ADVERTISEMENT

ಬದಲಾದ ಕಾಲದ ಬೆಳಕಿನಲ್ಲಿ ಕುಮಾರಸ್ವಾಮಿ ಚಿಂತನೆಗಳು

ಪ್ರೊ.ಷ.ಶೆಟ್ಟರ್
Published 21 ಆಗಸ್ಟ್ 2014, 19:30 IST
Last Updated 21 ಆಗಸ್ಟ್ 2014, 19:30 IST

ಆನಂದ ಕುಮಾರಸ್ವಾಮಿ ಅವರು ಭಾರತದ ಕಲಾ ಇತಿಹಾಸ ಮತ್ತು  ಸಾಂಸ್ಕೃತಿಕ ಚರಿತ್ರೆ­ಯೊಳಗೆ ಯಾವ ಕಾಲ­ಘಟ್ಟದಲ್ಲಿ ಪ್ರವೇಶಿಸಿದರು ಎನ್ನುವುದು ಬಹಳ ಮುಖ್ಯ. ಆಗ ಸ್ವಾತಂತ್ರ್ಯ ಚಳವಳಿ ಪ್ರವರ್ಧ­ಮಾನಕ್ಕೆ ಬರುತ್ತಿತ್ತು. ಪಾಶ್ಚಿ­ಮಾತ್ಯ ವಿದ್ವಾಂಸರು ಮತ್ತು ಚಿಂತಕರು ಭಾರ­ತೀಯ ಕಲೆ, ಸಂಸ್ಕೃತಿ ಮತ್ತು ಸೌಂದರ್ಯ­ಪ್ರಜ್ಞೆ ಯನ್ನು ತಪ್ಪಾಗಿ ಗ್ರಹಿಸಿದ; ಕೆಲವೆಡೆ ಅವಹೇಳನ ಮಾಡುತ್ತಿದ್ದ ಕಾಲಘಟ್ಟ ಅದಾಗಿತ್ತು. ನಮ್ಮ ಪುರಾಣ ಮತ್ತು ಸಂಸ್ಕೃತಿಯಲ್ಲಿನ ಅನೇಕ ಅತಿ­ಮಾನುಷ ವಿಚಾರ­ಗಳ ಬಗೆಗೆ, ಉದಾ: ಹತ್ತು ತಲೆಯ ಮನುಷ್ಯ ಅಥವಾ ಆರು ಕೈಗಳ ವ್ಯಕ್ತಿ ಇರಲು ಸಾಧ್ಯವೇ? ಮುಂತಾದ ಪ್ರಶೆಗಳನ್ನೆ­ತ್ತುತ್ತಿದ್ದ ಕಾಲವದು.

ಆದೇ ಸಂದರ್ಭದಲ್ಲಿ ಭಾರ­ತೀಯ ಸಂಸ್ಕೃತಿ-­ಯಲ್ಲಿರುವ ಉನ್ನತ ಚಿಂತನೆಗಳು, ವಿಚಾರ­ಗಳನ್ನು ಗ್ರಹಿಸುವ ಬಗೆಯನ್ನು ಹಾಗೂ ಪಾಶ್ಚಿ­ಮಾತ್ಯರಿಗೆ ಅವುಗಳ ಹಿಂದಿರುವ ಮಹತ್ವ­ವನ್ನು ಪರಿಚಯಿಸುವ ಮೂಲಕ ಕುಮಾರಸ್ವಾಮಿ­ಯವರು ಭಾರತೀಯ ಸಾಂಸ್ಕೃತಿಕ ವಲಯವನ್ನು ಪ್ರವೇಶಿಸಿದರು. ಮೂಲಭೂತವಾಗಿ ಅನೇಕ ಪಾಶ್ಚಿಮಾತ್ಯ ಚಿಂತಕರು ಬುದ್ಧಿವಂತರಾಗಿದ್ದರೂ ಅವರ ಜ್ಞಾನ ಗ್ರೀಕ್ ಮತ್ತು ಲ್ಯಾಟಿನ್ ಮೂಲ­ದ್ದಾಗಿತ್ತು.

