ADVERTISEMENT

ಬಿಳಿ ಬಣ್ಣವೆಂಬ ಜಾಗತಿಕ ಹುಸಿಸತ್ಯ

ಜಾಗತಿಕ ಸುಳ್ಳೊಂದು ಕಪ್ಪು ಮೈಬಣ್ಣದ ಹೆಣ್ಣು ಪಾಪಪ್ರಜ್ಞೆಯಿಂದ ನರಳುವಂತೆ ಮಾಡಿದೆ

ಡಾ.ಪದ್ಮಿನಿ ನಾಗರಾಜು
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST

ದಕ್ಷಿಣ ಆಫ್ರಿಕಾದ ಪ್ರಿಟೋರಿಯಾಕ್ಕೆ ಗಾಂಧೀಜಿ ರೈಲಿನಲ್ಲಿ ಹೋಗುವಾಗ ಬಿಳಿಯ ಅಧಿಕಾರಿಯೊಂದಿಗೆ ನಡೆದ ಸಂಭಾಷಣೆ ಹೀಗಿದೆ:

ಅಧಿಕಾರಿ: ನೀನು ಇಲ್ಲಿಂದ ಹೊರಡು.  ಕೊನೆಯಲ್ಲಿರುವ ಬೋಗಿಗೆ ಹೋಗು.

ಗಾಂಧಿ: ಆದರೆ ನಾನು ಫಸ್ಟ್‌ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದೇನೆ.

ಅಧಿಕಾರಿ: ಪರವಾಗಿಲ್ಲ. ನೀನು ನನ್ನ ಮಾತನ್ನು ಕೇಳಲೇಬೇಕು, ನೀನು ಕೊನೆಯ ಬೋಗಿಯಲ್ಲಿ ಮಾತ್ರ ಪ್ರಯಾಣಿಸಬೇಕು.

ಗಾಂಧಿ: ಇಲ್ಲಿ ಕೇಳಿ, ನಾನು ಈ ಬೋಗಿಯಲ್ಲಿ ಕುಳಿತು ಪ್ರಯಾಣ ಮಾಡಲು ಡರ್ಬನ್‌ನಲ್ಲಿ ಅನುಮತಿ ನೀಡಿದ್ದಾರೆ. ಹಾಗಾಗಿ ನಾನು ಇದರಲ್ಲಿಯೇ ಪ್ರಯಾಣ ಮುಂದುವರೆಸುತ್ತೇನೆ.

ಅಧಿಕಾರಿ: ಆಗುವುದಿಲ್ಲ. ಈ ಬೋಗಿಯಿಂದ ನೀನು ಇಳಿಯಲೇಬೇಕು. ಇಲ್ಲದಿದ್ದರೆ ಪೊಲೀಸರನ್ನು ಕರೆಯುತ್ತೇನೆ. ನಾನೇ ಕತ್ತು ಹಿಡಿದು ಹೊರಗೆ ದಬ್ಬುತ್ತೇನೆ.

ಗಾಂಧಿ: ಸರಿ, ನೀನು ದಬ್ಬಬಹುದು. ನಾನಾಗಿಯೇ ಈ ಗಾಡಿ ಬಿಟ್ಟು ಇಳಿಯುವುದಿಲ್ಲ.

ನಂತರ ನಡೆದದ್ದೆಲ್ಲಾ ಇತಿಹಾಸ. ಇದೆಲ್ಲಾ ನೆನಪಾಗಲು ಕಾರಣ ನಟಿ ತನಿಷ್ಠಾ ಚಟರ್ಜಿಯ ಪ್ರಕರಣ. ‘ಕಲರ್ಸ್ ಟಿ.ವಿ. ಕಾರ್ಯಕ್ರಮ ‘ಕಾಮೆಡಿ ನೈಟ್ಸ್ ಬಚಾವೊ’ಕ್ಕೆ ನನ್ನ ಹೊಸ ಸಿನಿಮಾ ‘ಪಾರ್ಚ್ಡ್’ಗೆ ಪ್ರಚಾರ ಕೊಡುವುದಕ್ಕಾಗಿ ಹೋದಾಗ ನನ್ನ ಮೈಬಣ್ಣದ ಕಾರಣಕ್ಕಾಗಿ ಅವಮಾನಿಸಲಾಯಿತು.

