ADVERTISEMENT

ನ್ಯಾಯಾಂಗ ಮತ್ತು ಸಾಮಾಜಿಕ ದೃಷ್ಟಿಕೋನ

ಗಣತಂತ್ರದ ಪ್ರಮುಖ ಭಾಗವಾಗಿರುವ ನ್ಯಾಯಾಂಗವನ್ನೂ ಸಂಶೋಧನೆ ಹಾಗೂ ಅಧ್ಯಯನಗಳಿಗೆ ಒಳಪಡಿಸಬೇಕೆಂಬುದನ್ನು ತೋರಿಸಿಕೊಟ್ಟವರು ಜಾರ್ಜ್ ಗಾಡ್ಬಾಯ್ಸ್

ಸೂರ್ಯಪ್ರಕಾಶ್ ಬಿ.ಎಸ್.
Published 11 ಫೆಬ್ರುವರಿ 2016, 19:30 IST
Last Updated 11 ಫೆಬ್ರುವರಿ 2016, 19:30 IST

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದಕ್ಕೆ ಎನ್‌ಡಿಎ ಸರ್ಕಾರ ಜಾರಿಗೆ ತಂದಿದ್ದ  ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ  (ಎನ್‌ಜೆಎಸಿ) ಕಾಯ್ದೆಯನ್ನು ಅಸಾಂವಿಧಾನಿಕವೆಂದು  ಕೆಲವು ತಿಂಗಳ ಹಿಂದೆಯಷ್ಟೇ ಸರ್ವೋಚ್ಚ ನ್ಯಾಯಾಲಯವು  ಘೋಷಿಸಿತು. ನ್ಯಾಯಾಲಯದ ಈ ನಿಲುವಿಗೆ ಕಾರಣಗಳೇನೇ   ಇದ್ದರೂ ನ್ಯಾಯಮೂರ್ತಿಗಳ ಬಗ್ಗೆ ಜನರಲ್ಲಿ ಕುತೂಹಲವನ್ನು  ಈ ಪ್ರಕರಣ ಕೆರಳಿಸಿತು.

ನ್ಯಾಯಮೂರ್ತಿ ಪದವಿಯನ್ನು ಅಲಂಕರಿಸುವವರು ಎಂತಹವರು? ಅವರ ಸಾಮಾಜಿಕ ಹಿನ್ನೆಲೆ ಏನು? ಯಾವ ಮಾನದಂಡದ ಆಧಾರದ ಮೇಲೆ ಈ ಪದವಿಗೆ ಅವರು ಅರ್ಹರಾದರು? ಇಂತಹ ಪ್ರಶ್ನೆಗಳು ಜನರ ಮನದಲ್ಲಿ ಸಹಜವಾಗಿಯೇ ಉದ್ಭವಿಸಿವೆ.

ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡು ಹೋದವರಲ್ಲಿ ಜಾರ್ಜ್ ಗಾಡ್ಬಾಯ್ಸ್ (George Gadbois) ಮೊದಲಿಗರು. ಹುಡುಕಿಕೊಂಡು ಹೋದವರಲ್ಲ... ಹುಡುಕಿಕೊಂಡು ಬಂದವರು. ಅಮೆರಿಕದ ಬಾಸ್ಟನ್ ಮೂಲದವರು ಅವರು. ಡ್ಯೂಕ್ ವಿಶ್ವವಿದ್ಯಾಲಯವು ಅವರ ‘The Paramount Judiciary in India- 1937 to 1964’ ಎಂಬ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು 1965ರಲ್ಲಿ ನೀಡಿದೆ.

ನಮ್ಮ ಸುಪ್ರೀಂ ಕೋರ್ಟ್‌ ಸ್ಥಾಪನೆಯಾದದ್ದೇ 1951ರಲ್ಲಿ. ಇದಕ್ಕೂ ಮುಂಚೆ ಭಾರತದ ಸರ್ವೋಚ್ಚ ನ್ಯಾಯಾಲಯ ಯಾವುದಾಗಿತ್ತು? 1937ಕ್ಕೂ ಮುಂಚೆ ಅಖಿಲ ಭಾರತ ವ್ಯಾಪ್ತಿಯ ನ್ಯಾಯಾಲಯ ಯಾವುದೂ ಇರಲಿಲ್ಲ. ಕೆಲವು ಸೀಮಿತ ಪ್ರಕರಣಗಳನ್ನು ಲಂಡನ್‌ನಲ್ಲಿರುವ ಪ್ರೈವಿ ಕೌನ್ಸಿಲ್‌ಗೆ ಕೊಂಡೊಯ್ಯಬೇಕಾಗಿತ್ತು.