ಹೀಗಾಗಿ ಆ ಜ್ಞಾನಮೂಲಗಳಿಂದ ಹೊರತಾದ ಸಂಸ್ಕೃತಿಗಳನ್ನು ಅರ್ಥಮಾಡಿ­ಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಹಂತದಲ್ಲಿ ಹ್ಯಾವಿಲ್ ಮತ್ತು ಕುಮಾರಸ್ವಾಮಿ­ಯವರು ಅವರಿಗೆ ನಮ್ಮ ಸಂಸ್ಕೃತಿಯನ್ನು ಪರಿ­ಚಯಿ­ಸುವ, ಕಲೆಯನ್ನು ಅರ್ಥಮಾಡಿಕೊಳ್ಳುವ ವಿಧಾನಗಳನ್ನು ತಿಳಿಸಿ­ಕೊಡ­ಲೆತ್ನಿ­ಸಿದರು. ಕೇವಲ ಪಾಶ್ಚಾತ್ಯರಿಗೆ ಮಾತ್ರ­ವಲ್ಲ ನಮಗೂ ತಿಳಿಸಿಕೊಡುವ ಪ್ರಯತ್ನವನ್ನು ಇ.ಬಿ.ಹ್ಯಾವಿಲ್, ವಿ.ಎಸ್. ಅಗರ್‌ವಾಲ್, ಕುಮಾರಸ್ವಾಮಿ ಮುಂತಾದವರು ಮಾಡಿದರು.

ಕುಮಾರಸ್ವಾಮಿ ಅವರಿಗೆ ಯಾವ ಯಾವ ವಿಷಯಗಳಲ್ಲಿ ವಿದ್ವತ್ತು ಇತ್ತು, ಪರಿಶ್ರಮ ಇತ್ತು, ಅರಿವಿತ್ತು ಎನ್ನುವ ಬಗೆಗೆ ತಿಳಿಯಲು ಪ್ರಯತ್ನಿಸಿದರೆ ಆಶ್ಚರ್ಯವಾಗುತ್ತದೆ. ವೇದ ಮತ್ತು ಉಪನಿಷತ್ತುಗಳ ಬಗೆಗಿನ ಜ್ಞಾನ, ಪಾರಂಪರಿಕ ಕುಶಲಕಲೆ, ಶಿಲ್ಪಕಲೆ, ಸೌಂದರ್ಯ­ಶಾಸ್ತ್ರ, ತತ್ವಶಾಸ್ತ್ರ, ಮಾನವಶಾಸ್ತ್ರ- ಹೀಗೆ ಹಲವು ಜ್ಞಾನಶಾಖೆಗಳ ಬಗೆಗೆ ಆಳವಾದ ಮತ್ತು ನಿಖರವಾದ ವಿದ್ವತ್ತು ಅವರಿಗಿತ್ತು. ಇವೆಲ್ಲವುಗಳ ಬಗ್ಗೆ ಸ್ವತಃ ಅಭ್ಯಾಸ ಮಾಡಿ ಗಳಿಸಿಕೊಂಡ ಜ್ಞಾನವಾಗಿತ್ತೇ ವಿನಾ ಬೇರೆಯವರಿಂದ ಅಥವಾ ಶಾಲೆಯಿಂದ ಅವರು ಕಲಿತದ್ದಾಗಿರಲಿಲ್ಲ.

