ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದರು. ಈ ದೇಶದ ಪುರೋಹಿತಶಾಹಿ ಮತ್ತು ಬಂಡವಾಳಶಾಹಿಯೇ ಇಲ್ಲಿನ ಆಳುವ ವರ್ಗ ಎಂದು. ಇದು ಹಳ್ಳಿಗಳನ್ನೂ ಬಿಟ್ಟಿಲ್ಲ. ಆದರೆ ಮಹಾತ್ಮ ಗಾಂಧಿ ಅವರಿಗೆ ಗ್ರಾಮ ಸ್ವರಾಜ್ಯದಲ್ಲಿ ನಂಬಿಕೆ ಇತ್ತು. ಇದನ್ನು ಅಲ್ಲಗಳೆಯುತ್ತಿದ್ದ ಅಂಬೇಡ್ಕರ್ ‘ಹಳ್ಳಿಗಳು ಜಾತಿಯ ದ್ವೀಪಗಳು, ಭಾರತೀಯ ಸಮಾಜದಲ್ಲಿ ಎಲ್ಲಿಯತನಕ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಬರುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯ ಸಮಾನತೆ ವ್ಯರ್ಥ’ ಎಂದಿದ್ದರು.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಮನಿಸುತ್ತಿದ್ದರೆ ಅಂಬೇಡ್ಕರ್ ಅವರ ದೂರದೃಷ್ಟಿ ಅರ್ಥವಾಗುತ್ತದೆ. ದೇವಸ್ಥಾನಗಳ ಅಭಿವೃದ್ಧಿಗೆ ಹಣ ಪಡೆದು ‘ಚುನಾವಣಾ ಮುಕ್ತ’ ಆಗಲು ಹೊರಟಿರುವ ಗ್ರಾಮಗಳು ಯಾವ ನೆಲೆಯಲ್ಲಿ ಯೋಚಿಸುತ್ತಿವೆ ಎಂಬುದು ಭಯ ಮೂಡಿಸುವಂಥದ್ದು. ಈ ಬೆಳವಣಿಗೆಯನ್ನು ಹಣ, ಮದ್ಯ, ಜಾತಿಗೆ ಬೇಸತ್ತು ವೋಟು ಮಾರಿಕೊಳ್ಳಲು ಬಯಸದ ಪ್ರಾಮಾಣಿಕ ಪ್ರಜೆಗಳ ಹೊಸ ಪ್ರಯೋಗ ಎಂದು ಹೇಳುವವರಿದ್ದಾರೆ. ಆದರೆ ಇದರ ಹಿಂದೆ ಹಳೆಯ ಸಾಂಪ್ರದಾಯಿಕ ವ್ಯವಸ್ಥೆಯ ಜಾಡು ಎದ್ದು ಕಾಣುತ್ತದೆ. ಜೊತೆಗೆ ಈ ಚುನಾವಣಾ ಪದ್ಧತಿಯಲ್ಲಿಯೇ ಏನಾದರೂ ಲೋಪಗಳಿವೆಯೇ ಎಂದು ಯೋಚಿಸುವವರನ್ನೂ ದಿಕ್ಕು ತಪ್ಪಿಸುತ್ತಿದೆ.
