ಬಿಜೆಪಿಯು ತನ್ನ ಚುನಾವಣಾ ಯಶಸ್ಸಿಗಾಗಿ ಕಾಂಗ್ರೆಸ್‌ನ ಹಾದಿಯನ್ನೇ ತುಳಿಯಬೇಕೇ? ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಉಳಿವಿಗೆ ಬಿಜೆಪಿಯೊಂದಿಗೆ ನೇರವಾಗಿ ಮುಖಾಮುಖಿ ಆಗುವುದನ್ನೇ ಅವಲಂಬಿಸಬೇಕೇ? ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿನ ಬಿಜೆಪಿ ಗೆಲುವು ರಾಜಕೀಯ ನಿರ್ವಾತವನ್ನು ತುಂಬುವುದೇ ಅಥವಾ ಇಂತಹ ನಿರ್ವಾತವನ್ನು ಇನ್ನಷ್ಟು ಆಳವಾಗಿಸುವುದೇ? ಉಭಯ ರಾಜ್ಯಗಳ ಫಲಿತಾಂಶ ನಂತರದ ಸದ್ದುಗದ್ದಲಗಳು ಮುಗಿದ ತರುವಾಯ ಇಂತಹ ಪ್ರಶ್ನೆಗಳನ್ನೆಲ್ಲ ನಾವು ಕೇಳಿಕೊಳ್ಳಬೇಕಾಗಿದೆ.
ಮೊದಲಿಗೆ ಈ ತೀರ್ಪಿನ ಮಹತ್ವವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಹರಿಯಾಣದಲ್ಲಿ ಬಿಜೆಪಿಗೆ ಸರಳ ಬಹುಮತವಷ್ಟೇ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಸ್ಪಷ್ಟ ಬಹುಮತದ ನಿರೀಕ್ಷೆ ಹುಸಿಗೊಂಡಿದ್ದು, ಶೇ 28ಕ್ಕಿಂತ ಕಡಿಮೆ ಮತಗಳನ್ನು ಅದು ಗಳಿಸಿದೆ. ಈ ಅಂಕಿಸಂಖ್ಯೆಯು ಟಿ.ವಿ. ವಾಹಿನಿಗಳ ಪ್ರಚಾರದ ಭರಾಟೆಯನ್ನು ಒರೆಗೆ ಹಚ್ಚುವಂತೆ ಮಾಡಿದೆ.
ಇಷ್ಟಾದರೂ ರಾಜಕೀಯ ವಾಸ್ತವ ಮಾತ್ರ ಇಂತಹ ಅಂಕಿಸಂಖ್ಯೆಗಳನ್ನೆಲ್ಲ ಮೀರಿಸುವಂತಿದೆ. ಹರಿಯಾಣದಲ್ಲಿ ‘ಜಿ.ಟಿ. ರೋಡ್ ಪಾರ್ಟಿ’ ಎಂದು ಕರೆಸಿಕೊಳ್ಳುತ್ತಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿಯು, ರಾಜ್ಯ ಮಟ್ಟದ ಪಕ್ಷವಾಗಿ ಬೆಳೆದು ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಂತೆ ಆಗಿದ್ದು ನಿಜಕ್ಕೂ ಅಸಾಧಾರಣವಾದ ಐತಿಹಾಸಿಕ ಸಾಧನೆಯೇ ಸರಿ. (ಜಿ.ಟಿ.ರೋಡ್: ಗ್ರ್ಯಾಂಡ್ ಟ್ರಂಕ್ ರೋಡ್- ಇದು ದೆಹಲಿಯಿಂದ ಹರಿಯಾಣದ ಪೂರ್ವ ಗಡಿ ಮೂಲಕ ಸೋನೆಪತ್, ಪಾಣಿಪತ್, ಅಂಬಾಲದಂತಹ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಹೆಸರು. ಅಂದರೆ, ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಪಕ್ಷ ಎಂದು ಅದು ವ್ಯಂಗ್ಯವಾಗಿ ಕರೆಸಿಕೊಳ್ಳುತ್ತಿತ್ತು) ಮಹಾರಾಷ್ಟ್ರದಲ್ಲೂ ಬಿಜೆಪಿಯು ಮೂರು ಅಂಕಿಗಳ ಗೆಲುವು ಸಾಧಿಸುವ ಮೂಲಕ ಮೊದಲನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ಎರಡು ದಶಕಗಳಲ್ಲಿ ಯಾವ ಪಕ್ಷಕ್ಕೂ ಈ ಮಟ್ಟಿನ ಗೆಲುವು ಸಾಧ್ಯವಾಗಿರಲಿಲ್ಲ. ತನ್ನ ಸುದೀರ್ಘಾವಧಿಯ ಮಿತ್ರ ಪಕ್ಷದೊಂದಿಗೆ ಮೈತ್ರಿ ಕಡಿದುಕೊಳ್ಳುವಂತಹ ಕಠಿಣ ರಾಜಕೀಯ ನಿರ್ಧಾರ ಕೈಗೊಂಡು, ಈ ಪರಿಯ ಗೆಲುವು ಸಾಧಿಸುವುದು ಸಣ್ಣ ಸಾಧನೆಯೇನೂ ಅಲ್ಲ.