ಈ ಜ್ಞಾನವನ್ನೇ ಬಳಸಿಕೊಂಡು ಅವರು ಬರೆದ ಮೊದಲ ಕೃತಿ ಶ್ರೀಲಂಕಾದ ಕುಶಲಕರ್ಮಿಗಳು ಮತ್ತು ಅವರು ಹೇಗೆ ಈ ಕಲೆಯನ್ನು ಉಳಿಸಿ­ಕೊಂಡು ಬಂದಿದ್ದಾರೆ ಎನ್ನುವುದನ್ನು ಕುರಿತ­ದ್ದಾಗಿತ್ತು. ಆನಂತರ ಭಾರತೀಯರಿಗೆ ಬಹು­ಮುಖ್ಯ­ವಾದ ನಟರಾಜನ ಬಗ್ಗೆ- ಶಿವನ ನೃತ್ಯದ ಬಗೆಗೆ ಮೊಟ್ಟ ಮೊದಲು ಕಲಾಮೀಮಾಂಸೆಯ ಹಿನ್ನೆಲೆಯಲ್ಲಿ ಪರಿಚಯಿಸಿದರು ಕುಮಾರಸ್ವಾಮಿ­ಯವರು. ಶ್ರಿಮಂತ ಕುಟುಂಬದಿಂದ ಬಂದ ಅವರು ರಾಜಸ್ತಾನದ ಹಳ್ಳಿ ಹಳ್ಳಿಗಳನ್ನು ಅರಮನೆ, ಅಂತಃಪುರಗಳನ್ನು ಸುತ್ತಿ ಅಳಿದು­ಹೋಗುತ್ತಿದ್ದ ರಜಪೂತ್ ಪೆಯಿಂಟಿಂಗ್‌ಗಳನ್ನೆಲ್ಲ ಸಂಗ್ರಹಿಸಿದರು.

ಆಗ ಬನಾರಸ್ ವಿಶ್ವ­ವಿದ್ಯಾಲಯದ ಮುಖ್ಯಸ್ಥರಾದ ಮದನ ಮೋಹನ ಮಾಳವೀಯ ಅವರ ಬಳಿಗೆ ಹೋಗಿ ಭಾರತೀಯ ಕಲೆಗಳಲ್ಲಿ ವಿಶಿಷ್ಟವಾಗಿರುವ ಈ ಕಲಾಕೃತಿಗಳನ್ನು ವಿಶ್ವವಿದ್ಯಾಲಯದಲ್ಲಿಟ್ಟು ಪ್ರದರ್ಶಿಸಲು ಅವಕಾಶ ಕೋರಿದರು. ಆದರೆ ವಿಜ್ಞಾನ ಬೋಧ­ನೆಗೆ ಹೆಚ್ಚು ಗಮನವೀಯುತ್ತಿದ್ದ ಮಾಳವೀಯರು ಇದಕ್ಕೆ ಅವಕಾಶಕೊಡದ ಕಾರಣದಿಂದ ಕುಮಾರಸ್ವಾಮಿಯವರು ಈ ಚಿತ್ರಗಳನ್ನೆಲ್ಲ ತೆಗೆದುಕೊಂಡು ಲಾಸ್ ಏಂಜ ಲೀಸ್‌ಗೆ ತೆರಳಿ ಹಲವಾರು ವರ್ಷಗಳ ಕಾಲ ಅವುಗಳನ್ನು ಅಭ್ಯಾಸ ಮಾಡಿ ಎರಡು ಸಂಪುಟಗಳಲ್ಲಿ ರಜಪೂತ್ ಚಿತ್ರಕಲೆಯ ಬಗೆಗೆ ಪುಸ್ತಕಗಳನ್ನು ಪ್ರಕಟಿಸಿದರು. ಇವತ್ತು ನಾವು ರಜಪೂತ್ ಕಲೆಗಳ ಬಗೆಗೆ ಅಧ್ಯಯನ ಮಾಡ­ಬೇಕಾದರೆ ವಿದೇಶಕ್ಕೆ ಹೋಗಿ ನೋಡಬೇಕಾದ ಪರಿಸ್ಥಿತಿ ಬಂದಿದೆ.

