್ಲವೇ? ಇವೆಲ್ಲವನ್ನೂ ಆ ಮನೆಗೆ ಬಂದ ಹೆಣ್ಣಿನೊಂದಿಗೆ ತಳಕು ಹಾಕುವುದು ಎಷ್ಟು ಸರಿ? ನಡೆಯುವ ಘಟನೆಗಳಿಗೆಲ್ಲಾ ಸೊಸೆಯ ಕಾಲ್ಗುಣ ಎನ್ನುವಂತೆ ಅಳಿಯನ ಕಾಲ್ಗುಣವನ್ನು ಪರಿಗಣಿಸಬಹುದೇ?
ಈಗಲೂ ಉತ್ತರ ಕರ್ನಾಟಕದಲ್ಲಿ ಹೆಣ್ಣನ್ನು ನೋಡಲು ಬಂದಾಗ ಆಕೆಯನ್ನು ಬರಿಗಾಲಿನಲ್ಲಿ ನಡೆದಾಡುವಂತೆ ಹೇಳಲಾಗುತ್ತದೆ. ಅದು ಏಕೆಂದರೆ ಆಕೆಯ ಕಾಲಿನ ಪಾದ ಸಪಾಟಾಗಿರದೇ ಇದ್ದರೆ ಆಕೆಯನ್ನು ತಂದುಕೊಳ್ಳುವ ಮನೆಗೆ ಒಳ್ಳೆಯದಾಗುತ್ತದೆ. ಕಾಲಿನ ಪಾದ ಸಪಾಟಾಗಿದ್ದರೆ (ಫ್ಲಾಟ್ ಫೂಟ್) ಆಕೆ ಸೇರುವ ಮನೆಯು ನಿರ್ನಾಮವಾಗುತ್ತದೆ ಎಂಬ ನಂಬಿಕೆ ಅಲ್ಲಿದೆ. ಇಂತಹ ಕೆಟ್ಟ ನಂಬಿಕೆಗಳಿಂದ ಅನೇಕ ಹೆಣ್ಣು ಮಕ್ಕಳ ಮದುವೆಗಳು ಮುರಿದು ಬೀಳುತ್ತಿವೆ. ಈ ಬಗೆಯ ಅನಿಷ್ಟ ಮನಸ್ಸುಗಳಿಗೆ ಬುದ್ಧಿ ಹೇಳುವವರು ಯಾರು? ಇತ್ತೀಚಿನ ಆಘಾತಕಾರಿ ಬೆಳವಣಿಗೆ ಎಂದರೆ, ಟಿ.ವಿ.ಗಳಲ್ಲಿ ಬರುತ್ತಿರುವ ನೂರಾರು ಚಾನೆಲ್‌ಗಳ ಜ್ಯೋತಿಷಿಗಳನ್ನು ಅತಿಯಾಗಿ ನಂಬುತ್ತಿರುವ ಅತ್ಯಂತ ಸುಶಿಕ್ಷಿತ ಜನ. ಜಾತಕಗಳಲ್ಲಿ, ಅನಿಷ್ಟ ಪದ್ಧತಿಗಳಲ್ಲಿ ನಂಬಿಕೆ ಹಿಂದೆಂದಿಗಿಂತ ಇಂದು ಅತಿಯಾಗಿದೆ.
ಮಾರ್ಚ್ 8 ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದಿದ್ದಾಳೆ, ಕೈತುಂಬಾ ಹಣ ಸಂಪಾದಿಸುತ್ತಿದ್ದಾಳೆ, ಯಾರ ಹಂಗೂ ಇಲ್ಲದೆ ಬದುಕುತ್ತಿದ್ದಾಳೆ ಎಂಬೆಲ್ಲಾ ವಿಷಯಗಳನ್ನು ಅವಲೋಕಿಸಿದಾಗ ಹೆಮ್ಮೆಯಾದರೂ, ಇಂದಿಗೂ ವರದಕ್ಷಿಣೆ, ಕೆಟ್ಟ ಸಂಪ್ರದಾಯ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆ, ಉಡುಪಿನ ವಿಚಾರಕ್ಕೆ ಮತ್ತು ದೇವರ ಹೆಸರಿನಲ್ಲಿನ ಹರಕೆಗಳಿಗೆ ಆಕೆ ಬಲಿಯಾಗುತ್ತಲೇ ಇದ್ದಾಳೆ.