ಹಾಗಾಗಿ ನಾನು ಕಾರ್ಯಕ್ರಮದ ಮಧ್ಯದಲ್ಲಿಯೇ ಎದ್ದುಬಂದೆ’ ಎಂಬುದಾಗಿ ತನಿಷ್ಠಾ ಬರೆದುಕೊಂಡಿದ್ದಾರೆ. ಇದಕ್ಕಾಗಿ ಕಲರ್ಸ್‌ ಟಿ.ವಿ. ಕ್ಷಮೆ ಯಾಚಿಸಿದೆ. ಅಂದು ಗಾಂಧಿ ವಿದೇಶಿ ನೆಲದಲ್ಲಿ ಅವಮಾನಿತರಾದರೆ ಇಂದು ಒಬ್ಬ ನಟಿ ತನ್ನದೇ ನೆಲದಲ್ಲಿ ತನ್ನ ಮೈಬಣ್ಣಕ್ಕಾಗಿ ಅವಮಾನಿತರಾಗುತ್ತಾರೆ  ಎಂದರೆ ನಾವು ಎಲ್ಲಿಂದ ಎಲ್ಲಿಗೆ ನಡೆದು ಬಂದಿದ್ದೇವೆ?

ಪುಣೆಯಲ್ಲಿ ಹುಟ್ಟಿ–ಬೆಳೆದ ತನಿಷ್ಠಾ ಚಟರ್ಜಿ ಪ್ರತಿಭಾವಂತ ನಟಿ. ಎನ್‌ಎಸ್‌ಡಿಯಲ್ಲಿ ಪದವಿ ಪಡೆದವರು. ಮೊನಿಕಾ ಅಲಿಯರ ಅತಿಹೆಚ್ಚು ಮಾರಾಟವಾದ ಕಾದಂಬರಿ ‘ಬ್ರಿಕ್ ಲೇನ್’ ಆಧರಿಸಿ ತೆಗೆದ ಬ್ರಿಟಿಷ್ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಆ ಚಿತ್ರದ ಉತ್ತಮ ನಟನೆಗಾಗಿ ‘ಬ್ರಿಟಿಷ್ ಇಂಡಿಪೆಂಡೆಂಟ್ ಫಿಲ್ಮ್ ಪ್ರಶಸ್ತಿ’ಗೆ ಈಕೆಯ ಹೆಸರು ನಾಮಕರಣಗೊಂಡಿತ್ತು.

ಆಕೆ ಅಭಿನಯಿಸಿದ್ದ ಜರ್ಮನಿ ಚಿತ್ರ ‘ಶ್ಯಾಡೋಸ್ ಆಫ್ ಟೈಮ್’ ವಿಮರ್ಶಕರ ಮೆಚ್ಚುಗೆ ಗಳಿಸಿ ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿತ್ತು. ಇಂಡೊ-ಫ್ರೆಂಚ್ ನಿರ್ಮಾಣದ ಚಿತ್ರ ‘ಹವಾ ಆನೇ ದೇ’ ಚಿತ್ರದಲ್ಲಿಯೂ ಅಭಿನಯಿಸಿದ್ದ ಚಟರ್ಜಿಗೆ ಅಂತರರಾಷ್ಟ್ರೀಯ ಮನ್ನಣೆ ದೊರಕಿತು. ಅತ್ಯುತ್ತಮ ಚಿತ್ರ ಎಂದು ಬರ್ಲಿನ್ ಮತ್ತು ಡರ್ಬನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯಿತು.

ಅವರು ಅಭಿನಯಿಸಿದ ‘ದೇಕ್ ಇಂಡಿಯನ್ ಸರ್ಕಸ್’ನ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇಂತಹ ಪ್ರತಿಭಾವಂತೆಯನ್ನು ಕಲರ್ಸ್‌ ಚಾನೆಲ್ ಕರೆಯಿಸಿ ಅಪಮಾನ ಮಾಡುತ್ತದೆ ಎಂದರೆ ಹೆಣ್ಣಿಗೆ ಪ್ರತಿಭೆಗಿಂತ ಮುಖ್ಯ ಬಣ್ಣವೇ ಎಂಬ ಬಗ್ಗೆ ಮತ್ತೊಮ್ಮೆ ಚಿಂತಿಸುವಂತೆ ಮಾಡುತ್ತದೆ. ಚಟರ್ಜಿ ಅವರಂತೆಯೇ ಸರಿತಾ, ವೈಜಯಂತಿಮಾಲಾ, ನಂದಿತಾ, ಕಾಜೋಲ್, ರೇಖಾ ಮುಂತಾದ ನಟಿಯರು ನಮ್ಮ ಚಿತ್ರರಂಗದಲ್ಲಿ ಮಿಂಚಿದ್ದು ತಮ್ಮ ಪ್ರತಿಭೆಯಿಂದಲೇ ಹೊರತು ಬಣ್ಣದಿಂದಲ್ಲ.