ಲೋಕಸಭಾ ಚುನಾವಣೆಗೆ ಕೆಲವು ತಿಂಗಳ ಹಿಂದೆ ಆರಂಭವಾದ ಅಧಿಕಾರ ಬದಲಾವಣೆ ಪ್ರಕ್ರಿಯೆಯನ್ನು ಈ ಫಲಿತಾಂಶ ಪೂರ್ಣಗೊಳಿಸಿದೆ. ಮೊದಲಿಗೆ ತನ್ನ ರಾಷ್ಟ್ರೀಯ ಎದುರಾಳಿಗಳಿಗಿಂತ ಬಿಜೆಪಿಯ ಅಧಿಕಾರ ಹೆಚ್ಚು ಬಲಗೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಎರಡನೆಯದಾಗಿ, ಮಿತ್ರಕೂಟದ ಒಳಗೇ ಪಕ್ಷ ಬಲಗೊಂಡಿದೆ. ಅದರ ಹಿಂದಿನ ಮಿತ್ರನಾದ ಜನಹಿತ ಕಾಂಗ್ರೆಸ್ ಪಕ್ಷವನ್ನು ಅದು ಸದೆಬಡಿದಿದೆ. ಶಿವಸೇನಾ ಇಂತಹದ್ದೊಂದು ಸಂಕಟದಿಂದ ಪಾರಾಗಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸುವ ಮಟ್ಟಕ್ಕೇನೋ ಬೆಳೆದಿದೆ. ಆದರೂ ಅಧಿಕಾರ ಸಮತೋಲನ ಬದಲಾಗಿರು-ವುದಕ್ಕೆ ಶಿವಸೇನಾಗಿಂತ ಹೆಚ್ಚೂಕಡಿಮೆ ದುಪ್ಪಟ್ಟು ಸ್ಥಾನಗಳನ್ನು ಬಿಜೆಪಿ ಪಡೆದಿರುವುದೇ ಸಾಕ್ಷಿ. ಇಂತಹ ಬೆಳವಣಿಗೆಯಿಂದ ಮಿತ್ರಪಕ್ಷಗಳು ಇನ್ನು ಮುಂದೆ ಚುನಾವಣೆ ಎದುರಿಸಲು, ಸಂಸತ್ತಿನ ಒಳಗೆ ಅಥವಾ ಸರ್ಕಾರದೊಳಗೆ ಬಿಜೆಪಿ ವಿರುದ್ಧ ನಿರ್ಧಾರ ಕೈಗೊಳ್ಳುವ ಮುನ್ನ ಒಮ್ಮೆ ಯೋಚನೆ ಮಾಡಬೇಕಾಗುತ್ತದೆ. ಜೊತೆಗೆ ಬಿಜೆಪಿಯ ಒಳಗೇ ಲೆಕ್ಕಾಚಾರದ ತಕ್ಕಡಿಯು ಮೋದಿ– ಷಾ ಉಭಯತ್ರರ ಪರವಾಗಿ ವಾಲಿದೆ.
