ಕರ್ನಾಟಕದಲ್ಲಿ ಆಗ ಎಂ.ವೀರಪ್ಪ ಮೊಯಿಲಿ ಅವರ ಸರ್ಕಾರ. ಅವರ ಸರ್ಕಾರದಲ್ಲಿ ಎಸ್.ಎಂ. ಕೃಷ್ಣ ಅವರು ಪ್ರಮುಖ ಖಾತೆಯನ್ನು ಹೊಂದಿದ ಸಚಿವರಾಗಿದ್ದರು. ಭೀಮಸಮುದ್ರದಲ್ಲಿ ಮಾಜಿ ಶಾಸಕರಾದ ಶಿವಪ್ಪನವರ ಸ್ಮರಣಾರಾಧನೆಗೆ ಕೃಷ್ಣ ಮತ್ತು ಕೇಂದ್ರ ರೈಲ್ವೆ ಸಚಿವರಾಗಿದ್ದ ಜಾಫರ್ ಷರೀಫ್ ಅವರು ಭಾಗವಹಿಸಿದ್ದರು.
ಆ ಖಾಸಗಿ ಕಾರ್ಯಕ್ರಮದಲ್ಲಿ ನಾನು ಈ ಭಾಗದ (ಮಧ್ಯ ಕರ್ನಾಟಕ) ಒಂದು ಸಮಸ್ಯೆಯನ್ನು ಪ್ರಸ್ತಾಪಿಸಿದೆ. ಆಗಿನ್ನೂ ಯಾವುದೇ ನೀರಾವರಿ ಹೋರಾಟ ಸಮಿತಿ ರಚನೆ ಆಗಿರಲಿಲ್ಲ. ನಾನದನ್ನು ಪ್ರಸ್ತಾಪಿಸುತ್ತ - ಈ ಭಾಗದ ಬಹುಜನರ ಮತ್ತು ಬಹುದಿನಗಳ ಬೇಡಿಕೆಯಾಗಿರುವ ತುಂಗಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸಿದೆ. ಈ ವಿಚಾರದಲ್ಲಿ ಸರ್ಕಾರವು ನಿಧಾನ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂಬ ಎಚ್ಚರಿಕೆಯನ್ನು ನೀಡಿದೆ.
ಈ ಮಾತಿಗೆ ಪ್ರತಿಕ್ರಿಯಿಸಿದ ಕೃಷ್ಣರವರು - ‘ಸ್ವಾಮೀಜಿಯವರೇ, ಸರ್ಕಾರ ಈ ಯೋಜನೆಯ ಬಗೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ತಾವು ಬೀದಿಗೆ ಇಳಿಯದಂತೆ ನೋಡಿಕೊಳ್ಳುತ್ತದೆ’ ಎಂದರು. ಅದೇ ಅವಧಿಯಲ್ಲಿ ಪ್ರಧಾನಮಂತ್ರಿಗಳಾದ ಪಿ.ವಿ. ನರಸಿಂಹರಾವ್ ಅವರು ಶ್ರೀಮಠವನ್ನು ಸಂದರ್ಶಿಸಿದರು. ಅವರಿಗೂ ನಾನು- ನೀರಾವರಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಮನವಿ ಪತ್ರವನ್ನು ನೀಡಿದೆ. ಯಾವುದೇ ಖಾಸಗಿ ಮಾತುಕತೆಯನ್ನು ಅವರೊಂದಿಗೆ ಆಡಲಿಲ್ಲ.
ನಿಜಲಿಂಗಪ್ಪನವರು ಈ ಭಾಗದವರಾಗಿದ್ದುಕೊಂಡು ಮುಖ್ಯಮಂತ್ರಿಯಾಗಿಯೂ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಿಲ್ಲವೆಂಬ ಆರೋಪ ಕೆಲವರದು. ಆ ಕಾಲದಲ್ಲಿ ಯಾವುದು ತೊಡಕಾಗಿತ್ತೊ ತಿಳಿಯದು. ತಾನು ಇದೇ ಭಾಗದಲ್ಲಿ ಜನಿಸಿದ ಮತ್ತು ಆಯ್ಕೆಯಾದ ವ್ಯಕ್ತಿಯೆಂದು, ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರೆಂಬ ಸಂಕುಚಿತ ಭಾವನೆ ಬರದಿರಲೆಂದು ಹಾಗೆ ನಡೆದುಕೊಂಡಿದ್ದಿರಬಹುದು.