ಏನೆಲ್ಲಾ ಸಂಕಟಗಳಿಗೂ ಸಾವೊಂದೇ ಪರಿಹಾರವಲ್ಲ ಎಂಬುದನ್ನು ಮಹಿಳೆಯರು ಮರೆಯಬಾರದು. ವಿದ್ಯೆ, ಉದ್ಯೋಗವಿರುವ ಮಹಿಳೆಯರೇ ಹೀಗೆ ಮಾಡಿಕೊಂಡರೆ ಉಳಿದವರ ಸ್ಥಿತಿಯೇನು? ವಿದ್ಯೆ ಮನಸ್ಥೈರ್ಯವನ್ನು ಹೆಚ್ಚಿಸಬೇಕಲ್ಲವೇ? ಸಾವಿನ ದವಡೆಯಲ್ಲೂ, ಸೀಮೆಎಣ್ಣೆ ಸುರಿದ ಗಂಡನ ವಿರುದ್ಧ ಹೇಳಿಕೆ ನೀಡದ ಹೆಣ್ಣುಗಳು, ಬಿಟ್ಟು ಹೋದ ಗಂಡನ ಮಡಿಲಲ್ಲೇ ಸಾವನ್ನಪ್ಪುವೆನೆಂಬ ಮಹಿಳೆಯರ ಇಂತಹ ಬಯಕೆಗಳ ಸೂಕ್ಷ್ಮತೆಯನ್ನು ಸಂಸ್ಕೃತಿ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ. ಈ ಸೂಕ್ಷ್ಮವನ್ನು ಅರಿತು ಮಹಿಳೆಯರು ಗಟ್ಟಿಯಾಗಿ ಬದುಕು ಕಟ್ಟಿಕೊಳ್ಳಬೇಕಾಗಿದೆ.
ರಾಜ್ಯದಲ್ಲಿ 2015ರಲ್ಲಿ ದೌರ್ಜನ್ಯಕ್ಕೆ ಬಲಿಯಾದ ಮಹಿಳೆಯರ ಸಂಖ್ಯೆ 4,025, ಬಂಧಿತ ಆರೋಪಿಗಳು 5,352. ಶಿಕ್ಷೆಯಾಗಿರುವುದು ಕೇವಲ ಇಬ್ಬರಿಗೆ. ರಾಜ್ಯದಲ್ಲಿ 2015ರಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಲ್ಲಿಯೂ 1,390 ಬಂಧಿತ ಆರೋಪಿಗಳಿದ್ದರೂ ಶಿಕ್ಷೆಯಾಗಿರುವುದು ಐದು ಜನರಿಗೆ ಮಾತ್ರ. ಕಾಲ್ಗುಣದ ಕಾರಣಕ್ಕೆ ಬಲಿಯಾದ ನಾಗಲಕ್ಷ್ಮಿ ತನ್ನ ತಂದೆಗೆ ಬರೆದ ಇ- ಮೇಲ್ ಹಾಗೂ ಆಕೆಯನ್ನು ಮದುವೆಯಾಗಬೇಕಿದ್ದ ಹುಡುಗನ ಪತ್ರ ಸಾಕ್ಷ್ಯಕ್ಕೆ ಇದ್ದರೂ ಆತನಿಗೆ ಶಿಕ್ಷೆ ಸಾಧ್ಯವೇ? ಆದರೆ
ಯಾವ ಶಿಕ್ಷೆ ನೀಡಿದರೇನು ಆ ಹೆಣ್ಣು ಮತ್ತೆ ಬದುಕಿ ಬರುವಳೇ? ಮಹಿಳೆಯರ ಮೇಲಿನ ಇಂತಹ ದೌರ್ಜನ್ಯಗಳು ನಿರಂತರವೇ? ಇಂತಹ ಮೂಢನಂಬಿಕೆಗಳನ್ನು ದೂರವಿಟ್ಟು ಮಾನವೀಯತೆಯ ಕಣ್ಣಿನಿಂದ ನಾವೆಲ್ಲ ಬದುಕಲು ಸಾಧ್ಯವಿಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.