ಅನೇಕರಿಗೆ ನಮ್ಮ ಹಳ್ಳಿಗಳು ಗಾಂಧೀಜಿಗೆ ಕಂಡಂತೆ ಆದರ್ಶಮಯವಾದವು. ಇದಕ್ಕೆ ಸಮನಾದ ವ್ಯವಸ್ಥೆ ಬೇರೊಂದು ಇಲ್ಲವೆಂದೇ ಅವರ ನಂಬಿಕೆ. ಸಂವಿಧಾನ ಸಭೆಯಲ್ಲಿಯೂ ಇದರ ಬಗ್ಗೆ ಬಹಳ ಚರ್ಚೆಯಾಗಿತ್ತು. ಭಾರತದ ಹಳ್ಳಿಯನ್ನು ದೇಶದ ಸಂವಿಧಾನದ ತಳಹದಿಯನ್ನಾಗಿ ಪರಿಗಣಿಸಬೇಕೆಂಬುದೇ ಆ ಚರ್ಚೆ. ಈ ಚರ್ಚೆಗೆ ಅವರು ನೀಡಿದ ಸಮರ್ಥನೆ`ಹಳ್ಳಿಗಳಿಗೆ ತಮ್ಮದೇ ಆದ ಶಾಸನಸಭೆ, ಕಾರ್ಯ ನಿರ್ವಾಹಕ ಮಂಡಳಿ ಮತ್ತು ನ್ಯಾಯಾಂಗ ಇರುತ್ತದೆ ಎಂಬುದು. ಆದರೆ ಇದನ್ನು ಪ್ರಚುರಪಡಿಸಿದವರು ಈಸ್ಟ್ ಇಂಡಿಯಾ ಕಂಪೆನಿಯ ರೆವಿನ್ಯೂ ಅಧಿಕಾರಿಯಾಗಿದ್ದ ಸರ್ ಚಾರ್ಲ್‌್ಸ ಮೆಟ್ಕಾಫ್. ಅವರು ಭಾರತೀಯ ಹಳ್ಳಿಗಳನ್ನು ಕೆಳಗಿನಂತೆ ವಿವರಿಸುತ್ತಾರೆ:
‘ಗ್ರಾಮ ಸಮುದಾಯಗಳು ಚಿಕ್ಕ ಗಣರಾಜ್ಯಗಳಿದ್ದಂತೆ. ತಮಗೆ ಬೇಕಾದದ್ದನ್ನೆಲ್ಲ ಅವು ತಮ್ಮಲ್ಲೇ ಹೊಂದಿವೆ. ಹೊರಗಣ ಸಂಬಂಧಗಳಿಂದ ಹೆಚ್ಚೂ ಕಡಿಮೆ ಸ್ವತಂತ್ರವಾಗಿವೆ. ಸಾಮ್ರಾಜ್ಯಗಳು ಉರುಳಿಬೀಳುತ್ತವೆ, ಕ್ರಾಂತಿಯ ಮೇಲೆ ಕ್ರಾಂತಿಯಾಗುತ್ತದೆ. ಹಿಂದೂ, ಪಠಾಣ, ಮೊಗಲ್, ಮರಾಠ, ಬ್ರಿಟಿಷರು- ಹೀಗೆ ಒಬ್ಬರಾದ ಮೇಲೊಬ್ಬರು ಆಳಿದ್ದಾರೆ. ಆದರೆ ಗ್ರಾಮ ಸಮುದಾಯಗಳು ತದೇಕ ಪ್ರಕಾರವಾಗಿಯೇ ಉಳಿದಿವೆ’.
ಇದು ಹೊಗಳಿಕೆಯಂತೆ ಭಾಸವಾದರೂ ಇದರೊಳಗೇ ಹಳ್ಳಿಗರು ಪರರಿಂದ ಆಳಿಸಿಕೊಳ್ಳುವವರು, ತಮ್ಮ ಪಾಡಿಗೆ ತಾವಿದ್ದು ದೇಶದ ಪರಿಕಲ್ಪನೆಯಿಂದಲೇ ದೂರ ಉಳಿದವರೆಂದೂ ಪರೋಕ್ಷವಾಗಿ ಹೇಳಿದ್ದಾರೆ.
ಅವರು ಉಲ್ಲೇಖಿಸಿದ ಗ್ರಾಮದ ಲಕ್ಷಣಗಳನ್ನು ನೋಡಿದರೆ ಪ್ರಜಾಪ್ರಭುತ್ವದಡಿಯಲ್ಲಿ ಗ್ರಾಮ ಸ್ವರಾಜ್ಯದ ನಡಿಗೆಯ ಪರಿ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯ ಪೂರ್ವದ ಪಟೇಲರು, ಗೌಡರು, ಶಾನುಭೋಗರು ಇಂದಿಗೂ ಬೇರೆಯದೇ ರೂಪದಲ್ಲಿ ಹಳ್ಳಿಗಳಲ್ಲಿ ಜೀವಂತವಾಗಿದ್ದು ತಮ್ಮ ಪ್ರಾಬಲ್ಯ ಮುಂದುವರಿಸುತ್ತಿರುವುದು ತಿಳಿಯುತ್ತದೆ.