೬೦ರ ದಶಕದ ದಿನಗಳವು. ನಾನು ಕೇಂಬ್ರಿಜ್‌­ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆ ದಿನಗಳಲ್ಲಿಯೇ ನಾನೂ ಕುಮಾರಸ್ವಾಮಿಯವರ ವಿಚಾರಗಳಿಂದ ಆಕರ್ಷಿತನಾಗಿ ಆ ಕಾಲದಲ್ಲಿ ಪ್ರಕಟವಾದ ಚೂರೂ ಪಾರು ಲೇಖನಗಳನ್ನು ಕೂಡ ಹುಡುಕಿ­ಕೊಂಡು ತರುತ್ತಿದ್ದೆ. ಆಗ ಜೆರಾಕ್ಸ್ ಇರಲಿಲ್ಲ­ವಾದ್ದರಿಂದ ನನ್ನ ಹೆಂಡತಿ ಆ  ಲೇಖನಗಳನ್ನು ಟೈಪ್ ಮಾಡುತ್ತಿದ್ದಳು. ಇಂಡಿಯಾಗೆ ವಾಪಸ್ ಬರುವಾಗ ಸುಮಾರು ೫೦೦೦-–೬೦೦೦ ಪುಟ ಗಳ ಬೆರಳಚ್ಚು ಪ್ರತಿಗಳ ಈ ಸಂಗ್ರಹವನ್ನು  ಒಂದು ಟ್ರಕ್‌ನಲ್ಲಿ ತಂದೆವು. ಅವುಗಳನ್ನು ಪ್ರಕಟಿ ಸಬೇಕು ಎನ್ನುವ ಆಸೆಯಿಂದ ಕುಮಾರ ಸ್ವಾಮಿಯವರ ಕೊನೆಯ ಹೆಂಡತಿಯ ಜೊತೆ ಪತ್ರವ್ಯವಹಾರ ಮಾಡಿದೆ.

ಆದರೆ ಆಕೆ ಅದಕ್ಕೆ ಸ್ಪಂದಿಸಲಿಲ್ಲ. ಈ ಮಧ್ಯೆ ಕುಮಾರಸ್ವಾಮಿಯವರ ಬಗೆಗೆ, ಅವರ ಕೃತಿಗಳ ಬಗೆಗೆ ಅಧ್ಯಯನ ಮಾಡಿದ ರಾಜರ್ ಲಿಪ್ಸಿ ಅವರು ನನ್ನನ್ನು ಹುಡುಕಿಕೊಂಡು ಧಾರವಾಡಕ್ಕೆ ಬಂದರು. ಅವರು ನನ್ನ ಸಂಗ್ರಹದಲ್ಲಿದ್ದ ಸಾಮಗ್ರಿಯನ್ನು ನೋಡಿ ಆಶ್ಚರ್ಯಪಟ್ಟರು. ಅವರ ಗಮನಕ್ಕೆ ಬಾರದ ಅನೇಕ ಲೇಖನಗಳು ನನ್ನಲ್ಲಿದ್ದವು. ಅವು ಗಳನ್ನು ಉಪಯೋಗಿಸಿಕೊಳ್ಳಲು ನನ್ನ ಅನುಮತಿ ಕೋರಿದರು. ನಮ್ಮ ಮನೆಯಲ್ಲಿಯೇ ಇದ್ದು ಒಂದು ವಾರ ಅಧ್ಯಯನ ಮಾಡಿದರು. ಅವನ್ನು ಪ್ರಕಟಿಸುವ ಸಾಧ್ಯತೆ ಇಲ್ಲದ ಕಾರಣ ನನ್ನೆಲ್ಲ ಸಂಗ್ರಹವನ್ನು ಒಯ್ಯಬಹುದೆಂದೂ ಅವರಿಗೆ ಹೇಳಿದೆ. ಮುಂದೆ ಅವರು ಮೂರು ಸಂಪುಟ ಗಳಲ್ಲಿ  ಕುಮಾರಸ್ವಾಮಿ ಅವರ ಜೀವನ ಮತ್ತು ಕೃತಿಗಳ ಬಗ್ಗೆ  ಅರ್ಥಪೂರ್ಣವಾಗಿ ಸಂಪಾದಿಸಿ ಪ್ರಕಟಿಸಿದರು.