ಅವರ ನಂತರದ ರಾಜಕಾರಣದಲ್ಲಿ ಏನೆಲ್ಲ ಸಂಕುಚಿತ ಹಾಗೂ ಸೀಮಿತವಾದ ಭಾವನೆಗಳು ಕೆಲಸ ಮಾಡುತ್ತ ಬಂದಿವೆ. ಇತ್ತೀಚಿನ ರಾಜಕಾರಣದಲ್ಲಿ ಅದರಲ್ಲೂ ವಿವಿಧ ಖಾತೆಗಳನ್ನು ನಿಭಾಯಿಸುತ್ತ ಬಂದಿರುವವರಿಗೆ ತಮ್ಮ ಮತಕ್ಷೇತ್ರ ಮಾತ್ರ ಕಂಡಿದೆ. ಇಡೀ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸದೆ ತಮ್ಮ ಮತಕ್ಷೇತ್ರ ಮತ್ತು ತಮ್ಮ ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳಿಗೆ ಆದ್ಯತೆ ನೀಡುತ್ತ ಬರಲಾಗಿದೆ. ಇಲ್ಲಿ ಸಮಗ್ರ ದೃಷ್ಟಿಕೋನದ ಕೊರತೆ ಎದ್ದುಕಾಣುತ್ತದೆ. ಮತಕ್ಷೇತ್ರದ ಕುಂದು ಕೊರತೆಗಳತ್ತ ಗಮನಹರಿಸಬೇಕಾದುದು ಪ್ರತಿಯೊಬ್ಬ ಜನಪ್ರತಿನಿಧಿಯ ಆದ್ಯಕರ್ತವ್ಯ.
ಅದರೊಟ್ಟಿಗೆ ಬೇರೆ ಮತಕ್ಷೇತ್ರ ಮತ್ತು ಜಿಲ್ಲೆಗಳತ್ತಲೂ ಗಮನಹರಿಸದಿದ್ದರೆ, ಒಂದು ಜಿಲ್ಲೆಗೆ ಮಾತ್ರ ಆತ ಸಚಿವನೆನಿಸಿಕೊಳ್ಳಬೇಕಾಗುತ್ತದೆ. ಯಾವುದೇ ಖಾತೆಯನ್ನು ನಿರ್ವಹಿಸುವ ಜನಪ್ರತಿನಿಧಿಗೆ ಸಮಗ್ರ ದೃಷ್ಟಿಕೋನದ ಬಗೆಗೆ ಅರಿವು ಇರಬೇಕಾಗುತ್ತದೆ. ಅಂಥ ಅರಿವನ್ನು ಹೊಂದಿದವರು ಮಾತ್ರ ಇಡೀ ಸಮೂಹವನ್ನು ಪ್ರತಿನಿಧಿಸಬಲ್ಲವರಾಗಿರುತ್ತಾರೆ. ಇಲ್ಲದಿದ್ದರೆ, ಅವನು ಒಂದು ಜಾತಿಯ ಅಥವಾ ಒಂದು ಮತಕ್ಷೇತ್ರದ ಪ್ರತಿನಿಧಿ ಅನಿಸಿಕೊಳ್ಳುತ್ತಾನೆ.
ನಿಜಲಿಂಗಪ್ಪನವರ ಉದ್ದೇಶ, ತನ್ನ ಕ್ಷೇತ್ರದ ಯೋಜನೆಯನ್ನು ಮುಂಬರುವ ಸರ್ಕಾರ ಜಾರಿಗೊಳಿಸಲೆಂಬ ನಿಸ್ವಾರ್ಥತೆಯು ಇಂದಿನ ರಾಜಕಾರಣಿಗಳಿಗೆ ಒಂದು ಮಾದರಿ. ತಮ್ಮ ಕ್ಷೇತ್ರಕ್ಕೇ ನೂರಾರು ಕೋಟಿ ಖರ್ಚು ಮಾಡಿ, ಒಂದು ಕ್ಷೇತ್ರವನ್ನು ಕಾಯ್ದುಕೊಳ್ಳುವ ಹಿತಾಸಕ್ತರಿಗೆ ನಿಜಲಿಂಗಪ್ಪನವರ ಸೂಕ್ಷ್ಮತೆ ಅರ್ಥವಾಗಬೇಕಾಗುತ್ತದೆ.
ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾದಾಗ ಅವರು ಹುಟ್ಟಿದ ಊರಿಗೆ ಹೋಗುವ ರಸ್ತೆಯು ತುಂಬ ಕೆಟ್ಟುಹೋಗಿತ್ತು. ನಾವೆಲ್ಲ ಆ ಭಾಗದಲ್ಲಿ ಸಂಚರಿಸುವಾಗ ತಮ್ಮದೇ ಊರಿನ ಮುಖ್ಯಮಂತ್ರಿ ಇದ್ದರೂ ತಮ್ಮ ಊರಿನ ರಸ್ತೆಗಳು ಸುಧಾರಣೆ ಆಗಿಲ್ಲವೆಂಬ ಭಾವನೆಗಳು ವ್ಯಕ್ತವಾಗುತ್ತಿತ್ತು. ಆದರೆ ತಮ್ಮ ಊರಿಗೆ ರಸ್ತೆ ಮಾಡಿಸಲು ತಾವು ಮುಖ್ಯಮಂತ್ರಿ ಆಗಿದ್ದೇನೆಂದು ಮುಖ್ಯಮಂತ್ರಿಗಳು ಭಾವಿಸುವುದೂ ಸರಿಯಲ್ಲ. ಎಲ್ಲ ಸಂದರ್ಭದಲ್ಲೂ ಈ ಧೋರಣೆಯು ಸರಿಯಲ್ಲ.
ನಿಜಲಿಂಗಪ್ಪನವರ ಆಡಳಿತವು ಬೇರೆ ಬೇರೆ ಭಾಗದ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಂತೆ ಕರ್ನಾಟಕವನ್ನು ಆಳಿದವರು ನಿಜಲಿಂಗಪ್ಪನವರ ಕ್ಷೇತ್ರವನ್ನು, ಜನ್ಮಭೂಮಿಯನ್ನು ಮರೆತಂತೆ ಕಾಣುತ್ತಿದೆ. ಯೋಜನೆಯನ್ನು ಜಾರಿಗೊಳಿಸಿ ಅವರಿಗೆ ಹೆಚ್ಚಿನ ಗೌರವವನ್ನು ಸಲ್ಲಿಸಬಹುದಿತ್ತು. ಅಂಥ ಉದಾರತನ ಬಂದುಬಿಟ್ಟರೆ ಎಲ್ಲರೂ ನಿಜಲಿಂಗಪ್ಪನವರೇ ಆಗಿಬಿಡುತ್ತಾರೆ. ದೇವರಾಜ ಅರಸು ಅವರಲ್ಲಿ ಸಮಗ್ರ ದೃಷ್ಟಿಕೋನವು ಕೆಲಸ ಮಾಡಿದೆ. ಅವರೇನು ದಲಿತ, ಶೋಷಿತ ವರ್ಗಕ್ಕೆ ಸೇರಿದವರಲ್ಲ. ಆದರೂ ಅವರು ಸಮಗ್ರತೆಯನ್ನು ಮೆರೆದು, ಬಹಳ ಜನರಿಗೆ ಆದರ್ಶವಾಗಿ ನಿಲ್ಲುತ್ತಾರೆ.
ನಿಜಲಿಂಗಪ್ಪನವರ ಕಾಲದಿಂದಲೂ ನನೆಗುದಿಗೆ ಬಿದ್ದಿದೆ ನೀರಾವರಿ ಯೋಜನೆ. ಜೆ.ಎಚ್.ಪಟೇಲರು ಮುಖ್ಯಮಂತ್ರಿ ಆದಾಗ ಶ್ರೀಮಠದ ಸಮಾರಂಭಕ್ಕೆ ಬಂದಿದ್ದರು. ನಾನು ಅವರಿಗಿಂತಲೂ ಮೊದಲು ಮಾತನಾಡಿ ನೀರಾವರಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿದಾಗ ಅವರು - ಯಾರು ನೀರಾವರಿ ಯೋಜನೆ ಜಾರಿ ಆಗಬೇಕೆನ್ನುತ್ತಾರೋ, ಅವರೇ ನಾಳೆಯಿಂದ ಸಲಿಕೆ-–ಗುದ್ದಲಿ ತೆಗೆದುಕೊಂಡು ನೆಲ ಅಗೆಯಲು ಹೋಗಲಿ ಎಂಬ ಉಡಾಫೆಯ ಮಾತನಾಡಿದರು.