ಅಖಿಲ ಭಾರತ ವ್ಯಾಪ್ತಿಯಿರುವ ನ್ಯಾಯಾಲಯವೊಂದು ಸಾಮಾನ್ಯರಿಗೆ ಎಟುಕುವಂತೆ ಭಾರತದಲ್ಲೇ ಸ್ಥಾಪನೆಯಾಗಬೇಕೆಂಬ ಸ್ವಾತಂತ್ರ್ಯ ಚಳವಳಿ ನಾಯಕರ ಬೇಡಿಕೆಗೆ ಮಣಿದು 1937ರಲ್ಲಿ ಫೆಡರಲ್ ಕೋರ್ಟ್ ಸ್ಥಾಪಿಸಲಾಯಿತು.  ಸೋಜಿಗವೆಂದರೆ, ಹಲವು ಹೈಕೋರ್ಟ್‌ಗಳೇ ಸುಪ್ರೀಂ ಕೋರ್ಟ್‌ಗಿಂತ ಮೊದಲು ಸ್ಥಾಪಿತವಾದವು!

1970ರಲ್ಲಿ ಪ್ರಕಟವಾದ ‘Indian Judicial Behaviour’  ಕೃತಿಯನ್ನು ಗಾಡ್ಬಾಯ್ಸ್ ಅವರ ಅತ್ಯಂತ ಪ್ರಮುಖ ಕೃತಿಯೆಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿಗೆ ನ್ಯಾಯಾಧೀಶರ ಕಾರ್ಯಶೈಲಿ ಬಗೆಗೆ  ನಡೆಸಿದ ಆಳವಾದ ಅಧ್ಯಯನ ಇದರಲ್ಲಿದೆ. ಸಾಂವಿಧಾನಿಕ ಕಾರ್ಯ ನಿರ್ವಹಿಸುತ್ತಿರುವವರ ವ್ಯಕ್ತಿಗತ ಸಾಮಾಜಿಕ ದೃಷ್ಟಿಕೋನ ಏನೆಂಬುದನ್ನು ಈ ಪ್ರಬಂಧದಲ್ಲಿ ಮುಖ್ಯವಾಗಿ ಗುರುತಿಸಲು ಯತ್ನಿಸಲಾಗಿದೆ.

50 ಮತ್ತು 60ರ ದಶಕದಲ್ಲಿ ನಡೆದ ಗೋಲಖನಾತ್ ಹಾಗೂ  ನಾನಾವತಿಯಂತಹ  ಪ್ರಮುಖ ಪ್ರಕರಣಗಳಿಂದಾಗಿ  ಈ ವಿಷಯ ಅತ್ಯಂತ ಪ್ರಸ್ತುತವಾಗಿತ್ತು. ಆಧುನಿಕ ಉದಾರವಾದಿ, ಅಭಿಜಾತ ಉದಾರವಾದಿ,  ಆಧುನಿಕ ಸಂಪ್ರದಾಯವಾದಿ  ಮತ್ತು ಅಭಿಜಾತ ಸಂಪ್ರದಾಯವಾದಿಗಳೆಂದು  ಸಿದ್ಧಾಂತಗಳನ್ನು ವಿಂಗಡಿಸಿ ನ್ಯಾಯಾಧೀಶರು ಯಾವ ಸಿದ್ಧಾಂತದ ದೃಷ್ಟಿಕೋನದಿಂದ ತೀರ್ಪನ್ನು ನೀಡಿದ್ದಾರೆಂಬುದನ್ನು ವಿಶ್ಲೇಷಿಸಿದ್ದಾರೆ. ಉದಾಹರಣೆಗೆ ನ್ಯಾಯಮೂರ್ತಿ ವಿವಿಯನ್ ಬೋಸ್  ಅಭಿಜಾತ ಉದಾರವಾದಿ. ನ್ಯಾಯಮೂರ್ತಿ ಷಾ ತದ್ವಿರುದ್ಧವಾದ ಅಭಿಜಾತ ಸಂಪ್ರದಾಯವಾದಿ ಎಂಬುದನ್ನು  ಗುರುತಿಸಬಹುದು.         

ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳು ಎದುರಾದಾಗ ಸುಪ್ರೀಂ ಕೋರ್ಟ್‌ ಮೂವರು ಸದಸ್ಯರಿಗಿಂತ ಉನ್ನತ ವಿಭಾಗೀಯ ಪೀಠಗಳನ್ನು ಸ್ಥಾಪಿಸುವುದು ನಡೆದು ಬಂದಿದೆ. ಇಂತಹ ತೀರ್ಪುಗಳಲ್ಲಿ, ಪೀಠವು ಬಹುಮತದಿಂದ ನೀಡಿದ ನಿರ್ಣಯಕ್ಕೆ  ಕೆಲವು ನ್ಯಾಯಮೂರ್ತಿಗಳು ಸಮ್ಮತಿಸದೆ, ಉಳಿದ ನ್ಯಾಯಮೂರ್ತಿಗಳಿಗಿಂತ ಭಿನ್ನವಾದ ತಮ್ಮ ನಿಲುವುಗಳನ್ನು ಪ್ರತ್ಯೇಕವಾಗಿ ಸೂಚಿಸುತ್ತಾರೆ.

ಈ ಅಸಮ್ಮತಿಯಲ್ಲಿ ಅವರ ವೈಯಕ್ತಿಕ ದೃಷ್ಟಿಕೋನವು ಸ್ಪಷ್ಟವಾಗಿ ಕಾಣಸಿಗುತ್ತದೆ. ಇಂತಹ ಅಧ್ಯಯನದಿಂದ ಅವರು, ನ್ಯಾಯಮೂರ್ತಿಗಳ ಸಾಮಾಜಿಕ ದೃಷ್ಟಿಯು ಪ್ರಕರಣಗಳ ಮೇಲೆ, ತನ್ಮೂಲಕ ಸಮಾಜದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಿಕೊಟ್ಟರು. ಮುಂದೆ 1984ರಲ್ಲಿ ಅಸಮ್ಮತಿಗಳು  ಕ್ಷೀಣಿಸುತ್ತಿರುವುದರ ಬಗ್ಗೆಯೇ ‘The Decline of Dissent in The Indian Supreme Court’ ಎಂಬ ಪ್ರಬಂಧದಲ್ಲಿ  ತಮ್ಮ ವಿಚಾರ ಮಂಡಿಸಿದರು. ಒಂದು ಆರೋಗ್ಯಕರ ಸಮಾಜ  ಮತ್ತು ನ್ಯಾಯಾಂಗದಲ್ಲಿ ಅಸಮ್ಮತಿಯ ಮೌಲ್ಯವನ್ನು ಅವರು ಹಿಡಿದೆತ್ತಿ ತೋರಿಸಿದರು. 

ಹೀಗಿರುವಾಗ ಸಮಾಜದ ಮೇಲೆ ಇಷ್ಟೊಂದು ಪ್ರಭಾವ ಬೀರುವ ಸಾಂವಿಧಾನಿಕ ಪದವಿಯಲ್ಲಿರುವವರ ಒಳಗಿರುವ ವ್ಯಕ್ತಿ ಎಂತಹವರು? ಅವರ ಸಾಮಾಜಿಕ ಹಿನ್ನೆಲೆ ಏನು? ಅವರನ್ನು ಆಯ್ಕೆ ಮಾಡುವ ವಿಧಾನವೆಂತಹದ್ದು ಎನ್ನುವ ಪ್ರಶ್ನೆಗಳು ಮಹತ್ವ ಪಡೆಯುತ್ತವೆ.

ಗಾಡ್ಬಾಯ್ಸ್ ಈ ಆಯಾಮದೆಡೆಗೆ ಗಮನಹರಿಸಿ 1960ರಲ್ಲಿ ಹೊರತಂದ ‘Indian Supreme Court Judges- A Portrait’ ಪ್ರಬಂಧವನ್ನು ಅಧಾರವಾಗಿರಿಸಿಕೊಂಡು, ಮತ್ತಷ್ಟು ನ್ಯಾಯಮೂರ್ತಿಗಳ ಜೊತೆ ಸಂದರ್ಶನ ನಡೆಸಿ ಅಧ್ಯಯನ ಮಾಡಿ 1983ರ ಹೊತ್ತಿಗೇ ಮೂಲ ಸಾಮಗ್ರಿಯನ್ನು ಶೇಖರಿಸಿಕೊಂಡಿದ್ದರು.

 ವೈಯಕ್ತಿಕ ಕಾರಣಗಳಿಂದ ಇದು ಪೂರ್ಣ ರೂಪದ ಕೃತಿಯಾಗಿ (Judges Of the Supreme Court Of India: 1950- 1989) ವಿಳಂಬವಾಗಿ  ಹೊರಬಂದದ್ದು 2010ರಲ್ಲಿ. ಈ ಸಂಶೋಧನೆಗೆ ನ್ಯಾಯಮೂರ್ತಿಗಳೂ ಸಹಕಾರ, ಬೆಂಬಲ ನೀಡಿದರೆಂಬುದು ಮನನೀಯ.