ನಾವೇ ಒಪ್ಪಿಕೊಂಡಿರುವ ಪ್ರಜಾಪ್ರಭುತ್ವವನ್ನು ನಾವೇ ಹೇಗೆ ನಿರ್ನಾಮ ಮಾಡುತ್ತಿದ್ದೇವೆ ಎಂಬುದೂ ಅರಿವಾಗುತ್ತದೆ. ದಲಿತರ ವಿಚಾರಕ್ಕೆ ಬಂದಾಗ, ಅವರಿಗೆ ಕೇವಲ ಮೀಸಲಾತಿ ಹಕ್ಕನ್ನು ಕೊಟ್ಟ ‘ಪುಣೆ ಒಪ್ಪಂದ’ದ ನೆನಪಿನ ಜೊತೆಗೇ ಸ್ಪೃಶ್ಯರಿಂದ, ಸ್ಪೃಶ್ಯರಿಗಾಗಿ, ಸ್ಪೃಶ್ಯರಿಗೋಸ್ಕರ ಕಾಪಾಡಿಕೊಂಡು ಬಂದಿರುವ ಪ್ರಜಾಪ್ರಭುತ್ವ ಇದು ಎಂದೇ ತೋರುತ್ತದೆ. ಮಹಿಳೆಯರ ವಿಚಾರಕ್ಕೆ ಬಂದಾಗ ಶೇ 50ರಷ್ಟು ಮೀಸಲಾತಿ ಇದ್ದರೂ ಅವಳ ಹೆಸರಿನಲ್ಲಿ ಗಂಡನ ಪಾರುಪತ್ಯವೇ ಕಣ್ಣಿನ ಮುಂದೆ ಬಂದು ನಿಲ್ಲುತ್ತದೆ.
ಇನ್ನು ಸ್ಪೃಶ್ಯರ ವಿಚಾರಕ್ಕೆ ಬಂದಾಗ ಆಯಾ ಜಾತಿಗಳಲ್ಲಿಯೇ `‘ಬಲಾಢ್ಯ ವರ್ಗ’ವೊಂದು ರೂಪುಗೊಂಡಿದ್ದು ಅಧಿಕಾರ, ಹಣದ ಆಸೆಗಾಗಿ ಆಳುವ ವರ್ಗದೊಂದಿಗೆ ಕೈಜೋಡಿಸುತ್ತಾ ಸಾಗಿರುವುದು ಕಂಡು ಬರುತ್ತದೆ. ಜೊತೆಗೆ ಆಳುವ ವರ್ಗ ತನ್ನ ಮೇಲೆ ದೌರ್ಜನ್ಯ ಮಾಡಿದಾಗ ತನ್ನ ಜಾತಿಪ್ರಜ್ಞೆಯನ್ನು ಮುಂದು ಮಾಡಿ ರಕ್ಷಣೆ ಪಡೆಯುತ್ತದೆ. ದಲಿತರಲ್ಲಿಯೂ ಇಂತಹ ಸಣ್ಣ ವರ್ಗವೊಂದು ರೂಪು ತಾಳಿದ್ದು ಆಳುವ ವರ್ಗದೊಂದಿಗೆ ಕೈಜೋಡಿಸಿದೆ. ಈ ‘ಬಲಾಢ್ಯ ವರ್ಗ’ವು ದ್ವಿಪಾತ್ರ ನಿರ್ವಹಿಸುತ್ತಾ ತಮ್ಮ ಜಾತಿಗಳೊಳಗಿನ ಶೋಷಿತರನ್ನು ದಿಕ್ಕೆಡಿಸಿರುವುದು ಎದ್ದು ಕಾಣುತ್ತಿರುವ ಸಂಗತಿ.
