ADVERTISEMENT

ನಮ್ಮ ಮಕ್ಕಳ ಶಾಲೆಯಲ್ಲೂ ಹೀಗಾಗಬಾರದೆಂದರೆ...?

ವಾಸುದೇವ ಶರ್ಮಾ ಎನ್.ವಿ.
Published 21 ಜುಲೈ 2014, 19:30 IST
Last Updated 21 ಜುಲೈ 2014, 19:30 IST

ಶಾಲೆಗಳಲ್ಲೂ ಹೀಗಾಗುತ್ತೆ ಅಂದ್ರೆ? ನಮ್ಮಗು ಹೋಗೋ ಸ್ಕೂಲ್ನಲ್ಲೂ ಹೀಗಾಗ್ತಿದ್ರೆ? ಇನ್ಯಾವ ಧೈರ್ಯದಿಂದ ಮಕ್ಕಳನ್ನ ಕಳಿಸೋದು? ನಮ್ಮಗು ಮಾತು ಕೇಳ್ತಿದ್ರೆ ಇಂಥ­ದೇನೋ ಅವ್ರ ಸ್ಕೂಲ್ನಲ್ಲೂ ಆಗ್ತಿದೆ ಅಂತನ್ಸತ್ತೆ. ಇಂಥಾ ಮಾತುಗಳು ಒಂದೆರಡು ವಾರದಿಂದ ಪೋಷಕರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಪುಟ್ಟ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನಡೆಯುತ್ತಿರುವ ಹೋರಾ­ಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಗುವಿನ ಮೇಲಾದ ಅತ್ಯಾಚಾರ ಪತ್ತೆಯಾಗಿ, ಪೊಲೀಸ್ ದೂರು, ತನಿಖೆ ಮತ್ತು ಪ್ರತಿಭಟನೆ­ಗಳು ನಡೆದಂತೆ, ಇಲ್ಲಿಯವರೆಗೂ ಕೇವಲ ಪಿಸು­ಪಿಸು ಎಂದು ಗುಟ್ಟುಗೂಡಾಗುತ್ತಿದ್ದ ಮಕ್ಕಳ ಹಕ್ಕುಗಳ ವಿಚಾರ ಈಗ ಗಟ್ಟಿಯಾಗಿ ಹೊರ­ಬೀಳುತ್ತಿದೆ.

ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಂಡು ಅದರಂತೆ ನಡೆ­ಯ­ಲೇಬೇಕಾದ, ಮುಂದೆ ಮಕ್ಕಳ ಮೇಲಾಗ­ಬಹು­ದಾದ ಆಘಾತಗಳನ್ನು ತಡೆಯಬೇಕಾದ ಅವಶ್ಯಕತೆ ಇದೆ. ಅತ್ಯಾಚಾರ ಪ್ರಕರಣಗಳು ಇತ್ತೀಚಿನ ದಿನ­ಗಳಲ್ಲಿ ಬಹಳ ಹೆಚ್ಚಾಗಿವೆ ಎಂದು  ಹೇಳಲಾಗು­ತ್ತಿದೆ. ಆದರೆ ಇದು ನಿಜವಲ್ಲ. ಪ್ರಕರಣಗಳು ಈಗ ಹೆಚ್ಚಾಗಿ ವರದಿಯಾಗುತ್ತಿದ್ದು ಆ ಕುರಿತು ದೂರು­ಗಳು ದಾಖಲಾಗುತ್ತಿವೆ. ಮಕ್ಕಳ ಮೇಲೆ ಅತ್ಯಾಚಾರಗಳಾದಾಗ ಪೋಷಕರು ಧೈರ್ಯ­ವಾಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಮುಂದಾಗುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ, ದೆಹಲಿಯಲ್ಲಿ ೨೦೧೨ರ ಅಂತ್ಯದಲ್ಲಿ ಆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ನ್ಯಾಯಾಲಯ ನೀಡಿದ ನಿರ್ದೇಶನ. ಅತ್ಯಾಚಾರದ ಪ್ರಕರಣ ತಿಳಿದು­ಬಂದಾಗ ದೂರು ಕೊಡಲು ಯಾರೂ ಹಿಂಜರಿ­ಯ­ಬಾರದು, ತೊಂದರೆಗೊಳಗಾದ ವ್ಯಕ್ತಿಗೆ ವೈದ್ಯಕೀಯ ನೆರವು ಕೊಡಿಸಲು ಪೊಲೀಸರೂ ಹಿಂದುಮುಂದು ನೋಡಬಾರದು. ಅವರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಬೇಕು ಎಂದು ಕೋರ್ಟ್‌ ಹೇಳಿತ್ತು. ಇದ­ರಿಂದಾಗಿ ಪೊಲೀಸರು ನೆಪಗಳನ್ನೊಡ್ಡದೆ ದೂರು ದಾಖಲಿಸಿಕೊಳ್ಳಬೇಕಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ಎದುರಿಸಬಹು­ದಾದ ಲೈಂಗಿಕ ಶೋಷಣೆಯ ಪ್ರಕರಣಗಳತ್ತ ನೋಡೋಣ: ಅಸಹಾಯಕರಾಗಿರುವ ಮಕ್ಕಳ ಮೇಲೆ ಬಲಾಢ್ಯರು, ಅಧಿಕಾರ ಹೊಂದಿರುವ­ವರು, ಮೇಲ್ವಿಚಾರಕರು, ಸ್ಥಾನಮಾನಗಳಿಂದ ಮೇಲುಗೈ ಹೊಂದಿರುವವರು ಕಣ್ಣಿಗೆ ಸುಲಭ­ವಾಗಿ ಕಾಣದಂಥ ಲೈಂಗಿಕ ಶೋಷಣೆ ನಡೆಸುತ್ತಾರೆ.

ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ­ವರು, ಸೂಕ್ತ ಅವಕಾಶಗಳನ್ನು ಸೃಷ್ಟಿಸುತ್ತಾರೆ.  ತಡರಾತ್ರಿ ಮಕ್ಕಳಿಗೆ ಪಾಠ ಹೇಳಿಕೊಟ್ಟು ಮಕ್ಕಳೊ­ಡನೆಯೇ ಶಿಕ್ಷಕರು ಮಲಗುವುದು, ಮಗುವನ್ನು ಶಿಕ್ಷಿಸುವುದಕ್ಕಾಗಿ ಕತ್ತಲೆ ಕೋಣೆಯಲ್ಲಿ ಇರಿಸು­ವುದು, ಶಾಲಾ ಬಸ್‌ನಲ್ಲಿ ಕೊನೆಯವರಾಗಿ ಉಳಿಯುವ ಮಕ್ಕಳ ಮೇಲೆ ಅತ್ಯಾಚಾರ ನಡೆಸು­ವುದು, ಆಟೋಟಗಳಲ್ಲಿ ಅಥವಾ ಪಾಠದಲ್ಲಿ ವಿಶೇಷ ವಿಧಾನ ಹೇಳಿಕೊಡಲು ತಮ್ಮ ಕೋಣೆ­ಯಲ್ಲಿ ಮಗುವನ್ನು ಒಂಟಿಯಾಗಿ ಉಳಿಸಿಕೊಳ್ಳು­ವುದು ಇತ್ಯಾದಿ.

ಇದರೊಂದಿಗೆ ತರಗತಿಯಲ್ಲಿ  ಮಕ್ಕಳನ್ನು ಕೆಲವು ಶಿಕ್ಷಕರು ಅನವಶ್ಯಕವಾಗಿ ಅಸಹ್ಯವಾಗಿ ಮುಟ್ಟುವುದು, ಲೈಂಗಿಕ ಅರ್ಥ­ವಿರುವ ಪದ–ವಾಕ್ಯ–ಪ್ರಸಂಗಗಳನ್ನು ಉಲ್ಲೇಖಿಸು­ವುದು, ಕಂಪ್ಯೂಟರ್, ಟಿ.ವಿ, ಮೊಬೈಲ್‌­ನಲ್ಲಿ ಲೈಂಗಿಕ  ಚಿತ್ರಗಳನ್ನು ತೋರಿಸುವುದು – ವರದಿಯಾಗಿವೆ. ಇಂತಹ ಹೇಯಕೆಲಸವನ್ನು ಶಿಕ್ಷಕರಲ್ಲದೆ ಶಾಲೆ ಮತ್ತು ಶಾಲೆಯ ವಿದ್ಯಾರ್ಥಿ ನಿಲಯಕ್ಕೆ ಸಂಬಂಧಿಸಿದ ಶಿಕ್ಷಕೇತ­ರರೂ, ಆಡಳಿತ ಮಂಡಳಿ ಸದಸ್ಯರು, ಶಾಲೆಗೆ ಭೇಟಿ ನೀಡುವವರು ಕೂಡ ಮಾಡುತ್ತಿರ­ಬಹುದು.