ಮುಂದೆ ಅವರ ಸರ್ಕಾರವೇ ಆತುರಾತುರವಾಗಿ ಯೋಜನೆಗೆ ಅಡಿಗಲ್ಲು ಹಾಕುವ ನಾಟಕವಾಡಿತು. ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ದಿನಗಳಲ್ಲಿ ಅವರಲ್ಲಿಗೆ ಹೋಗಿ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಲಾಯಿತು. ಈ ನಡುವೆ ನೀರಾವರಿ ಹೋರಾಟವು ರೂಪುಗೊಂಡು, ಈ ಭಾಗದ ರೈತಮುಖಂಡರು ಮತ್ತು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಹೋರಾಟ ಮುಂದುವರಿಯುತ್ತ ಬಂದಿದ್ದು, ಬಂಜಗೆರೆ ಜಯಪ್ರಕಾಶ್ ಮತ್ತಿತರರು ಮುನ್ನಡೆಸಿದ್ದಾರೆ.
ಕೋದಂಡರಾಮಯ್ಯನವರ ನೇತೃತ್ವದಲ್ಲಿ ಅನೇಕ ಒತ್ತಾಯಗಳನ್ನು ಮಾಡುತ್ತ ಬರಲಾಗಿದೆ. ಅವರು ರಾಜಕಾರಣಕ್ಕೆ ಹೋದ ಸಂದರ್ಭದಲ್ಲಿ ನನಗೆ ಕೆಲವರು ನೀರಾವರಿ ಯೋಜನೆ ಹೋರಾಟದ ಅಧ್ಯಕ್ಷರಾಗುವಂತೆ ವಿನಂತಿಸಿದಾಗ, ‘ಎಂ.ಜಯಣ್ಣನವರು ಅಧ್ಯಕ್ಷರಾಗಲಿ, ನನಗೆ ಯಾವ ಪದವಿಯೂ ಬೇಡ. ಹೋರಾಟದ ಹೊಣೆಯನ್ನು ಹೊತ್ತುಕೊಳ್ಳುತ್ತೇನೆ’ ಎಂದು ಹೇಳಿ, ಅದರಂತೆ ನಡೆದುಕೊಳ್ಳುತ್ತ ಬಂದಿದ್ದೇನೆ. ಜಯಣ್ಣನವರ ಮುಂದಾಳುತನದಲ್ಲಿ ಎಸ್.ಎಂ. ಕೃಷ್ಣ ಅವರನ್ನು ಭೇಟಿಮಾಡಿ ಯೋಜನೆಗೆ ಹಣವನ್ನು ಬಿಡುಗಡೆ ಮಾಡಲು ಒತ್ತಾಯಿಸಲಾಯಿತು.
ಎಚ್.ಡಿ. ಕುಮಾರಸ್ವಾಮಿ ಅವರನ್ನು ಖುದ್ದು ವಿಧಾನಸೌಧದಲ್ಲಿ ಭೇಟಿಯಾಗಿ ಯೋಜನೆಗೆ ಬಜೆಟ್ನಲ್ಲಿ ಹೆಚ್ಚಿನ ಹಣವನ್ನು ಮೀಸಲಿರಿಸಲು ಕೋರಲಾಯಿತು. ಇಬ್ಬರಿಂದಲೂ ಸಕಾರಾತ್ಮಕವಾದ ಪ್ರತಿಕ್ರಿಯೆ. ಬಿ.ಎಸ್. ಯಡಿಯೂರಪ್ಪನವರ ಸರ್ಕಾರಕ್ಕೂ ಈ ಬಗ್ಗೆ ಪ್ರಸ್ತಾಪಿಸಿದಾಗ ಬಜೆಟ್ನಲ್ಲಿ ಯೋಜನೆಗೆಂದು ಹಣವನ್ನು ತೆಗೆದಿಡಲಾಯಿತು.