ಇದು ಸಮರ್ಥ ನೀತಿ ನಿರೂಪಣೆ ಮತ್ತು ಕುಶಲ ರಾಜಕೀಯ ಕಾರ್ಯಾಚರಣೆಗೆ ಸರ್ಕಾರಕ್ಕೆ ಅವಕಾಶ ಕಲ್ಪಿಸಿದೆ. ಇದನ್ನು ಸರ್ಕಾರ ದೀರ್ಘಕಾಲೀನ ಮತ್ತು ಕಠಿಣವಾದ ನಿಲುವುಗಳನ್ನು ತೆಗೆದುಕೊಳ್ಳಲು ಬಳಸಿಕೊಳ್ಳುತ್ತದೋ ಅಥವಾ ತನ್ನ ಮಿತ್ರರು ಮತ್ತು ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡುವ ನೀತಿಗಳನ್ನು ರೂಪಿಸುತ್ತದೋ ತಿಳಿಯದು. ಜೊತೆಗೆ ಅದರ ರಾಜಕೀಯ ನಡೆಯನ್ನು ವಿಶ್ಲೇಷಣೆಗೆ ಒಳಪಡಿಸುವುದಾದರೆ, ದೆಹಲಿಯಲ್ಲಿ ಚುನಾವಣೆ ಎದುರಿಸುವ ಧೈರ್ಯ ತೋರುತ್ತದೋ ಅಥವಾ ತನ್ನ ನೇತೃತ್ವದ ಸರ್ಕಾರಕ್ಕೆ ಹಿಂಬಾಗಿಲಿನಿಂದ ರಕ್ಷಣೆ ಒದಗಿಸಲು ನೋಡುತ್ತದೋ ಎಂಬುದನ್ನೂ ಕಾದು ನೋಡಬೇಕಿದೆ.
ಇತ್ತೀಚಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಒಂದಷ್ಟು ನಿರಾಳ ಸಿಕ್ಕಿತ್ತು. ಆದರೆ ಅದು ತಾತ್ಕಾಲಿಕವಾದುದು. ಅಲ್ಲದೆ ಅದು, ಕಠಿಣ ಭವಿಷ್ಯದ ಮುನ್ಸೂಚನೆಯಂತೆ ಇತ್ತು. ಆ ಪಕ್ಷದ ಒಳಗೇ ಗಾಂಧಿ ಕುಟುಂಬ ವಹಿಸುವ ಪಾತ್ರದ ವಿರೋಧಾಭಾಸವನ್ನು ಈ ಫಲಿತಾಂಶಗಳು ಒತ್ತಿ ಹೇಳಿದ್ದವು. ಪ್ರತಿ ಬಾರಿ ವ್ಯಕ್ತವಾದ ನಿರ್ಣಯವೂ ಪಕ್ಷದ ಉನ್ನತ ಮಟ್ಟದಲ್ಲಿ ಇರುವ ನಾಯಕತ್ವ ಶೂನ್ಯತೆಯನ್ನು ಮತ್ತು ಅಂತಹದ್ದೊಂದು ನಿರ್ವಾತವನ್ನು ತುಂಬಬಲ್ಲವರು ಅಥವಾ ಅಂತಹವರಿಗೆ ಸ್ಪರ್ಧೆ ಒಡ್ಡಬಲ್ಲ ಸಮರ್ಥರನ್ನು ಉಪೇಕ್ಷಿಸುವ ಪ್ರವೃತ್ತಿಯನ್ನು ಸಹ ಎತ್ತಿ ಹಿಡಿದಿತ್ತು. ಹೀಗೆ ಬದಲಾವಣೆಯ ಅಗತ್ಯ ಮತ್ತು ಅಸಾಧ್ಯ ಎರಡೂ ಕಾಂಗ್ರೆಸ್‌ಗೆ ಮಾರಕವಾಗಿವೆ.