ನ್ಯಾಯಾಂಗ ವ್ಯವಸ್ಥೆಯ ನೇಮಕಾತಿಯಲ್ಲಿ ಕೆಲಸ ಮಾಡುವ ಪೂರ್ವಗ್ರಹಗಳು, ಸ್ವಜನಪಕ್ಷಪಾತಗಳತ್ತ ಬೆರಳು ತೋರಿದವರಲ್ಲಿ ಗಾಡ್ಬಾಯ್ಸ್ ಮೊದಲಿಗರು. ಗಣತಂತ್ರದಲ್ಲಿ ಬಹುಶಃ ಅತ್ಯಂತ ಮಹತ್ವದ ಸಂಸ್ಥೆಯಾದ ನ್ಯಾಯಾಂಗವನ್ನೂ  ಸಂಶೋಧನೆ, ಅಧ್ಯಯನಗಳಿಗೆ ಒಳಪಡಿಸಬೇಕೆಂಬುದನ್ನು ತೋರಿಸಿಕೊಟ್ಟರು. ವಿಪರ್ಯಾಸವೆಂದರೆ ಅವರು ನಡೆಸಿದ ಸಂಶೋಧನೆಯನ್ನು  ನಾವು ಭಾರತೀಯರು ಮುಂದುವರಿಸಿಕೊಂಡು ಹೋಗಿಲ್ಲ. ನಮ್ಮ ನಾಡಿನ ಸಾಮಾಜಿಕ ಸಂಶೋಧನಾ ವ್ಯವಸ್ಥೆ ಮತ್ತು ಸಮಾಜದ ಆದ್ಯತೆಯ ಸ್ಥಿತಿಗತಿಯನ್ನು ಈ ಅಲಕ್ಷ್ಯ ಪ್ರತಿಬಿಂಬಿಸುತ್ತದೆ.

ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಕಿತ್ತಾಟವು ಸ್ವಾತಂತ್ರ್ಯಾನಂತರದ ದಿನಗಳಿಂದ ಎಡೆಬಿಡದೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಂತೂ ನ್ಯಾಯಾಂಗ ಮತ್ತು ಸಮಾಜದ ನಡುವಿನ ಬಿರುಕೂ ಕಾಣಿಸಿಕೊಳ್ಳುತ್ತಿದೆ.  ನ್ಯಾಯಾಂಗವನ್ನು ಸದೃಢಗೊಳಿಸುವ ಯಾವ ಹೆಜ್ಜೆಯಿಡುವುದಕ್ಕೂ ಮುನ್ನ ನಿಷ್ಪಕ್ಷಪಾತ  ಅಧ್ಯಯನ ಬೇಕಾಗಿದೆ.

ಅತ್ಯಂತ ಸಂದಿಗ್ಧ ಸಾಂವಿಧಾನಿಕ ಪ್ರಶ್ನೆಗಳ ಕುರಿತು ತೀರ್ಪು ನೀಡುವ ಪದವಿಗೆ ಏರುವ ಮುನ್ನವೇ ಕೆಳಗಣ ನ್ಯಾಯಾಲಯಗಳಲ್ಲಿಯ ಕಾರ್ಯಸಾಧನೆ ಅವಲಂಬಿಸಿ ಇಂತಹ ಅಧ್ಯಯನ ನಡೆಯಬೇಕಾಗಿದೆ.  ಇತ್ತೀಚೆಗಷ್ಟೇ   66ನೇ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಈ  ಸಂದರ್ಭದಲ್ಲಿ ನಮಗೆ ಗಾಡ್ಬಾಯ್ಸ್ ವಿಚಾರಗಳು ಅತ್ಯಂತ ಪ್ರಸ್ತುತವಾಗುತ್ತವೆ. 

**
ಲೇಖಕ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಸಂಶೋಧನೆ ನಡೆಸುತ್ತಿರುವ ‘ದಕ್ಷ್’ ಸಂಸ್ಥೆಯಲ್ಲಿದ್ದಾರೆ. ವಿಶ್ವ ಬ್ಯಾಂಕ್ ಸಲಹೆಗಾರ ವಿಕ್ರಮ್ ರಾಘವನ್ ಅವರು ಈ ವಿಷಯವಾಗಿ ಇತ್ತೀಚೆಗೆ ‘ದಕ್ಷ್’ನಲ್ಲಿ ನೀಡಿದ ಉಪನ್ಯಾಸಕ್ಕೆ ಲೇಖಕ ಋಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.