‘ಕಪ್ಪೆಂದು ಜನರನ್ನು ಎತ್ಯಾಡದಿರು ಕಂದ, ಕಪ್ಪಾದ ಹಸುವು ಕರೆದರೆ ಆ ಹಾಲು, ಒಪ್ಪೋದು ಹರನ ಪೂಜೆಗೆ’ ಎಂದು ನಮ್ಮ ಜನಪದರು ಹಾಡಿರುವ ಸಾಲುಗಳನ್ನು ಮತ್ತೆ ಮತ್ತೆ ಮನನ ಮಾಡಿದರೆ ಭಾರತಿಯರಿಗೆ ಕಪ್ಪು ಅಂದು ಶ್ರೇಷ್ಠವಾಗಿದ್ದೇ ಆಗಿತ್ತು. ‘ಶ್ಯಾಮಾ’ ಎಂದರೆ ಕಪ್ಪಾಗಿ ಇರುವವಳು ಎಂದರ್ಥ.  ಕಪ್ಪು ಮಾತ್ರವಲ್ಲ, ಆಕೆ ಸುಂದರಳೂ ಹೌದು.

ಭಾರತೀಯ ಪುರಾಣದ ಪಾಂಚಾಲಿಯನ್ನು ಕುಮಾರವ್ಯಾಸ ವರ್ಣಿಸುವಾಗ, ಮನ್ಮಥ ಸೃಷ್ಟಿ ಮಾಡಿದ ದ್ರೌಪದಿಯನ್ನು ಯಾವ ಧಾತುಗಳಿಂದ ಸೃಷ್ಟಿಸಿದ್ದಾನೆ ಎಂದು ಕೇಳಿದ್ದಕ್ಕೆ ‘ಪರಿಮಳದ ಪರಮಾಣುಗಳನ್ನು ಸಿದ್ಧಪಡಿಸಿಕೊಂಡು, ಅವಕ್ಕೆ ಮುತ್ತುಗಳ ಕೆಂಪುದಾವರೆ, ಮರಿ ದುಂಬಿಗಳ ವರ್ಣಗಳನ್ನು ಬೆರೆಸಿದ್ದಾನೆ...’ ಎಂದು ಕವಿ ಹೇಳುತ್ತಾನೆ.

ದ್ರೌಪದಿಗೆ ಕೃಷ್ಣೆಯೆಂದೂ ಹೆಸರಿತ್ತು. ರಾಮಮನೋಹರ ಲೋಹಿಯಾರವರು ತಮ್ಮ ಒಂದು ಲೇಖನದಲ್ಲಿ, ‘ದ್ರೌಪದಿಗೆ ಕೃಷ್ಣೆಯೆಂದೂ ಹೆಸರಿತ್ತು. ಆಕೆಯ ಐವರು ಗಂಡಂದಿರು ಮತ್ತು ಇನ್ನೂ ಒಂದೆರಡು ರಹಸ್ಯ ಪ್ರೇಮದ ಸೂಚನೆ- ಇವು ಪ್ರಚಲಿತವಿರುವ ಗಂಡು ಜಂಭಕ್ಕೆ ಮೆಚ್ಚೆನಿಸದಿದ್ದರಿಂದ ಬಹುಶಃ ಆಕೆಯ ಬಗ್ಗೆ ಹೆಚ್ಚಿನ ಔದಾಸೀನ್ಯ ಬೆಳೆದುಬಿಟ್ಟಿದೆ.

ಪತಿವ್ರತೆಯರೂ ಶ್ವೇತವರ್ಣಿತರೂ ಆದ ಸೀತಾ ಸಾವಿತ್ರಿಯರು ಭಾರತೀಯ ಸ್ತ್ರೀತ್ವವನ್ನು ಪ್ರತಿನಿಧಿಸುತ್ತಾರೆ ಎಂಬ ಮಾತು ಸುಳ್ಳಲ್ಲ. ಆದರೆ ಇವರೊಂದಿಗೆ ಹೀಗೆ ಪ್ರತಿನಿಧಿಸುವವರು ಇನ್ನೂ ಕೆಲವರಿದ್ದಾರೆ ಎಂಬುದನ್ನು ನಿರ್ಲಕ್ಷಿಸುವಲ್ಲಿ ವಿವೇಕ ಕುಂಟಿತು ಎನ್ನಿಸುತ್ತದೆ. ಭಾರತೀಯ ಪುರಾಣ ಕಲ್ಪನೆಯಲ್ಲಿ ಪರಿಮಳ ಸೂಸುವಂತಹ ತುಂಬ ಚೆಲುವಾದ ಎರಡು ಪುಷ್ಪಗಳು ಕೃಷ್ಣ ಮತ್ತು ಕೃಷ್ಣೆ; ಒಬ್ಬ ಗಂಡಸು, ಇನ್ನೊಬ್ಬಳು ಹೆಂಗಸು; ಇಬ್ಬರೂ ಕಪ್ಪು’ ಎಂದು ಪ್ರತಿಪಾದಿಸುತ್ತಾರೆ.