ರಾಜರ್  ಅವರ ಉಪನ್ಯಾಸಕ್ಕೆ ಮುನ್ನುಡಿಯನ್ನು ಬರೆವ ಅವಕಾಶವೂ ನನಗೆ ಒದಗಿ ಬಂತು. ನಮ್ಮಿಬ್ಬರ ಸ್ನೇಹಿತರಾದ ಬರೋ­ಡದ ಗುಲಾಮ್ ಶೇಖ್ ಒಂದು ತೈಲ ಚಿತ್ರವ ಸಿದ್ಧಪಡಿಸಿ ಅದನ್ನು ಮುಖಪುಟಕ್ಕೆ  ಬಳಸಿ ಕೊಳ್ಳಲು ಅನುಮತಿ ಕೊಟ್ಟಿದ್ದರು. ‘ಡೀಡಲಸ್’ ಗ್ರೀಕ್ ಪುರಾಣ ಪುರುಷನ ತೈಲಚಿತ್ರ ಈಗಲೂ ನನ್ನ ಸಂಗ್ರಹಾಲಯದಲ್ಲಿರುವ ಗೌರವಾಂತ ಕೃತಿ. ಆನಂತರ ಚಂಡೀಗಡದಲ್ಲಿ ಮತ್ತು ಶಿಮ್ಲಾದಲ್ಲಿ ಕುಮಾರಸ್ವಾಮಿಯವರ ಬಗೆಗೆ ಪ್ರಬಂಧ ಮಂಡಿಸುವ ಅವಕಾಶಗಳು  ನನಗೆ ಬಂದವು.

ಕುಮಾರಸ್ವಾಮಿಯವರ ಲೇಖನ­ಗಳ ಪ್ರಕಟ­ಣೆಗೆ ಅವಕಾಶ ದೊರೆಯಲಿಲ್ಲ­ವಾದರೂ ಅವರ ಎಲ್ಲ ಬರಹ, ಪತ್ರಗಳು, ಟಿಪ್ಪಣಿ­ಗಳನ್ನೆಲ್ಲ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ­ಕೇಂದ್ರಕ್ಕೆ (ನವದೆಹಲಿ) ತರುವ ಪ್ರಯತ್ನದಲ್ಲಿ ನಾನೂ ಒಬ್ಬನಾಗಿದ್ದೆ ಎನ್ನುವುದು ಸಮಾಧಾನದ ಸಂಗತಿ.

ಅವರ ಬರಹಗಳನ್ನು ಇವತ್ತು ವಿಭಿನ್ನ ದೃಷ್ಟಿಕೋನಗಳಿಂದ ಚರ್ಚಿಸುವ ಪ್ರಯತ್ನಗಳು ಆಗುತ್ತಿವೆ. ಕೆಲವರು ಅವರ ಲೇಖನಗಳ ಪ್ರಸ್ತುತ ತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸು­ವುದೂ ಉಂಟು. ಆದರೆ. ಕುಮಾರಸ್ವಾಮಿ­ಯವರ ಪ್ರಯತ್ನವನ್ನು, ಚಿಂತನೆಗಳನ್ನು, ವಿಚಾರ­ಗಳನ್ನು ಆ ಕಾಲದ ಹಿನ್ನೆಲೆಯಲ್ಲಿಟ್ಟು ವಿಚಕ್ಷಣ ದೃಷ್ಟಿಯಿಂದ  ನೋಡಬೇಕಾದ ಅವಶ್ಯಕತೆ ಇದೆ. ಅವರು ಹೇಳಿದ್ದೆಲ್ಲವೂ ಸತ್ಯ, ಸರಿ ಎಂದು ಹೇಳಬೇಕಾಗಿಲ್ಲ ಮತ್ತು ಒಪ್ಪಬೇಕಾಗಿಲ್ಲ. ಆದರೆ ಅವರ ಚಿಂತನೆಗಳ ಜಾಡು ಹಿಡಿದು ಹೊರಟರೆ ಅಪೂರ್ವವಾದ ವಿಚಾರಗಳ ಅನ್ವೇಷಣೆ ಸಾಧ್ಯ. ಉದಾಹರಣೆಗೆ ಅವರು ಭಾರತೀಯ ಕಲಾವಿದ ತನ್ನ ಬಗೆಗೆ ಏನನ್ನೂ ಹೇಳಿಕೊಳ್ಳುವುದಿಲ್ಲ, ತನ್ನ ವಿವರಗಳನ್ನು ಮರೆಯಲ್ಲಿಟ್ಟು ಕಲಾಕೃತಿಯನ್ನು ಮಾತ್ರ ಮುನ್ನೆಲೆಗೆ ತರುತ್ತಾನೆ ಎಂಬ ವಾದವನ್ನು  ಮಂಡಿಸಿದ್ದಾರೆ.