ಹರಿಯಾಣದಲ್ಲಿ ಸಾಮಾಜಿಕ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್, ವಿರೋಧ ಪಕ್ಷದ ನಾಯಕನಾಗಿ ಉಳಿಯುವುದು ಸಹ ಕಷ್ಟ. ಮಹಾರಾಷ್ಟ್ರದಲ್ಲಿ ಶಿವಸೇನೆಯು ತನ್ನ ನೆಲೆ ನವೀಕರಿಸಿಕೊಂಡಿರುವುದರಿಂದ ಕಾಂಗ್ರೆಸ್ಗಾಗಲೀ ಅಥವಾ ಎನ್‌ಸಿಪಿಗಾಗಲೀ ರಾಜಕೀಯ ಸಾಧನೆ ಸದ್ಯಕ್ಕಂತೂ ಕಾರ್ಯಸಾಧ್ಯವಲ್ಲ.
ಹೀಗೆ ಅಸ್ತಿತ್ವದ ಪ್ರಶ್ನೆ ಕಾಂಗ್ರೆಸ್‌ಗೆ ಕೇವಲ ಈ ಎರಡು ರಾಜ್ಯಗಳಲ್ಲಷ್ಟೇ ಎದುರಾಗಿಲ್ಲ. ಎಲ್ಲೆಲ್ಲಿ ಅದು ಶೇ 20ಕ್ಕಿಂತ ಕಡಿಮೆ ಮತಗಳನ್ನು ಪಡೆಯುತ್ತದೋ ಅಲ್ಲೆಲ್ಲ ಅದು ಚೇತರಿಸಿಕೊಂಡಿಲ್ಲ ಎಂಬುದನ್ನು ಈಚಿನ ಚುನಾವಣಾ ಇತಿಹಾಸ ತೆರೆದಿಟ್ಟಿದೆ. ಒಂದರ ನಂತರ ಒಂದರಂತೆ ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶದಲ್ಲೆಲ್ಲ ಕಾಂಗ್ರೆಸ್ ಕ್ರಿಯಾತ್ಮಕ ಪರಿಣಾಮ ಬೀರುವ ಮಟ್ಟಕ್ಕಿಂತ ಕೆಳಗೇ ಇದೆ. ಹರಿಯಾಣದಲ್ಲಿ ಶೇ 20ಕ್ಕಿಂತ ಕೊಂಚ ಹೆಚ್ಚು ಮತಗಳನ್ನು ಗಳಿಸಿದ್ದರೂ ಮಹಾರಾಷ್ಟ್ರದೊಟ್ಟಿಗೆ ಆ ರಾಜ್ಯವನ್ನೂ ಈಗ ಇದೇ ಪಟ್ಟಿಗೆ ಸೇರಿಸಬಹುದು. ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಡದಂತಹ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನಕ್ಕೆ ಇಳಿದಿದೆ. ಈಗ ಬಂದಿರುವ ಫಲಿತಾಂಶ, ವಿರೋಧ ಪಕ್ಷದಲ್ಲಿದ್ದ ಶೂನ್ಯ ಭಾವವನ್ನು ಇನ್ನಷ್ಟು ಹೆಚ್ಚಿಸಿದೆ. ಬಿಹಾರದಲ್ಲಿ ಮಾಡಿದಂತೆ ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಬಳಸಿಕೊಂಡು ಈ ನಿರ್ವಾತವನ್ನು ತುಂಬಲು ಹೊರಟಿದ್ದೇ ಆದರೆ, ಅದು ದೀರ್ಘಾವಧಿಯಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸುತ್ತದೆ ಅಷ್ಟೆ.