ಇದನ್ನು ನಾವು ಅರ್ಥ ಮಾಡಿಕೊಂಡರೆ ದೇವಸ್ಥಾನಗಳ ಅಭಿವೃದ್ಧಿಗೆ ಹಣ ಪಡೆದು ಚುನಾವಣೆಗಳನ್ನು ಪಕ್ಕಕ್ಕಿಟ್ಟಿರುವ ಪ್ರಕ್ರಿಯೆ ಅರ್ಥವಾಗುತ್ತದೆ. ಮೇಲ್ಜಾತಿಯ ಆಳುವ ವರ್ಗದೊಂದಿಗೆ ಶೂದ್ರ ಮತ್ತು ದಲಿತರೊಳಗಿನ ‘ಬಲಾಢ್ಯ ವರ್ಗ’ ಕೈಜೋಡಿಸಿ, ಹಣವಿರುವ ವ್ಯಕ್ತಿಯೊಬ್ಬನನ್ನು ಆರಿಸುವ ಪರಿ ಭ್ರಷ್ಟಾಚಾರವಲ್ಲದೆ ಬೇರೇನೂ ಅಲ್ಲ. ಹಣ, ಮದ್ಯ, ಜಾತಿ ಕಾರಣದಿಂದ ವೋಟು ಹಾಕುವುದು; ದೇವಸ್ಥಾನಕ್ಕೆ ಹಣ ನೀಡಿ ವೋಟು ಹಾಕಿಸಿಕೊಳ್ಳುವುದು ಎರಡೂ ಒಂದು ನಾಣ್ಯದ ಒಂದೇ ಮುಖ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬುದು ಸಿರಿವಂತರಿಂದ, ಸಿರಿವಂತರಿಗಾಗಿ, ಸಿರಿವಂತರಿಗೋಸ್ಕರ ಎಂದಾಗುತ್ತಾ ಬಂದಿದೆ. ಇಲ್ಲಿ ಎಲ್ಲ ಜಾತಿಯ ಸಿರಿವಂತರೂ ಇದ್ದಾರೆ. ಆದರೆ ಯಾರು ಅಧ್ಯಕ್ಷರಾಗಬೇಕೆಂಬುದು ಮೇಲ್ಜಾತಿಯವರ ತೀರ್ಮಾನವೇ ಆಗಿರುತ್ತದೆ.
ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಅದು ದಲಿತರ ಹಕ್ಕಿಗೆ ಸಂಬಂಧಿಸಿದ್ದು. ಹಳ್ಳಿಗಳಲ್ಲಿನ ದೇವಸ್ಥಾನಗಳಿಗೆ ಪ್ರವೇಶವೇ ಇಲ್ಲದಿರುವಾಗ ಆ ದೇವಸ್ಥಾನಗಳಿಗೆ ಹಣ ಕೊಟ್ಟು ಗೆಲ್ಲುವುದರಿಂದ ಏನು ಪ್ರಯೋಜನ? ಹೀಗಿರುವಾಗ ದಲಿತರು ಈ ಕರಾರಿಗೆ ಏಕೆ ಒಪ್ಪಿಕೊಳ್ಳಬೇಕು? ಬೇರೆ ದಾರಿ ಇಲ್ಲ. ಒಪ್ಪಿಕೊಳ್ಳಲೇಬೇಕು. ಇದೇ ‘ಗ್ರಾಮ ಸ್ವರಾಜ್ಯ’ ಎಂಬಂತಾಗಿದೆ. ಅದಕ್ಕೆ ತಕ್ಕಂತೆ ‘ಬಲಾಢ್ಯ ವರ್ಗ’ದಿಂದ ಮೇಲ್ಜಾತಿಯ ಗುಲಾಮನಾದ ದಲಿತನೊಬ್ಬನಿರುತ್ತಾನೆ.
ಈ ಅಂಶಗಳನ್ನು ಗಮನಿಸಿದಾಗ, ದೇಶದ ಪ್ರಜಾಪ್ರಭುತ್ವ ಯಾವ ಸ್ಥಿತಿಯಲ್ಲಿದೆ ಎಂಬುದು ತಿಳಿಯುತ್ತದೆ. ನೈಜ ಪ್ರಜಾಪ್ರಭುತ್ವ ಕನಸಿನ ಕೂಸೇ ಹೊರತು ಮಡಿಲ ಕೂಸಾಗಿಲ್ಲ ಎಂಬುದು ಗೊತ್ತಾಗುತ್ತದೆ. ಹಾಗಾದರೆ ನೈಜ ಪ್ರಜಾಪ್ರಭುತ್ವಕ್ಕೆ ಏನು ಮಾಡಬೇಕು? ಮತ್ತದೇ ಅಂಬೇಡ್ಕರ್ ಉತ್ತರ ‘ಸಿರಿವಂತರ ಸಿರಿತನ ಬಡವರ ದಾರಿದ್ರ್ಯದಲ್ಲಿದೆ. ಇದನ್ನು ನಿವಾರಿಸಲು, ದುಡಿಯುವವರೆಲ್ಲರೂ ಜಾತಿ ಮತಗಳನ್ನು ಬಿಟ್ಟು ಸಂಘಟಿತರಾಗಬೇಕು’.
ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ನಮ್ಮ ದೇಶವನ್ನು ಮೇಲೆತ್ತಬೇಕೆಂದರೆ, ಈ ಕೆಲಸವನ್ನು ನಾವು ಮಾಡಲೇಬೇಕು. ಬೇರೆ ದಾರಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.