ಶಾಲೆಯಲ್ಲಿ ಮಕ್ಕಳ ಲೈಂಗಿಕ ಶೋಷಣೆ ಆಗದಂತೆ ತಡೆಯುವುದು ಹೇಗೆ? ಈ ಕುರಿತು ಅನುಸರಿಸಬೇಕಾದ ಕಡ್ಡಾಯ ಕ್ರಮಗಳು ಹೀಗಿವೆ: ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ೨೦೦೯ರ ಸೆಕ್ಷನ್ ೧೭ರಂತೆ ಯಾವುದೇ ಮಗುವನ್ನು ದೈಹಿಕ ಶಿಕ್ಷೆ ಅಥವಾ ಮಾನಸಿಕ ಕ್ಷೋಭೆಗೆ ಗುರಿ (ಇದರಲ್ಲಿ ಲೈಂಗಿಕ ಶೋಷ­ಣೆಯೂ ಸೇರಿಸಿಕೊಳ್ಳಬಹುದು) ಮಾಡ­ಬಾರದು.

ಇದನ್ನು ಯಾರೇ ಮೀರಿದಲ್ಲಿ, ಸೆಕ್ಷನ್ ೩೧ರ ಪ್ರಕಾರ ಮಕ್ಕಳ ಮೇಲೆ ಆಗಿರಬಹುದಾದ ಎಂತಹದೇ ಶೋಷಣೆಯ ಪ್ರಕರಣವಾದರೂ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬಹುದು. ಈ ಕಾಯ್ದೆಯ ಜಾರಿಗಾಗಿ ಇರುವ ರಾಜ್ಯ ನಿಯಮಗಳ  ಪ್ರಕಾರ, ಶಾಲೆ­ಗಳಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾದಲ್ಲಿ, ತಕ್ಷಣ ಸಂಬಂಧಿಸಿದವರಿಗೆ ದೂರು ನೀಡಬೇಕು.

ಎಲ್ಲಾ ಶಾಲೆಗಳು ತಮ್ಮ ಆವರಣದಲ್ಲಿ ಚೈಲ್ಡ್‌­ಲೈನ್ ೧೦೯೮ ದೂರವಾಣಿ ಸಹಾಯಸಂಖ್ಯೆ ಪ್ರದರ್ಶಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಶಾಲಾ ಆಡಳಿತವು ಪೋಷಕರ ಸಭೆ ನಡೆಸಬೇಕು. ತಮ್ಮ ಶಾಲೆಗಳನ್ನು ವಿವಿಧ ನೆಪಗಳನ್ನೊಡ್ಡಿ ಈ ಕಾಯ್ದೆಯಿಂದ ಹೊರಗಿಡಲು ಖಾಸಗಿ ಶಾಲೆ­ಗಳು ನಡೆಸಿರುವ ಬಯಲಾಟದಲ್ಲಿ ಮಕ್ಕಳ ಹಿತ­ರಕ್ಷಣೆ ಬಲಿಯಾಗುತ್ತಿದೆ.