ನಂತರ ಕಾಮಗಾರಿಗೆ ಚಾಲನೆ ದೊರಕಿದೆ. ಸಿದ್ದರಾಮಯ್ಯನವರ ನೇತೃತ್ವದ ಈಗಿನ ಸರ್ಕಾರವು ಈ ಯೋಜನೆಯ ಬಗೆಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದು, ಕೇಂದ್ರ ಸರ್ಕಾರದ ಸಂಗಡ ಮಾತನಾಡಿ ಅರಣ್ಯ ಒತ್ತುವರಿ ಬಗೆಗೆ ಅನುಮೋದನೆ ತೆಗೆದುಕೊಳ್ಳಬೇಕಾಗಿದೆ. ಅದರ ಪ್ರಕ್ರಿಯೆ ಪೂರ್ಣಗೊಂಡು ಮತ್ತಷ್ಟು ಹಣವನ್ನು ಬಿಡುಗಡೆಗೊಳಿಸಿದರೆ, ಹೆಚ್ಚೆಂದರೆ ನಾಲ್ಕು ವರ್ಷ; ತ್ವರಿತಗತಿಯಲ್ಲಿ ಕಾಮಗಾರಿಗಳು ನಡೆದರೆ, ಒಂದೂವರೆ ವರ್ಷದಲ್ಲೇ ಯೋಜನೆಯು ಪೂರ್ಣವಾಗುವ ಸಾಧ್ಯತೆಯಿದೆ.
ಈಗಾಗಲೇ ಶೇ ೪೦ರಷ್ಟು ಕಾಮಗಾರಿಯು ಪೂರ್ಣಗೊಂಡಿದ್ದು, ಶೇ ೬೦ರಷ್ಟು ಬಾಕಿ ಇದೆ. ವಿಳಂಬವಾದಷ್ಟೂ ಕಾಮಗಾರಿಯ ವೆಚ್ಚವು ಅಧಿಕಗೊಳ್ಳುತ್ತದೆ. ಈ ಕಾರಣದಿಂದ ಯೋಜನೆಯು ತ್ವರಿತಗತಿಯಲ್ಲಿ ನಡೆದು, ಮುಕ್ತಾಯವಾಗಲೆಂಬ ಆಶಯವು ಈ ಭಾಗದ ಜನರು, ನೀರಾವರಿ ಹೋರಾಟಗಾರರು, ಧಾರ್ಮಿಕ ನೇತಾರರು ಮತ್ತು ಜನಪ್ರತಿನಿಧಿಗಳ ಅಪೇಕ್ಷೆಯಾಗಿರುತ್ತದೆ. ಇತ್ತೀಚೆಗಷ್ಟೇ ಕಾಮಗಾರಿ ನಡೆದಿರುವ ೪-೫ ಜಾಗಗಳಿಗೆ ನೀರಾವರಿ ಹೋರಾಟಗಾರರು ಮತ್ತು ಮಾಧ್ಯಮದವರೊಟ್ಟಿಗೆ ಭೇಟಿ ನೀಡಿದಾಗ ಮೇಲಿನ ಅಂಶವು ಕಂಡುಬಂದಿತು.
ನೀರು ಮಾನವನ ಹಕ್ಕು, ಜೀವವಾಹಿನಿ. ಬೇರೆ ಪ್ರಾಂತ್ಯದವರಿಗೆ ಸಿಕ್ಕಂತಹ ನೀರಿನ ಹಕ್ಕು ಈ ಪ್ರಾಂತ್ಯದವರಿಗೂ ಸಿಗುವಂತಾಗಬೇಕು. ಅದರ ಸಮಾನ ಹಂಚಿಕೆ ಆಗಬೇಕು. ಆಳಿದ ಸರ್ಕಾರಗಳು ಬಯಲುಸೀಮೆ ಜಿಲ್ಲೆಗಳನ್ನು ಇಲ್ಲಿಯವರೆಗೆ ಯಾಕೆ ತಾತ್ಸಾರ ಮಾಡುತ್ತ ಬಂದಿವೆ? ಈ ಭಾಗದ ಜನರು ಕೂಡ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಯೋಜನೆಯನ್ನು ಪೂರ್ಣಗೊಳಿಸಿದವರನ್ನು ಹಾರ್ದಿಕವಾಗಿ ಸ್ವಾಗತ ಮಾಡೋಣ; ಇಲ್ಲದಿದ್ದರೆ ಹೋರಾಟಕ್ಕೆ ಸಿದ್ಧರಾಗೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.