ಇಲ್ಲಿ ನಿರ್ವಾತ ಎಂಬುದು ವಿರೋಧ ಪಕ್ಷದಲ್ಲಿದೆ ಎಂದು ಹೇಳುವುದಕ್ಕಿಂತ ಇದೊಂದು ‘ರಾಜಕೀಯ ನಿರ್ವಾತ’ ಎಂದು ಹೇಳುವುದೇ ಸೂಕ್ತ. ಏಕೆಂದರೆ ಈಗ ಬಿಜೆಪಿಗೆ ಸಿಕ್ಕಿರುವ ಅದ್ಭುತ ಯಶಸ್ಸು ಅದಕ್ಕಾಗಿ ಅದು ತೆತ್ತಿರುವ ಬೆಲೆಯನ್ನು ಮರೆಮಾಚುತ್ತಿದೆ. ಬಿಜೆಪಿ ಹೆಚ್ಚು ಹೆಚ್ಚು ಯಶಸ್ಸು ಗಳಿಸಿದಷ್ಟೂ ಅದು ಕಾಂಗ್ರೆಸ್‌ನ ಹಾದಿಯನ್ನೇ ತುಳಿಯತೊಡಗುತ್ತದೆ ಎಂಬುದು ಸಹ ಸ್ಪಷ್ಟ. ಬಿಜೆಪಿಯ ಕಾಂಗ್ರೆಸ್ಸೀಕರಣ ಹರಿಯಾಣದಲ್ಲಿ ಸ್ಫುಟವಾಗಿಯೇ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರನ್ನು ಸಾರಾಸಗಟಾಗಿ ಅದು ಆಮದು ಮಾಡಿಕೊಂಡಿದೆ. ಕಾಂಗ್ರೆಸ್‌ನ ಹಳೆಯ ಚಾಳಿಯಾದ ಜಾತಿ ಮತ್ತು ಸಮುದಾಯ ಆಧಾರಿತ ಮತ ಬ್ಯಾಂಕ್ ಆಟಗಳನ್ನು ಬಿಜೆಪಿ ಸಹ ನಿಸ್ಸಂಕೋಚವಾಗಿ ಆಡಿದೆ. ಮುಖ್ಯಮಂತ್ರಿ ಘೋಷಣೆ ವಿಚಾರದಲ್ಲಿ ಎಚ್ಚರಿಕೆಯಿಂದ ಅನಿಶ್ಚಿತತೆ ಕಾಯ್ದುಕೊಂಡಿದೆ. ತನ್ನ ಪ್ರಣಾಳಿಕೆಯಲ್ಲಿ ಯಾವುದೇ ಮಹತ್ವದ ಸಂಗತಿಗಳನ್ನೂ ಒಳಗೊಳ್ಳದೆ ಸೂಕ್ಷ್ಮವಾಗಿ ವರ್ತಿಸಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಳಿ ಮತ್ತು ಕಪ್ಪು ಹಣ ಎರಡರ ಬಳಕೆಯಲ್ಲೂ ಕಾಂಗ್ರೆಸ್‌ಗಿಂತ ತಾನೇನೂ ಕಡಿಮೆಯಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಮತದಾನದ ದಿನವಂತೂ ದೈಹಿಕ ಶಕ್ತಿ ಬಳಕೆಯಲ್ಲಿ ಐಎನ್‌ಎಲ್‌ಡಿ ಮತ್ತು ಕಾಂಗ್ರೆಸ್‌ನ್ನೂ ಅದು ಮೀರಿಸಿದೆ ಎಂಬ ವರದಿಗಳಿವೆ. ಮಹಾರಾಷ್ಟ್ರದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಚುನಾವಣಾ ಯಶಸ್ಸಿಗೆ ಬೇರೆ ಯಾವುದಾದರೂ ಮಾರ್ಗ ಇರಲು ಸಾಧ್ಯವೇ ಎಂದು ಅಚ್ಚರಿಪಡುವಂತೆ ಅಲ್ಲಿನ ವಾತಾವರಣ ಇತ್ತು. ಪ್ರಜಾಪ್ರಭುತ್ವದ ಬಗ್ಗೆ ಭ್ರಮನಿರಸನವನ್ನು ಉಂಟು ಮಾಡಲು ಇಷ್ಟರ ಮಟ್ಟಿನ ರಾಜಕೀಯ ನಿರ್ವಾತ ಸಾಕು. ಜೊತೆಗೆ ಪರ್ಯಾಯ ರಾಜಕೀಯದತ್ತ ಚಿಂತಿಸುವ ಸಾಧ್ಯತೆಗಳಿಗೂ ಈ ಫಲಿತಾಂಶ ದಾರಿ ಮಾಡಿಕೊಟ್ಟಿದೆ.
(ಲೇಖಕರು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.