೨೦೧೨ರಲ್ಲಿ ಜಾರಿಗೆ ಬಂದ ‘ಲೈಂಗಿಕ ಅಪ­ರಾಧ­ಗಳಿಂದ ಮಕ್ಕಳ ರಕ್ಷಣಾ ಕಾಯ್ದೆ’ಯ ಮೂಲ ಆಶಯದಂತೆ, ಮಗುವನ್ನು  ಎಲ್ಲಿಯೂ ಯಾರೂ ಲೈಂಗಿಕವಾಗಿ ಶೋಷಿಸಬಾರದು ಮತ್ತು  ಹಾಗಾದಲ್ಲಿ ಮಗು ಮತ್ತು ಮಗುವಿನ ಸಂಬಂಧಿಗಳಿಗೆ ತೊಂದರೆ, ಹಿಂಸೆಯಾಗದಂತೆ ವಿಚಾರಣೆಯನ್ನು ಜಿಲ್ಲಾ ಮಕ್ಕಳ ನ್ಯಾಯಾಲಯ­ಗಳಲ್ಲಿ ತ್ವರಿತವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು.

ಶೈಕ್ಷಣಿಕ ಸಂಸ್ಥೆಗಳ ಯಾವುದೇ ಸಿಬ್ಬಂದಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ, ಅದನ್ನು ತೀವ್ರ ಭೇದಕ ಲೈಂಗಿಕ ಆಕ್ರಮಣ ಎಂದು ಪರಿಗಣಿಸಿ ಅಂತಹವರಿಗೆ ಹತ್ತು ವರ್ಷಗಳಿಗೆ ಕಡಿಮೆ ಇಲ್ಲದಂತೆ ಅಥವಾ ಕಠಿಣ ಜೀವಾವಧಿಯ  ಶಿಕ್ಷೆ ವಿಧಿಸಬೇಕು. ಮಕ್ಕಳ ಮೇಲೆ ಲೈಂಗಿಕ ಶೋಷಣೆ­ಯಾಗಿರುವ ವಿಚಾರ ತಿಳಿದಿದ್ದರೂ ಅದನ್ನು ಕುರಿತು ದೂರು ದಾಖಲಿಸದಿದ್ದರೆ, ಮತ್ತು ಕೊಟ್ಟ ದೂರನ್ನು ದಾಖಲಿಸದಿದ್ದರೆ ಅವರು ಯಾರೇ ಆಗಿರಲಿ (ಪೋಷಕರನ್ನೂ ಒಳಗೊಂಡಂತೆ) ಅವರಿಗೆ ಕಾರಾಗೃಹವಾಸ  ಶಿಕ್ಷೆಯಿದೆ.
 
ಈ ಕಾಯ್ದೆ ಕುರಿತು ಶೈಕ್ಷಣಿಕ ಸಂಸ್ಥೆಗಳ ಪ್ರತಿ­ಯೊಬ್ಬ ಸಿಬ್ಬಂದಿಗೆ ಯಾವುದೇ ಅನುಮಾನಗಳಿಗೆ ಎಡೆಯಿಲ್ಲದಂತೆ ಅರಿವು ಮೂಡಿಸಲೇಬೇಕಿದೆ. ಹೀಗಾಗಿ ಎಲ್ಲ ರೀತಿಯ ಶೈಕ್ಷಣಿಕ ಸಂಸ್ಥೆಗಳು ಈ ಮುಂದಿನ ಕನಿಷ್ಠ ಕ್ರಮಗಳನ್ನು ತಕ್ಷಣವೇ ಕೈಗೊಳ್ಳ­ಬೇಕೆಂದು ಪೋಷಕರು ಒತ್ತಾಯಿಸಬೇಕಿದೆ. ಎಲ್ಲಾ ಶಾಲೆಗಳು  ಎಲ್ಲ ಸಿಬ್ಬಂದಿ (ಕಾಯಂ, ಅರೆಕಾಲಿಕ, ಗುತ್ತಿಗೆ) ಮಕ್ಕಳ ರಕ್ಷಣಾ ಕಾಯ್ದೆಗೆ ಬದ್ಧರಾಗಿರಬೇಕು.