ಇಂತಹ ನಂಬಿಕೆಯ ಭಾರತೀಯ ಕಲ್ಪನೆಯನ್ನು ಹುಸಿ ಎಂದು ತೋರಿಸಲು ಹೊರಟಿದ್ದು ಜಾಗತೀಕರಣ. ಇಂದು ಸಾವಿರಾರು ಜಾಹೀರಾತುಗಳು ಕಪ್ಪಾಗಿರುವ ಹೆಣ್ಣು ಚೆಲುವೆಯಲ್ಲ ಎಂದು ನಮ್ಮನ್ನು ನಂಬಿಸಿವೆ. ಅದನ್ನು ನಂಬಿ ಕಪ್ಪಾಗಿದ್ದವರು ಬೆಳ್ಳಗಾಗಲು ಅನೇಕ ಕ್ರೀಮು, ಬಣ್ಣಗಳನ್ನು ಹಚ್ಚುತ್ತಲೇ ಬಂದಿದ್ದಾರೆ.  ಸುಳ್ಳನ್ನು ನಿಜವೆಂದು ನಂಬಿ ಅನೇಕ ಮಹಿಳೆಯರು ಗೌರ ವರ್ಣದ ಜಾಲಕ್ಕೆ ಸಿಲುಕಿದ್ದಾರೆ.

ಸೌಂದರ್ಯವೆಂದರೆ ಬಿಳಿ ಬಣ್ಣವೇ ಆಗಿರಬೇಕು ಎಂಬ ಹುಸಿ ಸತ್ಯ ಇಂದಿಗೂ ಜಗತ್ತಿನಾದ್ಯಂತ ಹರಿದಾಡುತ್ತಿದೆ. ಗಂಡು ಎಷ್ಟೇ ಕಪ್ಪಿದ್ದರೂ ನಡೆಯುತ್ತದೆ. ಆದರೆ ಹೆಣ್ಣು ಮಾತ್ರ ಬೆಳ್ಳಗಿರಬೇಕೆಂಬ ಜಾಗತಿಕ ಸುಳ್ಳನ್ನು ಜಾಹೀರಾತುಗಳು ನಮ್ಮೆಲ್ಲರ ತಲೆಗೆ ತುಂಬಿವೆ.

ಇತ್ತೀಚೆಗೆ ಚಲನಚಿತ್ರವೊಂದರ ವಿಮರ್ಶೆಯಲ್ಲಿ ‘ನಟಿ ತಮನ್ನಾಗೆ ಮೇಕಪ್ಪಿನ ಅವಶ್ಯಕತೆಯೇ ಇಲ್ಲ. ಏಕೆಂದರೆ ಆಕೆ ಅಷ್ಟು ಬೆಳ್ಳಗಿದ್ದಾಳೆ’ ಎಂದು ಹೇಳಲಾಗಿದೆ. ಇದು ನಟಿಯೊಬ್ಬಳು ಹೇಗಿರಬೇಕೆಂಬುದನ್ನು ತಿಳಿಸುತ್ತದೆ.

ಜಾಗತಿಕ ಸುಳ್ಳೊಂದು  ಕಪ್ಪು ಮೈಬಣ್ಣದ ಹೆಣ್ಣು ಪಾಪಪ್ರಜ್ಞೆಯಿಂದ ನರಳುವಂತೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ವರ್ಣಭೇದ ಇನ್ನೂ ಕಾಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಮೈಬಣ್ಣಕ್ಕಾಗಿ ಹೆಮ್ಮೆಪಡುವಂತಹ ವಾತಾವರಣ ಉಂಟಾಗುವುದು ಯಾವಾಗ?  ವರ್ಣಭೇದವೆಂಬುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಇದೆ ಎಂದು ನಾವು ತಪ್ಪು ತಿಳಿದಿದ್ದೇವೆ.

ಚಟರ್ಜಿ ಘಟನೆ ಮತ್ತೊಮ್ಮೆ ನಮ್ಮನ್ನು ಈ ಬಗ್ಗೆ ವಿಮರ್ಶೆಗೆ ಹಚ್ಚಿದೆ.  ಕಪ್ಪು ಮೈಬಣ್ಣದ ಬಗ್ಗೆ ಹೆಮ್ಮೆಪಡುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುವಾಗುವಂಥ ವಾತಾವರಣ ಕಲ್ಪಿಸಬೇಕು. ಅದಕ್ಕಾಗಿ ಕುಟುಂಬದ, ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.