ನಾನು ಅದೇ ಜಾಡನ್ನು ಹಿಡಿದು ಸುಮಾರು ೧೯೭೦ರಿಂದ  ೩೦ ವರ್ಷಗಳ ಕಾಲ ಭಾರತೀಯ ಶಿಲ್ಪಿಗಳ ಕುರಿತು ಅಧ್ಯಯನ ಮತ್ತು ಸಂಶೋಧನೆ ಕೈಗೊಂಡಾಗ ಭಿನ್ನ ವಿಚಾರಗಳು ಹೊರಬಂದವು. ಕುಮಾರಸ್ವಾಮಿಯವರ ಕಾಲ ದಲ್ಲಿದ್ದ ಗ್ರಹಿಕೆಗಳಿಗೂ, ಅಧ್ಯಯನ ವಿಧಾನ ಗಳಿಗೂ ನಮ್ಮ ಕಾಲದ ವಿಧಾನಗಳಿಗೂ ಹಲವು ವ್ಯತ್ಯಾಸಗಳಿವೆ. ಆಗಿನ ಕಾಲದಲ್ಲಿ ಊರಿಂ­ದೂರಿಗೆ ಬಂಡಿಯಲ್ಲಿ ಕುಳಿತು ಗಿಂಡಿಯಲ್ಲಿ ನೀರನ್ನು ತೆಗೆದುಕೊಂಡು ಊಟ ತಿಂಡಿಯನ್ನು ಲೆಕ್ಕಿಸದೆ ಪಯಾಣ ಮಾಡಿ ವಿಷಯಗಳನ್ನು ಸಂಗ್ರಹ ಮಾಡಬೇಕಾಗಿತ್ತು.

ಆದರೆ ಇವತ್ತು ನಮಗೆ ದೊರೆತಿರುವ ತಂತ್ರಜ್ಞಾನದ ನೆರವಿನಿಂದ ಅನೇಕ ವಿಚಾರಗಳನ್ನು ಬೆಳಕಿಗೆ ತರುವ ದಾರಿಗಳು ಕಾಣುತ್ತಿವೆ. ನಮ್ಮಲ್ಲಿದ್ದ ಶಿಲ್ಪಿಗಳು ಯಾವ ಹಿನ್ನೆಲೆಯಿಂದ ಬಂದವರು? ಅವರ ಸಾಮಾಜಿಕ ಸ್ಥಾನಮಾನ ಹೇಗಿತ್ತು, ರಾಜರು ಮತ್ತು ಈ ಶಿಲ್ಪಿಗಳ ನಡುವಣ ಸಂಬಂಧ ಹೇಗಿತ್ತು, ಯಾವ ಯಾವ ವರ್ಗದ, ವರ್ಣದ ಜನರು ಈ ಕೆಲಸ ದಲ್ಲಿ ತೊಡಗಿಸಿಕೊಂಡಿರು­ತ್ತಿದ್ದರು. ಒಂದು ದೇವ ಸ್ಥಾನವನ್ನು ಕಟ್ಟುವುದಕ್ಕೆ ಬೇಕಾಗುವ ಕಾಲ ಎಷ್ಟು? ಅವನ ಮನಸ್ಸಿನಲ್ಲಿ ಮೂಡುತ್ತಿದ್ದ ವಿಚಾರ ಪ್ರನಾಳಿಗಳೇನು? ಇಷ್ಟೆಲ್ಲ ಅಧ್ಯಯನ ಮಾಡಲು ಅವಕಾಶಗಳಿವೆ. ಹೀಗೆ ಮಾಡಲು ನಮಗೆ ದಾರಿ ತೋರಿದವರು ಆನಂದ ಕುಮಾರ ಸ್ವಾಮಿ. ಇಂಥ ಪ್ರಾತಃಸ್ಮರಣೀ­ಯರನ್ನು ನೆನೆಯು ವುದು ಈ ಹೊತ್ತಿನಲ್ಲಿ ಬಹಳ ಪ್ರಸ್ತುತ ಎಂದು ನಾನು ಭಾವಿಸಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.