ಪ್ರತಿವರ್ಷ ಈ ನೀತಿಯನ್ನು ಕುರಿತು ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಯೊಂದಿಗೆ ಮಕ್ಕಳ ಹಕ್ಕುಗಳನ್ನು ಕುರಿತು ಕಾರ್ಯಾಗಾರ ನಡೆಸಿ ಎಲ್ಲರೂ ಮಕ್ಕಳ ರಕ್ಷಣಾ ನೀತಿಗೆ ಸಹಿ ಮಾಡಿ ಬದ್ಧತೆ ವ್ಯಕ್ತಪಡಿಸ­ಬೇಕು. ಪ್ರತಿಯೊಬ್ಬ ಸಿಬ್ಬಂದಿಯ ನೇಮಕಕ್ಕೆ ಮೊದಲು ಅವರ ಹಿನ್ನೆಲೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಶಾಲಾ ನಿರ್ವಹಣಾ ಮಂಡಳಿ­ಯಲ್ಲಿ ಪೋಷಕರ ಪ್ರತಿನಿಧಿಗಳು ಇರಬೇಕು.  ಶಾಲೆಯಲ್ಲಿ ಪೋಷಕ ಪ್ರತಿನಿಧಿಗಳನ್ನೂ ಒಳ­ಗೊಂಡಂತಹ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಇರಬೇಕು.

ಮಕ್ಕಳೊಂದಿಗೆ ಲೈಂಗಿಕತೆ (ರಕ್ಷ­ಣೆಯೇ­ ­ಪ್ರಮುಖವಾಗಿ) ಕುರಿತು ವೈಜ್ಞಾನಿಕ ಶಿಕ್ಷಣ ಮತ್ತು ಆಪ್ತ ಸಮಾಲೋಚನೆಗೆ ವ್ಯವಸ್ಥೆ­ಇರಬೇಕು.
ಪ್ರತಿಯೊಬ್ಬ ಪೋಷಕರೂ ಯಾವುದೇ ಸಂಕೋಚ, ಭಯವಿಲ್ಲದೆ ಅವರ ಮಕ್ಕಳು ಕಲಿಯುತ್ತಿರುವ ಶಾಲೆಗಳಿಗೆ ಹೋಗಿ ಶಾಲಾ ಆಡಳಿತದೊಂದಿಗೆ ಈ ಮೇಲಿನ ವಿಚಾರಗಳನ್ನು ಕುರಿತು ಸಮಾಲೋಚಿಸಿ ಜಾರಿಗೆ ತರಲು ಒತ್ತಾ­ಯಿಸಬೇಕು.

ಮಕ್ಕಳ ಮೇಲೆ ಶಾಲೆ ಕೈಗೊಳ್ಳುವ ಶಿಕ್ಷೆ ವಿರುದ್ಧ ಪ್ರಶ್ನಿಸಬಾರದು; ಶಾಲಾ ಆವರಣದಲ್ಲಿ ಮಕ್ಕಳ ಮೇಲೆ ಆಗ­ಬಹುದಾದ ದುರಂತ, ಅವಘಡಗಳಿಗೆ ಶಾಲೆ ಜವಾಬ್ದಾರಿಯಲ್ಲ; ಶಾಲೆಯ ವಿರುದ್ಧ ಮಾಧ್ಯಮ­ಗಳೆದುರು ಏನೂ ಹೇಳಬಾರದು ಮತ್ತು ಯಾವುದೇ ರೀತಿಯ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದು ಮುಂತಾದ ಷರತ್ತು­ಗಳನ್ನು ಹಾಕಿ  ವಿಬ್ಗಯೊರ್ ಶಾಲೆಯವರು, ಪೋಷಕರಿಂದ ಬಲವಂತದ ಒಪ್ಪಿಗೆ ಪಡೆದಿದ್ದಾರೆ. ಇಂಥದ್ದಕ್ಕೆ ಅವಕಾಶ ನೀಡಬಾರದು. ಶಾಲಾ ಆವರಣದಲ್ಲಿ ದುರಂತ ನಡೆದ ಮೇಲೆ ಪ್ರತಿಕ್ರಿಯಿಸುವುದಕ್ಕಿಂತ, ಅಪಾಯಗಳಾಗದಂತೆ ಮುಂಜಾಗ್ರತೆ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.